|ರಾಘವ ಶರ್ಮ ನಿಡ್ಲೆಲಖೀಂಪುರ (ಉತ್ತರ ಪ್ರದೇಶ)
ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿ ಗಡಿಯಲ್ಲಿ ರೈತ ಪ್ರತಿಭಟನೆಗಳ ಮಧ್ಯೆ ಕಳೆದ ಅಕ್ಟೋಬರ್​ನಲ್ಲಿ ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ರೈತರ ಮೇಲೆ ಕಾರು ಹರಿದು 5 ಮಂದಿ ಸ್ಥಳದಲ್ಲೇ ಮೃತಪಟ್ಟ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿ ಪ್ರಮುಖ ವಿಪಕ್ಷಗಳು ಸಂಸತ್ತಿನ ಒಳ-ಹೊರಗೆ ಪ್ರತಿಭಟನೆ ನಡೆಸಿದ್ದವು. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ವಿಪಕ್ಷಗಳು ಬಿಜೆಪಿ ವಿರುದ್ಧ ಈ ಘಟನೆಯನ್ನೇ ಪ್ರಮುಖ ಅಸ್ತ್ರವನ್ನಾಗಿ ಪ್ರಯೋಗಿಸಿ, ರೈತ ಮತಗಳನ್ನು ಸೆಳೆಯಲು ಯತ್ನಿಸುತ್ತಿವೆ.
ಘಟನೆ ನಡೆದದ್ದು ಬನ್ವೀರ್​ಪುರ ಹಳ್ಳಿಯಲ್ಲಿ. ಇದು ಲಖೀಂಪುರ ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿಮೀ ದೂರದಲ್ಲಿರುವ ನಿಘಾಸನ್ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿದೆ. 2017ರ ವಿಧಾನಸಭೆ ಚುನಾವಣೆ, 2019ರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೇ ಇಲ್ಲಿ ಗೆದ್ದಿದ್ದರು. ಹೀಗಾಗಿ, ಹಾಲಿ ಶಾಸಕ ಶಶಾಂಕ್ ಶರ್ಮರಿಗೇ ಬಿಜೆಪಿ ಟಿಕೆಟ್ ನೀಡಿದೆ. ಸಮಾಜವಾದಿ ಪಕ್ಷ ಆರ್.ಎಸ್. ಖುಶ್ವಾಹ ಎಂಬವರನ್ನು ಕಣಕ್ಕಿಳಿಸಿದೆ. ಹಿಂದೆ ಬಹುಜನ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಖುಶ್ವಾಹ 2002ರ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2017ರಲ್ಲಿ ಬಿಜೆಪಿ ಜಿಲ್ಲೆಯ 8 ಕ್ಷೇತ್ರಗಳನ್ನೂ ತನ್ನದಾಗಿಸಿಕೊಂಡಿತ್ತು. ಆದರೆ, ಈ ಬಾರಿ ಬಿಜೆಪಿಗೆ ಕ್ಲೀನ್​ಸ್ವೀಪ್ ಕಷ್ಟಸಾಧ್ಯ ಎಂದು ವಿಶ್ಲೇಷಿಸಲಾಗುತ್ತಿದೆ.
ನಿಘಾಸನ್ ಕ್ಷೇತ್ರ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೇನಿ ಭದ್ರಕೋಟೆ. ಆದರೆ, ರೈತ ಹಿಂಸಾಚಾರ ಪ್ರಕರಣದಲ್ಲಿ ಅಜಯ್ ಮಿಶ್ರಾ ಮತ್ತು ಪುತ್ರ ಆಶಿಶ್ ಮಿಶ್ರಾ ಕೈವಾಡದ ಆರೋಪದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷ ಕ್ಷೇತ್ರದಲ್ಲಿ ಚಿಗಿತುಕೊಳ್ಳಲು ಯತ್ನಿಸಿದೆ. ನಿಘಾಸನ್​ನಲ್ಲಿ ಶೇ.25ಕ್ಕಿಂತಲೂ ಹೆಚ್ಚು ಸಿಖ್ಖರಿದ್ದಾರೆ. ಅ.3ರ ರೈತ ಹಿಂಸಾಚಾರದಲ್ಲಿ ಮೃತಪಟ್ಟ ರೈತರು ಸಿಖ್ಖರಾಗಿದ್ದು, ಬಿಜೆಪಿ ಮೇಲೆ ಸಿಖ್ಖರಿಗೆ ಭಾರೀ ಆಕ್ರೋಶವಿದೆ. ಹೀಗಾಗಿ, ಬಹುಪಾಲು ಸಿಖ್ ಮತ ಸಮಾಜವಾದಿ ಪಕ್ಷ ಪಾಲಾಗುವ ಲಕ್ಷಣಗಳಿವೆ. ‘ಸಿಖ್ಖರು ಈ ಬಾರಿ ನಮ್ಮನ್ನು ಬೆಂಬಲಿಸಲಾರರು. ಆದರೆ, ಹಿಂದುಳಿದ ವರ್ಗ, ದಲಿತ ಮತಗಳು ಬಿಜೆಪಿ ಪರ ಬಿಗಿಯಾಗಿವೆ. ರೈತ ಹಿಂಸಾಚಾರದ ವೇಳೆ ಅಜಯ್ ಮಿಶ್ರಾ ವಾಹನದಲ್ಲಿ ಇರಲಿಲ್ಲ. ಇದೆಲ್ಲವೂ ಸಮಾಜವಾದಿ ಪಕ್ಷದ ಕಟ್ಟುಕಥೆ’ ಎನ್ನುತ್ತಾರೆ ನಿಘಾಸನ್ ಬಿಜೆಪಿ ಕಚೇರಿಯಲ್ಲಿ ಸಿಕ್ಕ ಕಾರ್ಯಕರ್ತ ಮದನ್ ಕಿಶೋರ್.
ಕೇಂದ್ರದ ಮೋದಿ ಮತ್ತು ರಾಜ್ಯದ ಯೋಗಿ ಸರ್ಕಾರ ಹಲವು ಒಳ್ಳೆಯ ಕೆಲಸಗಳನ್ನು ಮಾಡಿವೆ. ಕಾನೂನು ಸುವ್ಯವಸ್ಥೆ ಕಾಪಾಡಿ ಗೂಂಡಾಗಳನ್ನು ಓಡಿಸಿದ ಯೋಗಿ ಸರ್ಕಾರವನ್ನು ಮೆಚ್ಚಬೇಕಾದ್ದೆ. ಕರೊನಾ ಬಿಕ್ಕಟ್ಟಿನ ಮಧ್ಯೆ ಇಲ್ಲಿ ಎಲ್ಲರಿಗೂ ರೇಷನ್ ಸಿಕ್ಕಿದೆ. ಆದರೆ, ಸ್ಥಳೀಯ ಮಟ್ಟದಲ್ಲಿ ಹಿಂದು-ಮುಸ್ಲಿಂ ಎಂಬ ಚರ್ಚೆಗಳು ಬೇಸರ ತರುತ್ತವೆ. ಸಮಾಜವಾದಿ ಪಕ್ಷವನ್ನೇ ಮೊದಲಿನಿಂದಲೂ ಬೆಂಬಲಿಸುತ್ತಿದ್ದೇನೆ, ಈ ಬಾರಿಯೂ ಸೈಕಲ್​ಗೆ ಮತ. ಬಿಜೆಪಿ ಜತೆಗೆ ನಮ್ಮ ಮನಸ್ಸು, ಹೃದಯ ಬೆರೆಯುವುದಿಲ್ಲ.
|ಮಹಮ್ಮನ್ ಕಲ್ಲನ್ ಖಾನ್ಸೆಮ್ರಿಬಾನ್ ಹಳ್ಳಿ, ಧೌರಾಹ್ರಾ ವಿಧಾನಸಭೆ, ಲಖೀಂಪುರ ಜಿಲ್ಲೆ
ರೈತ ಹಿಂಸಾಚಾರ ನಡೆದ ಬನ್ವೀರ್​ಪುರ ಗ್ರಾಮದಿಂದ 2-3 ಕಿಮೀ ದೂರದಲ್ಲೇ ಕೇಂದ್ರ ಸಚಿವ ಅಜಯ್ ಮಿಶ್ರಾ ಟೇನಿ ನಿವಾಸವಿದೆ. ಮಿಶ್ರಾ ಪ್ರತಿವರ್ಷ ಅಕ್ಟೋಬರ್ 2ರಂದು ನಿವಾಸದ ಪಕ್ಕದಲ್ಲಿ ದಂಗಲ್ (ಕುಸ್ತಿ ಪಂದ್ಯಾವಳಿ) ಆಯೋಜಿಸುತ್ತಾರೆ. ಕಳೆದ ವರ್ಷ ಅ.3ರಂದು ಇದನ್ನು ಆಯೋಜಿಸಲಾಗಿತ್ತು ಮತ್ತು ಉಪ ಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆದರೆ, ಕೇಶವ್ ಪ್ರಸಾದರಿದ್ದ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದಂತೆಯೇ ಸ್ಥಳಕ್ಕೆ ಬಂದು ಕಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ರೈತರು ಅವರನ್ನು ಹಳ್ಳಿಗೆ ಬರದಂತೆ ತಡೆಯುವುದರಲ್ಲೂ ಯಶಸ್ವಿಯಾಗಿದ್ದರು. ‘ರೈತರು ಪ್ರತಿಭಟನೆ ಮುಗಿಸಿ ಬನ್ವೀರ್​ಪುರ ರಸ್ತೆಯಲ್ಲಿ ವಾಪಸಾಗುತ್ತಿದ್ದ ವೇಳೆ, ವೇಗದಲ್ಲಿ ಬಂದ ಕೇಂದ್ರ ಸಚಿವರಿಗೆ ಸಂಬಂಧಿಸಿದ ವಾಹನಗಳು ರೈತರ ಮೇಲೆ ಹರಿದಿವೆ. ಈ ಸಂದರ್ಭದಲ್ಲಿ ವಿಡಿಯೋ ಶೂಟ್ ಮಾಡುತ್ತಿದ್ದ ಸ್ಥಳೀಯ ಪತ್ರಕರ್ತ ರಮಣ್ ಕಶ್ಯಪ್ ಮೇಲೂ ವಾಹನ ಓಡಿದ್ದರಿಂದ ಅವರೂ ಸ್ಥಳದಲ್ಲಿ ಮೃತಪಟ್ಟಿದ್ದರು. ಆದರೆ, ಕೆಲ ಗಂಟೆಗಳ ಬಳಿಕ ಘಟನಾ ಸ್ಥಳದಿಂದ ಕೊಂಚ ದೂರದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು’ ಎಂದು ವಿಜಯವಾಣಿಗೆ ಮಾಹಿತಿ ನೀಡಿದರು ನಿಘಾಸನ್ ನಿವಾಸಿ ದಲ್ವೀರ್ ಸಿಂಗ್. ಹಿಂಸಾಚಾರದಲ್ಲಿ ಮೃತಪಟ್ಟ ನಾಲ್ವರು ರೈತರ ಮೃತದೇಹಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ, ರಮಣ್ ಮೃತದೇಹ ಸ್ಥಳದಲ್ಲಿರಲಿಲ್ಲ. ಅ.3ರ ಮಧ್ಯರಾತ್ರಿ ರಮಣ್ ಮೃತದೇಹ ಕೊಂಚ ದೂರದಲ್ಲಿ ಪತ್ತೆಯಾದ ಬಗ್ಗೆ ಹೆತ್ತವರಿಗೆ ಮಾಹಿತಿ ನೀಡಲಾಯ್ತು.
ನಿಘಾಸನ್ ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ಮಕ್ಕಳಿಗೆ ಕಂಪ್ಯೂಟರ್ ಪಾಠ ಮಾಡುತ್ತಿದ್ದ ರಮಣ್ ಕಶ್ಯಪ್ ‘ಸಾಧನಾ’ ಸುದ್ದಿವಾಹಿನಿ ವರದಿಗಾರ ಕೂಡ ಆಗಿದ್ದರು. ಅ.3ರಂದೂ ರೈತ ಪ್ರತಿಭಟನೆ ವರದಿಗಾರಿಕೆಗೆ ತೆರಳಿದ್ದರು. ‘ರೈತರ ಮೇಲೆ ಕಾರು ಹರಿದ ವೇಳೆ ಅಜಯ್ ಮಿಶ್ರಾ ಪುತ್ರ ಆಶೀಷ್ ಮಿಶ್ರಾ ಕಾರಿನಲ್ಲಿದ್ದುದನ್ನು ನೋಡಿದ ಹಲವು ಪ್ರತ್ಯಕ್ಷದರ್ಶಿಗಳಿದ್ದಾರೆ. ಬಿಜೆಪಿಯವರು ಇದನ್ನು ತಿರಸ್ಕರಿಸಬಹುದು. ಆದರೆ, ಸತ್ಯವನ್ನು ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲ’ ಎಂದು ರಮಣ್ ತಂದೆ ರಾಮ್ ದುಲಾರೆ ಕಶ್ಯಪ್ ಹೇಳಿದರು. ‘ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕಾಲವಾದ ನಂತರ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಯನ್ನೇ ಬೆಂಬಲಿಸಿದೆ. ಆದರೆ, ಈ ಬಾರಿ ಸಮಾಜವಾದಿಗೇ ಮತ ಹಾಕುತ್ತೇನೆ. ಅಜಯ್ ಮಿಶ್ರಾರಿಂದ ರಾಜೀನಾಮೆ ಪಡೆದುಕೊಳ್ಳದ ದಿಲ್ಲಿ ನಾಯಕರ ಹೃದಯ ಇಷ್ಟೊಂದು ಕಠೋರ ಎಂದು ಗೊತ್ತಿರಲಿಲ್ಲ’ ಎಂದು ಆಕ್ರೋಶ ಹೊರಹಾಕಿದರು.
ಯೋಗಿ ಆದಿತ್ಯನಾಥ ಸರ್ಕಾರದಲ್ಲಿ ಠಾಕೂರ್ ಸಮುದಾಯದವರದ್ದೇ ಹೆಚ್ಚು ಪ್ರಾಬಲ್ಯ ಎನ್ನುವುದು ಬ್ರಾಹ್ಮಣ ಮತವರ್ಗ ಹಾಗೂ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿತ್ತು. ಬ್ರಾಹ್ಮಣರನ್ನು ಓಲೈಸಲೆಂದೇ ಕಾಂಗ್ರೆಸ್​ನ ಜಿತಿನ್ ಪ್ರಸಾದ್​ರನ್ನೂ ಪಕ್ಷಕ್ಕೆ ಸೇರಿಸಲಾಗಿತ್ತು. ಈ ಮಧ್ಯೆ, ಬ್ರಾಹ್ಮಣ ಸಮಾಜದ ಅಜಯ್ ಮಿಶ್ರಾರಿಂದ ರಾಜೀನಾಮೆ ಪಡೆದುಕೊಂಡರೆ ಸಮುದಾಯ ಸಿಟ್ಟಾಗಬಹುದು ಎಂದೇ ರಾಜೀನಾಮೆ ಪಡೆಯಲಿಲ್ಲ ಎನ್ನಲಾಗಿದೆ. ಆದರೆ, ಮಿಶ್ರಾ ರಾಜೀನಾಮೆ ಪಡೆಯುವುದೇ ಸೂಕ್ತ ನಿರ್ಧಾರವಾಗುತ್ತಿತ್ತು ಎಂದು ರಾಜ್ಯದ ಬೇರೆಡೆ ವಿಜಯವಾಣಿಗೆ ಸಿಕ್ಕ ಸ್ಥಳೀಯ ಬಿಜೆಪಿ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಅಜಯ್ ಮಿಶ್ರಾ ಜಿಲ್ಲೆಯ ಬೇರೆಡೆ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರೂ ನಿಘಾಸನ್ ಕ್ಷೇತ್ರದಲ್ಲಿ ಅಭ್ಯರ್ಥಿ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಎಂದೇ ಇಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ.
ರೈತ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಸರ್ಕಾರ 45 ಲಕ್ಷ ರೂ. ಪರಿಹಾರ ನೀಡಿದೆ. ‘ಕುಟುಂಬದ ಓರ್ವ ಸದಸ್ಯನಿಗೆ ಸರ್ಕಾರಿ ಕೆಲಸ ಕೊಡುತ್ತೇನೆ ಎಂದ ಸಕ್ಕರೆ ಕಾರ್ಖಾನೆಯಲ್ಲಿ ನೌಕರಿ ನೀಡಲು ಮುಂದಾಯಿತು. ಆದರೆ, ಅರೆಸರ್ಕಾರಿ ನೌಕರಿ ಬೇಡ. ಭದ್ರತೆಯಿರುವ ಸರ್ಕಾರಿ ಉದ್ಯೋಗವಿದ್ದರೆ ನೀಡಿ ಎಂದು ತಿರಸ್ಕರಿಸಿದ್ದೇವೆ’ ಎಂದರು ರಾಮ್ ದುಲಾರೆ ಕಶ್ಯಪ್. ರೈತ ಹಿಂಸಾಚಾರದ ಏಕೈಕ ಕಾರಣಕ್ಕಾಗಿ ನಾವು ಬಿಜೆಪಿ ವಿರೋಧಿಸಲು ಸಾಧ್ಯವಿಲ್ಲ ಎನ್ನುವವರೂ ಅನೇಕರಿದ್ದಾರೆ. ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದೆ, ಬಡವರಿಗೆ ಸಕಾಲಕ್ಕೆ ನೆರವು ಸಿಗುತ್ತಿದೆ. ನೇರವಾಗಿ ಬ್ಯಾಂಕ್​ಗೆ ಹಣ ವರ್ಗಾವಣೆಯಾಗುತ್ತಿದೆ. ಹಿಂದೆಲ್ಲಾ ಇದನ್ನು ಊಹಿಸಲೇ ಸಾಧ್ಯವಿರಲಿಲ್ಲ’ ಎನ್ನುತ್ತಾರೆ ರಮಣ್ ಕಶ್ಯಪ್ ನಿವಾಸದ ಪಕ್ಕದ ರಸ್ತೆಯಲ್ಲಿರುವ ಟ್ರಾಕ್ಟರ್ ಅಂಗಡಿ ಮಾಲೀಕ ಸುರೇಶ್ ಕುಮಾರ್. ಲಖೀಂಪುರ ಜಿಲ್ಲೆಯಾದ್ಯಂತ ಗೋಧಿ, ಕಬ್ಬು, ಸಾಸಿವೆ ಇತ್ಯಾದಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಹಲವು ಸಕ್ಕರೆ ಕಾರ್ಖಾನೆಗಳೂ ಇಲ್ಲಿವೆ. ಯೋಗಿ ಸರ್ಕಾರ ಕ್ವಿಂಟಾಲ್ ಕಬ್ಬಿಗೆ 350 ರೂ. ನಿಗದಿ ಮಾಡಿರುವುದು ಅನೇಕರಿಗೆ ಖುಷಿ ತಂದಿದೆ. ರೈತ ಹಿಂಸಾಚಾರ ಕೆಲವು ಕೃಷಿಕರಿಗೆ ಬೇಸರ ತರಿಸಿದ್ದರೂ, ಬಿಜೆಪಿ ಕಾರ್ಯಕರ್ತರ ಕೊಲೆಗಳ ಬಗ್ಗೆಯೂ ಹಿಂದುಗಳಲ್ಲಿ ಅಸಮಾಧಾನವಿದೆ. ಹೀಗಾಗಿ, ರೈತ ಹಿಂಸಾಚಾರ ಘಟನೆ ಎಷ್ಟರ ಮಟ್ಟಿಗೆ ಸಮಾಜವಾದಿ ಪಕ್ಷದ ಮತಗಳಾಗಿ ಪರಿವರ್ತನೆಯಾಗಲಿದೆ ಎನ್ನುವುದು ಕುತೂಹಲದ ಪ್ರಶ್ನೆ.
ಆಶಿಶ್ ಮಿಶ್ರಾ ಜಾಮೀನಿಗೆ ಸುಪ್ರೀಂನಲ್ಲಿ ಆಕ್ಷೇಪ:ಲಖಿಂಪುರ ಖೇರಿ ಪ್ರಕರಣದ ಆರೋಪಿ, ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸಂತ್ರಸ್ತ ರೈತ ಕುಟುಂಬಗಳು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿವೆ. ಮಿಶ್ರಾ ವಿರುದ್ಧ ಸಾಕಷ್ಟು ದೃಢವಾದ ಪುರಾವೆಗಳು ಇದ್ದರೂ ಹೈ ಕೋರ್ಟ್ ಜಾಮೀನು ನೀಡಿದೆ ಎಂದು ವಕೀಲ ಪ್ರಶಾಂತ್ ಭೂಷಣ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ಸಂತ್ರಸ್ತರು ವಾದಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − ten =
Remember me
