ಹೂಡಿಕೆ ಮಾಡಿದ್ರೆ ಬಿಟ್​ಕಾಯಿನ್​ನ ಮೇಲೆ ಮಾಡಬೇಕು ಎನ್ನುವ ಕಾಲ ಇದಲ್ಲ. ಅದರ ಮೌಲ್ಯ ಕಳೆದ ನವೆಂಬರ್​ನಲ್ಲಿ ಸಾರ್ವಕಾಲಿಕ ಗರಿಷ್ಠ 69,000 ಡಾಲರ್ ತಲುಪಿತ್ತು. ಆದರೆ, ಈಗ ಅಂದರೆ ಜ.24ರ ಅಪರಾಹ್ನ 2.30ಕ್ಕೆ ಅದರ ಮೌಲ್ಯ 34,907.60 ಡಾಲರ್. ಮೌಲ್ಯದ ದೃಷ್ಟಿಯಿಂದ ಬಿಟ್​ಕಾಯಿನ್ ಹೆಚ್ಚು ಕಡಿಮೆ ಶೇಕಡ 50ಕ್ಕಿಂತಲೂ ಹೆಚ್ಚು ನಷ್ಟ ಅನುಭವಿಸಿದೆ. ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯನ್ನು ಗಮನಿಸಿದರೆ ಬಿಟ್​ಕಾಯಿನ್ ಜತೆಗೆ ಎಥೇರಿಯಂ, ಫಿನಾನ್ಸ್ ಕಾಯಿನ್, ಕಾರ್ಡನೊ, ಸೊಲಾನ, ಡೋಜ್​ಕಾಯಿನ್, ಶಿಭಾ ಇನು ಇತ್ಯಾದಿ ಕ್ರಿಪ್ಟೋಕರೆನ್ಸಿಗಳು ಕೂಡ ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿವೆ. ಹೀಗಾಗಿ ಒಟ್ಟಾರೆ ಕ್ರಿಪ್ಟೋ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಬೆರಳೆಣಿಕೆ ದಿನಗಳಲ್ಲಿ ಶನಿವಾರ ತನಕ ಅನುಭವಿಸಿದ ನಷ್ಟದ ಪ್ರಮಾಣ 1 ಲಕ್ಷ ಕೋಟಿ ಡಾಲರ್​ಗೂ (74.65 ಲಕ್ಷ ಕೋಟಿ ರೂಪಾಯಿ) ಹೆಚ್ಚು. ಇದೇ ವೇಳೆ, ಸೋಮವಾರ ಬಿಟ್​ಕಾಯಿನ್ ಮೌಲ್ಯ ಮತ್ತೆ ಕುಸಿತ ಕಂಡಿದ್ದು, 36,000 ಡಾಲರ್​ಗೂ ಕೆಳಗೆ ಜಾರಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದರ ಬೆಂಬಲ ಬೆಲೆ 30,000 ಡಾಲರ್. ಅಲ್ಲಿ ತನಕ ಬಿಟ್​ಕಾಯಿನ್ ಮೌಲ್ಯ ಕುಸಿತವನ್ನು ನಿರೀಕ್ಷಿಸಬಹುದು ಎಂದು ಔನ್​ದಾ ಕಂಪನಿ ಹಿರಿಯ ಮಾರುಕಟ್ಟೆ ವಿಶ್ಲೇಷಕ ಎಡ್ವರ್ಡ್ ಮೊಯಾ ಅವರ ಟಿಪ್ಪಣಿ ಹೇಳಿದೆ.
ಬಿಟ್​ಕಾಯಿನ್ ಪಾಲೇ ಹೆಚ್ಚು:ಕ್ರಿಪ್ಟೋ ಮಾರುಕಟ್ಟೆಯಲ್ಲಿ ನವೆಂಬರ್ ತಿಂಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಒಂದು ಬಿಟ್​ಕಾಯಿನ್ ಮೌಲ್ಯ 69,000 ಡಾಲರ್ ದಾಖಲೆ ಬರೆದಿತ್ತು. ಆದರೆ ಅಲ್ಲಿಂದೀಚೆಗೆ ಅದು ಅನುಭವಿಸಿದ ನಷ್ಟದ ಕಾರಣ ಮಾರುಕಟ್ಟೆಗೆ ನಷ್ಟವಾಗಿದ್ದು 600 ಶತಕೋಟಿ ಡಾಲರ್ (44,78,940 ಕೋಟಿ ರೂಪಾಯಿ). ಇನ್ನುಳಿದ ನಷ್ಟ ಉಳಿದ ಕರೆನ್ಸಿಗಳದ್ದು.
ಟೆರರ್ ಫಂಡಿಂಗ್​ನ ಮೂಲ?:ಭಾರತ, ರಷ್ಯಾ ಸೇರಿ ಅನೇಕ ರಾಷ್ಟ್ರಗಳು ಕ್ರಿಪ್ಟೋ ಮಾರುಕಟ್ಟೆಯನ್ನು ಟೆರರ್ ಫಂಡಿಂಗ್​ನ ಮೂಲ ಎಂದೇ ಪರಿಗಣಿಸಿವೆ. ಹೀಗಾಗಿ ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದ ಕಾನೂನು ಮಾನ್ಯತೆಯನ್ನು ರಷ್ಯಾ 2020ರಲ್ಲಿ ರದ್ದುಗೊಳಿಸಿತ್ತು. ಪಾವತಿಗೆ ಟೋಕನ್​ಗಳನ್ನು ಬಳಸುವುದನ್ನೂ ನಿಷೇಧಿಸಿತ್ತು. ಭಾರತದಲ್ಲೂ ಕ್ರಿಪ್ಟೋ ಕರೆನ್ಸಿಗಳ ವಹಿವಾಟಿಗೆ ಕಾನೂನು ಮಾನ್ಯತೆ ಇಲ್ಲ. ಚೀನಾ ಕ್ರಿಪ್ಟೋ ಕರೆನ್ಸಿಗಳ ಮೇಲೆ ನಿಷೇಧ ಹೇರಿದೆ. ಹೀಗೆ ವಿವಿಧ ದೇಶಗಳು ಈ ರೀತಿ ನಿರ್ಬಂಧ ಕ್ರಮಗಳನ್ನು ತೆಗೆದುಕೊಂಡಿವೆ.
ಸಾರ್ವಕಾಲಿಕ ಗರಿಷ್ಠ ಮೌಲ್ಯ:ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆ ಮೌಲ್ಯ 2017ರಲ್ಲಿ 620 ಶತಕೋಟಿ ಡಾಲರ್ ಅಷ್ಟೇ ಇತ್ತು. ಕಳೆದ ವರ್ಷ ನವೆಂಬರ್​ನಲ್ಲಿ ಬಿಟ್​ಕಾಯಿನ್ ಮೌಲ್ಯ ಸಾರ್ವಕಾಲಿಕ ಎತ್ತರ 69,000 ಡಾಲರ್ ತಲುಪಿದಾಗ ಕ್ರಿಪ್ಟೋ ಮಾರುಕಟ್ಟೆ ಮೌಲ್ಯವೂ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿತ್ತು. ಅಂದರೆ ಅಂದಾಜು 3 ಲಕ್ಷ ಕೋಟಿ ಡಾಲರ್ (224 ಲಕ್ಷ ಕೋಟಿ ರೂಪಾಯಿ) ಮೌಲ್ಯ ತಲುಪಿತ್ತು.

ಇಂದು-ನಾಳೆ ಫೆಡರಲ್ ರಿಸರ್ವ್ ಸಭೆ:ಅಮೆರಿಕದ ಫೆಡರಲ್ ರಿಸರ್ವ್​ನ ಮಹತ್ವದ ಸಭೆ ಮಂಗಳವಾರ ಮತ್ತು ಬುಧವಾರ ನಡೆಯಲಿದೆ. ಹೀಗಾಗಿ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯಲ್ಲಿ ಸೋಮವಾರ ಸಂಜೆ ವೇಳೆಗೆ ಹೊಸ ಭರವಸೆ ಗೋಚರಿಸಿದೆ. ಕ್ರಿಪ್ಟೋಕಾರ್ಟ್ ಪ್ರಕಾರ ಟಾಪ್ 10 ಡಿಜಿಟಲ್ ಟೋಕನ್​ಗಳ ಪೈಕಿ ಸೊಲಾನಾ ಬಿಟ್ಟು ಉಳಿದ ಒಂಬತ್ತು ಕ್ರಿಪ್ಟೋ ಕರೆನ್ಸಿಗಳ ವಹಿವಾಟಿನಲ್ಲಿ ಚೇತರಿಕೆ ಕಂಡುಬಂದಿತ್ತು. ಆದರೆ ಇದು ಪದೇಪದೆ ಬದಲಾಗುತ್ತಿರುವ ಕಾರಣ ನಿಖರವಾಗಿ ಈ ಮಾರುಕಟ್ಟೆಯ ಪ್ರಗತಿಯ ಬಗ್ಗೆ ಹೇಳಲಾಗದು.
ಯುವಜನರೇ ಹುಷಾರು!:ಬಿಟ್​ಕಾಯಿನ್ ಹಾಗೂ ಇತರ ಕ್ರಿಪ್ಟೋ ಕರೆನ್ಸಿಗಳ ಮೇಲೆ ಹೂಡಿಕೆ ಮಾಡುವವರಲ್ಲಿ ಯುವಜನರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ತಂತ್ರಜ್ಞಾನದ ತಿಳಿವಳಿಕೆ, ಮಾರ್ಕೆಟ್ ಕ್ರೇಜ್, ದಿಢೀರ್ ಹಣಗಳಿಸುವ ಆಸೆ ಮತ್ತಿತರ ಕಾರಣದಿಂದ ಭಾರಿ ಪ್ರಮಾಣದಲ್ಲಿ ಹೂಡುತ್ತಿದ್ದಾರೆ. ಆದರೆ ಬಹುತೇಕ ದೇಶಗಳಲ್ಲಿ ಕ್ರಿಪ್ಟೋಗೆ ಕಾನೂನುಬದ್ಧ ಮಾನ್ಯತೆ ಇಲ್ಲದಿರುವುದರಿಂದ, ಈ ಅಸಾಂಪ್ರದಾಯಿಕ, ಚಂಚಲ ಮಾರುಕಟ್ಟೆಯನ್ನು ನಂಬಿಕೊಂಡು ಹಣ ಹಾಕುವುದು ಅಪಾಯಕಾರಿ ಜೂಜಾಟವಾಗಬಹುದು ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ.

ಭಾರತೀಯರ ಖಾತೆ ಹೆಚ್ಚು:ಜಗತ್ತಿನ ಕ್ರಿಪ್ಟೋಕರೆನ್ಸಿ ಗ್ರಾಹಕರ ಪೈಕಿ ಭಾರತೀಯರೇ 10.07 ಕೋಟಿ ಖಾತೆಗಳೊಂದಿಗೆ ಮುಂಚೂಣಿಯಲ್ಲಿದ್ದಾರೆ. ಅಮೆರಿಕನ್ನರ ಖಾತೆ 2.74 ಕೋಟಿ ಇದ್ದು, ರಷ್ಯನ್ನರು 1.74 ಕೋಟಿ, ನೈಜೀರಿಯಾದವರು 1.3 ಕೋಟಿ ಖಾತೆ ಹೊಂದಿದ್ದಾರೆ ಎಂದು ಬ್ರೋಕರ್​ಚೂಸರ್ ಹೇಳಿದೆ.
ಬಿಟ್​ಕಾಯಿನ್ ಅಥವಾ ಯಾವುದೇ ಕ್ರಿಪ್ಟೋ ಕರೆನ್ಸಿ ಇರಬಹುದು, ಅವುಗಳು ಅಪರಾಧ ಜಗತ್ತಿನ ವಶವಾಗದಂತೆ ನೋಡಿಕೊಳ್ಳಬೇಕು. ನಮ್ಮ ಯುವಜನರು ಅದರ ಸುಳಿಗೆ ಸಿಲುಕಿ ನಾಶವಾಗಬಾರದು. ಈ ನಿಟ್ಟಿನಲ್ಲಿ ಎಲ್ಲ ಪ್ರಜಾಪ್ರಭುತ್ವ ರಾಷ್ಟ್ರಗಳು ಕ್ರಮ ತೆಗೆದುಕೊಳ್ಳಬೇಕಾದ್ದು ಮುಖ್ಯ.
|ನರೇಂದ್ರ ಮೋದಿಪ್ರಧಾನಿ
(ಕಳೆದ ತಿಂಗಳು ನೀಡಿದ ಮೊದಲ ಸಾರ್ವಜನಿಕ ಪ್ರತಿಕ್ರಿಯೆ)
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:11 + eleven =
Remember me
