2025ರ ವೇಳೆಗೆ ಐದು ಟ್ರಿಲಿಯನ್ ಡಾಲರ್ (5 ಲಕ್ಷ ಕೋಟಿ ಡಾಲರ್) ಆರ್ಥಿಕತೆಯ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಭಾರತ ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಲಿದೆ ಎಂಬ ಮಾತುಗಳೂ ಜೋರಾಗಿವೆ. ಆದರೆ, ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ. ಏಕೆ ಈ ಕುಸಿತ? ಮಾಗೋಪಾಯಗಳೇನು? ಈ ಕುರಿತ ಮಾಹಿತಿ ಇಲ್ಲಿದೆ.
| ದೀಪಕ ತಲವಾಯಿ, ಹುಬ್ಬಳ್ಳಿ
ಯುಎಸ್ ಡಾಲರ್. ಸದ್ಯ ಜಗತ್ತಿನಲ್ಲಿಯೇ ಶಕ್ತಿಶಾಲಿ ಕರೆನ್ಸಿ. ಜಾಗತಿಕವಾಗಿ ಹೆಚ್ಚು ಬಳಕೆಯಾಗುವ ಕರೆನ್ಸಿ. ಸಾಮಾನ್ಯವಾಗಿ ಕರೆನ್ಸಿಯ ಸಾಮರ್ಥ್ಯ ಅಥವಾ ದೌರ್ಬಲ್ಯವನ್ನು ಅಳೆಯಲು ಅದನ್ನು ಯುಎಸ್ ಡಾಲರ್​ನೊಂದಿಗೆ ಹೋಲಿಸಲಾಗುತ್ತದೆ. ಇಂತಹ ಡಾಲರ್ ಎದುರು ಭಾರತದ ರೂಪಾಯಿ ಸಾರ್ವಕಾಲಿಕ ಕುಸಿತ ಕಂಡಿದೆ. ಒಂದು ಕಾಲದಲ್ಲಿ ಒಂದು ಡಾಲರ್​ಗೆ ಮೂರು ರೂಪಾಯಿ ಬೆಲೆ ಇತ್ತು. ಆದರೆ, ಕಳೆದ ಕೆಲದಿನಗಳ ಹಿಂದೆ ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ (83.41) ಕಂಡಿದೆ. ಇದು ನಿರಂತರ ಪ್ರಕ್ರಿಯೆ. ಇದಕ್ಕೆ ಕಾರಣಗಳು ಹಲವಾರು. ಪ್ರಮುಖವಾಗಿ ಹಣದುಬ್ಬರ, ಜಾಗತಿಕ ಇಂಧನ ಬೆಲೆಗಳು, ರೂಪಾಯಿಯ ಅಪಮೌಲ್ಯೀಕರಣ, ವ್ಯಾಪಾರ ಅಸಮತೋಲನ, ಬಜೆಟ್ ಕೊರತೆಗಳು, ಆರ್ಥಿಕ ಬಿಕ್ಕಟ್ಟು ಇತ್ಯಾದಿ.
ಪರಿಣಾಮಗಳೇನು?:ಡಾಲರ್ ಎದುರು ಕೆಲ ಪೈಸೆಗಳ ಲೆಕ್ಕದಲ್ಲಿ ರೂಪಾಯಿಯ ಮೌಲ್ಯ ಕುಸಿದರೂ ಅದರ ಪರಿಣಾಮ ಮಾತ್ರ ಅಗಾಧ. ಒಂದು ಡಾಲರ್ ಖರೀದಿಸಲು ನಾವು ಅಷ್ಟು ಪೈಸೆ ಹೆಚ್ಚು ನೀಡಬೇಕಾಗುತ್ತದೆ. ಭಾರತ ಅಧಿಕ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವುದು ಕಚ್ಚಾತೈಲ. ಇದನ್ನು ಖರೀದಿಸಲು ಭಾರತ ಡಾಲರ್​ಗಳಲ್ಲಿಯೇ ಪಾವತಿ ಮಾಡಬೇಕಾಗುತ್ತದೆ. 2018ರಲ್ಲಿ ಒಂದು ಡಾಲರ್ ಬೆಲೆ 70 ರೂ. ಇತ್ತು. ಆಗ ನೂರು ಡಾಲರ್ ಖರೀದಿ ಮಾಡಲು 7000 ರೂ. ಸಾಕಿತ್ತು. ಆದರೆ ಈಗ ನೂರು ಡಾಲರ್ ಖರೀದಿಸಲು 8300 ರೂ. ನೀಡಬೇಕು. ಈ ಕುಸಿತದ ಪರಿಣಾಮ ನೇರವಾಗಿ ಹಣದುಬ್ಬರದ ಮೇಲಾಗುತ್ತದೆ. ಪರೋಕ್ಷವಾಗಿ ಕಚ್ಚಾತೈಲದ ಬೆಲೆ ಹೆಚ್ಚಾಗುವುದರಿಂದ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೇರಿಕೆಯಾಗಲೇಬೇಕು. ಇದರಿಂದ ಸಾಗಾಟ ವೆಚ್ಚ ಹೆಚ್ಚಾಗಿ ಕೊನೆಗೆ ಇತರ ಸರಕುಗಳ ಬೆಲೆ ಹೆಚ್ಚಾಗುತ್ತದೆ.
ರೂಪಾಯಿ ಸಾಗಿಬಂದ ಹಾದಿಸ್ವಾತಂತ್ರ್ಯದ ನಂತರ ಡಾಲರ್ ಎದುರು ರೂಪಾಯಿ ಸತತವಾಗಿ ಕುಸಿಯುತ್ತಲೇ ಬಂದಿದೆ. ಆಧುನಿಕ ಮೆಟ್ರಿಕ್ ಪದ್ಧತಿಯ ಆಧಾರದ ಮೇಲೆ 1913ರಲ್ಲಿ ಒಂದು ಯುಎಸ್ ಡಾಲರ್​ಗೆ ಒಂದು ರೂಪಾಯಿ ಸಮನಾಗಿತ್ತು. 1947ರಲ್ಲಿ ಇದು 3.30ಕ್ಕೆ ಇಳಿಯಿತು. 1970ರ ವೇಳೆಗೆ 7.50 ಆಯಿತು. ನಂತರ ಡಾಲರ್ ಎದುರು ರೂಪಾಯಿಯ ಬೆಲೆ ಇಳಿಮುಖವಾಗಿಯೇ ಸಾಗಿದೆ. ಇದಕ್ಕೆ ಪ್ರಮುಖ ಕಾರಣಗಳು ಬಹು ಆರ್ಥಿಕ ಬಿಕ್ಕಟ್ಟು, ಖಾಸಗೀಕರಣ, ಅಪಮೌಲ್ಯೀಕರಣ ಮತ್ತು ವಿಶ್ವಬ್ಯಾಂಕ್​ನ ಸಾಲಗಳು.
ರಫ್ತು ಕಂಪನಿಗಳಿಗೆ ಲಾಭಕರೆನ್ಸಿ ಅಪಮೌಲ್ಯೀಕರಣದಿಂದ ಆಮದು ವೆಚ್ಚ ಹೆಚ್ಚಾದರೆ ರಫ್ತುಗಳು ಅಗ್ಗವಾಗುತ್ತವೆ. ರಫ್ತು ವ್ಯಾಪಾರದಲ್ಲಿ ಇರುವ ಕಂಪನಿಗಳು ಡಾಲರ್​ಗಳಲ್ಲಿ ಹಣ ಪಡೆದು ಅದನ್ನು ಹೆಚ್ಚಿನ ರೂಪಾಯಿಗಳಿಗೆ ವಿನಿಮಯ ಮಾಡಿಕೊಳ್ಳುತ್ತಾರೆ. ಆದ್ದರಿಂದ, ರಫ್ತು ಆಧಾರಿತ ವಲಯಗಳಾದ ಫಾರ್ವ, ಐಟಿ, ಆಟೋ, ಜ್ಯುವೆಲ್ಲರಿ ಕಂಪನಿಗಳು ಕುಸಿಯುತ್ತಿರುವ ರೂಪಾಯಿಯಿಂದ ಲಾಭ ಮಾಡಿಕೊಳ್ಳುತ್ತವೆ. ರೂಪಾಯಿಯ ಕುಸಿತ ಆಗುತ್ತಿದೆ ಎಂದರೆ ಹೂಡಿಕೆದಾರರು ಡಾಲರ್ ಆಧಾರಿತ ಹೂಡಿಕೆಗಳನ್ನು ಖರೀದಿಸಲು ರೂಪಾಯಿ ಆಧಾರಿತ ಹೂಡಿಕೆಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದರ್ಥ. ಇದರರ್ಥ ದೇಶೀಯ ಷೇರು ಮಾರುಕಟ್ಟೆಗೆ ಹೊಡೆತ ಬೀಳುವ ಸಾಧ್ಯತೆ ಹೆಚ್ಚು. ಆದರೆ, ನೀವೇನಾದರೂ ಅಮೆರಿಕದ ಮಾರುಕಟ್ಟೆಗಳಲ್ಲಿ ಷೇರು ವ್ಯವಹಾರ ಹೊಂದಿದ್ದರೆ, ಡಾಲರ್ ಬಲಗೊಳ್ಳುತ್ತಿದ್ದಂತೆ ಅವುಗಳ ಮೌಲ್ಯ ಹೆಚ್ಚಾಗುತ್ತದೆ.
ಆರ್ಥಿಕ ಬಿಕ್ಕಟ್ಟುಗಳ ಹೊಡೆತಆಗಿನ್ನು ಭಾರತ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಾಗಿತ್ತು. ಆ ಸಮಯದಲ್ಲಿ ನಮ್ಮ ರಫ್ತುಗಳಿಗಿಂತ ಆಮದುಗಳೇ ಹೆಚ್ಚಾಗಿದ್ದವು. 1950ರ ದಶಕದಿಂದಲೂ ವ್ಯಾಪಾರ ಸಮತೋಲನವನ್ನು ಇರಿಸಿಕೊಳ್ಳಲು ಹಲವು ಪ್ರಯತ್ನಗಳು ನಡೆದವು. ಆದರೆ ಅಂತಿಮವಾಗಿ ಅವು ವಿಫಲವಾದವು. ಭಾರತವು 1950ರ ದಶಕದಿಂದಲೂ ವಿತ್ತೀಯ ಕೊರತೆ ಅನುಭವಿಸಿತ್ತು. ಈ ಆರ್ಥಿಕ ಬಿಕ್ಕಟ್ಟಿನ ಪರಿಣಾಮವಾಗಿ 1966ರಲ್ಲಿ ಸರ್ಕಾರ ಮೊದಲ ಬಾರಿ ಅಪಮೌಲ್ಯೀಕರಣ ಎದುರಿಸುವಂತಾಯಿತು. ಇದೇ ಸಮಯದಲ್ಲಿ ಚೀನಾ ಜತೆ ಯುದ್ಧ ನಡೆಯಿತು. ಹೀಗಾಗಿ ರೂಪಾಯಿ ಮತ್ತಷ್ಟು ಅಪಮೌಲ್ಯಕ್ಕೆ ಒಳಗಾಗಬೇಕಾಯಿತು. ಇದರಿಂದ ಡಾಲರ್ ಎದುರು ರೂಪಾಯಿ ಮತ್ತಷ್ಟು ಇಳಿಕೆ ಕಂಡಿತು. ಹಣದುಬ್ಬರ ಉಂಟಾಗಿ ಬೆಲೆಯೇರಿಕೆಯಾಯಿತು.
1991ನೇ ವರ್ಷವನ್ನು ಭಾರತದ ಅರ್ಥವ್ಯವಸ್ಥೆಯಲ್ಲಿ ಸುಧಾರಣೆಯ ವರ್ಷ ಎಂದು ಹೇಳಲಾಗುತ್ತದೆ. ಭಾರತೀಯ ಅರ್ಥಶಾಸ್ತ್ರಜ್ಞರು ಉದಾರೀಕರಣ ಮತ್ತು ಜಾಗತೀಕರಣದ ಮೌಲ್ಯವನ್ನು ಅರಿತು ಅತ್ತ ಮುಖ ಮಾಡಿದರು. 70ರ ದಶಕದಲ್ಲಿ ಭಾರತ ಆರಂಭಿಸಿದ ಕೈಗಾರಿಕೀಕರಣದ ಭಾಗವಾಗಿ ಕೈಗೊಂಡ ಆಮದು ಮಾಡಿಕೊಂಡ ಸರಕುಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸುವ ನಿರ್ಧಾರವೇ ಉದಾರೀಕರಣಕ್ಕೆ ದಾರಿ ಮಾಡಿಕೊಟ್ಟಿತ್ತು. ಆದರೆ, ಆರ್ಥಿಕ ಉದಾರೀಕರಣದ ನಂತರ ರೂಪಾಯಿ ಬೆಲೆ ಮತ್ತಷ್ಟು ಕುಸಿಯಿತು. ಹಣ ವಿನಿಮಯ ವ್ಯವಸ್ಥೆ ಮುಕ್ತ ಮಾರುಕಟ್ಟೆಗೆ ತೆರೆದುಕೊಂಡಿದ್ದು ಇದಕ್ಕೆ ಕಾರಣವಾಗಿತ್ತು. 2016ರಲ್ಲಿ ಆದ ನೋಟು ಅಮಾನ್ಯೀಕರಣ ಸಮಯದಲ್ಲಿ ಡಾಲರ್ ಎದುರು ರೂಪಾಯಿ ಬೆಲೆ 67 ರಿಂದ 71ಕ್ಕೆ ಕುಸಿಯಿತು.
ವೆಚ್ಚಗಳಲ್ಲಿ ಹೆಚ್ಚಳಡಾಲರ್ ಎದುರು ರೂಪಾಯಿ ಅಪಮೌಲ್ಯದಿಂದ ಉಂಟಾಗುವ ಹಣದುಬ್ಬರ ಅಂತಿಮವಾಗಿ ನಮ್ಮ ಮನೆಬಾಗಿಲಿಗೂ ತಲುಪುತ್ತದೆ. ದಿನಸಿ, ಬಟ್ಟೆಬರೆಯಿಂದ ಹಿಡಿದು ಎಲ್ಲದಕ್ಕೂ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಮೊಬೈಲ್ ಫೋನ್, ಲ್ಯಾಪ್​ಟಾಪ್, ಕಂಪ್ಯೂಟರ್​ಗಳಂಥ ಇಲೆಕ್ಟ್ರಾನಿಕ್ ವಸ್ತುಗಳು ದುಬಾರಿಯಾಗುತ್ತವೆ. ಏಕೆಂದರೆ ಈ ವಸ್ತುಗಳ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ವಿದೇಶದಲ್ಲಿ ಅಧ್ಯಯನ ಮಾಡುವ ಅಥವಾ ಫಾರಿನ್ ಟ್ರಿಪ್ ಮಾಡುವ ಯೋಜನೆಯಿದ್ದರೆ ಜೇಬಿಗೆ ಭಾರವಾಗಲಿದೆ. ಏಕೆಂದರೆ ಡಾಲರ್ ಖರೀದಿಗೆ ಹೆಚ್ಚಿನ ಹಣ ಪಾವತಿ ಅನಿವಾರ್ಯ.
ವಿಶ್ವದ ಟಾಪ್ ಟೆನ್ ವ್ಯಾವಹಾರಿಕ ಕರೆನ್ಸಿ1. ಯುಎಸ್ ಡಾಲರ್ (ಅಮೆರಿಕ)2. ಯೂರೋ (ಯುರೋಪ್)3. ಜಪಾನಿ ಯೆನ್4. ಪೌಂಡ್ ಸ್ಟರ್ಲಿಂಗ್ (ಬ್ರಿಟನ್)5. ಆಸ್ಟ್ರೇಲಿಯನ್ ಡಾಲರ್6. ಕೆನಡಿಯನ್ ಡಾಲರ್7. ಸ್ವಿಸ್ ಫ್ರಾಂಕ್8. ರೆನ್ಮಿಂಬಿ (ಚೀನಾ)9. ಹಾಂಗ್​ಕಾಂಗ್ ಡಾಲರ್10. ನ್ಯೂಜಿಲೆಂಡ್ ಡಾಲರ್
ವಿಶ್ವದ ಹತ್ತು ಪ್ರಬಲ ಕರೆನ್ಸಿ1. ಕುವೈತ್ ದಿನಾರ್2. ಬಹ್ರೇನ್ ದಿನಾರ್3. ಓಮನಿ ದಿನಾರ್4. ಜೋರ್ಡಾನ್ ದಿನಾರ್5. ಜಿಬ್ರಾಲ್ಟರ್ ಪೌಂಡ್6. ಬ್ರಿಟಿಷ್ ಪೌಂಡ್7. ಕೇಮನ್ ಐಲ್ಯಾಂಡ್ ಡಾಲರ್8. ಸ್ವಿಸ್ ಫ್ರ್ಯಾಂಕ್9. ಯೂರೋ10. ಯುಎಸ್ ಡಾಲರ್
ಆರ್ಥಿಕತೆಗೆ ಅನಿವಾಸಿ ಭಾರತೀಯರ ಕೊಡುಗೆವಾಷಿಂಗ್ಟನ್:ಭಾರತದ ಆರ್ಥಿಕತೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ಬೆಳವಣಿಗೆಯಲ್ಲಿ ಭಾರತದ ಹೊರಗೆ ವಾಸಿಸುವವರು ದೊಡ್ಡ ಕೊಡುಗೆ ನೀಡಿದ್ದಾರೆ. ವಿಶ್ವಬ್ಯಾಂಕ್ ವರದಿ ಪ್ರಕಾರ, ವಲಸಿಗರಿಂದ ಹಣ ಪಡೆಯುವಲ್ಲಿ ಭಾರತ ಈ ವರ್ಷವೂ ಅಗ್ರಸ್ಥಾನದಲ್ಲಿದೆ. ಭಾರತದ ಹೊರಗೆ ವಾಸಿಸುವ ಸುಮಾರು 30 ಮಿಲಿಯನ್ ಭಾರತೀಯರು ಈ ವರ್ಷ 125 ಬಿಲಿಯನ್ ಡಾಲರ್​ಗಳನ್ನು ಸ್ವದೇಶಕ್ಕೆ ಕಳುಹಿಸಿದ್ದಾರೆ. ಪಟ್ಟಿಯಲ್ಲಿ ಮೆಕ್ಸಿಕೋ ಎರಡನೇ ಸ್ಥಾನದಲ್ಲಿದ್ದು, ಇಲ್ಲಿನ ವಲಸಿಗರು 67 ಬಿಲಿಯನ್ ಡಾಲರ್ ಕಳುಹಿಸಿದ್ದಾರೆ.
ಚೀನಾ ಮೂರನೇ ಸ್ಥಾನದಲ್ಲಿದೆ. ಇಲ್ಲಿನ ವಲಸಿಗರು 50 ಬಿಲಿಯನ್ ಡಾಲರ್ ತಮ್ಮ ದೇಶಕ್ಕೆ ಕಳುಹಿಸಿದ್ದಾರೆ. ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವರದಿಯ ಪ್ರಕಾರ, ಪ್ರತಿ ವರ್ಷ ಭಾರತದಿಂದ ಸುಮಾರು 25 ಲಕ್ಷ ಜನರು ಕೆಲಸಕ್ಕಾಗಿ ಬೇರೆ ದೇಶಗಳಿಗೆ ಹೋಗುತ್ತಾರೆ. ಈ ಪೈಕಿ ಅಮೆರಿಕಕ್ಕೆ ಹೋಗುವವರೇ ಹೆಚ್ಚು. ಕೆಲಸದ ವಿಷಯದಲ್ಲಿ ಅಮೆರಿಕದ ನಂತರ ಯುಎಇ ಮತ್ತು ಸೌದಿ ಅರೇಬಿಯಾ ಭಾರತೀಯರ ನೆಚ್ಚಿನ ಸ್ಥಳಗಳಾಗಿವೆ. ಆದಾಗ್ಯೂ, ಹಣದುಬ್ಬರ ಮತ್ತು ಬೆಳವಣಿಗೆ ದರದಲ್ಲಿನ ಕುಸಿತದಿಂದಾಗಿ 2024ರಲ್ಲಿ ವಲಸಿಗರ ಆದಾಯದಲ್ಲಿ ಇಳಿಕೆಯಾಗಲಿದ್ದು, ಇದು ರವಾನೆಯಲ್ಲಿ ಇಳಿಕೆಗೆ ಕಾರಣವಾಗುತ್ತದೆ ಎಂದಿದೆ ವರದಿ.
ದೇಶಕ್ಕೆ ಹಣವನ್ನು ಕಳುಹಿಸುವ ವಲಸಿಗರಿಗೆ ಸಂಬಂಧಿಸಿದ ವಿಶ್ವಬ್ಯಾಂಕ್ ವರದಿ ಪ್ರಕಾರ, 2023ರಲ್ಲಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ರವಾನೆ 3.8 ಪ್ರತಿಶತದಷ್ಟು ಹೆಚ್ಚಾಗಿದೆ. ಅಮೆರಿಕ, ಬ್ರಿಟನ್, ಸಿಂಗಾಪುರ ಮತ್ತು ಗಲ್ಪ್ ದೇಶಗಳಲ್ಲಿ ನುರಿತ ಮತ್ತು ಕೌಶಲ್ಯರಹಿತ ಭಾರತೀಯ ಕಾರ್ವಿುಕರು ಬಲವಾದ ನೆಲೆ ಕಂಡುಕೊಂಡಿದ್ದಾರೆ. ಇದರ ಪರಿಣಾಮ 2024ರಲ್ಲಿ ಒಳಹರಿವು ಶೇಕಡ 8ರಷ್ಟು ಹೆಚ್ಚಾಗುವ ನಿರೀಕ್ಷೆಯಿದ್ದು, ಅದು 135 ಶತಕೋಟಿ ಆಗಲಿದೆ.
ಏನಿದು ಪ್ರಕ್ರಿಯೆ?:ಸಾಮಾನ್ಯವಾಗಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹಣವನ್ನು ಕಳುಹಿಸುವ ಪ್ರಕ್ರಿಯೆಗೆ ರವಾನೆ ಅಥವಾ ರವಾನೆ ಪಾವತಿ ಎಂದು ಕರೆಯಲಾಗುತ್ತದೆ. ಕುಟುಂಬಕ್ಕೆ ಬೆಂಬಲ, ಶಿಕ್ಷಣ, ವೈದ್ಯಕೀಯ, ಪ್ರಯಾಣ ವೆಚ್ಚಗಳು, ವ್ಯಾಪಾರ ಇತ್ಯಾದಿ ಕಾರಣಗಳಿಗಾಗಿ ಈ ಹಣವನ್ನು ಕಳುಹಿಸಬಹುದು. ಬ್ಯಾಂಕ್ ವರ್ಗಾವಣೆ, ಹಣಕಾಸು ಸೇವಾ ಪೂರೈಕೆದಾರರ ಮೂಲಕ ಅಥವಾ ಆನ್​ಲೈನ್ ಹಣ ವರ್ಗಾವಣೆ ಸೇವೆಗಳ ಮೂಲಕ ಪಾವತಿಗಳನ್ನು ವಿವಿಧ ರೀತಿಯಲ್ಲಿ ಮಾಡಬಹುದು.
ಅಮೆರಿಕ, ಬ್ರಿಟನ್​, ಪಾಕ್​, ಶ್ರೀಲಂಕಾ ಸೇರಿ ಎಲ್ಲೆಡೆ ತೈಲ ಬೆಲೆ ಅಪಾರ ಏರಿಕೆ: ಭಾರತದಲ್ಲಿ ಮಾತ್ರ ಅಗ್ಗವಾಗಲು ಮೋದಿ ಸರ್ಕಾರ ಕೈಗೊಂಡ ಕ್ರಮಗಳೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + nine =
Remember me
