ಜನಸಂಖ್ಯೆ ಬದಲಾವಣೆಗೆ ಎರಡು ಪ್ರಾಥಮಿಕ ಕಾರಣಗಳಿವೆ. ಒಂದು ಸಿಡಿಆರ್, ಮತ್ತೊಂದು ಟಿಎಫ್​ಆರ್. ಸಿಡಿಆರ್ ಎಂದರೆ ಕ್ರೂಡ್ ಡೆತ್ ರೇಟ್. ಅಂದರೆ, ಪ್ರತಿ 1,000 ಜನಸಂಖ್ಯೆಗೆ ಪ್ರತಿ ವರ್ಷ ಸಾಯುವ ವ್ಯಕ್ತಿಗಳ ಸಂಖ್ಯೆ. ಇದು 1950ರಲ್ಲಿ ಚೀನಾದಲ್ಲಿ 23.2 ಮತ್ತು ಭಾರತದಲ್ಲಿ 22.2 ಆಗಿತ್ತು. 1974ರಲ್ಲಿ ಚೀನಾದಲ್ಲಿ ಇದು ಒಂದಂಕಿಗೆ (9.5 ಕ್ಕೆ) ಇಳಿಯಿತು. 1994ರಲ್ಲಿ ಭಾರತದಲ್ಲಿ 9.8ಕ್ಕೆ ಕುಸಿಯಿತು. 2020ರಲ್ಲಿ ಉಭಯ ದೇಶಗಳಲ್ಲಿ ಕ್ರಮವಾಗಿ 7.3 ಮತ್ತು 7.4ಕ್ಕೆ ತಲುಪಿತು. ಮರಣ ಪ್ರಮಾಣದಲ್ಲಿನ ಇಳಿಕೆ ಜನಸಂಖ್ಯೆ ಏರಿಕೆಗೆ ಪ್ರಮುಖ ಕಾರಣವಾಗುತ್ತದೆ. ಹೆಚ್ಚಿದ ಶಿಕ್ಷಣ ಮಟ್ಟ, ಸಾರ್ವಜನಿಕ ಆರೋಗ್ಯ, ಲಸಿಕೆ ಕಾರ್ಯಕ್ರಮ, ಉತ್ತಮ ಆಹಾರ ಲಭ್ಯತೆ, ಸುರಕ್ಷಿತ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳು ದೊರೆಯುವುದರೊಂದಿಗೆ ಮರಣ ಪ್ರಮಾಣ ಕಡಿಮೆಯಾಗುತ್ತ ಸಾಗುತ್ತದೆ.
ಟಿಎಫ್​ಆರ್ ಕುಸಿತ:ಟಿಎಫ್​ಆರ್ ಎಂದರೆ ಒಟ್ಟು ಫಲವತ್ತತೆ ದರ (ಟೋಟಲ್ ಫರ್ಟಿಲಿಟಿ ರೇಟ್). ಮಹಿಳೆಯೊಬ್ಬಳು ಹೆರುವ ಸರಾಸರಿ ಶಿಶುಗಳ ಸಂಖ್ಯೆ. ಫಲವತ್ತತೆ ಕುಸಿತ ಜನಸಂಖ್ಯೆ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. 1950ರಲ್ಲಿ ಟಿಎಫ್​ಆರ್ ಚೀನಾದಲ್ಲಿ 5.8 ಮತ್ತು ಭಾರತದಲ್ಲಿ 5.7 ಇತ್ತು. ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿ ಟಿಎಫ್​ಆರ್ ತೀವ್ರವಾಗಿ ಕುಸಿದಿದೆ. 1992-93 ಮತ್ತು 2019-21 ರ ನಡುವೆ ಇದು 3.4 ರಿಂದ 2ಕ್ಕೆ ಇಳಿದಿದೆ. 1992-93ರಲ್ಲಿ ಸರಾಸರಿ ಗ್ರಾಮೀಣ ಭಾರತೀಯ ಮಹಿಳೆಯು ನಗರ ಮಹಿಳೆಗೆ ಹೋಲಿಸಿದರೆ ಒಂದು ಮಗುವನ್ನು ಹೆಚ್ಚು ಪಡೆದಿದ್ದಾಳೆ. ಅಂದರೆ, ಗ್ರಾಮೀಣ ಮಹಿಳೆಯ ಟಿಎಫ್​ಆರ್ 3.7 ಇದ್ದರೆ, ನಗರ ಮಹಿಳೆಯದ್ದು 2.7 ಇತ್ತು. 2019-21 ರ ಹೊತ್ತಿಗೆ, ಈ ಅಂತರವು ಅರ್ಧದಷ್ಟು ಕಡಿಮೆಯಾಗಿದೆ. ಅಂದರೆ, ಗ್ರಾಮೀಣ ಮಹಿಳೆಯ ಟಿಎಫ್​ಆರ್ 2.1 ಇದ್ದರೆ, ನಗರ ಮಹಿಳೆಯ ಟಿಎಫ್​ಆರ್ 1.6ಕ್ಕೆ ತಲುಪಿದೆ. 2.1 ರ ಟಿಎಫ್​ಆರ್ ದರವನ್ನು ‘ಬದಲಾವಣೆ ಮಟ್ಟದ ಫಲವತ್ತತೆ’ ಎಂದೇ ಪರಿಗಣಿಸಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಎರಡು ಮಕ್ಕಳನ್ನು ಹೊಂದಿರುವ ಮಹಿಳೆ ಮೂಲತಃ ತನ್ನನ್ನು ಮತ್ತು ತನ್ನ ಸಂಗಾತಿಯನ್ನು ಎರಡು ಹೊಸ ಜೀವನಗಳೊಂದಿಗೆ ಬದಲಾಯಿಸುತ್ತಾಳೆ. ಅಂದರೆ, ಗಂಡ-ಹೆಂಡರಿಬ್ಬರ ಬದಲಿಗೆ ನಂತರ ಪೀಳಿಗೆಯಲ್ಲಿ ಅವರ ಎರಡು ಮಕ್ಕಳು ಮುಂದುವರಿಯುತ್ತಾರೆ.
ಹೆಚ್ಚಳ ಏಕೆ?: ಭಾರತದ ಟಿಎಫ್​ಆರ್ ಈಗಾಗಲೇ ಬದಲಾವಣೆ ಮಟ್ಟಕ್ಕಿಂತ ಕೆಳಗಿದ್ದರೂ ಅದರ ಜನಸಂಖ್ಯೆಯು ಇನ್ನೂ ಏಕೆ ಹೆಚುತ್ತಿದೆ? ಟಿಎಫ್​ಆರ್ ಎನ್ನುವುದು ಒಂದು ನಿರ್ದಿಷ್ಟ ಅವಧಿ/ವರ್ಷದ ಸಮೀಕ್ಷೆಯ ಆಧಾರದ ಮೇಲೆ 15ರಿಂದ 49 ವರ್ಷ ವಯಸ್ಸಿನ ಮಹಿಳೆಯರು ನೀಡುವ ಸರಾಸರಿ ಜನನಗ ಸಂಖ್ಯೆಯಾಗಿದೆ. ಟಿಎಫ್​ಆರ್ ಕುಸಿಯುತ್ತಿರುವಾಗಲೂ ಜನಸಂಖ್ಯೆಯು ಬೆಳೆಯುತ್ತಲೇ ಇರುತ್ತದೆ. ಏಕೆಂದರೆ, ಇದೇ ಅವಧಿಯಲ್ಲಿ ಮರಣ್ರಪಮಾಣವು ಕಡಿಮೆಯಾಗುತ್ತ ಸಾಗಿರತ್ತದೆ. ಹೀಗಾಗಿ, ಜನಸಂಖ್ಯೆಯು ಇಳಿಮುಖವಾಗಬೇಕಾದರೆ, ಟಿಎಫ್​ಆರ್ ದರವು ದೀರ್ಘಕಾಲದವರೆಗೆ ‘ಬದಲಾವಣೆ ಮಟ್ಟ’ಕ್ಕಿಂತ ಸಾಕಷ್ಟು ಕೆಳಗಿರಬೇಕು. ಹೀಗಾದಾಗ ಮಾತ್ರ ಇಂದಿನ ಮಕ್ಕಳ ಸಂಖ್ಯೆಯು ಕಡಿಮೆಯಾಗುತ್ತದೆ. ಅಲ್ಲದೆ, ಮುಂದೆ ಅವರು ಪೋಷಕರಾಗಿ ಸಂತಾನೋತ್ಪತ್ತಿ ಮಾಡುವ್ರ ಪಮಾಣವು ತಗ್ಗುತ್ತ ಹೋಗುತ್ತದೆ. ಈ ರೀತಿಯಾದರೆ, ಒಂದೆರಡು ತಲೆಮಾರುಗಳ ನಂತರ ಇದರ ಪರಿಣಾಮ ಪ್ರತಿಫಲಿಸಬಹುದು. ಚೀನಾದ ಟಿಎಫ್​ಆರ್ 1991ರಲ್ಲಿ ಮೊದಲ ಬಾರಿಗೆ ‘ಬದಲಾವಣೆ ಮಟ್ಟ’ಕ್ಕಿಂತ ಕಡಿಮೆಯಾಗಿದೆ, ಇದಾಗಿದ್ದು ಭಾರತಕ್ಕಿಂತ ಸುಮಾರು 30 ವರ್ಷಗಳ ಮುಂಚಿತವಾಗಿಯೇ. ಇನ್ನು ಸಿಡಿಆರ್ ಕೂಡ ಚೀನಾದಲ್ಲಿ 10ಕ್ಕಿಂತ ಕಡಿಮೆಯಾಗಿದ್ದು ಎರಡು ದಶಕಗಳ ಹಿಂದೆಯೇ ಎಂಬುದು ಗಮನಾರ್ಹ. ಚೀನಾದ ಜನಸಂಖ್ಯೆಯು 1950ರಲ್ಲಿ 54.4 ಕೋಟಿಯಿಂದ 1987ರಲ್ಲಿ 110 ಕೋಟಿಗೆ ದ್ವಿಗುಣಗೊಂಡಿತು. 2021ರಲ್ಲಿ 142.6 ಕೋಟಿಗೆ ತಲುಪಿತು. ಜನಸಂಖ್ಯೆ ಬೆಳವಣಿಗೆ ಕುಸಿತ ಕಾಣಲು 30 ವರ್ಷಗಳನ್ನೇ ತೆಗೆದುಕೊಂಡಿತು.
2020 ರ ಜನಗಣತಿಯ ಪ್ರಕಾರ ಚೀನಾದ ಟಿಎಫ್​ಆರ್ ಪ್ರತಿ ಮಹಿಳೆಗೆ 1.3 ಆಗಿದೆ. 2010 ಮತ್ತು 2000ರ ಜನಗಣತಿಯಲ್ಲಿ ಇದು 1.2 ಇತ್ತು. ಇದೀಗ ಸ್ವಲ್ಪ ಹೆಚ್ಚಾಗಿದೆ. ಆದರೂ 2.1 ರ ‘ಬದಲಾವಣೆ ದರ’ಕ್ಕಿಂತ ಕಡಿಮೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಒಂದು ಮಗುವಿನ ನೀತಿ. ಒಂದು ಕುಟುಂಬಕ್ಕೆ ಒಂದು ಮಗು ಎಂಬ ನೀತಿಯನ್ನು 1980ರಲ್ಲಿ ಚೀನಾ ಜಾರಿಗೊಳಿಸಿತು. ಇದು ಅಲ್ಲಿ ಜನಸಂಖ್ಯೆ ಬೆಳವಣಿಗೆಯನ್ನು ತಡೆಗಟ್ಟಲು ಪ್ರಮುಖ ಕಾರಣವಾಯಿತು. ತದನಂತರ 2016ರಲ್ಲಿ ಈ ನೀತಿಯನ್ನು ಚೀನಾ ಅಧಿಕೃತವಾಗಿ ರದ್ದುಮಾಡಿತು. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ 2050ರ ಹೊತ್ತಿಗೆ ಚೀನಾದ ಜನಸಂಖ್ಯೆಯು 131 ಕೋಟಿ ಇರಲಿದ್ದು, 2021ರಲ್ಲಿ ಗರಿಷ್ಠ ಮಟ್ಟ ತಲುಪಿದ ಚೀನಾದ ಜನಸಂಖ್ಯೆಗಿಂತ 11.3 ಕೋಟಿ ಕಡಿಮೆ ಆಗುತ್ತದೆ. ಚೀನಾಕ್ಕೆ ತಲೆದೋರಲಿರುವ ನಿಜವಾದ ಬಿಕ್ಕಟ್ಟು ಏನೆಂದರೆ, ಕೆಲಸ ಮಾಡುವ ವಯಸ್ಸಿನ ಜನಸಂಖ್ಯೆಯಲ್ಲಿ ವ್ಯಾಪಕ ಕುಸಿತವಾಗುವುದು. ಚೀನಾದಲ್ಲಿ 1987ರಲ್ಲಿ 2-59 ವಯೋಮಾನದವರ ಸಂಖ್ಯೆಯು ಜನಸಂಖ್ಯೆಯ ಪ್ರಮಾಣವು ಶೇ. 50 ದಾಟಿತ್ತು. 2011ರಲ್ಲಿ ಇದು ಶೇ. 61.5 ಕ್ಕೆ ತಲುಪಿತ್ತು. ಈ ಅವಧಿಯಲ್ಲಿ ಆ ದೇಶ ಹೆಚ್ಚಿನ ಆರ್ಥಿಕ ಪ್ರಗತಿ ದಾಖಲಿಸಿತು. ಚೀನಾವು ಯುವ ಕಾರ್ವಿುಕ ಬಲದಿಂದ ಬರುವ ಜನಸಂಖ್ಯಾ ಲಾಭಾಂಶವನ್ನು ಯಶಸ್ವಿಯಾಗಿ ಬಳಸಿಕೊಂಡಿತು. ಕೆಲಸ ಮಾಡಲು ಮತ್ತು ಗಳಿಸಲು ಸಾಧ್ಯವಾಗುವ ದೊಡ್ಡ ಜನಸಂಖ್ಯೆಇದ್ದರೆ ಅವರ ಆದಾಯದ ಉತ್ಪಾದನೆಯಿಂದ ಹೆಚ್ಚಿನ ತೆರಿಗೆ ಬರುತ್ತದೆ. ಅಲ್ಲದೆ, ಉಳಿತಾಯದ ಸಾಮರ್ಥ್ಯವು ಹೆಚ್ಚಿ ಹೂಡಿಕೆಗಳಿಗೆ ಹಣಕಾಸು ದೊರೆಯುತ್ತದೆ. ಈ ಮೂಲಕ ಆರ್ಥಿಕ ಬೆಳವಣಿಗೆಯ ಸುಸ್ಥಿರ ಚಕ್ರವು ನಿರ್ವಣವಾಗುತ್ತದೆ. ಆದರೆ ಈಗ ಚೀನಾದಲ್ಲಿ ಈ ಚಕ್ರ ಹಿಮ್ಮುಖವಾಗಿ ಚಲಿಸಲು ಪ್ರಾರಂಭಿಸಿದೆ. ಚೀನಾದ ದುಡಿಯುವ ವಯಸ್ಸಿನ ಜನಸಂಖ್ಯೆಯ ಪಾಲು 2045ರ ವೇಳೆಗೆ ಶೇ. 50ಕ್ಕಿಂತ ಕಡಿಮೆಯಿರುತ್ತದೆ ಎಂದು ಅಂದಾಜಿಸಲಾಗಿದೆ. ಸರಳವಾಗಿ ಹೇಳುವುದಾದರೆ, 2014ರಲ್ಲಿ 83.9 ಕೋಟಿ ಇದ್ದ ದುಡಿಯುವ ವಯಸ್ಸಿನವರ ಜನಸಂಖ್ಯೆಯು 2050ರ ವೇಳೆಗೆ 60.4 ಕೋಟಿಗೆ ಇಳಿಕೆಯಾಗಲಿದೆ. ಇದಲ್ಲದೆ, ಜನಸಂಖ್ಯೆಯ ಸರಾಸರಿ ವಯಸ್ಸು 2000ರಲ್ಲಿ 28.9 ವರ್ಷಗಳು ಮತ್ತು 2020 ರಲ್ಲಿ 37.4 ವರ್ಷಗಳು ಇತ್ತು. 2050 ರ ವೇಳೆಗೆ ಇದು 50.7 ವರ್ಷಗಳಿಗೆ ಏರುವ ನಿರೀಕ್ಷೆ ಇದೆ. ಅಂದರೆ, ವೇಗವಾಗಿ ಹೆಚ್ಚುತ್ತಿರುವ ವಯಸ್ಸಾದ ಜನಸಂಖ್ಯೆಯನ್ನು ಬೆಂಬಲಿಸಲು ಅಗತ್ಯವಿರುವ ಕಾರ್ವಿುಕ ಬಲವು ಚೀನಾದಲ್ಲಿ ಕ್ಷೀಣಿಸುತ್ತ ಹೋಗಲಿದೆ.
ಒಟ್ಟಾರೆಯಾಗಿ, 1980ರ ದಶಕದ ಅಂತ್ಯದಿಂದ 2015 ರವರೆಗೆ ಚೀನಾ ಮಾಡಿದಂತೆ, ಭಾರತವು ತನ್ನ ಜನಸಂಖ್ಯಾ ಲಾಭಾಂಶವನ್ನು ಪಡೆದುಕೊಳ್ಳಲು 2040ರ ದಶಕದವರೆಗೆ ಉತ್ತಮ ಅವಕಾಶವಿದೆ. 1993-94ರಲ್ಲಿ ಕೃಷಿ ಕ್ಷೇತ್ರವು ಶೇ. 65ರಷ್ಟು ಕಾರ್ವಿುಕರಿಗೆ ಕೆಲಸ ಒದಗಿಸಿತ್ತು. ಈ ಪಾಲು 2011-12 ರ ವೇಳೆಗೆ ಶೇ. 49ಕ್ಕೆ ಕುಸಿಯಿತು. ಅಂದರೆ, ಕೃಷಿ ಕೆಲಸವನ್ನು ಅವಲಂಬಿಸಿದವರ ಸಂಖ್ಯೆ ಕಡಿಮೆ ಆಯಿತು. ಕೃಷಿ ಕ್ಷೇತ್ರವನ್ನು ಹೊರತುಪಡಿಸಿದ ಉದ್ಯೋಗಗಳನ್ನು ಸೃಷ್ಟಿಸುವ ಬೆಳವಣಿಗೆಯನ್ನು ಉತ್ತೇಜಿಸುವುದು ಭಾರತದ ನೀತಿ ನಿರೂಪಕರ ಮುಂದಿರುವ ದೊಡ್ಡ ಸವಾಲಾಗಿದೆ. ಕೇವಲ ನಿರ್ಮಾಣ ವಲಯ ಮತ್ತು ಕಡಿಮೆ ಸಂಬಳ ಇರುವ ಅನೌಪಚಾರಿಕ ಸೇವೆಗಳಿಂದ ಉದ್ಯೋಗ ದೊರೆತರೆ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಉತ್ಪಾದನೆ, ಮೌಲ್ಯವರ್ಧನೆ ಮತ್ತು ಸರಾಸರಿ ಆದಾಯ ಹೆಚ್ಚು ಇರುವ ಆಧುನಿಕ ಉದ್ಯಮ ಮತ್ತು ಆಧುನಿಕ ಸೇವೆಗಳಲ್ಲಿ ಕೃಷಿ ಕ್ಷೇತ್ರದ ಹೆಚ್ಚುವರಿ ಕಾರ್ವಿುಕರಿಗೆ ಉದ್ಯೋಗ ದೊರೆಯುವಂತಾಗಬೇಕು. ಇಂತಹ ರಚನಾತ್ಮಕ ರೂಪಾಂತರ ಸಾಧ್ಯವಾಗದಿದ್ದರೆ ಜನಸಂಖ್ಯೆಯ ಲಾಭಾಂಶದ ಬದಲು ಜನಸಂಖ್ಯೆಯೇ ದುಃಸ್ವಪ್ನವಾಗಬಹುದು.
ಕೃಷಿಯಲ್ಲಿ ಯಾಂತ್ರೀಕರಣ ಮತ್ತು ಭೂಹಿಡುವಳಿಗಳು ಚಿಕ್ಕದಾಗುತ್ತಿರುವ ಪರಿಣಾಮವಾಗಿ ಕೃಷಿ ಕೆಲಸದಲ್ಲಿ ಕಾರ್ವಿುಕರ ಅವಶ್ಯಕತೆ ಕಡಿಮೆಯಾಗುತ್ತಿದೆ. ಸಣ್ಣ ಹಿಡುವಳಿಗಳಿಂದಾಗಿ ಸಣ್ಣ ಕುಟುಂಬ ಹೊಂದುವ ಅಗತ್ಯ ಉಂಟಾಗುತ್ತಿದೆ. ಇದರ ಪರಿಣಾಮವಾಗಿ ಫಲವತ್ತತೆಯ ದರ ಕುಸಿತ ಕಾಣುತ್ತಿದ್ದರೂ ಭಾರತದ ಜನಸಂಖ್ಯೆಯು 40 ವರ್ಷಗಳ ನಂತರ 170 ಕೋಟಿ ಮುಟ್ಟಿದ ನಂತರವೇ ಇಳಿಮುಖವಾಗಿ ಸಾಗಲಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ದುಡಿಯುವ ವಯಸ್ಸಿನ ಜನಸಂಖ್ಯೆಯು ಒಟ್ಟಾರೆ ಜನಸಂಖ್ಯೆಯ ಶೇ. 50ನ್ನು 2007ರಲ್ಲಿಯೇ ದಾಟಿತು. 2030ರ ಮಧ್ಯದಲ್ಲಿ ಇದು ಶೇ. 57ಕ್ಕೆ ತಲುಪಲಿದೆ. ಸರಳವಾಗಿ ಹೇಳುವುದಾದರೆ, 20 ರಿಂದ 59 ವರ್ಷ ವಯಸ್ಸಿನ ಜನಸಂಖ್ಯೆಯು 2020ರಲ್ಲಿ 76 ಕೋಟಿಯಿಂದ 2045ರ ಹೊತ್ತಿಗೆ 92 ಕೋಟಿಗೆ ಹೆಚ್ಚಾಗಲಿದೆ. ಭಾರತದ ಜನಸಂಖ್ಯೆಯ ಸರಾಸರಿ ವಯಸ್ಸು ಕೂಡ ಅಷ್ಟೇನು ಹೆಚ್ಚಾಗುವುದಿಲ್ಲ. ಇದು 2020ರಲ್ಲಿ 27.3 ವರ್ಷ ಇದ್ದು, 2050 ರಲ್ಲಿ 38.1ಕ್ಕೆ ಹೆಚ್ಚಾಗಲಿದೆ. ಚೀನಾಕ್ಕೆ ಹೋಲಿಸಿದರೆ ಈ ಸರಾಸರಿ ವಯಸ್ಸು ತೀರ ಕಡಿಮೆ ಆಗಿರಲಿದೆ.
ಕೊನೆಗೂ ಹೆಚ್ಚಾಯ್ತು ಹಾಲು-ಮೊಸರು ದರ; ನಾಳೆಯಿಂದಲೇ ಹೊಸ ಬೆಲೆ ಜಾರಿ!?

ಗಂಡನ ಕಿರುಕುಳ: ದೇಶದಲ್ಲಿ ಕರ್ನಾಟಕವೇ ಪ್ರಥಮ; ಮದ್ಯವ್ಯಸನಿಗಳಿಂದಲೇ ಜಾಸ್ತಿ ಉಪಟಳ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
