ಮಂಗಳೂರು:ಮಂಗಳೂರಿನ ನಾಗುರಿ ಬಳಿ ನ.19ರಂದು ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮಹಮದ್ ಶಾರೀಕ್ ಉಗ್ರ ಸಂಘಟನೆ ಲಷ್ಕರ್ ಎ ತೋಯ್ಬಾವನ್ನು ಸಂರ್ಪಸಲು ಯತ್ನಿಸಿದ್ದ ಎನ್ನುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಅವರ ಸಹಕಾರ ಪಡೆದು ಕರಾವಳಿಯಲ್ಲಿ ಹಿಂದು ಮುಖಂಡರು, ಆರೆಸ್ಸೆಸ್ ನಾಯಕರು ಹಾಗೂ ಪೊಲೀಸರನ್ನು ಈತ ಟಾರ್ಗೆಟ್ ಮಾಡಿದ್ದ. ಇದಕ್ಕಾಗಿ ಎಕೆ-47ನಂತಹ ರೈಫಲ್ ತರಿಸಲು ಯತ್ನಿಸಿದ್ದ. ಧರ್ಮ ದಂಗಲ್, ಹಿಜಾಬ್ ಘಟನೆ ಬಳಿಕ ಶಾರೀಕ್​ಗೆ ಮಂಗಳೂರೇ ಟಾರ್ಗೆಟ್ ಆಗಿತ್ತು ಎಂಬ ಅಂಶ ಹೊರ ಬಿದ್ದಿದೆ.
189 ಮಂದಿಯ ಜತೆ ಸಂಪರ್ಕ:ಶಾರೀಕ್​ನ ಮೊಬೈಲ್​ನಲ್ಲಿ ಮಹತ್ವದ ಮಾಹಿತಿಗಳು ಲಭಿಸಿವೆ. ಆತ ವಿವಿಧ ಕಾರಣಗಳಿಗೆ 189 ಮಂದಿಯ ಜತೆ ಸಂಪರ್ಕ ಸಾಧಿಸಿರುವ ದಾಖಲೆ ಪತ್ತೆಯಾಗಿದೆ. ಆರೋಪಿಯ ಮೊಬೈಲ್​ನಲ್ಲಿ ಕರಾವಳಿಯ ವ್ಯಕ್ತಿಗಳ ಜತೆಗೆ ಸಂಪರ್ಕ ಸಾಧಿಸಿದ ಮಾಹಿತಿ ಲಭ್ಯವಾಗಿಲ್ಲ. ಹೆಚ್ಚಿನ ಕರೆ ಸ್ವಿಗ್ಗಿ, ಝೊಮೆಟೋ, ಕೆಲವು ಅಂಗಡಿ ಮಾಲೀಕರು ಮತ್ತು ಮೈಸೂರಿನ ಜನರೊಂದಿಗೆ ಮಾತನಾಡಿರುವುದು ಗೊತ್ತಾಗಿದೆ. ಆರೋಪಿಯ ಮೊಬೈಲ್​ನಲ್ಲಿ ಹಲವು ಸೆಲ್ಪಿ ಫೋಟೋಗಳು ಸಿಕ್ಕಿದ್ದು, ಬಾಂಬ್ ತಯಾರಿಸುವ ವಿಡಿಯೋಗಳೂ ಪತ್ತೆಯಾಗಿವೆ. ಆತ ಮೈಸೂರಿನ ಬಾಡಿಗೆ ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲ. ಊಟ, ತಿಂಡಿಗೆ ಸ್ವಿಗ್ಗಿ, ಝೊಮೆಟೋ ಮೂಲಕ ಮನೆಗೆ ಪಾರ್ಸೆಲ್ ತರಿಸುತ್ತಿದ್ದ.
ಆಪ್ ಆಧಾರಿತ ವಾಹನಗಳ ಬಳಕೆ:ಶಾರೀಕ್ ಯಾವುದೇ ವಾಹನ ಹೊಂದಿಲ್ಲ. ಎಲ್ಲಿಗೆ ಹೋಗುವುದಿದ್ದರೂ ಉಬರ್, ಓಲಾ ಮೊದಲಾದ ಆಪ್ ಆಧಾರಿತ ವಾಹನಗಳಲ್ಲಿ ಸಂಚರಿಸುತ್ತಿದ್ದ. ಕೆಲವೊಮ್ಮೆ ಬಸ್​ಗಳಲ್ಲೂ ಹೋಗುತ್ತಿದ್ದ. ಪ್ರತಿ ಪ್ರಯಾಣದಲ್ಲೂ ಯಾವುದೇ ಸಂಶಯ ಬಾರದಂತೆ ವ್ಯವಹರಿಸುತ್ತಿದ್ದ.
ಹಳೇ ಮಿಕ್ಸಿ, ಗ್ರೖೆಂಡರ್ ಸಂಗ್ರಹ:ಆರೋಪಿ ಶಾರೀಕ್ ಒಎಲ್​ಎಕ್ಸ್ ನಂತಹ ವೆಬ್​ಸೈಟ್​ಗಳಲ್ಲಿ ಮಾಹಿತಿ ಪಡೆದು ಹಳೇ ಮಿಕ್ಸಿ, ಗ್ರೖೆಂಡರ್​ಗಳನ್ನು ಖರೀದಿಸುತ್ತಿದ್ದ. ಅದನ್ನು ಮನೆಗೆ ತಂದು ಬಿಚ್ಚಿ, ಅದರಿಂದ ಕೆಲವು ವಸ್ತುಗಳನ್ನು ತೆಗೆದು ಅದರಲ್ಲಿ ಸ್ಪೋಟಕ ತಯಾರಿಸಲು ಸಾಧ್ಯವೇ ಎಂಬುದರ ಕಡೆಗೆ ಯತ್ನ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
100 ಬೆಂಕಿ ಪೆಟ್ಟಿಗೆ ಖರೀದಿ:ಮೈಸೂರಿನಲ್ಲಿ ಎರಡು ಅಂಗಡಿಗಳಿಂದ 100 ಬೆಂಕಿ ಪೆಟ್ಟಿಗೆ ಖರೀದಿಸಿದ್ದ. ಅಂಗಡಿಯವರು ಇಷ್ಟು ಪ್ರಮಾಣದಲ್ಲಿ ಬೆಂಕಿ ಪೆಟ್ಟಿಗೆ ಯಾಕೆ ಎಂದು ಪ್ರಶ್ನಿಸಿದ್ದರು. ಅದಕ್ಕೆ ನಾನು ಇಂಜಿನಿಯರಿಂಗ್ ವಿದ್ಯಾರ್ಥಿ. ಪ್ರಾಜೆಕ್ಟ್ ವರ್ಕ್​ಗೆ ಬಳಕೆ ಮಾಡಲು ಎಂದು ಹೇಳಿದ್ದ.
ಕದ್ರಿ ದೇವಸ್ಥಾನದಿಂದ ಪೊಲೀಸ್ ದೂರು:ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಘಟನೆಗೆ ಸಂಬಂಧಿಸಿ ಕದ್ರಿ ಮಂಜುನಾಥ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಜಯಮ್ಮ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ (ಐಆರ್​ಸಿ) ಎಂಬ ಸಂಘಟನೆ ಕದ್ರಿ ದೇವಸ್ಥಾನವನ್ನು ಟಾರ್ಗೆಟ್ ಮಾಡಿರುವ ಬಗ್ಗೆ ಬರೆದುಕೊಂಡಿರುವುದರಿಂದ ದೇವಸ್ಥಾನಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ದೂರಿನಲ್ಲಿ ಕೋರಲಾಗಿದೆ. ಕದ್ರಿ ದೇವಸ್ಥಾನಕ್ಕೆ ಉಗ್ರ ಬೆದರಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿರುವುದು ಕಂಡುಬಂದಿದೆ. ಈ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬರುತ್ತಿದ್ದಾರೆ. ಐಆರ್​ಸಿ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ದೇವಸ್ಥಾನಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ಈಗಾಗಲೇ ಕದ್ರಿ ದೇವಸ್ಥಾನಕ್ಕೆ ಬಾಂಬ್ ಪತ್ತೆ ದಳ ಭೇಟಿ ನೀಡಿ ತಪಾಸಣೆ ನಡೆಸಿದೆ.
ಇತ್ತೀಚೆಗೆ ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆದಾಗ ಅದರ ಬಗ್ಗೆ ನಮ್ಮ ಪೊಲೀಸರು ಸಮರ್ಥವಾಗಿ ತನಿಖೆ ನಡೆಸಿದ್ದಾರೆ. ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾದಾಗ ಅದರ ಮುಂದುವರಿದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳವೇ ಕೈಗೊಳ್ಳುತ್ತದೆ. ಹೀಗಾಗಿ ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ಎನ್​ಐಎಗೆ ಹಸ್ತಾಂತರ ಮಾಡುವುದು ಅನಿವಾರ್ಯ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಝಾಕೀರ್ ನಾಯ್್ಕ ವಿಡಿಯೋ ಪತ್ತೆ:ಶಾರೀಕ್ ಮೊಬೈಲ್​ನಲ್ಲಿ ವಿವಾದಿತ ಭಾಷಣಕಾರ ಝಾಕೀರ್ ನಾಯ್ಕ್ ವಿಡಿಯೋಗಳು ಪತ್ತೆಯಾಗಿವೆ. ಆತನ ಭಾಷಣಗಳಿಂದ ಶಾರೀಕ್ ಪ್ರಭಾವಿತನಾಗಿದ್ದ. ಟೋರ್ ಬ್ರೌಸರ್ ಮೂಲಕ ಶಾರೀಕ್ ಡಾರ್ಕ್ ವೆಬ್ ಬಳಸುತ್ತಿದ್ದುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್(ಐಆರ್​ಎಫ್) ಜತೆ ಶಾರೀಕ್ ಸಂಪರ್ಕ ಹೊಂದಿದ್ದಾನೆ ಎಂದು ಹೇಳಲಾಗುತ್ತಿದೆ.
ಅರಾಫತ್ ಅಲಿಗೆ ಲುಕ್​ಔಟ್ ನೋಟಿಸ್:ಗೋಡೆ ಬರಹ, ಕುಕ್ಕರ್ ಬಾಂಬ್ ಸ್ಪೋಟದ ಮಾಸ್ಟರ್ ಮೈಂಡ್ ಎನ್ನಲಾದ ಅರಾಫತ್ ಅಲಿ ಸೌದಿಗೆ ತೆರಳಿದ್ದು, ಈತನಿಗೆ ಜಿಲ್ಲಾ ಕೋರ್ಟ್ ಬಂಧನ ವಾರಂಟ್ ಹೊರಡಿಸಿತ್ತು. ಆದರೆ ಪತ್ತೆಯಾಗದ ಹಿನ್ನೆಲೆಯಲ್ಲಿ ಅರಾಫತ್ ಅಲಿಗೆ ಲುಕ್​ಔಟ್ ನೋಟಿಸ್ ಜಾರಿಗೊಳಿಸಲಾಗಿದೆ.
ಜಾಮೀನು ಉಲ್ಲಂಘಿಸಿದ್ದ:ಮಂಗಳೂರು ಉಗ್ರ ಗೋಡೆ ಬರಹ ಪ್ರಕರಣದಲ್ಲಿ ಆರೋಪಿ ಶಾರೀಕ್ ಹೈಕೋರ್ಟ್​ನಿಂದ ಜಾಮೀನು ಪಡೆದು ಬಿಡುಗಡೆ ಬಳಿಕ ಕೋರ್ಟ್​ಗೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಕೋರ್ಟ್ ಸಮನ್ಸ್ ಜಾರಿಗೊಳಿಸಿತ್ತು. ಗೋಡೆ ಬರಹದ ಆರೋಪಿ ಮಾಝå್ಗೆ ಪ್ರಕರಣ ಪತ್ತೆಯಾದ ಎರಡು ತಿಂಗಳಲ್ಲೇ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದ್ದರೆ, ಸಾದತ್ ಮತ್ತು ಶಾರೀಕ್​ಗೆ 8 ತಿಂಗಳ ನಂತರ 2021ರ ಸೆ. 8ರಂದು ಹೈಕೋರ್ಟ್​ನಲ್ಲಿ ಷರತ್ತು ಬದ್ಧ ಜಾಮೀನು ನೀಡಿತ್ತು. ಶಾರೀಕ್ ಇದನ್ನು ಉಲ್ಲಂಘಿಸಿ ಬೆಂಗಳೂರು, ತಮಿಳುನಾಡು, ಕೇರಳ ಸೇರಿ ವಿವಿಧ ಕಡೆ ಸುತ್ತಾಟ ನಡೆಸುತ್ತಿದ್ದ. ಪೊಲೀಸ್ ಠಾಣೆಗಳಲ್ಲೂ ತನ್ನ ಹಾಜರಾತಿಯನ್ನು ದೃಢೀಕರಿಸಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಕೋರ್ಟ್​ಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.
ಎನ್​ಐಎ ತನಿಖೆ ಆರಂಭ:ಕುಕ್ಕರ್ ಸ್ಫೋಟ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ದಳ(ಎನ್​ಐಎ) ಎಫ್​ಐಆರ್ ದಾಖಲಿಸಿದೆ. ಪ್ರಕರಣದಲ್ಲಿ ಭಯೋತ್ಪಾದನೆ ಸಂಘಟನೆ ಪಾತ್ರ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ(ಯುಎಪಿಎ) ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದೆ. ಪ್ರಕರಣದಲ್ಲಿ ಮಹಮದ್ ಶಾರೀಕ್​ನನ್ನು ಮೊದಲ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಐಸಿಸ್ ಪ್ರೇರಿತ ಅಲ್ ಹಿಂದ್ ಸಂಘಟನೆ ಮೊಹಮ್ಮದ್ ಮತೀನ್ ತಾಹಾನ ಸೂಚನೆ ಮತ್ತು ಸಂಪರ್ಕದ ಮೇರೆಗೆ ಶಾರೀಕ್ ಉಗ್ರ ಕೃತ್ಯದಲ್ಲಿ ತೊಡಗಿದ್ದಾನೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣವನ್ನು ಎನ್​ಐಎ ಎಫ್​ಐಆರ್ ದಾಖಲು ಮಾಡಿಕೊಂಡ ಕಾರಣ ಪೊಲೀಸರು ಇದುವರೆಗೆ ನಡೆಸಿದ ತನಿಖೆಯ ವರದಿಯನ್ನು ಅವರಿಗೆ ಹಸ್ತಾಂತರಿಸಬೇಕಾಗಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿರುವ ಮಂಗಳೂರು ಪೊಲೀಸರು ಹಗಲು, ರಾತ್ರಿ ಕರ್ತವ್ಯ ನಿರ್ವಹಿಸಿ ಗರಿಷ್ಟ ಮಟ್ಟದಲ್ಲಿ ಸಾಕ್ಷ್ಯ ಸಂಗ್ರಹಿಸುವ ಪ್ರಕ್ರಿಯೆ ಯಲ್ಲಿ ತೊಡಗಿದ್ದಾರೆ. 10ಕ್ಕಿಂತಲೂ ಅಧಿಕ ತಂಡಗಳ ಮೂಲಕ ತನಿಖೆ ನಡೆಸಿರುವ ಪೊಲೀಸರಿಗೆ ಪ್ರಮುಖ ಸಾಕ್ಷಿಗಳು ಲಭಿಸಿದೆ.
‘ದೈವ ದೇವರೆಂದರೆ ತಮಾಷೆಯಾ?’; ‘ಕಾಂತಾರ’ದ ‘ವರಾಹ ರೂಪಂ’ ಗೀತೆ ರಚಿಸಿದ ಸಾಹಿತಿ ಹೀಗಂದಿದ್ದೇಕೆ?

ಏನಿದು ಪ್ರೆಷರ್ ಕುಕ್ಕರ್ ಬಾಂಬ್? ಉಗ್ರರಲ್ಲಿ ಈ ಪರಿಕಲ್ಪನೆ ಶುರುವಾಗಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ಡೀಟೇಲ್ಸ್…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
