ಎಲ್ಲ ಗೊಂದಲಗಳಿಗೂ ತೆರೆ ಎಳೆದಿರುವ ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶಕ್ಕೆ ಅಮರಾವತಿಯೇ ರಾಜಧಾನಿ ಆಗಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ, ಆಂಧ್ರಕ್ಕೆ ಮೂರು ರಾಜಧಾನಿಗಳನ್ನು ರಚಿಸಲು ಹೊರಟಿದ್ದ ಹಿಂದಿನ ಜಗನ್​ವೋಹನ್ ರೆಡ್ಡಿ ಸರ್ಕಾರದ ನಿರ್ಧಾರ ಮತ್ತು ಪ್ರಯತ್ನವನ್ನು ಮೂಲೆಗುಂಪು ಮಾಡಿದ್ದಾರೆ. ಹೇಗಿರಲಿದೆ ಹೊಸ ರಾಜಧಾನಿ ಅಮರಾವತಿ, ಇಲ್ಲಿದೆ ವಿವರ.
ರವೀಂದ್ರ ಎಸ್. ದೇಶಮುಖ್ಆಂಧ್ರಪ್ರದೇಶ ವಿಭಜನೆಯಾದ 10 ವರ್ಷಗಳ ಅವಧಿಗೆ ಹೈದರಾಬಾದ್​ನ್ನು ಆಂಧ್ರ ಮತ್ತು ತೆಲಂಗಾಣದ ಜಂಟಿ ರಾಜಧಾನಿಯನ್ನಾಗಿಸಲಾಯಿತು. ಈ ಅವಧಿ 2024ರ ಜೂನ್ 1ರಂದು ಮುಕ್ತಾಯಗೊಂಡಿದ್ದು, ಈಗ ಹೈದರಾಬಾದ್ ತೆಲಂಗಾಣಕ್ಕೆ ಮಾತ್ರವೇ ರಾಜಧಾನಿಯಾಗಿದೆ.
2014ರಿಂದ 2019ರವರೆಗೆ ಮೊದಲ ಮುಖ್ಯಮಂತ್ರಿಯಾಗಿದ್ದ (ಆಂಧ್ರಪ್ರದೇಶ ವಿಭಜನೆ ಬಳಿಕ) ನಾರಾ ಚಂದ್ರಬಾಬು ನಾಯ್ಡು ಅಮರಾವತಿಯನ್ನು ರಾಜಧಾನಿ ಆಗಿಸುವ ಯೋಜನೆಗೆ ಚಾಲನೆ ನೀಡಿದರು. 2015ರ ಅಕ್ಟೋಬರ್ 22ರಂದು ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ಕೂಡ ನೆರವೇರಿಸಿದ್ದರು. ಆ ಬಳಿಕ ಅಮರಾವತಿಯಲ್ಲಿ ಭೂಮಿಯ ಬೆಲೆ ಗಗನಮುಖಿಯಾಯಿತು. ಅಲ್ಲದೆ, ಅಮರಾವತಿಯಲ್ಲಿ ಹೊಸ ನಗರವನ್ನು ನಿರ್ವಿುಸುವ ಯೋಜನೆ, ಅದಕ್ಕೆ ದೊರಕಿಸುವ ಸೌಲಭ್ಯಗಳು ಉದ್ಯಮಿಗಳನ್ನು ಸೆಳೆಯಿತು.
ರಾಜಕೀಯದ ಸ್ಥಿತ್ಯಂತರದಲ್ಲಿ 2019ರಲ್ಲಿ ಟಿಡಿಪಿ ಅಧಿಕಾರ ಕಳೆದುಕೊಂಡಿತು. ವೈಎಸ್​ಆರ್​ಸಿಪಿಯ ಜಗನ್​ವೋಹನ್ ರೆಡ್ಡಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂತು. ಅವರು ಆಂಧ್ರಕ್ಕೆ 3 ರಾಜಧಾನಿಗಳನ್ನು ರೂಪಿಸಲು ಹೊರಟರು. ಅಮರಾವತಿ, ವಿಶಾಖಪಟ್ಟಣಮ್ ಮತ್ತು ಕರ್ನಲ್ ಅನ್ನು ರಾಜಧಾನಿಯಾಗಿಸುವ ಮಸೂದೆ ಕೂಡ ವಿಧಾನಸಭೆಯಲ್ಲಿ ಅಂಗೀಕಾರವಾಯಿತು. ಜಗನ್​ರ ಈ ಕ್ರಮಕ್ಕೆ ವ್ಯಾಪಕ ಆಕ್ರೋಶ ಸೃಷ್ಟಿಯಾಯಿತು. ಮತ್ತು ಕೆಲವರು ಹೈಕೋರ್ಟ್ ಮೆಟ್ಟಿಲು ಹತ್ತಿದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ‘ಮೂರು ರಾಜಧಾನಿಗಳನ್ನು ರೂಪಿಸುವಂತಿಲ್ಲ’ ಎಂದು 2022ರಲ್ಲಿ ಸ್ಪಷ್ಟವಾಗಿ ಹೇಳಿತು. ಅಲ್ಲಿಗೆ ವಿವಾದ ಸುಖಾಂತ್ಯಗೊಳ್ಳಬೇಕಿತ್ತು. ಆದರೆ, ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ ಜಗನ್ ಮೋಹನ್ ರೆಡ್ಡಿ ಅಮರಾವತಿಗೆ ಸಿಗುತ್ತಿರುವ ಪ್ರಾಮುಖ್ಯ ತಪ್ಪಿಸಲು ಮತ್ತು ಈ ಮೂಲಕ ಚಂದ್ರಬಾಬು ನಾಯ್ಡುಗೆ ಮುಖಭಂಗ ಉಂಟು ಮಾಡಲು ಪಣತೊಟ್ಟರು. ಹಾಗಾಗಿಯೇ, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದರು. ಸುಪ್ರಿಂ ಕೋರ್ಟ್​ನಲ್ಲಿ ಈ ವಿಷಯ ವಿಚಾರಣೆ ಹಂತದಲ್ಲಿದೆ. ಕಾಲಚಕ್ರ ಮತ್ತೆ ತಿರುಗಿದೆ. 2024ರ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ತೆಲುಗುದೇಶಂ ಭರ್ಜರಿ ವಿಜಯ ಕಂಡು, ವೈಎಸ್​ಆರ್​ಸಿಪಿ ತೀವ್ರ ಹಿನ್ನಡೆ ಅನುಭವಿಸಿದೆ. ಬುಧವಾರ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಅಮರಾವತಿಯೇ ರಾಜಧಾನಿ ಆಗುವುದು ಖಚಿತವಾಗಿದೆ.
ಗವರ್ನ್​ವೆುಂಟ್ ಸಿಟಿ:ಅಮರಾವತಿಯ ಉತ್ತರ-ದಕ್ಷಿಣ ಭಾಗದಲ್ಲಿ 1093 ಹೆಕ್ಟೇರ್ ಪ್ರದೇಶದಲ್ಲಿ ನಿರ್ವಣವಾಗಲಿರುವ ಈ ನಗರಿಯಲ್ಲಿ ಸುಸಜ್ಜಿತ ಸರ್ಕಾರಿ ಕಚೇರಿಗಳು ಮತ್ತು ಕ್ವಾಟರ್ಸ್ ಇರಲಿವೆ.
ಜಸ್ಟೀಸ್ ಸಿಟಿ:ಗವರ್ನ್​ವೆುಂಟ್ ಸಿಟಿ ಸಮೀಪದಲ್ಲೇ ಇದು 1,339 ಹೆಕ್ಟೇರ್ ಪ್ರದೇಶದಲ್ಲಿ ನಿರ್ವಣಗೊಳ್ಳಲಿದೆ. ಇಲ್ಲಿ ಹೈಕೋರ್ಟ್, ನ್ಯಾಯಾಧೀಕರಣಕ್ಕೆ ಸಂಬಂಧಿಸಿದ ಕಚೇರಿಗಳು ಮತ್ತು ನ್ಯಾಯಾಧೀಶರ ವಸತಿಗೃಹಗಳು ನಿರ್ವಣವಾಗಲಿವೆ.
ಫೈನಾನ್ಸ್ ಸಿಟಿ:ಆಂಧ್ರಪ್ರದೇಶದ ಅರ್ಥವ್ಯವಸ್ಥೆಗೆ ವೇಗ ನೀಡುವ ಉದ್ದೇಶದಿಂದ ತಯಾರಾಗುವ ಫೈನಾನ್ಸ್ ಸಿಟಿಯಲ್ಲಿ ವಾಣಿಜ್ಯ ಸಂಕೀರ್ಣ ಮತ್ತು ರೆಸಿಡೆನ್ಶಿಯಲ್ ಬಡಾವಣೆಗಳು ತಲೆಎತ್ತಲಿದ್ದು, 2091 ಹೆಕ್ಟೇರ್ ವ್ಯಾಪ್ತಿ ಹೊಂದಿರಲಿದೆ.
ನಾಲ್ಡೆಜ್ ಸಿಟಿ:ಜಸ್ಟೀಸ್ ಹಾಗೂ ಫೈನಾನ್ಸ್ ಸಿಟಿಯ ದಕ್ಷಿಣದಲ್ಲಿ ನಾಲ್ಡೆಜ್ ಸಿಟಿ ತಲೆಎತ್ತಲಿದ್ದು, ಇಲ್ಲಿ ವಿಶ್ವವಿದ್ಯಾಲಯ, ಕಾಲೇಜ್ ಹಾಗೂ ನಾಲ್ಡೆಜ್ ಪಾರ್ಕ್ ಜನರನ್ನು ಸೆಳೆಯಲಿವೆ.
ಇಲೆಕ್ಟ್ರಾನಿಕ್ ಸಿಟಿ:ಐಟಿ ಮತ್ತು ಇಲೆಕ್ಟ್ರಾನಿಕ್ಸ್ ಇಂಡಸ್ಟ್ರಿಗಳಿಗೆ ಈ ನಗರ ಮೀಸಲು. 2,663 ಹೆಕ್ಟೇರ್ ಪ್ರದೇಶದ ವ್ಯಾಪ್ತಿಯನ್ನು ಇದು ಹೊಂದಿರಲಿದೆ.
ಹೆಲ್ತ್ ಸಿಟಿ:ಸರ್ಕಾರಿ ಆಸ್ಪತ್ರೆ, ಸಂಶೋಧನಾಲಯ, ಲ್ಯಾಬೋರೇಟರಿ ಸೇರಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ನಿರ್ವಣಗಳು 2,647 ಹೆಕ್ಟರ್ ಪ್ರದೇಶದಲ್ಲಿ ಆಗಲಿವೆ.
ಸ್ಪೋರ್ಟ್ಸ್​​ ಸಿಟಿ:ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಇವೆಂಟ್​ಗಳಿಗಾಗಿ ದೊಡ್ಡ ಸ್ಟೇಡಿಯಂ, ವಿದ್ಯಾರ್ಥಿಗಳಿಗಾಗಿ ಕ್ರೀಡಾಮೈದಾನ 1,679 ಹೆಕ್ಟೇರ್ ಪ್ರದೇಶದಲ್ಲಿ ನಿರ್ವಣಗೊಳ್ಳಲಿವೆ.
ಮೀಡಿಯಾ ಸಿಟಿ:ಅನಂತ್​ವರಂ ಬಳಿ 2067 ಹೆಕ್ಟೇರ್ ಪ್ರದೇಶದಲ್ಲಿ ಮೀಡಿಯಾ ಮತ್ತು ಕಲ್ಚರಲ್ ಸಿಟಿ ತಲೆ ಎತ್ತಲಿದೆ.
ಟೂರಿಜಂ ಸಿಟಿ:ಕೃಷ್ಣಾ ನದಿಯ ತೀರದಲ್ಲಿ ಉಂದಾವಲ್ಲಿ ಗುಹೆಗಳ ಬಳಿ 4,716 ಹೆಕ್ಟೇರ್ ಪ್ರದೇಶದಲ್ಲಿ ಟೂರಿಜಂ ಸಿಟಿ ನಿರ್ವಣವಾಗಲಿದ್ದು, ಪ್ರವಾಸಿಗರನ್ನು ಆಕರ್ಷಿಸಲಿದೆ.
ಹೀಗಿರಲಿದೆ ಭವ್ಯ ನಗರಿ:ಆಂಧ್ರದ ನೂತನ ರಾಜಧಾನಿ ಅಮರಾವತಿ ಸುಮಾರು 217 ಚದರ ಕಿ.ಮೀ. ವ್ಯಾಪ್ತಿಯಲ್ಲಿ ನಿರ್ವಣವಾಗಲಿದೆ. ವಾಸ್ತು ಮತ್ತು ಫೆಂಗ್ ಶುಯಿ (ಚೀನಾದ ವಾಸ್ತುಶಾಸ್ತ್ರ) ಆಧಾರವಾಗಿಟ್ಟುಕೊಂಡೇ ರಾಜಧಾನಿ ನಿರ್ವಣವಾಗಲಿದ್ದು, ಮೂರು ರಾಷ್ಟ್ರೀಯ ಹೆದ್ದಾರಿಯೊಂದಿಗೆ ಸಂಪರ್ಕ ಹೊಂದಿರಲಿದೆ. ಜತೆಗೆ ಹೈದರಾಬಾದ್​ನಿಂದ ಮಚಲೀಪಟ್ಟಣ ಬಂದರು ಮತ್ತು ಚೆನ್ನೈನಿಂದ ವಿಶಾಖಪಟ್ಟಣಕ್ಕೆ ಸಂಪರ್ಕ ಕಲ್ಪಿಸುವಂಥ ಏಳು ಕಾರಿಡಾರ್​ಗಳು ನಿರ್ವಣವಾಗಲಿವೆ. ಮಾಸ್ಟರ್ ಪ್ಲಾನ್​ನಲ್ಲಿ 2050ವರೆಗೆ ರಾಜಧಾನಿಯಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಬಗ್ಗೆ ತಿಳಿಸಿದ್ದು, ಅದರಂತೆ 2050ರ ವೇಳೆಗೆ 56 ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ. 1.3 ಕೋಟಿ ಜನ ರಾಜಧಾನಿಯಲ್ಲಿ ವಾಸಿಸಲಿದ್ದಾರೆ. ಈಗಾಗಲೇ 29 ಗ್ರಾಮಗಳಲ್ಲಿ ರೈತರಿಂದ 38,851 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ನಗರದಲ್ಲಿನ ಸಾಂಸ್ಕೃತಿಕ ಭವನ, ಶೈಕ್ಷಣಿಕ ಸಂಸ್ಥೆಗಳು, ವಾಣಿಜ್ಯ ಸಂಕೀರ್ಣಗಳು, ಸಾರ್ವಜನಿಕ ಸ್ಥಳಗಳನ್ನು ಬೆಸೆಯಲು ಎಲ್ಲ ಭಾಗಗಳಿಂದ ರಸ್ತೆಸಂಪರ್ಕ ಜಾಲ ನಿರ್ವಿುಸಲಾಗುತ್ತಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಸ್ಥಾಪನೆಯಾಗಲಿದ್ದು, ವಿಶ್ವದರ್ಜೆಯ ನಗರಿಯಲ್ಲಿರುವ ಸೌಲಭ್ಯಗಳು ನಾಗರಿಕರಿಗೆ ದೊರೆಯಲಿವೆ.
ಜೈಲುವಾಸ ಅನುಭವಿಸಿದ ಚಂದ್ರಬಾಬು ನಾಯ್ಡು:ಆಂಧ್ರಪ್ರದೇಶದ ಹೊಸ ರಾಜಧಾನಿ ಅಮರಾವತಿ ವಲಯ ನಿರ್ವಣದಲ್ಲಿ ಒಳವ್ಯವಹಾರ ನಡೆದಿದೆ ಎಂದು ವೈಎಸ್​ಆರ್​ಸಿಪಿ ಸರ್ಕಾರದ ಅವಧಿಯಲ್ಲಿ ಆಂಧ್ರಪ್ರದೇಶ ಸಚಿವ ಸಂಪುಟ ಉಪಸಮಿತಿ ವರದಿ ನೀಡಿತು. ತೆಲುಗುದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಸಹಿತ ಪಕ್ಷದ ಅನೇಕ ಮುಖಂಡರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ತಿಳಿಸಿದ್ದರಿಂದ, ಆಗಿನ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತು. ಇದೇ ಪ್ರಕರಣ ಸಂಬಂಧ ನಾಯ್ಡು ಕೆಲ ಕಾಲ ಜೈಲುವಾಸ ಅನುಭವಿಸಿದರು.
ಏನಿದು ಒಳವ್ಯವಹಾರ?:ಟಿಡಿಪಿ ಸರ್ಕಾರ ಆಡಳಿದಲ್ಲಿದ್ದಾಗ ಅಮರಾವತಿ ರಾಜಧಾನಿ ವಲಯವನ್ನು ಅಧಿಕೃತವಾಗಿ ಘೋಷಿಸುವ ಮುನ್ನ ಟಿಡಿಪಿ ಮುಖಂಡರು ಮತ್ತು ನಾಯಕರಿಗೆ ನಿಕಟವಾದ ಕೆಲವು ಜನರು ಅಲ್ಲಿ ಜಮೀನು ಖರೀದಿಸಿ ಅಪಾರ ಲಾಭ ಪಡೆದಿದ್ದಾರೆ ಎನ್ನುವುದು ಈ ಹಗರಣದ ಸಾರ. ಉನ್ನತ ಸ್ಥಾನಗಳಲ್ಲಿರುವವರು ಕೂಡ ಬೇನಾಮಿ ಹೆಸರಿನಲ್ಲಿ ಜಮೀನು ಖರೀದಿ ಮಾಡಿದ್ದರು ಎಂಬ ವ್ಯಾಪಕ ಆರೋಪ ಕೇಳಿಬಂದಿತ್ತು. ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಭ್ರಷ್ಟ ಮಾರ್ಗಗಳಿಂದ ಹಣ ಸಂಪಾದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಅಮರಾವತಿಯೇ ಏಕೆ?:ಆಂಧ್ರಪ್ರದೇಶದ ಎರಡು ಪ್ರಮುಖ ನಗರಗಳಾದ ವಿಜಯವಾಡಾ ಮತ್ತು ಗುಂಟೂರು ಮಧ್ಯೆ ಅಮರಾವತಿ ಪಟ್ಟಣ ನೆಲೆಸಿದೆ. ಇಲ್ಲಿನ ಸುಪ್ರಸಿದ್ಧ ಅಮರೇಶ್ವರ ಮಂದಿರದಿಂದ ಅಮರಾವತಿ ಎಂಬ ಹೆಸರು ಬಂದಿದೆ. ಎರಡನೇ ಶತಮಾನದಲ್ಲಿ ಶಿವನ ಈ ಭವ್ಯ ದೇವಾಲಯ ನಿರ್ವಣಗೊಂಡಿದೆ ಎಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ. ಅಲ್ಲದೆ, ಅಮರಾವತಿ ಶಾತವಾಹನರು ಮತ್ತು ಪಲ್ಲವರ ರಾಜಧಾನಿಯಾಗಿತ್ತು ಎಂಬುದು ಗಮನಾರ್ಹ. ಮೌರ್ಯ ಸಾಮ್ರಾಜ್ಯದ ಸಾಮ್ರಾಟ ಅಶೋಕನ ಕಾಲದಲ್ಲಿ ಇಲ್ಲಿ ಒಂದು ಸ್ತೂಪ ಮತ್ತು ಮಠದ ನಿರ್ವಣವಾಗಿದೆ. ಎರಡು ನಗರಗಳ ಮಧ್ಯೆ ಇರುವುದರಿಂದ ಅಮರಾವತಿ ರಾಜಧಾನಿಯಾದರೆ, ಇಡೀ ಪ್ರದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂಬುದು ಸರ್ಕಾರದ ಉದ್ದೇಶವಾಗಿದೆ.
ವಿಶೇಷಗಳು: 9 ಥೀಮ್ ಸಿಟಿಗಳು, 27 ಟೌನ್​ಶಿಪ್ 217 ಚದರ ಕಿ.ಮೀ. ವ್ಯಾಪ್ತಿ 600 ಕಿಲೋಮೀಟರ್ ಉದ್ದದ ಹೆದ್ದಾರಿ ಜಾಲನ್ಯಾಯಾಧೀಶರು, ಮಂತ್ರಿಗಳು ಮತ್ತು ಐಎಎಸ್ ಅಧಿಕಾರಿಗಳಿಗಾಗಿ 186 ಬೃಹತ್ ಬಂಗಲೆಗಳ ನಿರ್ಮಾಣ. 100 ಎಕರೆ ವಿಶಾಲ ಪ್ರದೇಶದಲ್ಲಿ ನೂತನ ವಿಧಾನಸಭೆ ಕಟ್ಟಡ. 42 ಎಕರೆ ವಿಸ್ತೀರ್ಣದಲ್ಲಿ ಹೈಕೋರ್ಟ್. 20 ವರ್ಷಗಳಲ್ಲಿ ಲಕ್ಷ ಕೋಟಿ ವೆಚ್ಚ. 25 ವರ್ಷಗಳಲ್ಲಿ 1.5 ಲಕ್ಷ ಕೋಟಿ ರೂ.ಯಿಂದ 2 ಲಕ್ಷ ಕೋಟಿ ರೂ.ವರೆಗೆ ಜಿಡಿಪಿ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:15 + eleven =
Remember me
