ಸಿಕಾರ್‌ (ರಾಜಸ್ಥಾನ):ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಈಗ ಎಲ್ಲೆಲ್ಲೂ ವಲಸೆ ಕಾರ್ಮಿಕರ ಬಗ್ಗೆಯೇ ಹೆಚ್ಚು ಸುದ್ದಿಯಾಗುತ್ತಿದೆ. ವಲಸೆ ಕಾರ್ಮಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರಗಳು ಕ್ರಮ ತೆಗೆದುಕೊಳ್ಳುತ್ತಿದ್ದರೂ, ಅವರಿಗೆ ಆಹಾರಕ್ಕೆ ಕೊರತೆ ಆಗದಂತೆ ಎಚ್ಚರಿಕೆ ವಹಿಸುತ್ತಿದ್ದರೂ, ಅಲ್ಲಲ್ಲಿ ಕೆಲವು ಕಹಿ ಘಟನೆಗಳು ನಡೆಯುತ್ತಿವೆ.ಆದರೆ ರಾಜಸ್ಥಾನದ ಸಿಕಾರ್‌ ಗ್ರಾಮದಲ್ಲಿ ನಡೆದ ಘಟನೆ ಮಾತ್ರ ತುಂಬಾ ಖುಷಿಯೂ, ಅಚ್ಚರಿ ತರುವಂಥದ್ದೂ ಹಾಗೂ ವಲಸೆ ಕಾರ್ಮಿಕರಿಗೆ ಶಹಭಾಸ್‌ಗಿರಿ ಕೊಡುವಂಥದ್ದೂ ಆಗಿದೆ.ಇಲ್ಲಿ ನಡೆದಿರುವುದು ಇಷ್ಟೇ. ರಾಜಸ್ಥಾನದಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಸೇರಿದಂತೆ ಅನೇಕ ಕಡೆಗಳಿಂದ ವಲಸೆ ಕಾರ್ಮಿಕರು ಬರುತ್ತಿರುತ್ತಾರೆ. ಅಕ್ಕ ಪಕ್ಕದ ರಾಜ್ಯಗಳಿಗೆ ಕೂಲಿ ಕೆಲಸಕ್ಕೆ ಹೋಗುವವರ ಕೂಡ ರಾಜಸ್ಥಾನದ ಮಾರ್ಗವಾಗಿಯೇ ಹೋಗಿ – ಬರುವುದು ನಡೆದೇ ಇರುತ್ತದೆ. ಆದರೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನೂರಾರು ಕಾರ್ಮಿಕರು ರಾಜಸ್ಥಾನದಲ್ಲಿಯೇ ಉಳಿದು ಬಿಟ್ಟರು.ಇವರಿಗೆ ಸಿಕಾರ್‌ ಗ್ರಾಮದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಪಾಲ್ಸಾನಾದ ಸರ್ಕಾರಿ ಶಾಲೆಯನ್ನು ಅವರಿಗೆ ಬಿಟ್ಟುಕೊಡಲಾಗಿದೆ. ಇಲ್ಲಿ ಇರುವವರ ಪೈಕಿ ಹೆಚ್ಚಿನವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.ಸರ್ಕಾರ ವಲಸೆ ಕಾರ್ಮಿಕರ ನೆರವಿಗೆ ಸರ್ಕಾರ ಧಾವಿಸುವುದಾಗಿ ಹೇಳಿದರೂ, ಮಹಿಳೆ, ಮಕ್ಕಳನ್ನೆಲ್ಲಾ ಕಂಡ ಗ್ರಾಮದ ಮುಖಂಡನ (ಸರ್‌ಪಂಚ್‌) ಮನಸ್ಸು ಕರಗಿತು. ಈ ಕಾರ್ಮಿಕರು ಜನರಿಗಾಗಿ ಎಷ್ಟೊಂದು ಕೆಲಸ ಮಾಡುತ್ತಾರೆ, ಹಾಗಿರುವಾಗ ನಮ್ಮ ಗ್ರಾಮದ ಅತಿಥಿ ಇವರು. ತಮ್ಮಿಂದ ಒಂದಿಷ್ಟಾದರೂ ಸಹಾಯ ಆಗಬೇಕಲ್ಲ ಎಂದುಕೊಂಡ ಸರ್‌ಪಂಚ್‌, ಶಾಲೆಯಲ್ಲಿ ವಲಸಿಗರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಂಡರು. ಗ್ರಾಮದ ಮುಖಂಡನೇ ಮುಂದೆ ಬಂದಾಗ ಗ್ರಾಮಸ್ಥರು ಸುಮ್ಮನೆ ಕುಳಿತುಕೊಳ್ಳುತ್ತಾರೆಯೇ? ಅವರೂ ಕೈಜೋಡಿಸಿದರು.ಹೇಳಿ ಕೇಳಿ ಕಾರ್ಮಿಕರಿವರು. ದಿನಪೂರ್ತಿ ದುಡಿಯುವ ಈ ಜೀವಕ್ಕೆ ಸುಮ್ಮನೆ ಕುಳಿತುಕೊಳ್ಳಲು ಆದೀತೆ? ಮೇಲಾಗಿ ಗ್ರಾಮಸ್ಥರಿಂದ ಎಷ್ಟು ಒಳ್ಳೆಯ ಉಪಚಾರ. ಯಾವುದೇ ಫಲಾಪೇಕ್ಷೆ ಇಲ್ಲದೇ ಉಪಚರಿಸುವ ಗ್ರಾಮಸ್ಥರನ್ನು ಕಂಡ ಕಾರ್ಮಿಕರಿಗೆ ಮಾತೇ ಹೊರಡಲಿಲ್ಲ. ಪ್ರತಿಯಾಗಿ ತಾವೂ ಏನಾದರೂ ನೆರವಾಗಿ ಬೇಕು ಎಂದುಕೊಂಡರು. ಆದರೆ ಹೇಗೆ? ತಮ್ಮ ಬಳಿ ಕೊಡಲು ಏನಿದೆ ಎಂದುಕೊಂಡಾಗ ಅವರಿಗೆ ಕಂಡದ್ದು ತಾವು ಉಳಿದುಕೊಂಡಿರುವ ಶಾಲೆ.ಆಗ ಅವರೆಲ್ಲಾ ಚರ್ಚಿಸಿದರು. ಪ್ಲ್ಯಾನ್‌ ಮಾಡಿಕೊಂಡೇ ಬಿಟ್ಟರು. ಅಷ್ಟೇ ನೋಡಿ. ಸುಣ್ಣ ಬಣ್ಣ ಕಾಣದೇ ಅದೆಷ್ಟೋ ವರ್ಷಗಳಿಂದ ಪಾಳು ಬಿದ್ದಂತಿದ್ದ ಅವರು ಉಳಿದುಕೊಂಡ ಸರ್ಕಾರಿ ಶಾಲೆಯೀಗ ಸುಣ್ಣ ಬಣ್ಣಗಳಿಂದ ಝಗಮಗಿಸುತ್ತಿದೆ. ಅದು ತಮ್ಮದೇ ಸರ್ಕಾರಿ ಶಾಲೆ ಎಂದು ಗ್ರಾಮಸ್ಥರು ಕೂಡ ಅಚ್ಚರಿ ಪಡುವಷ್ಟರ ಮಟ್ಟಿಗೆ ಶಾಲೆ ಗೋಚರಿಸುತ್ತಿದೆ.ತಾವು ಶಾಲೆಗೆ ಪೇಂಟಿಂಗ್‌ ಮಾಡುವ ಬಗ್ಗೆ ಗ್ರಾಮದ ಮುಖ್ಯಸ್ಥರಲ್ಲಿ ಚರ್ಚಿಸಿದ ಅವರು, ತಮಗೆ ಬೇಕಾಗಿರುವ ಸಾಮಗ್ರಿಗಳನ್ನು ತರಿಸಿಕೊಡುವಂತೆ ಮನವಿ ಮಾಡಿದರು. ಹೀಗೊಂದು ಅಚ್ಚರಿ ನಡೆಯುತ್ತದೆ ಎಂದು ಅರಿವಿಲ್ಲದ ಮುಖ್ಯಸ್ಥರು ಅವರಿಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ತರಿಸಿ ಕೊಟ್ಟರು.ಅದರ ಫಲವಾಗಿ ಕಳೆದ ಒಂಬತ್ತು ವರ್ಷಗಳಿಂದ ಪಾಳುಬಿದ್ದಿದ್ದ ಶಾಲೆಗೀಗ ಕಳೆ ಬಂದಿದೆ. ಇಂಥ ಒಂದು ಮ್ಯಾಜಿಕ್‌ ಮಾಡಿದ ಕಾರ್ಮಿಕರಿಗೆ ಸರ್‌ಪಂಚ್‌ ಅವರು ಹಣ ನೀಡಲು ಹೋದಾಗ ಅವರು ನಿರಾಕರಿಸಿದರು ಎನ್ನಲಾಗಿದೆ. ತಮಗೆ ದೊರೆತ ಉತ್ತಮ ಸೇವೆಗೆ ಪ್ರತಿಯಾಗಿ ಈ ಸೇವೆಯನ್ನು ಮಾಡಿದ್ದೇವೆ, ನಮಗೆ ದಯವಿಟ್ಟು ಹಣ ಕೊಡಬೇಡಿ ಎಂದಿದ್ದಾರೆ ಎಂಬುದಾಗಿ ವರದಿಯಾಗಿದೆ.(ಏಜೆನ್ಸೀಸ್‌)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
