ಕೋವಿಡ್​ನಿಂದಾಗಿ ಆರ್ಥಿಕ ಹಾನಿ, ಉದ್ಯೋಗ ನಷ್ಟ, ಬೆಲೆ ಏರಿಕೆ ಹೀಗೆ ಸಾಲು ಸಾಲು ನಕಾರಾತ್ಮಕ ಬೆಳವಣಿಗೆಯಿಂದ ಕುಗ್ಗಿರುವ ದೇಶವಾಸಿಗಳಲ್ಲಿ ಉತ್ಸಾಹ ತುಂಬುವ ಪ್ರಯತ್ನದಲ್ಲಿರುವ ಮೋದಿ ಸರ್ಕಾರ ಮಹತ್ವದ ತೀರ್ವನವೊಂದನ್ನು ಪ್ರಕಟಿಸಿದೆ. ಮುಂದಿನ 18 ತಿಂಗಳಲ್ಲಿ ಬರೋಬ್ಬರಿ 10 ಲಕ್ಷ ಹುದ್ದೆಗಳನ್ನು ‘ತ್ವರಿತ’ವಾಗಿ ಭರ್ತಿ ಮಾಡುವುದಾಗಿ ಕೇಂದ್ರ ಘೋಷಿಸಿದೆ. ಆಡಳಿತ ಪಕ್ಷದವರು ಮತ್ತು ಹಿತಚಿಂತಕರು ಈ ತೀರ್ವನವನ್ನು ಕೊಂಡಾಡಿದರೆ, ಪ್ರತಿಪಕ್ಷ ಎಂದಿನಂತೆ ಇದು ಅಸಾಧ್ಯ ಎಂದು ಹಾಸ್ಯಮಾಡಿದೆ.
ಚುನಾವಣೆ ಲೆಕ್ಕಾಚಾರ:ಕೇಂದ್ರದ ಈ ಘೋಷಣೆಯ ಹಿಂದೆ ಅನೇಕ ಆಯಾಮಗಳು ಇವೆ. ಸದ್ಯಕ್ಕೆ ಹಿಂದುತ್ವದ ಗಟ್ಟಿ ನಿಲುವು, ಸಾಮಾಜಿಕ ಅಥವಾ ಜನಪ್ರಿಯ ಯೋಜನೆಗಳ ಡೆವಲಪ್​ವೆುಂಟ್ ಅಜೆಂಡಾ ಹೊರತಾಗಿ ಯುವಕರ ಉದ್ಯೋಗ ವೇದನೆಗೆ ಪರಿಹಾರ ಕಂಡುಕೊಳ್ಳದೇ ಹೋದರೆ ತೀವ್ರಗಾಮಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದರಿತೇ ಮಹತ್ವದ ಈ ‘ಮಿಷನ್ ಮೋಡ್’ಗೆ ಕೈ ಹಾಕಿರುವುದು ಸ್ಪಷ್ಟ.
2014ರಲ್ಲಿ ಎದುರಿಸುವಾಗ ಭರವಸೆ ತುಂಬುವ ಪ್ರಯತ್ನ ಮಾಡಿ ಸಫಲವಾಗಿದ್ದಾಯ್ತು, 2019ರಲ್ಲಿ, ಎರಡನೇ ಬಾರಿ ಮತ್ತೊಮ್ಮೆ ಅವಕಾಶದ ಅಗತ್ಯತೆ ಮನವರಿಕೆ ಮಾಡಿಕೊಟ್ಟು ಗೆಲ್ಲಲಾಯ್ತು. ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಮುಖ್ಯವಾಗಿ ಹೊಸ ಮತದಾರರು, ಯುವ ಮತದಾರರ ಮನ ಗೆಲ್ಲಬೇಕೆಂದರೆ ಅವರಲ್ಲಿ ಆತ್ಮವಿಶ್ವಾಸ ಬರುವಂತಹ ತೀರ್ಮಾನ ಆಗಲೇ ಬೇಕಿತ್ತು. ಅಲ್ಲದೇ ನಮ್ಮ ಸರ್ಕಾರ ಬಂದರೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದು ಬಿಜೆಪಿ ಹೇಳಿಕೊಂಡಿತ್ತು. ಈ ಭರವಸೆಯನ್ನೆ ಮುಂದಿಟ್ಟುಕೊಂಡು ಪ್ರಧಾನ ಪ್ರತಿಪಕ್ಷ ಕಾಂಗ್ರೆಸ್ ನಿರುದ್ಯೋಗಿಗಳನ್ನು ಗುರಿಯಾಗಿಸಿ ಪ್ರಚಾರತಂತ್ರ ರೂಪಿಸಿದೆ. ಪ್ರತಿ ವಿಧಾನಸಭಾ ಕ್ಷೇತ್ರವಾರು ನಿರುದ್ಯೋಗಿಗಳ ಸಮಾವೇಶ ಮಾಡುವುದಕ್ಕೂ ಮುಂದಾಗಿದೆ. ಹೀಗಾಗಿ ಇಂತಹ ನಿಲುವು ಮೋದಿಯವರಿಗೆ ಅನಿವಾರ್ಯವೂ ಆಗಿತ್ತು. ಕಾಲಕಾಲಕ್ಕೆ ಜನರ ಅಭಿಪ್ರಾಯ ಸಂಗ್ರಹಿಸುವ ‘ಟೀಂ ಮೋದಿ’ಗೆ ನಿರುದ್ಯೋಗ ವಿಚಾರವಾಗಿ ಜನರ ಅಭಿಪ್ರಾಯ ದೊಡ್ಡದಾಗಿ ಕಾಣಿಸಿದೆ. ಇದೇ ಕಾರಣಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂಬ ಮಾಹಿತಿಯೂ ಇದೆ.
ಕೋವಿಡ್ ವಾರ್:ಕರೊನಾದಿಂದಾಗಿ ಸರ್ಕಾರ ಕಳೆದ 3 ವರ್ಷಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೇಮಕ ಪ್ರಕ್ರಿಯೆ ನಡೆಸಿರಲಿಲ್ಲ. ಹೀಗಾಗಿ ಹುದ್ದೆಗಳೂ ಖಾಲಿ ಇದ್ದವು. ಕೇಂದ್ರ ಸರ್ಕಾರದ ಅಂಕಿ ಅಂಶಗಳಪ್ರಕಾರ, ಶೇ.21.75ರಷ್ಟು ಹುದ್ದೆಗಳು ಖಾಲಿ ಇವೆ. ಅಂದರೆ ಮಂಜೂರಾದ ಹುದ್ದೆ 40.78 ಲಕ್ಷವಿದ್ದರೆ, 31.19 ಲಕ್ಷ ಹುದ್ದೆ ಭರ್ತಿಯಾಗಿವೆ.
ಕರ್ನಾಟಕದಲ್ಲಿ ಬಾಕಿ:ರಾಜ್ಯದಲ್ಲಿ ಕೋವಿಡ್ ಆರ್ಥಿಕ ಮಿತವ್ಯಯ ತೆಗೆದ ಬಳಿಕ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ವಿವಿಧ ಹುದ್ದೆಗಳ ಭರ್ತಿ, ಶಿಕ್ಷಕರು, ಪೊಲೀಸ್ ಹೀಗೆ ವಿವಿಧ ಹುದ್ದೆಗಳಿಗೆ ಸರ್ಕಾರ ನೇಮಕ ಪ್ರಕ್ರಿಯೆ ನಡೆಸಿದರೂ ಕೊನೆ ಮುಟ್ಟಿಲ್ಲ. ಕೋರ್ಟ್ ಮೆಟ್ಟಿಲೇರುವುದು, ಅಕ್ರಮದ ಕಾರಣಕ್ಕೆ ಪ್ರಕ್ರಿಯೆಗಳು ಅರ್ಧಕ್ಕೆ ನಿಂತಿವೆ.
ಹೂಡಿಕೆ ಅನುಷ್ಠಾನ ಮುಖ್ಯ:ವರ್ಷವೊಂದರಲ್ಲಿ ದೇಶದಲ್ಲಿ 50 ಲಕ್ಷ ಮಂದಿ ಉದ್ಯೋಗ ಅಪೇಕ್ಷಿತರು ಸೃಷ್ಟಿಯಾಗುತ್ತಾರೆಂಬ ಅಂದಾಜಿದೆ. ಇಷ್ಟು ಜನರಿಗೆ ಉದ್ಯೋಗ ದೊರಕಬೇಕೆಂದರೆ ಖಾಸಗಿ ವಲಯಕ್ಕೆ ಪೂರಕ ವಾತಾವರಣ ಅತ್ಯಗತ್ಯ. ಅದೇ ರೀತಿ ಭಾರತಕ್ಕೆ ಬರುತ್ತಿರುವ ವಿದೇಶಿಹೂಡಿಕೆಗಳು ಸರಿಯಾದ ವೇಗದಲ್ಲಿ ಅನುಷ್ಠಾನವಾದರೆ ಉತ್ಪಾದನೆ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ಇಷ್ಟು ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಸಾಧ್ಯವಿದೆ. ಈ ಕಾರ್ಯದತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಗಮನ ಮತ್ತು ಆದ್ಯತೆ ಕೊಡಬೇಕಿದೆ ಎಂಬುದು ಕಾರ್ಪೆರೇಟ್ ವಲಯದವರ ಅಭಿಪ್ರಾಯ.
ಬೀಜಾಂಕುರವಾಗಿದ್ದೆಲ್ಲಿ?:ಪ್ರಧಾನಿ ಮೋದಿ, ನೇಮಕಾತಿ ತೀರ್ಮಾನ ಪ್ರಕಟಿಸುವ ಮುನ್ನ ಸಾಕಷ್ಟು ತಾಲೀಮು ನಡೆಸಿದ್ದಾರೆ. ವಿವಿಧ ಹಂತಗಳಲ್ಲಿ ಮಾಹಿತಿ ಸಂಗ್ರಹಿಸಿ, ಅಧಿಕಾರಿಗಳ ಸಭೆ ನಡೆದು, ಅಂತಿಮವಾಗಿ ಏಪ್ರಿಲ್ 2ರಂದು ಸರ್ಕಾರದ ಕಾರ್ಯದರ್ಶಿಗಳೊಂದಿಗೆ ನಡೆದ ಸಭೆಯ ಸಂದರ್ಭದಲ್ಲಿ, ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಉದ್ಯೋಗ ಸೃಷ್ಟಿಸುವ ಕ್ರಮ ಆಗಬೇಕೆಂದು ಪ್ರಧಾನಿ ಒತ್ತಿ ಹೇಳಿದ್ದರು. ಬಳಿಕ ಸಚಿವ ಸಂಪುಟ ಕಾರ್ಯದರ್ಶಿ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದು ಪ್ರಧಾನಿ ಸಲಹೆ ಮೇರೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಈ ಪ್ರಕಾರ ವಿವಿಧ ಇಲಾಖೆಗಳು ಖಾಲಿ ಹುದ್ದೆಗಳ ವಿವರಗಳನ್ನು ಸಿದ್ಧಪಡಿಸಿದ್ದು, ಪರಿಶೀಲನೆಯ ನಂತರ ಒಟ್ಟಾರೆ 10 ಲಕ್ಷ ಹುದ್ದೆ ಭರ್ತಿ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಬಿಜೆಪಿ ರಾಜ್ಯಗಳಲ್ಲೂ ನೇಮಕಪರ್ವ?:ಕೇಂದ್ರ ಸರ್ಕಾರವು ತನ್ನ ಅನೇಕ ನಿಲುವು ನಿರ್ಧಾರಗಳನ್ನು ತನ್ನ ಆಡಳಿತ ಇರುವ ರಾಜ್ಯಗಳಲ್ಲೂ ಅನುಷ್ಠಾನ ಮಾಡಿಸುತ್ತಿದೆ. ಜತೆಗೆ ಫಾಲೋಅಪ್ ಮಾಡುವ ಸಂಪ್ರದಾಯ ಬೆಳೆಸಿಕೊಂಡಿದೆ. ಈಗ ಸರ್ಕಾರಿ ಹುದ್ದೆ ಭರ್ತಿ ವಿಷಯದಲ್ಲೂ ಕೇಂದ್ರದ ಹಾದಿಯನ್ನು ಬಿಜೆಪಿ ಸರ್ಕಾರ ಇರುವ ರಾಜ್ಯಗಳು ಹಿಡಿಯಲಿದ್ದು, ಈ ಮೂಲಕ ನೇಮಕ ಪರ್ವ ಶುರುವಾಗಲಿದೆ ಎಂದು ಅಂದಾಜಿಸಲಾಗಿದೆ.
ಹೆಚ್ಚು ಭರ್ತಿ ಎಲ್ಲಿ?:ರೈಲ್ವೆ, ಸಶಸ್ತ್ರ ಪಡೆ (ಅಗ್ನಿವೀರ್ ಹೊರತುಪಡಿಸಿ ಸಾಮಾನ್ಯ ನೇಮಕ), ತೆರಿಗೆ ಇಲಾಖೆಗಳು, ಬ್ಯಾಂಕ್ ಮತ್ತು ವಿಮಾ ಕಂಪನಿಗಳಿಗೆ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಖಾಲಿ ಹುದ್ದೆಗಳೆಷ್ಟು?:ಗ್ರೂಪ್ ‘ಎ’ 22 ಸಾವಿರ, ಗ್ರೂಪ್ ‘ಬಿ’ 1.27 ಲಕ್ಷ, ಗ್ರೂಪ್ ‘ಸಿ’ 8.5 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಅಂದಾಜಿಸಲಾಗಿದೆ.
ನವದೆಹಲಿ:ಆರ್ಥಿಕ ಸಂಕಷ್ಟಕ್ಕೆ ಕಾರಣವಾದ ಕರೊನಾ ಸಾಂಕ್ರಾಮಿಕದ ನಡುವೆಯೂ ದೇಶದಲ್ಲಿ 2020 ಜುಲೈನಿಂದ 2021 ಜೂನ್​ವರೆಗಿನ ಅವಧಿಯಲ್ಲಿ ನಿರುದ್ಯೋಗ ದರ ಶೇ. 4.2ಕ್ಕೆ ಇಳಿದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 2019-20ರಲ್ಲಿ ನಿರುದ್ಯೋಗ ದರ ಶೇ. 4.8, 2018-19ರಲ್ಲಿ ಶೇ. 5.8, 2017-18ರಲ್ಲಿ ಶೇ.6.1ರಷ್ಟಿತ್ತು ಎಂದು ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ (ಪಿಎಲ್​ಎಫ್​ಎಸ್)ತಿಳಿಸಿದೆ. ಪುರುಷರಲ್ಲಿ ನಿರುದ್ಯೋಗ ದರವು 2020-21ನೇ ಸಾಲಿನಲ್ಲಿ ಶೇ. 4.5ಕ್ಕೆ ಇಳಿದಿದೆ. 2019-20ರಲ್ಲಿ ಶೇ. 5.1, 2018-19ರಲ್ಲಿ ಶೇ.6, 2017-18ರಲ್ಲಿ ಶೇ. 6.2ರಷ್ಟಿತ್ತು. ಈ ಟ್ರೆಂಡ್ ಮಹಿಳೆಯರಲ್ಲೂ ಕಾಣಿಸಿಕೊಂಡಿದ್ದು, 2019-20ನೇ ಸಾಲಿನಲ್ಲಿ ಶೇ. 4.2ರಷ್ಟಿದ್ದ ನಿರುದ್ಯೋಗ ದರವು 2020-21ರಲ್ಲಿ ಶೇ. 3.5ಕ್ಕೆ ಇಳಿದಿತ್ತು.
ಕಾರ್ವಿುಕ ಜನಸಂಖ್ಯೆ ದರದಲ್ಲಿ ಸುಧಾರಣೆ:ಕಾರ್ವಿುಕ ಜನಸಂಖ್ಯೆ ದರದಲ್ಲೂ (ಡಬ್ಲ್ಯುಪಿಆರ್ )ಸುಧಾರಣೆ ಕಂಡುಬಂದಿದೆ. ಡಬ್ಲ್ಯುಪಿಆರ್ 2017-18ರಲ್ಲಿ ಶೇ. 34.7, 2018-19ರಲ್ಲಿ ಶೇ 35.3, 2019-20ರಲ್ಲಿ ಶೇ. 38.2ರಿಂದ 2020-21ಕ್ಕೆ 39.8ಕ್ಕೆ ಏರಿಕೆಯಾಗಿದೆ.
ಕೇಂದ್ರ ಸರ್ಕಾರದ ‘ಅಗ್ನಿಪಥ’ ಯೋಜನೆಯಡಿ ನಾಲ್ಕು ವರ್ಷ ‘ಅಗ್ನಿವೀರ’ರಾಗಿ ದೇಶಕಾಯ್ದು ವಾಪಸಾಗುವ ಯುವಕರಿಗೆ ಪೊಲೀಸ್ ಇಲಾಖೆ ನೇಮಕದಲ್ಲಿ ಆದ್ಯತೆ ನೀಡಲು ಸರ್ಕಾರ ಬಯಸಿದೆ. ಮಂಗಳವಾರಷ್ಟೇ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆಯನ್ನು ಪ್ರಕಟಿಸಿ, ಹದಿನೇಳೂವರೆ ವರ್ಷದಿಂದ 21 ವರ್ಷದೊಳಗಿನ ಯುವಕರು ಸೇನಾಪಡೆ ಸೇರಲು ಅವಕಾಶ ಮಾಡಿಕೊಡುತ್ತಿರುವುದಾಗಿ ಘೋಷಿಸಿತ್ತು. ತರಬೇತಿ ಸಹಿತ ನಾಲ್ಕು ವರ್ಷಗಳ ಸೇವಾ ಅವಧಿಗೆ ತರಬೇತಿ ನೀಡಿ, ಸೈನ್ಯದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ನಾಲ್ಕು ವರ್ಷಗಳ ನಂತರ ಶೇ.25ರಷ್ಟು ಅಗ್ನಿವೀರರನ್ನು ಶಸ್ತ್ರಾಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಉಳಿದವರು ನಿರ್ಗಮಿಸುತ್ತಾರೆ.
ಹೀಗೆ ನಿರ್ಗಮಿಸುವ ಕನ್ನಡಿಗರಿಗೆ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಅವಕಾಶ ಮಾಡಿಕೊಡುವ ಬಗ್ಗೆ ಸರ್ಕಾರ ಆಸಕ್ತಿ ತೋರಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಈ ಬಗ್ಗೆ ಘೋಷಣೆಯನ್ನೂ ಮಾಡಿದ್ದಾರೆ. ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲು ಯಾವ ರೀತಿ ಅವಕಾಶ ಸಿಗುತ್ತದೆ ಎಂಬ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹಿರಿಯ ಅಧಿಕಾರಿಗಳೊಟ್ಟಿಗೆ ವಿಚಾರ ವಿನಿಮಯ ನಡೆಸಿದ ಬಳಿಕ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ಮಾಡಿ ತೀರ್ಮಾನ ಪ್ರಕಟಿಸುವರು.
ಹದಿನೇಳೂವರೆ ವರ್ಷದಲ್ಲೇ ಈ ಯೋಜನೆಗೆ ಸೇರಿದರೆ 22 ವರ್ಷದಲ್ಲಿ ಸೇವೆ ಮುಗಿಸಿ ಮರಳಲಿದ್ದಾರೆ. ಗರಿಷ್ಠ 21 ವರ್ಷದವರು ಅಗ್ನಿವೀರರಾದರೆ 25 ವರ್ಷ ಪೂರ್ಣಗೊಂಡ ಬಳಿಕ ಮರಳುವರು. ಹೀಗಾಗಿ ಪೊಲೀಸ್ ನೇಮಕಕ್ಕೆ ವಯೋಮಿತಿ ಅಡಚಣೆಯಂತೂ ಆಗುವುದಿಲ್ಲ ಎಂಬ ಅಭಿಪ್ರಾಯ ಪೊಲೀಸ್ ಇಲಾಖೆಯಲ್ಲಿದೆ.
ಸೈನ್ಯದಲ್ಲಿ ಸೇವೆ ಸಲ್ಲಿಸಿರುವುದರಿಂದ ಶಿಸ್ತು, ಕೌಶಲ, ಫಿಟ್ನೆಸ್ ಇರುವ ಯುವಕರು ಪೊಲೀಸ್ ಇಲಾಖೆಗೆ ಸಿಕ್ಕಂತಾಗುತ್ತದೆ. ಪ್ರಸ್ತುತ ನೇಮಕ ಬಳಿಕ ಎಂಟು ತಿಂಗಳು ತರಬೇತಿ ನೀಡಿ ಸೇವೆಗೆ ಬಳಸಲಾಗುತ್ತದೆ, ಸೈನ್ಯದಿಂದ ಬಂದವರಾದರೆ ತರಬೇತಿಯ ಅಗತ್ಯವೇ ಇರುವುದಿಲ್ಲ. ಹಾಗೆಯೇ, ಕೌಶಲ ಪ್ರಮಾಣಪತ್ರ ಕೂಡ ಅವರ ಬಳಿ ಇರಲಿದೆ, ಹೀಗಾಗಿ ಇಲಾಖೆಗೆ ಹೆಚ್ಚಿನ ಲಾಭವಾಗಲಿದೆ. ಹೀಗೆ ವಾಪಸಾದವರೆಲ್ಲರಿಗೂ ಅವಕಾಶ ನೀಡಬಹುದು, ದೊಡ್ಡ ಸಂಖ್ಯೆ ಏನು ಇರದು. ಇಲ್ಲವಾದರೆ ನೇಮಕ ಸಂದರ್ಭದಲ್ಲಿ ಪ್ರಮಾಣ ನಿಗದಿ ಮಾಡಲು ಸಹ ಅವಕಾಶವಿದೆ ಎಂದು ಪೊಲೀಸ್ ಅಧಿಕಾರಿಗಳು ವಿವರಣೆ ನೀಡುತ್ತಾರೆ. ಈ ಬಗ್ಗೆ ವಿಜಯವಾಣಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಅಗ್ನಿಪಥ ಒಳ್ಳೆಯ ಯೋಜನೆ. ಮಿಲಿಟರಿಯಲ್ಲಿ ನಾಲ್ಕು ವರ್ಷ ಪೂರೈಸಿದ ಕನ್ನಡಿಗರಿಗೆ ಪೊಲೀಸ್ ಇಲಾಖೆಯಲ್ಲಿ ಅವಕಾಶ ಕೊಡುವುದರಿಂದ ಇಲಾಖೆಯಲ್ಲಿ ಶಿಸ್ತುಕೂಡ ಹೆಚ್ಚಲಿದೆ ಎಂದು ಹೇಳಿದರು.
ಮಿಲಿಟರಿ ಶಿಸ್ತು ಹೊಂದಿರುವ, ದೈಹಿಕ ಕ್ಷಮತೆ ಇರುವ, ತರಬೇತಿ ನೀಡುವ ಅಗತ್ಯವಿರದವರು ನಮ್ಮ ಪೊಲೀಸ್ ಇಲಾಖೆಗೆ ಸಿಕ್ಕರೆ ಖಂಡಿತ ಒಳಿತಾಗುತ್ತದೆ. ಈ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿ ತೀರ್ಮಾನ ಪ್ರಕಟಿಸುತ್ತೇವೆ.
|ಆರಗ ಜ್ಞಾನೇಂದ್ರಗೃಹ ಸಚಿವ
ನವದೆಹಲಿ:ಕೇಂದ್ರ ಸರ್ಕಾರದ ’ಅಗ್ನಿಪಥ್ ’ ಯೋಜನೆಯಡಿ ಸೇನೆಗೆ ಸೇರುವ ಅಗ್ನಿವೀರರಿಗೆ ಶಿಕ್ಷಣ ಸಚಿವಾಲಯವು ಮೂರು ವರ್ಷಗಳ ಕೌಶಲ ಆಧರಿತ ವಿಶೇಷ ಪದವಿ ಕೋರ್ಸ್ ಆರಂಭಿಸಲಿದೆ. ಅಗ್ನಿ ವೀರರು ಪಡೆಯುವ ಸೇವಾ ತರಬೇತಿಯನ್ನು ಪದವಿ ಕೋರ್ಸ್​ನಲ್ಲಿ ಕ್ರೆಡಿಟ್ ಗಳಾಗಿ ಗುರುತಿಸಲಾಗುತ್ತದೆ. ಪದವಿ ಕೋರ್ಸ್​ಗೆ ಅಗತ್ಯವಿರುವ ಶೇ.50ರಷ್ಟು ‘ಕ್ರೆಡಿಟ್‘ ಅನ್ನು ಅಗ್ನಿವೀರರು ಕೌಶಲ ತರಬೇತಿ ಮೂಲಕ ಪಡೆಯುತ್ತಾರೆ. ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ (ಇಗ್ನೊ)ಈ ಕ್ರೆಡಿಟ್ ಆಧಾರಿತ ಪದವಿ ಕೋರ್ಸ್ ಆರಂಭಿಸಲಿದೆ. ಇದಕ್ಕಾಗಿ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳು, ಇಗ್ನೊದ ಜತೆ ಒಡಂಬಡಿಕೆ ಮಾಡಿಕೊಳ್ಳಲಿವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿವೀರರಿಗೆ ಶೇ. 50 ರಷ್ಟು ಕ್ರೆಡಿಟ್​ಗಳು ಭಾಷೆಗಳು, ಅರ್ಥಶಾಸ್ತ್ರ, ಇತಿಹಾಸ, ರಾಜಕೀಯ ವಿಜ್ಞಾನ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಗಣಿತ, ಶಿಕ್ಷಣ , ವಾಣಿಜ್ಯ, ಪ್ರವಾಸೋದ್ಯಮ, ವೃತಿಪರ ಅಧ್ಯಯನ, ಕೃಷಿ ಮತ್ತು ಜ್ಯೋತಿಷ್ಯ , ಪರಿಸರ ಅಧ್ಯಯನ ಹಾಗೂ ಇಂಗ್ಲಿಷ್ ಸಂವಹನ ಕೌಶಲದಿಂದ ದೊರೆಯಲಿದೆ. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಅನುಗುಣವಾಗಿ ರೂಪಿಸಲಾಗಿದೆ. ಯುಜಿಸಿ , ರಾಷ್ಟ್ರೀಯ ಕ್ರೆಡಿಟ್ ಚೌಕಟ್ಟು/ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟಿನ (ಎನ್​ಎಸ್​ಕ್ಯೂಎಫ್) ಮಾನದಂಡಗಳೊಂದಿಗೆ ಸಂಯೋಜಿಸಲಾಗಿದೆ. ಈ ಪದವಿ ಕೋರ್ಸ್, ವಿದ್ಯಾರ್ಥಿಗಳಿಗೆ ಬಹು ಆಯ್ಕೆಯನ್ನು ನೀಡುತ್ತದೆ. ಅಂದರೆ ಒಂದು ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗ ಪ್ರಮಾಣ ಪತ್ರ, ಒಂದು ಮತ್ತು ಎರಡನೇ ವರ್ಷದ ಕೋರ್ಸ್ ಪೂರ್ಣಗೊಳಿಸಿದವರಿಗೆ ಡಿಪ್ಲೊಮಾ, ಮೂರು ವರ್ಷದ ಕೋರ್ಸ್​ಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ನೀಡಲಾಗುತ್ತದೆ.
ಅಗ್ನಿಪಥ್ ಯೋಜನೆ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ಈ ಯೋಜನೆಯು ಸಶಸ್ತ್ರಪಡೆಗಳ ಕಾರ್ಯಚರಣೆಯ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಹಾಗಾಗಿ ಸೇನೆಯ ಘನತೆ, ಶೌರ್ಯದ ಜತೆ ರಾಜಿ ಬೇಡ ಎಂದು ಹೇಳಿದ್ದಾರೆ. ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರವು ಸೇನಾ ನೇಮಕಾತಿಯನ್ನು ಪ್ರಯೋಗಾಲಯವನ್ನಾಗಿ ಮಾಡಿಕೊಳ್ಳುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಪಟನಾ:ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ವಿರೋಧಿಸಿ ಬಿಹಾರದ ಯುವಕರು ಮುಜಾಫ್ಪರಬಾದ್​ನಲ್ಲಿ ಹೆದ್ದಾರಿ ತಡೆ ಮತ್ತು ಬಕ್ಸಾರ್​ನ ರೈಲ್ವೆ ಹಳಿಗಳ ಮೇಲೆ ಭಾರಿ ಪ್ರತಿಭಟನೆ ನಡೆಸಿದರು. ಅಗ್ನಿಪಥ್ ಯೋಜನೆಯು ತಮ್ಮ ದೀರ್ಘಾವಧಿಯ ಭವಿಷ್ಯಕ್ಕೆ ಹಾನಿಕರ ಎಂದಿರುವ ಪ್ರತಿಭಟನಾಕಾರರು, ನಮಗೆ ಉದ್ಯೋಗ ಕೊಡಿ ಇಲ್ಲವೇ ಕೊಲ್ಲಿ ಎಂದು ಘೋಷಣೆ ಕೂಗಿದರು. ಕರೊನಾ ಸಾಂಕ್ರಾಮಿಕದಿಂದ ಸ್ಥಗಿತಗೊಳಿಸಲಾಗಿದ್ದ ನೇಮಕಾತಿ ರ್ಯಾಲಿಗಳನ್ನು ಕೇಂದ್ರ ಸರ್ಕಾರ ಪುನಾರಂಭಿಸಲಿದೆ ಎಂದು ಎರಡು ವರ್ಷಗಳಿಂದ ಕಾಯುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಇದು ದೀರ್ಘಾವಧಿಯ ಭವಿಷ್ಯಕ್ಕೆ ಹಾನಿಕರವಾಗಿದೆ ಎಂದು ಹೇಳಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 10 =
Remember me
