ನವದೆಹಲಿ:ದೇಶದೆಲ್ಲೆಡೆ 75ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದರ ಮಧ್ಯೆಯೇ ರಾಜಧಾನಿ ದೆಹಲಿಯ ಕರ್ತವ್ಯಪಥದಲ್ಲಿ ದೇಶದ ನಾರೀಶಕ್ತಿ ವೈಭವ ಮತ್ತೊಮ್ಮೆ ಅನಾವರಣಗೊಂಡಿತು. ಗಣರಾಜ್ಯೋತ್ಸವ ಪರೇಡ್​ನಲ್ಲಿ ಮೊದಲ ಬಾರಿ ಎಂಬಂತೆ 100 ಮಹಿಳಾ ಕಲಾವಿದರು ಭಾರತೀಯ ಸಂಗೀತ ವಾದ್ಯಗಳನ್ನು ನುಡಿಸುವ ಮೂಲಕ ಅತ್ಯಾಕರ್ಷಕ ಪಥಸಂಚಲನಕ್ಕೆ ಚಾಲನೆ ನೀಡಿದರು. ಮಹಿಳಾ ಕಲಾವಿದರು ಶಂಖ, ನಾದಸ್ವರ ಇತ್ಯಾದಿ ಸಂಗೀತ ವಾದ್ಯಗಳನ್ನು ನುಡಿಸಿದರು.
ಅದೇ ರೀತಿ ಮೊದಲ ಬಾರಿಗೆ ಎಲ್ಲಾ ಸೇನೆಗಳ (ಭೂಸೇನೆ, ವಾಯುಸೇನೆ, ನೌಕಾಸೇನೆ) ತುಕಡಿಗಳಲ್ಲಿ ಮಹಿಳಾ ಸೇನಾನಿಗಳು ಪಾಲ್ಗೊಂಡು ಇಡೀ ಗಣರಾಜ್ಯೋತ್ಸವ ಸಂಭ್ರಮಕ್ಕೆ ಹೊಸ ಮೆರುಗು ತುಂಬಿದರು. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ತುಕಡಿಯಲ್ಲಿ ಕೂಡ ಮಹಿಳಾ ಸಿಬ್ಬಂದಿ ಪಾಲ್ಗೊಂಡಿದ್ದರು. ಭಾರತದ ಸಶಸ್ತ್ರ ಪಡೆಗಳ ಪರಾಕ್ರಮ, ಸಾಂಸ್ಕೃತಿಕ ಶ್ರೀಮಂತಿಕೆ, ನಾರೀಶಕ್ತಿ ಜತೆಗೆ ವಿಕಸಿತ ಭಾರತ, ಭಾರತ್- ಲೋಕತಂತ್ರ ಕೀ ಮಾತೃಕಾ ಎಂಬ ವಸ್ತು-ವಿಷಯಗಳನ್ನುಳ್ಳ ವಿವಿಧ ರಾಜ್ಯಗಳ ಸ್ತಬ್ದಚಿತ್ರಗಳು ಕೂಡ ಕರ್ತವ್ಯಪಥದಲ್ಲಿ ಗಮನ ಸೆಳೆದವು. ಈ ಸಲದ ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಗುರುವಾರದಂದೇ ಭಾರತಕ್ಕೆ ಬಂದಿಳಿದಿದ್ದ ಅವರು, ಶುಕ್ರವಾರ ಪ್ರಧಾನಿ ಮೋದಿ ಜತೆ ಪರೇಡ್ ವೀಕ್ಷಿಸಿದರು. ಪರೇಡ್​ನಲ್ಲಿ ಫ್ರಾನ್ಸ್​ನ 95 ಸೇನಾನಿಗಳ ಪಥಸಂಚಲನದ ಜತೆಗೆ 33 ಸದಸ್ಯರ ಬ್ಯಾಂಡ್ ತುಕಡಿಯೂ ಭಾಗವಹಿಸಿತ್ತು. ಭಾರತೀಯ ವಾಯುಪಡೆಯ ವಿಮಾನಗಳ ಜತೆ ಮಲ್ಟಿ ರೋಲ್ ಟ್ಯಾಂಕರ್ ಟ್ರಾನ್ಸ್​ಪೋರ್ಟ್ (ಎಂಆರ್​ಟಿಟಿ) ವಿಮಾನಗಳು ಮತ್ತು ಫ್ರೆಂಚ್ ವಾಯುಪಡೆಯ ಎರಡು ರಫೇಲ್ ವಿಮಾನಗಳು ಏರ್ ಶೋನಲ್ಲಿ ಭಾಗವಹಿಸಿದ್ದವು.
‘ವಂದೇ ಭಾರತಂ-ನಾರಿ ಶಕ್ತಿ’ ಬ್ಯಾನರ್ ಅಡಿಯಲ್ಲಿ 1,500 ನೃತ್ಯಪಟುಗಳ ಗುಂಪು ‘ವಿವಿಧತೆಯಲ್ಲಿ ಏಕತೆ’ಯ ಸಂದೇಶ ಸಾರುತ್ತಾ ಪಥಸಂಚಲನದ ಆಕರ್ಷಣೆ ಹೆಚ್ಚಿಸಿದರು. ಕೂಚಿಪುಡಿ, ಕಥಕ್, ಭರತನಾಟ್ಯ, ಮೋಹಿನಿಯಾಟ್ಟಂ, ಒಡಿಸ್ಸಿ, ಮಣಿಪುರಿ ಹಾಗೂ ಸಮಕಾಲೀನ ಶಾಸ್ತ್ರೀಯ ನೃತ್ಯ ಮತ್ತು ಬಾಲಿವುಡ್ ಶೈಲಿ ಸೇರಿ 30 ವಿಶಿಷ್ಟ ಜಾನಪದ ನೃತ್ಯ ಶೈಲಿಗಳನ್ನು ಪ್ರದರ್ಶಿಸಲಾಯಿತು.
ಟ್ಯಾಂಕ್ ಟಿ-90 ಭೀಷ್ಮ, ಎನ್​ಎಜಿ ಮಿಸೈಲ್ ಸಿಸ್ಟಮ್ ಪದಾತಿದಳದ ಯುದ್ಧ ವಾಹನ, ಎಲ್ಲಾ ಭೂಪ್ರದೇಶಕ್ಕೆ ಸೂಕ್ತವೆನಿಸುವ (ಆಲ್ ಟೆರೇನ್) ವಾಹನಗಳು, ಶಸ್ತ್ರಾಸ್ತ್ರ ಪತ್ತೆ ರಾಡಾರ್ ವ್ಯವಸ್ಥೆ ‘ಸ್ವಾತಿ’, ಡ್ರೋನ್ ಜಾಮರ್ ವ್ಯವಸ್ಥೆ ಮತ್ತು ಮಧ್ಯಮ ಶ್ರೇಣಿಯ ಕ್ಷಿಪಣಿಗಳು ಪ್ರಮುಖವಾಗಿ ಪ್ರದರ್ಶನ ಗೊಂಡವು. ಎರಡು ರಫೇಲ್ ಯುದ್ಧವಿಮಾನಗಳು ಮತ್ತು ಫ್ರೆಂಚ್ ವಾಯು ಪಡೆಯ ಏರ್​ಬಸ್ ಎ330 ಟ್ಯಾಂಕರ್ ಟ್ರಾನ್ಸ್​ಪೋರ್ಟ್ ವಿಮಾನಗಳು ಕೂಡ ಏರ್ ಶೋನಲ್ಲಿ ಕಾಣಿಸಿಕೊಂಡವು. ಭಾರತೀಯ ವಾಯುಪಡೆಯ 46 ವಿಮಾನಗಳ ಶಕ್ತಿ ಪ್ರದರ್ಶನದ ಮೂಲಕ ಪರೇಡ್ ಅಂತ್ಯಗೊಂಡಿತು.
ಶೌರ್ಯ ದೃಢತೆಯ ಪ್ರತೀಕ:ದ್ವಿಚಕ್ರವಾಹನದಲ್ಲಿ 265 ಮಹಿಳೆಯರು ‘ನಾರಿ ಶಕ್ತಿ’ಯ ಪರಾಕ್ರಮ ಪ್ರದರ್ಶಿಸಿ ಶೌರ್ಯ ಮತ್ತು ದೃಢತೆಯ ಪ್ರತೀಕವಾಗಿ ವಿವಿಧ ಸಾಹಸಗಳನ್ನು ಪ್ರದರ್ಶಿಸಿದರು. ಸಿಆರ್​ಪಿಎಫ್, ಬಿಎಸ್​ಎಫ್ ಮತ್ತು ಎಸ್​ಎಸ್​ಬಿಯ ಮಹಿಳಾ ಬೈಕರ್​ಗಳು ಯೋಗ ಸೇರಿ ಭಾರತೀಯ ಮೌಲ್ಯಗಳ ಶಕ್ತಿಯನ್ನು ಪ್ರದರ್ಶಿಸಿದರು. ಕಮಾಂಡೆಂಟ್ ಅಭಿವಾದನ ಪ್ರದರ್ಶನವನ್ನು ಸಹಾಯಕ ಕಮಾಂಡೆಂಟ್ ಸೀಮಾ ನಾಗ್ ನಡೆಸಿದರು. ನಂತರ ಎಚ್​ಸಿ ರೀಟಾ ಬಿಷ್ಟ್ ಮತ್ತು ಏಳು ಮಂದಿಯ ‘ಲಕ್ಷಿತಾ’ ಪ್ರದರ್ಶನ ಗಮನಸೆಳೆಯಿತು. ಸ್ಕಾ್ವಡ್ರನ್ ಲೀಡರ್ ರಶ್ಮಿ ಠಾಕೂರ್ ನೇತೃತ್ವದಲ್ಲಿ ಸ್ಕಾ್ವಡ್ರನ್ ಲೀಡರ್ ಸುಮಿತಾ ಯಾದವ್, ಸ್ಕಾ್ವಡ್ರನ್ ಲೀಡರ್ ಪ್ರತೀತಿ ಅಹ್ಲುವಾಲಿಯಾ ಮತ್ತು ಫ್ಲೈಟ್ ಲೆಫ್ಟಿನೆಂಟ್ ಕಿರೀಟ್ ರೋಹಿಲ್ ಅವರೊಂದಿಗೆ ಭಾರತೀಯ ವಾಯುಪಡೆಯ ಕವಾಯತು ತಂಡ ಕರ್ತವ್ಯಪಥದಲ್ಲಿ ಸಾಗಿತು. ಭಾರತೀಯ ನೌಕಾಪಡೆಯ ತುಕಡಿಯು 144 ಪುರುಷರು ಮತ್ತು ಮಹಿಳಾ ಅಗ್ನಿವೀರ್​ಗಳನ್ನು ಒಳಗೊಂಡಿತ್ತು. ಲೆಫ್ಟಿನೆಂಟ್ ಪ್ರಜ್ವಲ್ ಎಂ. ಕಾಂಟಿಂಜೆಂಟ್ ಕಮಾಂಡರ್ ಆಗಿ ಮತ್ತು ಲೆಫ್ಟಿನೆಂಟ್ ಮುದಿತಾ ಗೋಯಲ್, ಲೆಫ್ಟಿನೆಂಟ್ ಶರ್ವಾಣಿ ಸುಪ್ರಿಯಾ, ಲೆಫ್ಟಿನೆಂಟ್ ದೇವಿಕಾ ಎಚ್. ಪ್ಲಟೂನ್ ಕಮಾಂಡರ್​ಗಳಾಗಿ ಪಾಲ್ಗೊಂಡಿದ್ದರು. ಹಾಗೆಯೇ, ನೌಕಾದಳದ ಸ್ತಬ್ಧಚಿತ್ರ ಕಡಲು ಮತ್ತು ನಾರೀಶಕ್ತಿಯನ್ನು ಬಿಂಬಿಸಿತು.
ಆಕರ್ಷಕ ಸ್ತಬ್ಧಚಿತ್ರಗಳ ಅನಾವರಣ:ಸಾಂಸ್ಕೃತಿಕ ವಿವಿಧತೆ ಸಾರುವ ರಾಜ್ಯಗಳ 16, ಕೇಂದ್ರದ ವಿವಿಧ ಸಚಿವಾಲಯಗಳ 10 ಸೇರಿ ಒಟ್ಟು 26 ಸ್ತಬ್ಧಚಿತ್ರಗಳು ಪರೇಡ್​ನಲ್ಲಿ ಪ್ರದರ್ಶನಗೊಂಡವು. ಅರುಣಾಚಲ ಪ್ರದೇಶ, ಹರ್ಯಾಣ, ಮಣಿಪುರ, ಮಧ್ಯಪ್ರದೇಶ, ಒಡಿಶಾ, ಛತ್ತೀಸ್​ಗಢ, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ಲಡಾಖ್, ತಮಿಳುನಾಡು, ಗುಜರಾತ್, ಮೇಘಾಲಯ, ಜಾರ್ಖಂಡ್, ಉತ್ತರಪ್ರದೇಶ ಹಾಗೂ ತೆಲಂಗಾಣದ ಸ್ತಬ್ಧಚಿತ್ರಗಳಿಗೆ ಅವಕಾಶ ನೀಡಲಾಗಿತ್ತು. ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರ (ಬಾಲರಾಮ) ಕಲ್ಪನೆಯ ಸ್ತಬ್ಧಚಿತ್ರ ಗಮನ ಸೆಳೆಯಿತು. ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳ ಸ್ತಬ್ಧಚಿತ್ರಗಳು ವಿವಿಧತೆ, ನಾರಿಶಕ್ತಿ, ರಕ್ಷಣಾ ಸಾಮರ್ಥ್ಯ, ಕಲೆ, ಸಂಸ್ಕೃತಿಯನ್ನು ಬಿಂಬಿಸಿದವು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಹಾಗೂ ಕೇಂದ್ರ ಚುನಾವಣೆ ಆಯೋಗದ ಸ್ತಬ್ಧಚಿತ್ರಗಳೂ ಗಮನಸೆಳೆದವು.
ಬಂಧನಿ ಪೇಟಾ ಧರಿಸಿದ್ದ ಪ್ರಧಾನಿ ಮೋದಿ:ಪ್ರಧಾನಿ ಮೋದಿ ವಿಶೇಷ ದಿನಗಳಂದು ಪೇಟಾ ಕಟ್ಟಿಕೊಳ್ಳುವ ಸಂಪ್ರದಾಯ ಮುಂದುವರಿಸಿದ್ದಾರೆ. 75ನೇ ಗಣರಾಜ್ಯೋತ್ಸವದಲ್ಲಿ ಅವರು ಹಳದಿ, ಕೇಸರಿ, ಗುಲಾಬಿ ಮತ್ತು ಕೆಂಪು ಬಣ್ಣಗಳ ಬಂಧನಿ ಪೇಟಾ ಧರಿಸಿದ್ದರು. ಇದರಲ್ಲಿ ಹಳದಿ ಪ್ರಧಾನವಾಗಿತ್ತು. ಹಳದಿ ಬಣ್ಣವನ್ನು ಭಗವಾನ್ ರಾಮನ ನೆಚ್ಚಿನ ಬಣ್ಣವೆಂದು ಪರಿಗಣಿಸಲಾಗಿದೆ. ಜತೆಗೆ ಪ್ರಧಾನಿ ಬಿಳಿ ಕುರ್ತಾ ಮತ್ತು ಪೈಜಾಮದೊಂದಿಗೆ ಕಂದು ಬಣ್ಣದ ಜಾಕೆಟ್ ಧರಿಸಿದ್ದರು.
ಮಾಲ್ಡೀವ್ಸ್ ಅಧ್ಯಕ್ಷರ ಶುಭಾಶಯ:ಭಾರತ ಮತ್ತು ಮಾಲ್ಡೀವ್ಸ್ ಮಧ್ಯೆ ರಾಜತಾಂತ್ರಿಕ ಸಂಘರ್ಷವೇರ್ಪಟ್ಟಿರುವ ಮಧ್ಯೆಯೇ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝುು ಭಾರತದ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಶುಭಾಶಯ ತಿಳಿಸಿದ್ದಾರೆ. ಪರಸ್ಪರ ಗೌರವ ಮತ್ತು ರಕ್ತಸಂಬಂಧದ ಆಳವಾದ ಪ್ರಜ್ಞೆ ಮೇಲೆ ರೂಪುಗೊಂಡ ಉಭಯ ದೇಶಗಳ ನಡುವಿನ ಶತಮಾನಗಳ ಹಳೆಯ ಸ್ನೇಹವನ್ನೂ ಅವರು ನೆನಪಿಸಿಕೊಂಡಿದ್ದಾರೆ. ಭಾರತ ಸರ್ಕಾರ ಮತ್ತು ಜನರಿಗೆ ನಿರಂತರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಯನ್ನು ಹಾರೈಸಿರುವ ಮಯಿಝುು ಅವರು, ರಾಷ್ಟ್ರಪತಿ ದ್ರೌಪದಿ ಮುಮು ಮತ್ತು ಪ್ರಧಾನಿ ಮೋದಿ ಅವರಿಗೆ ಪ್ರತ್ಯೇಕ ಶುಭಾಶಯ ಸಂದೇಶ ರವಾನಿಸಿದ್ದಾರೆ.
ಮ್ಯಾಕ್ರನ್ ಜತೆ ಪ್ರಧಾನಿ ಮೋದಿ ಮಾತುಕತೆ:ಭಾರತ-ಫ್ರಾನ್ಸ್ ದೇಶಗಳು ರಕ್ಷಣಾ ಕೈಗಾರಿಕಾ ಸಹಕಾರದ ಮಾರ್ಗಸೂಚಿ ಅಳವಡಿಸಿಕೊಂಡಿದ್ದು, ಪ್ರಧಾನಿ ಮೋದಿ ಗುರುವಾರ ಮತ್ತು ಶುಕ್ರವಾರ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಜತೆ ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು. ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಈ ಮಾಹಿತಿ ನೀಡಿದ್ದು, ಉಭಯ ದೇಶಗಳ ಮಾರ್ಗಸೂಚಿಯು ರಕ್ಷಣಾ ಕೈಗಾರಿಕಾ ವಲಯದಲ್ಲಿ ಸಹಕಾರದ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ವಿವಿಧ ಅವಕಾಶಗಳನ್ನು ಸೃಷ್ಟಿಸಲಿದೆ. ವಾಯು ಮತ್ತು ಬಾಹ್ಯಾಕಾಶ ತಂತ್ರಜ್ಞಾನ, ಕಡಲ ತಂತ್ರಜ್ಞಾನ, ಭೂ ಯುದ್ಧ, ರೊಬೊಟಿಕ್ಸ್, ಕೃತಕ ಬುದ್ಧಿಮತ್ತೆ ಮತ್ತು ಸೈಬರ್ ರಕ್ಷಣೆ ವಲಯಗಳಲ್ಲೂ ಸಹಕಾರದ ಬಗ್ಗೆ ದೇಶಗಳು ನೀಲನಕ್ಷೆ ಮಾಡಿಕೊಂಡಿವೆ. ಟಾಟಾ ಗ್ರೂಪ್ ಮತ್ತು ಫ್ರಾನ್ಸ್​ನ ಏರ್​ಬಸ್ ಒಟ್ಟಾಗಿ ಹೆಲಿಕಾಪ್ಟರ್​ಗಳನ್ನು ತಯಾರಿಸಲು ಒಪ್ಪಂದಕ್ಕೆ ಸಹಿ ಹಾಕಿವೆ ಎಂದೂ ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಮಾಹಿತಿ ನೀಡಿದ್ದಾರೆ.
ಸಾಂಪ್ರದಾಯಿಕ ಬುಗ್ಗಿಗೆ ಮರುಚಾಲನೆ:ರಾಷ್ಟ್ರಪತಿ ದ್ರೌಪದಿ ಮುಮು ಮತ್ತು ಫ್ರೆಂಚ್ ಅಧ್ಯಕ್ಷ ಮ್ಯಾಕ್ರಾನ್ ಕುದುರೆಯಿಂದ ಚಲಿಸುವ ಸಾಂಪ್ರದಾಯಿಕ ಬುಗ್ಗಿಯಲ್ಲಿ ಕರ್ತವ್ಯಪಥಕ್ಕೆ ಆಗಮಿಸಿದರು. ಈ ಮೂಲಕ 40 ವರ್ಷಗಳ ಹಿಂದೆ ನಿಲ್ಲಿಸಲಾಗಿದ್ದ ಸಾಂಪ್ರದಾಯಿಕ ಬುಗ್ಗಿಗೆ ಮರು ಚಾಲನೆ ನೀಡಲಾಯಿತು. ಹಿಂದಿನ ವರ್ಷಗಳಲ್ಲಿ ಇದಕ್ಕಾಗಿ ವಾಹನ ಬಳಸಲಾಗುತ್ತಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
