ಮಾದಕವಸ್ತು ಕಳ್ಳಸಾಗಣೆ ಪ್ರಕರಣಗಳು ಈ ಹಿಂದೆ ಪಂಜಾಬ್ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದ್ದವು. ಪಾಕಿಸ್ತಾನದ ಗಡಿಗುಂಟ ಇರುವ ಈ ರಾಜ್ಯದ ಪ್ರದೇಶಗಳಲ್ಲಿ ಪಾಕಿಗಳ ಕುಮ್ಮಕ್ಕಿನಿಂದ ನಡೆಯುತ್ತಿದ್ದ ಈ ಅಕ್ರಮವನ್ನು ತಡೆಗಟ್ಟಲು ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ, ಕಳ್ಳಸಾಗಣೆದಾರರು ಈಗ ನೆರೆಯ ರಾಜಸ್ಥಾನದತ್ತ ಮುಖಮಾಡಿದ್ದಾರೆ.
ರಾಜಸ್ಥಾನ ಮತ್ತು ಪಂಜಾಬ್​ಗೆ ಸಂಪರ್ಕ ಕಲ್ಪಿಸುವ ಗಡಿ ಪಟ್ಟಣಗಳ ಬಳಿ ಮಾದಕವಸ್ತು ಕಳ್ಳಸಾಗಣೆ ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚಾಗಿದೆ. ಕಳ್ಳಸಾಗಣೆದಾರರು ರಾಜಸ್ಥಾನವನ್ನು ಈಗ ಪಂಜಾಬ್​ಗೆ ಪರ್ಯಾಯವಾಗಿ ಪರಿಗಣಿಸುತ್ತಿದ್ದಾರೆ. ಪಡೆಗಳ ಉಪಸ್ಥಿತಿ ಮತ್ತು ಮೇಲ್ವಿಚಾರಣೆಯ ಕೊರತೆಯಿಂದಾಗಿ, ಮಾದಕವಸ್ತು ಕಳ್ಳಸಾಗಣೆದಾರರು ರಾಜಸ್ಥಾನ ರಾಜ್ಯದಲ್ಲಿ ಬೇರೂರುಬಿಡುವಂತಾಗಿದೆ. ಅಚ್ಚರಿಯ ಸಂಗತಿ ಎಂದರೆ ಎಂಟು ಪೊಲೀಸ್ ಅಧಿಕಾರಿಗಳೇ ಈ ಅಕ್ರಮಮದಲ್ಲಿ ಭಾಗಿಯಾಗಿರುವುದು ಕೆಲ ದಿನಗಳ ಹಿಂದೆ ಪತ್ತೆಯಾಗಿದೆ. ಅಂತಾರಾಷ್ಟ್ರೀಯ ಕಳ್ಳಸಾಗಣೆದಾರರು ಪಂಜಾಬ್​ನ ಕಳ್ಳಸಾಗಣೆದಾರರೊಂದಿಗೆ ಸಂಪರ್ಕ ಹೊಂದಿದ್ದಾರೆ. ಅಲ್ಲದೆ, ಪಾಕಿಸ್ತಾನದ ಭಯೋತ್ಪಾದಕ ಗುಂಪುಗಳೊಂದಿಗೆ ಕೂಡ ನಂಟು ಹೊಂದಿದ್ದಾರೆ. ಹೀಗಾಗಿ, ಈ ಪ್ರದೇಶದಲ್ಲಿ ಮಾದಕವಸ್ತು ಕಳ್ಳಸಾಗಣೆ ಜತೆಗೆ ಭಯೋತ್ಪಾದನೆ ಕೂಡ ಹೆಚ್ಚಾಗುವ ಭೀತಿ ಸೃಷ್ಟಿಯಾಗಿದೆ. ಹೀಗಾಗಿ, ರಾಜಸ್ತಾನ ರಾಜ್ಯವು ಮತ್ತೊಂದು ಉಡತಾ ಪಂಜಾಬ್ ಆಗಲಿದೆಯೇ ಎಂಬ ಪ್ರಶ್ನೆ ಈಗ ಕೇಳಿಬರತೊಡಗಿದೆ. ರಾಜಸ್ತಾನವು ಪಂಜಾಬ್ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿದೆ. ಈ ಗಡಿ ಭಾಗದ ನಗರಗಳಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ ಪ್ರಕರಣಗಳು ಹೆಚ್ಚಿತ್ತಿರುವುದರಿಂದ ಇಂತಹ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತಿದೆ.
ಪಾಕಿಸ್ತಾನಕ್ಕೆ ಸಮೀಪವಿರುವ ರಾಜಸ್ಥಾನದ ನಾಲ್ಕು ಜಿಲ್ಲೆಗಳಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ 23 ಹೆರಾಯಿನ್ ಕಳ್ಳಸಾಗಣೆ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಸಂದರ್ಭಗಳಲ್ಲಿ, 125 ಕೆಜಿ ಹೆರಾಯಿನ್ ಅನ್ನು ರಾಜ್ಯಕ್ಕೆ ತರಲಾಗಿದೆ. ಕಳೆದ ಎರಡು ವರ್ಷಗಳಲ್ಲಿ 1 ಕೋಟಿ ರೂಪಾಯಿ ಮೌಲ್ಯದ ಡ್ರಗ್ ಮಾತ್ರೆಗಳು, ಕ್ಯಾಪ್ಸುಲ್​ಗಳು ಮತ್ತು ಇಂಜೆಕ್ಷನ್​ಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ಇಲ್ಲಿ 9000 ಮಾದಕ ದ್ರವ್ಯ ಸಾಗಾಟ ಪ್ರಕರಣಗಳು ದಾಖಲಾಗಿದ್ದು, 11,000 ಜನರನ್ನು ಬಂಧಿಸಲಾಗಿದೆ. ಎಂಟು ಪೊಲೀಸರು ಮಾದಕವಸ್ತು ಕಳ್ಳಸಾಗಣೆದಾರರೊಂದಿಗೆ ಕೈಜೋಡಿಸಿದ್ದಾರೆ. ಪಂಜಾಬ್​ನ ಕಳ್ಳಸಾಗಣೆದಾರರು ಈಗ ಶ್ರೀಗಂಗಾನಗರ, ಬಿಕಾನೇರ್ ಮತ್ತು ಬಾರ್ಮರ್ ಮಾರ್ಗಗಳ ಮೂಲಕ ಪಾಕಿಸ್ತಾನದಿಂದ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ತರುತ್ತಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ.
ಪಂಜಾಬ್​ನಲ್ಲಿ ಪ್ರತಿ 20-30 ಕಿಲೋಮೀಟರ್​ಗೆ ಒಂದು ಪೊಲೀಸ್ ಬೆಟಾಲಿಯನ್ ಇದ್ದರೆ, ರಾಜಸ್ತಾನದಲ್ಲಿ ಪ್ರತಿ 50 ಕಿ.ಮೀ. ವ್ಯಾಪ್ತಿಯಲ್ಲಿ ಒಂದು ಬೆಟಾಲಿಯನ್ ಇರುವುದು ಕಳ್ಳಸಾಗಣೆದಾರರಿಗೆ ವರದಾನವಾಗಿದೆ. ಪಂಜಾಬ್ ತನ್ನ ಗಡಿಯಲ್ಲಿ ಹೆಚ್ಚಿನ ನಿಗಾ ವಹಿಸಿದೆ. ಅಲ್ಲದೆ, ಪಡೆಗಳ ಸಂಖ್ಯೆಯನ್ನೂ ಹೆಚ್ಚಿಸಿದೆ. ಹೀಗಾಗಿ, ಕಳ್ಳಸಾಗಣೆದಾರರು ಪ್ಲಾನ್ ಬಿ ಮೂಲಕ ಕೆಲಸ ಮಾಡುತ್ತಿದ್ದಾರೆ. ಅಂದರೆ, ರಾಜಸ್ಥಾನದ ಗಡಿಗಳ ಮೂಲಕ ತಮ್ಮ ದಂಧೆಯನ್ನು ನಡೆಸಲು ಮುಂದಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜಸ್ಥಾನದಲ್ಲಿ ಒಂದು ಬೆಟಾಲಿಯನ್ 50 ಕಿಲೋಮೀಟರ್ ಪ್ರದೇಶವನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದೆ. ಗಡಿ ಪ್ರದೇಶದಲ್ಲಿ ಜನರ ಹಾಗೂ ಸೈನಿಕರ ಸಂಖ್ಯೆ ಕಡಿಮೆ ಇರುವುದರಿಂದ ಮಾದಕ ವಸ್ತು ಕಳ್ಳಸಾಗಣೆದಾರರು ಈ ಸ್ಥಳಗಳು ಸ್ವರ್ಗವಾಗಿ ಪರಿಣಮಿಸಿವೆ. ಶ್ರೀ ಗಂಗಾನಗರ, ಬಿಕಾನೇರ್​ನ ಖಜುವಾಲಾ ಮತ್ತು ಬಾರ್ಮರ್ ಮುಂತಾದವು ಇಂತಹ ಸ್ಥಳಗಳಾಗಿವೆ. ಏತನ್ಮಧ್ಯೆ, ಪಾಕ್ ಗಡಿಯಿಂದ ಜೈಸಲ್ಮೇರ್​ಗೆ ಸೂಕ್ತ ರಸ್ತೆ ಸಂಪರ್ಕ ಜಾಲ ಇಲ್ಲ. ಹೀಗಾಗಿ, ಈ ಭಾಗದ ಮಾದಕವಸ್ತು ಕಳ್ಳಸಾಗಣೆದಾರರ ದಟ್ಟಣೆ ಕಡಿಮೆ ಇದೆ.
ಗಡಿ ಪ್ರದೇಶದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಡ್ರೋನ್​ಗಳ ಮೂಲಕವೂ ಡ್ರಗ್ಸ್ ಸಾಗಿಸುವ ಅನೇಕ ಪ್ರಕರಣಗಳು ಪತ್ತೆಯಾಗಿವೆ. ಡ್ರಗ್ಸ್ ಹೊತ್ತುಬರುವ ಡ್ರೋನ್​ಗಳನ್ನು ಹೊಡೆದುರುಳಿಸುವ ಪ್ರಕರಣಗಳು ಕಳೆದ ಹಲವು ತಿಂಗಳುಗಳಲ್ಲಿ ಹೆಚ್ಚಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸುತ್ತವೆ. ಇತ್ತೀಚೆಗೆ ಜೂನ್​ನಲ್ಲಿ ರಾಜಸ್ಥಾನದ ಗಂಗಾನಗರ ಜಿಲ್ಲೆಯ ಜಿಲ್ಲೆಯ ಶ್ರೀ ಕರಣ್​ಪುರದಲ್ಲಿ ಬಿಎಸ್​ಎಫ್ ಯೋಧರು ಡ್ರೋನ್ ಅನ್ನು ಹೊಡೆದುರುಳಿಸಿದ್ದಾರೆ. ಹೆಚ್ಚಾಗಿ, ಪಂಜಾಬ್ ಮೂಲದ ಕಳ್ಳಸಾಗಣೆದಾರರು ಪಾಕಿಸ್ತಾನದಿಂದ ಡ್ರೋಣ್​ಗಳ ಮೂಲಕ ಡ್ರಗ್ ತಲುಪಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೇ ತಿಂಗಳಲ್ಲಿ ಶ್ರೀ ಕರಣ್​ಪುರ ಪ್ರದೇಶದಲ್ಲಿ ಡ್ರೋನ್​ನ ಚಲನೆಯನ್ನು ಗಮನಿಸಿದ ನಂತರ ಬಿಎಸ್​ಎಫ್ ಯೋಧರು ಗುಂಡು ಹಾರಿಸಿ ಅದನ್ನು ಹೊಡೆದುರುಳಿಸಿದ್ದಾರೆ. ಇದಾದನಂತರ ಶೋಧ ಕಾರ್ಯಾಚರಣೆಯಲ್ಲಿ ಅನುಮಾನಾಸ್ಪದ ವ್ಯಕ್ತಿಯನ್ನು ಸುತ್ತುವರಿದು, ಹೊಲದಲ್ಲಿ ಬಿದ್ದಿದ್ದ ಎರಡು ಹೆರಾಯಿನ್ ಪ್ಯಾಕೆಟ್​ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಈ ಘಟನೆಯ ನಂತರ, ಬಿಎಸ್​ಎಫ್ ಮತ್ತು ಪೊಲೀಸರು ಜಂಟಿಯಾಗಿ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಭಾರತದ ಗಡಿಯಲ್ಲಿ ಡ್ರೋನ್​ಗಳ ಮೂಲಕ ಪಾಕಿಸ್ತಾನಿ ಕಳ್ಳಸಾಗಣೆದಾರರು ಹೆರಾಯಿನ್ ಪ್ಯಾಕೆಟ್​ಗಳನ್ನು ಎಸೆಯುತ್ತಾರೆ. ಈ ಪ್ಯಾಕೆಟ್​ಗಳನ್ನು ಪಡೆದುಕೊಳ್ಳಲು ಕಳ್ಳಸಾಗಣೆದಾರರು, ಬಹುತೇಕವಾಗಿ ಪಂಜಾಬ್​ನಿಂದ ಬರುತ್ತಾರೆ. ಕಳ್ಳಸಾಗಣೆದಾರರು ಒಂದು ನಿರ್ದಿಷ್ಟ ಸ್ಥಳದಲ್ಲಿ ಎಸೆದ ಹೆರಾಯಿನ್ ಪ್ಯಾಕೆಟ್​ಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಾರೆ. ಬಿಎಸ್​ಎಫ್ ಜವಾನರ ಚುರುಕಿನ ಕಾರ್ಯಾಚರಣೆಯಿಂದಾಗಿ ಈ ಕಳ್ಳಸಾಗಾಣಿಕೆದಾರರು ಈಗ ಸಿಕ್ಕಿಬೀಳುವುದು ಹೆಚ್ಚಾಗುತ್ತಿದೆ.
ಪಾಕಿಸ್ತಾನದ ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆದಾರರು ಪಂಜಾಬ್​ನ ಕಳ್ಳಸಾಗಣೆದಾರರೊಂದಿಗೆ ಸಂಪರ್ಕ ಹೊಂದಿದ್ದಾರೆ. ಈಗ ಅನೇಕ ಕಳ್ಳಸಾಗಣೆದಾರರು ರಾಜಸ್ಥಾನದ ಜನರೊಂದಿಗೆ ಕೌಟುಂಬಿಕ ಸಂಬಂಧವನ್ನು ಕೂಡ ಬೆಳೆಸಿಕೊಂಡಿದ್ದಾರೆ. ಇದರಿಂದಾಗಿ, ಇಲ್ಲಿ ಮಾದಕವಸ್ತು ಕಳ್ಳಸಾಗಣೆ ಮಾಡುವುದು ಅವರಿಗೆ ಸುಲಭವಾಗುತ್ತಿದೆ. ಇತ್ತೀಚೆಗೆ ಪಂಜಾಬ್ ಮತ್ತು ದೆಹಲಿಯಲ್ಲಿ ಹೆರಾಯಿನ್ ಸರಬರಾಜು ಮಾಡುತ್ತಿದ್ದ ಸ್ವರೂಪ್ ಸಿಂಗ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ತನ್ನ ಸೋದರ ಸಂಬಂಧಿಯೊಬ್ಬ ಪಾಕಿಸ್ತಾನದಲ್ಲಿ ಮದುವೆಯಾಗಿದ್ದು, ಪಾಕ್​ನ ಬಿಲಾಲ್ ಮತ್ತು ಗುಲಾಬ್ ಎಂಬ ಇಬ್ಬರು ವ್ಯಕ್ತಿಗಳು ಈ ಸೋದರಸಂಬಂಧಿಯಿಂದ ಸ್ವರೂಪ್ ಸಿಂಗನ ಫೋನ್ ನಂಬರ್ ತೆಗೆದುಕೊಂಡು ತನ್ನೊಂದಿಗೆ ಸಂಪರ್ಕ ಬೆಳೆಸಿದ್ದರು ಎಂದಿದ್ದಾನೆ. ಈತ ನಾಲ್ಕು ಹೆರಾಯಿನ್ ಪ್ಯಾಕೆಟ್​ಗಳನ್ನು ನರ್ಮರ್​ಗೆ ರವಾನಿಸಿದ್ದ. ಕಳ್ಳಸಾಗಣೆದಾರರು ಆತನಿಗೆ ಒಂದು ಪ್ಯಾಕೆಟ್​ಗೆ 1 ಲಕ್ಷ ರೂ. ನೀಡಿದ್ದರು. ನಂತರ ಇದನ್ನು ಪಂಜಾಬ್ ಮತ್ತು ದೆಹಲಿ ಪಾರ್ಟಿಗಳಿಗೆ ತಲುಪಿಸಲಾಗಿದೆ.
ಉಡತಾ ಪಂಜಾಬ್ (ಹಾರುವ ಪಂಜಾಬ್) ಎಂಬುದು 2016ರಲ್ಲಿ ನಿರ್ವಣಗೊಂಡ ಹಿಂದಿ ಸಿನಿಮಾದ ಹೆಸರು. ಪಂಜಾಬ್​ನಲ್ಲಿ ಮಾದಕ ದ್ರವ್ಯ ಸೇವನೆಯ ಸುತ್ತ ಸುತ್ತುವ ಕಥೆ ಇದಾಗಿದೆ. ಇಲ್ಲಿನ ಸಾಕಷ್ಟು ಯುವಕರು ಈ ಪಿಡುಗಿಗೆ ಬಲಿಯಾಗುವುದನ್ನು, ಅದರ ವಿರುದ್ಧದ ಹೋರಾಟವನ್ನು ತೋರಿಸುವ ಈ ಚಿತ್ರದಲ್ಲಿ ಶಾಹಿದ್ ಕಪೂರ್, ಕರೀನಾ ಕಪೂರ್, ಆಲಿಯಾ ಭಟ್ ಅಭಿನಯಿಸಿದ್ದಾರೆ. ಸ್ವಾತಂತ್ರ್ಯದ ಸಂದರ್ಭದಲ್ಲಿ ಪಾಕಿಸ್ತಾನ ರಾಷ್ಟ್ರ ನಿರ್ವಣದೊಂದಿಗೆ ವಿಭಜನೆಯಾದ ಹಾಗೂ ಆ ದೇಶದೊಂದಿಗೆ ಗಡಿ ಹಂಚಿಕೊಂಡಿರುವ ಪಂಜಾಬ್​ನಲ್ಲಿ ಈ ಹಿಂದೆ ಮಾಕದವಸ್ತು ಕಳ್ಳದಂಧೆ ವ್ಯಾಪಕ ಪ್ರಮಾಣದಲ್ಲಿ ನಡೆದುಕೊಂಡುಬಂದಿತ್ತು. ಈಗಲೂ ಒಂದಿಷ್ಟು ಪ್ರಮಾಣದಲ್ಲಿ ಅದು ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಮಾದಕವಸ್ತು ವಿಷಯ ಬಂದಾಗಲೆಲ್ಲ ‘ಉಡತಾ ಪಂಜಾಬ್’ ಎಂಬ ಉಕ್ತಿ ಬಳಕೆಯಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − one =
Remember me
