ಗುಜರಾತ್ ರಾಜ್ಯದ ಗೃಹ ಸಚಿವ ಹರ್ಷ ಸಂಘವಿ ಅವರು ಕಳೆದ ಶನಿವಾರ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುನಿಫಾಮ್ರ್ ಸಿವಿಲ್ ಕೋಡ್- ಯುಸಿಸಿ) ಜಾರಿಗೊಳಿಸಲು ಸಮಿತಿಯೊಂದನ್ನು ರಚಿಸುವುದಾಗಿ ಪ್ರಕಟಿಸಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ಉತ್ತರಾಖಂಡ ರಾಜ್ಯ ಕೂಡ ಇದೇ ರೀತಿಯ ಪ್ರಕ್ರಿಯೆ ಕೈಗೊಳ್ಳಲು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವದ ಸಮಿತಿಯನ್ನು ನೇಮಿಸಿದೆ. ಬಿಜೆಪಿ ಆಡಳಿತವಿರುವ ಅಸ್ಸಾಂ ಮತ್ತು ಹಿಮಾಚಲ ಪ್ರದೇಶಗಳು ಸಹ ಯುಸಿಸಿ ಕಲ್ಪನೆಯನ್ನು ಬೆಂಬಲಿಸಿವೆ. ಧರ್ಮ, ಲಿಂಗ, ಮತ್ತು ಲೈಂಗಿಕ ತಾರತಮ್ಯವಿರದೆ ಎಲ್ಲ ನಾಗರಿಕರಿಗೆ ಒಂದೇ ವೈಯಕ್ತಿಕ ಕಾನೂನು ಜಾರಿಗೊಳಿಸಬೇಕೆಂಬ ಚರ್ಚೆ ಸ್ವಾತಂತ್ರಾ್ಯನಂತರದಿಂದ ನಡೆದುಕೊಂಡು ಬಂದಿದೆ. ಸರ್ಕಾರವು ಕೂಡ ತನ್ನ ನಾಗರಿಕರಿಗೆ ಇಂತಹ ಕಾನೂನನ್ನು ಒದಗಿಸಲು ಪ್ರಯತ್ನಿಸಬೇಕು ಎಂದು ಸಂವಿಧಾನವೂ ಹೇಳುತ್ತದೆ. ತಾನು ಅಧಿಕಾರಕ್ಕೆ ಬಂದರೆ ಯುಸಿಸಿ ಜಾರಿಗೊಳಿಸುವುದಾಗಿ ಬಿಜೆಪಿ ಮೊದಲಿನಿಂದಲೂ ಪ್ರತಿಪಾದಿಸುತ್ತಲೇ ಬಂದಿದೆ. 1998ರಿಂದಲೂ ತನ್ನ ಚುನಾವಣೆಯ ಪ್ರಣಾಳಿಕೆಯಲ್ಲೂ ಇದನ್ನು ಘೋಷಿಸುತ್ತ ಬಂದಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್) ಹಾಗೂ ಬಿಜೆಪಿಯ ಪೂರ್ವಪಕ್ಷವಾದ ಜನಸಂಘದ ಸಂಸ್ಥಾಪಕ ಡಾ. ಶ್ಯಾಮಾಪ್ರಸಾದ ಮುಖರ್ಜಿ ಅವರೂ ಯುಸಿಸಿ ಜಾರಿಯ ಅಗತ್ಯತೆ ಪ್ರತಿಪಾದಿಸುತ್ತ ಬಂದಿದ್ದಾರೆ. ಧಾರ್ವಿುಕ ನಂಬಿಕೆಗಳು ಏನೇ ಇದ್ದರೂ ಭಾರತದಲ್ಲಿನ ಕ್ರಿಮಿನಲ್ ಕಾನೂನುಗಳು ಏಕರೂಪವಾಗಿವೆ ಮತ್ತು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತವೆ. ಆದರೆ, ನಾಗರಿಕ ಕಾನೂನುಗಳು ಧಾರ್ವಿುಕ ನಂಬಿಕೆಯಿಂದ ಪ್ರಭಾವಿತವಾಗಿವೆ. ಕ್ರಿಮಿನಲ್ ಕಾನೂನುಗಳ ರೀತಿಯಲ್ಲಿಯೇ ಎಲ್ಲ ಧರ್ಮಗಳ ಜನರಿಗೆ ಏಕೂಪವಾಗಿ ಅನ್ವಯಿಸುವ ನಾಗರಿಕ ಕಾನೂನುಗಳನ್ನು ಜಾರಿಗೆ ತರುವ ಉದ್ದೇಶವೇ ಯುಸಿಸಿಯದ್ದಾಗಿದೆ.
ವೈಯಕ್ತಿಕ ಕಾನೂನುಗಳು ಯಾವುವು?:ಧರ್ಮ, ಜಾತಿ ಮತ್ತು ನಂಬಿಕೆಯ ಆಧಾರದ ಮೇಲೆ ನಿರ್ದಿಷ್ಟ ಗುಂಪಿನ ಜನರಿಗೆ ಅನ್ವಯಿಸುವ ಕಾನೂನುಗಳೇ ವೈಯಕ್ತಿಕ ಕಾನೂನುಗಳು. ಹಿಂದೂಗಳು ಮತ್ತು ಮುಸ್ಲಿಮರ ವೈಯಕ್ತಿಕ ಕಾನೂನುಗಳು ಅವರ ಧಾರ್ವಿುಕ ಪ್ರಾಚೀನ ಗ್ರಂಥಗಳಲ್ಲಿ ತಮ್ಮ ಮೂಲ ಮತ್ತು ಅಧಿಕಾರವನ್ನು ಕಂಡುಕೊಳ್ಳುತ್ತವೆ. ಹಿಂದೂ ಧರ್ಮದಲ್ಲಿ ವೈಯಕ್ತಿಕ ಕಾನೂನುಗಳು ಉತ್ತರಾಧಿಕಾರ, ಮದುವೆ, ದತ್ತು, ಸಹ-ಪೋಷಕತ್ವ, ತಮ್ಮ ತಂದೆಯ ಸಾಲಗಳನ್ನು ಪಾವತಿಸಲು ಪುತ್ರರ ಬಾಧ್ಯತೆಗಳು, ಕುಟುಂಬದ ಆಸ್ತಿಯ ವಿಭಜನೆ, ನಿರ್ವಹಣೆ, ಪಾಲನೆ ಮತ್ತು ದತ್ತಿ ದೇಣಿಗೆಗಳಿಗೆ ಸಂಬಂಧಿಸಿದ ಕಾನೂನು ಸಮಸ್ಯೆಗಳಿಗೆ ಅನ್ವಯಿಸುತ್ತವೆ. ಇಸ್ಲಾಂನಲ್ಲಿ, ವೈಯಕ್ತಿಕ ಕಾನೂನುಗಳು ಉತ್ತರಾಧಿಕಾರ, ಉಯಿಲುಗಳು, ಪರಂಪರೆ, ಮದುವೆ, ವಕ್ಪ್​ಗಳು, ವರದಕ್ಷಿಣೆ, ಪಾಲನೆ, ವಿಚ್ಛೇದನ, ಉಡುಗೊರೆಗಳು ಮುಂತಾದ ವಿಷಯಗಳಿಗೆ ಅನ್ವಯಿಸುತ್ತವೆ. ಸಂವಿಧಾನವು ಯುಸಿಸಿಯನ್ನು ರಾಜ್ಯ ನೀತಿಯ ನಿರ್ದೇಶಕ ತತ್ವಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ. ಹೀಗಾಗಿ, ಇದು ಅಪೇಕ್ಷಣೀಯ ಉದ್ದೇಶವನ್ನಾಗಿ ಮಾಡುತ್ತದೆ. ಭಾರತದ ಭೂಪ್ರದೇಶದಾದ್ಯಂತ ನಾಗರಿಕರಿಗೆ ಯುಸಿಸಿ ಜಾರಿಗೊಳಿಸಲು ಸರ್ಕಾರವು ತೀವ್ರವಾಗಿ ಪ್ರಯತ್ನಿಸಬೇಕು ಎಂದು ಭಾರತೀಯ ಸಂವಿಧಾನದ 44ನೇ ವಿಧಿ ಕೂಡ ಹೇಳುತ್ತದೆ. ಅಲ್ಲದೆ, ಸುಪ್ರೀಂ ಕೋರ್ಟ್ ಕೂಡ ಕೆಲವು ಸಂದರ್ಭಗಳಲ್ಲಿ ಇದರ ಪರವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಯಾವುದೇ ನಿರ್ದೇಶನ ತತ್ವಗಳನ್ನು ಜಾರಿಗೆ ತರಲು ಕಾನೂನನ್ನು ರಚಿಸಿದರೆ, ವಿಧಿ 14 ಮತ್ತು 19ರ ಅಡಿಯಲ್ಲಿ ಮೂಲಭೂತ ಹಕ್ಕುಗಳ ಉಲ್ಲಂಘನೆಯ ಆಧಾರದ ಮೇಲೆ ಅದನ್ನು ಪ್ರಶ್ನಿಸಲಾಗುವುದಿಲ್ಲ ಎಂದು ವಿಧಿ 31 ಸಿ ಹೇಳುತ್ತದೆ. ಆದ್ದರಿಂದ ಸಾಕಷ್ಟು ನಾಗರಿಕ ವಿಷಯಗಳಲ್ಲಿ ಭಾರತೀಯ ಕಾನೂನುಗಳು ಈಗಾಗಲೇ ಏಕರೂಪವಾಗಿವೆ. ಉದಾಹರಣೆಗೆ, ಭಾರತೀಯ ಒಪ್ಪಂದ ಕಾಯ್ದೆ, ನಾಗರಿಕ ದಂಡ ಸಂಹಿತೆ, ಸರಕುಗಳ ಮಾರಾಟ ಕಾಯ್ದೆ, ಆಸ್ತಿ ವರ್ಗಾವಣೆ ಕಾಯ್ದೆ, ಪಾಲುದಾರಿಕೆ ಕಾಯ್ದೆ, ಸಾಕ್ಷಿ ಕಾಯ್ದೆ, ಇತ್ಯಾದಿ.
ಕಾಂಗ್ರೆಸ್ ಟೀಕೆ:ಗುಜರಾತ್ ರಾಜ್ಯದ ಭೂಪೇಂದ್ರ ಪಟೇಲ್ ಸರ್ಕಾರವು ಯುಸಿಸಿಯನ್ನು ಅನುಷ್ಠಾನಗೊಳಿಸುವ ವಿಧಾನಗಳನ್ನು ಅಧ್ಯಯನ ಮಾಡಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿಯನ್ನು ರಚಿಸುವ ಘೋಷಣೆ ಮಾಡಿರುವುದು ವಿಧಾನಸಭೆ ಚುನಾವಣೆ ಮುಂಚಿನ ಗಿಮಿಕ್ ಎಂದು ಕಾಂಗ್ರೆಸ್ ಟೀಕಿಸಿದೆ. ಬಿಜೆಪಿ ಸರ್ಕಾರದ ಈ ನಿರ್ಧಾರದಿಂದ ಜನರು ದಾರಿ ತಪ್ಪುವುದಿಲ್ಲ. ಇಂತಹ ಕಾನೂನು ರೂಪಿಸುವ ಅಧಿಕಾರವು ರಾಜ್ಯ ಶಾಸಕಾಂಗಕ್ಕೆ ಇಲ್ಲ ಎಂದು ಕಾಂಗ್ರೆಸ್​ನ ನಾಯಕ ಅರ್ಜುನ್ ಮೊದ್​ವಾಡಿಯಾ ಹೇಳಿದ್ದಾರೆ. ಸರ್ಕಾರದ ವೈಫಲ್ಯದಿಂದಾಗಿ ಹಣದುಬ್ಬರ, ನಿರುದ್ಯೋಗ ಮತ್ತು ಇತರ ಸಮಸ್ಯೆಗಳಿಂದ ಬಳಲುತ್ತಿರುವ ಸಾರ್ವಜನಿಕರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಈ ಗಿಮಿಕ್ ಮಾಡಲಾಗಿದೆ. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಅಧಿಕಾರ ಕೇಂದ್ರದಲ್ಲಿದೆ. ವೈಯಕ್ತಿಕ ಕಾನೂನುಗಳನ್ನು ಸಂಸತ್ತು ಅಂಗೀಕರಿಸುತ್ತದೆ. ಗುಜರಾತ್ ವಿಧಾನಸಭೆಗೆ ಈ ಕಾನೂನನ್ನು ರೂಪಿಸುವ ಅಧಿಕಾರವಿಲ್ಲ ಎಂದು ಅವರು ಹೇಳಿದ್ದಾರೆ.
ತ್ರಿವಳಿ ತಲಾಖ್ ನಿಷೇಧ:ಮುಸ್ಲಿಂ ವೈಯಕ್ತಿಕ ಕಾನೂನಿನ ಭಾಗವಾದ ತ್ರಿವಳಿ ತಲಾಖ್ ಅನ್ನು ಈಗಾಗಲೇ ನಿಷೇಧಿಸಲಾಗಿದೆ. ಕೇವಲ ಮೂರು ಬಾರಿ ತಲಾಖ್ ಎಂದು ಹೇಳುವ ಮೂಲಕ ಪತಿಯು ತನ್ನ ಪತ್ನಿಗೆ ವಿಚ್ಛೇದನ ನೀಡುವ ತ್ರಿವಳಿ ತಲಾಖ್ ಪದ್ಧತಿಯು ಮುಸ್ಲಿಂ ಸಮುದಾಯದಲ್ಲಿ ಆಚರಣೆಯಲ್ಲಿತ್ತು. 2017ರಲ್ಲಿ ಸುಪ್ರೀಂ ಕೋರ್ಟ್ ಇದರ ವಿರುದ್ಧ ತೀರ್ಪು ನೀಡಿತು. 1937ರ ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಅನ್ವಯ ತ್ರಿವಳಿ ತಲಾಖ್ ಕಾನೂನುಬದ್ಧವಾಗಿದ್ದು, ಮುಸ್ಲಿಂ ಸಮುದಾಯದ ಗಂಡಸರಿಗೆ ತಮ್ಮ ಹೆಂಡತಿಯ ಮೇಲೆ ವಿಶೇಷ ಸವಲತ್ತನ್ನು ಕಲ್ಪಿಸಿತ್ತು. ತ್ರಿವಳಿ ತಲಾಖ್ ಅನ್ನು ನಿಷೇಧಿಸಲು 2019ರ ಜುಲೈ 30ರಂದು ಭಾರತೀಯ ಸಂಸತ್ತು ‘ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆ, 2019’ ಅಂಗೀಕರಿಸಿತು. ಕಾಂಗ್ರೆಸ್ ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿತ್ತೆಂಬುದು ಗಮನಾರ್ಹ.
ಅಂಬೇಡ್ಕರ್ ಹೇಳಿದ್ದೇನು?:ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ರೂಪಿಸುವಾಗ, ‘ಯುಸಿಸಿ ಅಪೇಕ್ಷಣೀಯವಾಗಿದೆ. ಆದರೆ, ಸದ್ಯಕ್ಕೆ ಅದು ಸ್ವಯಂಪ್ರೇರಿತವಾಗಿ ಉಳಿಯಬೇಕು’ ಎಂದು ಹೇಳಿದ್ದರು, ಹೀಗಾಗಿ, ಕರಡು ಸಂವಿಧಾನದ 35ನೇ ವಿಧಿಯನ್ನು ಸಂವಿಧಾನದ ಭಾಗ 4ರಲ್ಲಿ ರಾಜ್ಯ ನೀತಿಯ ನಿರ್ದೇಶನ ತತ್ವಗಳ ಅಡಿಯಲ್ಲಿ ವಿಧಿ 44 ಎಂದು ಸೇರಿಸಲಾಗಿದೆ. ರಾಷ್ಟ್ರವು ಇದನ್ನು ಸ್ವೀಕರಿಸಲು ಸಿದ್ಧವಾದಾಗ ಮತ್ತು ಇದಕ್ಕೆ ಸಾಮಾಜಿಕ ಮನ್ನಣೆ ದೊರೆತಾಗ ಇದನ್ನು ಜಾರಿಗೊಳಿಸಲು ಅನುವಾಗುವಂತೆ ಸಂವಿಧಾನದಲ್ಲಿ ಸಂಯೋಜಿಸಲಾಗಿದೆ.
ಯುಸಿಸಿಯ ಮೂಲ:ಯುಸಿಸಿಯ ಮೂಲವು ವಸಾಹತುಶಾಹಿ ಭಾರತದಲ್ಲಿದೆ. ಬ್ರಿಟಿಷ್ ಸರ್ಕಾರವು 1835ರಲ್ಲಿ ತನ್ನ ವರದಿಯನ್ನು ಸಲ್ಲಿಸಿದಾಗ ಅಪರಾಧಗಳು, ಸಾಕ್ಷ್ಯಗಳು ಮತ್ತು ಒಪ್ಪಂದಗಳಿಗೆ ಸಂಬಂಧಿಸಿದ ಭಾರತೀಯ ಕಾನೂನಿನ ಕ್ರೋಡೀಕರಣದಲ್ಲಿ ಏಕರೂಪತೆಯ ಅಗತ್ಯವನ್ನು ಒತ್ತಿಹೇಳಿತು. ಆದರೆ, ಇಂತಹ ಕ್ರೋಡೀಕರಣದಿಂದ ಹಿಂದೂಗಳು ಮತ್ತು ಮುಸ್ಲಿಮರ ವೈಯಕ್ತಿಕ ಕಾನೂನುಗಳನ್ನು ಹೊರಗಿರಿಸಬೇಕೆಂದು ಶಿಫಾರಸು ಮಾಡಿತು.
ಮುಸ್ಲಿಂ ನಾಯಕರ ವಿರೋಧ:ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಅಡಿಯಲ್ಲಿ ಅಲ್ಪಸಂಖ್ಯಾತ ಗುಂಪುಗಳಿಗೆ ವೈಯಕ್ತಿಕ ಕಾನೂನುಗಳನ್ನು ಅವರ ಇಚ್ಛೆಯಂತೆ ರೂಪಿಸಲಾಗಿದ್ದು, ಇವುಗಳನ್ನು ಮುಂದುವರಿಸಬೇಕು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್​ಬಿ) ಪ್ರಧಾನ ಕಾರ್ಯದರ್ಶಿ ಹಜರತ್ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಹೇಳಿದ್ದಾರೆ. ಇದರಿಂದ ರಾಷ್ಟ್ರದಲ್ಲಿ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನಡುವೆ ಒಗ್ಗಟ್ಟು ಮತ್ತು ವಿಶ್ವಾಸ ಉಳಿಯಲು ಸಹಕಾರಿಯಾಗಿದ್ದು, ಇದರಿಂದಾಗಿ ಯಾವುದೇ ಹಾನಿಯಾಗಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ‘ಏಕರೂಪ ನಾಗರಿಕ ಸಂಹಿತೆಯು ಮುಸ್ಲಿಮರ ಹಿತಾಸಕ್ತಿ ಕಾಪಾಡುವುದಿಲ್ಲ. ಮುಸ್ಲಿಮರ ಧಾರ್ವಿುಕ ಆಚರಣೆ, ಶಿಕ್ಷಣ, ನಿಯಮ ಮತ್ತು ನಿಬಂಧನೆಗಳು ಇತರ ಧರ್ಮಗಳಿಗಿಂತ ಭಿನ್ನವಾಗಿವೆ’ ಎಂದು ದಾರುಲ್ ಉಲೂಮ್ ದಿಯೋಬಂದ್ ವಕ್ತಾರ ಮೌಲಾನಾ ಸುಫಿಯಾನ್ ನಿಜಾಮಿ ಹೇಳುತ್ತಾರೆ.
ಹುಳಿ ಬರುವ ಮೊದಲೇ ಗುರಿ ತಲುಪುವ ಇಡ್ಲಿ-ದೋಸೆ ಹಿಟ್ಟು; ಹೊಸ ರೀತಿಯ ಸರಬರಾಜು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − seven =
Remember me
