ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದು ಎಂಟು ವರ್ಷ. ಸ್ಪಷ್ಟ ಬಹುಮತದೊಂದಿಗೆ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಕಾಡಿದ್ದು ಕರೊನಾ ಸೇರಿದಂತೆ ಹಲವು ಸವಾಲುಗಳು. ಆದರೆ, ಸವಾಲುಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಿದ ಸರ್ಕಾರ ಹಲವು ಕ್ಷೇತ್ರಗಳಲ್ಲಿ ಸುಧಾರಣೆಯ ಮೈಲಿಗಲ್ಲುಗಳನ್ನು ದಾಖಲಿಸಿದೆ. ಪರಿಣಾಮ, ಅಂತಾರಾಷ್ಟ್ರೀಯ ವಲಯದಲ್ಲಿ ಭಾರತದ ವರ್ಚಸ್ಸು ಹೆಚ್ಚಿದೆ.
ಗುಜರಾತ್​ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪ್ರಧಾನಿಯಾಗಿ ಇಡೀ ದೇಶವನ್ನು ಹೇಗೆ ನಿರ್ವಹಿಸಬಲ್ಲರು, ಅದರಲ್ಲೂ ಆರ್ಥಿಕತೆ, ವಿದೇಶಾಂಗ ನೀತಿಯ ಜಟಿಲ ಸವಾಲುಗಳನ್ನು ಹೇಗೆ ಪರಿಹರಿಸಬಲ್ಲರು ಎಂಬ ಪ್ರಶ್ನೆ ಆರಂಭದಲ್ಲಿ ತುಂಬ ಜನರಿಗೆ ಕಾಡಿತ್ತು. 2014 ಮೇ 26ರಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಹಲವು ಸುಧಾರಣೆಗಳಿಗೆ ನಾಂದಿ ಹಾಡಿದ್ದಲ್ಲದೆ, ಕಠಿಣ ನಿರ್ಧಾರಗಳನ್ನೂ ತಳೆದು ಅಚ್ಚರಿಗೊಳಿಸಿದರು. ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಮೋದಿ ಈಗ ಪ್ರಧಾನಿಯಾಗಿ ಎಂಟು ವರ್ಷ ಪೂರ್ಣಗೊಳಿಸಿದ್ದಾರೆ.
ಪ್ರಧಾನಮಂತ್ರಿ ಸುರಕ್ಷಾ ವಿಮಾ:ಕೇವಲ 12 ರೂಪಾಯಿಯಲ್ಲಿ ಸರ್ಕಾರ ಅಪಘಾತ ವಿಮೆ ಒದಗಿಸಿದೆ. ಅಪಘಾತದಲ್ಲಿ ಮೃತರಾದರೆ ಅವರ ಕುಟುಂಬಕ್ಕೆ 2 ಲಕ್ಷ ರೂ., ಶಾಶ್ವತ ಅಂಗವೈಕಲ್ಯ ಉಂಟಾದಲ್ಲಿ 1 ಲಕ್ಷ ರೂ. ನೀಡಲಾಗುತ್ತದೆ. 2015ರ ಮೇ 9ರಂದು ಕೊಲ್ಕತ್ತದಲ್ಲಿ ಪ್ರಧಾನಿ ಈ ಯೋಜನೆ ಉದ್ಘಾಟಿಸಿದರು. ಬ್ಯಾಂಕ್ ಉಳಿತಾಯ ಖಾತೆಯಿಂದಲೇ 12 ರೂ. ಪಾವತಿಸಿಕೊಂಡು, ಈ ಯೋಜನೆಯ ಫಲಾನುಭವಿಯನ್ನಾಗಿಸಲಾಗಿದೆ. ಇದಕ್ಕಾಗಿ, ಯೋಜನೆಯನ್ನು ಪ್ರಧಾನಮಂತ್ರಿ ಜನಧನ ಯೋಜನೆಯೊಂದಿಗೆ ಲಿಂಕ್ ಮಾಡಲಾಗಿದೆ. 10 ಕೋಟಿ ಜನರು ಸುರಕ್ಷಾ ವಿಮೆಗೆ ಒಳಪಟ್ಟಿದ್ದಾರೆ.
ಅಯೋಧ್ಯೆ ಮಂದಿರ ಪ್ರಕರಣ ಇತ್ಯರ್ಥ:ಅಯೋಧ್ಯೆ ಶ್ರೀರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪು ಬಂದ ಮೇಲೆ ಕಾನುನು-ಸುವ್ಯವಸ್ಥೆಗೆ ಧಕ್ಕೆ ಒದಗುವ ಘಟನೆಗಳು ನಡೆಯಬಹುದು ಎಂಬ ಆತಂಕ ತಲೆದೋರಿತ್ತು. ಈ ಸೂಕ್ಷ್ಮ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಿದ ಸರ್ಕಾರ, ಎಲ್ಲೂ ಶಾಂತಿಗೆ ಭಂಗ ತರುವಂಥ ಘಟನೆಗಳಿಗೆ ಅವಕಾಶ ನೀಡಲಿಲ್ಲ. ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರದ ನಿರ್ಮಾಣ ಕಾರ್ಯವೂ ಭರದಿಂದ ಸಾಗಿದ್ದು, 2023 ಡಿಸೆಂಬರ್ ಹೊತ್ತಿಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಯೋಧ್ಯೆಯಲ್ಲಿ ಮಸೀದಿ ನಿರ್ವಣಕ್ಕೆ ಕೂಡ ಸ್ಥಳ ಮಂಜೂರು ಮಾಡಲಾಗಿದೆ.
ಕರೊನಾ ನಿರ್ವಹಣೆ:ಕರೊನಾ ಸೋಂಕಿನ ಪರಿಣಾಮ ಹೇರಲಾದ ದೀರ್ಘಾವಧಿ ಲಾಕ್​ಡೌನ್ ಭಾರಿ ಸಂಕಷ್ಟ ಸೃಷ್ಟಿಸಿತ್ತು. ಈ ಅವಧಿಯಲ್ಲಿ ಬಡ ಮತ್ತು ಶ್ರಮಿಕ ವರ್ಗಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿದ್ದಲ್ಲದೆ, ಉಚಿತವಾಗಿ ಪಡಿತರ ಒದಗಿಸಲಾಯಿತು. ಹಲವು ರಂಗಗಳ ಪುನಶ್ಚೇತನಕ್ಕೂ ನೆರವು ನೀಡಲಾಯಿತು. ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯ ಹೆಚ್ಚಳಗೊಂಡಿತು. ಮುಖ್ಯವಾಗಿ, ಲಸಿಕೆ ಅಭಿಯಾನಕ್ಕೆ ವೇಗ ನೀಡಿದ್ದರ ಪರಿಣಾಮ ದೇಶದಲ್ಲಿ ಕರೊನಾ ಸೋಂಕನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಯಿತು. ಈವರೆಗೆ 193 ಕೋಟಿ ವ್ಯಾಕ್ಸಿನ್ ಡೋಸ್​ಗಳನ್ನು ನೀಡಲಾಗಿದೆ. ಸೋಂಕು ನಿಯಂತ್ರಣಕ್ಕೆ ಭಾರತ ಕೈಗೊಂಡ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಕೂಡ ಶ್ಲಾಘಿಸಿತು.
ಜನೌಷಧ ಕೇಂದ್ರ:ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರಗಳಲ್ಲಿ ಅಗ್ಗದ ಬೆಲೆಗೆ ಔಷಧಗಳು ದೊರೆಯುತ್ತಿದ್ದು, ದೇಶಾದ್ಯಂತ 3 ಸಾವಿರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹೃದಯಸಂಬಂಧಿ ಸ್ಟಂಟ್​ಗಳ ಬೆಲೆಯನ್ನು ಶೇಕಡ 50-70ರಷ್ಟು ಇಳಿಸಲಾಗಿದೆ. ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಯೋಜನೆಯಡಿ ಬಡವರಿಗೆ ಸಂಪೂರ್ಣ ಉಚಿತವಾಗಿ ಮತ್ತು ಇತರ ಎಲ್ಲ ರೋಗಿಗಳಿಗೆ ಸಬ್ಸಿಡಿ ದರದಲ್ಲಿ ಡಯಾಲಿಸಿಸ್ ಮಾಡಲಾಗುತ್ತಿದೆ. ಈವರೆಗೆ 35 ಲಕ್ಷಕ್ಕೂ ಅಧಿಕ ರೋಗಿಗಳು ಈ ಯೋಜನೆ ಲಾಭ ಪಡೆದಿದ್ದಾರೆ.
ವಿದೇಶಾಂಗ ವರ್ಚಸ್ಸು:ಡೋಕ್ಲಾಂ ವಿವಾದದಲ್ಲಿ ಚೀನಾಕ್ಕೆ ತಿರುಗೇಟು, ಪಾಕಿಸ್ತಾನದ ಉಪಟಳಕ್ಕೆ ನಿಯಂತ್ರಣ, ಅಮೆರಿಕ, ರಷ್ಯಾ, ಜಪಾನ್, ಫ್ರಾನ್ಸ್​ನೊಂದಿಗೆ ಬಾಂಧವ್ಯವೃದ್ಧಿ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ನಿಲುವಿಗೆ ಮನ್ನಣೆ. ಹೀಗೆ ವಿದೇಶಾಂಗ ನೀತಿಯಲ್ಲಿ ಹಲವು ಸುಧಾರಣೆ ತಂದ ಮೋದಿ ಸರ್ಕಾರ ಪಾಕಿಸ್ತಾನದ ಸಾಂಪ್ರದಾಯಿಕ ಮಿತ್ರದೇಶಗಳಾದ ಸೌದಿ ಅರೇಬಿಯಾ ಮತ್ತು ಯುಎಇಗಳೊಂದಿಗೂ ಸ್ನೇಹ ವೃದ್ಧಿಸಿಕೊಂಡಿತು. ನೇಪಾಳ, ಶ್ರೀಲಂಕಾಗೆ ಸಹಾಯಹಸ್ತ ಚಾಚಿದ್ದಲ್ಲದೆ, ಆ ದೇಶಗಳಲ್ಲಿ ಚೀನಾ ಪ್ರಾಬಲ್ಯ ಕುಗ್ಗಿಸುವಲ್ಲಿ ಯಶಸ್ವಿಯಾಯಿತು. ಉರಿ ಮತ್ತು ಪುಲ್ವಾಮಾ ದಾಳಿಗಳಿಗೆ ಪ್ರತಿಯಾಗಿ ಪಾಕ್ ಉಗ್ರ ನೆಲೆಗಳ ಮೇಲೆ ಭಾರತ ಸರ್ಜಿಕಲ್ ಕಾರ್ಯಾಚರಣೆ ನಡೆಸಿ, ಪಾಕ್​ಗೆ ಕಠಿಣ ಸಂದೇಶ ರವಾನಿಸಿತು. ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರನ್ನು ಯಶಸ್ವಿಯಾಗಿ ತಾಯ್ನಾಡಿಗೆ ಕರೆತಂದಿತು.
ತ್ರಿವಳಿ ತಲಾಕ್ ನಿಷೇಧ:ತ್ರಿವಳಿ ತಲಾಕ್ ಪದ್ಧತಿಯಿಂದ ಮುಸ್ಲಿಂ ಮಹಿಳೆಯರು ಭಾರಿ ಸಂಕಷ್ಟಕ್ಕೆ ಒಳಗಾಗಿದ್ದರು. ಫೋನ್ ಕರೆ, ವಾಟ್ಸ್​ಆಪ್ ಸಂದೇಶದ ಮೂಲಕವೂ ಮೂರು ಬಾರಿ ತಲಾಕ್ ಹೇಳಿ, ವೈವಾಹಿಕ ಸಂಬಂಧವನ್ನು ಕಡಿದುಕೊಳ್ಳುವ ಘಟನೆಗಳಿಂದ ಮಹಿಳೆಯರು ರೋಸಿ ಹೋಗಿದ್ದರು ಮತ್ತು ಈ ಪದ್ಧತಿ ನಿಷೇಧಿಸುವಂತೆ ಪ್ರತಿಭಟನೆಯನ್ನೂ ನಡೆಸಿದ್ದರು. ಕೇಂದ್ರ 2019 ಜುಲೈ 26ರಂದು ತ್ರಿವಳಿ ತಲಾಕ್ ನಿಷೇಧ ಕಾಯಿದೆಯನ್ನು ಜಾರಿಗೆ ತಂದಿತು.
ಕಾಶ್ಮೀರದಲ್ಲಿ ಅಮನ್:ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಅಡ್ಡಿಯಾಗಿದ್ದ ಸಂವಿಧಾನದ 370ನೇ ವಿಧಿಯನ್ನು ಹಿಂಪಡೆಯುವುದು ಸುಲಭದ ಮಾತಾಗಿರಲಿಲ್ಲ. 2019ರ ಆಗಸ್ಟ್​ನಲ್ಲಿ ಈ ದಿಟ್ಟ ನಿರ್ಧಾರ ಕೈಗೊಂಡ ಸರ್ಕಾರ 370ನೇ ವಿಧಿ ಹಿಂಪಡೆಯಿತಲ್ಲದೆ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿತು. ಭಯೋತ್ಪಾದಕ ದಾಳಿಯ ಪ್ರಮಾಣ ಕಡಿಮೆಯಾಗುವ ಜತೆಗೆ, ಭಯೋತ್ಪಾದಕರ ಎನ್​ಕೌಂಟರ್ ಹೆಚ್ಚಿದವು. ಪ್ರತ್ಯೇಕತಾವಾದಿಗಳ ಉಪಟಳ ನಿಯಂತ್ರಿಸಲಾಯಿತು.
ಯಶಸ್ವಿ ಯೋಜನೆಗಳು:ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸರ್ಕಾರ ಹಲವು ಯೋಜನೆಗಳನ್ನು ಘೋಷಿಸಿ, ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೂ ಗಮನ ನೀಡಿದೆ. ಹಳ್ಳಿಯಿಂದ ಹಿಡಿದು ದೆಹಲಿವರೆಗೆ ಆರೋಗ್ಯಕ್ಕೆ ಸಂಬಂಧಿಸಿ ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ ಮೊತ್ತ ವಿನಿಯೋಗಿಸಲಾಗಿದೆ. ಅಲ್ಲದೆ, 2014ರಿಂದಲೂ ಪ್ರತಿ ಬಜೆಟ್​ನಲ್ಲಿ ಆರೋಗ್ಯಕ್ಕೆ ನೀಡಲಾಗುವ ಅನುದಾನ ಹೆಚ್ಚಿಸಿಕೊಂಡು ಬರಲಾಗಿದೆ.
ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ:ಕೇಂದ್ರದ ಬಹುತೇಕ ಸರ್ಕಾರಗಳು ಈಶಾನ್ಯದ ರಾಜ್ಯಗಳನ್ನು ನಿರ್ಲಕ್ಷಿಸಿದ್ದವು. ಎನ್​ಡಿಎ ಸರ್ಕಾರ ಏಳು ರಾಜ್ಯಗಳ ಅಭಿವೃದ್ಧಿಗೆ ನೀಲಿನಕ್ಷೆ ರೂಪಿಸಿ, ಯೋಜನೆಗಳನ್ನು ಜಾರಿಗೆ ತಂದಿತು. ಮೂಲಸೌಕರ್ಯ, ಸಾರಿಗೆ ಕ್ಷೇತ್ರದಲ್ಲಂತೂ ಮಹತ್ವದ ಬದಲಾವಣೆ ಸಾಕಾರಗೊಂಡಿದೆ. ಮುಖ್ಯವಾಗಿ, ಬೋಡೊ ಶಾಂತಿ ಒಪ್ಪಂದ ಏರ್ಪಟ್ಟಿದೆ. ಅಸ್ಸಾಂನಿಂದ ಬೇರ್ಪಟ್ಟು ಬೋಡೋ ರಾಜ್ಯ ರಚಿಸಬೇಕು ಎಂಬ ಆಗ್ರಹವನ್ನು ಬೋಡೋ ಬುಡಕಟ್ಟು ಸಮುದಾಯ ಕೈಬಿಟ್ಟಿದೆ. 2020 ಜನವರಿ 17ರಂದು ಈ ಪ್ರದೇಶವನ್ನು ಅಭಿವೃದ್ಧಿಗೊಳಿಸುವ ಒಪ್ಪಂದಕ್ಕೆ ಅಂಕಿತ ಹಾಕಲಾಯಿತು.
ಜನಧನ ಶಕ್ತಿ:ಸಾಮಾನ್ಯ ಜನರನ್ನು ಆರ್ಥಿಕತೆ, ಬ್ಯಾಂಕಿಂಗ್ ವ್ಯಾಪ್ತಿಗೆ ತರಲು 2014 ಆಗಸ್ಟ್ 28ರಂದು ಜಾರಿಗೆ ತರಲಾದ ಜನಧನ ಯೋಜನೆ ಅಭೂತಪೂರ್ವ ಯಶಸ್ಸು ಕಂಡಿದೆ. ಮಾತ್ರವಲ್ಲ, ಸರ್ಕಾರಿ ಯೋಜನೆಗಳ ಸಹಾಯಧನವನ್ನು ದಲ್ಲಾಳಿಗಳ ಹಾವಳಿಯಿಲ್ಲದೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲುಪಿಸಲು ಸಾಧ್ಯವಾಗುತ್ತಿದೆ. ಜನಧನ ಯೋಜನೆಯಡಿ 45.41 ಕೋಟಿ ಜನರು ಖಾತೆ ತೆರೆದಿದ್ದಾರೆ. ಈ ಪೈಕಿ 25.27 ಕೋಟಿ ಮಹಿಳೆಯರೇ ಆಗಿರುವುದು ವಿಶೇಷ. ಈ ಖಾತೆಗಳಲ್ಲಿ 1.67 ಲಕ್ಷ ಕೋಟಿ ರೂ. ಠೇವಣಿ ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 8 =
Remember me
