ಅಭಿವೃದ್ಧಿ ಎಂದರೆ ಕೇವಲ ಚಮಕ್-ದಮಕ್ ಅಲ್ಲ. ಬಡವರ, ದಮನಿತರ, ಆದಿವಾಸಿಗಳ, ಮಹಿಳೆಯರ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಬಲೀಕರಣ. ಅಡ್ಡದಾರಿಗಳಿಂದ ಜನರಿಗಾಗಲಿ, ದೇಶಕ್ಕಾಗಲಿ ಪ್ರಯೋಜನವಿಲ್ಲ.
|ನರೇಂದ್ರ ಮೋದಿಪ್ರಧಾನಿ
ಮೇಲಿನ ಈ ಮಾತನ್ನು ನಮ್ಮ ಹೆಮ್ಮೆಯ ಪ್ರಧಾನಿಗಳು ಆಡಿರುವುದು ಮೂರು ದಿನಗಳ ಹಿಂದಷ್ಟೆ. ತಮ್ಮನ್ನು ಲೋಕಸಭೆಗೆ ಆರಿಸಿ ಕಳಿಸಿರುವ ವಾರಾಣಸಿ (ಕಾಶಿ) ಯಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಂದರ್ಭವು ಅವರು ತಮ್ಮ ರಾಜಕೀಯ ಚಿಂತನೆಗಳನ್ನು ಹಂಚಿಕೊಳ್ಳಲು ಒಂದು ನಿಮಿತ್ತವಾಗಿ ಒದಗಿ ಬಂದಿತಷ್ಟೆ. ಆದರೆ, ಈ ಮಾತು ಕೇವಲ ಗಿಲೀಟಿನ ಉದ್ದೇಶದ್ದಲ್ಲ. ಬದಲಿಗೆ, ತಮ್ಮ ಕಲ್ಪನೆಯ ನವಭಾರತ ನಿರ್ವಣದ ಮಹೋದ್ದೇಶದ ಹಿಂದಿರುವ ತತ್ತ್ವ ಮತ್ತು ಮುನ್ನೋಟಗಳೇನು ಎನ್ನುವುದನ್ನು ಹೇಳುತ್ತದೆ. ಜತೆಗೆ, ಈ ದೇಶದ ಬಗ್ಗೆ ಮೋದಿಯವರಿಗೆ ಮತ್ತು ಅವರು ತಮ್ಮ ದಾರ್ಶನಿಕ ನಾಯಕತ್ವದೊಂದಿಗೆ ಮುನ್ನಡೆಸುತ್ತಿರುವ ಬಿಜೆಪಿ ಹಾಗೂ ಎನ್​ಡಿಎ ಕೂಟಕ್ಕೆ ಇರುವ ಕಳಕಳಿ ಎಷ್ಟೊಂದು ಜನಪರ ಮತ್ತು ಸಮಗ್ರ ದೃಷ್ಟಿಕೋನದಿಂದ ಕೂಡಿದೆ ಎನ್ನುವುದಕ್ಕೆ ಮೇಲಿನ ಒಂದು ಮಾತಿಗಿಂತ ಹೆಚ್ಚಿನ ವಿವರಣೆಗಳೇನೂ ಬೇಕಿಲ್ಲ.
ಸಾಮಾನ್ಯವಾಗಿ ಆಳುವವರಿಗೆ ಒಡೆದು ಆಳುವ ಬುದ್ಧಿ ಇರಬೇಕು ಎನ್ನುವ ನಕಾರಾತ್ಮಕ ನಂಬಿಕೆ ನಮ್ಮ ವ್ಯವಸ್ಥೆಯಲ್ಲಿ ಬಹಳ ದೀರ್ಘಕಾಲದಿಂದ ಬೇರೂರಿದೆ. ಕೇವಲ ರಾಜಕೀಯ ಲಾಭ-ನಷ್ಟಗಳನ್ನೇ ಲೆಕ್ಕ ಹಾಕುವ ಆಳುವವರು ಮತ್ತು ಸಂಕುಚಿತವಾಗಿ ಯೋಚಿಸುವ ಅಧಿಕಾರಶಾಹಿಗಳು ತಮ್ಮ ಅಪವಿತ್ರ ಮೈತ್ರಿಯ ಮೂಲಕ ಸೃಷ್ಟಿಸಿರುವ ಅಪಾಯಕಾರಿ ಮನೋಭಾವವಿದು. ಇದು ಇನ್ನೊಂದು ರೀತಿಯಲ್ಲಿ, ವಸಾಹತುಶಾಹಿ ಮನೋಭಾವದ ಮುಂದುವರಿಕೆ. ದೇಶವು ಪರಕೀಯ ಆಳ್ವಿಕೆಯಿಂದ ವಿಮೋಚನೆ ಹೊಂದಿ, ಇಷ್ಟು ದಶಕಗಳಾದರೂ ಇಂಥ ಆತ್ಮನಾಶಕ ಮನೋಭಾವವೇ ತಾಂಡವವಾಡುತ್ತಿರುವುದು ವಿಷಾದದ ಸಂಗತಿ.
ಆದರೆ, ದೇಶದ ಬಗ್ಗೆ ಚಾರಿತ್ರಿಕವೆನ್ನಿಸುವಂತಹ ತುಡಿತ ಮತ್ತು ಅಂತರಂಗದಲ್ಲಿ ಸಕಾರಾತ್ಮಕ ತುಮುಲವುಳ್ಳ ಒಬ್ಬ ದ್ರಷ್ಟಾರ, ಒಬ್ಬ ಯೋಗಿ, ಒಬ್ಬ ರಾಜನೀತಿಜ್ಞ ಇದನ್ನೆಲ್ಲ ಬದಲಿಸಿ ಬಿಡಬಲ್ಲ ಎನ್ನುವುದಕ್ಕೆ ಕಳೆದ ಎಂಟು ವರ್ಷಗಳಲ್ಲಿ ಭಾರತದ ಉದ್ದಗಲಕ್ಕೂ ಬೀಸುತ್ತಿರುವ ಪರಿವರ್ತನೆಯ ತಂಗಾಳಿಯೇ ಸಾಕ್ಷಿ. ಇದನ್ನು ಸಾಧ್ಯವಾಗಿಸಿರುವುದು ನರೇಂದ್ರ ಮೋದಿ! ಇಂತಹ ಸಂಸ್ಕೃತಿಗೆ ಭದ್ರ ಮತ್ತು ಸವೋದಯ ದೃಷ್ಟಿಯ ದೇಶ ನಿರ್ವಣಕ್ಕೆ ಬುನಾದಿ ಹಾಕಿರುವ ಶ್ರೇಯಸ್ಸು ಚಿಂತನಶೀಲ ರಾಜನೀತಿಯಲ್ಲಿ ನಮ್ಮೆಲ್ಲರ ಪೂರ್ವಸೂರಿಗಳಾಗಿರುವ ಶಾಮಪ್ರಸಾದ್ ಮುಖರ್ಜಿ, ದೀನ್​ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣ ಆಡ್ವಾಣಿ ಅವರಂತಹ ಘಟಾನುಘಟಿಗೆಳಿಗೆ ಸಲ್ಲುತ್ತದೆ. ಎರಡು ದಶಕಗಳ ಹಿಂದೆ ಕೂಡ ಎನ್​ಡಿಎ ಸರ್ಕಾರವಿದ್ದಾಗಲೇ ಎಪಿಜೆ ಅಬ್ದುಲ್ ಕಲಾಂ ಅವರಂತಹ ಅನುಪಮ ವ್ಯಕ್ತಿಯೊಬ್ಬರು ದೇಶದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸುವುದು ಸಾಧ್ಯವಾಯಿತು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಇದೇ ರೀತಿಯಲ್ಲಿ ಮೋದಿಯವರು ಕೂಡ ಐದು ವರ್ಷಗಳ ಹಿಂದೆ ಒಮ್ಮತಾಭಿಪ್ರಾಯ ರೂಪಿಸಿ, ದಲಿತ ಸಮುದಾಯದಿಂದ ಬಂದ ರಾಮನಾಥ್ ಕೋವಿಂದ್ ಅವರಂತಹ ನಿಸ್ಪೃರೊಬ್ಬರು ಈ ದೇಶದ ಪ್ರಥಮ ಪ್ರಜೆಯಾಗಿ ವಿರಾಜಮಾನರಾಗಲು ಕಾರಣರಾದರು
ಈಗ ದೇಶವು ನೂತನ ರಾಷ್ಟ್ರಪತಿಗಳ ಆಯ್ಕೆಯ ಹೊಸ್ತಿಲಿನಲ್ಲಿದ್ದು, ಮೋದಿಯವರು ಎಂದಿನಂತೆಯೇ ತಮ್ಮ ಅಸಾಧಾರಣ ಚಿಂತನೆಯ ಮೂಸೆಯಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ದ್ರೌಪದಿ ಮುಮು ಅವರನ್ನು ಈ ಸ್ಥಾನಕ್ಕೆ ಎನ್​ಡಿಎ ಕೂಟದ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಈ ಮೂಲಕ ಕೇವಲ ಇಂಗ್ಲಿಷ್ ಬಲ್ಲವರು, ಹೊರದೇಶಗಳಲ್ಲಿ ಕಲಿತವರು, ಸೂಟು-ಬೂಟು ಹಾಕಿಕೊಂಡು ದಿವಿನಾಗಿರುವವರು ಮಾತ್ರ ರಾಷ್ಟ್ರಪತಿ ಸ್ಥಾನಕ್ಕೆ ಅರ್ಹರು ಎನ್ನುವ ಎಲೀಟ್ ಪರಿಕಲ್ಪನೆಯನ್ನೇ ಅವರು ಬುಡಮೇಲು ಮಾಡಿದ್ದಾರೆ. ಸಂತಾಲ್ ಬುಡಕಟ್ಟು ಸಮುದಾಯಕ್ಕೆ ಸೇರಿದ ದ್ರೌಪದಿ ಮುಮು ಅವರೇನೂ ಬೆಳ್ಳಿ ಚಮಚೆ ಇಟ್ಟುಕೊಂಡು ಹುಟ್ಟಿದವರಲ್ಲ. ಅವರದು ತೀರಾ ಸಾಧಾರಣವಾದ ಸಾದಾ-ಸೀದಾ ಬದುಕು. ಆದರೆ, ಅವರು ತಮ್ಮ ಪ್ರಾಂಜಲ ವ್ಯಕ್ತಿತ್ವದ ಮೂಲಕ ಸಾಧನೆಯ ಒಂದೊಂದೇ ಮೆಟ್ಟಿಲುಗಳನ್ನು ಕ್ರಮಿಸುತ್ತ, ಈಗ ಶಿಖರಪ್ರಾಯ ಸ್ಥಾನದ ಸನಿಹಕ್ಕೆ ಬಂದಿದ್ದಾರೆ. ಇದಕ್ಕಾಗಿ ಅವರು ತಮ್ಮ ಜೀವಮಾನದ ಅಮೂಲ್ಯವಾದ 25 ವರ್ಷಗಳನ್ನು ಸಾರ್ವಜನಿಕ ಬದುಕಿಗೆ ವಿನಿಯೋಗಿಸಿದ್ದಾರೆ. ಇಷ್ಟಾಗಿಯೂ ನಮ್ಮ ಕಾಲದ ಹೆಚ್ಚಿನವರಂತೆ ಭ್ರಷ್ಟಗೊಳ್ಳದೆ, ತುಂಬಿದ ಕೊಡದಂತಿದ್ದಾರೆ. ಏಕೆಂದರೆ, ಇವರು ಈ ನೆಲದ ನೈಜ ಸುಪುತ್ರಿ; ಇಲ್ಲಿಯ ಸಂಸ್ಕೃತಿಯ ಅರ್ಹ ಪ್ರತಿನಿಧಿ! ಪಂಚಾಯಿತಿ, ಪುರಸಭೆ, ವಿಧಾನಸಭೆ, ರಾಜಭವನ ಇತ್ಯಾದಿಗಳನ್ನೆಲ್ಲ ಈ ಕಾಲಾವಧಿಯಲ್ಲಿ ಕಂಡಿರುವ ಇವರು, ಎಂದೂ ಜನಸಮುದಾಯಗಳ ಹಿತವನ್ನು ಮರೆತಿಲ್ಲ; ತತ್ತಾ್ವದರ್ಶಗಳನ್ನು ಮೀರಿಲ್ಲ.
ಬೇಸರದ ಸಂಗತಿಯೆಂದರೆ, ನಮ್ಮ ರಾಜಕೀಯದಲ್ಲಿ ಸುಸಂಸ್ಕೃತಿ ಮರೆವಿಗೆ ಸಂದಿದೆ. ಏಕೆಂದರೆ, ಮುಮು ಅವರ ಆಯ್ಕೆಯನ್ನು ಎಲ್ಲ ಪಕ್ಷಗಳೂ ಮುಕ್ತವಾಗಿ ಸ್ವಾಗತಿಸಿ, ರಾಷ್ಟ್ರಪತಿಗಳ ಅವಿರೋಧ ಆಯ್ಕೆ ಆಗುವಂತೆ ಮಾಡುವ ಒಂದು ಅಪೂರ್ವ ಅವಕಾಶ ಮುಕ್ತವಾಗಿತ್ತು. ಇದು ಸಂಭವಿಸಿದ್ದರೆ, ನಮ್ಮ ಪ್ರಜಾಸತ್ತೆಯ ಸೌಂದರ್ಯ ಇಮ್ಮಡಿಸುತ್ತಿತ್ತು. ಆದರೆ, ವಿಪಕ್ಷಗಳು ಎಲ್ಲವನ್ನೂ ಹಣಾಹಣಿಯೆಂದು ಭಾವಿಸುವ ಲೆಕ್ಕಾಚಾರದಲ್ಲಿ ಮುಳುಗಿರುವುದರಿಂದ ಹೃದಯದ ಮಾತಿಗೆ ಕಿವಿಗೊಡುವವರ ಸಂತತಿ ಇಲ್ಲವಾಗಿದೆ.
ಮೋದಿಯವರು ಎಂಟು ವರ್ಷಗಳ ಹಿಂದೆ ಪ್ರಧಾನಿಯಾದ ಕೂಡಲೇ ಸಮರೋಪಾದಿಯಲ್ಲಿ ಇಟ್ಟ ಮೊದಲ ಹೆಜ್ಜೆಯೆಂದರೆ, ಮಹಿಳಾ ಸಬಲೀಕರಣ. ಶೌಚಾಲಯ ನಿರ್ವಣ, ಉಜ್ವಲ ಉಚಿತ ಗ್ಯಾಸ್ ವಿತರಣೆ, ಮಾತೃವಂದನಾ, ಬೇಟಿ ಬಚಾವೋ ಬೇಟಿ ಪಢಾವೋ ಮುಂತಾದ ಚಾರಿತ್ರಿಕ ಯೋಜನೆ ಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸಿದ ಹಿರಿಮೆ ಅವರದು. ಈ ಜೈತ್ರಯಾತ್ರೆಯು ಈಗ ಅನಾಮಿಕ ಸಮುದಾಯದ ಮಹಿಳೆಯನ್ನು ರಾಷ್ಟ್ರಪತಿ ಸ್ಥಾನದವರೆಗೂ ತಂದು ನಿಲ್ಲಿಸುವಂತೆ ಮಾಡಿದೆ.
ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾಗಿರುವ ದ್ರೌಪದಿ ಮುಮು ಅವರು ರಾಜ್ಯದ ಜನಪ್ರತಿನಿಧಿಗಳ ಬೆಂಬಲ ಕೋರಲು ಇಂದು (ಭಾನುವಾರ) ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರನ್ನು ನಾನು ಏಳು ಕೋಟಿ ಕನ್ನಡಿಗರ ಪರವಾಗಿ ಗೌರವಾದರಗಳಿಂದ ಬರಮಾಡಿಕೊಳ್ಳುತ್ತೇನೆ. ಅವರ ಗೆಲುವು ನಿಚ್ಚಳವಾಗಿದೆ. ಅವರು ಅಧಿಕೃತವಾಗಿ ರಾಷ್ಟ್ರಪತಿಯ ಸ್ಥಾನದಲ್ಲಿ ವಿರಾಜಮಾನರಾಗಲಿ; ದೇಶದ ದಮನಿತರು, ಅಂಚಿನಲ್ಲಿರುವವರು, ಸ್ತ್ರೀಯರು, ಪರಿಶಿಷ್ಟ ಜಾತಿ ಮತ್ತು ವರ್ಗಗಳು, ನೂರಾರು ವನವಾಸಿ ಸಮುದಾಯಗಳ ಕೋಟ್ಯಂತರ ಜನರಿಗೆ ದನಿ ನೀಡುವ ಇಚ್ಛಾಶಕ್ತಿಯ ಸ್ರೋತ ಬಾನೆತ್ತರ ಚಿಮ್ಮಲಿ! ಇದು ಕೇವಲ ಕೆಲವರ ಭಾರತವಲ್ಲ; ನಮ್ಮೆಲ್ಲರ ಭಾರತ!! ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು ಎನ್ನುವ ಉದಾತ್ತ ಆಶಯಕ್ಕೆ ಬದ್ಧವಾಗಿರುವ ಭಾರತ!!!
(ಲೇಖಕರು ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 6 =
Remember me
