ಮುಂಬೈ:ಮೈಕ್ರೊಸಾಫ್ಟ್ ಕ್ಲೌಡ್ ಸೇವೆಯಲ್ಲಿ ಶುಕ್ರವಾರ ಜಾಗತಿಕ ಮಟ್ಟದಲ್ಲಿ ಉಂಟಾಗಿದ್ದ ತಾಂತ್ರಿಕ ದೋಷ ಈಗ ಬಹುತೇಕ ನಿಯಂತ್ರಣಕ್ಕೆ ಬಂದಿದ್ದು, ದೇಶಾದ್ಯಂತ ವಿಮಾನ ನಿಲ್ದಾಣಗಳು ಸುಗಮವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ. ತಾಂತ್ರಿಕ ದೋಷ ನಿವಾರಣೆಯಾಗಿದ್ದು, ವಿಮಾನ ಹಾರಾಟ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಹೇಳಿದ್ದಾರೆ.
ಪ್ರಯಾಣದ ಮರುಹೊಂದಾಣಿಕೆ, ರದ್ದಾಗಿರುವ ವಿಮಾನ ಪ್ರಯಾಣದ ಶುಲ್ಕ ಮರುಪಾವತಿ ಇನ್ನಿತರ ಕಾರ್ಯ ನಡೆಯುತ್ತಿದೆ. ಸಚಿವಾಲಯವು ಕಾರ್ಯಾಚರಣೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಶನಿವಾರ ಬೆಳಗ್ಗೆ 3 ಗಂಟೆಯಿಂದಲೇ ಏರ್​ಲೈನ್​ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ ಎಂದು ಅವರು ಹೇಳಿದರು.
ಜಾಗತಿಕ ಸೈಬರ್ ಸೆಕ್ಯುರಿಟಿ ಸಂಸ್ಥೆ ಕ್ರೌಡ್​ಸ್ಟ್ರೈಕ್ ಒದಗಿಸಿದ ತಂತ್ರಾಂಶ ಅಪ್​ಡೇಟ್​ನಿಂದಾಗಿ ಮೈಕ್ರೋಸಾಫ್ಟ್​ನ ವಿಂಡೋಸ್​ನಲ್ಲಿ ಸಮಸ್ಯೆ ಉಂಟಾಗಿತ್ತು. ವಿಮಾನ ಸಂಚಾರ, ಆಸ್ಪತ್ರೆ, ಹಣಕಾಸು ವಲಯದ ಕಂಪನಿ ಸಹಿತ ಹಲವು ಕ್ಷೇತ್ರಗಳಲ್ಲಿ ತೊಂದರೆ ಉಂಟಾಗಿತ್ತು. ದೇಶಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ಲಕ್ಷಾಂತರ ಪ್ರಯಾಣಿಕರು ಪರದಾಡುವಂತಾಗಿತ್ತು. ನೂರಾರು ವಿಮಾನಗಳು ರದ್ದಾದವು. ಇಂಡಿಗೋ, ಸ್ಪೈಸ್​ಜೆಟ್, ಆಕಾಶ ಮತ್ತು ಏರ್ ಇಂಡಿಯಾ ಎಕ್ಸ್​ಪ್ರೆಸ್​ನ ಟಿಕೆಟ್ ಕಾಯ್ದಿರಿಸುವಿಕೆ, ಚೆಕ್-ಇನ್ ವ್ಯವಸ್ಥೆಗಳು ಈಗ ಕಾರ್ಯನಿರ್ವಹಿಸುತ್ತಿವೆ ಎಂದು ಕಂಪನಿಗಳು ಹೇಳಿಕೊಂಡಿವೆ.
ಭಾರತದ ಹಣಕಾಸು ಸಂಸ್ಥೆಗಳು ಸುರಕ್ಷಿತ:ಮೈಕ್ರೋಸಾಫ್ಟ್ ಸಿಸ್ಟಂ ಸ್ಥಗಿತದಿಂದಾಗಿ ಭಾರತದ ಸ್ಟಾಕ್ ಎಕ್ಸ್​ಚೇಂಜ್​ಗಳು, ಕ್ಲಿಯರಿಂಗ್ ಕಾರ್ಪೆರೇಷನ್​ಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಹಲವು ಬ್ರೋಕಿಂಗ್ ಕಂಪನಿಗಳ ಮೇಲೆ ಅಲ್ಪಮಟ್ಟದ ಪರಿಣಾಮ ಉಂಟಾಗಿದೆ. 5 ಪೈಸಾ, ಐಐಎಫ್​ಎಲ್ ಸೆಕ್ಯುರಿಟೀಸ್, ಮೋತಿಲಾಲ್ ಓಸ್ವಾಲ್ ಮತ್ತು ಏಂಜೆಲ್ ಒನ್ ಸೇರಿ ಕೆಲ ಬ್ರೋಕರೇಜ್​ಗಳ ಕಾರ್ಯಾಚರಣೆಗೆ ಅಡಚಣೆ ಆಗಿತ್ತು. ಆದರೆ, ಕೆಲ ಸಮಯದ ನಂತರ ತಮ್ಮ ವ್ಯವಸ್ಥೆಗಳನ್ನು ಪುನಃಸ್ಥಾಪಿಸಲಾಗಿದೆ ಎಂದು ಕಂಪನಿಗಳು ಹೇಳಿಕೊಂಡಿವೆ. ಆದಾಗ್ಯೂ, ಬ್ಯಾಂಕ್​ಗಳು, ಷೇರು ವಿನಿಮಯ ಕೇಂದ್ರಗಳು ಮತ್ತು ಹಣಕಾಸು ಸಂಸ್ಥೆಗಳು, ತಂತ್ರಜ್ಞಾನ ಕಂಪನಿಗಳ ಮೇಲೆ ಇದು ಪರಿಣಾಮ ಬೀರಿಲ್ಲ.

ಬೆಂಗಳೂರು ಏರ್​ಪೋರ್ಟ್ ಸ್ಥಿತಿ ಏನು?:ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ, ಆಕಾಶ, ಸ್ಪೈಸ್​ಜೆಟ್ ಮತ್ತು ಏರ್ ಇಂಡಿಯಾ ಎಕ್ಸ್​ಪ್ರೆಸ್ ಸಂಸ್ಥೆಗಳು ಮ್ಯಾನ್ಯುವಲ್ ಚೆಕ್-ಇನ್​ಗಳನ್ನು ಮೂಲಕವೇ ಶನಿವಾರ ಕೆಲಸ ಆರಂಭಿಸಿದವು. ಸಂಜೆ ವೇಳೆಗೆ ತಾಂತ್ರಿಕ ದೋಷವನ್ನು ಸಂಪೂರ್ಣವಾಗಿ ಪರಿಹರಿಸಲಾಗಿದ್ದು, ಕಾರ್ಯಾಚರಣೆ ಸಹಜ ಸ್ಥಿತಿಗೆ ಮರಳಿದೆ. ಆದಾಗ್ಯೂ, ಶುಕ್ರವಾರ ರದ್ದಾಗಿರುವ ಅನೇಕ ವಿಮಾನಗಳ ಹಾರಾಟ ಮರುಹೊಂದಾಣಿಕೆ ಮಾಡಲಾದ ಪರಿಣಾಮದಿಂದಾಗಿ ಸ್ವಲ್ಪ ದಟ್ಟಣೆ ಕಂಡುಬಂತು. ಕೆಲ ಗಂಟೆಗಳಲ್ಲಿ ಸಹಜ ಸ್ಥಿತಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಸಮಸ್ಯೆ:ಬಹುತೇಕ ನಿಲ್ದಾಣಗಳಲ್ಲಿ ಡಿಜಿ ಯಾತ್ರಾ ಮೂಲಕ ಪ್ರವೇಶವನ್ನು ಸುಗಮಗೊಳಿಸ ಲಾಗಿದೆ. ಆದರೆ ವಿದೇಶಕ್ಕೆ ಪ್ರಯಾಣಿಸುವ ವ್ಯಕ್ತಿಗಳಿಗೆ ಬೋರ್ಡಿಂಗ್ ಪಾಸ್​ಗಳನ್ನು ಪಡೆಯಲು ತೊಂದರೆಯಾಗುತ್ತಿದೆ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಸೈಬರ್ ಭದ್ರತೆ ಚರ್ಚೆ ಮುನ್ನೆಲೆಗೆ:ಶುಕ್ರವಾರ ಉಂಟಾದ ತಾಂತ್ರಿಕ ದೋಷದಿಂದ ವಿಶ್ವಾದ್ಯಂತ ಸೈಬರ್ ಭದ್ರತೆ ವಿಚಾರ ಮುನ್ನೆಲೆಗೆ ಬಂದಿದೆ. ಸಾಮಾನ್ಯವಾಗಿ ಕಂಪ್ಯೂಟರ್ ಸಿಸ್ಟಮ್ಳನ್ನು ಹ್ಯಾಕರ್​ಗಳು ಮತ್ತು ಡೇಟಾ ಕಳ್ಳತನದಿಂದ ರಕ್ಷಿಸಲು ಸೈಬರ್​ಸೆಕ್ಯುರಿಟಿ ಕಂಪನಿ ಕ್ರೌಡ್​ಸ್ಟ್ರೈಕ್ ಸೇವೆಯನ್ನು ಬಳಸಲಾಗುತ್ತದೆ. ಆದರೆ ಈ ಕಂಪನಿಯ ದೋಷಯುಕ್ತ ಸಾಫ್ಟ್​ವೇರ್ ಅಪ್​ಡೇಟ್​ನಿಂದಾಗಿ ವಿಶ್ವದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿರುವುದು ಸೈಬರ್ ಕ್ಷೇತ್ರದಲ್ಲಿ ಆತಂಕಕ್ಕೆ ಕಾರಣವಾಗಿದೆ. ನಾವು ಕೆಲವೇ ಕಂಪನಿಗಳ ಮೇಲೆ ಅವಲಂಬಿತರಾಗಿದ್ದೇವೆ. ಎಲ್ಲರೂ ಒಂದೇ ಕಂಪನಿಯ ಉತ್ಪನ್ನ ಬಳಸುತ್ತಾರೆ. ಹೀಗಾಗಿ ಸಣ್ಣ ದೋಷ ಕಂಡುಬಂದರೂ ಎಲ್ಲವೂ ಬಂದ್ ಆಗುವ ಸ್ಥಿತಿ ನಿರ್ವಣವಾಗುತ್ತದೆ ಎಂದು ಕಾರ್ನೆಲ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಸಹಾಯಕ ಪ್ರಾಧ್ಯಾಪಕ ಗ್ರೆಗೊರಿ ಫಾಲ್ಕೊ ಅಭಿಪ್ರಾಯಪಟ್ಟಿದ್ದಾರೆ.
ಗ್ರಾಹಕರಿಗೆ ತೊಂದರೆಯಾಗಿ ದ್ದಕ್ಕೆ ಕ್ಷಮೆಯಾಚಿಸುತ್ತೇವೆ. ಸಮಸ್ಯೆಯನ್ನು ಗುರುತಿಸಲಾಗಿದ್ದು, ಸರಿಪಡಿಸುವಿಕೆ ಕಾರ್ಯ ನಡೆಯುತ್ತಿದೆ. ಕೆಲವು ವ್ಯವಸ್ಥೆಗಳು ಸಂಪೂರ್ಣ ಸರಿ ಹೋಗಲು ಸಮಯ ತೆಗೆದುಕೊಳ್ಳಬಹುದು. ಗ್ರಾಹಕರ ಭದ್ರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ತಂಡ ಕೆಲಸ ಮಾಡುತ್ತಿದೆ.
| ಜಾರ್ಜ್ ಕರ್ಟ್ಜ್ ಕ್ರೌಡ್​ಸ್ಟ್ರೈಕ್ ಸಿಇಒ
ಗೊಂಡಾ ರೈಲು ದುರಂತಕ್ಕೆ ಕಾರಣವೇನು ಗೊತ್ತಾ? ಅಪಘಾತದ ಪ್ರಾಥಮಿಕ ವರದಿಯಲ್ಲಿ ಕಾರಣ ಬಹಿರಂಗ!

ಜುಲೈ 22ರಿಂದ 250 ಕೇಂದ್ರಗಳಲ್ಲಿ ಎಲ್​ಕೆಜಿ-ಯುಕೆಜಿ ತರಗತಿ ಆರಂಭ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eight =
Remember me
