ಕಳೆದ 40 ವರ್ಷಗಳಿಂದ ದಿಲ್ಲಿ ನಿವಾಸಿಯಾಗಿರುವ ಮತ್ತು 30 ವರ್ಷಗಳಿಂದ ಕಾರುಚಾಲಕ ವೃತ್ತಿಯಲ್ಲಿರುವ ಪಶ್ಚಿಮ್​ಹಾರದ ರಾಜೇಶ್​ಕುಮಾರ್​ವಿುಶ್ರಾ, ‘ನಾನೂ ಸೇರಿ ನಮ್ಮ ಏರಿಯಾದಲ್ಲಿ ಬಹುತೇಕ ಮಂದಿ ಕೇಜ್ರಿವಾಲ್​ಗೆ ವೋಟು ಹಾಕುವುದು ಸರ್’ ಎಂದಾಗ ಅವರ ಮಾತಿನಲ್ಲಿ ಮತದಾನದ ಕುರಿತ ಸ್ಪಷ್ಟತೆ ಹಾಗೂ ದಿಲ್ಲಿ ಸಿಎಂ ಬಗೆಗಿನ ದೃಢನಿಲುವು ಎದ್ದುಕಾಣುತ್ತಿತ್ತು.
‘ಅದೇಕೆ ಕೇಜ್ರಿವಾಲ್?’ ಎಂದು ಪ್ರಶ್ನಿಸಿದ್ದಕ್ಕೆ, ‘5 ವರ್ಷದಲ್ಲಿ ಕೇಜ್ರಿವಾಲ್ ಕೆಲಸಗಳು ಕಣ್ಣಿಗೆ ಕಾಣುತ್ತಿವೆ. ಶೂನ್ಯ ವಿದ್ಯುತ್​ಬಿಲ್, ನೀರಿನ ಸಮಸ್ಯೆ ನಿವಾರಣೆ, ಸರ್ಕಾರಿ ಶಾಲೆಗಳ ಉನ್ನತೀಕರಣ, ಮೊಹಲ್ಲಾ ಕ್ಲಿನಿಕ್, ಆರೋಗ್ಯ ಕೇಂದ್ರಗಳ ಸುಧಾರಣೆ… ಕಾಂಗ್ರೆಸ್, ಬಿಜೆಪಿ ಕಾಲದಲ್ಲಿ ನಮ್ಮೆಲ್ಲರನ್ನು ಕಾಡಿದ್ದು ಇದೇ ಸಮಸ್ಯೆಗಳಲ್ಲವೇ. ಇದಕ್ಕೀಗ ಪರಿಹಾರ ಸಿಕ್ಕಿದೆ ಎಂದ ಮೇಲೆ ನಾವೇಕೆ ಕೇಜ್ರಿವಾಲ್​ರನ್ನು ವಿರೋಧಿಸಬೇಕು’ ಎಂದು ಮಿಶ್ರಾ ಮರುಪ್ರಶ್ನೆ ಹಾಕಿದರು.
ದಿಲ್ಲಿಯ ಮಹಿಳೆಯರಿಗೆ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ ಹಾಗೂ ಮತ್ತೆ ಅಧಿಕಾರಕ್ಕೆ ಬಂದರೆ ಶಾಲಾವಿದ್ಯಾರ್ಥಿಗಳಿಗೂ ಉಚಿತ ಪ್ರಯಾಣ ವಿಸ್ತರಿಸುತ್ತೇವೆ ಎಂದು ಕೇಜ್ರಿವಾಲ್ ಚುನಾವಣಾಗ್ಯಾರಂಟಿ ಕಾರ್ಡ್ ಘೊಷಿಸಿರುವುದರಿಂದ ಕೆಳಮಧ್ಯಮ ವರ್ಗದ ಮತದಾರರಂತೂ ಆಪ್ ಬಗ್ಗೆ ಫುಲ್​ಖುಷ್ ಆಗಿದ್ದಾರೆ. ಮಧ್ಯಮ, ಕೆಳಮಧ್ಯಮ ಹಾಗೂ ಬಡವರ್ಗವನ್ನು ಪರಿಣಾಮಕಾರಿಯಾಗಿ ತಲುಪುವಲ್ಲಿ ಕೇಜ್ರಿವಾಲ್ ಯಶಸ್ವಿಯಾಗಿರುವುದೇ ಕಳೆದೈದು ವರ್ಷಗಳ ಮಹತ್ವದ ಸಾಧನೆಗಳಲ್ಲೊಂದು. ಮತದಾನ ದಿನದಂದು ವೋಟಿಂಗ್​ಬೂತ್​ಎದುರು ಕಾಣಿಸಿಕೊಳ್ಳುವ ಬಹುದೊಡ್ಡ ವರ್ಗ ಇದೇ ಆಗಿರುವುದು ಗಮನಾರ್ಹ.
‘ಆಮ್​ಆದ್ಮಿ ಪಾರ್ಟಿಯ ಕೆಲವು ಶಾಸಕರು ನಮ್ಮ ಮಾತನ್ನು ಕೇಳುವುದಿಲ್ಲ, ಭೇಟಿಗೆ ಸಿಗುವುದಿಲ್ಲ’ ಎಂಬ ಅಸಮಾಧಾನದ ಮಾತುಗಳು ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಕೇಳಿಬಂದರೂ, ಕೇಜ್ರಿವಾಲ್ ನಾಯಕತ್ವ ಹಾಗೂ ಸರ್ಕಾರದ ಒಟ್ಟಾರೆ ಕಾರ್ಯವೈಖರಿ ನೋಡಿ ಮತ ಹಾಕುತ್ತೇವೆಂದು ಜನ ಮಾತನಾಡುತ್ತಿರುವುದು ದೆಹಲಿ ಮತದಾರನ ಮೂಡ್ ಬಗೆಗಿನ ಸಣ್ಣ ಚಿತ್ರಣ ನೀಡುತ್ತದೆ. ಮೂರೂ ಪಕ್ಷಗಳಿಗಿಂತ ಮೊದಲೇ ಎಲ್ಲ 70 ಕ್ಷೇತ್ರಗಳಿಗೆ ಟಿಕೆಟ್ ಘೊಷಣೆ ಮಾಡಿದ ಕೇಜ್ರಿವಾಲ್, ವಿವಿಧ ರಾಜ್ಯಗಳಿಂದ ಕಾರ್ಯಕರ್ತರನ್ನು ಕರೆಸಿ ಕಳೆದೊಂದು ತಿಂಗಳಿಂದ ಮನೆಮನೆಗೆ ಹೋಗಿ ಪ್ರಚಾರ ನಡೆಸುತ್ತಿದ್ದಾರೆ. 3 ತಿಂಗಳಿಗೆ ಮುನ್ನವೇ ಸರ್ಕಾರದ 5 ವರ್ಷಗಳ ರಿಪೋರ್ಟ್​ಕಾರ್ಡ್ ತಲುಪಿದೆ.
ಕೇಜ್ರಿವಾಲ್ ಪರ ದಿಲ್ಲಿ ಮಂದಿಗೆ ಒಲವು ಮೂಡಲು ಅವರ ವೈಯಕ್ತಿಕ ವರ್ತನೆ, ನಡವಳಿಕೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಿರುವುದೂ ಕಾರಣ. ಕೇಂದ್ರದೊಂದಿಗೆ ದಿನವೂ ಕಿತ್ತಾಡಿಕೊಂಡು ಕೂತರೆ ಫಲವಿಲ್ಲ ಎಂಬುದನ್ನರಿತ ಕೇಜ್ರಿ, ತಾನಾಯಿತು, ತನ್ನ ಕೆಲಸ ಆಯಿತು ಎನ್ನುತ್ತ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ಮಾಹಿತಿ ಒದಗಿಸುತ್ತಿದ್ದಾರೆ. 2013ರ ರೆಬೆಲ್​ರೂಪದ ‘ಮಫ್ಲರ್​ವ್ಯಾನ್’ ಈಗ ದಿಲ್ಲಿಯಿಂದ ಮರೆಯಾಗಿದ್ದಾರೆ. ಲೆಫ್ಟಿನಂಟ್ ಗವರ್ನರ್, ದಿಲ್ಲಿ ಪೊಲೀಸರ ವಿರುದ್ಧ ಕಿರುಚಾಡುತ್ತಿದ್ದ ವ್ಯಕ್ತಿಯೀಗ ಕಾಣುತ್ತಿಲ್ಲ. ಸಿಟ್ಟಿನಿಂದ ಕಡು ಕೆಂಪಿರುತ್ತಿದ್ದ ಮುಖದಲ್ಲಿಗ ನಗು ಆವರಿಸಿದೆ. ಪ್ರಶಾಂತ್​ಭೂಷಣ್, ಯೋಗೇಂದ್ರ ಸಿಂಗ್ ಯಾದವ್​ರನ್ನು ಪಕ್ಷದಿಂದ ಹೊರಹಾಕಿ ಸರ್ವಾಧಿಕಾರಿತನ ಮೆರೆದಿದ್ದ ವ್ಯಕ್ತಿಯೀಗ ಸಹಕಾರ ತತ್ತ್ವ ಪಾಲಿಸುವ ಚಾಣಾಕ್ಷ ರಾಜಕಾರಣಿಯಂತೆ ತೋರುತ್ತಿದ್ದಾರೆ. ‘ನಮಗೆ ದಿಲ್ಲಿ ಬಿಟ್ಟರೆ ಬೇರೆ ಕಡೆ ರಾಜಕೀಯ ನೆಲೆಯಿಲ್ಲ. ಹೀಗಾಗಿ, ಏನೇ ಮಾಡುವುದಿದ್ದರೂ ದಿಲ್ಲಿಯನ್ನು ಕೇಂದ್ರೀಕರಿಸಿ ತಂತ್ರಗಾರಿಕೆ ಹೆಣೆಯಬೇಕೆನ್ನುವುದು’ ಕೇಜ್ರಿವಾಲ್ ಮತ್ತವರ ತಂಡಕ್ಕೆ ಗೊತ್ತಾಗಿದೆ. ಚುನಾವಣೆಗೆಂದೇ ‘ದಿಲ್ಲಿ ಮೇ ತೋ ಕೇಜ್ರಿವಾಲ್’ ಎಂಬ ಅಭಿಯಾನ ಆರಂಭಿಸಿರುವ ಆಪ್, ‘ಅಚ್ಛೇ ಬೀತೇ ಪಾಂಚ್​ಸಾಲ್, ಲಗೇ ರಹೋ ಕೇಜ್ರಿವಾಲ್’ (5 ವರ್ಷದ ಆಡಳಿತ ಚೆನ್ನಾಗಿತ್ತು. ಇದನ್ನೇ ಮುಂದುವರಿಸಿ ಕೇಜ್ರಿವಾಲ್) ಎಂಬ ಘೊಷವಾಕ್ಯ, ಗಾಯನಗಳ ಮೂಲಕ ಮತದಾರನ ಹೃದಯಕ್ಕೆ ಲಗ್ಗೆ ಹಾಕಿದೆ.
ರಾಜಧಾನಿಯ ಮುಖ್ಯಮಂತ್ರಿಯಾಗಿ 2013 ಮತ್ತು 2015ರಲ್ಲಿ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಶ್ರೀಸಾಮಾನ್ಯನೆದುರೇ ಪ್ರಮಾಣವಚನ ಸ್ವೀಕರಿಸಿದ್ದ ಕೇಜ್ರಿವಾಲ್, ‘ನಾನು ಪ್ರಭಾವಿ ವ್ಯಕ್ತಿಯಾಗುವ ಉದ್ದೇಶ ಹೊಂದಿಲ್ಲ. ಜಾತಿ ರಾಜಕಾರಣ ಮಾಡುತ್ತ, ದುಡ್ಡು ಮಾಡಲು ಇಲ್ಲಿ ಬಂದಿಲ್ಲ. ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಿಸಲು ರಾಜಕೀಯ ಪ್ರವೇಶಿಸುತ್ತಿದ್ದೇನೆ’ ಎಂದು ಘೊಷಿಸಿದ್ದರು. ಜಡ್ಡುಗಟ್ಟಿದ ವ್ಯವಸ್ಥೆ ಸರಿಪಡಿಸುವುದು ಸುಲಭವಲ್ಲ. ಆದರೆ, ಜಡ್ಡುಗಟ್ಟಿದ ಅಧಿಕಾರಶಾಹಿಯನ್ನು ದಿಲ್ಲಿಯ ಮಟ್ಟಿಗೆ ಬಿಗಿಪಡಿಸುವಲ್ಲಂತೂ ಅವರು ಬಹುತೇಕ ಸಫಲರಾಗಿದ್ದಾರೆ. ಹಾಗೇ, ಬಿಜೆಪಿ, ಕಾಂಗ್ರೆಸ್ ಪೈಪೋಟಿ ಮಧ್ಯೆ ಮತದಾರರನ್ನು ತಮ್ಮೆಡೆ ಬಿಗಿಯಾಗಿಟ್ಟುಕೊಳ್ಳುವ ರಾಜಕಾರಣ ಮಾಡುವ ಕಲೆಯೂ ಅವರಲ್ಲೀಗ ಕರಗತವಾಗಿದೆ. ‘ಗೃಹ ಸಚಿವ ಅಮಿತ್ ಷಾ ನಿಮ್ಮ ಮೇಲೆ ಸುಳ್ಳುಗಾರ ಎಂದು ವಾಗ್ದಾಳಿ ನಡೆಸಿದ್ದಾರಲ್ಲ’ ಎಂದು ಪತ್ರಕರ್ತ ಕೇಳಿದ ಪ್ರಶ್ನೆಗೆ, ‘ಹೇಳಲಿ ಬಿಡಿ. ಅದು ಅವರ ಸಂಸ್ಕೃತಿ. ದಾಳಿಗೆ ಪ್ರತಿದಾಳಿ ಮಾಡುವುದು ನನ್ನ ಗುಣವಲ್ಲ’ ಎಂದು ನಯವಾಗಿಯೇ ಪ್ರತಿಕ್ರಿಯಿಸಿದರು. 2020ರಲ್ಲಿ ಕಾಣುವ ಕೇಜ್ರಿವಾಲ್​ರ ನೈಜ ಮುಖವಿದು!
2015ರ ಚುನಾವಣಾ ಪ್ರಚಾರ ಆರಂಭಕ್ಕೆ ಮುನ್ನ ದಿಲ್ಲಿಯ ಕೊನಾಟ್​ಪ್ಲೇಸ್ ಪಕ್ಕದ ಮಂದಿರ್​ವಾರ್ಗದಲ್ಲಿರುವ ವಾಲ್ಮೀಕಿ ಮಂದಿರದಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದ್ದ ಕೇಜ್ರಿವಾಲ್, ಈ ಬಾರಿಯೂ ಅದೇ ವಾಲ್ಮೀಕಿ ಮಂದಿರದಲ್ಲಿ ಪೂಜೆ ಸಲ್ಲಿಕೆ ನಂತರವೇ ನಾಮಪತ್ರ ಸಲ್ಲಿಸಿದರು. ವಾಲ್ಮೀಕಿ ಮಂದಿರ ಭೇಟಿ ಹಿಂದಿನ ತಂತ್ರ ದಲಿತ ವೋಟ್​ಬ್ಯಾಂಕ್ ರಕ್ಷಣೆ. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿರುವ ದೆಲ್ಲಿ ಅಭಿವೃದ್ಧಿ ಪ್ರಾಧಿಕಾರ ಕೋರ್ಟ್ ಆದೇಶದ ಮೇರೆಗೆ 2019ರ ಆಗಸ್ಟ್​ನಲ್ಲಿ ಸಂತ ರವಿದಾಸ್​ಗೆ ಸಂಬಂಧಿಸಿದ್ದ ದೇವಾಲಯವೊಂದನ್ನು ನೆಲಸಮಗೊಳಿಸಿತ್ತು. ಇದನ್ನು ಪ್ರಶ್ನಿಸಿ ದಲಿತರು ನಡೆಸಿದ್ದ ಪ್ರತಿಭಟನೆಗೆ ಕೈಜೋಡಿಸಿದ್ದ ದಿಲ್ಲಿ ಸರ್ಕಾರ, ಅಭಿವೃದ್ಧಿ ಪ್ರಾಧಿಕಾರದ ವಿರುದ್ಧವೇ ಹೋರಾಟಕ್ಕಿಳಿದಿತ್ತು. ಕೋರ್ಟ್ ಆದೇಶವಿದ್ದರೂ ದಲಿತರ ಬೆನ್ನಿಗೆ ನಿಂತ ಆಮ್​ದಿ್ಮ ಪಕ್ಷದ ಉದ್ದೇಶ ಏನಿತ್ತು ಎಂಬುದನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ನಿಷ್ಕ್ರಿಯಗೊಳಿಸಲು ಕೇಂದ್ರ ಸರ್ಕಾರ ಜಾರಿಗೆ ತಂದ ತಿದ್ದುಪಡಿ ಕಾನೂನನ್ನು ಬಹಿರಂಗವಾಗಿ ಬೆಂಬಲಿಸಿದ ಕೇಜ್ರಿವಾಲ್, ಅಯೋಧ್ಯೆ ತೀರ್ಪಿಗೆ ತಕರಾರು ತೆಗೆಯಲಿಲ್ಲ. ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಕಾಂಗ್ರೆಸ್ ಹಾಗೂ ಇತರೆ ವಿಪಕ್ಷಗಳಂತೆ ಬೀದಿಗಿಳಿದು ಹೋರಾಡುವುದು ತನ್ನ ಆದ್ಯತೆಯಲ್ಲ. ಈ ಕಾನೂನಿನಿಂದ ಮುಸ್ಲಿಮರಿಗೆ ಮಾತ್ರವಲ್ಲ, ಮುಖ್ಯವಾಗಿ ಬಡಜನರಿಗೆ ತೊಂದರೆಯಾಗಲಿದೆ ಎಂದು ಸುಮ್ಮನಿದ್ದರು. ದೆಹಲಿಯ ಜಾಮಿಯಾ ಮಿಲಿಯಾ ಯುನಿವರ್ಸಿಟಿ ಮತ್ತು ಶಾಹೀನ್​ಬಾಗ್​ನಲ್ಲಿ ಸಿಎಎ/ಎನ್​ಆರ್​ಸಿ ಖಂಡಿಸಿ ನಡೆಸುತ್ತಿರುವ ಹೋರಾಟ ಬೆಂಬಲಿಸಿ, ತಾನು ಮುಸ್ಲಿಂ ವಿರೋಧಿಯಲ್ಲ ಎಂಬುದನ್ನು ತೋರಿಸಿದ್ದಾರೆ. ಹಾಗೆಂದು, ಸಿಎಎ/ಎನ್​ಆರ್​ಸಿಗೆ ಸಂಬಂಧಿಸಿದಂತೆ ಕೇಂದ್ರದ ವಿರುದ್ಧವೂ ವಿಪರೀತವಾಗಿ ಕೂಗಾಡಿಲ್ಲ. ಕೇಜ್ರಿವಾಲ್ ವಿರುದ್ಧದ ಚುನಾವಣಾ ಹೋರಾಟಕ್ಕೆ ವಿಷಯದ ಕೊರತೆಯಿಂದಾಗಿ ಬಿಜೆಪಿಗೆ ಈಗ ಈ ವಿವಾದವೇ ಬ್ರಹ್ಮಾಸ್ತ್ರ. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಅಭ್ಯರ್ಥಿಗೇ ಬಹುಪಾಲು ಮುಸ್ಲಿಮರು ಮತ ಹಾಕುತ್ತಾರೆ ಎಂಬ ಲೆಕ್ಕಾಚಾರದ ಅರಿವಿದ್ದುಕೊಂಡೇ ಕೇಜ್ರಿವಾಲ್ ಎಚ್ಚರಿಕೆಯ ಹೇಳಿಕೆಗಳನ್ನು ನೀಡುತ್ತ ಬ್ಯಾಲೆನ್ಸಿಂಗ್​ಆಕ್ಟ್ ಕಾರ್ಯತಂತ್ರವನ್ನು ಸಮರ್ಥವಾಗಿಯೇ ಅನುಸರಿಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
