ಕೆಲ ದಿನಗಳ ಹಿಂದೆ ಸ್ಪೇನ್ ದೇಶದ ಸೆವಿಲ್ಲೆಯಲ್ಲಿರುವ ಏರ್​ಬಸ್ ಉತ್ಪಾದನಾ ಘಟಕದಲ್ಲಿ ಭಾರತೀಯ ವಾಯುಪಡೆಯು (ಐಎಎಫ್) ಮೊಟ್ಟಮೊದಲ ಸಿ 295 ವಿಮಾನವನ್ನು ಪಡೆದುಕೊಂಡಿದ್ದು, ಏರ್​ಬಸ್​ನಿಂದ ಒಟ್ಟು 56 ವಿಮಾನಗಳನ್ನು ಖರೀದಿಸಲು ಐಎಎಫ್ ಒಪ್ಪಂದ ಮಾಡಿಕೊಂಡಿದೆ. ಈ ಖರೀದಿ ಒಪ್ಪಂದವು ವಿವಿಧ ಆಯಾಮಗಳಲ್ಲಿ ಭಾರತಕ್ಕೆ ಮಹತ್ವದ ಸಂಗತಿಯಾಗಿದೆ. ಈಗಾಗಲೇ ವಯಸ್ಸಾಗಿ ನಿವೃತ್ತಿಯ ಅಂಚಿಗೆ ತಲುಪಿರುವ ಅವ್ರೋ-748 ವಿಮಾನಗಳ ಅಗತ್ಯತೆಯನ್ನು ಸಿ 295 ವಿಮಾನಗಳು ತುಂಬಲಿವೆ. ಇನ್ನೊಂದು ಮಹತ್ವದ ಅಂಶ ಎಂದರೆ, ಈ ವಿಮಾನಗಳನ್ನು ಮುಂಬರುವ ದಿನಗಳಲ್ಲಿ ಸ್ಥಳೀಯವಾಗಿಯೇ ಉತ್ಪಾದಿಸಲು ಕ್ರಮ ಕೈಗೊಂಡಿರುವುದು. ಮೇಕ್ ಇನ್ ಇಂಡಿಯಾ ಯೋಜನೆಯಡಿ ಖಾಸಗಿ ವಲಯದ ಸಹಭಾಗಿತ್ವದೊಂದಿಗೆ ದೇಶೀಯವಾಗಿ ವಿಮಾನ ತಯಾರಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಕೇಂದ್ರ ಸರ್ಕಾರ ಈಗಾಗಲೇ ಚಾಲನೆ ನೀಡಿದ್ದು, ಈಗ ಏರ್​ಬಸ್ ಹಸ್ತಾಂತರಿಸುವ ಮೊದಲ ವಿಮಾನವು ಈ ನಿಟ್ಟಿನಲ್ಲಿನ ದಾಪುಗಾಲು ಎಂದೇ ಗುರುತಿಸಬಹುದಾಗಿದೆ.
ಹೀಗಾಗಿಯೇ ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಅವರು ಏರ್​ಬಸ್​ನಿಂದ 295 ವಿಮಾನ ಪಡೆದುಕೊಳ್ಳುವಾಗ, ‘ಇದೊಂದು ಮಹತ್ವದ ದಿನವಾಗಿದೆ. ಈ ಸಂದರ್ಭವು ಭಾರತದಲ್ಲಿ ಮಿಲಿಟರಿ ವಿಮಾನಗಳನ್ನು ತಯಾರಿಸುವ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ’ ಎಂದು ಹೇಳಿರುವುದು ಗಮನಾರ್ಹವಾಗಿದೆ. ಈ ವಿಮಾನ ಹಾರಾಟಕ್ಕಾಗಿ ಆರು ಮಂದಿ ಐಎಎಫ್ ಪೈಲಟ್​ಗಳು ಈಗಾಗಲೇ ತರಬೇತಿ ಪಡೆದಿದ್ದಾರೆ. ಐಎಎಫ್​ನ 20 ನಿರ್ವಹಣಾ ಸಿಬ್ಬಂದಿಯ ಬ್ಯಾಚ್ ಪ್ರಸ್ತುತ ಸೆವಿಲ್ಲೆಯಲ್ಲಿರುವ ಏರ್​ಬಸ್ ಸೌಲಭ್ಯದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ವರ್ಷ ಇನ್ನೂ ಮೂರು ಬ್ಯಾಚ್​ಗಳಲ್ಲಿ ಸಿಬ್ಬಂದಿ ತರಬೇತಿ ಪಡೆಯಲಿದ್ದಾರೆ.
25 ಸಾವಿರ ಉದ್ಯೋಗ ಸೃಷ್ಟಿ:ಗುಜರಾತ್​ನ ವಡೋದರಾದಲ್ಲಿನ ಈ ವಿಮಾನ ತಯಾರಿಕೆ ಘಟಕದಿಂದ ಮುಂದಿನ 10 ವರ್ಷಗಳಲ್ಲಿ 15,000 ಉನ್ನತ ಕೌಶಲ್ಯದ ಉದ್ಯೋಗಗಳು ಮತ್ತು 10,000 ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಅಂದಾಜಿಸಲಾಗಿದೆ.
ಭಾರತದಲ್ಲೇ ತಯಾರಿಕೆ:2021ರ ಸೆಪ್ಟೆಂಬರ್​ನಲ್ಲಿ ಭಾರತವು 21,935 ಕೋಟಿ ರೂಪಾಯಿ ವೆಚ್ಚದಲ್ಲಿ 56 ವಿಮಾನಗಳನ್ನು ಖರೀದಿಸಲು ಏರ್​ಬಸ್ ಜತೆ ಒಪ್ಪಂದ ಮಾಡಿಕೊಂಡಿದೆ. ಮೊದಲ 16 ವಿಮಾನಗಳನ್ನು ಸೆವಿಲ್ಲೆಯಲ್ಲಿಯೇ ತಯಾರಿಸಿ, ಜೋಡಿಸಿ ಭಾರತಕ್ಕೆ ತರಲಾಗುತ್ತದೆ. ಈ ಪೈಕಿ ಈಗ ಮೊದಲ ವಿಮಾನವನ್ನು ಭಾರತಕ್ಕೆ ಹಸ್ತಾಂತರಿಸಲಾಗಿದ್ದು, ಎರಡನೇ ವಿಮಾನವನ್ನು 2024ರ ಮೇ ತಿಂಗಳಲ್ಲಿ ವಿತರಿಸಲು ಯೋಜಿಸಲಾಗಿದೆ. ಉಳಿದ 14 ವಿಮಾನಗಳನ್ನು ತಿಂಗಳಿಗೆ ಒಂದರಂತೆ 2025ರ ಆಗಸ್ಟ್​ವರೆಗೆ ನೀಡಲಾಗುತ್ತದೆ. ಇನ್ನುಳಿದ 40 ವಿಮಾನಗಳನ್ನು ಗುಜರಾತ್​ನ ವಡೋದರಾದಲ್ಲಿ ತಯಾರಿಸಿ ಜೋಡಿಸಲಾಗುತ್ತದೆ. ಟಾಟಾ ಅಡ್ವಾನ್ಸ್​ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್​ಎಲ್) ಸಹಭಾಗಿತ್ವದಲ್ಲಿ ಈ ವಿಮಾನಗಳನ್ನು ತಯಾರಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಖಾಸಗಿ ವಲಯದಲ್ಲಿ ಭಾರತದ ಮೊಟ್ಟಮೊದಲ ’ಮೇಕ್ ಇನ್ ಇಂಡಿಯಾ’ ವಿಮಾನ ಉತ್ಪಾದನೆ ಅನುಷ್ಠಾನಕ್ಕೆ ಬರುತ್ತದೆ. ಇಲ್ಲಿಯವರೆಗೆ, ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್) ಮಾತ್ರ ಭಾರತದಲ್ಲಿ ಮಿಲಿಟರಿ ವಿಮಾನಗಳ ತಯಾರಿಕೆಯಲ್ಲಿ ತೊಡಗಿದೆ.
ಹಲವು ವೈಶಿಷ್ಟ್ಯ:ಸಿ295 ಯುದ್ಧ ವಿಮಾನವು ಬಹುಮುಖಿ ಯುದ್ಧತಂತ್ರದ ಸಾರಿಗೆಯಾಗಿದೆ. ಪಡೆಗಳು ಮತ್ತು ಸರಕುಗಳನ್ನು ಸಾಗಿಸಲು ಇದನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಕಡಲ ಗಸ್ತು, ವಾಯು ದಾಳಿಯ ಎಚ್ಚರಿಕೆ, ಕಣ್ಗಾವಲು, ಸಶಸ್ತ್ರ ನಿಕಟ ವಾಯು ಬೆಂಬಲ, ವೈದ್ಯಕೀಯ ಸಂಬಂಧಿ ಸ್ಥಳಾಂತರ, ವಿಐಪಿ ಸಾರಿಗೆ, ಅಗ್ನಿಶಾಮಕ ಮುಂತಾದ ಕಾರ್ಯಗಳನ್ನು ಕೂಡ ನಿರ್ವಹಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಈ ವಿಮಾನವು ಒಂಬತ್ತು ಟನ್​ಗಳಷ್ಟು ಭಾರವನ್ನು ಅಥವಾ 71 ಸಿಬ್ಬಂದಿಯನ್ನು ಗರಿಷ್ಠ 260 ಕೆಟಿಎಸ್ ಕ್ರೂಸ್ ವೇಗದಲ್ಲಿ (ಅಂದಾಜು ಗಂಟೆಗೆ 300 ಮೈಲು) ಸಾಗಿಸಬಲ್ಲದು. ಸ್ಥಿರ ರೆಕ್ಕೆಯ ವಿಮಾನಗಳು ಮತ್ತು ಹೆಲಿಕಾಪ್ಟರ್​ಗಳಿಗೆ ಆಗಸದಲ್ಲೇ ಇಂಧನ ಭರ್ತಿ ಮಾಡುವ ಸವಲತ್ತು ಕೂಡ ಇದರಲ್ಲಿದೆ. ಪ್ರಾಟ್ ವಿಟ್ನಿ ಟರ್ಬೆಪ್ರಾಪ್ ಎಂಬ ಎರಡು ಇಂಜಿನ್​ಗಳಿಂದ ಕಾರ್ಯನಿರ್ವಹಿಸುವ ಈ ವಿಮಾನವು 30,000 ಅಡಿಗಳಷ್ಟು ಎತ್ತರದಲ್ಲಿ ಪ್ರಯಾಣಿಸಬಲ್ಲದು. ಸುಸಜ್ಜಿತ, ಮೃದುವಾದ, ಮರಳು- ಹುಲ್ಲಿನ ಏರ್​ಸ್ಟ್ರಿಪ್​ಗಳಿಂದ ತ್ವರಿತವಾಗಿ ಟೇಕ್ ಆಫ್ ಮತ್ತು ಲ್ಯಾಂಡ್ ಆಗುವ ವಿಮಾನ ಇದಾಗಿದೆ ಎಂದು ಏರ್​ಬಸ್ ಹೇಳುತ್ತದೆ.
ಸ್ಥಳೀಯವಾಗಿಯೇ ಶೇ.95ರಷ್ಟು ತಯಾರಿಕೆ:ಅಮೆರಿಕ ಮೂಲದ ಪ್ರಾಟ್ ವಿಟ್ನಿ ಮತ್ತು ಕಾಲಿನ್ಸ್ ಏರೋಸ್ಪೇಸ್​ನಿಂದ ಪಡೆಯುವ ಇಂಜಿನ್ ಮತ್ತು ಏವಿಯಾನಿಕ್ಸ್ ನಂತಹ ಪ್ರಮುಖ ಘಟಕಗಳನ್ನು ಹೊರತುಪಡಿಸಿ ಏರ್​ಬಸ್​ನಿಂದ ಟಿಎಎಸ್​ಎಲ್​ಗೆ ಉತ್ಪಾದನಾ ತಂತ್ರಜ್ಞಾನವನ್ನು ವರ್ಗಾಯಿಸಲಾಗುತ್ತದೆ. ಇದರಿಂದಾಗಿ 95 ಪ್ರತಿಶತದಷ್ಟು ವಿಮಾನವು ಮುಂದಿನ ಕೆಲವು ವರ್ಷಗಳಲ್ಲಿ ಭಾರತದಲ್ಲಿಯೇ ತಯಾರಾಗುತ್ತದೆ. 2029ರ ಮೊದಲ ತ್ರೖೆಮಾಸಿಕದಲ್ಲಿ ವಿತರಣೆಗೆ ನಿಗದಿಪಡಿಸಲಾದ 32ನೇ ವಿಮಾನವು ಬಹುತೇಕವಾಗಿ ಮೇಕ್ ಇನ್ ಇಂಡಿಯಾ ವಿಮಾನವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ವಡೋದರಾ ಕಾರ್ಖಾನೆಯಲ್ಲಿ ತಯಾರಾಗಲಿರುವ 40 ವಿಮಾನಗಳನ್ನು 2026 ಮತ್ತು 2031ರ ನಡುವೆ ಐಎಎಫ್​ಗೆ ಹಸ್ತಾಂತರಿಸಲು ಸಮಯ ನಿಗದಿಪಡಿಸಲಾಗಿದೆ. ಭಾರತದಲ್ಲಿಯೇ ವಿಮಾನ ತಯಾರಿಕೆಗಾಗಿ ಈಗಾಗಲೇ ಕೆಲಸಗಳು ಶುರುವಾಗಲಿವೆ. ಕಳೆದ ವರ್ಷ ಹೈದರಾಬಾದ್​ನಲ್ಲಿ ಟಿಎಎಸ್​ಎಲ್ ಕಾರ್ಖಾನೆಯನ್ನು ಸ್ಥಾಪಿಸಿದ್ದು, ಇಲ್ಲಿ ಪ್ರಮುಖ ಏರ್​ಫ್ರೇಮ್ ಘಟಕಗಳಾದ ಫ್ಯೂಸ್ಲೇಜ್ ಮತ್ತು ಟೈಲ್​ಗಳ ತಯಾರಿಕೆಯು ಈ ವರ್ಷ ಜುಲೈನಲ್ಲಿ ಪ್ರಾರಂಭವಾಗಿದೆ. ವಿಮಾನದ ಪ್ರಮುಖ ವಿಭಾಗಗಳನ್ನು ಹೈದರಾಬಾದ್ ಘಟಕದಲ್ಲಿ ಜೋಡಿಸಿದ ನಂತರ, ಅವುಗಳನ್ನು ಮುಂದಿನ ವರ್ಷ ವಡೋದರಾ ಘಟಕಕ್ಕೆ ಸಾಗಿಸಲಾಗುತ್ತದೆ. ಅಲ್ಲಿ ಏರ್​ಬಸ್​ನಿಂದ ಪಡೆದ ಇಂಜಿನ್, ಏವಿಯಾನಿಕ್ಸ್ ಮತ್ತು ಇತರ ನಿರ್ಣಾಯಕ ಘಟಕಗಳೊಂದಿಗೆ ಜೋಡಣೆ ಮಾಡಲಾಗುತ್ತದೆ.
ತೆನೆ ಹೊತ್ತ ಕಮಲ: ಎಚ್​ಡಿಕೆ ನಡೆಗೆ ಬೇಸತ್ತ ಅಲ್ಪಸಂಖ್ಯಾತ ಮುಖಂಡರಿಂದ ಜೆಡಿಎಸ್​ಗೆ ಸಾಮೂಹಿಕ ರಾಜೀನಾಮೆ ನಿರ್ಧಾರ

ಎಮ್ಮೆಗೆ ನೀರು ಕುಡಿಸಲು ಹೋದ ಪತ್ನಿಗೆ ಶಾಕ್; ಹೆಂಡತಿಯನ್ನು ರಕ್ಷಿಸಲು ಧಾವಿಸಿದ ಗಂಡ; ಕೊನೆಗೆ ಇಬ್ಬರ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 16 =
Remember me
