|ರುದ್ರಣ್ಣ ಹರ್ತಿಕೋಟೆ
ದುಬೈ ಎಂದ ಕೂಡಲೇ ಕಣ್ಮುಂದೆ ಬರುವುದು ಮರಳುಗಾಡಿನಲ್ಲಿ ಮೋಟಾರ್ ಚಾಲನೆ, ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ, ಸಮುದ್ರದ ಮಧ್ಯದಲ್ಲಿ ನಿರ್ವಣಗೊಂಡಿರುವ ಬುರ್ಜ್ ಅಲ್ ಅರಬ್ ಹೋಟೆಲ್, ಅಗ್ಗದ ದರದಲ್ಲಿ ಲಭಿಸುವ ಚಿನ್ನ, ಒಣಹಣ್ಣುಗಳು… ಈಗ ಈ ಸಂಗತಿಗಳಿಗೆ ಸೀಮಿತವಾದ ವಿಶೇಷಣಗಳು ಮಾತ್ರ ಉಳಿದುಕೊಂಡಿಲ್ಲ. ಏಕೆಂದರೆ, ವಿವಿಧ ವರ್ಗಗಳ ಜನರ ಅಭಿರುಚಿಗೆ ತಕ್ಕಂತೆ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸಂಯುಕ್ತ ಅರಬ್ ಸಂಸ್ಥಾನ (ಯುಎಇ)ದಲ್ಲಿ ಒಂದೊಂದು ರಾಜ್ಯ ಒಂದು ಕ್ಷೇತ್ರಕ್ಕೆ ಪ್ರಸಿದ್ಧಿ ಪಡೆದಿರುವಂತೆ ದುಬೈ ಪ್ರವಾಸೋದ್ಯಮಕ್ಕೆ ಪ್ರಸಿದ್ಧಿಯಾಗಿದೆ. ದುಬೈ ಪ್ರವಾಸೋದ್ಯಮ ಇಲಾಖೆಯು ಶಾಲಾ ಮಕ್ಕಳ ಅಭಿರುಚಿಗೆ ತಕ್ಕಂತೆ ಕೆಲವೊಂದು ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸಿದೆ. ಸಾಹಸ ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಸಂಸ್ಕೃತಿ-ಜ್ಞಾನ ವಿಕಾಸಕ್ಕೆ ಸಹಕಾರಿಯಾಗುವಂತಹ ಪ್ರಯತ್ನಗಳು ಇವುಗಳಲ್ಲಿ ಮೂಡಿಬಂದಿವೆ.
ಐಎಂಜಿ ವರ್ಲ್ಡ್:ಸಾಹಸ ಕ್ರೀಡೆಗಳಿಂದ ಕೂಡಿರುವ ದುಬೈನ ಮಹತ್ವದ ಪ್ರದರ್ಶನ ಕೇಂದ್ರ ಐಎಂಜಿ ವರ್ಲ್ಡ್. ಆರು ರೀತಿಯ ಸಾಹಸ ಕ್ರೀಡೆಗಳ ವಲಯಗಳು ಒಂದೆಡೆಯೇ ಸಿಗುವುದು ವಿಶೇಷ. ಹೆಚ್ಚು ಉಷ್ಣಾಂಶದಿಂದ ಕೂಡಿದ ನಗರ ದುಬೈ. ಆದರೆ, ಐಎಂಜಿ ವರ್ಲ್ಡ್ ಬೇಸಿಗೆಯಲ್ಲಿಯೂ ತಂಪಾದ ಹವಾಮಾನ ಅನುಭವ ಒದಗಿಸುತ್ತದೆ. 15 ಲಕ್ಷ ಚದರ ಅಡಿಯಲ್ಲಿ ಕೇಂದ್ರ ವ್ಯಾಪಿಸಿದೆ. ಇಡೀ ದಿನ ಮಕ್ಕಳು ವಿವಿಧ ಕ್ರೀಡೆಗಳಲ್ಲಿ ತನ್ಮಯರಾಗಿ ಕಾಲ ಕಳೆಯಬಹುದಾದ ತಾಣವಿದು. ಏಕಕಾಲಕ್ಕೆ 20 ಸಾವಿರ ಜನರು ಭೇಟಿ ನೀಡಬಹುದಾಗಿದೆ. ಇಲ್ಲಿರುವ ಸ್ಕೇರಿ ಹೌಸ್ ನೋಡುವುದಕ್ಕೆ ನಿಜಕ್ಕೂ ಗಂಡೆದೆಯೇ ಬೇಕು. ಎಲ್ಲ ವಿಧದ ತಿನಿಸುಗಳ ಹೋಟೆಲ್​ಗಳು ಇಲ್ಲಿವೆ.
ಮ್ಯೂಸಿಯಂ ಆಫ್ ಫ್ಯೂಚರ್:ಭೂಮಂಡಲವು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಬದಲಾವಣೆಗಳನ್ನು ಕಾಣಬಹುದು ಎಂಬುದನ್ನು ಇಲ್ಲಿ ವೀಕ್ಷಿಸಬಹುದಾಗಿದೆ. ವಿಶ್ವದ 14 ಪ್ರಮುಖ ಮ್ಯೂಸಿಯಂಗಳಲ್ಲಿ ಇದೂ ಒಂದು. 77 ಮೀಟರ್ ಎತ್ತರ, 30 ಸಾವಿರ ಚದರ ಮೀಟರ್​ನಷ್ಟು ವಿಶಾಲವಾಗಿದೆ. ಗ್ರೀನ್ ಹಿಲ್, ಕಟ್ಟಡ ಮತ್ತು ಶೂನ್ಯ ಎಂಬ ಮೂರು ಪ್ರಮುಖವಾದ ಅಂಶಗಳನ್ನು ಒಳಗೊಂಡಿದೆ. ಭವಿಷ್ಯದಲ್ಲಿ ಕಟ್ಟಡಗಳು, ವಾಹನಗಳು ಹೇಗಿರುತ್ತವೆ? ಮಾನವನ ಬದುಕು, ಬಾಹ್ಯಾಕಾಶದ ಪಯಣ ಯಾವ ರೀತಿ ಇರಲಿದೆ ಎಂಬಿತ್ಯಾದಿ ಸಂಗತಿಗಳನ್ನು ಇಲ್ಲಿ ತೋರಿಸಲಾಗಿದೆ.
ವಿಶ್ವದ ಅತಿ ದೊಡ್ಡ ದುಬೈ ಮಾಲ್:ವಿಶ್ವದ ಅತಿ ದೊಡ್ಡ ಮಾಲ್​ಗಳಲ್ಲಿ ದುಬೈ ಮಾಲ್ ಒಂದು. 12 ದಶಲಕ್ಷ ಚದರಡಿ ಪ್ರದೇಶದಲ್ಲಿ ವ್ಯಾಪಿಸಿದೆ. ಅಕ್ವೇರಿಯಂ ಹಾಗೂ ಅಂಡರ್​ವಾಟರ್ ಝುೂ ಇಲ್ಲಿನ ವಿಶೇಷ. ಪೆಂಗ್ವಿನ್ ಸೇರಿದಂತೆ ಅನೇಕ ಅಪರೂಪದ ಪ್ರಾಣಿ- ಪಕ್ಷಿಗಳನ್ನು ಇಲ್ಲಿ ನೋಡಬಹುದಾಗಿದೆ. ಅಂಡರ್ ವಾಟರ್ ಝುೂನಲ್ಲಿಯೇ ದೋಣಿ ವಿಹಾರ ಕೂಡ ಲಭ್ಯ. ವಾರಕ್ಕೆ 7 ಲಕ್ಷ ಜನ ಇಲ್ಲಿಗೆ ಭೇಟಿ ನೀಡುತ್ತಾರೆ ಎಂಬ ಮಾಹಿತಿ ಇದೆ. 1200ಕ್ಕೂ ಹೆಚ್ಚಿನ ಶಾಪಿಂಗ್ ಅಂಗಡಿಗಳಿವೆ. 22 ಸಿನಿಮಾ ಹಾಲ್​ಗಳಿವೆ. 200ಕ್ಕೂ ಹೆಚ್ಚಿನ ಹೋಟೆಲ್​ಗಳು ಆಟವಾಡಿ ದಣಿದ ಹೊಟ್ಟೆ ತುಂಬಿಸುತ್ತವೆ. 155 ವರ್ಷಗಳಷ್ಟು ಹಳೆಯ ಡೈನೋಸಾರ್​ನ ಪಳೆಯುಳಿಕೆ ಇಲ್ಲಿದೆ. ಇಲ್ಲಿನ ಡಿಜಿಟಲ್ ಪೇಂಟಿಂಗ್ ಹಾಲ್ ಗಮನ ಸೆಳೆಯುತ್ತದೆ. 130 ಪ್ರೊಜೆಕ್ಟರ್​ಗಳಲ್ಲಿ 3000ಕ್ಕೂ ಅಧಿಕ ಚಿತ್ರಗಳನ್ನು ಇಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಇಲ್ಲಿ ಮೂರು ಪ್ರದರ್ಶನ ಕೇಂದ್ರಗಳಿವೆ. ದುಬೈ ಮಾಲ್​ನಲ್ಲಿರುವ ಇ ಕಾರ್ಟ್ ಝುಬೀಲ್ ಬುರ್ಜ್ ಖಲೀಫಾ ನೋಡುತ್ತ ಇ ಕಾರ್ಟ್​ಗಳ ಚಾಲನೆಯ ವಿಶೇಷ ಅನುಭವ ಪಡೆಯಬಹುದು.
150 ಮೀಟರ್ ಫ್ರೇಮ್:ದುಬೈನ ವಿಶೇಷಗಳಲ್ಲಿ ದುಬೈ ಫ್ರೇಮ್ ಸಹ ಒಂದು. ಬುರ್ಜ್ ಖಲೀಫಾಗೆ ಹತ್ತಿರದಲ್ಲಿಯೇ ಇದೆ. 150 ಮೀಟರ್ ಎತ್ತರದ ಚೌಕಟ್ಟಿನ ರೀತಿಯಲ್ಲಿದೆ. ಮೇಲಿನಿಂದ ದುಬೈ ನಗರವನ್ನು ನೋಡಬಹುದು. ಒಂದೆಡೆ ಹಳೆಯ ದುಬೈ ಕಾಣಿಸಿದರೆ, ಇನ್ನೊಂದು ಮಗ್ಗುಲಿನಿಂದ ಹೊಸದಾಗಿ ಅಭಿವೃದ್ಧಿಪಡಿಸಿರುವ ದುಬೈ ಕಾಣುತ್ತದೆ. ನಡೆಯುವ ಸ್ಥಳದಲ್ಲಿ ಗಾಜಿನ ಹಾಸು ಹಾಕಿದ್ದು ಅದರಿಂದ ನೆಲವನ್ನು ನೋಡುವುದು ಒಂದು ಚೆಂದ. ದುಬೈ ಹೇಗೆ ಬೆಳವಣಿಗೆ ಕಂಡಿದೆ ಎಂಬುದನ್ನು ಹೊಸ ಮತ್ತು ಹಳೆಯ ನಗರ ನೋಡಿದರೆ ತಿಳಿಯ ಬಹುದಾಗಿದೆ.
ಗ್ಲೋಬಲ್ ವಿಲೇಜ್:ವಿಶಿಷ್ಟವಾದ ಸಾಂಸ್ಕೃತಿಕ ಮತ್ತು ಮನರಂಜನೆಯ ತಾಣ ದುಬೈನ ಗ್ಲೋಬಲ್ ವಿಲೇಜ್. ವಿಶ್ವದ 90 ದೇಶಗಳ ಸಂಸ್ಕೃತಿ, ಪರಂಪರೆ, ಆಹಾರ ಪದ್ಧತಿ, ವಸ್ತ್ರ, ವಿಶೇಷವಾದ ಉತ್ಪನ್ನಗಳನ್ನು ಆಯಾ ದೇಶದ ಪೆವಿಲಿಯನ್​ನಲ್ಲಿ ಕಾಣಬಹುದಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್​ನ ಇತಿಹಾಸವನ್ನು ಇಲ್ಲಿ ವೀಕ್ಷಿಸಬಹುದಾಗಿದೆ. ಇದು 16 ಲಕ್ಷ ಚದರ ಮೀಟರ್ ಜಾಗದಲ್ಲಿ ಪಸರಿಸಿದೆ. ಇಲ್ಲಿ 18,300 ವಾಹನಗಳ ರ್ಪಾಂಗ್​ಗೆ ಜಾಗವಿದೆ. 1997ರಲ್ಲಿ ಆರಂಭವಾದ ಗ್ಲೋಬಲ್ ವಿಲೇಜ್​ನಲ್ಲಿ 78 ಸಾಂಸ್ಕೃತಿಕ ಕೇಂದ್ರಗಳು, 26 ಪೆವಿಲಿಯನ್​ಗಳು, 300 ರೆಸ್ಟೋರೆಂಟ್​ಗಳು ಹಾಗೂ 3500 ರಿಟೇಲ್ ಕೇಂದ್ರಗಳಿವೆ. ಯಾವುದೇ ದೇಶದ ಯಾವುದೇ ಊಟ ಅಥವಾ ತಿಂಡಿ ಇಲ್ಲಿ ಲಭ್ಯ. ಯಾವುದೇ ದೇಶದ ಯಾವುದೇ ವಸ್ತು ಇಲ್ಲಿ ಕೂಡ ಸಿಗುತ್ತದೆ. ವರ್ಷಕ್ಕೆ 190 ದಿನಗಳ ಕಾಲ ತೆರೆದಿರುತ್ತದೆ. ರಂಜಾನ್ ಅವಧಿಯಲ್ಲಂತೂ ಇದೊಂದು ಮನರಂಜನೆಯ ಕೇಂದ್ರವಾಗುತ್ತದೆ. 25 ಗಿನ್ನಿಸ್ ದಾಖಲೆಗಳನ್ನು ಈ ಗ್ಲೋಬಲ್ ವಿಲೇಜ್ ಸೃಷ್ಟಿಸಿದೆ. ಇಲ್ಲಿರುವ ಭಾರತದ ಪೆವಿಲಿಯನ್ ಇತರೆ ದೇಶಗಳ ಪೆವಿಲಿಯನ್​ಗಿಂತ ದೊಡ್ಡದು. ಮಕ್ಕಳಿಗೆ ಎಲ್ಲ ರೀತಿಯ ಆಟದ ವ್ಯವಸ್ಥೆಯೂ ಇಲ್ಲಿದೆ.
ಪಾರಂಪರಿಕ ಪ್ರವಾಸ:ಪಾರಂಪಾರಿಕ ತಾಣಗಳಾದ ಡಗ್ಗೇರ್ ಮ್ಯೂಸಿಯಂ ಹಾಗೂ ಮಸೀದಿಗಳ ವೀಕ್ಷಣೆ ದುಬೈನ ಪರಂಪರೆ ತಿಳಿಸುತ್ತದೆ. ಇಲ್ಲಿನ ಕಲಾತ್ಮಕ ಕಿಟಕಿ, ಬಾಗಿಲುಗಳು ಇತಿಹಾಸ ತಿಳಿಸಿಕೊಡುತ್ತವೆ.
ಚಿತ್ರಕಲೆಯ ಅನುಭವ:ಅರೇಬಿಕಾ ಕ್ಯಾಲಿಗ್ರಫಿಯಲ್ಲಿ ಚಿತ್ರಗಳ ರಚನೆಯ ಅನುಭವವನ್ನು ಎಸ್​ಎಂಸಿಸಿಯು ನಲ್ಲಿ ಪಡೆಯಬಹುದಾಗಿದೆ. ಇಲ್ಲಿನ ಶಿಕ್ಷಕರು ನಿಮ್ಮಿಂದಲೇ ಚಿತ್ರ ಬರೆಸುತ್ತಾರೆ. ಚಿತ್ರಕಲೆಯ ಅನುಭವ ಇಲ್ಲದವರು ಸಹ ಇಲ್ಲಿ ದಿಢೀರ್ ವರ್ಣಚಿತ್ರಗಳನ್ನು ಬರೆದು ತಾವೂ ಕಲಾವಿದರಾಗಬಹುದು. ದುಬೈನಲ್ಲಿ ವೀಕ್ಷಣೆಯೋಗ್ಯ ಇನ್ನೂ ಅನೇಕ ತಾಣಗಳಿವೆ. ಫರ್ಫ್ಯೂಮ್ ಖರ್ಜೂರ, ಬಂಗಾರ ಖರೀದಿಗೆ ಅವಕಾಶಗಳಿವೆ. ಇಲ್ಲಿನ ರಸ್ತೆಗಳಲ್ಲಿ ಓಡಾಡುತ್ತಿದ್ದರೆ ಅದರ ಚೆಂದ ವರ್ಣಿಸಲು ಸಾಧ್ಯವಿಲ್ಲ. ಸಮುದ್ರದ ನೀರನ್ನೇ ಶುದ್ಧೀಕರಿಸಿ ಕುಡಿಯುವುದಕ್ಕೂ ಬಳಸಲಾಗುತ್ತದೆ. ಒಟ್ಟಾರೆ ದುಬೈ ನಿಜಕ್ಕೂ ಪ್ರವಾಸಿಗರ ಸ್ವರ್ಗವೇ ಆಗಿದೆ.
ಸ್ವಯಂಪ್ರೇರಿತ ವೇಶ್ಯಾವೃತ್ತಿ ಕಾನೂನುಬದ್ಧ ಎಂದ ಸುಪ್ರೀಂಕೋರ್ಟ್; ಪೊಲೀಸರು ಕೇಸ್​ ದಾಖಲಿಸುವಂತಿಲ್ಲ..

ಶೂಟ್​ ಮಾಡ್ಕೊಂಡು ಉದ್ಯಮಿ ಆತ್ಮಹತ್ಯೆ; ಡೆತ್​ನೋಟ್​ನಲ್ಲಿತ್ತು ಆ ಇಬ್ಬರ ಹೆಸರು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 3 =
Remember me
