ಹಲಾಲ್ ಸರ್ಟಿಫಿಕೇಟ್​ನೊಂದಿಗೆ ಮಾರಾಟ ಮಾಡಲಾಗುವ ಉತ್ಪನ್ನಗಳ ಮೇಲೆ ಉತ್ತರ ಪ್ರದೇಶ ಸರ್ಕಾರ ನವೆಂಬರ್ 18ರಿಂದ ನಿಷೇಧ ಹೇರಿದೆ. ರಾಜ್ಯದಲ್ಲಿ ಉತ್ಪನ್ನಗಳಿಗೆ ಹಲಾಲ್ ಸರ್ಟಿಫಿಕೇಟ್ ನೀಡುತ್ತಿರುವ ಕುರಿತು ಒಂದು ಕಂಪನಿ ಹಾಗೂ ಮೂರು ಸಂಸ್ಥೆಗಳ ವಿರುದ್ಧ ಕೇಸ್ ದಾಖಲಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಉತ್ತರಪ್ರದೇಶ ಸರ್ಕಾರದ ಈ ಆದೇಶದ ಬೆನ್ನಲ್ಲೇ ಉಳಿದ ರಾಜ್ಯಗಳಲ್ಲೂ ಹಲಾಲ್ ಉತ್ಪನ್ನಗಳನ್ನು ನಿಷೇಧಿಸಬೇಕೆಂಬ ಕೂಗು ತೀವ್ರವಾಗುತ್ತಿದೆ.
ಮತ್ತೊಮ್ಮೆ ಹಲಾಲ್ ವಿಷಯ ಮುನ್ನೆಲೆಗೆ ಬಂದಿದೆ. ಉತ್ತರಪ್ರದೇಶ ಸರ್ಕಾರ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ನಿಷೇಧಿಸಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳು ಇದೇ ಹೆಜ್ಜೆ ಅನುಸರಿಸಲಿವೆಯೇ ಎಂಬುದು ಕುತೂಹಲಕರ.
ದೂರಿನಲ್ಲಿ ಏನಿದೆ?:ಒಂದು ನಿರ್ದಿಷ್ಟ ಸಮುದಾಯದಲ್ಲಿ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಉತ್ಪನ್ನಗಳಿಗೆ ಹಲಾಲ್ ಎಂದು ಪ್ರಮಾಣೀಕರಿಸುವ ಕೆಲಸ ಆರಂಭಿಸಲಾಗಿದೆ ಎಂದು ಲಖನೌದ ಹಜರತ್​ಗಂಜ್ ಪೊಲೀಸ್ ಠಾಣೆಯಲ್ಲಿ ನವೆಂಬರ್ 17ರಂದು ದಾಖಲಾದ ದೂರಿನಲ್ಲಿ ಆೂೋಪಿಸಲಾಗಿತ್ತು. ಭಾರತೀಯ ಜನತಾ ಮೋರ್ಚಾ ಎಂಬ ಸಂಘಟನೆಯ ಅಧಿಕಾರಿ ಶೈಲೇಂದ್ರಕುಮಾರ್ ಶರ್ಮಾ ಈ ದೂರು ದಾಖಲಿಸಿದ್ದರು.
ಚೆನ್ನೈನ ಹಲಾಲ್ ಇಂಡಿಯಾ ಪ್ರೖೆವೇಟ್ ಲಿಮಿಟೆಡ್, ನವದೆಹಲಿಯ ಜಾಮಿಯತ್ ಉಲೇಮಾ ಹಿಂದ್ ಹಲಾಲ್ ಟ್ರಸ್ಟ್, ಮುಂಬೈನ ಹಲಾಲ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಮುಂಬೈ ಜಾಮಿಯತ್ ಉಲೇಮಾ ಇವುಗಳ ವಿರುದ್ಧ ಈ ದೂರು ದಾಖಲಾಗಿದೆ. ಕೆಲವು ಗುರುತಿಸಲಾಗದ ಉತ್ಪಾದನಾ ಕಂಪನಿಗಳು ಹಾಗೂ ಅವುಗಳ ಮಾಲೀಕರು, ರಾಷ್ಟ್ರ-ವಿರೋಧಿ ಪಿತೂರಿಯ ಭಾಗವಾಗಿರುವ ಜನರು ಹಾಗೂ ಭಯೋತ್ಪಾದನಾ ಸಂಸ್ಥೆಗಳಿಗೆ ಹಣಕಾಸು ನೆರವು ನೀಡುವ ಜನರನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಲಾಲ್ ಎಂದರೆ…:ಹಲಾಲ್ ಎಂಬುದು ಅರಬ್ಬಿ ಭಾಷೆಯ ಪದ. ಹಲಾಲ್ ಎಂದರೆ ಸ್ವೀಕರಿಸಬಹುದಾದದ್ದು ಎಂದರ್ಥ. ಇದಕ್ಕೆ ವಿರುದ್ಧವಾದದ್ದು ಹರಾಮ್ (ಅಸ್ವೀಕಾರಾರ್ಹ). ಇಸ್ಲಾಂ ಆರಂಭದಿಂದ ಕಳೆದ ಕೆಲವು ದಶಕಗಳವರೆಗೂ ಹಲಾಲ್ ಎಂಬುದು ಮಾಂಸಕ್ಕೇ ಸಂಬಂಧಪಟ್ಟಿದ್ದಾಗಿತ್ತು. ಅಂದರೆ, ಸತ್ತಿರುವ ಪ್ರಾಣಿಯನ್ನು ಕತ್ತರಿಸಿ ತಿನ್ನಲು ಬಳಸುವಂತಿಲ್ಲ ಎಂಬುದು ಅದರ ಅರ್ಥವಾಗಿತ್ತು. ಮಾಂಸಕ್ಕಾಗಿ ಕೋಳಿ, ಕುರಿಗಳನ್ನು ಕತ್ತರಿಸುವ ಮೊದಲು ಅದು ಬದುಕಿದೆಯೇ ಎಂದು ಖಾತ್ರಿಪಡಿಸಿಕೊಳ್ಳಬೇಕು. ಅದನ್ನು ಕೊಲ್ಲುವಾಗ ಬೆನ್ನಹುರಿ ನೇರವಾಗಿದ್ದು ಗಂಟಲನಾಳದ ರಕ್ತನಾಳಗಳನ್ನು ಒಂದೇ ಏಟಿಗೆ ಕತ್ತರಿಸಿಬಿಡಬೇಕು. ಹೀಗೆ ಕತ್ತು ಕತ್ತರಿಸಿಕೊಂಡ ಪ್ರಾಣಿಯ ಜೀವ ಹೋಗಿರುವುದಿಲ್ಲ. ಹೀಗಾಗಿಯೇ ಹೃದಯ ಇನ್ನೂ ಜೋರಾಗಿ ಬಡಿದುಕೊಳ್ಳುತ್ತ ಅಷ್ಟೂ ರಕ್ತವನ್ನು ಹೊರಕಾರುತ್ತದೆ. ಇದರಿಂದ ರಕ್ತ ಪೂರ್ತಿ ಖಾಲಿಯಾದ ಆ ಪ್ರಾಣಿ ತಿನ್ನಲು ಶುದ್ಧವಾಗಿರುತ್ತದೆ ಎನ್ನುತ್ತಾರೆ ಹಲಾಲ್ ಪ್ರತಿಪಾದಕರು.
ಆರ್ಥಿಕತೆಗೆ ಏನು ಸಂಬಂಧ?:ಹಲಾಲ್ ಆರ್ಥಿಕತೆಗೆ ಅಡಿಪಾಯ ಹಾಕಿಕೊಟ್ಟಿದ್ದು ಮಲೇಷ್ಯಾ. ಇಲ್ಲಿ ಆರಂಭಗೊಂಡ ಇಸ್ಲಾಮಿಕ್ ಬ್ಯಾಂಕುಗಳು ಬೆಳವಣಿಗೆ ಕಾಣಲಿಲ್ಲ. ಧಾರ್ವಿುಕ ಕಟ್ಟು-ಕಟ್ಟಳೆಗಳ ಆಧಾರದ ಮೇಲೆ ನಡೆಯುವ ಈ ಬ್ಯಾಂಕುಗಳನ್ನು ಜಗತ್ತು ಒಪ್ಪಿಕೊಳ್ಳಲೂ ಇಲ್ಲ. ಹೀಗಾಗಿಯೇ ಮಲೇಷ್ಯಾ ಉತ್ಪಾದನೆಯಿಂದ ಹಿಡಿದು ಹಣಕಾಸಿನವರೆಗೂ ಎಲ್ಲವನ್ನೂ ಹಲಾಲ್ ಮಾಡಿಬಿಟ್ಟರೆ ಈ ಬ್ಯಾಂಕುಗಳು ಅಭಿವೃದ್ಧಿ ಕಾಣುವುದು ನಿಶ್ಚಿತ ಎಂದು ಆಲೋಚಿಸಿ ‘ಹಲಾಲ್ ಇಂಡಸ್ಟ್ರಿ ಡೆವಲಪ್​ವೆುಂಟ್ ಕಾರ್ಪೆರೇಷನ್’ ಆರಂಭಿಸಿತು.
ಕೌಲಾಲಂಪುರದಲ್ಲಿ ನಡೆದಿದ್ದ ವಿಶ್ವ ಹಲಾಲ್ ಸಮ್ಮೇಳನದಲ್ಲಿ ಜಗತ್ತಿನ ಅನೇಕ ಮುಸ್ಲಿಂ ರಾಷ್ಟ್ರಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ‘ಮುಸಲ್ಮಾನರ ಶಕ್ತಿವೃದ್ಧಿಗೆ ಹಲಾಲ್ ಉಪಯೋಗಿಸಬೇಕು’ ಎಂದು ನಿರ್ಧರಿಸಿದ್ದವು. ಪರಿಣಾಮ, 2000ದಲ್ಲಿ ಶೇಕಡ 6.9ರಷ್ಟಿದ್ದ ಮಲೇಷ್ಯಾ ಇಸ್ಲಾಮಿಕ್ ಬ್ಯಾಂಕುಗಳ ಆಸ್ತಿ ಒಂದೇ ದಶಕದಲ್ಲಿ ಶೇ. 22ಕ್ಕೆ ಏರಿತು.
ಆರಂಭದಲ್ಲಿ ಹಲಾಲ್ ಎಂದರೆ ಮಾಂಸವೆಂದಷ್ಟೇ ಇದ್ದಿದ್ದನ್ನು ಸೌಂದರ್ಯವರ್ಧಕ, ಔಷಧ, ಆಸ್ಪತ್ರೆ, ಅಪಾರ್ಟ್​ವೆುಂಟ್, ಕೊನೆಗೆ ಡೇಟಿಂಗ್ ವೆಬ್​ಸೈಟ್​ಗಳಿಗೂ ವಿಸ್ತರಿಸಿಬಿಟ್ಟರು. ಮುಸಲ್ಮಾನರು ಹಲಾಲ್ ಮುದ್ರೆ ಇರುವಂಥ ವಸ್ತುಗಳನ್ನೇ ಕೇಳಬೇಕೆಂಬ ಅಲಿಖಿತ ನಿಯಮ ಜಾರಿಗೆ ಬಂತು. ಹಲಾಲ್ ಮುಂಚಿನಿಂದ ಇತ್ತಾದರೂ, ಅದು ಅನಿವಾರ್ಯವಾಗಿರಲಿಲ್ಲ. ಮುಸಲ್ಮಾನರು ಅಂಗಡಿಗಳಲ್ಲಿ ಹಲಾಲ್ ಮಾಡಿದ ವಸ್ತುಗಳೇ ಬೇಕೆಂದು ಕೇಳಲಾರಂಭಿಸಿದರು. ಜಗತ್ತಿನಾದ್ಯಂತ ‘ಹಲಾಲ್ ಸರ್ಟಿ ಫಿಕೇಟ್’ ಕೊಡುವ ಇಸ್ಲಾಮಿಕ್ ಸಂಸ್ಥೆಗಳು ಹುಟ್ಟಿಕೊಂಡವು. 2018ರ ವೇಳೆಗೆ ಹಲಾಲ್ ಆರ್ಥಿಕತೆಯ ಒಟ್ಟು ವಹಿವಾಟು 6.4 ಟ್ರಿಲಿಯನ್ ಡಾಲರ್​ಗಳಷ್ಟಾಗಿತ್ತು. 2025ರ ವೇಳೆಗೆ ಸುಮಾರು 10 ಟ್ರಿಲಿಯನ್ ಡಾಲರ್ ಮುಟ್ಟುವ ಗುರಿ ಹಲಾಲ್ ಆರ್ಥಿಕತೆಯದ್ದಾಗಿತ್ತು.
ಬರೀ ಮಾಂಸಕ್ಕಲ್ಲ:ಆಹಾರ ಧಾನ್ಯ, ಸಿಹಿತಿಂಡಿ, ಸೌಂದರ್ಯವರ್ಧಕ, ಸಸ್ಯಾಹಾರ, ಔಷಧ, ಪ್ರವಾಸೋದ್ಯಮ, ರೆಸ್ಟೋರೆಂಟ್ ಸೇರಿ ವಿವಿಧ ಕ್ಷೇತ್ರಗಳಲ್ಲಿ ಹಲಾಲ್ ಕಾಲಿಟ್ಟಿದೆ.
ಸರ್ಕಾರದ ಅಧಿಸೂಚನೆ:ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಸಂಸ್ಥೆಗಳು ಉತ್ಪಾದಿಸಿದ ಮಾಂಸ ಮತ್ತು ಅದರ ಉತ್ಪನ್ನಗಳಿಗೆ ಮಾತ್ರ ‘ಹಲಾಲ್ ಪ್ರಮಾಣೀಕೃತ’ ಎಂಬ ಪ್ರಮಾಣಪತ್ರ ನೀಡಿ ರಫ್ತು ಮಾಡಲು ಅನುಮತಿ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಕುರಿತು 2023ರ ಏಪ್ರಿಲ್​ನಲ್ಲಿ ಅಧಿಸೂಚನೆ ಹೊರಡಿಸಿರುವ ಸರ್ಕಾರ, ಹಲಾಲ್ ಪ್ರಮಾಣಿತವಲ್ಲದ ಮಾಂಸ ಮತ್ತು ಮಾಂಸ ಉತ್ಪನ್ನಗಳ ರಫ್ತು ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದೆ.
ಹಿಂದೂಪರ ಸಂಘಟನೆಗಳ ಪ್ರತಿಭಟನೆ:ದೇಶದಲ್ಲಿ ಆಹಾರ ಪದಾರ್ಥಗಳಿಗೆ ಧರ್ಮದ ಆಧಾರದಲ್ಲಿ ಹಲಾಲ್ ಪ್ರಮಾಣಪತ್ರ ವಿತರಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಹಿಂದೂಪರ ಸಂಘಟನೆಗಳು ಕಳೆದ ಎರಡು ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆಗ್ರಹಿಸುತ್ತ ಬಂದಿವೆ.
ವಿರೋಧ ಏಕೆ?:ಭಾರತದಲ್ಲಿನ ಎಲ್ಲ ವ್ಯವಹಾರಗಳನ್ನು ಜಾತ್ಯತೀತ ಸಂವಿಧಾನದಡಿ ಮಾಡಲಾಗುತ್ತಿದೆ. ಇದರ ಆಧಾರದಲ್ಲಿಯೇ ಇಸ್ಲಾಮಿ ಶರೀಯತ್ ನಿಯಮಕ್ಕೆ ಅನುಸಾರ ನಡೆಸಲಾಗುವ ಇಸ್ಲಾಮಿಕ್ ಬ್ಯಾಂಕ್​ಗಳನ್ನು ಭಾರತದಲ್ಲಿ ಆರಂಭಿಸಲು ನಿರಾಕರಿಸಲಾಯಿತು. ಆದರೆ, ಅದೇ ಉದ್ದೇಶವನ್ನು ಇಂದು ಹಲಾಲ್ ಆರ್ಥಿಕ ವ್ಯವಸ್ಥೆಯ ಮೂಲಕ ಸಾಧ್ಯಗೊಳಿಸಲಾಗುತ್ತಿದೆ. ಹಲಾಲ್ ಪ್ರಮಾಣಪತ್ರವನ್ನು ಕೊಟ್ಟು ಹಣ ಸಂಗ್ರಹಿಸುವ ಎಲ್ಲ ಸಂಸ್ಥೆಗಳ ವಿಚಾರಣೆ ನಡೆಸಬೇಕು ಎಂಬುದು ಹಿಂದೂ ಜನಜಾಗೃತಿ ಸಮಿತಿಯ ಆಗ್ರಹ. ಭಾರತೀಯ ದಂಡ ಸಂಹಿತೆ ಕಲಂ 153-ಬಿ ಅನುಸಾರ ನಾಗರಿಕರಿಗೆ ಅವರ ಮೂಲಭೂತ ಹಕ್ಕುಗಳಿಂದ ವಂಚಿತರನ್ನಾಗಿಸಲು ಕರೆ ನೀಡುವುದು ಅಪರಾಧ. ಸರ್ಕಾರವು ಇದರಲ್ಲಿ ಹಸ್ತಕ್ಷೇಪ ಮಾಡಿ ಕಾರ್ಯಾಚರಣೆ ಮಾಡುವುದು ಆವಶ್ಯಕವಾಗಿದೆ. ಜತೆಗೆ ಇಸ್ಲಾಂ ಆಧಾರಿತ ಹಲಾಲ್ ವ್ಯವಸ್ಥೆಯನ್ನು ಇಸ್ಲಾಮೇತರ ಸಮಾಜದ ಮೇಲೆ ಹೇರುವುದು ಅವರ ಸಾಂವಿಧಾನಿಕ ಧಾರ್ವಿುಕ ಹಕ್ಕುಗಳ ವಿರುದ್ಧವಾಗಿದೆ. ಆದ್ದರಿಂದ ಧಾರ್ವಿುಕ ಭೇದಭಾವ ಮಾಡುವ ಹಲಾಲ್ ಪ್ರಮಾಣಪತ್ರ ವಿತರಿಸುವುದಕ್ಕೆ ಭಾರತದಲ್ಲಿ ನಿಷೇಧ ಹೇರಬೇಕು ಎಂಬುದು ಸಮಿತಿಯ ಅಭಿಪ್ರಾಯ.
ವಿಶಾಲವಾಗಿ ಬೆಳೆದ ಉದ್ಯಮ:ಹಲಾಲ್ ಸರ್ಟಿಫಿಕೇಟ್ ನೀಡುವ ನೆಪದಲ್ಲಿ ಮಾಂಸ ಕಡಿಯುವ ಪ್ರತಿ ಹಂತದಲ್ಲೂ ಅದು ಕೋಳಿಯನ್ನು ಸಾಗಿಸುವುದರಿಂದ ಹಿಡಿದು, ಅದರ ಮಾಂಸವನ್ನು ಪ್ಯಾಕೆಟುಗಳಲ್ಲಿ ತುಂಬುವವರೆಗೆ ಮುಸಲ್ಮಾನನೇ ಇರುವಂತೆ ನೋಡಿಕೊಳ್ಳಲಾಯ್ತು. ಹೀಗೆ ಇಂಗ್ಲೆಂಡಿನಲ್ಲಿರುವ ಐದಾರು ಪ್ರತಿಶತ ಮುಸಲ್ಮಾನರು ಅಲ್ಲಿ ಕಡಿಯುವ 51 ಪ್ರತಿಶತ ಮೇಕೆಗಳನ್ನು ಹಲಾಲ್ ಮೂಲಕವೇ ತುಂಡಾಗುವಂತೆ ನೋಡಿಕೊಂಡಿದ್ದಾರೆ.
ಥಾಮ್ಸನ್ ರಾಯ್ಟರ್ಸ್ ಮತ್ತು ದಿನಾರ್ ಸ್ಟಾಂಡರ್ಡ್ 2018ರಲ್ಲಿ ಪ್ರಸ್ತುತಪಡಿಸಿದ ವರದಿಯೊಂದರ ಪ್ರಕಾರ, ಜಗತ್ತಿನ ಮಾಂಸ ಉದ್ದಿಮೆಯಲ್ಲಿ ಹಲಾಲ್​ನ ವಹಿವಾಟು ಸುಮಾರು ಒಂದೂವರೆ ಟ್ರಿಲಿಯನ್ ಡಾಲರ್​ಗಳಷ್ಟಾದರೆ ಬಟ್ಟೆಗಳದ್ದು 270 ಬಿಲಿಯನ್ ಡಾಲರ್. ಬಟ್ಟೆಗಳಲ್ಲಿ ಹಲಾಲ್ ಯಾವುದು ಎಂದರೆ, ಅಂಗಾಂಗಗಳು ಕಡಿಮೆ ಕಾಣುವ ಬಟ್ಟೆಗಳು ಹಲಾಲ್ ಎಂದು ಕರೆಯುತ್ತಾರೆ.
ಹಲಾಲ್ ಟ್ರಾವೆಲ್ ಒಂದು ವರ್ಷದಲ್ಲಿ ಸುಮಾರು 200 ಬಿಲಿಯನ್ ಡಾಲರ್​ಗಳಷ್ಟು ವಹಿವಾಟು ನಡೆಸಿದೆ. ಹಲಾಲ್ ಔಷಧ ಜಗತ್ತಿನಾದ್ಯಂತ 87 ಬಿಲಿಯನ್ ಡಾಲರ್​ಗಳಷ್ಟು ವಹಿವಾಟು ಕಂಡಿದ್ದರೆ ಸೌಂದರ್ಯವರ್ಧಕಗಳಲ್ಲಿ 61 ಬಿಲಿಯನ್ ಡಾಲರ್​ಗಳನ್ನು ದಾಟಿತ್ತು. ಈ ವಸ್ತುಗಳ ಮಾರುಕಟ್ಟೆಗಾಗಿ ಬಳಸುವ ಮಾಧ್ಯಮಗಳ ಒಟ್ಟಾರೆ ಆದಾಯ 209 ಬಿಲಿಯನ್ ಡಾಲರ್​ಗಳನ್ನು ದಾಟಿತ್ತು. ಅನೇಕ ಸಾಧುಗಳು ನಡೆಸುವ ಆಸ್ಪತ್ರೆಗಳಿಗೂ ಇಂದು ಅನಿವಾರ್ಯವಾಗಿ ಹಲಾಲ್ ಸರ್ಟಿಫಿಕೇಟ್ ಪಡೆಯಬೇಕಾಗಿದೆ.
ಅಮೆರಿಕದ ಷಿಕಾಗೊದಲ್ಲಿ ‘ಐ ಲವ್ ಹಲಾಲ್’ ಎಂಬ ಉತ್ಸವ ನಡೆದಿದ್ದಾಗ ಅರ್ತಿಜಾರಾ ಎಂಬ ಹಲಾಲ್ ಬಟ್ಟೆ ಅಂಗಡಿಯ ಜನಕ ಸಾರಾ ಅನ್ಸಾರಿ ಭಾಗವಹಿಸಿ, ‘ಮುಸಲ್ಮಾನರು ಹೆಚ್ಚು-ಹೆಚ್ಚು ಆರ್ಥಿಕ ಸದೃಢತೆಯತ್ತ ವಾಲುತ್ತಿದ್ದಾರೆ’ ಎಂದು ಹೇಳಿದ್ದರು.
ಗಮನಿಸಲೇಬೇಕಾದ ಮತ್ತೊಂದು ಸಂಗತಿ ಇದೆ. ಮುಸಲ್ಮಾನ್ ರಾಷ್ಟ್ರಗಳಿಗೆ ಇಂಧನದ ಮೂಲಗಳು ಖಾಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕ ಶಕ್ತಿ ಕುಸಿಯುವ ಆತಂಕ ಕಾಡುತ್ತಿದೆ. ದುಬೈ ತನ್ನನ್ನು ತಾನು ಹಲಾಲ್ ಪತ್ರ ಕೊಡುವಲ್ಲಿ ಅಧಿಕೃತ ಎಂದು ಹೇಳಿಕೊಳ್ಳುವ ಮೂಲಕ ಜಗತ್ತಿನ ಎಲ್ಲ ರಾಷ್ಟ್ರಗಳೂ ತಮಗೆ ಸದ್ದಿಲ್ಲದೆ ಕಪ್ಪ ಒಪ್ಪಿಸುವ ಯೋಜನೆ ರೂಪಿಸಿಕೊಂಡಿದೆ. ಮೊಘಲರ ಕಾಲದಲ್ಲಿ ಝೆಜಿಯಾ ತಲೆಗಂದಾಯ ಹೀಗೇ ಇತ್ತು. ಭಾರತದಲ್ಲಂತೂ ಜಮಾತ್-ಉಲೇಮಾ-ಇ-ಹಿಂದ್​ನಂತಹ ಸಂಸ್ಥೆಗಳು ಹಲಾಲ್ ನೋಂದಣಿಗೆ 20 ಸಾವಿರ ರೂ. ಮತ್ತು ಪ್ರತಿಯೊಂದು ವಸ್ತುವಿಗೂ ಪ್ರಮಾಣಪತ್ರ ನೀಡಲು 500 ರೂ. ಪಡೆದುಕೊಳ್ಳುತ್ತವೆ.
ಮದುವೆ ಒಮ್ಮೆ ಮಾತ್ರ.. ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿ ಆಗಬೇಕು: ವಿಶಿಷ್ಟ ರೀತಿಯಲ್ಲಿ ಅಭಿಮಾನ ಮೆರೆದ ವರ

ವಿಶ್ವಕಪ್ ಸೋಲು: ಬದಲಾಗಲಿದ್ಯಾ ಭಾರತ ಕ್ರಿಕೆಟ್ ತಂಡದ ನಾಯಕತ್ವ?; ಮುಂದೆ ಮಹತ್ವ ಯಾರಿಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + sixteen =
Remember me
