|ರಾಘವ ಶರ್ಮ ನಿಡ್ಲೆಗಾಂಧಿನಗರ (ಗುಜರಾತ್)
ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ, ಶತ್ರುಗಳೂ ಅಲ್ಲ. ಅಧಿಕಾರ, ಅಸ್ತಿತ್ವ, ಪ್ರಸ್ತುತತೆಯ ಪ್ರಶ್ನೆ ಬಂದಾಗ ಶತ್ರುವಿನೆದುರೂ ತಲೆತಗ್ಗಿಸಬೇಕಾಗುತ್ತದೆ. 2017ರಲ್ಲಿ ಕಾಂಗ್ರೆಸ್​ನಿಂದ ಶಾಸಕರಾಗಿದ್ದ ಠಾಕೂರ್ ಸಮುದಾಯದ ನಾಯಕ ಅಲ್ಪೇಶ್ ಠಾಕೂರ್​ಗೆ ಸದ್ಯ ಈ ಮಾತು ಅನ್ವಯ. 5 ವರ್ಷಗಳ ಹಿಂದೆ ಬಿಜೆಪಿ ವಿರುದ್ಧ ವ್ಯವಸ್ಥಿತ ಜಾತಿ ಹೋರಾಟ ಮಾಡಿ, ಪಠಾಣ್ ಜಿಲ್ಲೆಯ ರಾಧಾನ್​ಪುರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ವಿಜಯಮಾಲೆ ಧರಿಸಿದ್ದ ಅಲ್ಪೇಶ್, ಪಿಎಂ ಮೋದಿ, ಗೃಹ ಸಚಿವ ಅಮಿತ್ ಷಾ ವಿರುದ್ಧ ಗೆಲುವಿನ ಕೇಕೆ ಹಾಕಿದ್ದರು. 5 ವರ್ಷಗಳಲ್ಲಿ ನರ್ಮದಾ, ಸಾಬರಮತಿ ನದಿಗಳಲ್ಲಿ ಸಾಕಷ್ಟು ನೀರು ಹರಿದಿದೆ. ಮೋದಿ-ಷಾ ಆಶೀರ್ವಾದದಿಂದಲೇ ಬಿಜೆಪಿ ಟಿಕೆಟ್ ಪಡೆದು, ಗಾಂಧಿನಗರ ದಕ್ಷಿಣದಲ್ಲಿ ಚುನಾವಣೆ ಸ್ಪರ್ಧಿಸಿ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ತಡಕಾಡುತ್ತಿದ್ದಾರೆ.
2017ರಲ್ಲಿ 15 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದ ಅಲ್ಪೇಶ್, ಪಕ್ಷದಲ್ಲಿ ತನ್ನನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡು 2019ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಸೇರಿಕೊಂಡಿದ್ದರು. ರಾಧಾನ್​ಪುರ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಅಲ್ಪೇಶರನ್ನು ಮತದಾರರು ಮುಲಾಜಿಲ್ಲದೆ ಸೋಲಿಸಿಬಿಟ್ಟಿದ್ದರು. ಸಿದ್ಧಾಂತ, ಬದ್ಧತೆ ಜತೆಗೆ ಹೊಂದಾಣಿಕೆ ಮಾಡಿಕೊಂಡು ಎರಡೇ ವರ್ಷದಲ್ಲಿ ಬಿಜೆಪಿ ಸೇರಿಕೊಂಡಿದ್ದನ್ನು ಮತದಾರ ಕ್ಷಮಿಸಲಿಲ್ಲ. ಬಹುಶಃ ರಾಜ್ಯ ರಾಜಕಾರಣದಲ್ಲಿ ಅಲ್ಪೇಶ್ ಪ್ರಭಾವ ತಗ್ಗಿಸಲು ಇದೇ ಫಲಿತಾಂಶವನ್ನು ಬಿಜೆಪಿ ಕೂಡ ಬಯಸಿತ್ತು ಎಂದರೂ ತಪ್ಪಾಗಲಾರದು. ಏಕೆಂದರೆ, 2 ವರ್ಷಗಳ ಹಿಂದೆ ಅಲ್ಪೇಶ್ ಬಿಜೆಪಿ ನಾಯಕರ ವಿರುದ್ಧ ಖಂಡತುಂಡ ಟೀಕೆಗಳನ್ನು ಮಾಡಿದ್ದನ್ನು ಆ ಮುಖಂಡರು, ಕಾರ್ಯಕರ್ತರು ಹೇಗೆ ತಾನೇ ಮರೆತಾರು?
ಪಾಟಿದಾರ ಸಮಾಜದ ಹಾರ್ದಿಕ್ ಪಟೇಲ್ ಒಬಿಸಿ ಸ್ಥಾನಮಾನ ಮತ್ತು ಮೀಸಲಾತಿಗಾಗಿ ಹಗಲಿರುಳು ಹೋರಾಟ ಮಾಡಿದ್ದಾಗ, ಒಬಿಸಿ ಸಮುದಾಯವನ್ನು ಒಟ್ಟುಗೂಡಿಸಿ ಪ್ರತಿ ಹೋರಾಟ ಮಾಡಿದ್ದ ಅಲ್ಪೇಶ್ ಬಿಜೆಪಿ ಸರ್ಕಾರದ ನಿದ್ದೆಗೆಡಿಸಿಬಿಟ್ಟಿದ್ದರು. ಒಳಗಿಂದೊಳಗೇ ಪಾಟಿದಾರ ಮೀಸಲಾತಿ ಬೇಡಿಕೆ ವಿರೋಧಿಸಿದ್ದ ಅಲ್ಪೇಶ್, ಈಗಿರುವ ಶೇ. 27ರಷ್ಟು ಒಬಿಸಿ ಮೀಸಲಾತಿ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಾದರೂ ನಾವು ಸುಮ್ಮನಿರುವುದಿಲ್ಲ ಎಂದು ಒಬಿಸಿ ಯುವಕರನ್ನು ಬಿಜೆಪಿ ವಿರುದ್ಧ ಬಡಿದೆಬ್ಬಿಸಿದ್ದರು. ಚುನಾವಣೆಯಲ್ಲಿ ಹಾರ್ದಿಕ್, ಅಲ್ಪೇಶ್ ಜತೆಗೆ ಕೈಜೋಡಿಸಿ, ಉನಾದಲ್ಲಿ ಹಿಂದು ಸಂಘಟನೆಯ ಗೋರಕ್ಷಕರಿಂದ ಹಲ್ಲೆಗೊಳಗಾದ ದಲಿತ ಯುವಕರ ಪರ ಚಳವಳಿ ನಡೆಸಿ ದೇಶಾದ್ಯಂತ ಗಮನಸೆಳೆದಿದ್ದ ಜಿಗ್ನೇಶ್ ಮೆವಾನಿ ಕಾಂಗ್ರೆಸ್ ಪರ ಅಭಿಯಾನ ನಡೆಸಿದ್ದರು. ಮೂವರು ಯುವಕರು ಸೇರಿ ಜಾತಿಗಳನ್ನು ಬಿಜೆಪಿ ವಿರುದ್ಧ ಒಗ್ಗೂಡುವಂತೆ ಮಾಡಿದ್ದು ಗುಜರಾತ್ ರಾಜಕಾರಣದಲ್ಲೇ ಹೊಸ ಬೆಳವಣಿಗೆಯಾಗಿತ್ತು. ಸೈದ್ಧಾಂತಿಕ ನಿಷ್ಠೆ ಹಾಗೂ ಬದ್ಧತೆಗೆ ಅಂಟಿಕೊಂಡ ಜಿಗ್ನೇಶ್ ಅಧಿಕೃತವಾಗಿ ಕಾಂಗ್ರೆಸ್ ಸೇರಿದರೆ ಹಾರ್ದಿಕ್ ಮತ್ತು ಅಲ್ಪೇಶ್ ಠಾಕೂರ್ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಗಾಂಧಿನಗರದಲ್ಲಿರುವ ಕಮಲಂ (ಬಿಜೆಪಿ ರಾಜ್ಯ ಪ್ರಧಾನ ಕಚೇರಿ) ಹಾದಿ ತುಳಿದರು.
2019ರ ಉಪಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದರಿಂದ ಠಾಕೂರರು ಹೆಚ್ಚಿನ ಸಂಖ್ಯೆಯಲ್ಲಿರುವ ಗಾಂಧಿನಗರ ದಕ್ಷಿಣ ಕ್ಷೇತ್ರದ ಮೇಲೆ ಕಣ್ಣಿಟ್ಟ ಅಲ್ಪೇಶ್​ಗೆ ಸ್ಥಳೀಯರ ವಿರೋಧದ ಮಧ್ಯೆಯೂ ಟಿಕೆಟ್ ನೀಡಲಾಗಿದೆ. ರಾಧಾನ್​ಪುರ ಟಿಕೆಟ್ ಕೇಳಿದ್ದರೂ ಅಲ್ಲಿನ ಸ್ಥಳೀಯ ಬಿಜೆಪಿ ಘಟಕ ಒಪ್ಪಿರಲಿಲ್ಲ. ಅಲ್ಪೇಶ್ ಸ್ಪರ್ಧಿಸುತ್ತಿರುವುದು ಗೃಹ ಸಚಿವ ಅಮಿತ್ ಷಾ ಪ್ರತಿನಿಧಿಸುತ್ತಿರುವ ಗಾಂಧಿನಗರ ಲೋಕಸಭೆ ವ್ಯಾಪ್ತಿಯ ದಕ್ಷಿಣ ಕ್ಷೇತ್ರ. ಷಾ ಕಣ್ಗಾವಲಿನಲ್ಲಿ ನಡೆಯುತ್ತಿರುವ ಚುನಾವಣೆ ಫಲಿತಾಂಶ ಅಲ್ಪೇಶ್ ರಾಜಕೀಯ ಭವಿಷ್ಯ ನಿರ್ಧರಿಸಲಿದೆ. ಹಾಗಾಗಿಯೇ ಇದು ಅವರಿಗೆ ಮಾಡು ಇಲ್ಲವೇ ಮಡಿ ಚುನಾವಣೆ. ಗೆದ್ದರೆ ಮಂತ್ರಿಯಾಗಲೂಬಹುದು. ಸೋತರೆ ರಾಜ್ಯ ರಾಜಕೀಯ ಮತ್ತು ಜಾತಿ ಮಧ್ಯೆ ವರ್ಚಸ್ಸು ನೆಲಕಚ್ಚಿ ಮನೆ ಸೇರಬಹುದು. ಕಾಂಗ್ರೆಸ್ ರಾಜ್ಯ ವಕ್ತಾರ ಹಾಗೂ ಸ್ಥಳೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ ಡಾ. ಹಿಮಾಂಶು ಪಟೇಲ್ ಸ್ಪರ್ಧಿಸುತ್ತಿರುವುದರಿಂದ ಅಲ್ಪೇಶ್ ಮುಂದೆ ಕಠಿಣ ಹಾದಿಯಿದೆ. ಕರೊನಾ ಸಂದರ್ಭದಲ್ಲಿ ಹಿಮಾಂಶು ಪಟೇಲ್ ನೆರವಿಗೆ ಬಂದಿರುವುದನ್ನು ಜನ ಸ್ಮರಿಸುತ್ತಾರೆ. ಅಲ್ಪೇಶ್ ಪಠಾಣ್ ಜಿಲ್ಲೆಯವರು. ಅವರಿಗೆ ಸ್ಥಳೀಯರ ಸಮಸ್ಯೆ ಏನು ಗೊತ್ತಿದೆ? ನಿಮ್ಮ ಕಷ್ಟ-ನಷ್ಟ ಅರಿತುಕೊಂಡಿರುವ ಸ್ಥಳೀಯ ವ್ಯಕ್ತಿಯನ್ನೇ ಆಯ್ಕೆ ಮಾಡಿ ಎಂದು ಕಾಂಗ್ರೆಸ್ ಅಭಿಯಾನ ನಡೆಸಿದೆ.
ತಿರುಗಿದ ಕಾಲಚಕ್ರ:5 ವರ್ಷದ ಹಿಂದೆ ಪ್ರಧಾನಿ ಮೋದಿ ವಿರುದ್ಧ ಬುಸುಗುಟ್ಟಿದ್ದ ಅಲ್ಪೇಶ್ ಈಗ ಅಭಿವೃದ್ಧಿಗಾಗಿ ಮೋದಿ ನೇತೃತ್ವದ ಬಿಜೆಪಿ ಬೆಂಬಲಿಸಿ ಎಂದು ಜೈಕಾರ ಹಾಕುತ್ತಿದ್ದಾರೆ. ಗೆಲುವಿಗಾಗಿ ಸ್ವಂತ ವರ್ಚಸ್ಸಿಗಿಂತ ಹೆಚ್ಚು ಮೋದಿ-ಅಮಿತ್ ಷಾ ಹೆಸರನ್ನೇ ಅವಲಂಬಿಸಬೇಕಾಗಿ ಬಂದಿದೆ. ಗಾಂಧಿ ನಗರದ ದಾಬೋಢಿಯಾ ಗ್ರಾಮದ ಹನುಮಾನ್ ಮಂದಿರ ಎದುರು ರುದ್ರಾಕ್ಷಿ ಮಾಲೆಗಳನ್ನು ಮಾರುತ್ತಿದ್ದ ಸಂದೀಪ್ ಪಟೇಲ್, ‘ಬಿಜೆಪಿಗೆ ಮತ ಹಾಕುವುದೋ ಅಥವಾ ತಮ್ಮದೇ ಸಮುದಾಯದ ಸಜ್ಜನ ಎನಿಸಿಕೊಂಡ ಹಿಮಾಂಶು ಪಟೇಲ್ ಬೆಂಬಲಿಸುವುದೋ ಎಂಬ ಗೊಂದಲದಲ್ಲಿದ್ದೇನೆ’ ಎಂದರು. ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದ್ದರೂ, ಹಿಮಾಂಶು ಇಲ್ಲಿ ಜನಪರ ಕೆಲಸ ಮಾಡಿದ್ದಾರೆ. ಪಕ್ಷವೋ, ವ್ಯಕ್ತಿಯೋ ಇನ್ನೂ ಗೊತ್ತಾಗುತ್ತಿಲ್ಲ ಎಂದು ಹೇಳಿದರು. ಅಲ್ಪೇಶ್​ರನ್ನು ಹೊರಗಿನವರನು ಎಂಬ ಕಾರಣಕ್ಕಾಗಿ ವಿರೋಧಿಸುತ್ತಿರುವ ಹಲವು ಮಂದಿಯಲ್ಲಿ ಇದೇ ಗೊಂದಲ ಕಾಣುತ್ತಿದೆ. ಮೋದಿ ಜನಪ್ರಿಯತೆಗೆ ತಲೆಬಾಗಿ ಬಿಜೆಪಿಯನ್ನೇ ಆಯ್ಕೆ ಮಾಡುತ್ತೇವೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ರಾಜ್ಯದಲ್ಲಿ ಪರಿವರ್ತನೆಯ ಅಗತ್ಯ ಇದೆ ಎಂದನಿಸುತ್ತದೆಯೇ? ಅಲ್ಪೇಶ್ ಬಂದಿರುವುದಕ್ಕೆ ಖುಷಿ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕ್ಷೇತ್ರದ ಲವಾರ್​ಪುರ ಗ್ರಾಮದ ನಿವಾಸಿ ಅಜಿತ್ ಠಾಕೂರ್, ‘ನಮ್ಮದೇ ಸಮುದಾಯದ ಅಭ್ಯರ್ಥಿ ಎಂಬ ಕಾರಣಕ್ಕೆ ಬಿಜೆಪಿಗೆ ಮತ ಹಾಕುತ್ತಿಲ್ಲ. ಸರ್ಕಾರ ಕೆಲಸ ಮಾಡಿದೆ. ಹಳ್ಳಿಯ ಬಡವರಿಗೆ ಮನೆ ಕಟ್ಟಿಕೊಳ್ಳಲು ಅನುದಾನ ನೀಡುತ್ತಿದ್ದಾರೆ. ಹಿಂದೆಲ್ಲಾ ಕಚ್ಚಾ ಮನೆಗಳಲ್ಲಿ ವಾಸಿಸುತ್ತಿದ್ದ ಎಷ್ಟೋ ಮಂದಿ ಈಗ ಒಳ್ಳೆಯ ಮನೆ ಕಟ್ಟಿಕೊಂಡಿದ್ದಾರೆ. ಸರ್ಕಾರ ನೆರವಾಗಿದ್ದರಿಂದಲೇ ಇದು ಸಾಧ್ಯವಾಯ್ತು’ ಎನ್ನುತ್ತಾರೆ.
ಕಾಂಗ್ರೆಸ್ ಬಿಟ್ಟಿದ್ದೇಕೆ?:‘ಹಿಂದುಳಿದ ಸಮುದಾ ಯಗಳ ಅಭಿವೃದ್ಧಿಗೆ ನಾವು ಬದ್ಧ. ನಮ್ಮ ಉದ್ದೇಶಕ್ಕೆ ಕಾಂಗ್ರೆಸ್ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಿ ಪಕ್ಷ ಸೇರಿದ್ದೆವು. ಆದರೆ, ಬರೀ ಅವಮಾನ ಎದುರಿಸಬೇಕಾಗಿ ಬಂತು. ಕಾರ್ಯಕರ್ತರನ್ನೂ ಕಡೆಗಣಿಸಲಾಯ್ತು’ ಎಂದು ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದಾಗ ಅಲ್ಪೇಶ್ ಆರೋಪಿಸಿದ್ದರು. 2019ರ ಲೋಕಸಭೆ ಚುನಾವಣೆಗೆ ಪಠಾಣ್​ನಿಂದ ಟಿಕೆಟ್ ಕೇಳಿದ್ದರು. ಆದರೆ, ಸ್ಥಳೀಯ ಕಾಂಗ್ರೆಸ್ ಘಟಕ ಒಪ್ಪಲಿಲ್ಲ. 2017ರಲ್ಲಿ ಪಾಟಿದಾರ ಆಂದೋಲನ ಮತ್ತು ಒಬಿಸಿ ಹೋರಾಟಗಳ ಹೊರತಾಗಿಯೂ ಬಿಜೆಪಿ ಅಧಿಕಾರಕ್ಕೇರಿದ್ದರಿಂದ ರಾಜಕೀಯವಾಗಿ ಬಿಜೆಪಿಯೇ ಸೂಕ್ತ ಎಂದು ಭಾವಿಸಿದ ಅಲ್ಪೇಶ್ ಕೇಸರಿಪಡೆ ಸೇರಿಕೊಂಡರು.
ಒಬಿಸಿ ಲೆಕ್ಕಾಚಾರ:ಗುಜರಾತಿನಲ್ಲಿ ಶೇ. 23-24ರಷ್ಟು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮತದಾರರಿದ್ದಾರೆ. 146 ಜಾತಿಗಳು ಒಬಿಸಿ ವ್ಯಾಪ್ತಿಯಲ್ಲಿದ್ದು, ಅದರಲ್ಲಿ ಠಾಕೂರ್ ಸಮುದಾಯ ಶೇ. 8ರಷ್ಟು ಜನಸಂಖ್ಯೆ ಹೊಂದಿ ಅತಿದೊಡ್ಡ ಸಮುದಾಯ ಎನಿಸಿಕೊಂಡಿದೆ. ನಂತರದ ಸ್ಥಾನದಲ್ಲಿ ಶೇ. 8ರಷ್ಟು ಕೋಲಿಗಳು, ಶೇ. 3.25 ಹೊಂದಿರುವ ರಬಾರಿಗಳು ಬರುತ್ತಾರೆ. ಠಾಕೂರ್ ಸಮುದಾಯ ವಿಶೇಷವಾಗಿ ಉತ್ತರ ಗುಜರಾತ್​ನಲ್ಲಿ ಚುನಾವಣೆ ಮೇಲೆ ಪ್ರಭಾವ ಬೀರುತ್ತಾರೆಂದು ಭಾವಿಸಲಾಗಿದೆ. ಒಟ್ಟು 26 ಸ್ಥಾನಗಳಲ್ಲಿ ಕನಿಷ್ಠ ಶೇ. 25ರಷ್ಟು ಠಾಕೂರ್ ಮತದಾರರಿದ್ದಾರೆ. ಈ ಸೀಟುಗಳನ್ನು ಉತ್ತರ ಮತ್ತು ಮಧ್ಯ ಗುಜರಾತ್ ನಡುವೆ 13-13 ಸೀಟುಗಳಾಗಿ ವಿಂಗಡಿಸಲಾಗಿದೆ. 2012ರಲ್ಲಿ ಈ ಪೈಕಿ 17 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದ್ದರೆ, ಬಿಜೆಪಿ 8 ಮತ್ತು ಎನ್​ಸಿಪಿ 1ರಲ್ಲಿ ಗೆದ್ದಿತ್ತು. 2017ರಲ್ಲಿ ಕಾಂಗ್ರೆಸ್ 15 ಮತ್ತು ಬಿಜೆಪಿ 11 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದವು.
ಕ್ಷೇತ್ರ ಪರಿಚಯ:ಗಾಂಧಿನಗರ ದಕ್ಷಿಣದಲ್ಲಿ 3.71 ಲಕ್ಷ ಮತದಾರರಿದ್ದಾರೆ. ಅವರಲ್ಲಿ 1.15 ಲಕ್ಷ ಠಾಕೂರರು, ಅಂದಾಜು 90,000 ಪಾಟಿದಾರರು, 25-30 ಸಾವಿರ ದಲಿತರು ಹಾಗೂ 10-15,000 ಬೇರೆ ರಾಜ್ಯದ ಮತದಾರರಿದ್ದಾರೆ. ಗಾಂಧಿನಗರ ದಕ್ಷಿಣವನ್ನು 2008ರಲ್ಲಿ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಬೇರ್ಪಡಿಸಲಾಗಿತ್ತು. 2012 ಮತ್ತು 2017ರ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಶಂಭುಜಿ ಠಾಕೂರ್ ಗೆದ್ದಿದ್ದರು. ಈ ಬಾರಿ ಶಂಭುಜೀ ಬದಲಿಗೆ ಅಲ್ಪೇಶ್ ಕಣದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಆಪ್ ಪಟೇಲ್ ಸಮುದಾಯಕ್ಕೆ ಟಿಕೆಟ್ ನೀಡಿವೆ.
ದೇಶದಲ್ಲಿ ಟ್ರೆಂಡಿಂಗ್​ನಲ್ಲಿದೆ ‘ಹಾರ್ಟ್ ಅಟ್ಯಾಕ್’; ಅದರ ಬಗ್ಗೆಯೇ ಮಾತಾಡುತ್ತಿದ್ದಾರೆ ಹಲವರು!

ಡಾ.ಬ್ರೋಗೆ ಹತ್ತು ಲಕ್ಷ ಸಬ್​ಸ್ಕ್ರೈಬರ್ಸ್; ‘ದೇವರ’ ಬಗ್ಗೆ ಏನಂದ್ರು ಗಗನ್ ಶ್ರೀನಿವಾಸ್?; ಇಲ್ಲಿದೆ ಫಸ್ಟ್ ರಿಯಾಕ್ಷನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
