| ಎಸ್.ಶಾಂತಾರಾಮ್
‘ಹೋಯ್, ಬನ್ನಿ ಮಾರ್ರೆ, ಹೋಟ್ಲಾಗೆ ಒಂದು ಬನ್ ತಿಂದು ಫುಲ್ ಕಾಫಿ ಕುಡಿವಾ’- ಕಾಶ್ಮೀರದ ಶ್ರೀನಗರದ ರಸ್ತೆಯಲ್ಲಿ ಅಡ್ಡಾಡುವಾಗ ಇಂತಹ ಒಂದು ಮಾತು ನಿಮ್ಮ ಕಿವಿಗೆ ಬಿದ್ದರೆ ಅದಕ್ಕೆ ಇನ್ನು ಆಶ್ಚರ್ಯಪಡಬೇಡಿ! ಹೌದು, ಇಂತಹ ಬದಲಾವಣೆಗೆ ಈಗ ರಹದಾರಿ ಸಿಕ್ಕಂತಾಗಿದೆ. ಕೇಂದ್ರ ಸರ್ಕಾರ 2019ರ ಆಗಸ್ಟ್ 5ರಂದು ಆರ್ಟಿಕಲ್ 370ನ್ನು ರದ್ದುಗೊಳಿಸುವ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಕ್ಕೆ ಸುಪ್ರೀಂ ಕೋರ್ಟ್ ತನ್ನ ಅಂಗೀಕಾರದ ಮುದ್ರೆ ಒತ್ತಿದೆ. ಇದರಿಂದಾಗಿ ಈ ವಿಷಯ ಬರೀ ಜಮ್ಮು-ಕಾಶ್ಮೀರದ ವಿಷಯವಾಗಿ ಉಳಿದಿಲ್ಲ. ದೇಶದ ಯಾವುದೇ ಮೂಲೆಯಿಂದಲಾದರೂ ಕಾಶ್ಮೀರಕ್ಕೆ ತೆರಳಿ ಉದ್ಯಮಶೀಲತೆಯನ್ನು ಒರೆಗೆ ಹಚ್ಚಲಡ್ಡಿಯಿಲ್ಲ. ದೇಶದ ಯಾವುದೇ ರಾಜ್ಯದ ಪ್ರಜೆ ಶ್ರೀನಗರದಲ್ಲೋ, ಬಾರಾಮುಲಾ, ಅನಂತನಾಗ್ ಜಿಲ್ಲೆಯಲ್ಲೋ ಉದ್ಯಮ ಆರಂಭಿಸಿದರೆ ಅಲ್ಲಿ ನಮ್ಮ ಕನ್ನಡಿಗರೂ ಉದ್ಯಮ ಸ್ಥಾಪಿಸಬಹುದು, ಉದ್ಯೋಗ ಪಡೆಯಬಹುದು.
ಈವರೆಗೂ ಕಾಶ್ಮೀರ ಎಂದರೆ ಅದು ಭಾರತದ ಭಾಗವೇ ಹೌದೇ ಎನ್ನುವ ಅನುಮಾನ ಹೊಂದಿದ್ದವರಿಗೇನೂ ಕೊರತೆ ಇರಲಿಲ್ಲ. ಈವರೆಗಿನ ಅಲ್ಲಿನ ಪ್ರತ್ಯೇಕ ಸಂವಿಧಾನವು ಇಂತಹ ಎಲ್ಲ ರೀತಿಯ ಅಪಸವ್ಯಗಳಿಗೆ ಕಾರಣವಾಗಿತ್ತು. ಬೇರೆ ರಾಜ್ಯದವರು ಅಲ್ಲಿಗೆ ಹೋಗಿ ಯಾವುದೇ ತುಂಡುಭೂಮಿ ಖರೀದಿಸಲು ಅಲ್ಲಿನ ಸಂವಿಧಾನದಲ್ಲಿ ಅವಕಾಶವಿರಲಿಲ್ಲ. ಇನ್ನು ಅಲ್ಲಿ ಉದ್ಯಮ ಶುರು ಮಾಡುವುದು ಎಲ್ಲಿಂದ ಬಂತು? 2019ರ ನಂತರ ಕಾಶ್ಮೀರವೂ ಇತರ ರಾಜ್ಯಗಳಂತೆ ಎನ್ನುವುದನ್ನು ಸಾರಿದ್ದೇವೆ.
ಜಮ್ಮು-ಕಾಶ್ಮೀರ ಎಂದರೆ ಅದು ಉಗ್ರಗಾಮಿಗಳ ತವರು, ಪ್ರತ್ಯೇಕತಾವಾದಿಗಳ ತಾಣ, ಹಿಂಸಾಚಾರದ ಅಪಾಯ ಸದಾ ಇದ್ದೇ ಇರುತ್ತದೆ- ಇಂತಹ ಸಮಸ್ಯಾತ್ಮಕ ರಾಜ್ಯವೆಂದು ಬಿಂಬಿಸಲ್ಪಟ್ಟಿದ್ದರಿಂದ ಸ್ವತಃ ಕಾಶ್ಮೀರವೂ ಸೊರಗಿತ್ತು. ಕಾಶ್ಮೀರದಲ್ಲಿ ಜನಸಾಮಾನ್ಯರಿಗಿಂತ ಉಗ್ರಗಾಮಿಗಳ ಸಂಖ್ಯೆಯೇ ಹೆಚ್ಚಿದೆ ಎನ್ನುವ ಅನುಮಾನವೂ ಇತರರಿಗಿತ್ತು. ಅದರ ಪ್ರಕೃತಿ ಸೌಂದರ್ಯ ಸವಿಯುವ ಜನರ ಆಶಯಗಳಿಗೆ ಅಲ್ಲಿನ ಆಡಳಿತ ವ್ಯವಸ್ಥೆ ತಣ್ಣೀರು ಎರಚಿತ್ತು. ಚಲನಚಿತ್ರೀಕರಣ ಮಾಡುವ ಮಂದಿ ಕಾಶ್ಮೀರ ಬಿಟ್ಟು ಬೇರೆ ತಾಣಗಳನ್ನು ಅರಸಬೇಕಾಗಿತ್ತು. ಇದರಿಂದ ಕಾಶ್ಮೀರದಲ್ಲಿ ಆರ್ಥಿಕ ಚಟುವಟಿಕೆಗಳೇ ಸ್ಥಗಿತಗೊಂಡಿದ್ದವು. ಸ್ಥಳೀಯರು ಪ್ರವಾಸೋದ್ಯಮದಿಂದ ಸಿಗುವ ಪ್ರಯೋಜನಗಳಿಂದ ವಂಚಿತರಾಗಿದ್ದರು. ಕಾಶ್ಮೀರದ ಸೌಂದರ್ಯಸಿರಿಯನ್ನು ಯಾವುದೋ ಕೆಲಸಕ್ಕೆ ಬಾರದ ಒಂದು ಕಾನೂನು ಮರೆಮಾಚಿಬಿಟ್ಟಿತ್ತು.
2019ರಲ್ಲಿ ಆರ್ಟಿಕಲ್ 370 ರದ್ದಾದ ಕೂಡಲೇ ಅಲ್ಲಿನ ಚಿತ್ರಣ ಬದಲಾಗುತ್ತಿದೆ. ಸರ್ಕಾರೀ ಪ್ರಾಯೋಜಿತ ಅಭಿವೃದ್ಧಿ ಕಾರ್ಯಗಳು ಅಲ್ಲಿ ನಡೆಯುತ್ತಿವೆ. ಆದರೆ ಅದು ಈಗಿನ ಭಾರೀ ಬದಲಾವಣೆಯ ಒಂದು ಭಾಗ ಮಾತ್ರ. ಅದಕ್ಕಿಂತ ಅನೇಕ ದೂರಗಾಮಿ ಪರಿಣಾಮಗಳಿಗೆ ಕಾಶ್ಮೀರ ತನ್ನನ್ನು ಒಡ್ಡಿಕೊಂಡಿದೆ.
ಕಾಶ್ಮೀರದ ಜನರನ್ನು ದೇಶದ ಇತರ ಜನರೊಂದಿಗೆ ಬೆರೆಯುವಂತಹ ಮುಕ್ತ ಅವಕಾಶಕ್ಕೆ ಈಗಿನ ಬದಲಾವಣೆ ದಾರಿ ತೋರಿಸಿದೆ. ಬರೀ ಪ್ರವಾಸಕ್ಕೆ ಸೀಮಿತವೆಂದು ನಾವಿನ್ನು ಕಾಶ್ಮೀರವನ್ನು ನೋಡುವಂತಿಲ್ಲ. ಅದಕ್ಕಿಂತ ಮಿಗಿಲಾಗಿ ಅಲ್ಲಿನ ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಪ್ರತಿಯೊಬ್ಬ ಭಾರತೀಯನೂ ತನ್ನದೇ ಕೊಡುಗೆ ನೀಡಲು ಅನುಮತಿ ಪಡೆದಿದ್ದಾನೆ ಎಂದರೆ ಅದೇನೂ ಸಾಮಾನ್ಯ ಸಂಗತಿಯಲ್ಲ. ಒಂದು ಕಾನೂನು ಜಾರಿಯಾದರೆ ಆಗಬಹುದಾದ ಬದಲಾವಣೆಗಿಂತ ಒಂದು ಕಾನೂನಿನ ರದ್ದತಿ ಕೂಡ ಭಾರೀ ಮಹತ್ವ ಹೊಂದಿದೆ ಎನ್ನುವುದು ಸಾಬೀತಾಗಿದೆ.
ಪ್ರಸ್ತುತ ಕಾಶ್ಮೀರದ ಸ್ಥಿತಿಯು ಭಿನ್ನ ಭಾಷೆಗಳ ಜನರ ನಡುವಿನ ಸಂಬಂಧವನ್ನೂ ಬೆಸೆಯಬಲ್ಲುದು. ಬೆಂಗಳೂರಿನ ವಧು, ಕಾಶ್ಮೀರದ ವರನನ್ನು ವರಿಸಬಹುದು! ಕಾಶ್ಮೀರದ ವಧು ನಮ್ಮ ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಸೊಸೆಯೂ ಆಗಬಹುದು! ಮಧುಚಂದ್ರಕ್ಕೆ ಸ್ವಿಜರ್ಲ್ಯಾಂಡ್​ಗೆ ಹಾರುತ್ತಿದ್ದ ನವದಂಪತಿಗಳು ಕಾಶ್ಮೀರಕ್ಕೆ ಹೋಗಿ ಲ್ಯಾಂಡ್ ಆಗಬಹುದು.
2020ರ ನಂತರವಂತೂ ಪ್ರವಾಸಿಗರು ಕಾಶ್ಮೀರವನ್ನು ತಮ್ಮ ಆಯ್ಕೆ ಪಟ್ಟಿಯಲ್ಲಿ ಸೇರಿಸಿಕೊಂಡಾಗಿದೆ. ದಾಲ್ ಸರೋವರ, ಗುಲ್​ವಾರ್ಗ್, ಪೆಹಲ್​ಗಾಂವ್ ಮತ್ತಿತರ ಸುಂದರ ತಾಣಗಳಲ್ಲಿ ಪ್ರವಾಸಿಗರ ಕಲರವ ಹೆಚ್ಚಲಿದೆ. ಅನೇಕ ಸ್ಥಳೀಯರನ್ನು ದಾರಿತಪ್ಪಿಸಿ ಆಮಿಷದಿಂದ ಭಾರತದ, ಭಾರತೀಯರ ವಿರುದ್ಧ ಹೋರಾಡುವಂತೆ ಮಾಡುತ್ತಿದ್ದ ಶಕ್ತಿಗಳು ಇನ್ನು ನಿರುದ್ಯೋಗಿಗಳು. ಅದೇ ಸ್ಥಳೀಯರು ಸರ್ಕಾರಿ ವ್ಯವಸ್ಥೆಯ ಭಾಗವಾಗಬಹುದು. ಇಲ್ಲವೇ ಯಾರದೋ ಚಿತಾವಣೆಯಿಂದ ಕಲ್ಲು ಬೀಸಾಡಿ ಪುಡಿಗಾಸು ಸಂಪಾದಿಸುತ್ತಿದ ಯುವಕರು ಪ್ರವಾಸೋದ್ಯಮದಲ್ಲಿರುವ ಭಾರೀ ಉದ್ಯೋಗಾವಕಾಶವನ್ನು ಪಡೆದುಕೊಳ್ಳಬಹುದು. ಸ್ವಾಭಿಮಾನದ ಬದುಕಿನ ಜೊತೆಗೆ ಕೈತುಂಬ ಸಂಪಾದಿಸುವ ಹತ್ತಾರು ಮಾರ್ಗಗಳು ಕಾಶ್ಮೀರದ ಯುವಕರ ಮುಂದಿದೆ. ಕಾಶ್ಮೀರದ ಯುವಜನತೆ ಮುಂದೆ ತಮ್ಮ ರಾಜ್ಯದ ಭವಿಷ್ಯವನ್ನಲ್ಲದೆ ಭಾರತದ ಭವ್ಯ ಭವಿಷ್ಯದ ರೂವಾರಿಯಾಗುವ ಅದೃಷ್ಟವಿದೆ.
ಸ್ಥಳೀಯರನ್ನೇ ಬಳಸಿಕೊಂಡು ಭಾರತದ ವಿರುದ್ಧ ಪ್ರತ್ಯೇಕತಾವಾದದ ಅಸ್ತ್ರ ಪ್ರಯೋಗಿಸುತ್ತಿದ್ದ ಪಾಕಿಸ್ತಾನಕ್ಕೂ ಕಾಶ್ಮೀರದ ವಿಷಯದಲ್ಲಿ ಮೂಗು ತೂರಿಸುವ ಅವಕಾಶ ಕಡಿಮೆಯಾಗಿದೆ. ಸ್ಥಳೀಯರು ತಾವೇ ದುಡಿಯುವ ಕೈಗಳಾಗುತ್ತಿರುವುದರಿಂದ ಆಮಿಷವೊಡ್ಡಿ ಭಯೋತ್ಪಾದನೆಯನ್ನು ಜೀವಂತವಾಗಿಡುವ ಪಾಕ್ ಹುನ್ನಾರಕ್ಕೂ ಹಿನ್ನಡೆಯಾಗಿದೆ. ಪಾಕಿಸ್ತಾನ ಸರ್ಕಾರ ಐಎಸ್​ಐ ಮೂಲಕ ಭಯೋತ್ಪಾದಕ ಕೃತ್ಯಗಳಿಗೆ ನೀರೆರೆಯುತ್ತಿದ್ದ ದಿನಗಳನ್ನು ಇತಿಹಾಸದ ಪುಟಕ್ಕೆ ಸೇರಿಸುವುದು ಅನಿವಾರ್ಯ. ಇಂತಹ ಕೃತ್ಯಗಳಿಗೆ ತನ್ನ ಆರ್ಥಿಕ ಶಕ್ತಿಯನ್ನು ಪೋಲು ಮಾಡುತ್ತಿದ್ದ ಪಾಕಿಸ್ತಾನ ತನ್ನದೇ ನೆಲದಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ.
ಜಮ್ಮು-ಕಾಶ್ಮೀರದಲ್ಲಿ ಪೂರ್ಣ ಪ್ರಮಾಣದ ವಿಧಾನಸಭೆ ಅಸ್ತಿತ್ವಕ್ಕೆ ಬರುವುದರಿಂದ ನಮ್ಮ ರಾಜಕೀಯ ಪಕ್ಷಗಳಿಗೆ ಹೊಸ ಮೈದಾನವನ್ನು ತೆರೆದಂತಾಗಿದೆ. ರಾಜಕೀಯವಾಗಿ ಯಾವ ಶಕ್ತಿಯೇ ಮೇಲುಗೈ ಸಾಧಿಸಲಿ, ಆದರೆ ಕಾಶ್ಮೀರದ ಭವಿಷ್ಯವನ್ನು ಮುಂಬರುವ ವರ್ಷಗಳಲ್ಲಿ ಬದಲಾಯಿಸುವ ಮುಕ್ತ ಅವಕಾಶ ಈಗ ಅಲ್ಲಿನ ಜನರ ಮುಂದಿದೆ.
(ಲೇಖಕರು ಹಿರಿಯ ಪತ್ರಕರ್ತರು)
ಅಮೆರಿಕ, ಬ್ರಿಟನ್​, ಪಾಕ್​, ಶ್ರೀಲಂಕಾ ಸೇರಿ ಎಲ್ಲೆಡೆ ತೈಲ ಬೆಲೆ ಅಪಾರ ಏರಿಕೆ: ಭಾರತದಲ್ಲಿ ಮಾತ್ರ ಅಗ್ಗವಾಗಲು ಮೋದಿ ಸರ್ಕಾರ ಕೈಗೊಂಡ ಕ್ರಮಗಳೇನು?

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್​ 2023: ಹೊಸ ತಂತ್ರಜ್ಞಾನದ ಬಗ್ಗೆ ಎಚ್ಚರವಿರಲಿ, ಪ್ರಧಾನಿ ಮೋದಿ ಸಲಹೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 17 =
Remember me
