ಬಾಹ್ಯಾಕಾಶ ವಲಯದಲ್ಲಿ ಜಾಗತಿಕ ಸೂಪರ್ ಪವರ್ ಆಗುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರವು ಕೆಲ ದಿನಗಳ ಹಿಂದೆ ಭಾರತೀಯ ಬಾಹ್ಯಾಕಾಶ ನೀತಿ 2023 ಘೋಷಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಕಾರ್ಯಚಟುವಟಿಕೆಗಳ ಒಂದಿಷ್ಟು ಜವಾಬ್ದಾರಿಯನ್ನು ಇತರೆ ಸರ್ಕಾರಿ ಸಂಸ್ಥೆಗಳಿಗೆ ಹಂಚಲು ಹಾಗೂ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಒತ್ತು ನೀಡಲಾಗಿದೆ.
2020ರಲ್ಲಿ ಭಾರತ ಸರ್ಕಾರವು ಬಾಹ್ಯಾಕಾಶ ಕ್ಷೇತ್ರವನ್ನು ಉದಾರಗೊಳಿಸಿ ದೇಶದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಖಾಸಗಿ ವಲಯದ ಸಹಭಾಗಿತ್ವವನ್ನು ಸಕ್ರಿಯಗೊಳಿಸಿತು. ಈ ಮೊದಲು ಬಾಹ್ಯಾಕಾಶ ಕ್ಷೇತ್ರವು ಇಸ್ರೋಗೆ ಸೀಮಿತವಾಗಿತ್ತು. ಈ ಸುಧಾರಣೆಗಳ ಕಾರಣದಿಂದಾಗಿ 100ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಬಾಹ್ಯಾಕಾಶ ವಲಯವನ್ನು ಪ್ರವೇಶಿಸಿವೆ. ಈ ಪೈಕಿ ಸ್ಕೈರೂಟ್ ಏರೋಸ್ಪೇಸ್, ಧ್ರುವ ಸ್ಪೇಸ್, ದಿಗಂತರಾ, ಪಿಕ್ಸೆಲ್ ಮತ್ತು ಬೆಲ್ಲಾಟ್ರಿಕ್ಸ್, ಏರೋಸ್ಪೇಸ್ ಮುಂತಾದವು ಈಗಾಗಲೇ ಯಶಸ್ಸನ್ನು ಕಂಡಿವೆ. 2022ರಲ್ಲಿ, ಈ ಕಂಪನಿಗಳು 100 ಮಿಲಿಯನ್ ಡಾಲರ್​ಗಿಂತ ಹೆಚ್ಚು ಮೊತ್ತದ ಹೂಡಿಕೆ ಸಂಗ್ರಹಿಸಿವೆ. 2021ರವರೆಗೆ ಒಟ್ಟಾರೆಯಾಗಿ ಸಂಗ್ರಹಗೊಂಡ ಹೂಡಿಕೆ ಮೊತ್ತಕ್ಕಿಂತ ಇದು ಅಧಿಕವಾಗಿದೆ.
1963ರ ನವೆಂಬರ್​ನಲ್ಲಿ ಭಾರತವು ತನ್ನ ಮೊದಲ ರಾಕೆಟನ್ನು ಉಡಾಯಿಸಿತು. ತದನಂತರ ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳು ಗಗನಮುಖಿಯಾಗಿ ಬೆಳೆಯುತ್ತಲೇ ಸಾಗಿವೆ. 120ಕ್ಕೂ ಹೆಚ್ಚು ಬಾಹ್ಯಾಕಾಶ ನೌಕಾ ಕಾರ್ಯಾಚರಣೆಗಳು, 90 ಉಪಗ್ರಹ ಉಡಾವಣಾ ಕಾರ್ಯಾಚರಣೆಗಳನ್ನು ಇಸ್ರೋ ಕೈಗೊಂಡಿದೆ. ಅಲ್ಲದೆ, 385 ವಿದೇಶಿ ಉಪಗ್ರಹಗಳನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ. ಇಸ್ರೋದ ಎರಡು ಉಪಗ್ರಹ ಉಡಾವಣೆ ವಾಹನಗಳಾದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್​ಎಲ್​ವಿ) ಮತ್ತು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್​ಎಲ್​ವಿ) ವಿಶ್ವದಲ್ಲಿಯೇ ವಿಶ್ವಾಸಾರ್ಹ ಹಾಗೂ ಕಡಿಮೆ ವೆಚ್ಚದ ಉಡಾವಣಾ ಆಯ್ಕೆಗಳೆಂದು ಪರಿಗಣಿತವಾಗಿವೆ. ಹೀಗಿದ್ದರೂ ಭಾರತದ ಬಾಹ್ಯಾಕಾಶ ಸ್ವತ್ತುಗಳು ಅಮೆರಿಕ ಹಾಗೂ ಚೀನಾಗೆ ಹೋಲಿಸಿದರೆ ನಗಣ್ಯವಾಗಿವೆ. ಅಮೆರಿಕವು 1,650 ಮತ್ತು ಚೀನಾ 450ಕ್ಕೂ ಹೆಚ್ಚು ಉಪಗ್ರಹಗಳನ್ನು ಹೊಂದಿದ್ದರೆ ಭಾರತದ ಸಂಖ್ಯೆ 80 ಮಾತ್ರ. ಅಲ್ಲದೆ, 35.97 ಲಕ್ಷ ಕೋಟಿ ರೂಪಾಯಿ ಮೊತ್ತದ ಬಾಹ್ಯಾಕಾಶ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪಾಲು ಶೇಕಡಾ 2 ಮಾತ್ರ.
ಬದಲಾಗಲಿದೆ ಇಸ್ರೋ ಪಾತ್ರ:ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ತನ್ನ ಪಾಲು ಈಗಿರುವ ಶೇಕಡಾ 2ರಿಂದ ಶೇಕಡಾ 10ಕ್ಕೆ ಬೆಳೆಯಬೇಕೆಂಬುದು ಭಾರತದ ಹೆಬ್ಬಯಕೆ. ಇದನ್ನು ಸಾಧಿಸುವ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳ ಪಾತ್ರವನ್ನು ಇನ್ನಷ್ಟು ವಿಸ್ತರಿಸಲು ಹೊಸ ಬಾಹ್ಯಾಕಾಶ ನೀತಿಯಲ್ಲಿ ಉದ್ದೇಶಿಸಲಾಗಿದೆ. ಇಸ್ರೋದ ಕಾರ್ಯವನ್ನು ಒಂದಿಷ್ಟು ಸಂಗತಿಗಳ ಮೇಲೆ ಕೇಂದ್ರೀಕರಿಸಲು ಹಾಗೂ ವಾಣಿಜ್ಯ ಕಾರ್ಯನಿರ್ವಹಣೆಯ ಜವಾಬ್ದಾರಿಯನ್ನು ಇತರ ಸಂಸ್ಥೆಗಳಿಗೆ ವಹಿಸಲು ಗಮನ ನೀಡಲಾಗಿದೆ.
ನೂತನ ಬಾಹ್ಯಾಕಾಶ ನೀತಿ ಪ್ರಕಾರ ಇಸ್ರೋ ಪಾತ್ರ ಬದಲಾಗಲಿದೆ. ಇನ್ನು ಮುಂದೆ ಇಸ್ರೋ ಬಾಹ್ಯಾಕಾಶದ ಸಂಶೋಧನೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಇದು ಬಾಹ್ಯಾಕಾಶ ಮೂಲಸೌಕರ್ಯ, ಬಾಹ್ಯಾಕಾಶ ಸಾರಿಗೆ, ಸಾಮರ್ಥ್ಯ ನಿರ್ಮಾಣ ಮತ್ತು ಮಾನವ ಬಾಹ್ಯಾಕಾಶ ಯಾನದ ಕ್ಷೇತ್ರಗಳಲ್ಲಿ ಭಾರತದ ಮುನ್ನಡೆ ಕಾಪಾಡಿಕೊಳ್ಳಲು ಹೊಸ ತಂತ್ರಜ್ಞಾನಗಳು ಮತ್ತು ಅಪ್ಲಿಕೇಶನ್​ಗಳ ಅಭಿವೃದ್ಧಿಯತ್ತ ಗಮನ ನೀಡಲಿದೆ. ಇಸ್ರೋ ತನ್ನ ವಾಣಿಜ್ಯ ಕಾರ್ಯಾಚರಣೆಗಳನ್ನು ಸಾರ್ವಜನಿಕ ವಲಯದ ಘಟಕವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್​ಗೆ ವರ್ಗಾಯಿಸಿದೆ.
ಬಾಹ್ಯಾಕಾಶ ಇಲಾಖೆ:ಬಾಹ್ಯಾಕಾಶ ಇಲಾಖೆಯು ಒಟ್ಟಾರೆ ನೀತಿ-ಮಾರ್ಗ ಸೂಚಿಗಳನ್ನು ಒದಗಿಸುತ್ತದೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಕಾರ್ಯಗತಗೊಳಿಸುವ ಹೊಣೆ ಹೊಂದಿರುತ್ತದೆ. ಅಲ್ಲದೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಮಾಲೋಚಿಸಿ ಜಾಗತಿಕ ಬಾಹ್ಯಾಕಾಶ ಆಡಳಿತ ಮತ್ತು ಕಾರ್ಯಕ್ರಮಗಳ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮನ್ವಯವನ್ನು ಸಂಘಟಿಸುತ್ತದೆ. ಬಾಹ್ಯಾಕಾಶ ಚಟುವಟಿಕೆಯಿಂದ ಉದ್ಭವಿಸುವ ವಿವಾದಗಳನ್ನು ಪರಿಹರಿಸಲು ಸೂಕ್ತವಾದ ಕಾರ್ಯವಿಧಾನವನ್ನು ಸಹ ರಚಿಸುತ್ತದೆ.
ಇನ್​ಸ್ಪೇಸ್:ನೂತನ ನೀತಿಯ ಪ್ರಕಾರ ಇನ್​ಸ್ಪೇಸ್ (ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ) ಬಾಹ್ಯಾಕಾಶ ಉಡಾವಣೆಗಳನ್ನು ಕೈಗೊಳ್ಳಲು, ಉಡಾವಣಾ ಪ್ಯಾಡ್​ಗಳನ್ನು ಸ್ಥಾಪಿಸಲು, ಉಪಗ್ರಹ ಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಹಾಗೂ ಹೆಚ್ಚಿನ ರೆಸಲೂಶನ್ ಡೇಟಾವನ್ನು ಪ್ರಸಾರ ಮಾಡಲು ಅನುಮತಿ ನೀಡುವ ಏಕಗವಾಕ್ಷಿ ವ್ಯವಸ್ಥೆಯ ಅಧಿಕೃತ ಸಂಸ್ಥೆಯಾಗಿದೆ. ಇದು ತಂತ್ರಜ್ಞಾನಗಳು, ಉತ್ಪನ್ನಗಳು, ಪ್ರಕ್ರಿಯೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುತ್ತದೆ.
ಖಾಸಗಿ ವಲಯ ಏಕೆ ಮುಖ್ಯ?:ನೂತನ ನೀತಿಯು ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತದ ಪಾಲನ್ನು ಶೇ. 10ಕ್ಕೆ ಹೆಚ್ಚಿಸಲು ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಖಾಸಗಿ ಉದ್ಯಮದ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ. ಖಾಸಗಿ ಕಂಪನಿಗಳಿಗೆ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅವಕಾಶ ನೀಡಿ, ಹೂಡಿಕೆಯನ್ನು ಉತ್ತೇಜಿಸುವ ಮೂಲಕ ಅಮೆರಿಕದಂತಹ ರಾಷ್ಟ್ರಗಳು ಈಗಾಗಲೇ ಲಾಭ ಪಡೆದುಕೊಂಡಿವೆ. ಉದಾಹರಣೆಗೆ, ಅಮೆರಿಕದ ಖಾಸಗಿ ಸಂಸ್ಥೆಯಾದ ಸ್ಪೇಸ್​ಎಕ್ಸ್​ನ ಮರುಬಳಕೆ ಮಾಡಬಹುದಾದ ಫಾಲ್ಕನ್ 9 ರಾಕೆಟ್​ಗಳು ಪ್ರಪಂಚದಾದ್ಯಂತ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಜನಪ್ರಿಯ ಆಯ್ಕೆಯಾಗಿವೆ. ಸರ್ಕಾರಿ ಸಂಸ್ಥೆಗಳಿಗೆ ಹೋಲಿಸಿದರೆ ಖಾಸಗಿ ಕಂಪನಿಗಳು ಹೆಚ್ಚು ತ್ವರಿತವಾಗಿ ಮತ್ತು ನಮ್ಯತೆಯೊಂದಿಗೆ ಕಾರ್ಯನಿರ್ವಹಿಸುತ್ತವೆ. ಬಾಹ್ಯಾಕಾಶ ಉದ್ಯಮದಲ್ಲಿ ಭಾರತವು ಸ್ಪರ್ಧಾತ್ಮಕವಾಗಿ ಉಳಿಯಲು ಖಾಸಗಿ ಕಂಪನಿಗಳು ಸಹಾಯ ಮಾಡಬಹುದೆಂದು ನಿರೀಕ್ಷಿಸಲಾಗಿದೆ.
ಎನ್​ಎಸ್​ಐಎಲ್:ಹೊಸ ನೀತಿಯ ಅನುಸಾರ, ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್​ಎಸ್​ಐಎಲ್) ಬಾಹ್ಯಾಕಾಶ ತಂತ್ರಜ್ಞಾನಗಳು ಮತ್ತು ವೇದಿಕೆಗಳನ್ನು ವಾಣಿಜ್ಯೀಕರಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಹಾಗೆಯೇ, ಖಾಸಗಿ ಅಥವಾ ಸಾರ್ವಜನಿಕ ವಲಯದಿಂದ ಬಾಹ್ಯಾಕಾಶ ಘಟಕಗಳು, ತಂತ್ರಜ್ಞಾನಗಳು, ಪ್ಲಾಟ್​ಫಾಮರ್್​ಗಳು ಮತ್ತು ಇತರ ಸ್ವತ್ತುಗಳನ್ನು ತಯಾರಿಸುವ, ಖರೀದಿಸುವ ಮತ್ತು ಗುತ್ತಿಗೆ ನೀಡುವ ಕಾರ್ಯವನ್ನೂ ನಿಭಾಯಿಸಲಿದೆ.
ಭ್ರಷ್ಟ ಅಧಿಕಾರಿಗೆ 15 ವರ್ಷಗಳ ಬಳಿಕ 2 ವರ್ಷ ಸಜೆ, 60 ಲಕ್ಷ ರೂ. ದಂಡ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + seventeen =
Remember me
