ನವದೆಹಲಿ: ಮದ್ಯ ತಯಾರಿಕೆ ಅಥವಾ ಮಾನವ ಸೇವನೆಗೆ ಬಳಸಲಾಗುವ ಎಕ್ಸ್​ಟ್ರಾ ನ್ಯೂಟ್ರಲ್ ಆಲ್ಕೋಹಾಲ್ (ಇಎನ್​ಎ) ಮೇಲೆ ತೆರಿಗೆ ವಿಧಿಸುವ ಹಕ್ಕನ್ನು ಜಿಎಸ್​ಟಿ ಮಂಡಳಿಯು ರಾಜ್ಯಗಳಿಗೆ ಬಿಟ್ಟುಕೊಟ್ಟಿದೆ. ಶನಿವಾರ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿಯ 52ನೇ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
‘ಮಾನವ ಬಳಕೆಯ ಇಎನ್​ಎಯನ್ನು (ಕುಡಿಯಬಹುದಾದ ಆಲ್ಕೋಹಾಲ್) ಜಿಎಸ್​ಟಿಯಿಂದ ಹೊರತುಪಡಿಸಲಾಗುತ್ತದೆ ಹಾಗೂ ಈ ಬಗ್ಗೆ ಸುಪ್ರೀಂ ಕೋರ್ಟ್​ಗೆ ಮಾಹಿತಿ ನೀಡಲಾಗುತ್ತದೆ ಎಂದು ಜಿಎಸ್​ಟಿ ಮಂಡಳಿ ಸಭೆಯ ನಂತರ ಛತ್ತೀಸ್​ಗಢ ಉಪ ಮುಖ್ಯಮಂತ್ರಿ ಟಿ.ಎಸ್. ಸಿಂಗ್ ದೇವ್ ತಿಳಿಸಿದರು. ಆದರೆ, ಕೈಗಾರಿಕಾ ಉದ್ದೇಶಗಳಿಗೆ ತಯಾರಿಸುವ ಇಎನ್​ಎ ಎಂದಿನಂತೆ ಜಿಎಸ್​ಟಿ ವ್ಯಾಪ್ತಿಗೆ ಬರುತ್ತದೆ. ಇದಕ್ಕೆ ಶೇ.18 ಜಿಎಸ್​ಟಿ ವಿಧಿಸಲಾಗುತ್ತದೆ ಎಂದು ಸಿಂಗ್ ದೇವ್ ಸ್ಪಷ್ಟಪಡಿಸಿದರು. ಇನ್ನೊಂದೆಡೆ, ಕಾಕಂಬಿ (ಮೊಲ್ಯಾಸಿಸ್) ಮೇಲಿನ ಜಿಎಸ್​ಟಿಯನ್ನು ಹಾಲಿ ಶೇ.28ರಿಂದ ಶೇ.5ಕ್ಕೆ ಇಳಿಸಲು ಮಂಡಳಿ ನಿರ್ಧರಿಸಿದ್ದು ಸಭೆಯ ಇನ್ನೊಂದು ಮಹತ್ವದ ಅಂಶವಾಗಿದೆ.
ಕಬ್ಬು ಬೆಳೆಗಾರರಿಗೆ ಅನುಕೂಲ:ಕಾಕಂಬಿ ಮೇಲಿನ ಜಿಎಸ್​ಟಿಯನ್ನು ಶೇ. 5ಕ್ಕೆ ಇಳಿಸಿದ್ದರಿಂದ ಕಬ್ಬು ಬೆಳೆಗಾರರಿಗೆ ಲಾಭವಾಗಲಿದೆ. ಕಬ್ಬು ಬೆಳೆಯುವ ರೈತರ ಬಾಕಿಗಳನ್ನು ತ್ವರಿತವಾಗಿ ಪಾವತಿಸಲೂ ಇದರಿಂದ ಸಹಾಯವಾಗುತ್ತದೆ. ಸಕ್ಕರೆ ಕಾರ್ಖಾನೆಗಳಲ್ಲಿ ಹೆಚ್ಚು ಹಣ ಉಳಿಯುವುದೇ ಇದಕ್ಕೆ ಕಾರಣ.
ಹಸುಗಳ ಮೇವು ಉತ್ಪಾದನೆಯ ವೆಚ್ಚ ತಗ್ಗಿಸಲು ಕೂಡ ಇದು ನೆರವಾಗಲಿದೆ ಎಂಬುದು ಮಂಡಳಿ ಮತ್ತು ತಮ್ಮ ಅಭಿಪ್ರಾಯವಾಗಿದೆ. ಇದೊಂದು ಪ್ರಮುಖ ಬೆಳವಣಿಗೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ವಿವರಿಸಿದರು.
ಗರಿಷ್ಠ ವಯಸ್ಸು:ಜಿಎಸ್​ಟಿ ಮೇಲ್ಮನವಿ ಟ್ರಿಬ್ಯುನಲ್​ಗಳ (ಜಿಎಸ್​ಟಿಎಟಿ) ಅಧ್ಯಕ್ಷರು ಹಾಗೂ ಸದಸ್ಯರ ಗರಿಷ್ಠ ವಯೋಮಿತಿಯನ್ನು ಅನುಕ್ರಮವಾಗಿ 70 ವರ್ಷ ಹಾಗೂ 67 ವರ್ಷಕ್ಕೆ ನಿಗದಿಪಡಿಸಲೂ ಸಭೆ ನಿರ್ಧರಿಸಿತು. ಪ್ರಸ್ತುತ ಅದು ಅನುಕ್ರಮವಾಗಿ 67 ಮತ್ತು 65 ವರ್ಷವಾಗಿದೆ. 10 ವರ್ಷದ ವರೆಗೆ ಅನುಭವವಿರುವ ವಕೀಲರು ಟ್ರಿಬ್ಯುನಲ್ ಸದಸ್ಯರಾಗಲು ಅರ್ಹರಾಗಿರುತ್ತಾರೆ.
ಕೇಂದ್ರ ಹಣಕಾಸು ರಾಜ್ಯ ಸಚಿವ ಎಂ.ಪಿ. ಪೂನಿಯಾ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೆಶಗಳ ವಿತ್ತ ಸಚಿವರು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಭಾರತೀಯ ತೆರಿಗೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಗುರುತಿಸಿ ಅದಕ್ಕೆ ಪರಿಹಾರೋಪಾಯ ಕಂಡುಕೊಳ್ಳುವುದನ್ನು ರ್ಚಚಿಸಲು ಮಂಡಳಿಯ 52ನೇ ಸಭೆಯನ್ನು ಆಯೋಜಿಸಲಾಗಿತ್ತು.
ಶೇ. 28 ತೆರಿಗೆ:ಆನ್​ಲೈನ್ ಗೇಮಿಂಗ್ ಕಂಪನಿಗಳು ಮತ್ತು ಕ್ಯಾಸಿನೋಗಳ ಮೇಲೆ ಪೂರ್ವಾನ್ವಯವಾಗಿ ತೆರಿಗೆ ವಿಧಿಸುವ ವಿಚಾರವನ್ನು ಅನುಕ್ರಮವಾಗಿ ದೆಹಲಿ ಮತ್ತು ಗೋವಾ ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ, ಈ ಮೊದಲೇ ಈ ತೆರಿಗೆ ವಿಧಿಸಲಾಗುತ್ತಿತ್ತು ಈಗ ಅದನ್ನು ಶೇ.28 ಎಂದು ನಿಗದಿ ಮಾಡಲಾಗಿದೆ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಶನಿವಾರ ಹೇಳಿದ್ದಾರೆ.
ರಾಜ್ಯಗಳ ನಿಲುವಿಗೆ ಸ್ವಾಗತ:ಇಎನ್​ಎ ಮೇಲೆ ರಾಜ್ಯಗಳು ತೆರಿಗೆ ವಿಧಿಸುವುದಾದರೆ ನಾವದನ್ನು ಸ್ವಾಗತಿಸುತ್ತೇವೆ. ತೆರಿಗೆ ಹೇರದಿರುವ ನಿರ್ಧಾರ ಕೈಗೊಳ್ಳುವುದು ಕೂಡ ರಾಜ್ಯಗಳ ವಿವೇಚನೆಗೆ ಬಿಟ್ಟದ್ದಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇಎನ್​ಎ ಮೇಲೆ ತೆರಿಗೆ ವಿಧಿಸುವುದು ಜಿಎಸ್​ಟಿ ವ್ಯಾಪ್ತಿಗೆ ಬರುತ್ತದಾದರೂ ಮಂಡಳಿ ಆ ಬಗ್ಗೆ ನಿರ್ಧಾರ ಕೈಗೊಳ್ಳುವುದಿಲ್ಲ ಎಂದರು. ಆದ್ದರಿಂದ ರಾಜ್ಯಗಳ ಹಿತದೃಷ್ಟಿಯಿಂದ ಆ ಹಕ್ಕನ್ನು ರಾಜ್ಯಗಳಿಗೆ ಬಿಟ್ಟು ಕೊಡಲಾಗಿದೆ. ಈ ಬಗ್ಗೆ ರಾಜ್ಯಗಳು ಯಾವುದೇ ನಿಲುವು ತಳೆದರೂ ಅದನ್ನು ಸ್ವಾಗತಿಸಲಾಗುವುದು ಎಂದು ವಿವರಿಸಿದರು.
ಬಾಕಿ ಜಿಎಸ್ಟಿ ಪರಿಹಾರ ಬಿಡುಗಡೆಗೆ ನಿರ್ದೇಶನ:ಕರ್ನಾಟಕಕ್ಕೆ ಕೇಂದ್ರದಿಂದ ಬರಬೇಕಿರುವ ಬಾಕಿ ಜಿಎಸ್ಟಿ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಂದಾಯ ಸಚಿವ ಕೃಷ್ಣಭೈರೇಗೌಡ -ಠಿ;2,333 ಕೋಟಿ ಜಿಎಸ್ಟಿ ಪರಿಹಾರ ಬಾಕಿ ಬಗ್ಗೆ ಪ್ರಸ್ತಾಪಿಸಿದರು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಗಮನಹರಿಸುವಂತೆ ಹಣಕಾಸು ಸಚಿವೆ ನಿರ್ದೇಶಿಸಿದರು.
ಸಿರಿಧಾನ್ಯದ ಹಿಟ್ಟುಗಳ ಮೇಲಿನ ಜಿಎಸ್ಟಿ ವಿನಾಯಿತಿಗೆ ಹಿಂದಿನ ಸಭೆಯಲ್ಲೇ ಹಣಕಾಸು ಸಚಿವರ ಗಮನ ಸೆಳೆದಿದ್ದೆ. ಹೀಗಾಗಿ ಮಂಡಳಿ ವಿನಾಯಿತಿ ಪ್ರಕಟಿಸಿದೆ. ಈ ಬೇಡಿಕೆಗೆ ಹಲವು ರಾಜ್ಯಗಳು ಬೆಂಬಲಿಸಿದ್ದವು ಎಂದು ತಿಳಿಸಿದರು.
ಕಾಪೋರೇಟ್ ಖಾತ್ರಿಗೆ 18% ತೆರಿಗೆ:ಕಾರ್ಪೆರೇಟ್ ಕಂಪನಿಗಳು ತಮ್ಮ ಅಂಗಸಂಸ್ಥೆಗಳಿಗೆ ನೀಡುವ ಕಾರ್ಪೆರೇಟ್ ಗ್ಯಾರಂಟಿ ಮೇಲೆ ಶೇ.18 ಜಿಎಸ್​ಟಿ ವಿಧಿಸಲು ಮಂಡಳಿ ನಿರ್ಧರಿಸಿದೆ. ಜತೆಗೆ, ಸಿರಿಧಾನ್ಯಗಳ ಹಿಟ್ಟಿನ ಮೇಲಿನ ತೆರಿಗೆಯನ್ನು ತೆಗೆದು ಹಾಕಿದೆ. ನಿರ್ದೇಶಕರು ಕಂಪನಿಗೆ ಒದಗಿಸುವ ವೈಯಕ್ತಿಕ ಖಾತರಿ ಮೇಲೆ ಯಾವುದೇ ತೆರಿಗೆ ಹೇರಲಾಗುವುದಿಲ್ಲ ಸ್ಪಷ್ಟಪಡಿಸಿದೆ. ಕಂಪನಿಯೊಂದಕ್ಕೆ ನಿರ್ದೇಶಕರು ಕಾರ್ಪೆರೇಟ್ ಗ್ಯಾರಂಟಿ ಒದಗಿಸಿದಾಗ ಸೇವೆಯ ಮೌಲ್ಯ ಶೂನ್ಯವಾಗಿರುತ್ತದೆ ಹೀಗಾಗಿ ಅದಕ್ಕೆ ತೆರಿಗೆ ವಿಧಿಸದಿರಲು ನಿರ್ಧರಿಸಿದೆ. ಸಿರಿಧಾನ್ಯಗಳ ಹಿಟ್ಟಿನಿಂದ ತಯಾರಿಸುವ ಆಹಾರದ ಮೇಲಿನ ಜಿಎಸ್​ಟಿಯನ್ನು ಈಗಿನ ಶೇಕಡ 18ರಿಂದ ಶೇಕಡ 5ಕ್ಕೆ ಇಳಿಸಲಾಗಿದೆ. ಆದರೆ, ಪ್ಯಾಕೇಜ್ ಮೂಲಕ ಮಾರಾಟ ಮಾಡಲಾಗುವ ಸಿರಿಧಾನ್ಯದ ಹಿಟ್ಟಿಗೆ ಶೇ.5 ತೆರಿಗೆ ಇರಲಿದೆ ಎಂದು ಮಂಡಳಿ ತಿಳಿಸಿದೆ.
ನಮಸ್ಕಾರ ದೇವ್ರು.. ಇಲ್ಲಿ ದೇವ್ರದ್ದೇ ಬ್ಯಾಟಿಂಗ್​-ಫೀಲ್ಡಿಂಗ್​!; ಡಾ.ಬ್ರೋ ಭೇಟಿ ನೀಡಿರುವ ಈ ಕ್ರಿಕೆಟ್ ದೇವಸ್ಥಾನ ಎಲ್ಲಿದೆ?

ಚಂದ್ರಯಾನ, ಸೌರಯಾನದ ಬಳಿಕ ಮತ್ತೊಂದು ಯಾನಕ್ಕೂ ಸಿದ್ಧವಾದ ಇಸ್ರೋ; ಇಲ್ಲಿದೆ ವಿವರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 2 =
Remember me
