ಅಂದು 2016ರ ಜೂನ್ 28. ಮುಂಬೈನ ಠಾಣೆ ಉಪನಗರದ ವಾಣಿಜ್ಯ ಕಾಂಪ್ಲೆಕ್ಸ್ ಕಟ್ಟಡವೊಂದರಲ್ಲಿದ್ದ ಚೆಕ್​ವೆುೕಟ್ ಕ್ಯಾಷ್ ಮ್ಯಾನೇಜ್​ವೆುಂಟ್ ಕಂಪನಿಯ ರಾತ್ರಿಪಾಳಿಯ 15 ನೌಕರರು ಎಂದಿನಂತೆ ನಗದು ಹಣ ಎಣಿಸುವುದರಲ್ಲಿ ನಿರತರಾಗಿದ್ದರು. ಬ್ಯಾಂಕುಗಳ ಎಟಿಎಂಗಳಲ್ಲಿ ನೋಟುಗಳನ್ನು ತುಂಬುವುದೇ ಆ ಕಂಪನಿಯ ಕೆಲಸವಾದ್ದರಿಂದ ಮಷಿನುಗಳಲ್ಲಿ 1000, 500 ಹಾಗೂ 100 ರ ಮುಖಬೆಲೆಯ ನೋಟುಗಳನ್ನು ಎಣಿಸಿ ಕಂತೆಗಳನ್ನಾಗಿ ಮಾಡಿ ಪೆಟ್ಟಿಗೆಗಳಲ್ಲಿ ಅವರು ತುಂಬಿಸುತ್ತಿದ್ದರು. ಚೆಕ್​ವೆುೕಟ್ ಕಂಪನಿ ಕಟ್ಟಡದ ನೆಲಮಾಳಿಗೆ ಮತ್ತು ತಳಮಾಳಿಗೆಗಳಲ್ಲಿದ್ದ ಜಾಗವನ್ನು ಬಾಡಿಗೆಗೆ ಪಡೆದಿದ್ದು ಈ ಎರಡೂ ಹಂತಗಳ ನಡುವೆ ಮೆಟ್ಟಿಲುಗಳಿದ್ದವು. ಹೊರಗಿನಿಂದ ಬಂದು ಹೋಗಲು ಒಂದೇ ಬಾಗಿಲಿದ್ದು ಆ ಬಾಗಿಲಿಗೆ ಕಬ್ಬಿಣದ ಷಟರ್​ಗಳನ್ನು ಹಾಕಲಾಗಿತ್ತು. ತಳಮಾಳಿಗೆಯಲ್ಲಿದ್ದ ಸ್ಟ್ರಾಂಗ್ ರೂಂನಲ್ಲಿ ನಗದನ್ನು ಇಡುತ್ತಿದ್ದು ಅವಶ್ಯಕತೆಗೆ ತಕ್ಕಂತೆ ಮೇಲಿನ ಮಹಡಿಗೆ ತಂದು ಎಣಿಸಿ ಪೆಟ್ಟಿಗೆಗಳಲ್ಲಿ ಇಡಲಾಗುತ್ತಿತ್ತು. ಅವನ್ನು ವ್ಯಾನುಗಳಲ್ಲಿ ಎಟಿಎಂಗಳಿಗೆ ಬೆಳಗ್ಗೆ ಒಯ್ಯಬೇಕಾಗಿತ್ತು.
ಸರಿಯಾಗಿ 3.30 ಗಂಟೆಗೆ ಕಟ್ಟಡದ ಹೊರಗಡೆ ಮೂರು ವ್ಯಾನುಗಳು ಬಂದು ನಿಂತವು. ಮುಖಗಳನ್ನು ಬಟ್ಟೆಗಳಿಂದ ಮುಚ್ಚಿಕೊಂಡಿದ್ದ 10-12 ಜನರು ಅವುಗಳಿಂದ ದಬದಬನೆ ಕೆಳಗಿಳಿದು ಕಂಪನಿಯ ಶಸ್ತ್ರಧಾರಿ ಕಾವಲುಗಾರನ ಮೇಲೆರಗಿ ಅವನ ತಲೆಗೆ ರಿವಾಲ್ವರನ್ನಿಟ್ಟು ಮುಚ್ಚಿದ್ದ ಬಾಗಿಲಿನ ಷಟರ್ ತೆರೆಯಲು ಹೇಳಿದರು. ಒಳಗಿನಿಂದಲೇ ಬಾಗಿಲಿಗೆ ಬೀಗ ಹಾಕುತ್ತಿದ್ದರಿಂದ ಕಾವಲುಗಾರ ಷಟರಿನ ಮೇಲೆ ಬಡಿದು ಬಾಗಿಲು ತೆರೆಯಲು ಸಂಕೇತ ನೀಡಿದ. ಕೂಡಲೇ ಹಲವಾರು ದರೋಡೆಕೋರರು ಒಳಗೆ ನುಗ್ಗಿದರು. ಅಲ್ಲಿದ್ದ ನೌಕರರಿಗೆ ರಿವಾಲ್ವರ್ ತೋರಿಸಿದ ತಂಡದ ನಾಯಕ ಎಲ್ಲರನ್ನೂ ಗೋಡೆಗೆ ಒರಗಿಕೊಂಡು ನಿಲ್ಲಲು ಆದೇಶಿಸಿ ಪ್ರತಿರೋಧವನ್ನು ಒಡ್ಡಿದರೆ ಕೊಲ್ಲುವುದಾಗಿ ಹೆದರಿಸಿದ. ನೌಕರರ ಬಳಿಯಿದ್ದ ಸೆಲ್​ಫೋನ್​ಗಳನ್ನು ದರೋಡೆಕೋರನೊಬ್ಬ ತನ್ನ ಚೀಲದಲ್ಲಿ ತುಂಬಿಸಿಕೊಂಡ.
ಸಂಸ್ಥೆ ಮೂರು ಸಿಸಿಟಿವಿಗಳನ್ನು ಆವರಣದೊಳಗೆ ಅಳವಡಿಸಿತ್ತು. ಇವುಗಳು ದಾಖಲಿಸುವ ದೃಶ್ಯಗಳನ್ನು ರೆಕಾರ್ಡ್ ಮಾಡುವ ಸಾಧನ ಮ್ಯಾನೇಜರ್​ನ ಕೋಣೆಯಲ್ಲಿತ್ತು. ದರೋಡೆಕೋರನೊಬ್ಬ ಅದನ್ನು ಬಿಚ್ಚಿತಂದು ಹೊರಗೊಯ್ದ. ಟೇಬಲ್​ಗಳ ಮೇಲಿದ್ದ ನಗದು ಹಣವನ್ನು ತಾವು ತಂದಿದ್ದ ಮೂರು ದೊಡ್ಡ ಪ್ಲಾಸ್ಟಿಕ್ ಡ್ರಂಗಳಲ್ಲಿ ತುಂಬಿ ಉಳಿದ ಹಣವನ್ನು ದೊಡ್ಡ ಪಾಲಿಥಿನ್ ಬ್ಯಾಗುಗಳಲ್ಲಿ ಹಾಕಿಕೊಂಡ ತಂಡ ಅಲ್ಲಿಂದ ಪರಾರಿಯಾದಾಗ ಬೆಳಗಿನ 4 ಗಂಟೆಯಾಗಿತ್ತು.ಇದನ್ನೂ ಓದಿ:ಆ ಕ್ಷಣ: ಪ್ರತೀಕಾರದ ಪರಿಣಾಮ
ಈ ಆಘಾತದಿಂದ ಸಾವರಿಸಿಕೊಂಡ ಕೂಡಲೇ ಸಂಸ್ಥೆಯ ಮ್ಯಾನೇಜರ್ ಅರ್ಧ ಕಿ.ಮೀ. ದೂರದಲ್ಲಿದ್ದ ಚಹಾದಂಗಡಿಗೆ ಹೋಗಿ ಅಲ್ಲಿದ್ದ ಫೋನಿನಿಂದ ಪೊಲೀಸ್ ಕಂಟ್ರೋಲ್ ರೂಂ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ. ಪೊಲೀಸರು ಸ್ಥಳಕ್ಕೆ ಬಂದು ಅಲ್ಲಿಂದ ಹೊರಹೋಗುವ ಎಲ್ಲ ಪ್ರಮುಖ ರಸ್ತೆಗಳಲ್ಲಿಯೂ ನಾಕಾಬಂದಿಯನ್ನು ಹಾಕಲು ಸೂಚನೆಯಿತ್ತರು.
ವಾಗ್ಲೆ ಎಸ್ಟೇಟ್ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲು ಮಾಡಿಕೊಂಡು ಸ್ಥಳ ಪಂಚನಾಮೆ ಮಾಡಿದಾಗ ಹತ್ತುಕೋಟಿ ರೂಪಾಯಿಗಳನ್ನು ದೋಚಿದ್ದಾಗಿ ತಿಳಿಯಿತು. ತಜ್ಞರು ಸ್ಥಳದಲ್ಲಿದ್ದ ಬೆರಳಚ್ಚು ಗುರುತುಗಳನ್ನು ಹೊರತೆಗೆದರು. ಅಕ್ಕಪಕ್ಕದ ಕಟ್ಟಡಗಳ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಮೂರು ವ್ಯಾನುಗಳಲ್ಲಿ ದರೋಡೆಕೋರರು ಬಂದಿದ್ದಾಗಿ ತಿಳಿಯಿತು. ಅದರಲ್ಲಿ ಒಂದು ವಾಹನದ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ತಿಳಿದಾಗ ಆ ವಾಹನ ಮುಂಬೈನ ಒಂದು ಟ್ರಾವೆಲ್ ಏಜೆನ್ಸಿಯದೆಂದು ಪತ್ತೆಮಾಡಲಾಯಿತು. ಹಿಂದಿನ ರಾತ್ರಿ ಬಂದ ಮೂರು ಮಂದಿ ಶಿರಡಿಗೆ ಹೋಗಲೆಂದು ಮೂರೂ ವಾಹನಗಳನ್ನು ಬಾಡಿಗೆಗೆ ಪಡೆದಿದ್ದಾಗಿ ತಿಳಿಸಿದ ಟ್ರಾವಲ್ಸ್ ಮಾಲೀಕ ಚಾಲಕರ ಮೊಬೈಲ್ ನಂಬರ್​ಗಳನ್ನು ನೀಡಿದ. ಆದರೆ ಅವು ಸ್ವಿಚ್ ಆಫ್ ಆಗಿದ್ದವು.
ಚೆಕ್​ವೆುೕಟ್ ಸಂಸ್ಥೆಯ ಸಿಬ್ಬಂದಿಯನ್ನು ವಿಚಾರಿಸಿದಾಗ ದರೋಡೆಕೋರರು ಮುಖವನ್ನು ಮುಚ್ಚಿಕೊಂಡಿದ್ದು ಧರಿಸಿದ್ದ ಬಟ್ಟೆಗಳ ಮೇಲೆ ಇನ್ನೊಂದು ಬಟ್ಟೆಯನ್ನು ಧರಿಸಿದ್ದರು, ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು, ಅವರಿಗೆ ಸಿಸಿಟಿವಿಯ ರೆಕಾರ್ಡರ್ ಎಲ್ಲಿದೆಯೆನ್ನುವ ಪೂರ್ವಮಾಹಿತಿಯಿತ್ತೆಂದು ತೋರಿತು ಎಂದರು. ಬಂದವರಲ್ಲೊಬ್ಬ ರಿವಾಲ್ವರ್ ಹಿಡಿದಿದ್ದು ಉಳಿದವರು ಚಾಕು ಮತ್ತು ಮಚ್ಚುಗಳನ್ನು ಹಿಡಿದಿದ್ದರು. ಸಂಸ್ಥೆಯ ಒಳಗೆ ಬಂದವರು ಏಳು ಜನರಾಗಿದ್ದು, ಉಳಿದವರು ಹೊರಗಿದ್ದರು ಎಂದರು. ದರೋಡೆ ಮಾಡುವಾಗ ತಾವು ಧರಿಸಿದ್ದ ಹೊರಬಟ್ಟೆಗಳನ್ನು ಎಸೆದಿರಬಹುದೆಂದು ಊಹಿಸಲಾಯಿತು. ಏತನ್ಮಧ್ಯೆ, ಸಂಸ್ಥೆಯ ನೌಕರರಿಂದ ಕಳವು ಮಾಡಿದ್ದ ಎಲ್ಲ ಸೆಲ್​ಫೋನ್ ನಂಬರ್​ಗಳನ್ನು ಲೊಕೇಷನ್ ಸರ್ಚ್​ಗೆ ಹಾಕಿದಾಗ ದರೋಡೆಕೋರರ ತಂಡ ಎರಡು ಬೇರೆ ಬೇರೆ ದಿಕ್ಕುಗಳಲ್ಲಿ ಹೋಗಿರುವುದಾಗಿ ತಿಳಿಯಿತು. ಆ ಜಿಲ್ಲೆಗಳ ಪೊಲೀಸರ ಸಹಕಾರ ಕೋರಲಾಯಿತು. ಈ ಮಧ್ಯೆ ಕಳ್ಳತನವಾದ ಹಣ 11,80,64,000 ರೂ.ಗಳೆಂದು ನಿಖರವಾಗಿ ತಿಳಿಯಿತು. ವಾಹನಗಳನ್ನು ಶಿರಡಿಗೆ ಹೋಗಲೆಂದು ಬಾಡಿಗೆಗೆ ಪಡೆದಿದ್ದ ಕಾರಣ ಪೊಲೀಸ್ ತಂಡವೊಂದು ಶಿರಡಿಗೆ ಹೋಯಿತು.ಇದನ್ನೂ ಓದಿ:ಆ ಕ್ಷಣ: ಮನೋದೌರ್ಬಲ್ಯದಿಂದ ದುರಂತ
ಈ ದರೋಡೆಯಲ್ಲಿ ಒಳಗಿನವರದೇ ಕೈವಾಡ ಶಂಕಿಸಿದ ಪೊಲೀಸರು ಸಂಸ್ಥೆಯ ಹಾಲಿ ಮತ್ತು ಮಾಜಿ ನೌಕರರ ಬಗ್ಗೆ ಮಾಹಿತಿ ಕಲೆಹಾಕತೊಡಗಿದರು. ದರೋಡೆ ನಡೆದಾಗ ಸಂಸ್ಥೆಯ ಕಾವಲುಗಾರ ಪ್ಲಾಸ್ಟಿಕ್ ಡ್ರಮ್ಮೊಂದನ್ನು ಹೊರಗೆ ತಂದಿಡಲು ದರೋಡೆಕೋರರೊಂದಿಗೆ ಸಹಕರಿಸಿದ ಎಂದು ತಿಳಿದುಬಂದಿತು. ಅವನನ್ನು ತೀವ್ರ ರೀತಿಯಲ್ಲಿ ಪ್ರಶ್ನಿಸಲಾಯಿತು. 26 ವರ್ಷ ವಯಸ್ಸಿನ ಕಾವಲುಗಾರ ಅಮೋಲ್ ಕಾರ್ಲೆ ತಾನು 6 ತಿಂಗಳ ಹಿಂದೆ ಸಂಸ್ಥೆಗೆ ಸೇರಿದ್ದಾಗಿ ತಿಳಿಸಿ, ಫೆಬ್ರವರಿ 2016ರಲ್ಲಿ ಆಕಾಶ್ ಚೌಹಾನ್ ಎಂಬಾತ ಸಂಸ್ಥೆಯನ್ನು ಬಿಡುವಾಗ ತನ್ನನ್ನು ನೇಮಿಸಲು ಶಿಫಾರಸನ್ನು ಮಾಡಿಸಿದನೆಂದು ಹೇಳಿದ. ಕಳೆದ ಮೂರು ತಿಂಗಳಿಂದ ನಗದನ್ನು ದರೋಡೆ ಮಾಡಬೇಕೆಂದು ಆಕಾಶ್ ಯೋಜನೆ ಹಾಕಿದ್ದನೆಂದು ತಿಳಿಸಿದ. ಆಕಾಶ್​ನ ಜತೆಗಿದ್ದ ಇನ್ನೊಬ್ಬನ ಹೆಸರು ಉಮೇಶ್ ವಾಘ್ ಎಂದು ತಿಳಿಸಿ ದರೋಡೆಮಾಡಿದ ನಂತರ ಎಲ್ಲರೂ ನಾಸಿಕ್​ದಲ್ಲಿ ಸೇರುವುದೆಂದು ತೀರ್ವನವಾಗಿತ್ತೆಂದ. ಆಕಾಶ್​ನ ಫೋಟೋ ಮತ್ತಿತರ ವಿವರಗಳು ಚೆಕ್​ವೆುೕಟ್ ಸಂಸ್ಥೆಯಲ್ಲಿಯೇ ಸಿಕ್ಕವು. ಆತ ಸಂಸ್ಥೆಯಲ್ಲಿ 2 ವರ್ಷಗಳ ಕಾಲ ಕೆಲಸಮಾಡಿದ್ದನೆಂದೂ ತನಗೆ ರಾತ್ರಿಪಾಳಿಯಲ್ಲಿ ಕೆಲಸಮಾಡಲು ಸಾಧ್ಯವಿಲ್ಲದ ಕಾರಣ ಬೆಳಗಿನ ಪಾಳಿ ಕೊಡಬೇಕೆಂದು ಕೇಳಿದನೆಂದೂ ಈ ವಿನಂತಿ ತಿರಸ್ಕರಿಸಿದಾಗ ಆತ ಕೆಲಸ ಬಿಟ್ಟನೆಂದೂ ಮ್ಯಾನೇಜರ್ ತಿಳಿಸಿದರು.
ಡಿಸಿಪಿ ನೇತೃತ್ವದ ತಂಡ ಕೂಡಲೇ ನಾಸಿಕ್​ಗೆ ಹೋದಾಗ ಅಲ್ಲಿನ ಹೋಟೆಲೊಂದರ ಹೊರಗೆ ತಾವು ಹುಡುಕುತ್ತಿದ್ದ ವಾಹನ ನಿಂತದ್ದು ಕಂಡಿತು. ಆ ಹೋಟೆಲಿನಲ್ಲಿ ವಿಚಾರಿಸಿದಾಗ ವಾಹನದಲ್ಲಿದ್ದವರು ಅಲ್ಲಿಯೇ ಕೋಣೆಯನ್ನು ಬಾಡಿಗೆಗೆ ಪಡೆದಿದ್ದಾಗಿ ತಿಳಿಯಿತು. ಆ ರೂಮಿನಲ್ಲಿದ್ದ ಇಬ್ಬರು ತಮ್ಮ ಹೆಸರನ್ನು ಆಕಾಶ್ ಮತ್ತು ಮುಖೇಶ್ ಎಂದರು. ಅವರನ್ನು ಪ್ರಶ್ನಿಸಿದಾಗ ತಾವೇ ದರೋಡೆ ಮಾಡಿದ್ದಾಗಿ ಒಪ್ಪಿಕೊಂಡು ತಮ್ಮ ತಂಡದಲ್ಲಿ ಚಾಲಕರನ್ನೂ ಸೇರಿ 15 ಜನರಿದ್ದರೆಂದು ತಿಳಿಸಿದರು. ಅವರಿದ್ದ ಕೋಣೆಯಲ್ಲಿ 50 ಲಕ್ಷ ರೂಪಾಯಿ ನಗದು ಹಣ ಸಿಕ್ಕಿತು. ಹಣತುಂಬಿದ ಒಂದು ಪ್ಲಾಸ್ಟಿಕ್ ಚೀಲವನ್ನು ನಾಸಿಕ್​ನ ಹೊರವಲಯದಲ್ಲಿರುವ ಗೆಳೆಯನೊಬ್ಬನ ತೋಟದಲ್ಲಿ ಹುಗಿದಿರುವುದಾಗಿ ಅವರು ತಿಳಿಸಿದಾಗ, ಒಂದು ಕೋಟಿ ರೂ. ತುಂಬಿದ್ದ ದೊಡ್ಡ ಪ್ಲಾಸ್ಟಿಕ್ ಚೀಲವನ್ನು ಆ ತೋಟದಿಂದ ತೆಗೆಯಲಾಯಿತು. ಅವರಿಬ್ಬರೂ ತಮ್ಮ ತಂಡದ ಉಳಿದ ಜನರ ಹೆಸರನ್ನು ಹೇಳಿ ಅವರು ಪುಣೆಗೆ ಹೋಗಿರಬಹುದೆಂದು ತಿಳಿಸಿ ಸಂಭಾವ್ಯ ಜಾಗಗಳ ಬಗ್ಗೆ ಮಾಹಿತಿ ನೀಡಿದರು. ಈ ಮಾಹಿತಿ ಮೇರೆಗೆ ಪುಣೆಯ ಮನೆಯೊಂದರಿಂದ ನಿತೇಶ್, ಮಯೂರ್ ಮತ್ತು ಹರೀಶ್ ಎನ್ನುವವರನ್ನು ಬಂಧಿಸಲಾಯಿತು. ಅವರ ಬಳಿಯಿದ್ದ 2 ಕೋಟಿ ರೂ.ಗಳನ್ನು ಜಪ್ತಿ ಮಾಡಲಾಯಿತು. ಕೇವಲ 48 ಗಂಟೆಗಳ ಅವಧಿಯಲ್ಲಿ ಅಮೋಲ್​ನನ್ನೂ ಸೇರಿ ಆರು ಜನ ದರೋಡೆಕೋರರನ್ನು ಬಂಧಿಸಿ ಅವರಿಂದ ಒಟ್ಟಾರೆಯಾಗಿ ಮೂರೂವರೆ ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಯಿತು. 2 ವಾರಗಳ ನಂತರದ ಒಂದು ರಾತ್ರಿ ಹರಿ ವಾಗ್ ಮತ್ತು ಕಿರಣ್ ಸೋಲಂಕಿ ಎನ್ನುವವರು ಮುಂಬೈ-ನಾಸಿಕ್ ಹೆದ್ದಾರಿಯಲ್ಲಿ ತಮ್ಮ ವಾಹನವನ್ನು ದರೋಡೆಕೋರರ ತಂಡವೊಂದು ಅಡ್ಡಗಟ್ಟಿ ತಮ್ಮನ್ನು ಹೊಡೆದು ವಾಹನ ಮತ್ತು ಅದರಲ್ಲಿದ್ದ ಹಣವನ್ನು ದೋಚಿಕೊಂಡು ಹೋಯಿತೆಂದು ನಾಸಿಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರಿತ್ತರು. ಹಣದ ಬಗ್ಗೆ ಅವರನ್ನು ಪ್ರಶ್ನಿಸಿದಾಗ ತಾವೂ ಚೆಕ್​ವೆುೕಟ್ ಸಂಸ್ಥೆಯ ದರೋಡೆಯಲ್ಲಿ ಭಾಗವಹಿಸಿದ್ದು, ತಮ್ಮ ಪಾಲಿಗೆ ಬಂದಿದ್ದ ಹಣವನ್ನು ತರುತ್ತಿರುವಾಗ ಹೆದ್ದಾರಿಯಲ್ಲಿ ದರೋಡೆಯಾಯಿತೆಂದು ತಿಳಿಸಿದರು. ಠಾಣೆ ಉಪನಗರದ ಪೊಲೀಸರಿಗೆ ಮಾಹಿತಿ ಹೋದಾಗ ಅವರು ಬಂದು ವಿಚಾರಿಸಿದರು. ತಮ್ಮ ಸಹಚರರ ಬಂಧನದ ಬಗ್ಗೆ ಅರಿತು, ತಮ್ಮನ್ನು ಬಂಧಿಸಿದಾಗ ಕದ್ದಿದ್ದ ಹಣವನ್ನು ಜಪ್ತು ಮಾಡದಿರಲೆಂದು ಈ ನಾಟಕವನ್ನಾಡಿದ್ದಾಗಿ ತಿಳಿಸಿದರು. ಅವರಿಂದ ಒಂದೂವರೆ ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಯಿತು. ಎಡಬಿಡದ ಪ್ರಯತ್ನಗಳ ಫಲವಾಗಿ ದರೋಡೆಕೋರರ ತಂಡದ ಉಳಿದ ಏಳೂ ಜನರನ್ನು ಬಂಧಿಸಲಾಯಿತು. ಅಷ್ಟರಲ್ಲಾಗಲೇ ಅವರು ಸಾಕಷ್ಟು ಹಣ ಖರ್ಚು ಮಾಡಿದ್ದರಿಂದ, ಒಟ್ಟಾರೆಯಾಗಿ 10.08 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಯಿತು. ಇವರೆಲ್ಲರೂ ಅದೇ ಮೊದಲ ಬಾರಿಗೆ ಅಪರಾಧ ನಡೆಸಿದ್ದರೆಂದು ತಿಳಿಯಿತು. ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಇನ್ನೂ ಆರಂಭವಾಗಿಲ್ಲ. ‘ದುರಾಸೆ ವ್ಯಕ್ತಿಯನ್ನು ಕುರುಡ ಹಾಗೂ ಮೂರ್ಖನನ್ನಾಗಿ ಮಾಡುತ್ತದೆ’ ಎಂದ ಪರ್ಷಿಯನ್ ಕವಿ ರೂಮಿಯ ವಾಕ್ಯವೇನಾದರೂ ಆರೋಪಿಗಳಿಗೆ ತಿಳಿದಿದ್ದರೆ ಈ ದುಸ್ಸಾಹಸಕ್ಕೆ ಕೈಹಾಕುತ್ತಿರಲಿಲ್ಲವೇನೋ!
ಆ ಕ್ಷಣ: ಮುಳುವಾದ ಮೋಹ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 10 =
Remember me
