ಅಫ್ಘಾನಿಸ್ತಾನದಲ್ಲಿರುವ ಸೇನೆಯನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ಅಮೆರಿಕ ಘೋಷಿಸಿದ ಬಳಿಕ ಏಪ್ರಿಲ್​ನಿಂದ ಈ ಪ್ರಕ್ರಿಯೆ ಶುರುವಾಗಿತ್ತು. ಜುಲೈ 2ರಂದು ಬಗ್ರಾಮ್ ವಾಯುನೆಲೆಯನ್ನು ಆಫ್ಘನ್ ಸೇನಾಪಡೆಗೆ ಒಪ್ಪಿಸಿ ಅಮೆರಿಕ ಸೇನಾಪಡೆ ಅಲ್ಲಿಂದ ಹಿಂದೆ ಸರಿದಿದೆ. ಇನ್ನೊಂದೆಡೆ, ಭಾನುವಾರ ಆಫ್ಘನ್​ನ ಉತ್ತರ ಭಾಗದ ಜಿಲ್ಲೆಗಳನ್ನು ವಶಪಡಿಸಿಕೊಂಡು ತಾಲಿಬಾನ್ ಮುನ್ನುಗ್ಗತೊಡಗಿದೆ. ಈ ವಿದ್ಯಮಾನದೊಂದಿಗೆ ಆಫ್ಘನ್ ಮತ್ತೆ ‘ಉಗ್ರ’ ಬಲೆಗೆ ಸಿಲುಕತೊಡಗಿದೆ. ತಾಲಿಬಾನ್ ಉಗ್ರರು ತಜಕಿಸ್ತಾನದ ಗಡಿ ದಾಟಿ ಮುಂದೆ ಸಾಗುತ್ತಿದ್ದು, ಆಫ್ಘನ್ ಸೇನಾಪಡೆಯ 300ಕ್ಕೂ ಹೆಚ್ಚು ಯೋಧರು ಹೆಚ್ಚು ಪ್ರತಿರೋಧ ತೋರಿಸುವುದಕ್ಕಾಗದೆ ಬಡಕ್​ಶಾನ್ ಪ್ರಾಂತ್ಯದಿಂದ ಹಿಂದಕ್ಕೆ ಸರಿದಿದ್ದಾರೆ ಎಂದು ತಜಕಿಸ್ತಾನದ ನ್ಯಾಷನಲ್ ಸೆಕ್ಯುರಿಟಿ ಸ್ಟೇಟ್ ಕಮಿಟಿ ಹೇಳಿದೆ. ತಜಕಿಸ್ತಾನದ ಜತೆಗೆ ಆಫ್ಘನ್​ಗೆ ಉತ್ತಮ ಬಾಂಧವ್ಯವಿದ್ದು, ಆ ರಾಷ್ಟ್ರದೊಳಗೆ ಹೋಗಿ ಉಗ್ರರನ್ನು ಸದೆಬಡಿಯವುದಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಅಮೆರಿಕ ಸೇನೆಯ ಬೆಂಬಲ ಇಲ್ಲದ ಕಾರಣ ತಾಲಿಬಾನಿಗಳನ್ನು ಎದುರಿಸುವುದು ಆಫ್ಘನ್ ಸೇನೆಗೆ ಕಷ್ಟವಾಗಿದೆ.
ಮೂರನೇ ಒಂದು ಭಾಗ ತಾಲಿಬಾನಿಗಳ ವಶ:ಅಫ್ಘಾನಿಸ್ತಾನದ 421 ಜಿಲ್ಲೆಗಳು ಮತ್ತು ಜಿಲ್ಲಾ ಕೇಂದ್ರಗಳ ಪೈಕಿ ಮೂರನೇ ಒಂದಂಶ ಈಗಾಗಲೇ ತಾಲಿಬಾನ್ ಉಗ್ರರ ವಶವಾಗಿದೆ. ಬಡಕ್​ಶಾನ್ ಪ್ರಾಂತ್ಯದ ಈಶಾನ್ಯ ಭಾಗದ ಜಿಲ್ಲೆಗಳು ಸುಲಭವಾಗಿ ಉಗ್ರರ ವಶವಾಗಿವೆ. ಕಳೆದ ಮೂರು ದಿನಗಳ ಅವಧಿಯಲ್ಲಿ 10 ಜಿಲ್ಲೆಗಳು ಅದರಲ್ಲೂ 8 ಜಿಲ್ಲೆಗಳು ಯಾವುದೆ ಪ್ರತಿರೋಧವಿಲ್ಲದೆ ಉಗ್ರರ ಪಾಲಾಗಿವೆ. ಸೇನಾಪಡೆ, ಪೊಲೀಸರು ಎಲ್ಲರೂ ಬಡಕ್​ಶಾನ್ ಪ್ರಾಂತ್ಯದ ರಾಜಧಾನಿ ಫೈಜಾಬಾದ್​ಗೆ ಪಲಾಯನಗೈದಿದ್ದಾರೆ. ಈಗಾಗಲೇ 157 ಜಿಲ್ಲೆಗಳ ಹಿಡಿತ ಸಾಧಿಸಿರುವ ತಾಲಿಬಾನಿಗಳು ಇನ್ನೂ 151 ಜಿಲ್ಲೆಗಳನ್ನು ವಶಪಡಿಸಲು ಹೋರಾಟ ಮುಂದುವರಿಸಿವೆ. 79 ಜಿಲ್ಲೆಗಳಷ್ಟೇ ಆಫ್ಘನ್ ಸರ್ಕಾರದ ಹಿಡಿತದಲ್ಲಿವೆ.
ಸೇನೆ ಹಿಂದೆಗೆತ ಯಾಕೆ?:ತಾಲಿಬಾನ್ ಉಗ್ರರ ಜತೆಗಿನ ಸುದೀರ್ಘ ಅವಧಿಯ ಯುದ್ಧದಲ್ಲಿ ಗೆಲುವು ಸಿಗುವುದು ಕಷ್ಟ ಎಂಬುದು ಮನವರಿಕೆಯಾದ ಕಾರಣ ಬರಾಕ್ ಒಬಾಮ ಅಧ್ಯಕ್ಷರಾಗಿದ್ದ ಕಾಲದಲ್ಲಿ ಸೇನೆ ಹಿಂಪಡೆಯುವ ಪ್ರಸ್ತಾಪಮಾಡಲಾಗಿತ್ತು. ನಾಜೂಕಾಗಿ ಅಲ್ಲಿಂದ ಹೊರಬರುವುದಕ್ಕಾಗಿ ಒಬಾಮ ಆಡಳಿತ 2015ರಲ್ಲಿ ತಾಲಿಬಾನ್ ಮತ್ತು ಆಫ್ಘನ್ ಸರ್ಕಾರದ ನಡುವೆ ಮಾತುಕತೆಗೆ ವೇದಿಕೆ ಒದಗಿಸಿತು. ಪಾಕಿಸ್ತಾನದ ಮುರ್ರೆಯಲ್ಲಿ ಈ ಮಾತುಕತೆ ನಡೆಯಿತಾದರೂ ಫಲಕೊಡಲಿಲ್ಲ. ಇದಾಗಿ ಎರಡು ವರ್ಷಕ್ಕೆ ತಾಲಿಬಾನ್ ನಾಯಕ ಮುಲ್ಲಾ ಒಮರ್ ಮೃತಪಟ್ಟ. ನಂತರದಲ್ಲಿ ಡೊನಾಲ್ಡ್ ಟ್ರಂಪ್ ದೋಹಾದಲ್ಲಿ ನೇರ ಮಾತುಕತೆಗೆ ತಾಲಿಬಾನ್ ನಾಯಕರನ್ನು ಆಹ್ವಾನಿಸಿದ್ದರು. ಅಲ್ಲಿ 2020ರ ಫೆಬ್ರವರಿಯಲ್ಲಿ ತಾಲಿಬಾನ್ ಜತೆಗೆ ಒಪ್ಪಂದ ಏರ್ಪಟ್ಟಿತು. 2021ರ ಮೇ 1ರ ಒಳಗೆ ಅಮೆರಿಕ ಸೇನೆ ಹಿಂಪಡೆಯಲಾಗುವುದೆಂಬ ಭರವಸೆಯನ್ನು ಅಮೆರಿಕ ನೀಡಿತು. ಈಗ ಬೈಡೆನ್ ಆಡಳಿತ ಡೆಡ್​ಲೈನ್ ಅನ್ನು ಸೆಪ್ಟೆಂಬರ್ 11ಕ್ಕೆ ವಿಸ್ತರಿಸಿ ಸೇನೆ ಹಿಂಪಡೆತದ ಪ್ರಕ್ರಿಯೆಯನ್ನು ಭಾಗಶಃ ಪೂರ್ಣಗೊಳಿಸಿದೆ.
ಮೂರು ಸನ್ನಿವೇಶಗಳು ನಿರೀಕ್ಷಿತ:ಆಫ್ಘನ್ ಜತೆಗೆ ಸಂಬಂಧ ಬೆಳೆಸುವ ಯಾವುದೇ ರಾಷ್ಟ್ರಗಳು ಮೂರು ಸನ್ನಿವೇಶಗಳನ್ನು ಎದುರುನೋಡಬಹುದು ಎನ್ನುತ್ತಾರೆ ಪರಿಣತರು. ಈಗ ಆಡಳಿತ ಚುಕ್ಕಾಣಿ ಹಿಡಿದಿರುವ ಪ್ರಜಾಸತ್ತಾತ್ಮಕ ಸರ್ಕಾರ ಮತ್ತು ತಾಲಿಬಾನ್ ನಡುವೆ ರಾಜಕೀಯ ಒಪ್ಪಂದ ಏರ್ಪಡಬೇಕು. ಅಧಿಕಾರ ಹಂಚಿಕೆ ಸೂತ್ರ ಮಾಡಿಕೊಂಡು ಆಫ್ಘನ್​ನ ಭವಿಷ್ಯ ರೂಪಿಸಬೇಕು. ಸದ್ಯದ ಪ್ರಕಾರ ಇದು ಕಷ್ಟಸಾಧ್ಯವೆಂದು ಭಾಸವಾಗುತ್ತಿದೆ. ನಾಗರಿಕ ಕಾಂತ್ರಿಯನ್ನು ನಿರೀಕ್ಷಿಸಬಹುದಾದರೂ, ಇದರಲ್ಲಿ ಸರ್ಕಾರ ತಾಲಿಬಾನಿಗಳ ವಿರುದ್ಧ ಸಮರ ಸಾರಬಹುದು. ಸರ್ಕಾರಕ್ಕೆ ಆರ್ಥಿಕವಾಗಿ ಮತ್ತು ಸೇನಾ ಬೆಂಬಲ ನೀಡುವುದಕ್ಕೆ ಪಾಶ್ಚಾತ್ಯ ರಾಷ್ಟ್ರಗಳು ಮುಂದೆ ಬರಬಹುದು. ಆದರೆ, ಈಗಾಗಲೇ ತಾಲಿಬಾನಿಗಳು ಮುನ್ನುಗ್ಗುತ್ತಿರುವ ಕಾರಣ ಸನ್ನಿವೇಶ ಹೇಗೆ ಬೇಕಾದರೂ ಬದಲಾಗಬಹುದು. ಅಲ್ಲದೆ, ತಾಲಿಬಾನ್ ಸಂಪೂರ್ಣವಾಗಿ ದೇಶವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವ ಸಾಧ್ಯತೆ. ಇದು ಈಗಾಗಲೇ ಗೋಚರಿಸತೊಡಗಿದೆ.
ತಾಲಿಬಾನ್ ಜತೆಗೆ ಭಾರತದ ಸಂಬಂಧ:ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಆಫ್ಘನ್​ನಲ್ಲಿ ಆಡಳಿತ ಸೂತ್ರ ಕೈಗೆತ್ತಿಕೊಳ್ಳುತ್ತಿರುವ ತಾಲಿಬಾನಿಗಳ ಜತೆಗೆ ರಾಜತಾಂತ್ರಿಕ ಸಂಬಂಧ ಸಾಧಿಸುವ ಪ್ರಯತ್ನ ವನ್ನು ಭಾರತ ಸರ್ಕಾರ ಮಾಡಿದೆ. ದೋಹಾದಲ್ಲಿ ತಾಲಿಬಾನ್ ನಾಯಕರ ಜತೆಗೆ ಈಗಾಗಲೇ ಮಾತುಕತೆ ನಡೆದಿದೆ. ಅಲ್ಲಿ ಭಾರತದ ಹೂಡಿಕೆ, ಆಫ್ಘನ್​ನ ತಾಲಿಬಾನ್ ಸರ್ಕಾರ ರಾವಲ್ಪಿಂಡಿಯ ಸೂತ್ರದ ಗೊಂಬೆಯಾಗದಂತೆ ತಡೆಯುವುದು, ಪಾಕಿಸ್ತಾನ ಪ್ರಾಯೋಜಿತ ಉಗ್ರರ ಗುಂಪಿಗೆ ತಾಲಿಬಾನ್ ಬೆಂಬಲ ನೀಡದಂತೆ ನೋಡಿಕೊಳ್ಳುವುದು ಭಾರತ ಸರ್ಕಾರಕ್ಕೆ ಆದ್ಯತೆಯ ವಿಚಾರವಾಗಿದೆ. ಈ ಹಿಂದೆ ತಾಲಿಬಾನ್ ಅಧಿಕಾರದಲ್ಲಿದ್ದಾಗ ಭಾರತ ಸರ್ಕಾರದ ಜತೆಗೆ ಉತ್ತಮ ರಾಜತಾಂತ್ರಿಕ ಸಂಬಂಧ ಇತ್ತು.
ಆಫ್ಘನ್ ನೆಲದಲ್ಲಿ ಅಮೆರಿಕ:ಅಮೆರಿಕದಲ್ಲಿ 2001ರ ಸೆಪ್ಟೆಂಬರ್ 11ರ ಉಗ್ರ ದಾಳಿಯ ಕೆಲವು ವಾರಗಳ ಬಳಿಕ ಅಂದಿನ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಆಫ್ಘನ್ ಮೇಲೆ ಸಮರ ಸಾರಿದರು. ಆಗ ಅದರ ಆಡಳಿತ ಚುಕ್ಕಾಣಿ ತಾಲಿಬಾನ್ ಕೈನಲ್ಲಿತ್ತು. ದಾಳಿ ಪಿತೂರಿಕೋರನಾಗಿದ್ದ ಒಸಾಮಾ ಬಿನ್ ಲಾಡೆನ್ ಸೇರಿ ಅಲ್ ಕೈದಾ ನಾಯಕರನ್ನು ಹಸ್ತಾಂತರಿಸುವಂತೆ ಬುಷ್ ಆಗ್ರಹಿಸಿದ್ದರು. ಇದಕ್ಕೆ ತಾಲಿಬಾನ್ ಒಪ್ಪಿರಲಿಲ್ಲ. ಹೀಗಾಗಿ ನ್ಯಾಟೋ ಮೈತ್ರಿ ಮೂಲಕ ಅಮೆರಿಕ ಸೇನೆ ಕ್ಷಿಪ್ರವಾಗಿ ತಾಲಿಬಾನ್ ಆಳ್ವಿಕೆಯನ್ನು ಕೊನೆಗೊಳಿಸಿ, ತಾತ್ಕಾಲಿಕ ಸರ್ಕಾರವನ್ನು ನೇಮಿಸಿತ್ತು. ಲಾಡೆನ್ ಸೇರಿ ಭಯೋತ್ಪಾದಕ ಸಂಘಟನೆಗಳ ನಾಯಕರು ಉಗ್ರರ ಸ್ವರ್ಗ ಪಾಕಿಸ್ತಾನಕ್ಕೆ ಪರಾರಿಯಾದರು. ಉಗ್ರರ ಸಂಪೂರ್ಣ ನಿಮೂಲನೆ ಉದ್ದೇಶದಿಂದ ಆಫ್ಘನ್ ನೆಲದಲ್ಲಿ ಅಮೆರಿಕ ನೆಲೆಯೂರಿತ್ತು.
ಫ್ಯಾಷನ್​ ಡಿಸೈನರ್ ಅಂಗಸೌಷ್ಠವಕ್ಕೆ ಫಿದಾ ಆದ ನೆಟ್ಟಿಗರು; ಈಕೆಯ ವಯಸ್ಸೆಷ್ಟು ಗೊತ್ತಾ?

ಇತ್ತೀಚೆಗೆ ಕೋವಿಡ್​ನಿಂದ ಸತ್ತವರಲ್ಲಿ ಶೇ.99.2 ಮಂದಿ ಲಸಿಕೆ ಪಡೆಯದವರೇ!; ಹೀಗಾಗಿದ್ದು ಎಲ್ಲಿ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
