2021-22ನೇ ಹಣಕಾಸು ವರ್ಷದಲ್ಲಿ ಅಮೆರಿಕವು ಚೀನಾವನ್ನು ಹಿಂದಿಕ್ಕಿ ಭಾರತದ ಅಗ್ರಗಣ್ಯ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದೆ. ವಾಣಿಜ್ಯ ಸಚಿವಾಲಯದ ಮಾಹಿತಿಯ ಪ್ರಕಾರ, 2021-22ನೇ ಹಣಕಾಸು ವರ್ಷದಲ್ಲಿ ಅಮೆರಿಕ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರವು 119.42 ಶತಕೋಟಿ ಡಾಲರ್​ಗೆ (9,55,360 ಕೋಟಿ ರೂಪಾಯಿಗೆ) ತಲುಪಿದೆ. 2020-21ರಲ್ಲಿ ಈ ಮೊತ್ತವು 80.51 ಶತಕೋಟಿ ಡಾಲರ್ (6,44,080 ಕೋಟಿ ರೂಪಾಯಿ) ಇತ್ತು. ಅಮೆರಿಕಕ್ಕೆ ರಫ್ತುಗಳು ಹಿಂದಿನ ಹಣಕಾಸು ವರ್ಷದಲ್ಲಿ 51.62 ಶತಕೋಟಿ ಡಾಲರ್​ನಿಂದ 2021-22ರಲ್ಲಿ 76.11 ಶತಕೋಟಿ ಡಾಲರ್​ಗೆ ಹೆಚ್ಚಿವೆ. ಇದೇ ವೇಳೆ ಆಮದುಗಳು 2020-21ರಲ್ಲಿ 29 ಶತಕೋಟಿ ಡಾಲರ್​ನಿಂದ 2021-22ರ ಹಣಕಾಸು ವರ್ಷದಲ್ಲಿ 43.31 ಶತಕೋಟಿ ಡಾಲರ್​ಗೆ ಏರಿಕೆಯಾಗಿವೆ.
ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡುವ ಪ್ರಮುಖ ವಸ್ತುಗಳೆಂದರೆ ಪಾಲಿಶ್ ಮಾಡಿದ ವಜ್ರಗಳು, ಔಷಧೀಯ ಉತ್ಪನ್ನಗಳು, ಆಭರಣಗಳು, ಲಘು ತೈಲಗಳು, ಘನೀಕೃತ ಸೀಗಡಿ ಇತ್ಯಾದಿ. ಅಮೆರಿಕದಿಂದ ಪ್ರಮುಖ ಆಮದುಗಳಲ್ಲಿ ಪೆಟ್ರೋಲಿಯಂ, ಒರಟಾದ ವಜ್ರಗಳು, ದ್ರವೀಕೃತ ನೈಸರ್ಗಿಕ ಅನಿಲ, ಚಿನ್ನ, ಕಲ್ಲಿದ್ದಲು, ತ್ಯಾಜ್ಯ, ಬಾದಾಮಿ ಇತ್ಯಾದಿ ಸೇರಿವೆ.
2020-21 ರಲ್ಲಿ ಚೀನಾವು ಭಾರತದ ಅಗ್ರ ವ್ಯಾಪಾರ ಪಾಲುದಾರ ಆಗಿತ್ತು. ಚೀನಾಕ್ಕಿಂತ ಮೊದಲು, ಯುಎಇ ಅತಿದೊಡ್ಡ ವ್ಯಾಪಾರ ಪಾಲುದಾರ ಆಗಿತ್ತು. 2021-22ರಲ್ಲಿ, ಯುಎಇ 72.9 ಶತಕೋಟಿ ಡಾಲರ್ (5,83,200 ಕೋಟಿ ರೂ.) ವ್ಯವಹಾರದೊಂದಿಗೆ ಭಾರತದ ಮೂರನೇ ಅತಿ ದೊಡ್ಡ ವ್ಯಾಪಾರ ಪಾಲುದಾರ ಆಗಿದೆ. ಅಮೂಲ್ಯ ಲೋಹಗಳು, ರತ್ನ, ಆಭರಣ, ಖನಿಜ, ಆಹಾರ ಧಾನ್ಯ, ಯಂತ್ರೋಪಕರಣಗಳನ್ನು ಭಾರತ ರಫ್ತು ಮಾಡಿ, ಪೆಟ್ರೋಲಿಯಂ ಉತ್ಪನ್ನಗಳು, ಬಂಗಾರ, ವಜ್ರ ಆಮದು ಮಾಡಿಕೊಳ್ಳುತ್ತದೆ. ಸೌದಿ ಅರೇಬಿಯಾ (42.85 ಶತಕೋಟಿ ಡಾಲರ್. ಕಚ್ಚಾ ತೈಲ, ಎಲ್​ಪಿಜಿ, ರಸಗೊಬ್ಬರ, ಪ್ಲಾಸ್ಟಿಕ್ ಆಮದು ಮಾಡಿಕೊಳ್ಳಲಾಗುತ್ತದೆ. ಅಕ್ಕಿ ಸೇರಿದಂತೆ ಆಹಾರ ಧಾನ್ಯ, ಜವಳಿ, ಸೆರಾಮಿಕ್ ಟೈಲ್ಸ್ ಇವು ಪ್ರಮುಖವಾಗಿ ರಫ್ತು ಮಾಡಲಾಗುವ ಪದಾರ್ಥಗಳು), ಇರಾಕ್ (34.33 ಶತಕೋಟಿ ಡಾಲರ್) ಮತ್ತು ಸಿಂಗಾಪುರ (30 ಶತಕೋಟಿ ಡಾಲರ್) ವಹಿವಾಟಿನೊಂದಿಗೆ ನಂತರದ ಸ್ಥಾನಗಳಲ್ಲಿವೆ.
ಗಡಿಯಲ್ಲಿ ಕ್ಯಾತೆ ತೆಗೆಯುತ್ತ ಸದಾ ತಲೆನೋವುಂಟು ಮಾಡುವ ಚೀನಾಕ್ಕೆ ಸೂಕ್ತ ಪಾಠ ಕಲಿಸುವ ಉದ್ದೇಶದಿಂದ ಆ ದೇಶದ ಮೇಲಿನ ಅವಲಂಬನೆಯನ್ನು ಭಾರತ ತಗ್ಗಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಯತ್ನಗಳು ನಡೆಯುತ್ತಲೇ ಇವೆ. ಹೀಗಿದ್ದರೂ ಚೀನಾದೊಂದಿಗೆ ಭಾರತದ ವ್ಯಾಪಾರ ಕೊರತೆ ಹೆಚ್ಚುತ್ತಿದೆ. ವಿದ್ಯುತ್ ಯಂತ್ರೋಪಕರಣಗಳು, ಕನ್ನಡಕ, ಕಾರು, ರೈಲ್ವೆ ಭಾಗಗಳು, ಹೆಡ್​ಫೋನ್, ಮೆಮೊರಿ ಕಾರ್ಡ್, ರಾಸಾಯನಿಕ ಮತ್ತು ಪೆಟ್ರೋಲಿಯಂ ಉತ್ಪನ್ನ… ಹೀಗೆ ಚೀನಾದಿಂದ ಮಾಡಿಕೊಳ್ಳಲಾಗುವ ಆಮದು ವಸ್ತುಗಳು ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ ತೀವ್ರ ಏರಿಕೆ ಕಂಡಿವೆ. ಕಳೆದ ಏಪ್ರಿಲ್, ಮೇ ತಿಂಗಳುಗಳಲ್ಲಿ ಚೀನಾದಿಂದ ಆಮದು ಶೇ. 12.75ರಷ್ಟು ಹೆಚ್ಚಾಗಿದ್ದರೆ, ಚೀನಾಕ್ಕೆ ಭಾರತದ ರಫ್ತುಗಳ ಪ್ರಮಾಣದ ಹಿಂದಿನ ವರ್ಷಕ್ಕಿಂತ ಶೇ. 31ರಷ್ಟು ಕುಸಿತ ಕಂಡಿದೆ. ಇದು ವ್ಯಾಪಾರ ಮತ್ತು ಚಾಲ್ತಿ ಖಾತೆ ಕೊರತೆಯ ಮೇಲೆ ಒತ್ತಡ ಉಂಟುಮಾಡಿದೆ.2021-22ನೇ ಹಣಕಾಸು ವರ್ಷದಲ್ಲಿ ಚೀನಾದೊಂದಿಗಿನ ವ್ಯಾಪಾರ ಕೊರತೆಯು ದಾಖಲೆಯ 72.9 ಬಿಲಿಯನ್ ಡಾಲರ್​ಗೆ (5,83,200 ಕೋಟಿ ರೂ.) ವಿಸ್ತರಿಸಿದೆ. ಚೀನಾವಿರೋಧಿ ಭಾವನೆಯು ಉತ್ತುಂಗಕ್ಕೇರಿದ್ದ ಸಮಯದಲ್ಲಿಯೂ ಚೀನಾದಿಂದ ಆಮದು ಗಮನಾರ್ಹವಾಗಿ ಹೆಚ್ಚಳ ಕಂಡಿತ್ತು.
ಭಾರತದಿಂದ ರಫ್ತು ಮಾಡುವ ಕಬ್ಬಿಣದ ಅದಿರು, ಹತ್ತಿ ಮತ್ತು ಮಾಂಸಕ್ಕೆ ಚೀನಾದಲ್ಲಿ ಲಾಕ್​ಡೌನ್​ನಿಂದಾಗಿ ಬೇಡಿಕೆ ಕುಸಿದಿದೆ ಎಂದು ವಾಣಿಜ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ. ಕೈಗಾರಿಕಾ ಉತ್ಪನ್ನಗಳಲ್ಲಿ ಬಳಸುವ ರಾಸಾಯನಿಕಗಳಂತಹ ವಸ್ತುಗಳು ಚೀನಾದಿಂದ ತರಿಸುವ ಪ್ರಮುಖ ಸರಕುಗಳಲ್ಲಿ ಸೇರಿವೆ. 2021ಕ್ಕೆ ಹೋಲಿಸಿದಾಗ 2022ರ ಮೇ ತಿಂಗಳಲ್ಲಿ ಕೈಗಾರಿಕೆಗಳ ಉತ್ಪಾದನೆ ಸಾಮರ್ಥ್ಯ ಶೇ. 20.6 ಬೆಳವಣಿಗೆ ಸಾಧಿಸಿದೆ. ಚೀನಾದ ಔಷಧೀಯ ಪದಾರ್ಥಗಳ ಆಮದು ಭಾರತೀಯ ಫಾರ್ವ ಉದ್ಯಮಕ್ಕೆ ಕಚ್ಚಾವಸ್ತುಗಳನ್ನು ಒದಗಿಸುತ್ತವೆ. ಈ ಕಚ್ಚಾವಸ್ತುಗಳಿಂದ ಸಿದ್ಧಪಡಿಸಿದ ಸರಕುಗಳನ್ನು ರಫ್ತು ಮಾಡಲಾಗುತ್ತದೆ.
ಕಳೆದ ವಾರ ಚೀನಾದ ಕಸ್ಟಮ್ಸ್ ಇಲಾಖೆ ಬಿಡುಗಡೆ ಮಾಡಿದ ಅಂಕಿ-ಅಂಶಗಳು, ಉಭಯ ದೇಶಗಳ ನಡುವಿನ ವ್ಯಾಪಾರವು ಸತತ ಎರಡನೇ ವರ್ಷಕ್ಕೆ 100 ಶತಕೋಟಿ ಡಾಲರ್ (8 ಲಕ್ಷ ಕೋಟಿ ರೂ.) ತಲುಪಿದೆ ಎಂಬುದನ್ನು ತೋರಿಸುತ್ತವೆ. ಕಳೆದ ಜನವರಿಯಿಂದ ಜೂನ್ ಅವಧಿಯಲ್ಲಿ ಇದು 57.5 ಶತಕೋಟಿ ಡಾಲರ್ (4,60,000 ಕೋಟಿ ರೂ.) ಮುಟ್ಟಿದೆ. ಜನವರಿ-ಜೂನ್ ಅವಧಿಯಲ್ಲಿ ಭಾರತದ ಒಟ್ಟು ಸರಕು ಆಮದುಗಳು ಶೇ. 39.6 ಏರಿಕೆಯಾಗಿ 361.1 ಶತಕೋಟಿ ಡಾಲರ್​ಗೆ ತಲುಪಿದೆ. ಚೀನಾದೊಂದಿಗೆ ಭಾರತದ ವ್ಯಾಪಾರ ಕೊರತೆಯು 2004-05ರಲ್ಲಿ 1.5 ಶತಕೋಟಿ ಡಾಲರ್​ನಿಂದ 2013-14ರಲ್ಲಿ 36 ಶತಕೋಟಿ ಡಾಲರ್​ಗೆ ಏರಿಕೆಯಾಗಿದೆ. ಆದರೂ, ವ್ಯಾಪಾರ ಕೊರತೆಯ ಬೆಳವಣಿಗೆಯನ್ನು 2014-15ರಲ್ಲಿ 48 ಶತಕೋಟಿಯಿಂದ 2021-22ರಲ್ಲಿ 73 ಶತಕೋಟಿಗೆ (1.5 ಪಟ್ಟು) ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಪಿಎಲ್​ಐ (ಪೊ›ಡಕ್ಷನ್ ಲಿಂಕ್ಡ್ ಇನ್ಸೆಂಟಿವ್- ಉತ್ಪಾದನೆ ಸಂಬಂಧಿ ಪ್ರೋತ್ಸಾಹಕ) ರೀತಿಯ ಯೋಜನೆಗಳಿಂದ ಉತ್ಪಾದನೆ ಹೆಚ್ಚಿಸಬಹುದಾಗಿದೆ ಎಂದು ಕೆಲ ತಜ್ಞರು ಹೇಳುತ್ತಾರೆ. ಚೀನಾದ ಉತ್ಪಾದನೆ ಪ್ರಮಾಣ ಮತ್ತು ಬೆಲೆಗೆ ಸರಿಸಾಟಿಯಾಗುವುದು ಕಷ್ಟಕರ. ಅವರ ಹೂಡಿಕೆ ಬಹಳ ದೊಡ್ಡ ಮಟ್ಟದಲ್ಲಿದೆ ಎನ್ನುತ್ತಾರೆ ಜವಾಹರಲಾಲ್ ವಿಶ್ವವಿದ್ಯಾಲಯದ ಪ್ರೊ. ಬಿಸ್ವಜಿತ್ ಧರ್. ಚೀನಾದಿಂದ ಆಮದು ಹೆಚ್ಚಾಗುತ್ತಲೇ ಹೋಗುತ್ತದೆ. ಏಕೆಂದರೆ ಇಂದಿನ ವರೆಗೂ ನಾವು ಬಿಳಿ ವಸ್ತುಗಳನ್ನು (ಕುಕ್ಕರ್, ರೆಫ್ರಿಜರೇಟರ್ ಮುಂತಾದ ಗೃಹ ಬಳಕೆಯ ವಸ್ತುಗಳನ್ನು) ತಯಾರಿಸಲು ಸಾಧ್ಯವಾಗಿಲ್ಲ. ಬಹಳಷ್ಟು ಫಾರ್ವ ಕಂಪನಿಗಳು ಚೀನಾದಿಂದ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತವೆ. ಸಾಮೂಹಿಕ ಬಳಕೆಯ ಬಹಳಷ್ಟು ಉತ್ಪನ್ನಗಳು ಚೀನಾದಿಂದ ಬರುತ್ತಿದ್ದು, ಭಾರತದಲ್ಲಿ ಬರೀ ಪ್ಯಾಕ್ ಮಾಡಲಾಗುತ್ತದೆ. ಭಾರತವು ಈ ವಸ್ತುಗಳ ಉತ್ಪಾದನೆಯನ್ನು ಹೆಚ್ಚಿಸಬೇಕಾಗಿದೆ ಎಂದು ಅಖಿಲ ಭಾರತ ಕೈಗಾರಿಕೆ ಗಳ ಸಂಘದ ಅಧ್ಯಕ್ಷ ವಿಜಯ್ ಕಲಾಂತ್ರಿ ಹೇಳುತ್ತಾರೆ.
ಭಾರತದ ಸರಕು ರಫ್ತುಗಳು ಜನವರಿ-ಜೂನ್ 2021ರಲ್ಲಿ 186 ಶತಕೋಟಿ ಡಾಲರ್​ನಿಂದ ಜನವರಿ-ಜೂನ್ 2022 ರಲ್ಲಿ 235.8 ಶತಕೋಟಿ ಡಾಲರ್​ಗೆ ಏರಿಕೆಯಾಗಿ, ಶೇ. 26.8 ಬೆಳವಣಿಗೆ ದಾಖಲಿಸಿದೆ. ಆದರೆ, 2022ರ ಮೊದಲಾರ್ಧದಲ್ಲಿ ಚೀನಾಕ್ಕೆ ಮಾತ್ರ ರಫ್ತುಗಳು ಶೇ. 30.9 ಕುಸಿತ ದಾಖಲಿಸಿವೆ. 2021ರ ಮೊದಲಾರ್ಧದಲ್ಲಿ ನಮ್ಮ ಒಟ್ಟಾರೆ ರಫ್ತಿನಲ್ಲಿ ಶೇ. 6.8ರಷ್ಟು ಪಾಲು ಹೊಂದುವ ಮೂಲಕ ಚೀನಾ 2ನೇ ಅತಿದೊಡ್ಡ ರಫ್ತು ತಾಣವಾಗಿತ್ತು. ಆದರೆ, 2022ರ ಮೊದಲಾರ್ಧದಲ್ಲಿ 5 ನೇ ಸ್ಥಾನಕ್ಕೆ ಕುಸಿದಿದೆ (ಪಾಲು ಶೇ. 3.7ಕ್ಕೆ ಇಳಿದಿದೆ). ಅಮೆರಿಕ, ಯುಎಇ ಮತ್ತು ಬಾಂಗ್ಲಾದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗಿದೆ.
ಶೇ. 42 ಏರಿಕೆ:2021-22ರ ಹಣಕಾಸು ವರ್ಷದಲ್ಲಿ ದೇಶದಿಂದ ಎಲೆಕ್ಟ್ರಾನಿಕ್ಸ್ ಸರಕು ಗಳ ರಫ್ತು ಶೇ. 42ರಷ್ಟು ಏರಿಕೆಯಾಗಿದ್ದು, ಇದರ ಮೊತ್ತ 1,16,894 ಕೋಟಿ ರೂ.ಗೆ ತಲುಪಿದೆ. ಲೋಕಸಭೆಗೆ ಲಿಖಿತ ಉತ್ತರ ನೀಡಿರುವ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ವಿದ್ಯುನ್ಮಾನ ವಸ್ತುಗಳ ರಫ್ತು 2017-18 ರಿಂದ 2021-22ರ ಅವಧಿಯಲ್ಲಿ ಗಣನೀಯವಾಗಿ ಹೆಚ್ಚಿದ್ದು, ವಾರ್ಷಿಕವಾಗಿ ಶೇ. 29ರಂದು ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ಉತ್ಪಾದನೆಯು ವಾರ್ಷಿಕವಾಗಿ ಶೇ. 17.9ರಷ್ಟು ಬೆಳವಣಿಗೆ ದಾಖಲಿಸಿದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
