| ರಾಘವ ಶರ್ಮ ನಿಡ್ಲೆ, ಸರಾಯ್ರಸಿ (ಅಯೋಧ್ಯಾ)
ಅಯೋಧ್ಯೆಯಲ್ಲಿಮಂದಿರ ನಿರ್ಮಾಣಕ್ಕಾಗಿ ಲಕ್ಷಾಂತರ ಮಂದಿ ಹೋರಾಟ ನಡೆಸಿದ್ದರೂ, ಅಯೋಧ್ಯೆಯಿಂದ 15 ಕಿಮೀ ದೂರದಲ್ಲಿರುವ ಸರಾಯ್ರಸಿ ಹಾಗೂ ಪಕ್ಕದ ಬಸ್ತಿ ಜಿಲ್ಲೆಗಳಲ್ಲಿರುವ ಸೂರ್ಯವಂಶಿಗಳ ಹೋರಾಟ ಮತ್ತು ತ್ಯಾಗ ಮಾತ್ರ ವಿಶಿಷ್ಟ ಹಾಗೂ ವಿಭಿನ್ನ. ಇದು ಇತಿಹಾಸದ ಪುಟಗಳಲ್ಲೂ ದಾಖಲಾಗಿದೆ. 500 ವರ್ಷಗಳ ಹಿಂದಿನ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ ಎಂಬ ಸಂತೃಪ್ತಿ ಸರಾಯ್ರಸಿ ಗ್ರಾಮಸ್ಥರಲ್ಲಿ ಎದ್ದುಕಾಣುತ್ತಿದೆ.
1528ರಲ್ಲಿ ಅಯೋಧ್ಯೆ ಮೇಲೆ ಆಕ್ರಮಣ ನಡೆಸಿದ್ದ ಬಾಬರ್, ತನ್ನ ಸೇನಾನಿ ಮೀರ್ ಬಾಕಿ ಮೂಲಕ ಮಂದಿರವನ್ನು ನಾಶ ಮಾಡಿದ್ದ. ಇದನ್ನು ತಡೆಯಲು ಸ್ಥಳೀಯರು ಪ್ರಯತ್ನಿಸಿದರೂ, ಆತನ ಸೈನ್ಯದೆದುರು ಸಾಧ್ಯವಾಗಿರಲಿಲ್ಲ. ಈ ಹೋರಾಟದಲ್ಲಿ ಸಾವಿರಾರು ಸೂರ್ಯವಂಶಿಗಳು ಪ್ರಾಣತ್ಯಾಗ ಮಾಡಿದ್ದರು. ಅಂಥವರಲ್ಲಿ, ಸರಾಯ್ರಸಿ ಗ್ರಾಮದ ಗಜರಾಜ್ ಸಿಂಗ್ ಠಾಕೂರ್ ಪ್ರಮುಖರು.
ಬಾಬರನ ಮೊಘಲ್ ಸೇನೆ ವಿರುದ್ಧದ ಹೋರಾಟಕ್ಕೆ ಸರಯೂ ನದಿ ದಂಡೆಯಲ್ಲಿನ ನೂರಾರು ಹಳ್ಳಿಗಳ ಜನರನ್ನು ಒಟ್ಟುಗೂಡಿಸಿ, ಗಜರಾಜ್ ಸಿಂಗ್ ಯುದ್ಧಕ್ಕೆ ಸಜ್ಜಾಗಿದ್ದರು. ಆಗ ಸರಾಯ್ರಸಿ ಪಕ್ಕದಲ್ಲಿರುವ ಸೂರ್ಯಕುಂಡದಲ್ಲಿ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ್ದ ಗಜರಾಜ್ ಸಿಂಗ್, ‘ರಾಮಜನ್ಮಭೂಮಿಯಲ್ಲಿ ಮಂದಿರ ಮರುನಿರ್ವಣವಾಗುವತನಕ, ಸೂರ್ಯವಂಶಿಗಳು ಪೇಟಾಗಳನ್ನು (ರುಮಾಲು) ತೊಡಬಾರದು, ಚರ್ಮದ ಚಪ್ಪಲಿ ಹಾಕಬಾರದು, ಕೊಡೆಗಳನ್ನು ಬಳಸಬಾರದು’ ಎಂದು ಪ್ರತಿಜ್ಞೆ ಮಾಡಿದ್ದರು. ಅಂದಿನಿಂದ ಇಂದಿನವರೆಗೆ (500 ವರ್ಷಗಳಿಂದ) ಈ ಪ್ರತಿಜ್ಞೆ ಪಾಲಿಸಿದ 115 ಗ್ರಾಮಗಳ ಸೂರ್ಯವಂಶಿ ಸಮುದಾಯದವರು, ಮಂದಿರ ನಿರ್ವಣವಾದ ಹಿನ್ನೆಲೆಯಲ್ಲಿ ಜನವರಿ 15ರ ಮಕರ ಸಂಕ್ರಾಂತಿಯಂದು ಪುರಾಣಪ್ರಸಿದ್ಧ ಸೂರ್ಯಕುಂಡದಲ್ಲೇ ಪ್ರತಿಜ್ಞೆಯನ್ನು ಕೊನೆಗೊಳಿಸಿದರು. ಧಾರ್ವಿುಕ ವಿಧಿ-ವಿಧಾನಗಳ ಮೂಲಕ ಪೇಟಾ, ಚರ್ಮದ ಚಪ್ಪಲಿಗಳನ್ನು ಮತ್ತೆ ಧರಿಸಿ ಸಂಭ್ರಮಿಸಿದ್ದಾರೆ.
ಪ್ರಾಣಪ್ರತಿಷ್ಠೆ ದಿನದಂದೂ ಸೂರ್ಯಕುಂಡದಲ್ಲಿ ಸೇರಿದ ಗ್ರಾಮಸ್ಥರು, ಮಂದಿರಕ್ಕಾಗಿ ಹಳೆಯ ತಲೆಮಾರಿನವರ ಹೋರಾಟ ಸ್ಮರಿಸಿ ಕುಲದೇವರಾಗಿರುವ ಸೂರ್ಯನಿಗೆ ಕೊಡೆ ಸಮರ್ಪಿಸಿ, ಪಗಡಿಯನ್ನು ಧರಿಸಿದರು.
‘ಭಗವಾನ್ ಶ್ರೀರಾಮನಿಗೇ ಮಂದಿರ ಇರಲಿಲ್ಲ. ಇದ್ದ ಸೂರನ್ನೇ ಕೆಡವಿ ಹಾಕಿದರು. ಅವನಿಗಿಲ್ಲದ ಸೂರು ನಮಗೇಕೆ? ಹೀಗಾಗಿ, ಕಳೆದ 500 ವರ್ಷಗಳಿಂದ ನಾವ್ಯಾರೂ ಪೇಟಾ ಧರಿಸಿರಲಿಲ್ಲ’ ಎನ್ನುತ್ತಾರೆ ಗಜರಾಜ್ ಸಿಂಗ್​ರ 9ನೇ ತಲೆಮಾರಿನವರಾದ ಶಿವವಿಜಯ್ ಸಿಂಗ್.
ಲೇಖಕ ರಾಮ್ೋಪಾಲ್ ವಿಶಾರದ್ ಅವರ ‘ಶ್ರೀರಾಮ ಜನ್ಮಭೂಮಿ ಕಾ ಪ್ರಾಚೀನ ಇತಿಹಾಸ’ ಗ್ರಂಥ, 16ನೇ ಶತಮಾನದಲ್ಲಿ ರಾಮಮಂದಿರ ನೆಲಸಮಗೊಳಿಸಿದ್ದ ವೇಳೆ ಬಾಬರನ ಸೇನೆ ವಿರುದ್ಧ ಹೋರಾಡಿದ್ದ 18 ಹೋರಾಟಗಾರರ ಬಗ್ಗೆ ಉಲ್ಲೇಖವಿದೆ ಮತ್ತು ಅವರ ತಲೆಮಾರಿನವರು ಅಯೋಧ್ಯೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ. ಅವರಲ್ಲಿ ಠಾಕೂರ್ ಗಜರಾಜ್​ಸಿಂಗ್ (ಸರಾಯ್ರಸಿ), ಠಾಕೂರ್ ಕುನ್ವರ್ ಗೋಪಾಲ್ (ರಾಜೇಪುರ್) ಮತ್ತು ಠಾಕೂರ್ ಜಗದಂಬಾ ಸಿಂಗ್ ಸಿರ್ಸಿಂದಾ ಗ್ರಾಮಕ್ಕೆ ಸೇರಿದವರಾಗಿದ್ದಾರೆ.
ಬಾಂಧವ್ಯ ಕೆಡಿಸಿದ್ದ ಔರಂಗಜೇಬ್:ಬಾಬರ್ ಮಸೀದಿ ನಿರ್ಮಾಣ ಮಾಡಿದ್ದರಿಂದ ಹಿಂದುಗಳು ಮೂಲಮಂದಿರವಿಲ್ಲದೆ ಅನಾಥರಾಗಿದ್ದರು ಎಂದು ಮಾಹಿತಿ ಹಂಚಿಕೊಂಡ ಸರಾಯ್ರಸಿ ನಿವಾಸಿ ಧರಮ್ ಸಿಂಗ್ ಠಾಕೂರ್, ‘ಬಾಬರ್ ಬಳಿಕ ಅಯೋಧ್ಯೆಯಲ್ಲಿದ್ದ ಅಕ್ಬರ್ ಕೂಡ ಬಾಬರ್​ನಷ್ಟೇ ಕಠೋರನಾಗಿದ್ದ. ಆದರೆ, ಮಂತ್ರಿಗಳಾದ ಬೀರಬಲ್ ಮತ್ತು ತೋಡರಮಲ್ಲರ ಮಾತುಗಳನ್ನು ಕೇಳಿದ ಅಕ್ಬರ್, ಹಿಂದುಗಳ ಪೂಜಾಪಾಠಕ್ಕೆ ಮಸೀದಿಯ ಬಳಿ ಅವಕಾಶ ಮಾಡಿಕೊಟ್ಟಿದ್ದ. 3.5 ಅಡಿ ಉದ್ದದ ಸಣ್ಣ ದೇಗುಲವೊಂದು ನಿರ್ಮಾಣ ಮಾಡಲು ನೆರವಾದ. ಆದರೆ, ಅಕ್ಬರ್ ನಂತರ ಬಂದ ಔರಂಗಜೇಬ್ ಎಲ್ಲವನ್ನೂ ಹಾಳು ಮಾಡಿದ. ಹಿಂದುಗಳನ್ನು ಪ್ರಾಣಿಗಳಂತೆ ನೋಡಿದ. ಹಿಂದು-ಮುಸ್ಲಿಂ ಸಾಮರಸ್ಯವನ್ನೂ ಕೆಡಿಸಿಬಿಟ್ಟಿದ್ದ’ ಎಂದು ಹೇಳಿದರು. ಇದಾದ ಬಳಿಕ ಮಂದಿರ ನಿರ್ವಣದ ಕನಸು ಕಮರಿ ಹೋಗಿತ್ತು. ಆದರೆ, ಮಾಜಿ ಉಪಪ್ರಧಾನಿ ಎಲ್.ಕೆ.ಆಡ್ವಾಣಿ ಕೈಗೊಂಡ ರಾಮರಥ ಯಾತ್ರೆ ಬಳಿಕ ಮತ್ತೆ ಕನಸು ಚಿಗುರಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನಮ್ಮೆಲ್ಲರ ಆಶಯವನ್ನು ಈಡೇರಿಸಿದ್ದಾರೆ’ ಎಂದು ಸಂತಸ ಹಂಚಿಕೊಂಡರು.
ಬಾಬರ್​ನಾಮಾದಲ್ಲಿ ಉಲ್ಲೇಖ:ಸರಯೂ ನದಿ ದಂಡೆಯ ಸೂರ್ಯವಂಶಿಗಳು ಹೆಚ್ಚಿರುವ 115 ಹಳ್ಳಿಗರು ಗಜರಾಜ್ ಸಿಂಗ್ ಠಾಕೂರ್​ರನ್ನು ದೇವರಂತೆ ಕಾಣುತ್ತಾರೆ. ರಾಮನಿಗಾಗಿ ಪ್ರಾಣತ್ಯಾಗ ಮಾಡಿ, ವೀರ ಸಂತತಿಯ ಗೌರವ ಹೆಚ್ಚಿಸಿದ್ದರು. ಗಜರಾಜ್ ಸಿಂಗ್ ಹೋರಾಟದ ಬಗ್ಗೆ ಖುದ್ದು ಬಾಬರ್ ಕೂಡ ತನ್ನ ‘ಬಾಬರ್​ನಾಮಾ’ ಕೃತಿಯಲ್ಲೂ ಉಲ್ಲೇಖ ಮಾಡಿದ್ದಾನೆ. ಬ್ರಿಟನ್ ಮೂಲದ ಲೇಖಕ ಅಲೆಕ್ಸಾಂಡರ್ ಕನ್ನಿಂಗ್​ಹ್ಯಾಮ್ ಕೂಡ ತನ್ನ ಪುಸ್ತಕದಲ್ಲಿ ಈ ಬಗ್ಗೆ ದಾಖಲಿಸಿದ್ದಾನೆ ಎನ್ನುತ್ತಾರೆ ಗ್ರಾಮಸ್ಥರು.
ಕರಸೇವಕರಿಗೆ ಆತಿಥ್ಯ:‘92ರಲ್ಲಿ ಕರಸೇವೆಗೆಂದು ಬಂದಿದ್ದ ದೇಶದ ಲಕ್ಷಾಂತರ ರಾಮಭಕ್ತರು, ಅಯೋಧ್ಯೆ ಸುತ್ತಮುತ್ತ ಚದುರಿಹೋಗಿದ್ದರು. ಕರಸೇವಕರಿಗೆ ವಾಸ್ತವ್ಯ, ಊಟ, ರಕ್ಷಣೆ ನೀಡಿದ್ದು ಬಹುಪಾಲು ಸೂರ್ಯವಂಶಿ ಕುಟುಂಬಗಳು’ ಎಂದು ನೆನೆಸಿಕೊಂಡ ದಯಾರಾಮ್ ಸಿಂಗ್ ಠಾಕೂರ್, ‘ಬಾಬರ್ ಆಕ್ರಮಣದಿಂದ ಹಿಡಿದು 90ರ ದಶಕದವರೆಗೆ ಸೂರ್ಯವಂಶಿಗಳು ಮಂದಿರಕ್ಕಾಗಿ ಹೋರಾಡುತ್ತಲೇ ಇದ್ದರು. ನಂತರ ಕರಸೇವಕರಿಗೂ ಸಾಥ್ ನೀಡಿದ್ದರು’ ಎಂದು ತಿಳಿಸಿದರು. ಸೂರ್ಯವಂಶಿಗಳ ಪ್ರತಿನಿಧಿಯಾಗಿ ಸರಾಯ್ರಸಿಯ ಪೂರಾ ಬಜಾರ್ ನಿವಾಸಿ ಗುರುಪ್ರಸಾದ್ ಠಾಕೂರ್ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅಯೋಧ್ಯೆ-ಸೂರ್ಯವಂಶಿಗಳ ನಂಟು‘ಶಿಥಿಲಾವಸ್ಥೆಯಲ್ಲಿದ್ದ ಅಯೋಧ್ಯೆಯಲ್ಲಿ ರಾಮ ಮಂದಿರ ಮರು ನಿರ್ಮಾಣ ಮಾಡಿದ್ದು ಉಜ್ಜಯಿನಿಯಿಂದ ಬಂದಿದ್ದ ರಾಜಾ ವಿಕ್ರಮಾದಿತ್ಯ. ಮಂದಿರ ನಿರ್ವಣದ ವೇಳೆ ಬೆಳಗ್ಗೆ ಕಟ್ಟಿದ್ದ ಗೋಡೆ, ಇಟ್ಟಿಗೆಗಳು ರಾತ್ರಿಯಲ್ಲಿ ಉದುರಿ ಬೀಳುತ್ತಿದ್ದವು. ಇದರಿಂದ ಚಿಂತಾಕ್ರಾಂತನಾಗಿದ್ದ ವಿಕ್ರಮಾದಿತ್ಯನಿಗೆ, ‘ಈಗಿನ ರಾಜಸ್ಥಾನದಿಂದ ಸೂರ್ಯವಂಶಿಗಳನ್ನು ಕರೆದು, 5 ಇಟ್ಟಿಗೆಗಳನ್ನು ಜೋಡಿಸಲು ಕೋರಬೇಕು. ನಂತರ, ನಿರ್ಮಾಣ ಕಾರ್ಯ ಸರಾಗವಾಗಿ ಸಾಗಲಿದೆ’ ಎಂದು ಸಂತರೊಬ್ಬರು ಸಲಹೆ ನೀಡಿದ್ದರು. ಈ ಪ್ರಕಾರವಾಗಿ ಇಬ್ಬರು ಸೂರ್ಯವಂಶಿಗಳು 5 ಇಟ್ಟಿಗೆಗಳನ್ನು ಜೋಡಿಸಿಟ್ಟ ನಂತರದಲ್ಲಿ ಮಂದಿರ ನಿರ್ಮಾಣ ಸುಸೂತ್ರವಾಗಿ ನಡೆಯಿತು’ ಎಂದು ಇತಿಹಾಸವನ್ನು ನೆನಪಿಸುತ್ತಾರೆ ಧರಂ ಸಿಂಗ್ ಠಾಕೂರ್. ಸೂರ್ಯವಂಶಿಗಳು ಮೂಲತಃ ರಾಜಸ್ಥಾನದವರು. ಆದರೆ, ಮಂದಿರ ನಿರ್ಮಾಣ ಬಳಿಕ ಈ ಸಮುದಾಯದವರು ಈ ಕಡೆ ಬರಲಾರಂಭಿಸಿದರು. ರಾಮನ ಪ್ರಾಣಪ್ರತಿಷ್ಠೆ ಸಮಾರಂಭವನ್ನು ಸೂರ್ಯವಂಶಿಗಳು ಪಗಡಿ ತೊಟ್ಟು, ದೀಪ ಬೆಳಗಿಸುವ ಮೂಲಕ ಸಂಭ್ರಮಿಸಿದರು.
90 ಸಾವಿರ ರಾಮಭಕ್ತರ ಬಲಿದಾನಬಾಬರನ ಕಾಲದಿಂದ ಬ್ರಿಟಿಷರ ತನಕ ವಿವಿಧ ಹಂತಗಳಲ್ಲಿ ನಡೆದ ಯುದ್ಧಗಳಲ್ಲಿ 90 ಸಾವಿರಕ್ಕಿಂತಲೂ ಹೆಚ್ಚು ಸೂರ್ಯವಂಶಿಗಳು ಪ್ರಾಣತ್ಯಾಗ ಮಾಡಿದ್ದಾರೆ. ಅವರೆಲ್ಲರನ್ನೂ ಮುಸ್ಲಿಂ ಸೇನೆಯವರು ಅಯೋಧ್ಯೆ ಸುತ್ತಮುತ್ತಲೇ ಹೂಳಿದ್ದಾರೆ. ಮೊಗಲರ ಬಳಿ ತೋಪು, ಕಠಾರಿ ಸೇರಿ ಹಲವು ಶಸ್ತ್ರಾಸ್ತ್ರಗಳಿದ್ದವು. ನಮ್ಮವರಲ್ಲಿ ಏನೂ ಇರಲಿಲ್ಲ. ಹೀಗಾಗಿ, ಹೆಚ್ಚು ಮಂದಿ ಮೃತಪಟ್ಟರು ಎಂದು 500 ವರ್ಷಗಳ ಹಿಂದಿನ ಕಥೆಯನ್ನು ಗ್ರಾಮಸ್ಥರು ತೆರೆದಿಟ್ಟರು.
VIDEO| ಮೊಟ್ಟ ಮೊದಲ ಬಾರಿಗೆ ಸಸ್ಯಗಳು ಪರಸ್ಪರ ಮಾತನಾಡುವ ವಿಡಿಯೋ ಸೆರೆಹಿಡಿದ ವಿಜ್ಞಾನಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
