ವಿವಿಧ ವಯೋಮಿತಿ:ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ವಿವಿಧ ಕ್ರೀಡೆಗಳಲ್ಲಿ ಪ್ರತ್ಯೇಕ ವಯೋಮಿತಿಗಳಿವೆ. ಕೆಲ ಕ್ರೀಡೆಗಳಲ್ಲಿ ವಯೋಮಿತಿಯೇ ಇಲ್ಲ. ಜಿಮ್ನಾಸ್ಟಿಕ್ಸ್​ನಲ್ಲಿ 16 ವರ್ಷ ವಯೋಮಿತಿ ಇದ್ದರೆ, ಡೈವಿಂಗ್​ನಲ್ಲಿ 14 ವರ್ಷ. ಬಾಕ್ಸಿಂಗ್​ನಲ್ಲಿ 18 ವರ್ಷ. ಅದೇ ರೀತಿ 40 ವರ್ಷ ಮೇಲ್ಪಟ್ಟ ಬಾಕ್ಸರ್​ಗಳೂ ಸ್ಪರ್ಧಿಸುವಂತಿಲ್ಲ. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗುತ್ತಿರುವ ಸ್ಕೇಟ್​ಬೋರ್ಡ್ ಸ್ಪರ್ಧೆಯಲ್ಲಿ ಬ್ರಿಟನ್​ನ 13 ವರ್ಷದ ಬಾಲಕಿ ಸ್ಕೈ ಬ್ರೌನ್ ಪಾಲ್ಗೊಳ್ಳುತ್ತಿದ್ದರೆ, ಟೇಬಲ್ ಟೆನಿಸ್​ನಲ್ಲಿ ಸಿರಿಯಾದ 12 ವರ್ಷದ ಬಾಲಕಿ ಹೆಂಡ್ ಜಾಜಾ ಆಡಲಿದ್ದಾಳೆ. ಗ್ರೀಕ್​ನ 10 ವರ್ಷದ ಬಾಲಕ ಡಿಮಿಟ್ರೋಯಿಸ್ ಲೌಂಡ್ರಸ್ (1896) ಇದುವರೆಗೆ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ ಮತ್ತು ಪದಕ ಜಯಿಸಿದ ಕಿರಿಯ ಕ್ರೀಡಾಪಟು. ಇಟಲಿಯ ಜಿಮ್ನಾಸ್ಟ್ ಲುಯಿಗಿನಾ ಗಿಯವೊಟ್ಟಿ 1928ರಲ್ಲಿ 11ನೇ ವಯಸ್ಸಿನಲ್ಲಿ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ ಕಿರಿಯ ಮಹಿಳಾ ಕ್ರೀಡಾಪಟು ಎನಿಸಿದ್ದರು.
ಚಿನ್ನದ ಪದಕ ಚಿನ್ನದ್ದಲ್ಲ!:ಪೂರ್ಣವಾಗಿ ಚಿನ್ನದಿಂದಲೇ ತಯಾರಿಸಿದ ಪದಕಗಳನ್ನು 1912ರ ಸ್ವೀಡನ್​ನ ಸ್ಟಾಕ್​ಹೋಮ್ಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಕೊನೆಯ ಬಾರಿಗೆ ನೀಡಲಾಗಿತ್ತು. ಆ ಬಳಿಕ ಬಂಗಾರದ ಪದಕಗಳು ಚಿನ್ನದ ಲೇಪನವನ್ನಷ್ಟೇ (ಕನಿಷ್ಠ 6 ಗ್ರಾಂ) ಹೊಂದಿರುತ್ತವೆ ಮತ್ತು ಶೇಕಡ 93 ಬೆಳ್ಳಿಯೇ ತುಂಬಿರುತ್ತದೆ. ಹೀಗಾಗಿ ಒಲಿಂಪಿಕ್ಸ್​ನ ಚಿನ್ನ ಮತ್ತು ಬೆಳ್ಳಿ ಪದಕಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ! 1896ರ ಮೊದಲ ಒಲಿಂಪಿಕ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಬೆಳ್ಳಿ ಪದಕವನ್ನೇ ನೀಡಲಾಗಿತ್ತು! 2ನೇ ಸ್ಥಾನ ಪಡೆದವರು ಕಂಚಿನ ಪದಕ ಗಳಿಸಿದ್ದರು. 1900ರ ಒಲಿಂಪಿಕ್ಸ್ ವಿಜೇತರಿಗೆ ಪದಕಗಳ ಬದಲಾಗಿ ಟ್ರೋಫಿಗಳನ್ನು ನೀಡಲಾಗಿತ್ತು. 1904ರ ಒಲಿಂಪಿಕ್ಸ್ ನಿಂದ ಚಿನ್ನ, ಬೆಳ್ಳಿ, ಕಂಚಿನ ಪದಕ ನೀಡುವ ಸಂಪ್ರದಾಯ ಹುಟ್ಟಿಕೊಂಡಿತು. ಪ್ರತಿ ಪದಕ ಕನಿಷ್ಠ 3 ಎಂಎಂ ದಪ್ಪ ಮತ್ತು 60 ಎಂಎಂ ಸುತ್ತಳತೆ ಹೊಂದಿರಬೇಕೆಂದು ಐಒಸಿ ನಿಯಮ ರೂಪಿಸಿದೆ.

1936ರಿಂದ ಟಿವಿ ಪ್ರಸಾರ:ಈ ಬಾರಿ ಟೋಕಿಯೊ ಒಲಿಂಪಿಕ್ಸ್ ಬರೀ ಟಿವಿಯಲ್ಲಷ್ಟೇ ಕ್ರೀಡಾಪ್ರೇಮಿಗಳನ್ನು ತಲುಪಲಿದೆ. ಅಲ್ಲದೆ ಕ್ರೀಡಾಕೂಟದ ಶೇಕಡ 80ರಷ್ಟು ಆದಾಯ ಟಿವಿ ಪ್ರಸಾರ ಹಕ್ಕಿನಿಂದಲೇ ಬರಲಿದೆ. 1964ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಿವಿಯಲ್ಲಿ ಪ್ರಸಾರ ಕಂಡಿದ್ದು ಕೂಡ ಟೋಕಿಯೊ ಒಲಿಂಪಿಕ್ಸ್ ಆಗಿತ್ತು ಎಂಬುದು ಗಮನಾರ್ಹ. 1936ರ ಬರ್ಲಿನ್ ಗೇಮ್್ಸ ಆತಿಥೇಯ ಜರ್ಮನಿಯ ಟಿವಿ ಹಾಲ್​ಗಳಲ್ಲಷ್ಟೇ ಪ್ರಸಾರ ಕಂಡಿತ್ತು. 1956ರ ಮೆಲ್ಬೋರ್ನ್ ಒಲಿಂಪಿಕ್ಸ್​ನಲ್ಲಿ ಮೊದಲ ಬಾರಿಗೆ ಟಿವಿ ಪ್ರಸಾರ ಹಕ್ಕು ಮಾರಾಟ ಮಾಡಲಾಗಿತ್ತು.
187 ದಿನದ ಒಲಿಂಪಿಕ್ಸ್!:ಈ ಬಾರಿ ಟೋಕಿಯೊ ಒಲಿಂಪಿಕ್ಸ್ 17 ದಿನಗಳಲ್ಲೇ ಮುಕ್ತಾಯಗೊಳ್ಳಲಿದೆ. 1908ರ ಲಂಡನ್ ಒಲಿಂಪಿಕ್ಸ್ 187 ದಿನ ನಡೆದಿತ್ತು ಎಂದರೆ ನೀವು ನಂಬಲೇಬೇಕು. ಏಪ್ರಿಲ್ 27ರಂದು ಶುರುವಾದ ಒಲಿಂಪಿಕ್ಸ್ ಅಕ್ಟೋಬರ್ 31ರ ತನಕವೂ ನಡೆದಿತ್ತು! 1900ರ ಪ್ಯಾರಿಸ್ ಒಲಿಂಪಿಕ್ಸ್ ಕೂಡ 5 ತಿಂಗಳ ಕಾಲ ನಡೆದಿತ್ತು.
72 ವರ್ಷದ ಹಿರಿಯ ಅಥ್ಲೀಟ್:ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ ಅತ್ಯಂತ ಹಿರಿಯ ಅಥ್ಲೀಟ್ ಸ್ವೀಡನ್​ನ ಶೂಟರ್ ಆಸ್ಕರ್ ಸ್ವಾನ್. 1920ರ ಅಂಟ್ವೆರ್ಪ್ ಗೇಮ್ಸ್​ನ ಶೂಟಿಂಗ್​ನಲ್ಲಿ ಸ್ಪರ್ಧಿಸಿದಾಗ ಅವರಿಗೆ 72 ವರ್ಷವಾಗಿತ್ತು. ಚಿನ್ನವನ್ನೂ ಜಯಿಸಿದ್ದ ಅವರು, ಒಲಿಂಪಿಕ್ಸ್ ಇತಿಹಾಸದಲ್ಲಿ ಪದಕ ಗೆದ್ದ ಹಿರಿಯ ಕ್ರೀಡಾಪಟು ಎನಿಸಿದ್ದಾರೆ. ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ ಹಿರಿಯ ಮಹಿಳಾ ಅಥ್ಲೀಟ್ ಇಂಗ್ಲೆಂಡ್​ನ ಹಿಲ್ಡಾ ಲೊರ್ನಾ ಜಾನ್​ಸ್ಟನ್. 1972ರ ಮ್ಯೂನಿಚ್ ಗೇಮ್ಸ್​ನಲ್ಲಿ ಅವರು 70ರ ವಯಸ್ಸಿನಲ್ಲಿ ಈಕ್ವೆಸ್ಟ್ರಿಯನ್​ನಲ್ಲಿ ಪಾಲ್ಗೊಂಡಿದ್ದರು. ಅಮೆರಿಕದ ಲಿಡ ಪೇಟನ್ ಎಲಿಜಾ 1904ರಲ್ಲಿ 63ನೇ ವಯಸ್ಸಿನಲ್ಲಿ ಆರ್ಚರಿಯಲ್ಲಿ ಚಿನ್ನ ಗೆಲ್ಲುವ ಮೂಲಕ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಹಿರಿಯ ಮಹಿಳಾ ಕ್ರೀಡಾಪಟು ಎನಿಸಿದ್ದರು.
ಮಹಿಳಾ ಸ್ಪರ್ಧಿಗಳಿರಲಿಲ್ಲ:1896ರಲ್ಲಿ ಗ್ರೀಸ್​ನ ಅಥೆನ್ಸ್​ನಲ್ಲಿ ನಡೆದ ಮೊದಲ ಒಲಿಂಪಿಕ್ಸ್​ನಲ್ಲಿ ಮಹಿಳಾ ಸ್ಪರ್ಧಿಗಳಿರಲಿಲ್ಲ. ಎಲ್ಲ 241 ಸ್ಪರ್ಧಿಗಳು ಪುರುಷರೇ ಆಗಿದ್ದರು. 1900ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮೊದಲ ಬಾರಿ 22 ಮಹಿಳೆಯರು ಪಾಲ್ಗೊಂಡಿದ್ದರು. 2012ರ ಲಂಡನ್ ಒಲಿಂಪಿಕ್ಸ್, ಪುರುಷರಂತೆ ಎಲ್ಲ ಸ್ಪರ್ಧೆಗಳಲ್ಲೂ ಮಹಿಳೆಯರು ಪಾಲ್ಗೊಂಡ ಸಮಾನತೆಯ ಮೊದಲ ಒಲಿಂಪಿಕ್ಸ್ ಎನಿಸಿತ್ತು. ಅಲ್ಲದೆ ಎಲ್ಲ ದೇಶಗಳಿಂದ ಮಹಿಳಾ ಸ್ಪರ್ಧಿಗಳೂ ಭಾಗವಹಿಸಿದ್ದರು. ಈ ಬಾರಿ ಟೋಕಿಯೊದಲ್ಲಿ ಉದ್ಘಾಟನಾ ಸಮಾರಂಭದ ಕ್ರೀಡಾಪಟುಗಳ ಪಥಸಂಚಲನದಲ್ಲಿ ಎಲ್ಲ ತಂಡಗಳಿಗೆ ತಲಾ ಇಬ್ಬರು ಧ್ವಜಧಾರಿಗಳನ್ನು ಹೊಂದಲು ಅವಕಾಶ ನೀಡುವ ಮೂಲಕ ಲಿಂಗ ಸಮಾನತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
ಒಲಿಂಪಿಕ್ಸ್ ರಿಂಗ್ ವಿಶೇಷತೆ:5 ಖಂಡಗಳನ್ನು ಪ್ರತಿನಿಧಿಸುವ 5 ರಿಂಗ್​ಗಳುಳ್ಳ ಒಲಿಂಪಿಕ್ಸ್ ಧ್ವಜವನ್ನು 1913ರಲ್ಲಿ ಆಧುನಿಕ ಒಲಿಂಪಿಕ್ಸ್ ಪಿತಾಮಹ ಫ್ರಾನ್ಸ್​ನ ಪಿಯಾರ್ ಡಿ ಕೌಬರ್ಟಿನ್ ವಿನ್ಯಾಸಗೊಳಿಸಿದರು. ಈ ಒಲಿಂಪಿಕ್ಸ್ ಧ್ವಜ 1920ರ ಬೆಲ್ಜಿಯಂನ ಅಂಟ್ವೆರ್ಪ್ ನಲ್ಲಿ ಮೊದಲ ಬಾರಿ ಅಧಿಕೃತವಾಗಿ ಹಾರಾಡಿತು. ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುವ ಪ್ರತಿ ದೇಶದ ರಾಷ್ಟ್ರಧ್ವಜವೂ ಈ ರಿಂಗ್​ಗಳ ಒಂದಾದರೂ ಬಣ್ಣವನ್ನು ಒಳಗೊಂಡಿರುವುದು ವಿಶೇಷವಾಗಿದೆ.
ಗ್ರೀಕ್​ಗೆ ವಿಶೇಷ ಸ್ಥಾನ:ಆರಂಭೋತ್ಸವವನ್ನು ಮೊದಲ ಬಾರಿಗೆ ಅಳವಡಿ ಸಿದ್ದು 1908ರ ಲಂಡನ್ ಒಲಿಂಪಿಕ್ಸ್​ನಲ್ಲಿ. ಒಲಿಂಪಿಕ್ಸ್​ನ ಆರಂಭೋತ್ಸವದಲ್ಲಿ ಕ್ರೀಡಾಪಟುಗಳ ಪಥಸಂಚಲನ ನಡೆಯುವಾಗ ಪ್ರತಿಸಲವೂ ಗ್ರೀಕ್ ತಂಡವೇ ಮುಂಚೂಣಿಯಲ್ಲಿರುತ್ತದೆ. ಚೊಚ್ಚಲ ಒಲಿಂಪಿಕ್ಸ್ ಸಂಘಟಿಸಿದ ಹೆಗ್ಗಳಿಕೆಗಾಗಿ ಗ್ರೀಕ್​ಗೆ ಈ ವಿಶೇಷ ಗೌರವ ಸಲ್ಲುತ್ತದೆ. ಬಳಿಕ ಆತಿಥೇಯ ದೇಶದ ಭಾಷೆಯ ಅಲ್ಪಾಬೆಟಿಕ್ ಅಕ್ಷರಮಾಲೆಯನ್ನು ಅನುಸರಿಸಿ ತಂಡಗಳು ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತವೆ. ಆತಿಥೇಯ ತಂಡ ಯಾವಾಗಲೂ ಕೊನೆಯ ಸ್ಥಾನದಲ್ಲಿರುತ್ತದೆ.
ಡೋಪಿಂಗ್ ಅವಾಂತರ:ಇದೀಗ ಒಲಿಂಪಿಕ್ಸ್ ಗಳಲ್ಲಿ ಉದ್ದೀಪನ ಪರೀಕ್ಷೆ ಕಟ್ಟುನಿಟ್ಟಾಗಿ ನಡೆಯುತ್ತದೆ. ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಮಾದಕ ದ್ರವ್ಯ ಸೇವನೆ ಪ್ರಕರಣ ಬೆಳಕಿಗೆ ಬಂದದ್ದು 1968ರ ಮೆಕ್ಸಿಕೋ ಗೇಮ್ಸ್​ನಲ್ಲಿ. ಬಿಯರ್ ಕುಡಿದಿದ್ದಕ್ಕಾಗಿ ಸ್ವೀಡನ್ ಅಥ್ಲೀಟ್ ಹನ್ಸ್ -ಗುನ್ನಾರ್ ಲಿಲಿಜೆನ್​ವಾಲ್ ನಿಷೇಧ ಶಿಕ್ಷೆ ಅನುಭವಿಸಬೇಕಾಯಿತು! ಇದಕ್ಕಾಗಿ ಅವರು ಗೆದ್ದಿದ್ದ ಕಂಚಿನ ಪದಕವನ್ನೂ ವಾಪಸ್ ಪಡೆಯಲಾಗಿತ್ತು.
ಕೊಮನೆಸಿ ಪರ್ಫೆಕ್ಟ್ 10!:ಒಲಿಂಪಿಕ್ಸ್ ಜಿಮ್ನಾಸ್ಟಿಕ್ಸ್​ನಲ್ಲಿ ಪರ್ಫೆಕ್ಟ್ 10 ಅಂಕ ಪಡೆಯುವುದು ಅಸಾಧ್ಯ ಎಂಬ ಭಾವನೆಯಿಂದ 1976ರ ಮಾಂಟ್ರಿಯಲ್ ಒಲಿಂಪಿಕ್ಸ್ ನಲ್ಲಿ ಮೂರು ಅಂಕಿಗಳ ಸ್ಕೋರ್​ಬೋರ್ಡ್ ಅಳವಡಿಸಲಾಗಿತ್ತು. ಆದರೆ, ಇದೆಲ್ಲವನ್ನೂ ಸುಳ್ಳು ಮಾಡಿದ ರೊಮೇನಿಯಾದ 14 ವರ್ಷದ ಬಾಲಕಿ ನಾಡಿಯಾ ಕೊಮನೆಸಿ ಒಲಿಂಪಿಕ್ಸ್ ಜಿಮ್ನಾಸ್ಟಿಕ್​ನಲ್ಲಿ ಇದುವರೆಗೆ ಪರ್ಫೆಕ್ಟ್ 10 ಅಂಕ ಪಡೆದ ಏಕೈಕ ಜಿಮ್ನಾಸ್ಟ್ ಎನಿಸಿದ್ದಾರೆ. ವಿಶ್ವ ದಾಖಲೆ ಮಾಡಿದ್ದ ಕೊಮನೆಸಿ ಅಂಕವನ್ನು ತೋರಿಸಲು ಅಂದು ಸ್ಕೋರ್​ಬೋರ್ಡ್​ನಲ್ಲಿ ನಾಲ್ಕು ಅಂಕಿಗಳೇ ಇರಲಿಲ್ಲ. ಇದರಿಂದಾಗಿ ಕೊಮನೆಸಿ ಅಂಕವನ್ನು 1.00 ಎಂದು ತೋರಿಸಲಾಗಿತ್ತು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
