ಮದುವೆ ಎಂದರೆಜೀವನದ ಸಂಭ್ರಮದ ಕ್ಷಣ. ಹಾಗಾಗಿಯೇ, ನಮ್ಮಲ್ಲಿ ಅದ್ದೂರಿ ವಿವಾಹಗಳಿಗೆ ಕೊರತೆಯಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸೆಲೆಬ್ರಿಟಿಗಳು, ಸಿರಿವಂತ ಕುಟುಂಬಗಳು ವಿವಾಹ ಮಹೋತ್ಸವಗಳನ್ನು ಹೊರದೇಶಗಳಲ್ಲಿ ಆಯೋಜಿಸುತ್ತಿವೆ. ವ್ಯವಸ್ಥೆ ಅಚ್ಚುಕಟ್ಟಾಗಿರುತ್ತದೆ ಮತ್ತು ಅತಿಥಿಗಳಿಗೆ ಒಳ್ಳೆಯ ಆತಿಥ್ಯ ನೀಡಲು ಸಾಧ್ಯವಾಗುತ್ತದೆ ಎಂಬುದೇ ವಿದೇಶಗಳಲ್ಲಿನ ಮದುವೆಗೆ ಪ್ರಮುಖ ಕಾರಣ. ಆದರೆ, ನಮ್ಮ ದೇಶದಲ್ಲೇ ಇಂಥ ವ್ಯವಸ್ಥೆ ಅಭಿವೃದ್ಧಿ ಪಡಿಸಿದರೆ, ಪ್ರವಾಸಿ ಸ್ಥಾನಗಳನ್ನು ವೆಡ್ಡಿಂಗ್ ಸ್ಪಾಟ್​ಗಳನ್ನಾಗಿಸಿದರೆ ಸ್ಥಳೀಯ ಆರ್ಥಿಕತೆಗೂ ಅನುಕೂಲ.
ನಮ್ಮ ದೇಶದಲ್ಲಿ ಸಾಮಾನ್ಯವಾಗಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳು ಮದುವೆ ಸೀಸನ್. ಈ ಎರಡು ತಿಂಗಳಲ್ಲೇ ದೇಶದಲ್ಲಿ 33 ಲಕ್ಷಕ್ಕೂ ಅಧಿಕ ಮದುವೆ ಸಮಾರಂಭಗಳು ನಡೆಯುತ್ತಿದ್ದು, ಇದರಿಂದ ದೇಶದ ಆರ್ಥಿಕತೆಗೆ 4ರಿಂದ 5 ಲಕ್ಷ ಕೋಟಿ ರೂ. ಕೊಡುಗೆ ಸಿಗಲಿದೆ ಎಂಬುದು ತಜ್ಞರ ಅಂದಾಜು. ಆದರೆ, ಮತ್ತೊಂದೆಡೆ, ವಿವಾಹಕ್ಕೆ ಪ್ರಶಸ್ತ ತಾಣಗಳನ್ನು ಶೋಧಿಸುತ್ತಿರುವ ಸಿರಿವಂತರು, ಹೊರದೇಶಗಳತ್ತ ಮುಖಮಾಡುತ್ತಿದ್ದಾರೆ. ಭಾರತೀಯ ಪ್ರತಿಷ್ಠಿತ ಕುಟುಂಬಗಳ 150ಕ್ಕೂ ಹೆಚ್ಚು ಮದುವೆಗಳು ನವೆಂಬರ್-ಡಿಸೆಂಬರ್​ನಲ್ಲಿ ವಿದೇಶಗಳಲ್ಲಿ ನಡೆಯುತ್ತಿವೆ.
ಅಬುಧಾಬಿ (ಯು ಎಇ), ಇಸ್ತಾಂಬುಲ್ (ಟರ್ಕಿ), ದೋಹಾ (ಕತಾರ್), ಮಸ್ಕತ್ (ಒಮಾನ್), ಪೋರ್ಟ್​ಲುಯಿ (ಮಾರಿಶಸ್), ಪಟಾಯಾ, ಫುಕೆಟ್ (ಥೈಲ್ಯಾಂಡ್), ಬಾಲಿ (ಇಂಡೋನೇಷ್ಯಾ), ಮಾಲೆ (ಮಾಲ್ದೀವ್), ಬ್ಯಾಕಾಂಕ್​ನಲ್ಲಿ ಈ ಮದುವೆಗಳು ನಡೆಯುತ್ತಿದ್ದು, ಪ್ರಸಕ್ತ ಸಾಲಿನ ನೆಚ್ಚಿನ ತಾಣಗಳು ಎನಿಸಿಕೊಂಡಿವೆ. ಇದಲ್ಲದೆ, ಸ್ಪೇನ್, ಮಲೇಷ್ಯಾ, ವಿಯಟ್ನಾಂನಲ್ಲಿ ಕೂಡ ವಿವಾಹಗಳು ನಡೆಯುತ್ತಿವೆ.
ದೇಶದ ಟಾಪ್ ವೆಡ್ಡಿಂಗ್ ಪ್ಲಾನರ್ಸ್ ಮತ್ತು ಇವೆಂಟ್ ಮ್ಯಾನೆಜ್​ವೆುಂಟ್ ಕಂಪನಿಗಳ ಬಳಿ 2023 ನವೆಂಬರ್​ನಿಂದ 2024 ಜುಲೈವರೆಗೆ 850 international destination wedding ಒಪ್ಪಂದಗಳು ಆಗಿವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 25ರಷ್ಟು ಏರಿಕೆ ಕಂಡುಬಂದಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಗ್ರೀನ್ ವೆಡ್ಡಿಂಗ್ಪ್ರಕೃತಿಯ ರಮ್ಯತಾಣಗಳಲ್ಲಿ ವಿವಾಹ ಬಂಧನಕ್ಕೊಳಗಾಗಲು ಜನ ಬಯಸುತ್ತಿದ್ದಾರೆ. ನಿಸರ್ಗದ ಸಾನಿಧ್ಯದಲ್ಲಿ, ಹಸಿರಿನ ಮಡಿಲಿನಲ್ಲಿ ನಡೆಯುವ ಸಮಾರಂಭ ತುಂಬ ಖುಷಿ ಮತ್ತು ಸಂತೃಪ್ತಿ ಕೊಡುತ್ತದೆ ಎಂಬ ಕಾರಣಕ್ಕೆ ಗ್ರೀನ್ ವೆಡ್ಡಿಂಗ್​ನ ಪ್ರಮಾಣ ಹೆಚ್ಚಳಗೊಂಡಿದೆ. ಇಂಥ ಸ್ಥಳಗಳಲ್ಲಿ ಅಲಂಕಾರಕ್ಕೂ ಪರಿಸರಸ್ನೇಹಿ ವಸ್ತುಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ.
ಬಜೆಟ್ ಹೆಚ್ಚಳಅದ್ದೂರಿ ಮದುವೆಗಳ ಆಯೋಜನೆಯಲ್ಲಿ 3 ಬಗೆ ಪ್ರಚಲಿತದಲ್ಲಿವೆ. ್ಞ ದೇಶದೊಳಗಿನ ನಿಸರ್ಗರಮ್ಯ ತಾಣಗಳು. ್ಞ ಭಾರತಕ್ಕೆ ಸಮೀಪವಿರುವ ರಾಷ್ಟ್ರಗಳು. ಉದಾಹರಣೆಗೆ, ಶ್ರೀಲಂಕಾ, ಭೂತಾನ್. ್ಞ ವಿವಾಹಕ್ಕೆ ಹೇಳಿಮಾಡಿಸಿದ ವಿದೇಶದ ಪ್ರಸಿದ್ಧ ತಾಣಗಳು. ್ಞ ಕುಟುಂಬಗಳ ಬಜೆಟ್ 3ರಿಂದ 5 ಕೋಟಿಯವರೆಗೆ ಇದ್ದಲ್ಲಿ, ರಾಜಸ್ಥಾನದ ಉದಯಪುರ, ಜೋಧಪುರ, ಗೋವಾ, ಕೊಚ್ಚಿಯಲ್ಲಿ ಇವೆಂಟ್ ಕಂಪನಿಗಳು ಸಮಾರಂಭ ಆಯೋಜಿಸಿ ಕೊಡುತ್ತಿವೆ. ಇದೇ ಖರ್ಚಿನಲ್ಲಿ ಶ್ರೀಲಂಕಾದ ಕಲುತಾರಾ, ವಿಯೆಟ್ನಾಂನ ಹನೋಯಿ, ಇಂಡೋನೇಷ್ಯಾದ ಬಾಲಿ, ಥೈಲ್ಯಾಂಡ್​ನ ಫುಕೆಟ್​ನಲ್ಲಿಯೂ ಮದುವೆಗಳು ನಡೆಯುತ್ತಿವೆ. 10 ಕೋಟಿಗೂ ಅಧಿಕ ಬಜೆಟ್​ನ ಮದುವೆಗಳು ದೂರದ ದೇಶಗಳಲ್ಲಿ ನಡೆಯುತ್ತಿವೆ.
ದೇಶದ ಹೊರಗೆ ಸೆಲೆಬ್ರಿಟಿಗಳ ಮ್ಯಾರೇಜ್
* ರಾಣಿ ಮುಖರ್ಜಿಇಟಲಿ
* ಜಾನ್ ಅಬ್ರಾಹಂ ಲಾಸ್ ಎಂಜಲಿಸ್
* ಮಾಧುರಿ ದೀಕ್ಷಿತ್ ಅಮೆರಿಕ
* ಕುನಾಲ್ ಕಪೂರ್ ಐಸ್ಲ್ಯಾಂಡ್
* ವೀರದಾಸ್ ಶ್ರೀಲಂಕಾ
* ಸೆಲಿನಾ ಜೆಟ್ಲಿ ಆಸ್ಟ್ರೀಯಾ
* ಪ್ರೀತಿ ಜಿಂಟಾ ಲಾಸ್ ಎಂಜಲಿಸ್
* ವಿರಾಟ್ ಕೊಹ್ಲಿ ಇಟಲಿ
* ನೀನಾ ಗುಪ್ತಾ ಅಮೆರಿಕ
* ಮೊಹಿತ್ ಮಾರ್ವಾ ದುಬೈ
* ಅಫ್ತಾಬ್ ಶಿವದಾಸಿನಿ ಶ್ರೀಲಂಕಾ
ಏನೆಲ್ಲ ಹೊಸದು?* ಮದುವೆಗೆ ಬಂದ ಅತಿಥಿಗಳ ಒಳಗೊಳ್ಳುವಿಕೆ ಹೆಚ್ಚಿಸಲು ಹೊಸ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಧು ಮತ್ತು ವರರ ಕುಟುಂಬಗಳ ನಡುವೆ ಟಿ10 ಕ್ರಿಕೆಟ್ ಪಂದ್ಯ, ವಾಲಿಬಾಲ್, ಫುಟ್ಬಾಲ್ ಪಂದ್ಯಗಳು ನಡೆಯುತ್ತಿವೆ. ವಿಜೇತರಿಗೆ ಟ್ರೋಫಿ ವಿತರಣೆಯೂ ಅದ್ದೂರಿಯಾಗಿ ನಡೆಯುತ್ತಿದೆ.
* ವಧು-ವರರ ವಿಶೇಷ ಫೋಟೋಶೂಟ್ ಅಂತೂ ನಡೆದೇ ನಡೆಯುತ್ತದೆ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಕ್ಷಣ-ಕ್ಷಣಕ್ಕೂ ಮಾಹಿತಿ ಹಂಚಿಕೊಳ್ಳಲು, ಪಾಲ್ಗೊಂಡ ಅತಿಥಿಗಳ ಬಗ್ಗೆ ತಿಳಿಸಲು 7-8 ಜನರ ಸಾಮಾಜಿಕ ಮಾಧ್ಯಮ ನಿರ್ವಹಣೆಗಾರರ ತಂಡವನ್ನೇ ನಿಯೋಜಿಸಲಾಗುತ್ತಿದೆ. ಇದಕ್ಕಾಗಿ, 5-10 ಲಕ್ಷ ರೂ. ಖರ್ಚು ಮಾಡಲಾಗುತ್ತದೆ. ಮದುವೆಗೆ ಬಂದ ಅತಿಥಿಗಳ ಫೋಟೋ, ರೀಲ್​ಗಳನ್ನು ವಿವಿಧ ಭಂಗಿಗಳಲ್ಲಿ ತೆಗೆದು ಅಪಲೋಡ್ ಮಾಡಲಾಗುತ್ತಿದೆ.
ವಿವಾಹಗಳು ದೇಶದೊಳಗೇ ಆಗಲಿ ಪ್ರಧಾನಿ ಆಶಯಕೆಲವು ದೊಡ್ಡ ಕುಟುಂಬಗಳು ವಿದೇಶದಲ್ಲಿ ಮದುವೆಗಳನ್ನು ನಡೆಸುವ ಪ್ರವೃತ್ತಿ ಬೆಳೆಸಿಕೊಂಡಿದ್ದು, ಇದರಿಂದ ಭಾರತಕ್ಕೆ ಪ್ರಯೋಜನವೇನೂ ಇಲ್ಲ. ದೇಶದ ಹಣ ಹೊರದೇಶಗಳಿಗೆ ಸೇರದಂತೆ ನಮ್ಮ ನೆಲದಲ್ಲಿಯೇ ಮದುವೆ ಮತ್ತಿತರ ಆಚರಣೆಗಳನ್ನು ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾನುವಾರ ‘ಮನ್ ಕಿ ಬಾತ್’ನಲ್ಲಿ ವೋಕಲ್ ಫಾರ್ ಲೋಕಲ್ ಕುರಿತು ಮಾತನಾಡಿದ ಮೋದಿ, ಮದುವೆಗಳು ದೇಶದೊಳಗೇ ಆಗಬೇಕು ಎಂದು ಬಯಸಿದರು. ಈ ಮದುವೆ ಸೀಸನ್​ನಲ್ಲಿ ಸುಮಾರು 5 ಲಕ್ಷ ಕೋಟಿ ರೂ. ವ್ಯವಹಾರ ನಡೆಯಬಹುದು ಎಂದು ವ್ಯಾಪಾರ ಸಂಸ್ಥೆಗಳು ಅಂದಾಜಿಸಿವೆ. ಮದುವೆಗಳಿಗೆ ಶಾಪಿಂಗ್ ಮಾಡುವಾಗ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳಿಗೇ ಆದ್ಯತೆ ನೀಡಿ ಎಂದರು. ಇತ್ತೀಚಿನ ದಿನಗಳಲ್ಲಿ ಕೆಲವು ಕುಟುಂಬಗಳು ವಿದೇಶದಲ್ಲಿ ಮದುವೆ ಸಮಾರಂಭ ಹಮ್ಮಿಕೊಳ್ಳುತ್ತಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ ಮೋದಿ, ಭಾರತದ ಮಣ್ಣಿನಲ್ಲಿ ಭಾರತೀಯರ ಮಧ್ಯೆ ಮದುವೆ ನಡೆದರೆ ದೇಶದ ಹಣ ದೇಶದಲ್ಲೇ ಉಳಿಯುತ್ತದೆ. ಅಲ್ಲದೆ ನಮ್ಮ ದೇಶದ ಜನರಿಗೂ ನಿಮ್ಮ ವಿವಾಹದಲ್ಲಿ ಏನಾದರೂ ಸೇವೆ ಮಾಡುವ ಅವಕಾಶ ಸಿಗುತ್ತದೆ. ಕಡುಬಡವರು ಕೂಡ ತಮ್ಮ ಮಕ್ಕಳಿಗೆ ನಿಮ್ಮ ಮದುವೆ ಬಗ್ಗೆ ಹೇಳುತ್ತಾರೆ ಎಂದರು. ವಿದೇಶದಲ್ಲಿ ನೀವು ನಡೆಸುವಂಥ ಮದುವೆ ಸಮಾರಂಭಗಳನ್ನು ಇಲ್ಲಿ ಆಯೋಜಿಸಲು ಅಂಥ ವ್ಯವಸ್ಥೆ ಇಲ್ಲದಿರಬಹುದು, ಆದರೆ ಇಲ್ಲೇ ನೀವು ಅಂಥ ಕಾರ್ಯಕ್ರಮಗಳನ್ನು ಆಯೋಜಿಸಿದರೆ ವ್ಯವಸ್ಥೆಯೂ ಅಭಿವೃದ್ಧಿಗೊಳ್ಳುತ್ತದೆ. ಇದು ಬಹಳಷ್ಟು ಕುಟುಂಬಗಳಿಗೆ ಸಂಬಂಧಿಸಿದ ಸಂಗತಿಯಾಗಿದ್ದು, ನನ್ನ ನೋವಿನ ಸಂದೇಶ ಆ ದೊಡ್ಡ ಕುಟುಂಬಗಳಿಗೆ ತಲುಪುತ್ತದೆ ಎಂದು ಭಾವಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ಭಾರತಕ್ಕೂ ಇದೆ ಉತ್ತಮ ಅವಕಾಶ
* ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಗತ್ತಿನ ಗಮನ ಸೆಳೆದಿರುವ ಭಾರತದಲ್ಲಿ ವಿವಾಹ ಸಮಾರಂಭಗಳನ್ನು ನಡೆಸಲು ಸಾಕಷ್ಟು ಪ್ರಶಸ್ತವಾದ ಸ್ಥಳಗಳಿವೆ. ಆದರೆ, ಶಿಸ್ತುಬದ್ಧ ಆಯೋಜನೆ, ಸಮರ್ಪಕ ನಿರ್ವಹಣೆಯ ಕಾರಣ ಸಿರಿವಂತ ಕುಟುಂಬಗಳು ವಿದೇಶಗಳತ್ತ ಮುಖ ಮಾಡುತ್ತಿವೆ.
* ಭಾರತದ ಬಹುತೇಕ ರಾಜ್ಯಗಳಲ್ಲಿ ಪ್ರಸಿದ್ಧ ದೇವಾಲಯಗಳಿವೆ, ಅವುಗಳ ಸುತ್ತಮುತ್ತ ಪ್ರೇಕ್ಷಣೀಯ ಸ್ಥಳಗಳಿವೆ. ಇವುಗಳಿಗೆ ಹೊಂದಿಕೊಂಡಂತೆ, ವಿವಾಹಕ್ಕೆ ಬೇಕಾದ ಸಮರ್ಪಕ ವ್ಯವಸ್ಥೆಯನ್ನು ರೂಪಿಸಿದರೆ, ಬಹಳಷ್ಟು ಜನರು ಈ ತಾಣಗಳನ್ನೇ ಆಯ್ದುಕೊಳ್ಳಬಹುದು. ಈ ನಿಟ್ಟಿನಲ್ಲಿ ನಮ್ಮ ಪ್ರವಾಸೋದ್ಯಮ ನೀತಿಯಲ್ಲಿ ಒಂದಿಷ್ಟು ಬದಲಾವಣೆ ಮತ್ತು ಸುಧಾರಣೆ ತರುವುದು ಅಗತ್ಯವಾಗಿದೆ.
* ಮದುವೆಗೆ ಅವಶ್ಯಕವಾದ ಸಾಮಾಗ್ರಿಗಳನ್ನು ಒಂದೇ ಸ್ಥಳದಲ್ಲಿ ಸಿಗುವಂತೆ ಮಾಡುವುದು, ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸುವುದು, ಅತಿಥಿಗಳಿಗೆ ಸೂಕ್ತ ಸೌಲಭ್ಯ- ಹೀಗೆ ಅಗತ್ಯ ಕ್ರಮಗಳನ್ನು ಕೈಗೊಂಡರೆ ‘ಮದುವೆ ಪ್ರವಾಸೋದ್ಯಮ’ಕ್ಕೆ ಸೂಕ್ತ ಉತ್ತೇಜನ ಸಿಕ್ಕಂತಾಗುತ್ತದೆ. ಮುಖ್ಯವಾಗಿ, ಸ್ಥಳೀಯರಿಗೆ ವ್ಯಾಪಾರ-ವಹಿವಾಟಿನ ಅವಕಾಶಗಳು ಹೆಚ್ಚಿ, ಆರ್ಥಿಕತೆಗೂ ಅನುಕೂಲವಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 15 =
Remember me
