ದೆಹಲಿ ವಿಧಾನಸಭಾಚುನಾವಣೆಗೆ 15 ದಿನ ಮುನ್ನ ಉಡುಪಿಯ ಸ್ನೇಹಿತರೊಬ್ಬರು ಫೋನ್ ಮಾಡಿದ್ದರು. ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ವಿರೋಧಿಸಿ ರಾಜಧಾನಿಯ ಶಹೀನ್​ಬಾಗ್​ನ ಪ್ರತಿಭಟನೆಗಳ ಬಗ್ಗೆ ರಾಷ್ಟ್ರೀಯ ಮಾಧ್ಯಮದ ವರದಿಗಳನ್ನು ನೋಡಿ ‘ದೆಹಲಿಯಲ್ಲಿಬಿಜೆಪಿ ಗೆಲ್ಲಬಹುದು ಅನಿಸುತ್ತದೆ ಅಲ್ಲವೇ’ ಎಂದು ಪ್ರಶ್ನಿಸಿದ್ದರು. ‘ಸಿಎಎ ರಾಷ್ಟ್ರೀಯ ವಿಚಾರ. ಮಹಾನಗರಕ್ಕೆ ಸೀಮಿತವಾದ ವಿಧಾನಸಭೆ ಚುನಾವಣೆಯಲ್ಲಿ ಇದು ಬಿಜೆಪಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಅನುಮಾನಗಳಿವೆ’ ಎನ್ನುವುದು ನನ್ನ ಪ್ರತಿಕ್ರಿಯೆಯಾಗಿತ್ತು. ಬಿಜೆಪಿ ಪರ ಧೋರಣೆಯ ವ್ಯಕ್ತಿಯಾಗಿದ್ದ ಅವರು ಸಿಎಎ ವಿರೋಧಿಗಳ ಬಾಯಿ ಮುಚ್ಚಿಸಲು ದೆಹಲಿಯಲ್ಲಿ ಬಿಜೆಪಿ ಗೆಲ್ಲಬೇಕೆಂದು ಬಯಸಿದ್ದರು. ಆದರೆ, ದೆಹಲಿ ಮತದಾರನ ತೀರ್ಮಾನ ಬೇರೆಯದೇ ಆಗಿತ್ತು. ಬಿಜೆಪಿಯ ರಾಷ್ಟ್ರೀಯ ವಿಚಾರಗಳಿಗೆ ಲೋಕಸಭೆ ಚುನಾವಣೆಯಲ್ಲಿ ಬೆಂಬಲ ಕೊಟ್ಟ ಮಂದಿ ಸ್ಥಳೀಯ ಆಡಳಿತಕ್ಕೆ ಆಪ್ ಸರ್ಕಾರವೇ ಸೂಕ್ತ ಎಂಬ ತೀರ್ಪು ನೀಡಿದರು. ಕೇಸರಿಪಡೆಯ ರಾಷ್ಟ್ರವಾದ, ಹಿಂದೂಪರ ಧೋರಣೆ ಮತ್ತು ಧ್ರುವೀಕರಣ ತಂತ್ರಗಾರಿಕೆಗಳನ್ನು ಸಮರ್ಥವಾಗಿ ಎದುರಿಸಿ, ಜನರ ಮನಸ್ಸನ್ನು ತಮ್ಮೊಂದಿಗೆ ಹಿಡಿದಿಟ್ಟುಕೊಳ್ಳುವಲ್ಲಿ ಕೇಜ್ರಿವಾಲ್ ಮತ್ತವರ ತಂಡ ಯಶಸ್ವಿಯಾಗಿರುವುದು ಕಾಂಗ್ರೆಸ್ ಸೇರಿ ಎಲ್ಲ ಪಕ್ಷಗಳಿಗೂ ಪಾಠ.
ಸಿಎಎ ವಿರೋಧಿ ಹೋರಾಟದ ಹಿಂದೆ ಮೋದಿ ವಿರೋಧಿಸುವ ಕಾಣದ ಕೈಗಳು ಕೆಲಸ ಮಾಡಿರುವುದು ಗುಟ್ಟಿನ ವಿಷಯವೇನಲ್ಲ. ಹಾಗೆಂದು ಸಿಎಎ ಸ್ಥಳೀಯ ವಿಷಯವೇನಲ್ಲ. ಹತ್ತಾರು ಲೋಕಲ್ ಸಮಸ್ಯೆಗಳಿಂದ ಬಳಲುತ್ತಿರುವ ದೆಹಲಿಯಲ್ಲಿ, ಮುಖ್ಯವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಪರಿವರ್ತನೆ ತರುತ್ತಿರುವ ವ್ಯಕ್ತಿಯನ್ನು ಸಿಎಎ ವಿರೋಧಿ ಹೋರಾಟ ಅಥವಾ ಹಿಂದೂ-ಮುಸ್ಲಿಂ ಕಾರಣಕ್ಕಾಗಿ ಜನ ತಿರಸ್ಕರಿಸುವ ಸಾಹಸಕ್ಕೆ ಕೈ ಹಾಕಲಿಲ್ಲ ಅಷ್ಟೇ.
ರಾಜೇಂದ್ರ ನಗರ ವಿಧಾನಸಭೆ ವ್ಯಾಪ್ತಿಯ ಇಂದರ್​ಪುರಿ ನಿವಾಸಿ ರಾಕೇಶ್ ಪ್ರಭಾಕರ್ ಮೋದಿ ಬೆಂಬಲಿಗರು. ಆದರೆ, 2015 ಮತ್ತು 2020ರ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಿದ್ದಾರೆ. ಕಳೆದ 45 ವರ್ಷಗಳಿಂದ ರಾಜಧಾನಿ ರಾಜಕೀಯ ನೋಡಿರುವ ರಾಕೇಶ್, ‘ಇದುವರೆಗಿನ ದೆಹಲಿ ಚುನಾವಣೆಗಳಲ್ಲಿ ಕೋಮು-ಧ್ರುವೀಕರಣದ ಚರ್ಚೆಗಳನ್ನು ಕೇಳಿರಲಿಲ್ಲ. ಶಹೀನ್​ಬಾಗ್ ಹೋರಾಟ ಏನೇ ಇರಬಹುದು. ಗೋಲಿ ಮಾರೋ ಸಾಲೋ ಕೋ, ಪ್ರತಿಭಟನಾಕಾರರು ರೇಪಿಸ್ಟ್​ಗಳು ಎಂದೆಲ್ಲ ಮಾತನಾಡುವುದನ್ನು ದೆಹಲಿ ಮಂದಿ ಒಪ್ಪುವುದಿಲ್ಲ. ಇಷ್ಟೆಲ್ಲ ಚುನಾವಣೆ ಗೆದ್ದ ಮೋದಿ-ಅಮಿತ್ ಷಾಗೆ ಈ ವಿಷಯವೇಕೆ ತಿಳಿಯಲಿಲ್ಲ’ ಎನ್ನುವುದು ಅವರ ಪ್ರಶ್ನೆ. ದೆಹಲಿ ಸಣ್ಣ ಭಾರತವಿದ್ದಂತೆ. ಸರ್ವಧರ್ವಿುಯರಿಗೆ ನೆಲೆ ಒದಗಿಸಿದ ನಗರವಿದು. ಒಬ್ಬರಿಗೊಬ್ಬರು ಪರಸ್ಪರ ಅವಲಂಬಿತರಾಗಿಯೇ ಜನರು ಇಲ್ಲಿ ಬದುಕುತ್ತಿದ್ದಾರೆ. ಒಡೆಯುವುದಕ್ಕಿಂತ ಹೆಚ್ಚು ಜೋಡಿಸುವ ಮಾತುಗಳೇ ಜನರಿಗೆ ಪಥ್ಯವೆನಿಸುತ್ತದೆ. ಬಿಜೆಪಿ ವರಿಷ್ಠರಿಂದ ಹಿಡಿದು ಮರಿ ಪುಢಾರಿಗಳಿಗೆ ಇದು ಅರ್ಥವಾಗಲಿಲ್ಲವೋ ಅಥವಾ ಆಪ್ ಸರ್ಕಾರದ ವಿರುದ್ಧ ದನಿಯೆತ್ತಲು ಪ್ರಬಲ ವಿಷಯಗಳೇ ಇಲ್ಲ ಎಂಬ ಸ್ಥಿತಿ ನಿರ್ವಣವಾಗಿದ್ದರಿಂದ ಧ್ರುವೀಕರಣ ತಂತ್ರ ಅನುಸರಿಸುವುದು ಅನಿವಾರ್ಯವಾಯಿತೋ ಏನೋ. ಆದರೆ, ಮತದಾರ ಮಾತ್ರ ತನ್ನ ಆಯ್ಕೆಯನ್ನು ಮೊದಲೇ ನಿಶ್ಚಯಿಸಿದ್ದ.
ನೀರು ಮತ್ತು ವಿದ್ಯುತ್​ಗೆ ಸಂಬಂಧಿಸಿದಂತೆ 2015ರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಕೇಜ್ರಿವಾಲ್ ಈಡೇರಿಸಿದ್ದಾರೆ. ತಿಂಗಳಿಗೆ 200 ವಿದ್ಯುತ್ ಯೂನಿಟ್​ಗಿಂತ ಕಡಿಮೆ ಬಳಕೆ ಮಾಡಿದ ಗ್ರಾಹಕರಿಗೆ ಶೂನ್ಯ ಬಿಲ್​ನ ಉಡುಗೊರೆ ಸಿಗುತ್ತಿದೆೆ. ಒಂದುವೇಳೆ ಗ್ರಾಹಕ 200ಕ್ಕಿಂತ 1 ಯೂನಿಟ್ ಹೆಚ್ಚು ಬಳಕೆ ಮಾಡಿದರೂ ಪೂರ್ತಿ 201 ಯೂನಿಟ್​ನ ವೆಚ್ಚ ಭರಿಸಬೇಕಾಗುತ್ತದೆ. ಸಿರಿವಂತರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದಿದ್ದರೂ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಅದೆಷ್ಟೋ ಮಂದಿ 200 ಯೂನಿಟ್​ಗಿಂತ ಕಡಿಮೆ ವಿದ್ಯುತ್ ಬಳಸಿ ಯೋಜನೆಯ ಲಾಭ ಪಡೆದಿದ್ದಾರೆ. ಅದೇ ರೀತಿಯಾಗಿ, ತಿಂಗಳಿಗೆ 20 ಸಾವಿರ ಲೀಟರ್ ನೀರನ್ನು ಮನೆಯೊಂದಕ್ಕೆ ಉಚಿತವಾಗಿ ನೀಡಲಾಗುತ್ತಿದೆ. 20 ಸಾವಿರ ಲೀಟರ್ ದಾಟಿದಲ್ಲಿ ಆ 20 ಸಾವಿರ ಸೇರಿ ಒಟ್ಟು ಬಳಕೆಯಾದ ನೀರಿನ ಪ್ರಮಾಣದ ಮೇಲೆ ಬಿಲ್ ಸಿದ್ಧಪಡಿಸಲಾಗುತ್ತದೆ. ಇದರಿಂದ ನೀರು ಮತ್ತು ವಿದ್ಯುತ್​ನ ಅನಿಯಮಿತ ಬಳಕೆಗೆ ಕಡಿವಾಣ ಹಾಕುವ ಜತೆಗೆ ‘ಶ್ರೀಸಾಮಾನ್ಯನ ಜತೆಗೆ ನಾವಿದ್ದೇವೆ’ ಎಂಬುದನ್ನು ದೃಢಪಡಿಸಲೂ ಕೇಜ್ರಿವಾಲ್​ಗೆ ಸಾಧ್ಯವಾಯಿತು.
ಸರ್ಕಾರಿ ಶಾಲೆಗಳ ಉನ್ನತೀಕರಣ ಮತ್ತು ಆರೋಗ್ಯ ಕೇಂದ್ರಗಳ ಸುಧಾರಣೆಯೂ ಮಧ್ಯಮ, ಕೆಳ ಮಧ್ಯಮ ಮತ್ತು ಬಡ ವರ್ಗದವರ ಮೆಚ್ಚುಗೆ ಗಳಿಸಿದೆ. ಕಳೆದ ನಾಲ್ಕೈದು ದಶಕಗಳಿಂದ ಸರ್ಕಾರದ ನಿರ್ಲಕ್ಷ್ಯಂದಲೇ ಕಂಗೆಟ್ಟಿದ್ದ ಸರ್ಕಾರಿ ಶಾಲೆಗಳೀಗ ಉತ್ತಮ ಮೂಲಸೌಕರ್ಯ, ಶಿಸ್ತಿನ ಶಿಕ್ಷಕರು, ರೆಗ್ಯುಲರ್ ಪೇರೆಂಟ್-ಟೀಚರ್ ಮೀಟಿಂಗ್, ಯೋಗಾಭ್ಯಾಸ ಕಾರ್ಯಕ್ರಮ ಸೇರಿ ಹತ್ತಾರು ಸುಧಾರಣಾ ಕ್ರಮಗಳಿಂದಾಗಿ ನಳನಳಿಸುತ್ತಿವೆ. ಖಾಸಗಿ ಶಾಲೆಗಳಿಗೇನೂ ಕಡಿಮೆಯಿಲ್ಲ ಎಂಬಂತೆ ಸರ್ಕಾರಿ ಶಾಲೆಗಳನ್ನು ಸಜ್ಜುಗೊಳಿಸಲಾಗಿದೆ. ಕೆಲ ತಿಂಗಳುಗಳ ಹಿಂದೆ ಪರೀಕ್ಷೆಯಲ್ಲಿ ರ್ಯಾಂಕ್ ತೆಗೆದ ಸರ್ಕಾರಿ ಮಕ್ಕಳೊಂದಿಗೆ ನೇರವಾಗಿ ಕೇಜ್ರಿವಾಲ್ ಸಂವಾದ ನಡೆಸಿ ಮನೆ ಮಾತಾಗಿಬಿಟ್ಟಿದ್ದರು. ಉತ್ತಮ ಮೂಲಸೌಕರ್ಯ, ಶಿಕ್ಷಣ ವ್ಯವಸ್ಥೆ ಹೊಂದಿರುವ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸಲಾಗುವುದಿಲ್ಲ ಎಂಬ ಬಡ ಹೆತ್ತವರ ನೋವಿನ ಮಧ್ಯೆ ಶಾಲೆಗಳನ್ನು ಸುಧಾರಿಸುವ ಪಥದಲ್ಲಿ ಮುನ್ನುಗ್ಗಿರುವ ಕೇಜ್ರಿವಾಲ್ ಸಹಜವಾಗಿಯೇ ಅವರಿಗೆ ಭರವಸೆಯ ಕಿರಣವಾಗಿ ಕಂಡಿದ್ದಾರೆ. ಬಡ, ಹಿಂದುಳಿದ ಮಕ್ಕಳಿಗೆ ಉಚಿತ ಕೋಚಿಂಗ್ ವ್ಯವಸ್ಥೆ, ದೆಹಲಿಯ ಬ್ರಿಟಿಷ್ ಕೌನ್ಸಿಲ್ ಜತೆ ಜಂಟಿಯಾಗಿ ಸ್ಪೋಕನ್ ಇಂಗ್ಲಿಷ್ ತರಗತಿಗಳು ಸೇರಿ ಹಲವಾರು ಕಾರ್ಯಕ್ರಮಗಳು ಸಾರ್ವಜನಿಕರ ಗಮನಸೆಳೆದಿವೆ. ಲಕ್ಷಗಟ್ಟಲೇ ದುಡ್ಡು ಕೀಳುವ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳಿಸುವ ಉಳ್ಳವರು ಈ ಬಗ್ಗೆ ತಲೆ ಕೆಡಿಸಿಕೊಳ್ಳದಿದ್ದರೂ, ತನ್ನ ಯೋಜನೆಗಳ ಮೂಲಕ ‘ಆಮ್ ಆದ್ಮಿ’ ಹೆಸರಿನ ಪಕ್ಷ ಯಾರನ್ನು ತಲುಪಬೇಕಿತ್ತೋ ಅವರನ್ನು ತಲುಪುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ.
ರಾಜ್ಯ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ದೆಹಲಿಗೆ ಬಂದಿದ್ದ ಸಿಎಂ ಯಡಿಯೂರಪ್ಪನವರು ‘ಚುನಾವಣೆಯಲ್ಲಿ ಯಾರು ಗೆಲ್ತಾರಪ್ಪ’ ಎಂದು ಪತ್ರಕರ್ತರಲ್ಲಿ ಕೇಳಿದ್ದರು. ಆಮ್ ಆದ್ಮಿ ಗೆಲ್ಲುವುದು ಬಹುತೇಕ ಖಚಿತ ಸರ್ ಎಂದಿದ್ದಕ್ಕೆ, ‘ಈ ಪರಿಯಲ್ಲಿ ಎಲ್ಲವನ್ನೂ ಉಚಿತವಾಗಿ ನೀಡಿ ನಂತರ ಬೊಕ್ಕಸ ಬರಿದಾದರೆ ಏನು ಮಾಡುವುದು’ ಎನ್ನುವುದು ಅವರ ಪ್ರಶ್ನೆಯಾಗಿತ್ತು. ಉಚಿತ ಯೋಜನೆಗಳ ಬಗ್ಗೆ ಯಡಿಯೂರಪ್ಪ ಅಥವಾ ರಾಜಕೀಯ ಪಕ್ಷಗಳಿಗೆ ತಮ್ಮದೇ ಆದ ನಿಲುವುಗಳಿರಬಹುದು. ಆದರೆ, ದೆಹಲಿಯ ಸರ್ಕಾರಿ ಶಾಲೆಗಳ ಉನ್ನತೀಕರಣ ಮತ್ತು ಆರೋಗ್ಯ ಕೇಂದ್ರಗಳ ಸುಧಾರಣೆ ಕರ್ನಾಟಕ ಸೇರಿ ಇತರೆ ರಾಜ್ಯಗಳಿಗೂ ಮಾದರಿಯಾಗಬಲ್ಲವು. ಈ ನಿಟ್ಟಿನಲ್ಲಿ, ರಾಜ್ಯದ ಅಧಿಕಾರಿಗಳು ದೆಹಲಿಯ ಅಧಿಕಾರಿಗಳೊಂದಿಗೆ ಚರ್ಚೆ, ಸಂವಾದ ನಡೆಸುವ ಯತ್ನ ಮಾಡಬಹುದು.
ದೆಹಲಿಯಂಥ ಮಹಾನಗರದಲ್ಲಿ ಖಾಸಗಿ ಕ್ಲಿನಿಕ್, ಆಸ್ಪತ್ರೆಗಳಲ್ಲಿ ರೋಗಿಗಳ ಜತೆ 2 ನಿಮಿಷ ಮಾತನಾಡಿದರೂ -ಠಿ; 500-700-1000ದಷ್ಟು ಕನ್ಸಲ್ಟೇಷನ್ ಫೀಸ್ ತೆಗೆದುಕೊಳ್ಳುವ ವೈದ್ಯರ ಮಧ್ಯೆ ಬದುಕುವುದು ಹೇಗಪ್ಪಾ ಎಂದು ತಲೆ ಮೇಲೆ ಕೈ ಹಿಡಿದು ಕುಳಿತಿದ್ದ ಮಂದಿ ಈಗ ಸರ್ಕಾರಿ ಆಸ್ಪತ್ರೆಗಳ ಕಡೆ ಮುಖ ಮಾಡುತ್ತಿದ್ದಾರೆ. ಕೊಳೆಗೇರಿಗಳು, ಜುಗ್ಗಿ ಜೋಪಡಿಗಳು ಹೆಚ್ಚಿರುವ ಕಡೆ ಮೊಹಲ್ಲ ಕ್ಲಿನಿಕ್​ಗಳು ತಲೆ ಎತ್ತಿದ್ದು, ಅತಿ ಕಡಿಮೆ ದರದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸಣ್ಣ ವೈದ್ಯಕೀಯ ಪರೀಕ್ಷೆಯಿಂದ ಹಿಡಿದು ದೊಡ್ಡ ಪ್ರಮಾಣದ ಆರೋಗ್ಯ ಪರೀಕ್ಷೆ, ಚಿಕಿತ್ಸೆ ಒಗದಿಸುವ ಮಟ್ಟಿಗೆ ಅವುಗಳನ್ನು ಸಜ್ಜುಗೊಳಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳೆಂದರೇ ಮೂದಲಿಸುತ್ತಿದ್ದ ಮಂದಿ ನಿಧಾನವಾಗಿ ಪರಿವರ್ತನೆಗೆ ಸಾಕ್ಷಿಯಾಗುತ್ತಿದ್ದಾರೆ. ಹೀಗಿರುವಾಗ, ಕೇಜ್ರಿವಾಲ್​ರನ್ನು ವಿರೋಧಿಸಲು ಬಹುಪಾಲು ಮತದಾರರಲ್ಲಿ ಕಾರಣಗಳೇ ಇರಲಿಲ್ಲ. 2019ರ ಲೋಕಸಭೆಯಲ್ಲಿ ಮೋದಿಗೆ ಮತ ಹಾಕಿದ್ದ ಮಂದಿ ರಾಷ್ಟ್ರಕ್ಕೆ ಮೋದಿ, ದೆಹಲಿಗೆ ಕೇಜ್ರಿವಾಲ್ ಎಂದು ನಿರ್ಧರಿಸಿದ್ದರು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 105 ಸೀಟು ಗೆದ್ದ ಬಳಿಕ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ದೆಹಲಿಯಲ್ಲಿ ಕನ್ನಡದ ಪತ್ರಕರ್ತರೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತ, ‘ಸಿದ್ದರಾಮಯ್ಯರನ್ನು ಕೆಣಕುವುದು ಮತ್ತು ಪ್ರಚೋದಿಸುವುದು ಕೂಡ ತಮ್ಮ ತಂತ್ರಗಾರಿಕೆಯಾಗಿತ್ತು. ನಮ್ಮ ಟ್ರ್ಯಾಪ್​ನಲ್ಲಿ ಅವರು ಸರಿಯಾಗೇ ಸಿಕ್ಕಿಹಾಕಿಕೊಂಡರು’ ಎಂದು ನಕ್ಕಿದ್ದರು. ದೆಹಲಿ ಚುನಾವಣೆಯಲ್ಲೂ ಬಿಜೆಪಿ ಈ ತಂತ್ರಗಾರಿಕೆ ಅನುಸರಿಸಿತ್ತು. ಆದರೆ, ಇಡೀ ಚುನಾವಣೆಯಲ್ಲಿ ಕೇಜ್ರಿವಾಲ್ ಬಿಜೆಪಿಯ ಪ್ರಚೋದನಾಕಾರಿ ಮಾತುಗಳಿಗೆ ಉತ್ತರಿಸುವ ಗೋಜಿಗೇ ಹೋಗಲಿಲ್ಲ. ಕೇಸರಿ ನಾಯಕರ ಜೈ ಶ್ರೀರಾಮ್ ಮಂತ್ರಕ್ಕೆ ಪ್ರತಿಯಾಗಿ, ‘ಜೈ ಹನುಮಾನ್, ವಂದೇ ಮಾತರಂ, ಭಾರತ್ ಮಾತಾ ಕೀ ಜೈ’ ಘೊಷವಾಕ್ಯಗಳೊಂದಿಗೆ ಆಮ್ ಆದ್ಮಿ ನಾಯಕರು ಮೊದಲೇ ಸಿದ್ಧಗೊಂಡಿದ್ದರು.
ರಾಷ್ಟ್ರವಾದ ತಪ್ಪಲ್ಲ. ಆದರೆ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ವಿಚಾರ ಪ್ರಸ್ತುತವಲ್ಲ. ಸ್ಥಳೀಯವಾದ, ಅಭಿವೃದ್ಧಿ ಕುರಿತ ದೃಢಸಂಕಲ್ಪ ಹಾಗೂ ಸಾಧನೆಯ ಬಲ ರಾಜ್ಯ ಚುನಾವಣೆಯಲ್ಲಿ ಹೇಗೆ ಸಹಕಾರಿಯಾದೀತು ಎಂಬುದಕ್ಕೆ ದೆಹಲಿ ಫಲಿತಾಂಶ ತಾಜಾ ನಿದರ್ಶನ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
