ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್​ಒ) ಅಧಿಕ ಪಿಂಚಣಿಗಾಗಿ ಅರ್ಜಿ ಸಲ್ಲಿಸುವ ಗಡುವನ್ನು ಜುಲೈ 11ರವರೆಗೆ ವಿಸ್ತರಿಸಿದೆ. ಅರ್ಜಿ ತುಂಬಲು ಮೊದಲಿನ ಗಡುವು ಮೇ 3 ರವರೆಗೆ ಇತ್ತು. ನಂತರ ಜೂನ್ 26ಕ್ಕೆ ವಿಸ್ತರಿಸಲಾಗಿತ್ತು. ಈ ಬಾರಿ ಗಡುವು ವಿಸ್ತರಣೆಯಲ್ಲಿ ವ್ಯತ್ಯಾಸವಿದ್ದು, ಉದ್ಯೋಗದಾತರಿಗೆ ಸೆಪ್ಟೆಂಬರ್ 30ರವರೆಗೆ ಮೂರು ತಿಂಗಳ ಹೆಚ್ಚುವರಿ ಸಮಯ ಮತ್ತು ಉದ್ಯೋಗಿಗಳಿಗೆ ಜುಲೈ 11ರವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ. ಈ ಯೋಜನೆಯಲ್ಲಿ ಇದುವರೆಗೆ 16.06 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಇಪಿಎಫ್​ಒ ತಿಳಿಸಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ಅರ್ಜಿದಾರರು ಪುನರಾವರ್ತಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಧಿಕ ಪಿಂಚಣಿ ಪಡೆಯಲು ಠೇವಣಿ ಮಾಡಬೇಕಾದ ಮೊತ್ತದ ಕುರಿತು ಸ್ಪಷ್ಟತೆಯ ಕೊರತೆ ಇದ್ದು, ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸುವಲ್ಲಿ ಕೆಲವರು ತೊಂದರೆಗಳನ್ನು ಎದುರಿಸಿದ್ದಾರೆ.
ತಮ್ಮ ಇಪಿಎಫ್ ಯುಎಎನ್ (ಯೂನಿವರ್ಸಲ್ ಅಕೌಂಟ್ ನಂಬರ್)ಗೆ ಲಿಂಕ್ ಆಗಿರುವ ತಮ್ಮ ಆಧಾರ್​ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದವರಲ್ಲಿ ಅನೇಕರಿಗೆ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗಿಲ್ಲ. ಸರಿಯಾದ ಪರಿಶೀಲನೆ ನಡೆಸಿ ಈ ಬದಲಾವಣೆಗಳನ್ನು ಅನುಮತಿಸುವುದರಿಂದಾಗಿ ಇಂತಹ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ ಎಂದು ಇಪಿಎಫ್​ಒ ಮೂಲಗಳು ಹೇಳುತ್ತವೆ.
ಇನ್ನು ಅನೇಕರು ಜಂಟಿ ಆಯ್ಕೆಯ ಮೌಲ್ಯೀಕರಣ (ವ್ಯಾಲಿಡೇಶನ್) ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಉದ್ಯೋಗಿಗಳು ಹಾಗೂ ಉದ್ಯೋಗದಾತರು ಸೇರಿ ಮಾಡಬೇಕಾಗಿದೆ. ಉದ್ಯೋಗಿಗಳ ಸಂಬಳ ಕುರಿತಂತೆ ಹಳೆಯ ಮಾಹಿತಿಗಳನ್ನು (ಡೇಟಾ) ಪತ್ತೆ ಹಚ್ಚುವಲ್ಲಿ ಅನೇಕ ಉದ್ಯೋಗದಾತರು ತೊಂದರೆಗಳಿರುವುದನ್ನು ಉಲ್ಲೇಖಿಸಿದ್ದಾರೆ. ಅಂದಾಜು ಶೆ.30 ಉದ್ಯೋಗದಾತರು ಜಂಟಿ ಆಯ್ಕೆಯನ್ನು ಮೌಲ್ಯೀಕರಿಸಲು ಒಪ್ಪಿಕೊಂಡಿಲ್ಲ ಎಂದು ತಿಳಿದುಬಂದಿದೆ.
ಠೇವಣಿ ಮೊತ್ತದ ಕುರಿತಂತೆ, ವಿಶೇಷವಾಗಿ ಕಳೆದ ಕೆಲವು ವರ್ಷಗಳಲ್ಲಿ ಪಿಎಫ್ ಖಾತೆಯಿಂದ ಒಂದಿಷ್ಟು ಮೊತ್ತವನ್ನು ಹಿಂಪಡೆದಿರುವವರಿಗೆ ಸಮಸ್ಯೆಗಳು ಉದ್ಭವಿಸಬಹುದಾಗಿದೆ. ಏಕೆಂದರೆ, ಹೆಚ್ಚಿನ ಪಿಂಚಣಿ ಆಯ್ಕೆ ಮಾಡಲು ಸಾಕಷ್ಟು ಬಾಕಿ ಇಲ್ಲದಿರಬಹುದು. ಮತ್ತೊಂದು ವಿಷಯವೆಂದರೆ ಚಂದಾದಾರರು ಆಯ್ಕೆ ಮಾಡಿಕೊಂಡ ನಂತರ ಅಗತ್ಯವಿರುವ ಮೊತ್ತ ಇಲ್ಲದಿರುವ ಸಂದರ್ಭದಲ್ಲಿ ಯೋಜನೆಯಿಂದ ನಿರ್ಗಮಿಸಲು ಅವಕಾಶ ಇಲ್ಲ. ಹೀಗಾಗಿ ಹೊಸ ಯೋಜನೆಯಿಂದ ಹೊರಗೆ ಬರುವಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು.
ಈ ಅಡಚಣೆ ನಿವಾರಿಸುವ ನಿಟ್ಟಿನಲ್ಲಿ, ಯೋಜನೆಯು ಕಾರ್ಯರೂಪಕ್ಕೆ ಬಂದ ನಂತರ ಚಂದಾದಾರರಿಗೆ ಬಾಕಿ ಪಾವತಿಸಲು ಮೂರು ತಿಂಗಳ ಅವಧಿಯನ್ನು ನೀಡುವ ನಿರೀಕ್ಷೆಯಿದೆ. ಬಾಕಿ ಪಾವತಿಸಲು ವಿಫಲವಾದರೆ ಅವರನ್ನು ಅನರ್ಹರೆಂದು ಪರಿಗಣಿಸಲಾಗುತ್ತದೆ.
ಅಧಿಕ ಪಿಂಚಣಿ ಆಯ್ಕೆ ಮಾಡುವ ಚಂದಾದಾರರಿಗೆ ಮೂಲ ವೇತನದ ಶೇಕಡಾ 1.16 ಹೆಚ್ಚುವರಿ ವಂತಿಗೆಯನ್ನು ಇಪಿಎಫ್​ಒಗೆ ಉದ್ಯೋಗದಾತರ ವಂತಿಗೆಗಳಿಂದ ನಿರ್ವಹಿಸಲಾಗುವುದು ಎಂದು ಇಪಿಎಫ್​ಒ ಹೇಳಿದೆ.
ಉದ್ಯೋಗಿಗಳ ಭವಿಷ್ಯ ನಿಧಿಗಳು ಮತ್ತು ವಿವಿಧ ನಿಬಂಧನೆಗಳ ಕಾಯ್ದೆ 1952ರಲ್ಲಿ ಪಿಂಚಣಿ ಸೌಲಭ್ಯ ಒದಗಿಸಿರಲಿಲ್ಲ. ಇಪಿಎಫ್​ಒದಿಂದ ನಿರ್ವಹಿಸಲ್ಪಡುವ ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್)ಯು 1995ರಲ್ಲಿ ಅಸ್ತಿತ್ವಕ್ಕೆ ಬಂದಿತು. ಪಿಂಚಣಿ ನಿಧಿಗೆ ಉದ್ಯೋಗದಾತರ ವಂತಿಗೆ ಶೇಕಡಾ 8.33 ಇರುತ್ತದೆ. ಉದ್ಯೋಗಿಗಳು ಮತ್ತು ಉದ್ಯೋಗದಾತರು ಇಬ್ಬರೂ ಸೇರಿ ಉದ್ಯೋಗಿಯ ಮೂಲ ವೇತನ, ತುಟ್ಟಿಭತ್ಯೆ ಮತ್ತು ಇತರೆ ಭತ್ಯೆಯ ಶೇ. 12 ಮೊತ್ತವನ್ನು ಇಪಿಎಫ್​ಗೆ ವಂತಿಗೆ ನೀಡುತ್ತಾರೆ. ಉದ್ಯೋಗಿಯ ಸಂಪೂರ್ಣ ವಂತಿಗೆ ಭವಿಷ್ಯ ನಿಧಿಗೆ (ಇಪಿಎಫ್) ಹೋಗುತ್ತದೆ. ಆದರೆ, ಉದ್ಯೋಗದಾತರಿಂದ ಪಡೆಯಲಾಗುವ ಶೇ. 12 ವಂತಿಗೆಯಲ್ಲಿ ಇಪಿಎಫ್​ಗೆ ಶೇಕಡಾ 3.67 ಮತ್ತು ಪಿಂಚಣಿ ಯೋಜನೆಗೆ (ಇಪಿಎಸ್​ಗೆ) ಶೇಕಡಾ 8.33 ಎಂದು ವಿಂಗಡಿಸಲಾಗಿದೆ. ವೇತನ ಮಿತಿಗಿಂತ ಕೆಳಗಿರುವ ಉದ್ಯೋಗಿಗಳ ಪಿಂಚಣಿಗಾಗಿ ಭಾರತ ಸರ್ಕಾರ ಶೇಕಡಾ 1.16ರಷ್ಟು ವಂತಿಗೆ ನೀಡುತ್ತದೆ. ಪಿಂಚಣಿ ಯೋಜನೆಗೆ ನೌಕರರ ಕಡೆಯಿಂದ ಯಾವುದೇ ವಂತಿಗೆ ಪಡೆದುಕೊಳ್ಳುವುದಿಲ್ಲ.
ಇಪಿಎಸ್ ಅನ್ನು ಪರಿಚಯಿಸಿದ ಸಮಯದಲ್ಲಿ, ಗರಿಷ್ಠ ಪಿಂಚಣಿ ವೇತನ ತಿಂಗಳಿಗೆ 5,000 ರೂಪಾಯಿ ಇತ್ತು. ನಂತರ. ಇದನ್ನು 6,500 ರೂಪಾಯಿಗೆ ಹೆಚ್ಚಿಸಲಾಯಿತು. 2014ರ ಸೆಪ್ಟೆಂಬರ್ 1ರಿಂದ 15,000 ರೂಪಾಯಿಗೆ ಏರಿಸಲಾಯಿತು. ಇದರನುಸಾರವಾಗಿ ಪ್ರಸ್ತುತ ಪಿಂಚಣಿಗೆ ವಂತಿಗೆಯು ಈ 15,000 ರೂಪಾಯಿಯ ಶೇ. 8.33ರಷ್ಟು ಇದೆ. ಅಂದರೆ ಪ್ರತಿ ತಿಂಗಳಿಗೆ 1,250 ರೂಪಾಯಿ ಇದೆ. ಹೊಸ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ಇದೇ ಲೆಕ್ಕಾಚಾರ ಮುಂದುವರಿಯುತ್ತದೆ.
ಕಳೆದ ವರ್ಷ ನವೆಂಬರ್ 4ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ, ನೌಕರರ ಪಿಂಚಣಿ (ತಿದ್ದುಪಡಿ) ಯೋಜನೆ 2014ರ ತಿದ್ದುಪಡಿಗಳನ್ನು ಎತ್ತಿಹಿಡಿಯಲಾಗಿದೆ. ಈ ತೀರ್ಪಿನ ಅನುಸಾರವೇ ಹೆಚ್ಚುವರಿ ಪಿಂಚಣಿ ಯೋಜನೆ ಆಯ್ಕೆ ಈಗ ಲಭ್ಯವಾಗಿದೆ. ಇದುವರೆಗೆ ಇರುವ ಗರಿಷ್ಠ 15,000 ರೂಪಾಯಿಯ ಪಿಂಚಣಿಗೆ ಅನುಗುಣವಾಗಿ ಪ್ರತಿ ತಿಂಗಳಿಗೆ ಶೇಕಡಾ 8.33 ವಂತಿಗೆ ಪಾವತಿಸುವ ಬದಲಾಗಿ, ವಾಸ್ತವ ವೇತನದ ಶೇ. 8.33ರವರೆಗೆ ವಂತಿಗೆ ನೀಡಲು ಮತ್ತೊಂದು ಅವಕಾಶವನ್ನು ಒದಗಿಸಲಾಗಿದೆ. 2014ರ ಸೆಪ್ಟೆಂಬರ್ 1ರವರೆಗೆ ಅಸ್ತಿತ್ವದಲ್ಲಿರುವ ಇಪಿಎಸ್ ಸದಸ್ಯರಾಗಿರುವ ಉದ್ಯೋಗಿಗಳಿಗೆ ಇದು ಅನ್ವಯಿಸುತ್ತದೆ.
ಇಪಿಎಸ್ ಚಂದಾದಾರರಾಗಿರುವ ನೌಕರರು ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಸಿದ್ದರೆ ಮತ್ತು 58ನೇ ವಯಸ್ಸಿನಲ್ಲಿ ನಿವೃತ್ತರಾಗಿದ್ದರೆ 58 ವರ್ಷ ವಯಸ್ಸಿನ ನಂತರ ಪಿಂಚಣಿ ನೀಡಲಾಗುತ್ತದೆ. ಒಬ್ಬ ಸದಸ್ಯ 50 ಮತ್ತು 57 ರ ನಡುವಿನ ಅವಧಿಯಲ್ಲಿ ಉದ್ಯೋಗವನ್ನು ತೊರೆದರೆ, ಅವರು ಕಡಿಮೆ ಪಿಂಚಣಿ ಪಡೆಯಬೇಕಾಗುತ್ತದೆ. 2014ರ ಸೆಪ್ಟೆಂಬರ್ 1ರವರೆಗೆ ಸೇವೆ ಸಲ್ಲಿಸಿದವರಿಗೆ ಗರಿಷ್ಠ ಮಾಸಿಕ ಪಿಂಚಣಿ ವೇತನ 6,500 ರೂ. ಹಾಗೂ ನಂತರ ಸೇವೆ ಸಲ್ಲಿಸಿದವರಿಗೆ ಗರಿಷ್ಠ 15,000 ರೂ ಪಿಂಚಣಿ ವೇತನ ನೀಡಲಾಗುತ್ತದೆ. ಈ ಹಿಂದೆ ಪಿಂಚಣಿ ನಿಧಿಯ ಸದಸ್ಯತ್ವದಿಂದ ನಿರ್ಗಮಿಸುವ ಮೊದಲು 12 ತಿಂಗಳ ಅವಧಿಯಲ್ಲಿ ಪಡೆದ ವೇತನದ ಸರಾಸರಿಯಾಗಿ ಪಿಂಚಣಿ ವೇತನ ಲೆಕ್ಕಹಾಕಲಾಗುತ್ತಿತ್ತು. ಆದರೆ, 2014ರಲ್ಲಿ ಮಾಡಲಾದ ತಿದ್ದುಪಡಿಗಳ ಅನುಸಾರವಾಗಿ ಈ ಅವಧಿಯನ್ನು ಸರಾಸರಿ 60 ತಿಂಗಳಿಗೆ ಹೆಚ್ಚಿಸಲಾಗಿದೆ. ಮಾಸಿಕ ಪಿಂಚಣಿಯನ್ನು ಈ ಸೂತ್ರದ ಪ್ರಕಾರ ಲೆಕ್ಕಹಾಕಲಾಗುತ್ತದೆ.
ಆನ್​ಲೈನ್ ಕ್ಯಾಲ್ಕುಲೇಟರ್:ಹೆಚ್ಚುವರಿ ಪಿಂಚಣಿ ಯೋಜನೆ ಆಯ್ಕೆ ಮಾಡಿಕೊಂಡ ಚಂದಾದಾರರಿಗೆ ಆನ್​ಲೈನ್ ಪೋರ್ಟಲ್​ನಲ್ಲಿ ಕ್ಯಾಲ್ಕುಲೇಟರ್ ನೀಡ ಲಾಗಿದೆ. ಅದರ ಮೂಲಕ ಈ ಯೋಜನೆಗೆ ತಾವು ಪಾವತಿಸ ಬೇಕಾದ ಬಾಕಿಯನ್ನು ಅಂದಾಜು ಮಾಡಬಹುದು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 17 =
Remember me
