ಫಿನ್​ಲೆಂಡ್ ಏ. 4ರಂದು ನ್ಯಾಟೋಗೆ ಸೇರ್ಪಡೆಗೊಂಡಿತು. ರಷ್ಯಾವು ತನ್ನ ನೆರೆಹೊರೆಯ ರಾಷ್ಟ್ರಗಳು ಅಮೆರಿಕ ನೇತೃತ್ವದ ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ (ನ್ಯಾಟೋ) ಸೇರುವುದನ್ನು ವಿರೋಧಿಸುತ್ತದೆ. ನೆರೆಯ ಯೂಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಲು ಪ್ರಮುಖ ಕಾರಣವೇ ಯೂಕ್ರೇನ್ ನ್ಯಾಟೋ ಸೇರಲು ಮುಂದಾಗಿದ್ದು. ಆದರೀಗ, ಫಿನ್​ಲೆಂಡ್​ನ ಕ್ರಮವು ನ್ಯಾಟೋವನ್ನು ರಷ್ಯಾದ ಬಾಗಿಲ ಬಳಿಯೇ ತಂದು ನಿಲ್ಲಿಸಿದೆ. ಈ ಬೆಳವಣಿಗೆಯಿಂದಾಗಿ ರಷ್ಯಾ- ಯೂಕ್ರೇನ್ ಸಮರ ಮತ್ತಷ್ಟು ತೀವ್ರವಾಗಲಿದೆಯೇ ಎಂಬ ಆತಂಕವೂ ತಲೆದೋರಿದೆ.
ಯೂಕ್ರೇನ್ ರೀತಿಯಲ್ಲಿಯೇ ಫಿನ್​ಲೆಂಡ್ ಕೂಡ ರಷ್ಯಾದ ನೆರೆಯ ರಾಷ್ಟ್ರವಾಗಿದೆ. ರಷ್ಯಾದೊಂದಿಗೆ 1,340 ಕಿ.ಮೀ. ಗಡಿಯನ್ನು ಹಂಚಿಕೊಂಡ ಸಣ್ಣ ದೇಶ. ನ್ಯಾಟೋಗೆ ಸೇರ್ಪಡೆಯಾಗುವ ಮೂಲಕ 70 ವರ್ಷಗಳ ಮಿಲಿಟರಿ ಅಲಿಪ್ತ (ತಟಸ್ಥ) ನೀತಿಗೆ ತಿಲಾಂಜಲಿ ಹೇಳಿದೆ. ವಾಸ್ತವವಾಗಿ, ಶೀತಲ ಸಮರದ ಕಾಲದಲ್ಲಿ ಸೋವಿಯತ್ ಒಕ್ಕೂಟ ಮತ್ತು ಪಶ್ಚಿಮದ ನಡುವಿನ ತಟಸ್ಥ ನೀತಿಯನ್ನು ‘ಫಿನ್​ಲ್ಯಾಂಡೀಕರಣ’ ಎಂದೇ ಕರೆಯಲಾಗುತ್ತಿತ್ತು. ಎರಡನೇ ವಿಶ್ವ ಯುದ್ಧದ ನಂತರ ಅನುಸರಿಸಿಕೊಂಡು ಬಂದ ತಟಸ್ಥ ನೀತಿಯಿಂದಾಗಿ ಫಿನ್​ಲೆಂಡ್ ಈ ಹೆಗ್ಗಳಿಕೆ ಪಡೆದುಕೊಂಡಿತ್ತು.
ಏಕೆ ಈ ನಡೆ?: ಫಿನ್​ಲೆಂಡ್ ನ್ಯಾಟೋ ಸೇರ್ಪಡೆಯಾಗಿದ್ದೇಕೆ? ಕೆಲ ತಜ್ಞರ ಅಭಿಮತ ಹೀಗಿದೆ- ಯೂಕ್ರೇನ್ ವಿರುದ್ಧ ರಷ್ಯಾ ಯುದ್ಧ ಆರಂಭಿಸಿರುವುದು ರಷ್ಯಾದ ನೆರೆಯಲ್ಲಿನ ಸಣ್ಣ ರಾಷ್ಟ್ರಗಳು ನ್ಯಾಟೋ ರೀತಿಯ ಪ್ರಬಲ ಮಿಲಿಟರಿ ಬೆಂಬಲವನ್ನು ಹಂಬಲಿಸುವಂತೆ ಮಾಡಿದೆ. ಏಕೆಂದರೆ, ನ್ಯಾಟೋದ ಯಾವುದೇ ಸದಸ್ಯ ರಾಷ್ಟ್ರದ ವಿರುದ್ಧ ಯಾರಾದರೂ ಆಕ್ರಮಣ ಮಾಡಿದರೆ ಮೈತ್ರಿಕೂಟದ ಎಲ್ಲ ಸದಸ್ಯ ರಾಷ್ಟ್ರಗಳು ಮಿಲಿಟರಿ ಬೆಂಬಲ ನೀಡಬೇಕಾಗುತ್ತದೆ.
ಯೂಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ನ್ಯಾಟೋ ಸದಸ್ಯತ್ವಕ್ಕಾಗಿ ಫಿನ್​ಲೆಂಡ್ ಮತ್ತು ಅದರ ನೆರೆಯ ಸ್ವೀಡನ್ ಅರ್ಜಿ ಸಲ್ಲಿಸಿದ್ದವು. ನ್ಯಾಟೋಗೆ ಯಾವುದೇ ಹೊಸಬರನ್ನು ಸೇರ್ಪಡೆ ಮಾಡಿಕೊಳ್ಳಬೇಕಾದರೆ, ಮೈತ್ರಿಕೂಟದ ಎಲ್ಲಾ ಸದಸ್ಯರು ಅನುಮೋದಿಸಬೇಕಾಗುತ್ತದೆ. ಫಿನ್​ಲೆಂಡ್ ಈಗ 31ನೇ ನ್ಯಾಟೋ ಸದಸ್ಯ ರಾಷ್ಟ್ರವಾಗಿದ್ದರೆ, ಸ್ವೀಡನ್ ಸೇರ್ಪಡೆಗೆ ಟರ್ಕಿ ಮತ್ತು ಹಂಗೇರಿ ಒಪ್ಪಿಗೆ ಸೂಚಿಸಿಲ್ಲ.
ತನ್ನ ಜತೆಗಿನ ಸಂಬಂಧವನ್ನು ಹದಗೆಡಿಸುವ ಅಪಾಯಕಾರಿ ಐತಿಹಾಸಿಕ ತಪ್ಪನ್ನು ಫಿನ್​ಲೆಂಡ್ ಮಾಡಿದೆ ಎಂದು ರಷ್ಯಾ ಆಕ್ರೋಶ ವ್ಯಕ್ತಪಡಿಸಿದೆ. ಬಾಲ್ಟಿಕ್ ಸಮುದ್ರ ಮತ್ತು ಯುರೋಪ್​ನಾದ್ಯಂತ ವಿಶ್ವಾಸ ವೃದ್ಧಿಯ ಪರಿಸ್ಥಿತಿ ಇದರಿಂದ ಕಣ್ಮರೆಯಾಗಿದೆ. ಫಿನ್​ಲೆಂಡ್ ಈಗ ನ್ಯಾಟೋದ ಸಣ್ಣ ಸದಸ್ಯನಾಗಿರುವುದರಿಂದ ಅದು ಏನನ್ನೂ ನಿರ್ಧರಿಸುವುದಿಲ್ಲ. ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ತನ್ನ ವಿಶೇಷ ಧ್ವನಿಯನ್ನು ಕಳೆದುಕೊಳ್ಳುತ್ತದೆ ಎಂದು ರಷ್ಯಾ ಹೇಳಿದೆ. ದೇಶದ ಪಶ್ಚಿಮ ಮತ್ತು ವಾಯವ್ಯ ಭಾಗದಲ್ಲಿ ತನ್ನ ಮಿಲಿಟರಿ ಸಾಮರ್ಥ್ಯ ಬಲಪಡಿಸುವುದಾಗಿ ರಷ್ಯಾ ಹೇಳಿದೆ. ಫಿನ್​ಲೆಂಡ್​ನ ನ್ಯಾಟೋ ಪ್ರವೇಶವು ಯೂಕ್ರೇನ್ ಸಂಘರ್ಷವನ್ನು ಮತ್ತಷ್ಟು ವೃದ್ಧಿಸುವ ಅಪಾಯವನ್ನು ಹೆಚ್ಚಿಸಿದೆ ಎಂದು ರಷ್ಯಾ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಹೇಳಿದ್ದಾರೆ.
ಎರಡನೇ ಮಹಾಯುದ್ಧದ ನಂತರ ಸೋವಿಯತ್ ಒಕ್ಕೂಟವನ್ನು ನಿಯಂತ್ರಿಸುವ ಉದ್ದೇಶದಿಂದ ನ್ಯಾಟೋವನ್ನು 1949ರಲ್ಲಿ ಸ್ಥಾಪಿಸಲಾಯಿತು. ಬೆಲ್ಜಿಯಂ, ಕೆನಡಾ, ಡೆನ್ಮಾರ್ಕ್, ಫ್ರಾನ್ಸ್, ಐಸ್​ಲ್ಯಾಂಡ್, ಇಟಲಿ, ಲಕ್ಸೆಂಬರ್ಗ್, ನೆದರ್​ಲೆಂಡ್, ನಾರ್ವೆ, ಪೋರ್ಚುಗಲ್, ಬ್ರಿಟನ್ ಮತ್ತು ಅಮೆರಿಕ- ಈ 12 ರಾಷ್ಟ್ರಗಳು ಸೇರಿ ನ್ಯಾಟೋ ಸ್ಥಾಪಿಸಿದವು. ಗ್ರೀಸ್ ಮತ್ತು ಟರ್ಕಿ 1952ರಲ್ಲಿ ಈ ಮೈತ್ರಿಕೂಟಕ್ಕೆ ಸೇರ್ಪಡೆಯಾದವು. 1955ರಲ್ಲಿ ಜರ್ಮನಿ; 1982ರಲ್ಲಿ ಸ್ಪೇನ್; 1999ರಲ್ಲಿ ಜೆಕಿಯಾ, ಹಂಗೇರಿ ಮತ್ತು ಪೋಲೆಂಡ್; 2004ರಲ್ಲಿ ಬಲ್ಗೇರಿಯಾ, ಎಸ್ಟೋನಿಯಾ, ಲಾಟ್ವಿಯಾ, ಲಿಥುವೇನಿಯಾ, ರೊಮೇನಿಯಾ, ಸ್ಲೋವಾಕಿಯಾ ಮತ್ತು ಸ್ಲೊವೇನಿಯಾ ಸೇರಿಕೊಂಡವು. 2009ರಲ್ಲಿ ಅಲ್ಬೇನಿಯಾ ಮತ್ತು ಕ್ರೊಯೇಷಿಯಾ; 2017ರಲ್ಲಿ ಮಾಂಟೆನೆಗ್ರೊ; 2020ರಲ್ಲಿ ಉತ್ತರ ಮ್ಯಾಸಿಡೋನಿಯಾ ಸೇರ್ಪಡೆಯಾದವು.
ಗಡಿ ರಾಷ್ಟ್ರಗಳ ನಂಟು
ಸೋವಿಯತ್ ಒಕ್ಕೂಟವು ಅಸಾಧಾರಣ ಶಕ್ತಿಯಾಗಿದ್ದಾಗ, ಫಿನ್​ಲೆಂಡ್ ತನ್ನ ಈ ದೊಡ್ಡ ನೆರೆ ರಾಷ್ಟ್ರವನ್ನು ವಿರೋಧಿಸುವ ಅಥವಾ ಸಿಟ್ಟಾಗಿಸುವ ಯಾವುದೇ ಕ್ರಮ ಕೈಗೊಳ್ಳದಂತೆ ಎಚ್ಚರಿಕೆ ವಹಿಸಿತ್ತು. 1939-40ರ ಚಳಿಗಾಲದ ಯುದ್ಧದ ನಂತರ ಈ ನೀತಿಯನ್ನು ಫಿನ್​ಲೆಂಡ್ ಅಳವಡಿಸಿಕೊಂಡಿತ್ತು. ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಫಿನ್​ಲೆಂಡ್ ಸಮೀಪದ ಲೆನಿನ್​ಗ್ರಾ›ಡ್ (ಈಗ ಸೇಂಟ್ ಪೀಟರ್ಸ್​ಬರ್ಗ್) ಅನ್ನು ಸುರಕ್ಷಿತವಾಗಿರಿಸಲು ಸೋವಿಯತ್ ಒಕ್ಕೂಟದ ಸೇನೆಯು ಫಿನ್​ಲೆಂಡ್ ಮೇಲೆ ಆಕ್ರಮಣ ನಡೆಸಿತ್ತು. ಸಂಖ್ಯಾಬಲದಲ್ಲಿ ಸಣ್ಣದಾಗಿದ್ದರೂ ಫಿನ್ಲೆಂಡ್ ಸೇನೆ ದಿಟ್ಟ ಹೋರಾಟ ಪ್ರದರ್ಶಿಸಿ ಸೋವಿಯತ್ ಸೇನೆಗೆ ಹಾನಿಯನ್ನುಂಟು ಮಾಡಿತು. ಮಾಸ್ಕೋ ಶಾಂತಿ ಒಪ್ಪಂದದೊಂದಿಗೆ ಯುದ್ಧ ಕೊನೆಗೊಂಡಿತು. ಎರಡನೇ ವಿಶ್ವ ಯುದ್ಧ ಮುಗಿದ ನಂತರ ಪಾಶ್ಚಿಮಾತ್ಯ ಮಿಲಿಟರಿ ಮೈತ್ರಿಗಳಿಂದ ಫಿನ್​ಲೆಂಡ್ ದೂರ ಉಳಿಯಿತು. ಅಲ್ಲದೆ, ಸೋವಿಯತ್ ಒಕ್ಕೂಟದ ಭದ್ರತಾ ಹಿತಾಸಕ್ತಿಗಳನ್ನು ಗೌರವಿಸುವ ನೀತಿ ಅನುಸರಿಸತೊಡಗಿತು. ಸೋವಿಯತ್ ಒಕ್ಕೂಟವು ಕುಸಿತ ಕಂಡ ನಂತರವೂ ಫಿನ್​ಲೆಂಡ್ ಪಶ್ಚಿಮ ರಾಷ್ಟ್ರಗಳೊಂದಿಗೆ ನಿಕಟ ಸಂಬಂಧಗಳನ್ನು ಹೊಂದಿದರೂ ನ್ಯಾಟೋದಿಂದ ಹೊರಗುಳಿದಿತ್ತು.
ನ್ಯಾಟೋ ಸೇರ್ಪಡೆ ಮೂಲಕ ಫಿನ್​ಲೆಂಡ್ ಭದ್ರತೆಯ ವಿಷಯದಲ್ಲಿ ಉತ್ತಮ ಸ್ಥಾನವನ್ನು ತಲುಪಿದೆ. ಆದರೆ, ಅದು ರಷ್ಯಾದ ಜತೆಗಿನ ಗಮನಾರ್ಹ ವ್ಯಾಪಾರ ಮತ್ತು ಪ್ರವಾಸಿ ಆದಾಯವನ್ನು ಕಳೆದುಕೊಳ್ಳಲಿದೆ. ಅಲ್ಲದೆ, ಪೂರ್ವ ಹಾಗೂ ಪಾಶ್ಚಾತ್ಯ ರಾಷ್ಟ್ರಗಳ ನಡುವಿನ ಹೆಬ್ಬಾಗಿಲು (ಗೇಟ್​ವೇ) ಸ್ಥಾನವನ್ನು ಕೂಡ ಕಳೆದುಕೊಳ್ಳುತ್ತದೆ. ಫಿನ್​ಲೆಂಡ್ ಸೇರ್ಪಡೆಯು ನ್ಯಾಟೋಗೆ ರಷ್ಯಾದ ದಾಳಿಯನ್ನು ಹಿಮ್ಮೆಟ್ಟಿಸಲು ಮಿಲಿಟರಿಯನ್ನು ಒದಗಿಸುತ್ತದೆ. ರಷ್ಯಾದೊಂದಿಗೆ ಗಡಿಯನ್ನು ಫಿನ್​ಲೆಂಡ್ ಹಂಚಿಕೊಂಡಿರುವುದರಿಂದ ಕ್ಷಿಪಣಿ ಉಡಾವಣಾ ಪ್ಯಾಡ್​ಗಳು ಒಳಗೊಂಡಂತೆ ಶಸ್ತ್ರಾಸ್ತ್ರಗಳನ್ನು ರಷ್ಯಾ ಹತ್ತಿರಕ್ಕೆ ತರಲು ನ್ಯಾಟೋಗೆ ಅನುಕೂಲ ಮಾಡಿಕೊಡುತ್ತದೆ. ಫಿನ್​ಲೆಂಡ್ ಯಾವುದೇ ಆಕ್ರಮಣ ಎದುರಿಸಲು ವ್ಯಾಪಕ ಸಿದ್ಧತೆ ಮಾಡಿಕೊಂಡಿರುವ ದೇಶವಾಗಿದೆ. ತನ್ನ ನಾಗರಿಕರಿಗೆ ಮಿಲಿಟರಿ ಸೇವೆಯನ್ನು ಕಡ್ಡಾಯಗೊಳಿಸಿದೆ. ನಿಯಮಿತವಾಗಿ ವಿಪತ್ತು ನಿರ್ವಹಣೆ ತರಬೇತಿಯನ್ನು ನೀಡುತ್ತದೆ. ಫಿನ್​ಲೆಂಡ್​ನ ರಕ್ಷಣಾ ವೆಚ್ಚವು ಅದರ ಒಟ್ಟು ದೇಶಿಯ ಉತ್ಪನ್ನದ (ಜಿಡಿಪಿ) 2 ಪ್ರತಿಶತವಾಗಿದೆ. ಜರ್ಮನಿಯಂತಹ ಸದಸ್ಯ ರಾಷ್ಟ್ರಗಳು ಕೂಡ ಈ ಗುರಿಯನ್ನು ಇದುವರೆಗೆ ತಲುಪಿಲ್ಲ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + sixteen =
Remember me
