ಭಾರತ – ಪಾಕಿಸ್ತಾನ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸದಂತೆ ಎರಡೂ ಸೇನೆಯ ಉನ್ನತ ಅಧಿಕಾರಿಗಳ ನಡುವೆ ಗುರುವಾರ ಒಪ್ಪಂದ ಏರ್ಪಟ್ಟಿದೆ. ಕದನವಿರಾಮ, ಎಲ್​ಒಸಿ ಎಂದರೇನು? ಇದರ ಮಹತ್ವ ಹಾಗೂ ಹಿನ್ನೆಲೆ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಕದನವಿರಾಮ ಎಂದರೇನು?
ಎರಡು ದೇಶಗಳ ಗಡಿಯಲ್ಲಿ ಯೋಧರು ಅಪ್ರಚೋದಿತವಾಗಿ ನಡೆಸುವ ಗುಂಡಿನ ದಾಳಿ ತಡೆಯುವುದು ಅಥವಾ ಯುದ್ಧವನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಕ್ಕೆ ಕದನವಿರಾಮ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ಲೇಷಿಸಲಾಗಿದೆ. ಈ ಪರಿಕಲ್ಪನೆಯು ಮಧ್ಯಯುಗದಲ್ಲಿ ಮೂಡಿದ್ದಾಗಿದೆ. ರಕ್ತಪಾತ ತಪ್ಪಿಸಲು ಮಾನವೀಯ ದೃಷ್ಟಿಯಿಂದ ಎರಡು ದೇಶಗಳ ಮಧ್ಯೆ ಏರ್ಪಡುವ ಈ ಒಪ್ಪಂದವನ್ನು ‘ದೇವರ ಒಪ್ಪಂದ’ವೆಂದೂ ಬಣ್ಣಿಸಲಾಗಿದೆ. ಇದು ಎರಡು ದೇಶಗಳ ಸರ್ಕಾರದ ಮಧ್ಯೆ ನಡೆಯುವ ಪ್ರಕ್ರಿಯೆಯಾದರೂ, ಈ ಕುರಿತ ಒಪ್ಪಂದ ಆಗುವುದು ಸೇನೆಯ ಉನ್ನತ ಅಧಿಕಾರಿಗಳ ನಡುವೆ. ಕೆಲವೊಮ್ಮೆ ಮೂರನೇ ದೇಶ ಅಥವಾ ವ್ಯಕ್ತಿಗಳ ಮಧ್ಯಸ್ಥಿಕೆಯಲ್ಲೂ ಇದು ಏರ್ಪಡುತ್ತದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಚಾಪ್ಟರ್ 7ನೇ ನಿರ್ಣಯದಲ್ಲೂ ಕದನವಿರಾಮದ ಅಗತ್ಯತೆಯನ್ನು ಸವಿವರವಾಗಿ ತಿಳಿಸಲಾಗಿದೆ ಮತ್ತು ಇಂಥ ಒಪ್ಪಂದವನ್ನು ಮಾಡಿಕೊಂಡ ದೇಶಗಳು ಇದಕ್ಕೆ ಬದ್ಧವಾಗಿರುವುದು ಅತಿ ಮುಖ್ಯ ಎಂದೂ ಹೇಳಲಾಗಿದೆ.
1972ರ ಎಲ್​ಒಸಿ ಒಪ್ಪಂದ
ಸ್ವಾತಂತ್ರ್ಯದ ವೇಳೆ ನಡೆದ ದೇಶ ವಿಭಜನೆಯ ಕಾಲದಿಂದಲೂ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಜಮ್ಮು-ಕಾಶ್ಮೀರದಲ್ಲಿ ಗಡಿ ತಕಾರರು ಇದೆ. ಜಮ್ಮು-ಕಾಶ್ಮೀರದಲ್ಲಿ ಎರಡೂ ದೇಶಗಳು ಮಾನ್ಯ ಮಾಡಿರುವ ಮತ್ತು ಜಾಗತಿಕವಾಗಿ ಒಪ್ಪಲಾದ ಅಂತಾರಾಷ್ಟ್ರೀಯ ಗಡಿ (ಐಬಿ) ಹಾಗೂ ಪಾಕಿಸ್ತಾನದ ಹಿಡಿತದಲ್ಲಿರುವ ಕಾಶ್ಮೀರ (ಪಿಒಕೆ) ಹಾಗೂ ಭಾರತದ ಭಾಗದಲ್ಲಿರುವ ಜಮ್ಮು-ಕಾಶ್ಮೀರದ ಮಧ್ಯೆ ಸೇನೆಗಳು ಇದ್ದ ಜಾಗವನ್ನು 1949ರಲ್ಲಿ ವಿಶ್ವಸಂಸ್ಥೆ ಮಧ್ಯಸ್ಥಿಕೆಯಲ್ಲಿ ‘ಕದನವಿರಾಮದ ವಾಸ್ತವದ ಗಡಿ’ ಎಂದು ಗುರುತಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಲಾಯಿತು. 1971ರಲ್ಲಿ ನಡೆದ ಬಾಂಗ್ಲಾದೇಶ ವಿಮೋಚನೆಯ ಯುದ್ಧ ನಂತರ 1972ರ ಜುಲೈ 3ರಂದು ಶಿಮ್ಲಾದಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಮತ್ತು ಪಾಕ್​ನ ಅಧ್ಯಕ್ಷ ಜುಲ್ಪಿಕರ್ ಅಲಿ ಭುಟ್ಟೊ ಮಧ್ಯೆ ಆದ ಒಪ್ಪಂದದಲ್ಲಿ ಈ ವಾಸ್ತವದ ಗಡಿಗೆ ‘ಗಡಿ ನಿಯಂತ್ರಣ ರೇಖೆ (ಎಲ್​ಒಸಿ)’ ಎಂದು ಹೆಸರಿಸಲಾಯಿತು. ಬಹುತೇಕ ಕದನವಿರಾಮ ಉಲ್ಲಂಘನೆ ಇಲ್ಲೇ ನಡೆಯುತ್ತದೆ. ಐಬಿಯಲ್ಲೂ ಪಾಕ್ ಪಡೆಗಳು ಅಪ್ರಚೋದಿತವಾಗಿ ಗುಂಡಿನ ದಾಳಿ ನಡೆಸಿದ ಉದಾಹರಣೆ ಇದೆ.
2003ರಲ್ಲೇ ಕದನವಿರಾಮ ಘೋಷಣೆ
ಭಾರತ-ಪಾಕ್ ಉಭಯ ಸೇನೆಗಳ ಡಿಜಿಎಂಒಗಳ ಮಧ್ಯೆ 1987ರಿಂದ ಹಾಟ್​ಲೈನ್​ನಲ್ಲಿ ಮಾತುಕತೆ ನಡೆಯುತ್ತಿದೆ. ಕದನವಿರಾಮದ ಒಪ್ಪಂದ 2003ರಲ್ಲಿ ಏರ್ಪಟಿತು. ಆದರೂ ಗಡಿಯಲ್ಲಿ ಪಾಕ್ ಅಪ್ರಚೋದಿತ ದಾಳಿಯ ಮತ್ತು ಅಕ್ರಮ ಒಳನುಸುಳುವಿಕೆಯ ತಡೆಯಲು ಭಾರತ ನಡೆಸುತ್ತಿದ್ದ ಕಾರ್ಯಾಚರಣೆ ಕಾರಣ ಸಣ್ಣಪುಟ್ಟ ಚಕಮಕಿಗಳು ನಡೆಯುತ್ತಿದ್ದವು. ಆದರೆ, 2016ರ ಜನವರಿಯಲ್ಲಿ ಪಠಾಣ್ ಕೋಟ್, ವಾಯುಸೇನಾ ನೆಲೆ ಹಾಗೂ ಇದೇ ವರ್ಷ ಸೆಪ್ಟೆಂಬರ್​ನಲ್ಲಿ ಉರಿ ಸೇನಾ ನೆಲೆಯ ಮೇಲೆ ಭಯೋತ್ಪಾದನಾ ದಾಳಿ ನಡೆದ ತರುವಾಯ ಪಾಕ್​ನಿಂದ ಕದನವಿರಾಮ ಉಲ್ಲಂಘನೆ ಹೆಚ್ಚಳ ಆಯಿತು. 2019ರಲ್ಲಿ ಫೆ. 14ರಂದು ನಡೆದ ಪುಲ್ವಾಮಾ ದಾಳಿ ಹಾಗೂ ಅದೇ ವರ್ಷ ಆಗಸ್ಟ್​ನಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಕದನವಿರಾಮ ಉಲ್ಲಂಘನೆ ಇನ್ನಷ್ಟು ಅಧಿಕವಾಯಿತು. ಈ ಕದನವಿರಾಮ ಉಲ್ಲಂಘನೆ ತಡೆಯಲು ಎರಡೂ ಸೇನೆಗಳ ಡಿಜಿಎಂಒ ಹಾಟ್​ಲೈನ್ ಮೂಲಕ ಮಾತುಕತೆ ನಡೆಸುತ್ತಾರೆ. ಈ ಪ್ರಕ್ರಿಯೆ ನಡೆದ ಎರಡ್ಮೂರು ದಿನ ಅಥವಾ ವಾರ ಗಡಿಯಲ್ಲಿ ಶಾಂತಿ ಇರುತ್ತದೆ. ನಂತರ ಪಾಕ್ ಸೇನೆ ತನ್ನ ಚಾಳಿ ಮುಂದುವರಿಸುತ್ತಿತ್ತು. ಪಾಕ್​ನ ಈ ತಂಟೆಗೆ ಭಾರತ ಕೂಡ ತಕ್ಕ ಪ್ರತ್ಯುತ್ತರ ನೀಡುತ್ತಿತ್ತು.
2020ರಲ್ಲಿ ಅತಿಹೆಚ್ಚು ದಾಳಿ
2016ರಿಂದ ಈವರೆಗೆ ಸುಮಾರು 11 ಸಾವಿರ ಕದನವಿರಾಮ ಉಲ್ಲಂಘನೆ ಆಗಿದ್ದು, ಭಾರತದ ಗಡಿ ಗ್ರಾಮಗಳಲ್ಲಿ 140ಕ್ಕೂ ನಾಗರಿಕರು ಮೃತಪಟ್ಟಿದ್ದಾರೆ. 2020ರಲ್ಲಿ ಪಾಕಿಸ್ತಾನ 5,133 ಬಾರಿ ಕದನವಿರಾಮ ಉಲ್ಲಂಘಿಸಿದೆ. ಇದು 18 ವರ್ಷಗಳಲ್ಲೇ ಅತ್ಯಧಿಕವಾಗಿದ್ದು, ಭದ್ರತಾಪಡೆಯ 24 ಮಂದಿ ಸೇರಿದಂತೆ 46 ಜನರು ಸಾವನ್ನಪ್ಪಿದ್ದಾರೆ. 130ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ದಾರೆ. ಕಳೆದ ವರ್ಷ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ 221 ಉಗ್ರರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಸಂಸತ್​ಗೆ ಮಾಹಿತಿ ನೀಡಿದ್ದರು. 2018ರಲ್ಲಿ 1,629 ಮತ್ತು 2019ರಲ್ಲಿ 3,168 ಅಪ್ರಚೋದಿತ ಗುಂಡಿನ ದಾಳಿಯನ್ನು ಪಾಕ್ ಪಡೆಗಳು ನಡೆಸಿದ್ದವು. 2021ರಲ್ಲಿ ಈವರೆಗೆ 299 ಸಾರಿ ಕದನವಿರಾಮ ಉಲ್ಲಂಘನೆ ಆಗಿದೆ. ಭದ್ರತಾ ಪಡೆಗಳು ನಡೆಸಿದ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ 9 ಮಂದಿ ಭಯೋತ್ಪಾದಕರು ಹತರಾಗಿದ್ದಾರೆ ಎಂದು ರಕ್ಷಣಾ ಸಚಿವಾಲಯ ಮೂಲಗಳು ತಿಳಿಸಿವೆ.
ಬಾಲಾಕೋಟ್ ದಾಳಿಗೆ 2 ವರ್ಷ
ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್ ಯೋಧರ ವಾಹನದ ಮೇಲೆ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ ನಡೆಸಿದ್ದ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಬಾಲಾಕೋಟ್ ಉಗ್ರ ಶಿಬಿರದ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿ ಇಂದಿಗೆ ಎರಡು ವರ್ಷ ಪೂರ್ಣಗೊಂಡಿದೆ.
2019ರ ಫೆ.14ರಂದು ಜೈಷ್ ಸಂಘಟನೆಯ ಉಗ್ರ ಆದಿಲ್ ದರ್ ಭಾರಿ ಪ್ರಮಾಣದ ಸುಧಾರಿತ ಸ್ಪೋಟಕಗಳನ್ನು ತುಂಬಿದ್ದ ಕಾರೊಂದನ್ನು ಶ್ರೀನಗರದ ಕಡೆಗೆ ತೆರಳುತ್ತಿದ್ದ ಸಿಆರ್​ಪಿಎಫ್ ವಾಹನಕ್ಕೆ ಡಿಕ್ಕಿ ಹೊಡೆಸಿದ್ದ. ಭೀಕರ ಸ್ಪೋಟದಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಈ ದಾಳಿ ನಡೆದ 12ನೇ ದಿನಕ್ಕೆ ಪಾಕ್​ಗೆ ತಕ್ಕ ಉತ್ತರ ನೀಡಲು ನಿರ್ಧರಿಸಿದ ಭಾರತ, ಫೆ.26ರ ನಸುಕಿನ 3.30ರಿಂದ 3.55ರವರೆಗೆ ಬಾಲಾಕೋಟ್​ನಲ್ಲಿದ್ದ ಜೈಷ್ ಉಗ್ರರ ತರಬೇತಿ ಕೇಂದ್ರಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಗಡಿ ನಿಯಂತ್ರಣ ರೇಖೆ ದಾಟಿ ಸುಮಾರು 85 ಕಿ.ಮೀ. ಒಳನುಗ್ಗಿದ್ದ 12 ಮಿರಾಜ್ -2000 ಯುದ್ಧ ವಿಮಾನಗಳು ಜೈಷ್​ನ ತರಬೇತಿ ಕೇಂದ್ರಗಳ ಮೇಲೆ ಅತ್ಯಾಧುನಿಕ ಬಾಂಬ್​ಗಳನ್ನು ಹಾಕಿ ಸಂಪೂರ್ಣ ನಾಶಮಾಡಿದ್ದವು. ಸುಮಾರು 300 ಉಗ್ರರು ಹತರಾದರು. ಆದರೆ, ಪಾಕಿಸ್ತಾನ ಈ ದಾಳಿಯನ್ನು ಅಲ್ಲಗಳೆದಿತ್ತು.
ವೀರ ಅಭಿನಂದನ್
ಬಾಲಾಕೋಟ್ ದಾಳಿಗೆ ಪ್ರತೀಕಾರವಾಗಿ ಪಾಕ್ ತನ್ನ ಮೂರು ಎಫ್-16 ಯುದ್ಧ ವಿಮಾನಗಳ ಮೂಲಕ ಭಾರತ ಮೇಲೆ ಫೆ. 27ರಂದು ದಾಳಿ ನಡೆಸಲು ಮುಂದಾಗಿತ್ತು. ಪಾಕ್​ನ ವಿಮಾನಗಳು ಭಾರತ ಗಡಿ ದಾಟಿ ಬಂದಿದ್ದವು. ತಕ್ಷಣ ಮಿಗ್-21 ವಿಮಾನಗಳು ಪಾಕ್ ವಿಮಾನಗಳನ್ನು ಹಿಮ್ಮೆಟ್ಟಿಸಲು ಮುಗಿಬಿದ್ದವು. ಈ ವೇಳೆ ಮಿಗ್-21 ವಿಮಾನದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್, ಪಾಕ್​ನ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು. ಆದರೆ, ಅವರ ವಿಮಾನ ಅಪಘಾಕ್ಕೀಡಾಗಿತ್ತು. ಅವರು ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಕೆಳಗೆ ಇಳಿದರು. ತಾನು ಇಳಿದಿದ್ದು ಪಿಒಕೆ ಎಂದು ಗೊತ್ತಾಗುವಷ್ಟರಲ್ಲಿ ಸ್ಥಳೀಯರು ಅವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದರು. ನಂತರ ಪಾಕ್ ಸೇನೆ ಅವರನ್ನು ವಶಕ್ಕೆ ಪಡೆದಿತ್ತು. ಭಾರತ ಹಾಗೂ ಜಾಗತಿಕ ಮಟ್ಟದ ಒತ್ತಡಕ್ಕೆ ಮಣಿದ ಪಾಕ್, ಮಾರ್ಚ್ 1ರ ಸಂಜೆ ವಾಘಾ ಗಡಿಯ ಮೂಲಕ ಅಭಿನಂದನ್​ರನ್ನು ಭಾರತಕ್ಕೆ ಹಸ್ತಾಂತರಿಸಿತು.
ಸ್ವರಕ್ಷಣೆಗೆ ಮುನ್ನೆಚ್ಚರಿಕೆ ದಾಳಿ
ದೇಶವೊಂದರ ನೆರವು ಪಡೆದು ನಮ್ಮ ಮೇಲೆ ಕೆಲ ಉಗ್ರ ಸಂಘಟನೆಗಳು ಸಶಸ್ತ್ರ ದಾಳಿ ನಡೆಸಲು ಯೋಜನೆ ಹೂಡಿದಾಗ, ಮುನ್ನೆಚ್ಚರಿಕಾ ಕ್ರಮವಾಗಿ ಸರ್ಜಿಕಲ್ ದಾಳಿಗಳನ್ನು ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಭಾರತ ಹೇಳಿದೆ. ಮೆಕ್ಸಿಕೋ ದೇಶ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಕೆ. ನಾಗರಾಜ ನಾಯ್ಡು, ಪಾಕಿಸ್ತಾನ ಭಯೋತ್ಪಾದಕರ ನೆಲೆಬೀಡಾಗಿ ಪರಿವರ್ತನೆಯಾಗಿರುವುದನ್ನು ಪರೋಕ್ಷವಾಗಿ ಟೀಕಿಸುತ್ತಾ, ಭಾರತದ ಮೇಲೆ ಉಗ್ರರ ಪುಲ್ವಾಮಾ ದಾಳಿಯನ್ನು ಉಲ್ಲೇಖಿಸಿದರು. ಸ್ವರಕ್ಷಣೆ ಮಾಡಿಕೊಳ್ಳುವುದು ಪ್ರತಿಯೊಂದು ದೇಶದ ಹಕ್ಕಾಗಿದ್ದು, ಈ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಾಗುತ್ತದೆ. 9/11ರ ದಾಳಿ ಬಳಿಕ ಈ ಕುರಿತು ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯ ಕೆಲ ನಿರ್ಣಯಗಳೂ ಸ್ವರಕ್ಷಣೆಯನ್ನು ಪ್ರತಿಪಾದಿಸುತ್ತವೆ. 1993ರ ಸರಣಿ ಬಾಂಬ್ ಸ್ಪೋಟ, 26/11ರ ಉಗ್ರ ದಾಳಿ, ಪಠಾಣ್​ಕೋಟ್, ಪುಲ್ವಾಮ ದಾಳಿಗಳಿಗೆ ಭಾರತ ಸಾಕ್ಷಿಯಾಗಿದೆ. ದೇಶವೊಂದರ ನೆರವಿನಿಂದಲೇ ಕೆಲ ವಿಚ್ಛಿದ್ರಕಾರಿ ಶಕ್ತಿಗಳು ಭಾರತವನ್ನು ಸತತವಾಗಿ ಗುರಿ ಮಾಡುತ್ತಿರುವುದನ್ನು ಅಂತರಾಷ್ಟ್ರೀಯ ಸಮುದಾಯವೂ ಗಮನಿಸುತ್ತಿದೆ ಎಂದು ನಾಯ್ಡು ಭಾರತದ ರಕ್ಷಣಾ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 19 =
Remember me
