|ಡಾ.ಎಂ.ಆರ್.ವೆಂಕಟೇಶ್
ವ್ಯಕ್ತಿಯೊಬ್ಬನನ್ನು ದೇಶ ಯಾವ ರೀತಿ ಒಪ್ಪಿಕೊಳ್ಳುತ್ತದೆ, ಅಪ್ಪಿಕೊಳ್ಳುತ್ತದೆ ಎನ್ನುವುದಕ್ಕೆ, ಈ ದೇಶ ಕಂಡ ಮಹಾನ್ ದಾರ್ಶನಿಕ, ಆರ್ಥಿಕ ತಜ್ಞರಲ್ಲಿ ಒಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಮಾತುಗಳನ್ನು ಉದಾಹರಣೆಯಾಗಿ ನೀಡಬಹುದು.
ದೀನದಯಾಳರು ‘ಭಗವಾನ್ ಶ್ರೀಕೃಷ್ಣ’ ಎಂಬ ಲೇಖನದಲ್ಲಿ ಬರೆದಿರುವ ಈ ಸಾಲುಗಳು ಮನೋಜ್ಞವಾಗಿವೆ: ‘ಯಾವ ವ್ಯಕ್ತಿಯೂ ರಾಷ್ಟ್ರಜೀವನದಲ್ಲಿ ಸಹಜವಾಗಿಯೇ ಇಂಥ ಕೇಂದ್ರಸ್ಥಾನವನ್ನು ಪಡೆದುಕೊಳ್ಳಲಾರ. ಸ್ವಲ್ಪ ಕಾಲದ ಮಟ್ಟಿಗೆ ನೀವು ರಾಷ್ಟ್ರವನ್ನು ನಿಮ್ಮೊಡನೆ ಕೊಂಡೊಯ್ಯಬಲ್ಲಿರಿ ಅಥವಾ ಯಾವುದಾದರೂ ಒಂದು ಸಮುದಾಯಕ್ಕೆ ಸದಾ ಕಾಲವೂ ಸ್ಪೂರ್ತಿ ಕೇಂದ್ರವಾಗಿರಬಲ್ಲಿರಿ. ಆದರೆ, ಇಡೀ ರಾಷ್ಟ್ರಕ್ಕೆ ಯುಗಯಗಗಳ ಕಾಲವೂ ಅಪಾರ ಸ್ಪೂರ್ತಿಯನ್ನು ನೀಡುವ ಸಾಮರ್ಥ್ಯ ವಿಶಿಷ್ಟ ಗುಣದಿಂದ ಮಾತ್ರವೇ ಲಭಿಸಬಲ್ಲದು. ಯಾವುದೇ ರಾಷ್ಟ್ರ ಯಾವನೇ ಒಬ್ಬ ವ್ಯಕ್ತಿಯನ್ನು ಆದರ್ಶವೆಂದು ಒಪ್ಪಿ ಅವನನ್ನು ಪೂಜಿಸಲು, ಆರಾಧಿಸಲು ತೊಡಗುವುದಿಲ್ಲ. ಯಾವ ವ್ಯಕ್ತಿಯಲ್ಲಿ ತನ್ನ ಆತ್ಮದ ಪ್ರತಿಬಿಂಬ ಕಾಣಿಸುತ್ತದೆಯೋ, ಅಂಥವನನ್ನು ಮಾತ್ರವೇ ಪೂಜಿಸಲಾಗುತ್ತದೆ. ಯಾರು ತನ್ನ (ಜನರ) ಕಲ್ಯಾಣದ ಭಾವನೆಯನ್ನು ಮುಂದಿರಿಸಿಕೊಂಡು ಮುನ್ನಡೆಯುತ್ತಾನೋ, ಅಂಥವನ ಬಗ್ಗೆ ಮಾತ್ರವೇ ಶ್ರದ್ಧೆ ಮತ್ತು ಪ್ರೇಮ ಉಂಟಾಗುತ್ತದೆ. ಯಾರು ರಾಷ್ಟ್ರಕ್ಕಾಗಿ ತನ್ನ ಬಾಳುವೆಯನ್ನು ಸಮರ್ಪಿಸಿಕೊಂಡಿರುತ್ತಾನೋ ಅಂಥವನೇ ಗೌರವಾರ್ಹನಾಗುತ್ತಾನೆ. ಅಂಥ ವ್ಯಕ್ತಿ ರಾಷ್ಟ್ರದ ಆತ್ಮವನ್ನು ಸಾಕ್ಷಾತ್ಕರಿಸಿಕೊಂಡಿದ್ದಲ್ಲಿ್ಲ ಅವನ ಬಾಳುವೆಯಿಂದ ಹೊರಹೊಮ್ಮುವಂಥ ಸ್ವರಲಹರಿ ಇಡೀ ರಾಷ್ಟ್ರದ ಹೃದಯ ನರ್ತಿಸುವಂತೆ ಮಾಡಿಬಿಡುತ್ತದೆ’ (ಪಂ. ದೀನದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು-ಸಂ.1, ಪು.177).
ದೀನದಯಾಳರು ಖಂಡಿತ ಈ ಮಾತನ್ನು ಭಗವಾನ್ ಶ್ರೀಕೃಷ್ಣನನ್ನು ಕುರಿತೇ ಹೇಳಿದ್ದಾರೆ. ಆದರೆ, ರಾಷ್ಟ್ರವೊಂದು ಒಬ್ಬ ನಾಯಕನನ್ನು ಅಪ್ಪಿಕೊಳ್ಳಬೇಕಾದರೆ ಎಷ್ಟು ರೀತಿಯಲ್ಲಿ ಆತನನ್ನು ಅಳೆದು, ತೂಗಿ, ಒರೆಗಲ್ಲಿನಲ್ಲಿ ಉಜ್ಜಿ, ಅಗ್ನಿಪರೀಕ್ಷೆಯಲ್ಲಿ ಹಾಯಿಸಿ ನೋಡಿರುತ್ತದೆ ಎನ್ನುವುದನ್ನು ಇಲ್ಲಿ ತಿಳಿಯಬಹುದು.
ಈ ಮಾತುಗಳ ಹಿನ್ನೆಲೆಯಲ್ಲಿ, ನರೇಂದ್ರ ಮೋದಿಯವರು ಎರಡು ದಶಕಕ್ಕೂ ಮೀರಿದ ಆಡಳಿತಾವಧಿಯಲ್ಲಿ, ವಿಶೇಷವಾಗಿ ಕಳೆದ ಎಂಟು ವರ್ಷಗಳಲ್ಲಿ ಪ್ರಧಾನ ಮಂತ್ರಿಯಾಗಿ ಕೈಗೊಂಡ ನಿರ್ಧಾರಗಳು ದೇಶದ ಒಳಿತನ್ನು ಬಯಸಿವೆಯೇ? ಅವುಗಳು ಭಾರತೀಯ ಜನತಾ ಪಕ್ಷದ ತತ್ವ, ಸಿದ್ಧಾಂತಕ್ಕೆ ಅನುಗುಣವಾಗಿವೆಯೇ? ಅವುಗಳು ರಾಷ್ಟ್ರೀಯತೆಯ ಚೌಕಟ್ಟಿನೊಳಗೆ ಬರುತ್ತವೆಯೇ ಎಂದು ಅವಲೋಕಿಸುವುದು ಸೂಕ್ತ. ದೀನದಯಾಳರು ಹೇಳಿದಂತೆ, ಯಾರು ಜನರ ಕಲ್ಯಾಣದ ಭಾವನೆಯನ್ನು ಮುಂದಿರಿಸಿಕೊಂಡು ಮುನ್ನಡೆಯುತ್ತಾನೋ, ಅಂಥವನ ಬಗ್ಗೆ ಮಾತ್ರವೇ ಶ್ರದ್ಧೆ ಮತ್ತು ಪ್ರೇಮ ಉಂಟಾಗುತ್ತದೆ. ಇದೇ ಕಾರಣಕ್ಕೆ, ಮೋದಿಯವರು ನೀಡಿದ ಕರೆಗೆ ಇಡೀ ದೇಶ ಸ್ಪಂದಿಸುತ್ತದೆ. ಅದು ನೋಟು ಅಮಾನ್ಯೀಕರಣ ನಿರ್ಧಾರ ಇರಬಹುದು, ಜಿಎಸ್​ಟಿ ಇರಬಹುದು, ಕೋವಿಡ್ ಎದುರಿಸಲು ಲಾಕ್​ಡೌನ್ ಘೊಷಣೆ ಇರಬಹುದು. ಕೆಲ ನಿರ್ಧಾರಗಳಿಂದ ತಾತ್ಕಾಲಿಕವಾಗಿ ಜನರ ವೈಯಕ್ತಿಕ ಜೀವನಕ್ಕೆ ತೊಂದರೆ ಆಗಿರಬಹುದಾದರೂ, ಮೋದಿಯವರು ಕೈಗೊಂಡ ನಿರ್ಧಾರ ದೇಶದ ಹಿತಾಸಕ್ತಿಗೆ ಸೂಕ್ತವಾದದ್ದು ಎನ್ನುವ ಕಾರಣಕ್ಕೆ ನಾಗರಿಕರು ಸಹಕರಿಸಿದ್ದಾರೆ.ಮೋದಿಯವರ ಬಗ್ಗೆ ಜನರಲ್ಲಿ ಈ ರೀತಿಯ ಭಾವನೆ ಬರಲು ಮುಖ್ಯ ಕಾರಣ, ‘ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಸಬ್-ಕಾ ವಿಶ್ವಾಸ್’ ಎನ್ನುವ ಮಹಾಮಂತ್ರ. ಮೋದಿಯವರನ್ನು ಇಂದು ಯಾರೂ ಅವರ ಜಾತಿಯಿಂದ ಗುರುತಿಸುವುದಿಲ್ಲ. ಆದರೆ, ವಾದದ ಸಲುವಾಗಿ ಅವರ ಹಿನ್ನೆಲೆಯನ್ನು ಪರಿಗಣಿಸಿದರೆ, ಹಿಂದುಳಿದ ವರ್ಗಕ್ಕೆ ಸೇರಿದವರು. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ, ಗಾಡ್​ಫಾದರ್​ಗಳ ಬಲವಿಲ್ಲದೆ, ಕನಿಷ್ಠ ತಾವು ಹುಟ್ಟಿಬೆಳೆದ ರಾಜ್ಯದಲ್ಲಿ ಜಾತಿಯ ಬಲವೂ ಇಲ್ಲದ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ, ಪ್ರಧಾನಿ ಅಭ್ಯರ್ಥಿಯನ್ನಾಗಿಸಿದ್ದು ಭಾರತೀಯ ಜನತಾ ಪಕ್ಷದ ಸಿದ್ಧಾಂತ. ಇಲ್ಲಿ ರಾಷ್ಟ್ರೀಯ ಅಧ್ಯಕ್ಷರಾಗಬೇಕೆಂದರೆ, ಪ್ರಧಾನಿ ಅಭ್ಯರ್ಥಿ ಆಗಬೇಕೆಂದರೆ, ಟಿಕೆಟ್ ಪಡೆಯಬೇಕೆಂದರೆ ಇಂತಹದ್ದೇ ಕುಟುಂಬದಲ್ಲಿ, ಜಾತಿಯಲ್ಲಿ ಜನಿಸಿರಬೇಕೆಂಬ ನಿರ್ಬಂಧ ಇಲ್ಲ. ಇದೇ ತತ್ವವನ್ನು ಮೋದಿಯವರು ಆಡಳಿತದಲ್ಲೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಒಬಿಸಿ ಸಮುದಾಯಗಳನ್ನು ಗುರುತಿಸುವ ಅಧಿಕಾರವನ್ನು ಕೇಂದ್ರ ಸರ್ಕಾರವೇ ಹೊಂದಿದ್ದನ್ನು ಬದಲಾವಣೆ ಮಾಡಿದ್ದು ಮೋದಿ ಸರ್ಕಾರ. ಇದೇ ವರ್ಷ ಫೆಬ್ರವರಿಯಲ್ಲಿ ಸಂವಿಧಾನದ 127ನೇ ತಿದ್ದುಪಡಿಯ ಮೂಲಕ, ಸಮುದಾಯಗಳನ್ನು ಒಬಿಸಿ ಪಟ್ಟಿಗೆ ಸೇರಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಯಿತು. ಕೇಂದ್ರ ಸರ್ಕಾರ ರಾಜ್ಯಗಳ ಅಧಿಕಾರವನ್ನು ಕಿತ್ತುಕೊಳ್ಳುತ್ತಿದೆ ಎಂದು ಬೊಬ್ಬೆ ಇಡುವ ಅನೇಕರು ಆ ಸಮಯದಲ್ಲಿ ಮಾತೇ ಆಡಲಿಲ್ಲ ಎನ್ನುವುದು ಬೇರೆಯ ವಿಷಯ. ಕಾಂಗ್ರೆಸ್ ಸೇರಿ ಅನೇಕ ಪಕ್ಷಗಳು ಹಿಂದಿನಿಂದಲೂ ಒಬಿಸಿ, ಎಸ್​ಸಿ, ಎಸ್​ಟಿ ಸಮುದಾಯಗಳ ಏಳಿಗೆ ಕುರಿತು ಮಾತನಾಡಿವೆ. ಆದರೆ, ಅವರ ನಡೆಗಳು ದಲಿತರನ್ನು ಸ್ವಾವಲಂಬಿಗಳಾಗಿಸುವ ಬದಲಿಗೆ, ತಮ್ಮ ಮೇಲೆ ಹೆಚ್ಚು ಅವಲಂಬಿತರನ್ನಾಗಿಸಿ, ವೋಟ್ ಬ್ಯಾಂಕ್ ಮಾಡಿಕೊಳ್ಳುವ ಹುನ್ನಾರವಿತ್ತು. ಹಸಿದ ವ್ಯಕ್ತಿಗೆ ಮೀನು ಹಿಡಿಯುವುದನ್ನು ಕಲಿಸಿದರೆ ಆತ ಮುಂದೆಯೂ ಮೀನನ್ನು ಹಿಡಿದು ಜೀವನ ನಡೆಸುತ್ತಾನೆ. ಆದರೆ, ನೇರವಾಗಿ ಮೀನನ್ನು ನೀಡಿ, ನೀನೇನೂ ಕಷ್ಟಪಡಬೇಡ ನಾನೇ ನಿನಗೆ ಮುಂದೆಯೂ ಮೀನು ನೀಡುತ್ತೇನೆ ಎಂದರೆ ಆತ ಸ್ವಾವಲಂಬಿ ಆಗುವುದಿಲ್ಲ. ಇದೇ ರೀತಿ ಕಾಂಗ್ರೆಸ್ ಸೇರಿ ಅನೇಕ ಪಕ್ಷಗಳು ಹಿಂದುಳಿದ, ದಲಿತ ವರ್ಗಗಳನ್ನು ತಮ್ಮ ಮತಬ್ಯಾಂಕ್ ಮಾಡಿಕೊಳ್ಳಲು ಯೋಜನೆ ರೂಪಿಸಿದ್ದವು. ದಲಿತರ ಮೂಗಿಗೆ ತುಪ್ಪ ಸವರಿ, ಒಳಗಿಂದೊಳಗೆ ಸ್ವಹಿತವನ್ನಷ್ಟೆ ಸಾಧಿಸಿಕೊಂಡವು.
ಬಿಜೆಪಿ ನೇತೃತ್ವದಲ್ಲಿ, ಕೋಲಿ ಸಮುದಾಯಕ್ಕೆ ಸೇರಿದ ಸಾಮಾನ್ಯ ಹಿನ್ನೆಲೆಯ ರಾಮನಾಥ ಕೋವಿಂದ ರಾಷ್ಟ್ರಪತಿಯಾದರು. ಇದೀಗ, ಪರಿಶಿಷ್ಟ ಪಂಗಡದ ಬುಡಕಟ್ಟು ಸಮುದಾಯದಿಂದ ಬಂದ ದ್ರೌಪದಿ ಮುಮು ರಾಷ್ಟ್ರಪತಿಯಾಗಿದ್ದಾರೆ. ಈ ಇಬ್ಬರೂ ರಾಷ್ಟ್ರಪತಿ ಸ್ಥಾನಕ್ಕೆ ಅರ್ಹರೇ ಆಗಿದ್ದವರು. ಆದರೆ, ಅವರ ಸಾಮಾಜಿಕ ಹಿನ್ನೆಲೆಯ ಕಾರಣಕ್ಕೆ ಬೇರೆ ಪಕ್ಷಗಳ ಅವಧಿಯಲ್ಲಿ ಅವಕಾಶಗಳು ಸಿಗುತ್ತಿರಲಿಲ್ಲ.
ಭಾರತೀಯ ಸಮಾಜದ ಅಂತಃಸತ್ವ ಇರುವುದೇ ಇಲ್ಲಿನ ಎಲ್ಲರನ್ನೂ ಒಳಗೊಳ್ಳುವಿಕೆಯಿಂದ. ಅದರ ಹೊರತಾಗಿ, ಕೆಲವೇ ಜನರು ಅಧಿಕಾರ ಹಿಡಿದು ಬಾಯಲ್ಲಿ ಸಾಮಾಜಿಕ ಸಮಾನತೆಯ ಮಾತನಾಡುವುದು ಬೂಟಾಟಿಕೆ ಆಗುತ್ತದೆ. ಸದ್ಯದಲ್ಲೇ ಮಹಾತ್ಮ ಗಾಂಧೀಜಿಯವರ ಜನ್ಮದಿನವೂ ಸಮೀಪಿಸುತ್ತಿದೆ. ಅವರೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆ ಬಯಸಿದವರು. ಗಾಂಧೀಜಿ ಹಾಗೂ ದೀನದಯಾಳರ ವಿಚಾರಧಾರೆ ಗಳಲ್ಲಿ ಅನೇಕ ಭಿನ್ನತೆಗಳಿದ್ದವು. ಆದರೆ, ಇಬ್ಬರ ಗುರಿಯೂ ಅಂತಿಮವಾಗಿ ಸಮಾಜೋದ್ಧಾರವೇ ಆಗಿತ್ತು. ವಿಕೇಂದ್ರೀಕರಣ ವ್ಯವಸ್ಥೆಯ ಮೂಲಕ ಸಮಾಜದ ಅಭಿವೃದ್ಧಿಯ ಗಾಂಧೀಜಿ ಕನಸು ಕಂಡರು, ದೀನದಯಾಳರು ಅಂತ್ಯೋದಯ ಪರಿಕಲ್ಪನೆಯ ಮೂಲಕ ಅದೇ ಗುರಿ ಸಾಧನೆಗೆ ಮುಂದಾದರು. ಇದೀಗ ಮೋದಿ ಸರ್ಕಾರವೂ ಇದೇ ಗುರಿಗೆ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಎನ್ನುವ ಘೊಷಣೆಯೊಂದಿಗೆ ಕಾರ್ಯಪ್ರವೃತ್ತವಾಗಿದೆ.
ಸಂಪುಟದಲ್ಲಿ ಒಬಿಸಿಗೆ ಪ್ರಾಧಾನ್ಯ:ಮೋದಿಯವರ ಸರ್ಕಾರದಲ್ಲಿ 27 ಸಚಿವರು ಒಬಿಸಿ ಸಮುದಾಯಕ್ಕೆ ಸೇರಿದ್ದು, ಇವರಲ್ಲಿ ಐವರು ಸಂಪುಟ ದರ್ಜೆ ಹೊಂದಿದ್ದಾರೆ. 12 ಸಚಿವರು ಎಸ್​ಸಿ ವರ್ಗಕ್ಕೆ ಸೇರಿದ್ದು, ಚಮಾರ್, ಕಥಿಕ್, ಮಹಾರ್, ಅರುಂಧತಿಯಾರ್, ಮೇಘವಾಲ್​ವುುಂತಾದ ಹಿಂದುಳಿದ ಸಮುದಾಯದವರಿಗೆ ಪ್ರಾತಿನಿಧ್ಯ ನೀಡಲಾಗಿದೆ. ಎಸ್​ಟಿ ವರ್ಗಕ್ಕೆ ಸೇರಿದ 8 ಸಚಿವರಿದ್ದಾರೆ. ಈ ಪ್ರಮಾಣದಲ್ಲಿ ಹಿಂದುಳಿದ, ದಲಿತ ವರ್ಗಗಳಿಗೆ ಪ್ರಾತಿನಿಧ್ಯ ನೀಡಿದ ಉದಾಹರಣೆ ಭಾರತದಲ್ಲಿಲ್ಲ.
ಸಾಮರಸ್ಯಪೂರ್ಣ ವ್ಯವಸ್ಥೆ:ಮೋದಿ ಸರ್ಕಾರದ ಈ ನಿರ್ಧಾರಗಳಿಗೂ ಗಟ್ಟಿಯಾದ ಸೈದ್ಧಾಂತಿಕ ತಳಹದಿ ಇದೆ. ಪಂ. ದೀನದಯಾಳ್ ಉಪಾಧ್ಯಾಯರು ‘ಸಾಮರಸ್ಯಪೂರ್ಣ ಸಾಮಾಜಿಕ ವ್ಯವಸ್ಥೆ’ ಎಂಬ ಲೇಖನದಲ್ಲಿ ಹೀಗೆ ಹೇಳುತ್ತಾರೆ: ‘ವ್ಯವಸ್ಥೆಯ ಎರಡು ರೂಪಗಳಿರುತ್ತವೆ. ಒಂದು ಆಂತರಿಕ ಹಾಗೂ ಮತ್ತೊಂದು ಬಾಹ್ಯ. ಬಾಹ್ಯ ಸ್ವರೂಪವನ್ನು ಎಷ್ಟು ಸರಿಪಡಿಸಿದರೂ ಆಂತರಿಕ ಸ್ವರೂಪ ಹಾಗೆಯೇ ಇರುತ್ತದೆ. ಹೊರಗಿನ ಸ್ವರೂಪವನ್ನು ಆಧಾರವನ್ನಾಗಿಸಿ ಯಾವುದೇ ವಸ್ತು ಉಳಿಯಲಾರದು. ವಸ್ತುವಿನ ಬೆಲೆಯು ಅದರಲ್ಲಿನ ಒಳತತ್ವದಿಂದ ಉಂಟಾಗುತ್ತದೆ. ಆಂತರಿಕ ಭಾವನೆ ಅಥವಾ ಶಕ್ತಿ ಹೊರಗಿನ ಸ್ವರೂಪವನ್ನು ಉಳಿಸುವುದಕ್ಕೆ ಕಾರಣವಾಗುತ್ತದೆ. ಈ ಒಳಗಿನ ವಸ್ತು ಇರದಿದ್ದಲ್ಲಿ, ಒಳಗೆ ವ್ಯಾಪಿಸಿರುವ ಈ ಸೂಕ್ಷ್ಮ ತತ್ವ ಅದೃಶ್ಯವಾದಲ್ಲಿ ವಿಶ್ವದ ಯಾವುದೇ ಶಕ್ತಿ ಹೊರಗಿನ ಸ್ವರೂಪವನ್ನು ರಕ್ಷಿಸಲಾರದು. ಆದ್ದರಿಂದ ಪ್ರತಿಯೊಂದು ವ್ಯವಸ್ಥೆಯಲ್ಲಿ ಅಡಗಿರುವ ಈ ಆಂತರಿಕ ಭಾವನೆಯನ್ನು ಬಹಳ ಜಾಗರೂಕತೆಯಿಂದ ಕಾಪಾಡಬೇಕಾಗುತ್ತದೆ.’ (ಪಂ. ದೀನದಯಾಳ್ ಉಪಾಧ್ಯಾಯ ಅವರ ಸಮಗ್ರ ಬರೆಹಗಳು-ಸಂ.2, ಪು.174)
(ಲೇಖಕರು, ರಾಜ್ಯ ಬಿಜೆಪಿಯ ಹಾಲು ಉತ್ಪಾದಕರ ಪ್ರಕೋಷ್ಠದ ಸಂಚಾಲಕರು)
ಸತತ ಮೂರನೇ ಸಲ ಕಾಮನ್​ವೆಲ್ತ್​ ಚಾಂಪಿಯನ್​ಷಿಪ್​ಗೆ ಪವರ್​​ಲಿಫ್ಟರ್​ ವಿಶ್ವನಾಥ್ ಆಯ್ಕೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
