ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ರಾಷ್ಟ್ರೀಯವಾದದ ಚಿಂತನೆಯನ್ನು ಉತ್ತೇಜಿಸಿದ, ರಾಷ್ಟ್ರೀಯ ಸಮಗ್ರತೆಯನ್ನು ಸಂರಕ್ಷಿಸಿದ, ದೇಶದಲ್ಲಿ ಒಂದು ಪ್ರಬಲ ರಾಜಕೀಯ ಪರ್ಯಾಯದ ಚಿಂತನೆಯನ್ನು ಬಿತ್ತಿದ ಶ್ರೇಷ್ಠ ವ್ಯಕ್ತಿತ್ವ; ಬೇರಾರೂ ಅಲ್ಲ, ಅದು ಡಾ. ಶ್ಯಾಮಾಪ್ರಸಾದ್ ಮುಖರ್ಜಿ. ಸ್ವಾತಂತ್ರಾ್ಯ-ನಂತರ ಡಾ. ಮುಖರ್ಜಿ ಹೆಚ್ಚು ಸಮಯ ಬದುಕಿರ ದಿದ್ದರೂ ಅವರ ತತ್ತ್ವ ಮತ್ತು ಹೋರಾಟಗಳು ಭಾರತೀಯ ರಾಜಕೀಯ ರಂಗದ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ.
ಮುಖರ್ಜಿಯವರಿಗೆ ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯ ಅರಿವಿತ್ತು. ಅದನ್ನು ಸಂಪೂರ್ಣವಾಗಿ ಪರಿಹರಿಸಬೇಕೆಂದು ಅವರು ಬಲವಾದ ದನಿ ಎತ್ತಿದರು. ಬಂಗಾಳದ ವಿಭಜನೆಯಾದಾಗಲೂ ಭಾರತದ ಹಕ್ಕುಗಳು ಹಾಗೂ ಹಿತಕ್ಕಾಗಿ ಯಶಸ್ವಿಯಾಗಿ ಹೋರಾಡಿದವರಲ್ಲಿ ಅವರೂ ಒಬ್ಬರು. ಸ್ವಾತಂತ್ರಾ್ಯ-ನಂತರದ ಯುಗದಲ್ಲಿ ಭಾರತೀಯರ ಮೇಲೆ ಆಮದಾದ ತತ್ತ್ವಸಿದ್ಧಾಂತಗಳು ಮತ್ತು ನೀತಿಗಳನ್ನು ಹೇರುವ ಕಾಂಗ್ರೆಸ್ ವಿರುದ್ಧ ಹೋರಾಡುವಲ್ಲಿಯೂ ಅವರು ಮಹತ್ವದ ಪಾತ್ರ ನಿರ್ವಹಿಸಿದರು. ‘ಭಾರತ, ಭಾರತೀಯ ಮತ್ತು ಭಾರತೀಯತೆ’ ಪ್ರತಿಯೊಬ್ಬ ಭಾರತೀಯರ ಜೀವನ ವಿಧಾನಕ್ಕೆ ಹೆಚ್ಚು ಸೂಕ್ತ ಹಾಗೂ ಸುಸ್ಥಿರ ರಾಜಕೀಯ ಮತ್ತು ಸಾಮಾಜಿಕ ತತ್ತ್ವವೆಂದು ಪ್ರತಿಪಾದಿಸಿ ಅದು ನೆಲೆ ನಿಲ್ಲುವಲ್ಲಿ ಅವರು ಕಾರಣೀಭೂತರು.
ಪ್ರ್ರಮ ಕೈಗಾರಿಕಾ ಮಂತ್ರಿ: ಜವಾಹರಲಾಲ್ ನೆಹರು ಸರ್ಕಾರದಲ್ಲಿ ಮುಖರ್ಜಿ ಪ್ರಥಮ ಕೈಗಾರಿಕಾ ಸಚಿವರಾಗಿದ್ದರು. ಅವರು ಸರ್ಕಾರವನ್ನು ಸೇರಿದರೂ ನೆಹರು-ಲಿಯಾಖತ್ ಒಪ್ಪಂದದಲ್ಲಿ ಹಿಂದೂಗಳ ಹಿತವನ್ನು ಕಾಂಗ್ರೆಸ್ ಸಂಪೂರ್ಣವಾಗಿ ಬಲಿಕೊಟ್ಟಿದ್ದನ್ನು ವಿರೋಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಈ ರಾಜೀನಾಮೆ ತತ್ತ್ವಸಿದ್ಧಾಂತ ಕುರಿತ ಅವರ ಪ್ರಜ್ಞಾವಂತಿಕೆಯ ಅಮೋಘ ಉದಾಹರಣೆಯಾಗಿದೆ. ಮುಖರ್ಜಿ ಯಾವತ್ತೂ ಸೈದ್ಧಾಂತಿಕ ಪ್ರಜ್ಞಾವಂತಿಕೆಯ ಬದ್ಧತೆಯೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ನೆಹರು ಸಂಪುಟಕ್ಕೆ ಅವರು ನೀಡಿದ ರಾಜೀನಾಮೆ, ದೇಶದಲ್ಲಿ ರಾಜಕೀಯ ಪರ್ಯಾಯವೊಂದರ ಹುಟ್ಟಿನ ಪೀಠಿಕೆಯಾಗಿತ್ತು.
ನಾನಾ ಸಿದ್ಧಾಂತಗಳಲ್ಲಿ ನಂಬಿಕೆ ಹೊಂದಿದ್ದ ರಾಜಕೀಯ ನಾಯಕರು ಮತ್ತು ಜನರು ಭಾರತದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್​ನ ಛತ್ರಿಯಡಿ ಒಂದಾದರು. ಆದರೆ ಸ್ವಾತಂತ್ರ್ಯ ಸಿಕ್ಕ ನಂತರ ರಾಜಕೀಯ ಶೂನ್ಯ ತುಂಬಲು ಕಾಂಗ್ರೆಸ್​ಗೆ ಒಂದು ಪರ್ಯಾಯ ರೂಪಿಸುವ ಬಗ್ಗೆ ಚರ್ಚೆ ಆರಂಭವಾಗಿತ್ತು.
ಜನಸಂಘದ ಜನ್ಮ: ಸಾಂಸ್ಕೃತಿಕ ರಾಷ್ಟ್ರೀಯವಾದದ ಮೂಲಕ ರಾಷ್ಟ್ರೀಯ ಸಮಗ್ರತೆ ಸಾಧಿಸುವ ಹಾಗೂ ತುಷ್ಟೀಕರಣ ರಾಜಕೀಯಕ್ಕೆ ಎದುರಾದ ರಾಜಕೀಯ ಸಿದ್ಧಾಂತವೊಂದನ್ನು ಭಾರತ ಕುತೂಹಲದಿಂದ ಎದುರು ನೋಡುತ್ತಿತ್ತು. ಶ್ಯಾಮಾಪ್ರಸಾದ್ ಮುಖರ್ಜಿ ಈ ಚರ್ಚೆಯ ಧ್ವಜಧಾರಿಯಾಗಿ ಹೊರಹೊಮ್ಮಿ ಅಂತಿಮವಾಗಿ ಜನಸಂಘ ಜನ್ಮ ತಳೆಯಿತು. ಅವರ ಪ್ರಯತ್ನಗಳ ಫಲವಾಗಿ 1951 ಅಕ್ಟೋಬರ್ 21ರಂದು ಜನಸಂಘದ ರಚನೆಯಾಯಿತು. ರಾಷ್ಟ್ರೀಯವಾದದ ಗುಣಗಳನ್ನು ಗರ್ಭೀಕರಿಸಿದ ರಾಜಕೀಯ ಪಕ್ಷವೊಂದರ ಬೀಜ ಅದರಲ್ಲಿ ಅಡಕವಾಗಿತ್ತು. ಕಳೆದ ಹಲವು ದಶಕಗಳಲ್ಲಿ ನಾವು ಅನೇಕ ಮೈಲಿಗಲ್ಲುಗಳನ್ನು ಹಾದು ಬಂದಿದ್ದೇವೆ, ಅನೇಕ ಹೋರಾಟಗಳನ್ನು ನಡೆಸಿದ್ದೇವೆ ಹಾಗೂ ಬಹಳಷ್ಟು ಏಳುಬೀಳುಗಳನ್ನು ಕಂಡು ಈಗಿನ ಸ್ಥಿತಿಗೆ ತಲುಪಿದ್ದೇವೆ.
1951-52ರ ಸಾರ್ವತ್ರಿಕ ಚುನಾವಣೆಗಳಲ್ಲಿ ಜನಸಂಘ ಮೂರು ಸ್ಥಾನಗಳಲ್ಲಿ ಜಯಿಸಿತ್ತು. ಶ್ಯಾಮಾಪ್ರಸಾದ್ ಮುಖರ್ಜಿ ಕೋಲ್ಕತ್ತ ಕ್ಷೇತ್ರದಿಂದ ಗೆದ್ದು ಸಂಸತ್ ಪ್ರವೇಶಿಸಿದರು. ಅವರ ಚಿಂತನೆಗಳ ಸ್ಪಷ್ಟತೆ, ತತ್ತ್ವಬದ್ಧತೆ ಹಾಗೂ ದೂರದರ್ಶಿತ್ವ ಕಂಡ ವಿರೋಧ ಪಕ್ಷಗಳು ಒಕ್ಕೊರಲಿನಿಂದ ಅವರನ್ನು ಲೋಕಸಭೆಯ ಪ್ರತಿಪಕ್ಷ ನಾಯಕನಾಗಿ ಆಯ್ಕೆ ಮಾಡಿದವು.
ಸಮಗ್ರತೆಗೆ ಅಡ್ಡಿ: ಜಮ್ಮು ಮತ್ತು ಕಾಶ್ಮೀರದ ಮೇಲೆ 370ನೇ ವಿಧಿ ಅನ್ವಯ ವಿಶೇಷ ಸ್ಥಾನಮಾನ ನೀಡಿದ ಕ್ರಮ ಹಾಗೂ ಪರ್ವಿುಟ್ ವ್ಯವಸ್ಥೆಯು ಭಾತದ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ದೊಡ್ಡ ಅಡ್ಡಿ ಎಂದು ಮುಖರ್ಜಿ ಸದಾ ಪರಿಗಣಿಸಿದ್ದರು. ಈ ವಿಚಾರವಾಗಿ ಅವರು ಸಂಸತ್ತಿನಲ್ಲಿ ಅನೇಕ ಸಲ ದನಿಯೆತ್ತಿದರು. 1952 ಜೂನ್ 26ರಂದು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ನಡೆದ ಚರ್ಚೆಯೊಂದರಲ್ಲಿ ಭಾಗವಹಿಸಿದ ಮುಖರ್ಜಿ, ಪ್ರಜಾಸತ್ತಾತ್ಮಕ ಹಾಗೂ ಒಕ್ಕೂಟ ಭಾರತದಲ್ಲಿ ಒಂದು ರಾಜ್ಯದ ನಾಗರಿಕರ ಹಕ್ಕು ಮತ್ತು ಸೌಲಭ್ಯಗಳು ದೇಶದ ಇತರ ಭಾಗಗಳಿಗಿಂತ ಹೇಗೆ ಬೇರೆಯಾಗಿರಲು ಸಾಧ್ಯ ಎಂದು ಪ್ರಶ್ನಿಸಿದರು. ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸಲು ಪರ್ವಿುಟ್ ಅಗತ್ಯವೆಂಬ ವ್ಯವಸ್ಥೆಯನ್ನೂ ಅವರು ಪ್ರಬಲವಾಗಿ ವಿರೋಧಿಸಿದರು.
ಜಮ್ಮು ಪ್ರವೇಶಿಸುತ್ತಿದ್ದ ಮುಖರ್ಜಿಯವರನ್ನು ಬಂಧಿಸಲಾಯಿತು. ಇದರ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ಭುಗಿಲೆದ್ದು ಹಲವರನ್ನು ಬಂಧಿಸಲಾಯಿತು. ಬಂಧನವಾದ 40 ದಿನಗಳ ನಂತರ, 1953 ಜೂನ್ 23ರಂದು ಭಾರತ ಮಾತೆಯ ಮಹಾನ್ ಪುತ್ರ ಡಾ. ಮುಖರ್ಜಿ ಜಮ್ಮುವಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಿಗೂಢ ಸನ್ನಿವೇಶದಲ್ಲಿ ಮೃತಪಟ್ಟರು. ಅವರ ನಿಧನ ಅನೇಕ ಉತ್ತರಿಸಲಾಗದ ಪ್ರಶ್ನೆಗಳನ್ನು ಹುಟ್ಟು ಹಾಕಿತು. ಆದರೆ ನೆಹರು ಸರ್ಕಾರ ಅವೆಲ್ಲದಕ್ಕೆ ಕುರುಡಾಗಿತ್ತು. ಮಗನ ನಿಗೂಢ ಸಾವಿನ ಕುರಿತು ತನಿಖೆ ನಡೆಸುವಂತೆ ಕೋರಿ ಮುಖರ್ಜಿ ತಾಯಿ ಯೋಗಮಯ ದೇವಿ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಪತ್ರ ಬರೆದರು. ಆದರೂ, ಮುಖರ್ಜಿ ಬಂಧನ ಹಾಗೂ ಸಾವಿನ ಕುರಿತ ನಿಗೂಢತೆ ಇಂದಿಗೂ ಪರಿಹಾರವಾಗದೇ ಉಳಿದಿವೆ.
‘ಒಂದು ದೇಶದಲ್ಲಿ ಎರಡು ಸಂವಿಧಾನ, ಇಬ್ಬರು ಪ್ರಧಾನ ಮಂತ್ರಿಗಳು ಹಾಗೂ ಎರಡು ರಾಷ್ಟ್ರೀಯ ಚಿಹ್ನೆ ಇರಲು ಸಾಧ್ಯವಿಲ್ಲ’ ಎಂದು ಮುಖರ್ಜಿ ಸದಾ ಹೇಳುತ್ತಿದ್ದರು. ಈ ಘೋಷಣೆ, ಮೊದಲು ಜನಸಂಘ ಹಾಗೂ ನಂತರ ಭಾರತೀಯ ಜನತಾ ಪಕ್ಷದ ಮಾರ್ಗದರ್ಶಿ ಸಿದ್ಧಾಂತವಾಯಿತು. ಈ ಕನಸು ನನಸಾಗುವುದೇ ಎಂಬ ಪ್ರಶ್ನೆ ಅನೇಕ ದಶಕಗಳ ಕಾಲ ಜನರನ್ನು ಕಾಡುತ್ತಿತ್ತು. ಇದೊಂದು ಸೈದ್ಧಾಂತಿಕ ಸಂಘರ್ಷವಾಗಿತ್ತು. ಒಂದು ಕಡೆ ಕಾಂಗ್ರೆಸ್ ಸಹಿತ ತುಷ್ಟೀಕರಣ ರಾಜಕೀಯ ಅನುಸರಿಸುವ ಪಕ್ಷಗಳು. ಇನ್ನೊಂದೆಡೆ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಲು ದೃಢವಾದ ಬದ್ಧತೆ ಹೊಂದಿದ ಬಿಜೆಪಿ. ಜನಸಂಘದ ಯುಗವೇ ಆಗಲಿ, ಬಿಜೆಪಿಯ ಪಯಣವೇ ಆಗಲಿ, ಒಂದು ಏಕೀಕೃತ ಹಾಗೂ ಬಲಿಷ್ಠ ಭಾರತ ಕಾಣುವ ನಮ್ಮ ಬದ್ಧತೆಯಲ್ಲಿ ಎಳ್ಳಷ್ಟೂ ಬದಲಾವಣೆ ಇರಲಿಲ್ಲ.
ಪ್ರಧಾನಿ ನರೇಂದ್ರ ಮೋದಿಯವರ ದೃಢನಿರ್ಧಾರ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ದಕ್ಷ ಕಾರ್ಯವ್ಯೂಹ ಮತ್ತು ಯೋಜನೆ ಇವುಗಳಿಂದಾಗಿ 2019ರ ಆಗಸ್ಟ್​ನಲ್ಲಿ ಸಂವಿಧಾನದ 370ನೇ ವಿಧಿಯನ್ನು ಹಿಂಪಡೆಯುವಲ್ಲಿ ಭಾರತ ಯಶಸ್ವಿಯಾಗಿದೆ. ಮೋದಿಯವರು ಡಾ. ಶ್ಯಾಮಾಪ್ರಸಾದ್ ಮುಖರ್ಜಿಯವರ ‘ಒಂದು ಸಂವಿಧಾನ, ಒಬ್ಬ ಪ್ರಧಾನಿ ಒಂದು ರಾಷ್ಟ್ರೀಯ ಚಿಹ್ನೆ’ಯ ಕನಸನ್ನು ನನಸುಗೊಳಿಸಿದರು. ಮುಖರ್ಜಿಯವರ ಸವೋಚ್ಚ ತ್ಯಾಗ ವ್ಯರ್ಥವಾಗಲಿಲ್ಲ.
ಏಕೀಕೃತ ಹಾಗೂ ಬಲಿಷ್ಠ ಭಾರತಕ್ಕಾಗಿ ಬದ್ಧವಾದ ರಾಜಕೀಯ ಸಂಸ್ಥೆ ರಚಿಸಿದ ಭಾರತ ಮಾತೆಯ ನಿಜವಾದ ಪುತ್ರ ಎಂದು ಮುಖರ್ಜಿ ಅವರನ್ನು ಸದಾ ನೆನಪಿಸಿಕೊಳ್ಳಲಾಗುತ್ತದೆ. ಈ ಮಹಾನ್ ಮಣ್ಣಿನ ಮಗನಿಗೆ ನನ್ನ ನಮನಗಳು.
(ಲೇಖಕರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 11 =
Remember me
