ಶಾಂತಿಸ್ಥಾಪನೆಯ ಘೋಷಣೆ, ಆಶ್ವಾಸನೆಗಳು ಜಾಗತಿಕ ವೇದಿಕೆಗೆ ಸೀಮಿತವಾಗಿ ಉಳಿದವು. ಕದನವಿರಾಮ ಘೋಷಿಸುವಂತೆ ವಿಸ್ವಸಂಸ್ಥೆ ಮಾಡಿಕೊಂಡ ಮನವಿ ವ್ಯರ್ಥವಾಯಿತು. 2023, ಒಂದಲ್ಲ, ಎರಡು ಭೀಕರ ಸಮರಗಳಿಗೆ ಸಾಕ್ಷಿಯಾಗಿ, ಸಾವಿರಾರು ಜೀವಗಳನ್ನು ಕಳೆದುಕೊಂಡಿತು. ಇಸ್ರೇಲ್ ಮತ್ತು ಹಮಾಸ್, ರಷ್ಯಾ ಹಾಗೂ ಯೂಕ್ರೇನ್ ನಡುವಿನ ಯುದ್ಧದ ಪರಿಣಾಮ ಅನೇಕ ದೇಶಗಳ ಆರ್ಥಿಕತೆ ಕೂಡ ನೆಲಕಚ್ಚಿದವು. ಆದರೂ, ಸದ್ಯದಲ್ಲೇ ಸಮರ ಕೊನೆಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಪ್ಯಾಲೆಸ್ಟೀನ್​ನ ಹಮಾಸ್ ಮತ್ತು ಇಸ್ರೇಲ್ ನಡುವಣ ಯುದ್ಧದಲ್ಲಿ ಡಿಸೆಂಬರ್ 20ರವರೆಗೆ 20 ಸಾವಿರಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಈ ಪೈಕಿ ಪ್ಯಾಲೆಸ್ಟೀನಿಯನ್ನರ ಸಂಖ್ಯೆಯೇ ಹೆಚ್ಚು. ಯುದ್ಧದ ಭಾಗವಾಗಿ ಪ್ಯಾಲೆಸ್ಟೀನ್​ನ ಗಾಜಾಪಟ್ಟಿಗೆ ಆಹಾರ, ವಿದ್ಯುತ್ ಮತ್ತು ನೀರು ಪೂರೈಕೆಯನ್ನು ಇಸ್ರೇಲ್ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಯುದ್ಧವನ್ನು ನಿಲ್ಲಿಸಬೇಕು ಎಂಬ ಜೋರ್ಡನ್ ಮಂಡಿಸಿದ ನಿರ್ಣಯವನ್ನು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮತಕ್ಕೆ ಹಾಕಿದಾಗ 179 ದೇಶಗಳಲ್ಲಿ 121 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದವು. ಇಸ್ರೇಲ್, ಅಮೆರಿಕ ಸೇರಿ 14 ದೇಶಗಳು ನಿರ್ಣಯದ ವಿರುದ್ಧ ಮತ ಚಲಾಯಿಸಿದರೆ, ಭಾರತ ಸೇರಿ 44 ದೇಶಗಳು ಮತದಾನದಿಂದ ದೂರವುಳಿದವು. ಈ ನಡುವೆ, ‘ಹಮಾಸ್ ಸರ್ವನಾಶವಾಗುವವರೆಗೆ ಯುದ್ಧವನ್ನು ನಿಲ್ಲಿಸುವುದಿಲ್ಲ. ಶಾಂತಿ ಸ್ಥಾಪನೆಯಾಗಬೇಕಾದರೆ ಹಮಾಸ್ ಸಂಪೂರ್ಣ ನಾಶವಾಗಬೇಕು’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಏನೇನಾಯಿತು?ಹಮಾಸ್ ನೇತೃತ್ವದ ಉಗ್ರಗಾಮಿಗಳು ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್​ನಲ್ಲಿ ಸಮುದಾಯಗಳ ಮೇಲೆ ದಾಳಿ ಮಾಡಿ 1,200 ಮಂದಿಯನ್ನು ಕೊಂದು 240 ಮಂದಿಯನ್ನು ಒತ್ತೆಯಾಳಾಗಿ ಕರೆದೊಯ್ದರು. ಅಂದಿನಿಂದಲೇ ಯುದ್ಧ ಆರಂಭವಾಯಿತು. ್ಞ ಕೆಲವು ದಿನಗಳ ಕದನ ವಿರಾಮದ ಷರತ್ತಿನ ಮೇಲೆ 140 ಇಸ್ರೇಲಿ ನಾಗರಿಕರನ್ನು ಬಿಡುಗಡೆ ಮಾಡಲಾಯಿತು. ಇಸ್ರೇಲ್ ಗಾಜಾ ಪಟ್ಟಿಯನ್ನು ಸುತ್ತುವರಿದು ಹೆಚ್ಚಿನ ಭಾಗವನ್ನು ನಾಶಪಡಿಸಿದೆ. ಹಮಾಸ್ ಆಳ್ವಿಕೆಯಲ್ಲಿರುವ ಗಾಜಾದಲ್ಲಿ ಇದುವರೆಗೆ 2.3 ಮಿಲಿಯನ್ ಜನರನ್ನು ಸ್ಥಳಾಂತರಿಸಲಾಗಿದೆ.
ರಷ್ಯಾ ಯೂಕ್ರೇನ್ ದ್ವೇಷದ ಕಿಚ್ಚು
ರಷ್ಯಾ-ಯೂಕ್ರೇನ್ ಯುದ್ಧ 2014ರಲ್ಲೇ ಆರಂಭವಾಗಿ, 2022ರಲ್ಲಿ ಭುಗಿಲೆದ್ದು, 2023ರಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿತು. ಸಮರದ ಪರಿಣಾಮ, 25 ಲಕ್ಷಕ್ಕೂ ಅಧಿಕ ಜನರು ಯೂಕ್ರೇನ್ ತೊರೆದು, ಆಶ್ರಯ ಕೋರಿ ವಿವಿಧ ದೇಶಗಳಿಗೆ ಹೋಗಿದ್ದಾರೆ. ತನ್ನ ಸೇನೆಯ ಮುಂದೆ ಯೂಕ್ರೇನ್ ಹೋರಾಡಲಾಗದೆ ಬಹುಬೇಗ ಸೋಲು ಒಪ್ಪಿಕೊಳ್ಳುತ್ತದೆ ಎಂಬ ರಷ್ಯಾದ ನಿರೀಕ್ಷೆ ಹುಸಿಯಾಗಿದ್ದು, ಯೂಕ್ರೇನ್ ಸೇನೆ ತಿರುಗೇಟು ನೀಡುತ್ತಿದೆ. ಯೂಕ್ರೇನ್​ನ ಪ್ರಮುಖ ನಗರಗಳು, ಜನವಸತಿ ಪ್ರದೇಶಗಳು, ಆಸ್ಪತ್ರೆಗಳು ಕೂಡ ರಷ್ಯಾ ದಾಳಿಗೆ ಗುರಿಯಾಗಿದ್ದು, ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಯೂಕ್ರೇನ್​ನ ನಾಲ್ಕು ಸಾವಿರ ಸೈನಿಕರು, ರಷ್ಯಾದ 12 ಸಾವಿರ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ರಷ್ಯಾದ ಸಾವಿರಾರು ಜನರು ಯುದ್ಧವನ್ನು ಪ್ರತಿಭಟಿಸಿ ಮತ್ತು ಯುದ್ಧವನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿ ಹೋರಾಟ ನಡೆಸಿದ್ದಾರೆ.
ಆಂತರಿಕವಾಗಿ ನಲುಗಿದ ಪಾಕ್
ಭಯೋತ್ಪಾದನೆಯ ಬೇರುಗಳಿಗೆ ನೀರು ಎರೆದು ಪೋಷಿಸಿದ ಪಾಕಿಸ್ತಾನ, ಈಗ ಅದರ ಫಲಗಳನ್ನು ಅನುಭವಿಸುತ್ತಿದೆ. ಪಾಕಿಸ್ತಾನದ ತಾಲಿಬಾನಿಗಳು ಹಲವು ಆತ್ಮಾಹುತಿ ದಾಳಿಗಳನ್ನು ನಡೆಸಿದ್ದಾರೆ. ಈ ವರ್ಷ ಹಲವು ಭಯೋತ್ಪಾದಕ ದಾಳಿಗಳಿಗೆ ಸಾಕ್ಷಿಯಾದ ಪಾಕಿಸ್ತಾನ, ಉಗ್ರರ ಹಾವಳಿ ತಡೆಯಲು ಅನಿವಾರ್ಯವಾಗಿ ಮುಂದಡಿ ಇಟ್ಟಿದೆ. ಪರಿಣಾಮ, 2023 ಒಂದರಲ್ಲೇ 25ಕ್ಕೂ ಅಧಿಕ ಕುಖ್ಯಾತ ಭಯೋತ್ಪಾದಕರನ್ನು ಹೊಡೆದುರುಳಿಸಿದೆ.
ರಾಜಕೀಯ ಅಸ್ಥಿರತೆ: 2023ರ ಆಗಸ್ಟ್ 9ರಂದು ಸಂಸತ್​ನ್ನು ಭಂಗಗೊಳಿಸಿದ ಬಳಿಕ, ಹಂಗಾಮಿ ಸರ್ಕಾರವಿದ್ದು, ರಾಜಕೀಯ ಅಸ್ಥಿರತೆ ಕಾಡುತ್ತಿದೆ. ಇದರ ಪರಿಣಾಮ, ಆರ್ಥಿಕತೆ ಮೇಲೂ ಆಗಿದ್ದು ಜನಸಾಮಾನ್ಯರು ಬೆಲೆಯೇರಿಕೆಯಿಂದ ಹೈರಾಣಾಗಿದ್ದಾರೆ. 2024ರ ಫೆಬ್ರವರಿಯಲ್ಲಿ ನಡೆಯಲಿರುವ ಸಂಸತ್ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ ಮಾಜಿ ಪ್ರಧಾನಿ ನವಾಜ್ ಷರೀಫ್ ಪಾಕ್​ಗೆ ಮರಳಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ಇಮ್ರಾನ್ ಖಾನ್, ನವಾಜ್ ಷರೀಫ್ ಮತ್ತು ಬಿಲಾವಲ್ ಭುಟ್ಟೋ ನಡುವೆ ಪ್ರಧಾನಿ ಸ್ಥಾನಕ್ಕಾಗಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ.
ಇಮ್ರಾನ್ ಬಂಧನ-ಬಿಡುಗಡೆ
ಭ್ರಷ್ಟಾಚಾರ ಆರೋಪದಲ್ಲಿ 2023 ಮೇ 9ರಂದು ಇಮ್ರಾನ್ ಖಾನ್​ರನ್ನು ಬಂಧಿಸಿ, ಮೂರು ವರ್ಷಗಳ ಜೈಲು ಶಿಕ್ಷೆ ಘೋಷಿಸಿದ ಬಳಿಕ, ಪಾಕಿಸ್ತಾನದಾದ್ಯಂತ ಭಾರಿ ಪ್ರತಿಭಟನೆ, ಹಿಂಸಾಕೃತ್ಯಗಳು ನಡೆದವು. ಆದರೆ, ನ್ಯಾಯಾಲಯ ಆಗಸ್ಟ್​ನಲ್ಲಿ ಮೂರು ವರ್ಷಗಳ ಜೈಲುಶಿಕ್ಷೆ ರದ್ದುಗೊಳಿಸಿದ ಬಳಿಕ ಇಮ್ರಾನ್ ಬಿಡುಗಡೆಯಾದರು.
ಚೀನಾದಲ್ಲಿ ಜಿನ್​ಪಿಂಗ್ ಹವಾ
ಚೀನಾದ ಕಮ್ಯುನಿಸ್ಟ್ ಪಕ್ಷದ ನಾಯಕರೊಬ್ಬರು 2 ಬಾರಿ ಮಾತ್ರ ಅಧ್ಯಕ್ಷರಾಗ ಬಹುದು ಎಂಬ ನಿಯಮವನ್ನು ಕಳೆದ ವರ್ಷ ರದ್ದುಗೊಳಿಸಲಾಗಿತ್ತು. ಈ ಬದಲಾವಣೆಯ ನಂತರ ಷಿ ಜಿನ್​ಪಿಂಗ್ 3ನೇ ಅವಧಿಗೆ ಅಧ್ಯಕ್ಷರಾಗಿದ್ದಾರೆ. ಷಿ ಎರಡನೇ ಅವಧಿಗೆ ಅಧ್ಯಕ್ಷರಾಗಿದ್ದಾಗಲೇ ಭಾರತ- ಚೀನಾ ಗಡಿಯಲ್ಲಿ ಅನೇಕ ಸಂಘರ್ಷಗಳು ತಲೆದೋರಿದ್ದವು. ನೆರೆ ರಾಷ್ಟ್ರಗಳ ಕೆಲ ಪ್ರದೇಶಗಳನ್ನು ತೆಕ್ಕೆಗೆ ತೆಗೆದುಕೊಂಡು ಮಹಾಚೀನಾ ರೂಪಿಸುವ ಕಾರ್ಯಸೂಚಿ ಹೊಂದಿರುವ ಜಿನ್​ಪಿಂಗ್, 3ನೇ ಅವಧಿಯಲ್ಲಿ ಏನೆಲ್ಲ ಮಾಡಲಿದ್ದಾರೆ ಎಂಬ ಆತಂಕಭರಿತ ಕುತೂಹಲ ಜಾಗತಿಕ ಸಮುದಾಯಕ್ಕೆ ಕಾಡುತ್ತಿದೆ.
ಕಾರಿಡಾರ್ ವಿಸ್ತರಣೆ
ಚೀನಾದ ಬೆಲ್ಟ್ ಅಂಡ್ ರೋಡ್ ಉಪಕ್ರಮದ ಪ್ರಮುಖ ಯೋಜನೆಯಾದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಗೆ (ಸಿಪಿಇಸಿ) ಭಾರತವು ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದರೂ ಈ ಯೋಜನೆಯನ್ನು ತಾಲಿಬಾನ್ ಆಡಳಿತವಿರುವ ಆಫ್ಘಾನಿಸ್ತಾನದಲ್ಲಿ ವಿಸ್ತರಿಸಲು ಚೀನಾ ಮುಂದಾಗಿದೆ. ಅಲ್ಲದೆ, ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಸಾಲ ಒದಗಿಸಿದೆ.
ಭಾರತಕ್ಕೆ ರಿಷಿ ಸುನಕ್
ಬ್ರಿಟನ್​ನಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಮೂಲದವರು ಪ್ರಧಾನಿಯಾಗಿದ್ದಾರೆ. 2022ರಲ್ಲಿ ಪ್ರಧಾನಿಯಾದ ರಿಷಿ ಸುನಕ್ 2023ರಲ್ಲಿ ಭಾರತಕ್ಕೆ ಭೇಟಿ ನೀಡಿ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಂಡರು. ಮಾತ್ರವಲ್ಲ, ಭಾರತ ದೊಂದಿಗೆ ಬಾಂಧವ್ಯವೃದ್ಧಿಯ ಆಶಯ ವ್ಯಕ್ತಪಡಿಸಿದರು.
ದೊಡ್ಡಣ್ಣನಿಗೆ ಹಲವು ಹಿನ್ನಡೆ
ಆರ್ಥಿಕ ಹಿಂಜರಿತ, ಹಲವು ರಂಗಗಳಲ್ಲಿ ಹಿನ್ನಡೆ, ಆಂತರಿಕ ಸಮಸ್ಯೆಗಳಿಂದ ಅಮೆರಿಕ ಬೇಗುದಿ ಎದುರಿಸುತ್ತಿದೆ. ಶೂಟೌಟ್ ಪ್ರಕರಣಗಳು ತಲೆನೋವಾಗಿ ಮಾರ್ಪಟ್ಟಿದ್ದು, ಗನ್ ಮಾಫಿಯಾಕ್ಕೆ ಕಡಿವಾಣ ಹಾಕುವ ಪ್ರಯತ್ನಗಳು ಕೈಗೂಡಿಲ್ಲ. ಗುಂಡಿನ ದಾಳಿಯ ಮೂಲಕ ಸಾಮೂಹಿಕ ಹತ್ಯೆ ನಡೆಸಿದ ಪ್ರಕರಣಗಳು ವರ್ಷದ 12 ತಿಂಗಳಲ್ಲೂ ದಾಖಲಾಗಿರುವುದು, ಸಮಸ್ಯೆಯ ತೀವ್ರತೆಗೆ ಸಾಕ್ಷಿ.
ಟ್ರಂಪ್​ಗೆ ಮುಖಭಂಗ
ಮತ್ತೊಂದು ಅವಧಿಗೆ ಅಧ್ಯಕ್ಷರಾಗಬೇಕು ಎಂಬ ಡೊನಾಲ್ಡ್ ಟ್ರಂಪ್ ಕನಸು ಭಗ್ನಗೊಂಡಿದೆ. 2021ರಲ್ಲಿ ಅಮೆರಿಕ ಕ್ಯಾಪಿಟಲ್ (ಸಂಸತ್) ಮೇಲೆ ನಡೆದಿರುವ ದಾಳಿಯಲ್ಲಿ ಟ್ರಂಪ್ ಪಾತ್ರವಿರುವುದು ದೃಢಪಟ್ಟಿರುವುದರಿಂದ ಅಧ್ಯಕ್ಷೀಯ ಸ್ಪರ್ಧೆಯಿಂದ ಅವರನ್ನು ಸುಪ್ರೀಂ ಕೋರ್ಟ್ ಅನರ್ಹಗೊಳಿಸಿದೆ.
ಸಂಕಷ್ಟದಲ್ಲಿ ಅಫ್ಘಾನಿಸ್ತಾನ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವು ಇದೇ ಆಗಸ್ಟ್​ನಲ್ಲಿ ಎರಡು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಮಹಿಳೆಯರ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದ್ದು, 6ನೇ ತರಗತಿಯವರೆಗೆ ಮಾತ್ರ ಶಾಲೆಗೆ ಹೋಗಲು ಬಾಲಕಿಯರಿಗೆ ಅನುಮತಿ ನೀಡಲಾಗಿದೆ. ತಾಲಿಬಾನ್ ವಿರೋಧಿ ಗುಂಪುಗಳು ನಡೆಸುತ್ತಿರುವ ಭಯೋತ್ಪಾದನಾ ದಾಳಿಗಳಲ್ಲಿ ಅಮಾಯಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಸಂಚಲನ ಮೂಡಿಸಿದ ವಿವೇಕ್
ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆಗೆ ಮುಂದಾಗಿದ್ದಾರೆ. ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿರುವ ವಿವೇಕ್, ಹಿಂದು ಗಳು ಮತ್ತು ಹಿಂದುತ್ವದ ಹೆಸರಿನಲ್ಲಿ ಮತ ಯಾಚಿಸುತ್ತಿರುವುದು ಗಮನಾರ್ಹ.
ಹೆಚ್ಚಿದ ಸ್ನೇಹ ಸಂಬಂಧ:ಭಾರತ ಈ ವರ್ಷವೂ ಹಲವು ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ವೃದ್ಧಿಸಿಕೊಂಡಿದೆ. ವಿಶೇಷವಾಗಿ, ಅಮೆರಿಕದೊಂದಿಗಿನ ಸ್ನೇಹ ಗಟ್ಟಿಗೊಂಡಿದ್ದು, ಅಧ್ಯಕ್ಷ ಜೋ ಬೈಡೆನ್ ಹಲವು ಸಂದರ್ಭಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಲ್ಲದೆ, ಸೌದಿ ಅರೇಬಿಯಾ ಮತ್ತು ಯುಎಇಯೊಂದಿಗಿನ ಸಂಬಂಧ ವೃದ್ಧಿಗೊಂಡಿದೆ. ಜಾಗತಿಕ ವೇದಿಕೆಗಳಲ್ಲಿ ಭಾರತದ ದನಿಗೆ ಮನ್ನಣೆ ಸಿಗುತ್ತಿದ್ದು, ಅಂತಾರಾಷ್ಟ್ರೀಯ ವಲಯವು ಪ್ರಮುಖ ವಿಷಯಗಳಲ್ಲಿ ಭಾರತದ ಸಹಭಾಗಿತ್ವವನ್ನು ಬಯಸುತ್ತಿದೆ.
ಭಾರತ ನಾಯಕತ್ವಕ್ಕೆ ಬಹುಪರಾಕ್
ಭಾರತ ಒಂದು ವರ್ಷದ ಕಾಲ (2023 ನವೆಂಬರ್ 30ರವರೆಗೆ) ಜಿ-20 ಅಧ್ಯಕ್ಷತೆ ವಹಿಸಿಕೊಂಡು, ತನ್ನ ನಾಯಕತ್ವ ಶಕ್ತಿಯನ್ನು ಪರಿಚಯಿಸಿತು. ‘ವಸುದೈವ ಕುಟುಂಬಕಂ’, ಘೋಷವಾಕ್ಯದೊಂದಿಗೆ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ದ ಸಂದೇಶವನ್ನು ಮೊಳಗಿಸಿತು. ಸೆಪ್ಟೆಂಬರ್​ನಲ್ಲಿ ದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯು ‘ದೆಹಲಿ ಘೋಷಣೆ’ಯನ್ನು ಹೊರಡಿಸಿ, ಪ್ರಸಕ್ತ ಕಳವಳಗಳಿಗೆ ಉತ್ತರ ಕಂಡುಕೊಳ್ಳಲು ಯತ್ನಿಸಿತು. ಆಫ್ರಿಕಾ ಒಕ್ಕೂಟವನ್ನು (ಎಯು) ಜಿ-20ರ ಖಾಯಂ ಸದಸ್ಯರನ್ನಾಗಿ ಸೇರ್ಪಡೆ ಮಾಡಿದ್ದರಿಂದ, ಆಫ್ರಿಕಾದ 55 ರಾಷ್ಟ್ರಗಳನ್ನು ವೇದಿಕೆಗೆ ಸಂಯೋಜಿಸಲಾಯಿತು. ಭಾರತವು ಎರಡು ಆವೃತ್ತಿಗಳಲ್ಲಿ ಆಯೋಜಿಸಿದ್ದ ‘ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್ ಸಮ್ಮಿಟ್’ ಜಾಗತಿಕ ದಕ್ಷಿಣದ ದನಿಯಾಯಿತು.
ಪೊಲೀಸ್ ಸೋಗು ಹಾಕಿದವ ಖಾಕಿ ಬಲೆಗೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 5 =
Remember me
