ಒಂದು ರಾತ್ರಿ, ಒಬ್ಬ ವಿದ್ಯಾರ್ಥಿ ತಾನು ಕಾಲೇಜು ಕಲಿಯುತ್ತಿದ್ದ ಸ್ಥಳದಿಂದ ಹುಟ್ಟೂರಿಗೆ ಬಸ್ಸಿನಲ್ಲಿ ಪ್ರಯಾಣ ಮಾಡಬೇಕಾಗಿ ಬರುತ್ತದೆ. ತನ್ನ ಬಳಿ ಇದ್ದ ಹಣವನ್ನು ಕಂಡಕ್ಟರ್​ಗೆ ನೀಡಿ ಆ ಹಣದಿಂದ ಎಲ್ಲಿಯವರೆಗೆ ಪ್ರಯಾಣಿಸಬಹುದೋ ಅಲ್ಲಿಗೆ ಟಿಕೆಟ್ ಪಡೆಯುತ್ತಾನೆ. ಮಧ್ಯರಾತ್ರಿ ಆಗಿರುತ್ತದೆ. ತಾನು ಟಿಕೆಟ್ ತೆಗೆದುಕೊಂಡ ನಿಲ್ದಾಣ ಬಂದಾಗ ಆ ವಿದ್ಯಾರ್ಥಿಯೇ ಬಸ್ಸನ್ನು ನಿಲ್ಲಿಸಿ ಇಳಿಯಲು ಸಜ್ಜಾಗುತ್ತಾನೆ. ಕಂಡಕ್ಟರ್ ಎಲ್ಲಿಗೆ ಹೋಗಬೇಕೆಂದು ವಿಚಾರಿಸಿದಾಗ ಮುದ್ದೇನಹಳ್ಳಿ ಎಂದು ಹೇಳುತ್ತಾನೆ. ಕಂಡಕ್ಟರ್ ಮೂಕವಿಸ್ಮಿತನಾಗುತ್ತಾನೆ. ಆ ವಿದ್ಯಾರ್ಥಿ ಬಸ್ಸು ಇಳಿದು ನಡೆದುಕೊಂಡು ಹೋಗಿ ಊರು ತಲುಪುತ್ತಾನೆ.
ಇದು ಸರ್ ಎಂ ವಿಶ್ವೇಶ್ವರಯ್ಯನವರ ಜೀವನದ ಒಂದು ಘಟನೆ. ಇಂತಹ ನಡೆನಡೆಗಳಿಂದಾಗಿಯೇ ಇಂದಿಗೂ ಅವರು ಆದರ್ಶವಾಗಿರುವುದು. ಮೈಸೂರು ಸಂಸ್ಥಾನದ ದಿವಾನರಾಗಿ ನೇಮಕಗೊಂಡಾಗ, ಕುಟುಂಬ ಸದಸ್ಯರಾರೂ ವೈಯಕ್ತಿಕ ಕೆಲಸಕ್ಕಾಗಿ ಅಥವಾ ಸರ್ಕಾರದ ಕೆಲಸಕ್ಕಾಗಿ ಶಿಫಾರಸಿಗಾಗಿ ಬರಕೂಡದು ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದರು.
ಸರ್ ಎಂವಿ ಒಬ್ಬ ಇಂಜಿನಿಯರ್ ಆಗಿ, ಚಿಂತಕರಾಗಿ, ಮೈಸೂರು ಸಂಸ್ಥಾನದ ದಿವಾನರಾಗಿ ಅನೇಕ ಕಷ್ಟಗಳಿಗೆ ಪರಿಹಾರವಾಗಬಲ್ಲ ಕಾರ್ಯಗಳನ್ನು ಮಾಡಿದ ಧೀಮಂತ ವ್ಯಕ್ತಿ. ಯಾವುದೇ ಸಮಸ್ಯೆಯಿದ್ದರೂ ವಿಶ್ವೇಶ್ವರಯ್ಯನವರ ಹತ್ತಿರ ಅದಕ್ಕೆ ಪರಿಹಾರ ಇರುತ್ತದೆ ಎಂಬ ನಂಬಿಕೆ ಮೈಸೂರು ಮಹಾರಾಜರದಾಗಿತ್ತು. ಕನ್ನಡ ಸಾಹಿತ್ಯದ ಮೇರುವ್ಯಕ್ತಿಯಾದ ಡಿ.ವಿ.ಗುಂಡಪ್ಪ ಅವರು ಸರ್ ಎಂವಿ ಬಳಿ ಕೆಲಕಾಲ ಕೆಲಸ ಮಾಡಿದ್ದರು. ಸಂಬಳವಾಗಿ ವಿಶ್ವೇಶ್ವರಯ್ಯನವರು ನೀಡಿದ ಚೆಕ್ಕನ್ನು ಡಿವಿಜಿಯವರು ತಮ್ಮ ಜೀವಿತಾವಧಿಯ ತನಕ ನಗದು ಮಾಡಿಸಿಕೊಳ್ಳದೆ ಕಾಯ್ದುಕೊಂಡಿದ್ದರು. ಈ ಬಗ್ಗೆ ಯಾರಾದರೂ ಕೇಳಿದರೆ, ‘ಅಂತಹ ವ್ಯಕ್ತಿಗಳು ಕೊಟ್ಟ ಸಂಬಳದ ನೆನಪು ಕಡೆಯ ತನಕ ಇರಬೇಕು. ನಗದು ಮಾಡಿಸಿಕೊಂಡರೆ ಚೆಕ್ ನನ್ನ ಬಳಿ ಇರುವುದಿಲ್ಲ. ಹಾಗಾಗಿ ವಿಶ್ವೇಶ್ವರಯ್ಯನವರು ಈ ಚೆಕ್ ರೂಪದಲ್ಲಿ ನನ್ನ ಜೀವನದುದ್ದಕ್ಕೂ ಇರಲಿ’ ಎಂದು ಪ್ರತಿಕ್ರಿಯಿಸುತ್ತಿದ್ದರಂತೆ.
ಒಂದು ರಾತ್ರಿ ವಿಶ್ವೇಶ್ವರಯ್ಯನವರು ಮೇಣದಬತ್ತಿ ಹಚ್ಚಿಕೊಂಡು ಕೆಲಸ ಮಾಡುತ್ತಿದ್ದರು. ಲೆಕ್ಕಪತ್ರ ಬರೆಯುವುದು, ಮಹಾರಾಜರ ಕೆಲಸದ ಕುರಿತಾಗಿ ಆದೇಶ ಪತ್ರಗಳ ಪರಿಶೀಲನೆ ಹಾಗೂ ಅಣೆಕಟ್ಟು ಮತ್ತು ಇನ್ನಿತರ ಕಟ್ಟಡದ ಕುರಿತಾದ ಕೆಲಸಗಳೇ ಹೆಚ್ಚಾಗಿ ಇರುತ್ತಿದ್ದವು. ಕೆಲಹೊತ್ತು ಆದ ಮೇಲೆ ಮುಂದಿದ್ದ ದಾಖಲೆ ಪುಸ್ತಕಗಳನ್ನು ಬದಿಗಿಟ್ಟು ಮೇಣಬತ್ತಿ ಆರಿಸುತ್ತಾರೆ. ನಂತರ ಬೇರೆ ಮೇಣದಬತ್ತಿ ಹೊತ್ತಿಸಿ ಪುಸ್ತಕ ಓದುತ್ತಾ ಕುಳಿತುಕೊಳ್ಳುತ್ತಾರೆ. ಅವರೊಟ್ಟಿಗೆ ಕುಳಿತಿದ್ದ ಒಬ್ಬರು ಇದನ್ನು ಗಮನಿಸಿ, ಮೇಣದಬತ್ತಿ ಆರಿಸಿ ಮತ್ತೊಂದು ಹೊತ್ತಿಸಿ ಓದುತ್ತಿರುವ ಕಾರಣ ಕೇಳುತ್ತಾರೆ. ಅದಕ್ಕೆ ವಿಶ್ವೇಶ್ವರಯ್ಯನವರು ‘ಸರ್ಕಾರಿ ಕೆಲಸಕ್ಕಾಗಿ ಸರ್ಕಾರ ನೀಡಿದ ಮೇಣದಬತ್ತಿ ಬಳಸಿದ್ದೇನೆ, ಪುಸ್ತಕ ಓದುವುದು ನನ್ನ ವೈಯಕ್ತಿಕ ಕೆಲಸ. ಹಾಗಾಗಿ ನನ್ನ ಖರ್ಚಿನ ಮೇಣದಬತ್ತಿ ಹೊತ್ತಿಸಿ ಓದುತ್ತಿದ್ದೇನೆ’ ಎಂದು ಉತ್ತರ ನೀಡುತ್ತಾರೆ. ಸ್ವಂತಕ್ಕಾಗಿ ಸರ್ಕಾರಿ ಸೌಲಭ್ಯಗಳನ್ನು, ಸರ್ಕಾರಿ ವಾಹನಗಳನ್ನು ಬಳಸಿಕೊಳ್ಳುವ ಈ ಕಾಲಘಟ್ಟದಲ್ಲಿ ಈ ಮೇಲ್ಪಂಕ್ತಿಯನ್ನು ಸ್ಮರಿಸಿಕೊಳ್ಳಬೇಕು.
ಒಮ್ಮೆ ಮನೆಯಲ್ಲಿ ಸಣ್ಣಮಗು ವಿಶ್ವೇಶ್ವರಯ್ಯನವರ ಬಳಿ ಇದ್ದ ಪೆನ್ಸಿಲಿಗಾಗಿ ಹಠ ಮಾಡುತ್ತದೆ. ‘ಮಗು ಈ ಪೆನ್ಸಿಲ್ ಸರ್ಕಾರದ್ದು, ನೀನು ಬಳಸಬಾರದು, ನಿನಗಾಗಿ ನಾಳೆ ಹೊಸ ಪೆನ್ಸಿಲ್ ಕೊಂಡು ತರುತ್ತೇನೆ’ ಎಂದು ಹೇಳಿ ಅದರಂತೆ ಮರುದಿನ ಸ್ವಂತ ಹಣದಲ್ಲಿ ಪೆನ್ಸಿಲ್ ತಂದುಕೊಟ್ಟರು.
ಪುಣೆಯ ಇಂಜನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿದ ವಿಶ್ವೇಶ್ವರಯ್ಯನವರು ಪುಣೆಯ ಡೆಕ್ಕನ್ ಕ್ಲಬ್ ಕಾರ್ಯದರ್ಶಿ ಕೂಡಾ ಆಗಿದ್ದರು. ಆ ಕಾಲದ ಮಹಾನ್ ವ್ಯಕ್ತಿಗಳಾದ ಆರ್.ಜಿ.ಭಂಡಾರಕರ, ಗೋಪಾಲಕೃಷ್ಣ ಗೋಖಲೆ, ಮಹಾದೇವ ರಾನಡೆ ಇನ್ನಿತರರು ಆ ಕ್ಲಬ್ಬಿನ ಸದಸ್ಯರಾಗಿದ್ದರು. ಅವರೆಲ್ಲರ ಒಡನಾಟ ವಿಶ್ವೇಶ್ವರಯ್ಯನವರಿಗೆ ಲಭಿಸಿತು.
ಮುಂಬೈನ ಲೋಕೋಪಯೋಗಿ ಇಲಾಖೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು ಜೀವನದುದ್ದಕ್ಕೂ ಸಮಯಪಾಲನೆ, ಶಿಸ್ತು, ಕೆಲಸದಿಂದಲೇ ಪರಿಚಿತರಾದವರು. ಅವರು ಭಾರತದ ದಖನ್ ಪ್ರಸ್ಥಭೂಮಿಯಲ್ಲಿ ನೀರಾವರಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ರೂಪಿಸಿದ್ದರು. ದೂರದ ಏಡನ್ ನಗರದಲ್ಲಿ ಅವರು ರೂಪಿಸಿದ ಒಳಚರಂಡಿ ವ್ಯವಸ್ಥೆ ಅಲ್ಲಿನ ಮೂಲಭೂತ ಸೌಕರ್ಯಗಳ ಸಮಸ್ಯೆಗಳಿಗೆ ಪರಿಹಾರವಾಗಿತ್ತು.
ಇತ್ತೀಚೆಗೆ ಭಾರಿ ಮಳೆಗೆ ಬೆಂಗಳೂರಿನ ಹಲವು ಪ್ರದೇಶಗಳು ಅಕ್ಷರಶಃ ಮುಳುಗಡೆಯಾಗಿದ್ದವು. ಪಕ್ಕದ ರಾಜ್ಯದ ಭಾಗ್ಯನಗರ ನೆರೆ ಮತ್ತು ಪ್ರವಾಹದಿಂದ ಪೀಡಿತವಾಗದಂತೆ ನೂರು ವರ್ಷಗಳ ಹಿಂದೆಯೆ ಸರ್ ಎಂವಿ ಯೋಜನೆ ರೂಪಿಸಿಕೊಟ್ಟಿದರು. ಮೈಸೂರು ನಗರದ ನೀಲಿನಕ್ಷೆ ಹಾಕಿಕೊಟ್ಟವರೇ ಅವರು. 1908 ರಲ್ಲಿ ಸರ್ಕಾರಿ ವೃತ್ತಿಯಿಂದ ನಿವೃತ್ತಿಯಾದರೂ ಕ್ರಿಯಾಶೀಲತೆಯನ್ನು ಬದಿಗಿಟ್ಟವರಲ್ಲ. ನಿವೃತ್ತಿ ಆದ ನಂತರ ಕೈಗಾರಿಕೆ ಕುರಿತಾಗಿ ಹೆಚ್ಚಿನ ಅಧ್ಯಯನ ಮಾಡಲು ವಿದೇಶಕ್ಕೆ ಹೋದರು. ಕೈಗಾರಿಕೆಯಿಂದ ಉತ್ಪಾದನೆ ಹೆಚ್ಚಳವಾಗಿ, ಇದರಿಂದ ಆರ್ಥಿಕತೆ ಚೇತರಿಕೆಯಾಗಿ ಭಾರತ ಅಭಿವೃದ್ಧಿ ಹೊಂದಲಿ ಎಂಬ ಆಶಯದಿಂದ ಅವರು ಕ್ರಿಯಾಶೀಲರಾಗಿ ಕೆಲಸಮಾಡಿದರು. ಕೈಗಾರಿಕೆ ಕುರಿತಾದ ಅಧ್ಯಯನ ಪ್ರವಾಸ ಮುಗಿಸಿ ಬಂದವರು ಸೀದಾ ಹೋಗಿದ್ದು ಭಾಗ್ಯನಗರದ ನವಾಬನ ಸಹಾಯಕ್ಕೆ. ಕೆಲಸ, ಸಹಾಯ ಅಂತ ಯಾರೇ ಕೇಳಿಕೊಂಡು ಬಂದರೂ ಇಲ್ಲ ಎಂದವರಲ್ಲ. ಭಾಗ್ಯನಗರ ಪ್ರವಾಹಪೀಡಿತವಾಗದಂತೆ ನಗರದ ನಕ್ಷೆ ಮಾಡಿಕೊಟ್ಟ ಮೇಲೆ ಸರ್ ಎಂವಿಯವರನ್ನು ನಾಲ್ಕನೇ ಕೃಷ್ಣರಾಜ ಒಡೆಯರ್ ಅವರು ಮೈಸೂರು ರಾಜ್ಯದ ಮುಖ್ಯ ಇಂಜಿನಿಯರ್ ಆಗಿ ನೇಮಕ ಮಾಡುತ್ತಾರೆ. ತಮ್ಮ ಸೇವಾ ಅವಧಿಯಲ್ಲಿ ಅಭಿವೃದ್ಧಿಗೆ ಪೂರಕವಾದ ಅನೇಕ ಕೆಲಸಗಳನ್ನು ಸರ್ ಎಂವಿ ಪೂರ್ಣಗೊಳಿಸುತ್ತಾರೆ. ಅದಾದ ಮೇಲೆ 1912 ರಲ್ಲಿ ಮೈಸೂರು ರಾಜ್ಯದ ದಿವಾನರಾದ ಅವರು ರಾಜ್ಯದ ಹಿತಕ್ಕಾಗಿ, ಅಭಿವೃದ್ಧಿಗಾಗಿ ಅರ್ಪಿಸಿಕೊಂಡಿದ್ದರು ಎಂದರೆ ಅತಿಶಯೋಕ್ತಿಯಲ್ಲ. ಮೈಸೂರು ರಾಜ್ಯದ ದಿವಾನರಾಗಿ ಆರು ವರ್ಷ ಸೇವೆ ಸಲ್ಲಿಸಿದರು.
ಒಬ್ಬ ಇಂಜಿನಿಯರ್ ಆಗಿ ಅವರು ಕಟ್ಟಡ, ನಗರ, ನೀರಾವರಿ ಯೋಜನೆಗಳನ್ನು ಮಾತ್ರ ರೂಪಿಸಲಿಲ್ಲ; ದೇಶ ಮತ್ತು ಕರ್ನಾಟಕದ ಭವಿಷ್ಯದ ಬಗ್ಗೆ ಕಾಳಜಿ ಇಟ್ಟುಕೊಂಡು ಅನೇಕ ಕಾರ್ಯಗಳನ್ನು ಕೈಗೆತ್ತಿಕೊಂಡರು. 1913 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪಿಸಿದರು. ಆ ಮೂಲಕ ಆರ್ಥಿಕತೆಯ ಕುರಿತಾದ ಜಾಗೃತಿ ಮೂಡಿಸುವಲ್ಲಿ, ಸರ್ಕಾರ ಮತ್ತು ಬ್ಯಾಂಕಿಂಗ್ ಹಾಗೂ ಸಾರ್ವಜನಿಕ ವಲಯಗಳನ್ನು ಜೋಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕೃಷಿ ನೀರಾವರಿಗಾಗಿ ಮತ್ತು ಮೈಸೂರು ಹಾಗೂ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರವಾಗುವ ಕೃಷ್ಣರಾಜ ಸಾಗರ ಅಣೆಕಟ್ಟನ್ನು ಕಟ್ಟಿದವರು ಸರ್ ಎಂವಿ. ಭದ್ರಾವತಿ ಉಕ್ಕು ಕಾರ್ಖಾನೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ಬೆಂಗಳೂರಿನಲ್ಲಿ ಭಾರತದ ಮೊದಲ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಖಾಸಗಿ ರೈಲು ಮಾರ್ಗ, ಮೈಸೂರು ಸೋಪ್ ಫ್ಯಾಕ್ಟರಿ, ಮೈಸೂರು ವಾಣಿಜ್ಯೋದ್ಯಮ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಹೀಗೆ ಹಲವಾರು ಕೊಡುಗೆಗಳನ್ನು ಅವರು ಸಮಾಜಕ್ಕೆ ನೀಡಿದರು.
ಸರ್ ಎಂವಿ ಎಲ್ಲರೊಂದಿಗೆ ಒಂದೇ ಭಾವದೊಂದಿಗೆ ಬೆರೆಯುತ್ತಿದ್ದರು. ಅವರು ಹೇಳುವಂತೆ- ಕಸ ಹೊಡೆಯುವ ಕೆಲಸಕ್ಕೂ ಅದರದ್ದೇ ಆದ ಗೌರವ ಇದೆ. ಕಲೆಕ್ಟರ್ ಅಥವಾ ಇಂಜಿನಿಯರ್ ಕೆಲಸಕ್ಕೂ ಅದರದ್ದೆ ಆದ ಗೌರವವಿದೆ. ಕೆಲಸ ಯಾವುದಾದರೂ ಶ್ರದ್ಧೆಯಿಂದ ಮಾಡಬೇಕು ಹೊರತು ಕೀಳರಿಮೆ ಸಲ್ಲ. ಇದು ಅವರು ಹಾಕಿಕೊಟ್ಟ ಮಾರ್ಗ. ನಾವು ಕೂಡಾ ಈ ಆದರ್ಶವನ್ನು ಮೈಗೂಡಿಸಿಕೊಳ್ಳುವುದೇ ಸರ್ ಎಂವಿಯವರಿಗೆ ಸಲ್ಲಿಸಬಹುದಾದ ನಿಜಗೌರವ.
(ಲೇಖಕರು ರಾಜ್ಯ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − seventeen =
Remember me
