ನವದೆಹಲಿ: ಚೀನಿ ಪಡೆಗಳು ಗಡಿ ಅತಿಕ್ರಮಿಸಿಲ್ಲ ಅಥವಾ ನಮ್ಮ ಯಾವುದೇ ಗಡಿ ಮುಂಚೂಣಿ ಚೌಕಿಯನ್ನು ವಶಪಡಿಸಿಕೊಂಡಿಲ್ಲ. ಆದರೆ, ಭಾರತಾಂಬೆಯನ್ನು ಕೆಣಕಿ, 20 ವೀರಪುತ್ರರನ್ನು ಹತ್ಯೆ ಮಾಡಿದವರಿಗೆ ತಕ್ಕ ಪಾಠ ಕಲಿಸದೇ ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದರು.
ಪೂರ್ವ ಲಡಾಖ್​ನ ಗಲ್ವಾನ್ ಕಣಿವೆಯ 14ನೇ ಪಾಯಿಂಟ್​ನಲ್ಲಿ ನಡೆದ ಘರ್ಷಣೆಯಿಂದ 20 ಯೋಧರು ಹುತಾತ್ಮರಾದ ಘಟನೆ ನಂತರ ಚೀನಾ ಬಿಕ್ಕಟ್ಟು ಕುರಿತು ರ್ಚಚಿಸಲು ಶುಕ್ರವಾರ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಅವರು ಮಾತನಾಡಿದರು.
ಈಗ ಭಾರತ ಸರ್ವಶಕ್ತವಾಗಿದೆ. ಒಂದಿಂಚು ಭೂಮಿಯನ್ನೂ ಯಾರೂ ಕಸಿದುಕೊಳ್ಳಲಾಗದು. ರಕ್ಷಣಾ ಪಡೆಗಳು ಏಕಕಾಲಕ್ಕೆ ಬಹುವಲಯಗಳಿಗೆ ಮುನ್ನುಗ್ಗುವಂತಹ ಸಾಮರ್ಥ್ಯ ಹೊಂದಿವೆ ಎಂದರು. ಎಲ್​ಎಸಿಯಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳು ಬಗ್ಗೆ ಮಾಹಿತಿ ದೊರಕುತ್ತಿತ್ತು. ಈ ಹಿಂದೆ ನಾವು ಗಮನಿಸಿದ ವಲಯಗಳ ಬಗೆಯೂ ಮಾಹಿತಿ ಲಭ್ಯವಾಗುತ್ತಿದೆ. ನಮ್ಮ ಸೇನೆ ಈಗ ಪರಿಣಾಮಕಾರಿಯಾಗಿ ಗಡಿಯಲ್ಲಿ ನಿಗಾ ಇರಿಸಿ, ಎದುರಾಳಿಗಳ ಚೇಷ್ಟೆಗೆ ಸೂಕ್ತ ಪ್ರತಿಕ್ರಿಯೆಯನ್ನೂ ನೀಡುತ್ತಿದೆ. ದೇಶ ರಕ್ಷಣೆಯ ವಿಷಯದಲ್ಲಿ ಸೇನೆಯನ್ನು ಯಾರೂ ತಡೆಯುತ್ತಿಲ್ಲ. ಸೂಕ್ತ ಕ್ರಮಕೈಗೊಳ್ಳಲು ಸೇನೆಗೆ ಮುಕ್ತ ಅಧಿಕಾರ ನೀಡಲಾಗಿದೆ ಎಂದರು. ಪೂರ್ವ ಲಡಾಖ್​ನ ಗಡಿ ವಿಷಯದಲ್ಲಿ ಬೇಹುಗಾರಿಕೆಯ ಪೋಲವಾಗಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಸ್ಪಷ್ಟನೆ ನೀಡಿದರು.
ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕಾಂಗ್ರೆಸ್. ಟಿಎಂಸಿ, ಎಐಎಡಿಎಂಕೆ, ಡಿಎಂಕೆ, ಟಿಆರ್​ಎಸ್, ಜೆಡಿಯು, ಬಿಜೆಡಿ, ಎಲ್​ಜೆಪಿ, ಬಿಎಸ್​ಪಿ, ಎಸ್​ಪಿ, ಶಿವಸೇನೆ, ಎಸ್​ಸಿಪಿ ಸೇರಿದಂತೆ ವಿವಿಧ ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷರು ಅಥವಾ ಅವರ ಪ್ರತಿನಿಧಿಗಳು ಭಾಗವಹಿಸಿದ್ದರು.
ಎಎಪಿ, ಆರ್​ಜೆಡಿಗೆ ಆಹ್ವಾನ ಇಲ್ಲ
ಸರ್ವ ಪಕ್ಷಗಳ ಸಭೆಗೆ ಆಮ್ ಆದ್ಮಿ ಪಾರ್ಟಿ (ಆಪ್), ಬಿಹಾರ ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಅಸಾದುದ್ದಿನ್ ಓವೈಸಿ ನೇತೃತ್ವ ಎಂಐಎಂ ಪಕ್ಷಗಳನ್ನು ಆಹ್ವಾನಿಸದೇ ಇರುವ ಕೇಂದ್ರ ಸರ್ಕಾರ ಧೋರಣೆಗೆ ರಾಜಕೀಯ ವಲಯಗಳಿಂದ ಟೀಕೆ ವ್ಯಕ್ತವಾಗಿದೆ. ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಕನಿಷ್ಠ ಐವರು ಸಂಸದರಿರುವ ಪಕ್ಷಗಳಿಗೆ ಮಾತ್ರ ಸರ್ವ ಪಕ್ಷ ಸಭೆಗೆ ಆಹ್ವಾನ ನೀಡಬೇಕು ಎಂಬ ನಿಯಮವನ್ನು ಕೇಂದ್ರ ಹಾಕಿಕೊಂಡಿದೆ. ಇದೇ ಕಾರಣಕ್ಕಾಗಿ ಈ ಮೂರು ಪಕ್ಷಗಳನ್ನು ಸಭೆಗೆ ಆಹ್ವಾನಿಸಲಿಲ್ಲ ಎಂದು ಹೇಳಲಾಗಿದೆ. ಬಿಹಾರದಲ್ಲಿ ಆರ್​ಜೆಡಿ ಮತ್ತು ದಿಲ್ಲಿಯಲ್ಲಿ ಆಪ್ ದೊಡ್ಡ ಪಕ್ಷಗಳಾಗಿ ಹೊರಹೊಮ್ಮಿವೆ. ಹೀಗಿರುವಾಗ ರಾಜ್ಯಸಭೆ, ಲೋಕಸಭೆ ಪ್ರಾತಿನಿಧಿತ್ವವನ್ನು ಮಾತ್ರ ಪರಿಗಣಿಸುವುದು ಎಷ್ಟು ಸರಿ ಎಂಬುದು ಅನೇಕರ ಪ್ರಶ್ನೆ. ಗಡಿ ಬಿಕ್ಕಟ್ಟಿನ ವಿಷಯದಲ್ಲಿ ನಾವು ಕೇಂದ್ರದೊಂದಿಗಿದ್ದೇವೆ ಎಂದು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದರೆ, ಪಕ್ಷದ ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್ ಕೇಂದ್ರದ ವರ್ತನೆಗೆ ಕಿಡಿಕಾರಿದ್ದಾರೆ. ಆರ್​ಜೆಡಿ ಮುಖಂಡ ತೇಜಸ್ವಿ ಯಾದವ್ ಟ್ವಿಟ್ಟರ್​ನಲ್ಲಿ ಅಸಮಾಧಾನ ಹೊರಹಾಕಿದ್ದರೆ, ಎಂಐಎಂ ಮುಖಂಡ ಅಸಾದುದ್ದಿನ್ ಓವೈಸ್, ಪ್ರಧಾನಿಗೆ ಪತ್ರ ಬರೆದು ತಕ್ಷಣವೇ ಸಂಸತ್ ಅಧಿವೇಶನ ಕರೆದು ಈ ಬಗ್ಗೆ ರ್ಚಚಿಸಿ ಎಂದು ಆಗ್ರಹಿಸಿದ್ದಾರೆ.
ಚೀನಾ ಕಂಪನಿಗಳಿಗೆ ದೂರಸಂಪರ್ಕ, ರೈಲ್ವೆ, ವಿಮಾನಯಾನ ವಲಯಕ್ಕೆ ಪ್ರವೇಶ ನೀಡಬೇಡಿ. ಇದರಿಂದ ಕೆಲವು ಸಮಸ್ಯೆಗಳು ಎದುರಾಗಬಹುದು. ಆದರೂ ಚೀನಾ ಕಂಪನಿಗಳಿಗೆ ಪ್ರವೇಶ ಬೇಡ| ಮಮತಾ ಬ್ಯಾನರ್ಜಿಟಿಎಂಸಿ ಅಧ್ಯಕ್ಷೆ, ಪಶ್ಚಿಮ ಬಂಗಾಳ ಸಿಎಂ
ಸರ್ಕಾರ ಮಾಹಿತಿ ಹಂಚಿಕೊಳ್ಳಲಿ
ಪೂರ್ವ ಲಡಾಖ್​ನ ಪ್ಯಾಂಗೊಂಗ್ ತ್ಸೊ ಸರೋವರದ ಎಲ್​ಎಸಿ ಬಳಿ ಕಳೆದ ಮೇ 5ರಂದು ಉಭಯ ಸೇನೆಗಳ ಮಧ್ಯೆ ಘರ್ಷಣೆ ನಡೆದ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ ನಡೆಸಬೇಕಿತ್ತು. ಆಗ ಸರ್ಕಾರದ ನಡೆಯ ಬಗ್ಗೆ ಯಾವುದೇ ಸಂಶಯ ಮೂಡುತ್ತಿರಲಿಲ್ಲ. ಇಡೀ ದೇಶ ಸರ್ಕಾರ ಬೆಂಬಲಕ್ಕೆ ನಿಲ್ಲುತ್ತಿತ್ತು. ಆದರೆ, ಸರ್ಕಾರ ಈ ಕೆಲಸ ಮಾಡಲಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದೂರಿದರು. ಈಗಲಾದರೂ ಚೀನಾ ಗಡಿಯಲ್ಲಿ ಕಳೆದ ಏಪ್ರಿಲ್​ನಿಂದ ಏನಾಗಿದೆ ಎಂಬ ಮಾಹಿತಿಯನ್ನು ಪ್ರಧಾನಿ ಹಂಚಿಕೊಳ್ಳಬೇಕು ಎಂದು ಸೋನಿಯಾ ಗಾಂಧಿ ಒತ್ತಾಯಿಸಿದರು. ಈಗ ಮುಂದೇನು ಎಂಬ ಪ್ರಶ್ನೆ ದೇಶದ ಮುಂದೆ ಇದೆ. ಮೊದಲು ಚೀನಿ ಪಡೆಗಳು ಎಲ್​ಎಸಿಯಿಂದ ಹಿಂದೆ ಸರಿದು ತಮ್ಮ ಮೊದಲಿನ ಸ್ಥಾನಕ್ಕೆ ಹೋಗಬೇಕು ಎಂದು ಸೋನಿಯಾ ಸಲಹೆ ನೀಡಿದರು. ದೇಶದ ರಕ್ಷಣಾ ಪಡೆಗಳ ಮೇಲೆ ಕಾಂಗ್ರೆಸ್ ಸೇರಿದಂತೆ ಎಲ್ಲ ವಿರೋಧ ಪಕ್ಷಗಳು ವಿಶ್ವಾಸ ಹೊಂದಿವೆ. ಯೋಧರು ಯಾವುದೇ ಗರಿಷ್ಠ ಬೆಲೆ ತೆತ್ತಾದರೂ ತಾಯ್ನೆಲವನ್ನು ರಕ್ಷಿಸುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಬಿಕ್ಕಟ್ಟು ನಿವಾರಣೆಯ ಸಂದರ್ಭದಲ್ಲಿ ಸರ್ಕಾರ ಪ್ರತಿಪಕ್ಷ ಮತ್ತು ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು. ಗಡಿ ವಿಷಯದಲ್ಲಿ ಮುಚ್ಚುಮರೆ ಮಾಡಬಾರದು ಎಂದರು.
ಸರ್ಕಾರದ ಗಾಢನಿದ್ರೆಗೆ ಗಡಿಯಲ್ಲಿ ನಮ್ಮ ಯೋಧರು ಬೆಲೆ ತೆರುತ್ತಿದ್ದಾರೆ. ಚೀನಾ ಯೋಧರು ಪೂರ್ವಯೋಜಿತವಾಗಿ ದಾಳಿ ನಡೆಸಿರುವುದು ಸ್ಪಷ್ಟವಾದರೂ ನಿದ್ರೆಯಲ್ಲಿರುವ ಸರ್ಕಾರ ಸಮಸ್ಯೆಯೇ ಇಲ್ಲವೆನ್ನುತ್ತಿದೆ.| ರಾಹುಲ್ ಗಾಂಧಿಕಾಂಗ್ರೆಸ್ ನಾಯಕ
ಅನ್ಯದೇಶಗಳ ಭೂಕಬಳಿಕೆಯ ದುರಾಸೆಯಿಂದಲೇ ಚೀನಿ ಯೋಧರು ಭಾರತದಲ್ಲಿ ಗಡಿ ಉಲ್ಲಂಘನೆ ಮಾಡಿದ್ದಾರೆ. ಇದರಿಂದಲೇ ಹಿಂಸಾತ್ಮಕ ಘಟನೆಗಳು ನಡೆದಿವೆ. ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಗೂ ಚೀನಾದಿಂದ ಬೆದರಿಕೆ ಇದೆ.| ಮಿಚ್ ಮೆಕ್​ಕಾನ್ನೆಲ್ಅಮೆರಿಕದ ಸಂಸದ
ಕಾಶ್ಮೀರದಲ್ಲಿ ಪಾಕ್ ಸಂಚುಭಾರತ ಮತ್ತು ಚೀನಾ ನಡುವೆ ತೀವ್ರ ಸಂಘರ್ಷ ಏರ್ಪಟ್ಟಿರುವ ಪರಿಸ್ಥಿತಿ ದುರ್ಲಾಭ ಪಡೆದು ಜಮ್ಮು-ಕಾಶ್ಮೀರಕ್ಕೆ ಉಗ್ರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನುಸುಳಿಸಲು ಪಾಕ್ ಸಂಚು ನಡೆಸುವ ಸಾಧ್ಯತೆ ಹೆಚ್ಚಿದೆ ಎಂದು ಜಮ್ಮು-ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್​ಬಾಗ್ ಸಿಂಗ್ ತಿಳಿಸಿದ್ದಾರೆ. ಈಗ ಭಾರತದ ಗಮನ ಪೂರ್ವದ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್​ಎಸಿ) ಕಡೆ ಇರುವುದರಿಂದ ಪಶ್ಚಿಮದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್​ಒಸಿ) ಉಗ್ರರನ್ನು ನುಸುಳಿಸಲು ಪಾಕ್ ಹೆಚ್ಚಿನ ಮಟ್ಟದಲ್ಲಿ ಪ್ರಯತ್ನ ನಡೆಸಲಿದೆ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ ಕುಲ್ವಾರ ಜಿಲ್ಲೆ ಎಲ್​ಒಸಿ ಬಳಿ ಪಾಕ್ ಪಡೆಗಳು ಕದನ ವಿರಾಮ ಉಲ್ಲಂಘಿಸಿ ಗುಂಡು ಹಾರಿಸಿವೆ. ಇದರಿಂದ ಓರ್ವ ಯೋಧ ಗಾಯಗೊಂಡಿದ್ದಾರೆ. ಇತ್ತೀಚೆಗೆ ಈ ವರ್ಷದಲ್ಲಿ ಇದುವರೆಗೆ 231 ಸಲ ಪಾಕ್ ಕದನವಿರಾಮ ಉಲ್ಲಂಘಿಸಿದೆ ಎಂದು ಸೇನೆ ತಿಳಿಸಿದೆ.
ಚೀನಾದ್ದು ವಿನಾಶಕಾರಿ ಬುದ್ಧಿ ಎಂದ ಡೊನಾಲ್ಡ್ ಟ್ರಂಪ್:ಚೀನಾ ಎಷ್ಟೇ ಕಿರಿಕಿರಿ ಮಾಡಿದರೂ ಆ ರಾಷ್ಟ್ರದ ಬಗ್ಗೆ ಒಂದು ವ್ಯಾಪಾರ ನೀತಿಯನ್ನು ಅನುಸರಿಸುತ್ತಿದ್ದೇವೆ. ಆದರೆ, ಸ್ನೇಹಕ್ಕೆ ಅರ್ಹವಲ್ಲವೆನ್ನುವಂತೆ ಚೀನಾ ವರ್ತಿಸುತ್ತಿದೆ. ಬಾಂಧವ್ಯವನ್ನು ಸಂಪೂರ್ಣವಾಗಿ ನಾಶ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ. ಚೀನಾದ ವಾಣಿಜ್ಯ ವಹಿವಾಟಿನ ಪ್ರತಿನಿಧಿ ರಾರ್ಬಟ್ ಲೈಟ್​ಹೈಜರ್ ಟೀಕೆ-ಟಿಪ್ಪಣಿಗಳಿಗೆ ನಾವು ಸಮರ್ಪಕವಾದ ಪ್ರತಿಕ್ರಿಯೆ ನೀಡಿದ್ದೇವೆ. ಆದರೂ ವಾಣಿಜ್ಯ ವಹಿವಾಟು ಸಂಬಂಧದ ಮೊದಲ ಹಂತದ ಒಪ್ಪಂದದಿಂದ ಹೊರಹೋಗುವ ಮಾತನ್ನೇ ಅವರು ಆಡುತ್ತಿದ್ದಾರೆ. ಈ ಹಂತದಲ್ಲಿ ಉಭಯ ದೇಶಗಳ ಮಧ್ಯೆ ಬಾಂಧವ್ಯ ಸುಧಾರಿಸುವುದು ಕಷ್ಟ ಎಂದು ಟ್ರಂಪ್ ಹೇಳಿದ್ದಾರೆ.
ಸುಳಿವು ನೀಡಿದ್ದ ಉಪಗ್ರಹ ಚಿತ್ರ:
ಗಲ್ವಾನ್ ಕಣಿವೆಯ ಎಲ್​ಎಸಿ ಬಳಿ ಚೀನಿ ಸೇನೆಯ ಚಲನವಲನ ಇರುವ ಸುಳಿವನ್ನು ಉಪಗ್ರಹದ ಚಿತ್ರಗಳು ಘರ್ಷಣೆ ಆಗುವುದಕ್ಕೂ ಮೊದಲೇ ನೀಡಿದ್ದವು. ಯಂತ್ರೋಪಕರಣಗಳ ಮೂಲಕ ನದಿ ನೀರು ತಿರುಗಿಸಲು ಪ್ರಯತ್ನಿಸಿದ ಕಾಮಗಾರಿ ಚಿತ್ರಗಳನ್ನು ಉಪಗ್ರಹ ಸೆರೆಹಿಡಿದಿದೆ. ಘರ್ಷಣೆಗೆ ಕಾರಣವಾದ ಭಾರತದ ಗಡಿಯಂಚಿನಲ್ಲಿ ಚೀನಾದ ಎರಡು ಟೆಂಟ್​ಗಳು ಮತ್ತು ವೀಕ್ಷಣಾಗೋಪುರ ಚಿತ್ರಗಳೂ ಉಪಗ್ರಹದಲ್ಲಿ ಲಭ್ಯವಾಗಿವೆ. ಈ ಟೆಂಟ್ ಮತ್ತು ವೀಕ್ಷಣಾಗೋಪುರಗಳನ್ನು ತೆರವುಗೊಳಿಸುವುದಾಗಿ ಮಾತುಕತೆ ವೇಳೆ ಒಪ್ಪಿದ್ದ ಚೀನಾ, ನಂತರ ಅದನ್ನು ತೆರವುಗೊಳಿಸಿರಲಿಲ್ಲ. ಭಾರತದ ಯೋಧರು ತೆರವುಗೊಳಿಸಲು ಮುಂದಾದಾಗ ಘರ್ಷಣೆ ಉಂಟಾಯಿತು.
10 ಯೋಧರನ್ನು ಬಂಧಿಸಿದ್ದ ಚೀನಾ: ಇಬ್ಬರು ಮೇಜರ್ ಸಹಿತ ನಾಲ್ವರು ಅಧಿಕಾರಿಗಳು ಸೇರಿ 10 ಯೋಧರನ್ನು ಚೀನಾ ಬಿಡುಗಡೆ ಮಾಡಿದೆ. ಗಡಿ ಬಿಕ್ಕಟ್ಟು ಹೋಗಲಾಡಿಸಲು ಮೇಜರ್ ಜನರಲ್ ಹಂತದಲ್ಲಿ 3 ದಿನದ ಮಾತುಕತೆಯ ಬಳಿಕ ತನ್ನ ವಶದಲ್ಲಿದ್ದ ಭಾರತೀಯ ಯೋಧರನ್ನು ಚೀನಾ ಬಿಡುಗಡೆ ಮಾಡಿದೆ. ಜೂನ್ 15ರ ರಾತ್ರಿ ಗಲ್ವಾನ್ ಕಣಿವೆಯ 14ನೇ ಗಸ್ತು ಪಾಯಿಂಟ್ ಬಳಿ ಘರ್ಷಣೆ ನಡೆದಾಗ ಈ 10 ಮಂದಿಯನ್ನು ಚೀನಾ ಪಡೆ ವಶಕ್ಕೆ ಪಡೆದಿತ್ತು. ಗಲ್ವಾನ್ ಕಣಿವೆಯಲ್ಲಿ ಘರ್ಷಣೆ ವೇಳೆ ಕಣ್ಮರೆಯಾಗಿದ್ದರು ಎನ್ನಲಾದ ಯೋಧರು ಸುರಕ್ಷಿತವಾಗಿ ವಾಪಸು ಬಂದಿದ್ದಾರೆ ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ. ಈ ಹಿಂದೆ 1962ರ ಯುದ್ಧದ ವೇಳೆ ಗಲ್ವಾನ್ ಕಣಿವೆಯಲ್ಲೇ ಭಾರತದ ಹಲವು ಸೈನಿಕರನ್ನು ಚೀನಾ ವಶಕ್ಕೆ ಪಡೆದಿತ್ತು. ಯುದ್ಧದಲ್ಲಿ ಭಾರತದ 30 ಯೋಧರು ಪ್ರಾಣಾರ್ಪಣೆ ಮಾಡಿದ್ದರು.
ಅಲ್ಲಗಳೆದ ಡ್ರ್ಯಾಗನ್: ಭಾರತದ ಯಾವುದೇ ಯೋಧರನ್ನು ವಶಕ್ಕೆ ಪಡೆದಿಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಹಾವೊ ಲಿಜಿಯಾನ್ ಹೇಳಿದ್ದಾರೆ. ಪೀಪಲ್ಸ್ ಲಿಬರೇಷನ್ ಆರ್ವಿುಯ ಎಷ್ಟು ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ಚೀನಾ ಇದುವರೆಗೂ ಅಧಿಕೃತವಾಗಿ ತಿಳಿಸಿಲ್ಲ.
ಸರಕು ನಿಷೇಧಿಸಿದರೆ ಚೀನಾಕ್ಕೆ 5.63 ಲಕ್ಷ ಕೋಟಿ ರೂಪಾಯಿ ನಷ್ಟಪೂರ್ವ ಲಡಾಖ್​ನ ಘರ್ಷಣೆ ಹಿನ್ನೆಲೆಯಲ್ಲಿ ಚೀನಾ ಉತ್ಪನ್ನಗಳನ್ನು ನಿಷೇಧಿಸುವ ಅಭಿಯಾನದ ಬಗ್ಗೆ ದೊಡ್ಡ ಧ್ವನಿ ಎದ್ದಿದೆ. ಹೀಗೇನಾದರೂ ಆದರೆ, ಚೀನಾಕ್ಕೆ -ಠಿ; 5.63 ಲಕ್ಷ ಕೋಟಿಯಷ್ಟು (74 ಬಿಲಿಯನ್ ಡಾಲರ್) ಮೌಲ್ಯದ ರಫ್ತು ನಷ್ಟವಾಗುತ್ತದೆ. ಈ ಪೈಕಿ ಆಟಿಕೆ, ಗೃಹೋಪಯೋಗಿ, ಮೊಬೈಲ್, ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್, ಪ್ರಸಾಧನ ಸಾಮಗ್ರಿಗಳ ಚಿಲ್ಲರೆ ವ್ಯಾಪಾರದ ಸರಕಿನ ರಫ್ತು ಮೌಲ್ಯ -ಠಿ; 1.29 ಲಕ್ಷ ಕೋಟಿಯಷ್ಟಾಗುತ್ತದೆ (17 ಬಿಲಿಯನ್ ಡಾಲರ್). ಅಖಿಲ ಭಾರತ ವ್ಯಾಪಾರ ಮಂಡಳದ ಮಹಾ ಒಕ್ಕೂಟವು ತನ್ನ ಸದಸ್ಯ ಮಂಡಳಗಳ ಮೂಲಕ ವರ್ತಕರಿಗೆ ಚೀನಾ ಸರಕು ಇದ್ದರೆ ಅದನ್ನು ಶೀಘ್ರ ವಿಲೇವಾರಿ ಮಾಡುವಂತೆ ಮತ್ತು ಹೊಸದಾಗಿ ಚೀನಾ ಸರಕನ್ನು ತರಿಸಿಕೊಳ್ಳದಂತೆ ಸೂಚನೆ ನೀಡಿದೆ. ಜತೆಗೆ ಚೀನಾ ಸರಕುಗಳನ್ನು ಬಿಕರಿ ಮಾಡದಂತೆ ಇ-ಕಾಮರ್ಸ್ ಕಂಪನಿಗಳಿಗೆ ನಿರ್ಬಂಧ ಹೇರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಕೂಡ ಮಾಡಲಾಗಿದೆ ಎಂದು ಮಹಾ ಒಕ್ಕೂಟದ ಪ್ರಧಾನ ಕಾರ್ಯದಶಿ ವಿ.ಕೆ. ಬನ್ಸಾಲ್ ತಿಳಿಸಿದ್ದಾರೆ. ಅಖಿಲ ಭಾರತ ವರ್ತಕರ ಮಹಾಒಕ್ಕೂಟ (ಸಿಎಐಟಿ)ವು ‘ಭಾರತೀಯ ಸಮ್ಮಾನ್-ಹಮಾರ ಅಭಿಮಾನ್’ ಹೆಸರಿನಲ್ಲಿ ಈಗಾಗಲೇ ಚೀನಿ ವಸ್ತುಗಳ ಬಹಿಷ್ಕಾರವನ್ನು ಆರಂಭಿಸಿದೆ. ಚೀನಾದ 3 ಸಾವಿರಕ್ಕೂ ಹೆಚ್ಚು ಸರಕುಗಳನ್ನು 450ರ ಪಟ್ಟಿಯಲ್ಲಿ ವರ್ಗೀಕರಿಸಿದೆ. ಚೀನಾ ಸಾಮಗ್ರಿಗಳ ಜಾಹೀರಾತಿಗೆ ರೂಪದರ್ಶಿಯಾಗದಂತೆ ಸೆಲಬ್ರೆಟಿಗಳಿಗೂ ಸಿಎಐಟಿ ಪತ್ರ ಬರೆದಿದೆ.
ಚೀನಾ ಹೂಡಿಕೆಗೆ ಕಡಿವಾಣ ಸಾಧ್ಯತೆ:ವಿದೇಶಿ ಪೋರ್ಟ್​ಫೋಲಿಯೋ ಹೂಡಿಕೆ (ಎಫ್​ಪಿಐ)ಯಲ್ಲಿ ಚೀನಾದ ಬಂಡವಾಳ ತಡೆಯಲು ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ಮಾಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಹಣಕಾಸು ಸಚಿವಾಲಯದ ಆರ್ಥಿಕ ಇಲಾಖೆ ಮತ್ತು ಭಾರತೀಯ ಷೇರು ನಿಯಂತ್ರಣ ಮಂಡಳಿ (ಸೆಬಿ) ಕಾರ್ಯೋನ್ಮುಖವಾಗಿವೆ ಎಂದು ಮೂಲಗಳು ತಿಳಿಸಿವೆ. ಚೀನಾ ಮೂಲದ ವ್ಯಕ್ತಿ ಅಥವಾ ಕಂಪನಿಗಳ ನೇರ ಬಂಡವಾಳ (ಎಫ್​ಡಿಐ) ಹೂಡಿಕೆಯನ್ನು ಕೇಂದ್ರ ಸರ್ಕಾರ ಈಗಾಗಲೇ ನಿರ್ಬಂಧಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 19 =
Remember me
