ಒಂದೆರಡು ವಾರಗಳಲ್ಲಿ ಮುಗಿದುಹೋಗಬಹುದು ಎಂಬ ನಿರೀಕ್ಷೆ ಮೂಡಿಸಿದ್ದ ರಷ್ಯಾ-ಯೂಕ್ರೇನ್ ಯುದ್ಧ ವರ್ಷ ಪೂರೈಸಿಯೇಬಿಟ್ಟಿತು. ಯುದ್ಧ ನಿಲುಗಡೆ ಕುರಿತಾಗಿ ಸತತ 49ನೆಯ ಬಾರಿಗೆ ವಿಶ್ವಸಂಸ್ಥೆಯಲ್ಲಿ ಪ್ರಸ್ತಾವನೆ ಮಂಡಿತವಾಗಿ, ಚರ್ಚೆಯಾಗಿ, ಮತದಾನವೂ ನಡೆದು ಪ್ರಸ್ತಾವನೆ ಅಂಗೀಕೃತವೂ ಆಯಿತು. ಯುದ್ಧ ಎರಡನೆಯ ವರ್ಷಕ್ಕೆ ಕಾಲಿಟ್ಟ ಫೆಬ್ರವರಿ 24ರಂದು ಜರುಗಿದ ಆ ಮತದಾನದಲ್ಲಿ 131 ಪರ, 7 ವಿರುದ್ಧ ಮತಗಳು ಬಿದ್ದವು. ಮತದಾನದಲ್ಲಿ ಗೈರುಹಾಜರಾದ 37 ದೇಶಗಳಲ್ಲಿ ಭಾರತವೂ ಒಂದು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಯಾವುದೇ ನಿರ್ಣಯ ಯಾವುದೇ ಯುದ್ಧವನ್ನು ನಿಲುಗಡೆಗೆ ತಂದ ಉದಾಹರಣೆಯಿಲ್ಲ. ಹೀಗಾಗಿ ಈ ನಿರ್ಣಯವೂ ಫಲ ನೀಡುವುದು ಕನಸಿನ ಮಾತು. ಯುದ್ಧೋತ್ಸಾಹಿ ರಷ್ಯಾ ಮತ್ತು ಯೂಕ್ರೇನ್​ಗಳು ಹಾಗೂ ದೂರದಲ್ಲಿ ನಿಂತು ಬೆಂಕಿಗೆ ತುಪ್ಪಸುರಿಯುತ್ತಿರುವ ಪಶ್ಚಿಮದ ದೇಶಗಳು ಮನಸು ಮಾಡಬೇಕಷ್ಟೇ. ಅದಂತೂ ಸದ್ಯದಲ್ಲಿ ಆಗುವ ಹಾಗೆ ಕಾಣುತ್ತಿಲ್ಲ.
ಹಾಗೆ ನೋಡಿದರೆ ಯುದ್ಧ ಆರಂಭಕ್ಕೆ ಕಾರಣವಾದ ವಿಷಯಗಳು ಇಂದಿಗೂ ಹಾಗೇ ಇವೆ. ರಷ್ಯಾದ ರಕ್ಷಣಾ ಕಾಳಜಿಗಳನ್ನು ಯೂಕ್ರೇನ್ ಆಗಲೀ, ಅದರ ಬೆನ್ನಿಗೆ ನಿಂತಿರುವ ಅಮೆರಿಕಾ ಮತ್ತು ಯುರೋಪಿಯನ್ ದೇಶಗಳಾಗಲೀ ಅರ್ಥಮಾಡಿಕೊಳ್ಳುತ್ತಿಲ್ಲ; ಯೂಕ್ರೇನ್ ತನ್ನ ನಾಝಿ ಕುರುಹುಗಳನ್ನು ಪೂರ್ಣವಾಗಿ ಬಿಟ್ಟುಕೊಡುತ್ತಿಲ್ಲ ಮತ್ತು ಪೂರ್ವದ ದಾನ್​ಬಾಸ್ ಪ್ರದೇಶದ ಬಹುಸಂಖ್ಯಾತ ರಷ್ಯನ್ ಭಾಷಿಗರ ಹಿತಾಸಕ್ತಿಗಳನ್ನು ಕಿಯೆವ್ ಗೌರವಿಸುತ್ತಿಲ್ಲ. ಇದಾವುದೂ ಆಗದೇ ಯುದ್ಧ ನಿಲ್ಲದು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹೇಳುತ್ತಲೇ ಇದ್ದಾರೆ. ತಮ್ಮ ನಿಲುವಿನಿಂದ ಹಿಂದೆ ಸರಿಯುವ ಜಾಯಮಾನ ಅವರದ್ದಲ್ಲ.
ವಿಶೇಷ ಸೇನಾ ಕಾರ್ಯಾಚರಣೆ ಎಂಬ ಹೆಸರಿನಲ್ಲಿ ಫೆಬ್ರವರಿ 24, 2022ರಂದು ಯೂಕ್ರೇನ್​ನ ಉತ್ತರ ಮತ್ತು ಪೂವೋತ್ತರ ಗಡಿಗಳಲ್ಲಿ ರಷ್ಯನ್ ಸೇನೆ ಒಳನುಗ್ಗಿದ 24 ಗಂಟೆಗಳಲ್ಲಿ ರಾಜಧಾನಿ ಕಿಯೆವ್ ನಗರದ ಹೊರವಲಯದಲ್ಲಿತ್ತು. ಇನ್ನು 24 ಗಂಟೆಗಳಲ್ಲಿ ಕಿಯೆವ್ ನಗರದ ಪತನ ನಿಶ್ಚಿತ ಎನ್ನುವುದರಲ್ಲಿ ಅನುಮಾನವೇ ಕಾಣಲಿಲ್ಲ. ಹಾಗೆಯೇ ಅನುಮಾನಿಸಿದ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಯೂಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್​ಸ್ಕಿ ಅವರನ್ನು ಸುರಕ್ಷಿತವಾಗಿ ಹೊರಕರೆದೊಯ್ಯುವ ಪ್ರಸ್ತಾಪ ಮಾಡಿದರು. ಆದರೆ ಅದನ್ನು ತಿರಸ್ಕರಿಸಿದ ಝೆಲೆನ್​ಸ್ಕಿ ತಮಗೆ ಬೇಕಾಗಿರುವುದು ‘ಖುಷಿಯ ಸವಾರಿ’ ಅಲ್ಲ, ಬದಲಿಗೆ ಶತ್ರುವನ್ನು ಸಮರ್ಥವಾಗಿ ಎದುರಿಸಿ ಹಿಮ್ಮೆಟ್ಟಿಸಲು ಶಸ್ತ್ರಾಸ್ತ್ರಗಳು ಎಂದು ಘೊಷಿಸಿ ದೇಶಬಾಂಧವರನ್ನು ಹುರಿದುಂಬಿಸತೊಡಗಿದರು. ಅವರ ನಿಲುವು ನಿಜವಾದ ಕಲಿತನವೋ ಅಥವಾ ಭಂಡ ಧೈರ್ಯದ್ದೋ ಎಂದು ಜಗತ್ತು ಅನುಮಾನಿಸಿತ್ತು. ಆದರೆ ಮುಂದಿನ ಒಂದುವಾರದ ಬೆಳವಣಿಗೆಗಳು ಯುದ್ಧದ ನಾಡಿಮಿಡಿತವನ್ನು ಆ ಮಾಜಿ ವಿದೂಷಕ-ನಟ ಸರಿಯಾಗಿಯೇ ಗ್ರಹಿಸಿದ್ದರು ಎಂದು ತೋರಿಸಿದವು. ರಷ್ಯನ್ ಸೇನೆ ಬಂದಂತೇ ರಾಜಧಾನಿಯಿಂದ ಹಿಂದಕ್ಕೆ ಸರಿದುಹೋಯಿತು.
ಝೆಲೆನ್​ಸ್ಕಿ ಆತ್ಮವಿಶ್ವಾಸಕ್ಕೆ ಕಳೆದ ಆರು ತಿಂಗಳಲ್ಲಿ ಮೂರು ಕಂತುಗಳಲ್ಲಿ ಅಮೆರಿಕಾ ತಂದು ಸುರಿದಿದ್ದ ಶಸ್ತ್ರಾಸ್ತ್ರಗಳು ಮುಖ್ಯ ಕಾರಣ ಎನ್ನುವುದನ್ನು ಅಲ್ಲಗಳೆಯಲಾಗದು. ಇದರರ್ಥ ರಷ್ಯನ್ ದಾಳಿಯನ್ನು ಝೆಲೆನ್​ಸ್ಕಿ ಮೊದಲೇ ನಿರೀಕ್ಷಿಸಿದ್ದರು, ಅದಕ್ಕಾಗಿ ತಯಾರಿಯನ್ನೂ ಮಾಡಿಕೊಳ್ಳುತ್ತಲೇ ಬಂದಿದ್ದರು, ಆ ತಯಾರಿಯಲ್ಲಿ ಅಮೆರಿಕಾ ಉದ್ದೇಶಪೂರ್ವಕವಾಗಿ ದೊಡ್ಡ ಪಾತ್ರವನ್ನೇ ವಹಿಸಿತ್ತು. ಇದು ಯುದ್ಧದ ಮೂಲದತ್ತ ಸ್ಪಷ್ಟವಾಗಿ ಬೆರಳುಮಾಡುತ್ತದೆ.
1990-91ರಲ್ಲಿ ಘಟಿಸಿದ ಕಮ್ಯೂನಿಸ್ಟ್ ಬಣದ ಪತನ ಮತ್ತು ಸೋವಿಯೆತ್ ಛಿದ್ರೀಕರಣ ಜಾಗತಿಕ ರಾಜಕಾರಣವನ್ನು ಏಕಶೃಂಗಿಯಾಗಿಸಿ ಅದರಲ್ಲಿ ಅಮೆರಿಕಾವನ್ನು ಉತ್ತುಂಗ ಸ್ಥಾನದಲ್ಲಿರಿಸಿತು. ಆ ಹುಮ್ಮಸ್ಸಿನಲ್ಲಿ ವಾಷಿಂಗ್​ಟನ್ ನೇತೃತ್ವದ ಸೇನಾಕೂಟ ನ್ಯಾಟೊವನ್ನು ಪೂರ್ವಾಭಿಮುಖವಾಗಿ ವಿಸ್ತರಿಸಲು ಬಿಲ್ ಕ್ಲಿಂಟನ್ ಮತ್ತು ಜಾರ್ಜ್ ಬುಷ್ ಜ್ಯೂ. ಆಡಳಿತಗಳು ಪ್ರಯತ್ನಿಸಿದ್ದು ಸೋವಿಯತ್ ಉತ್ತರಾಧಿಕಾರಿ ರಷ್ಯಾವನ್ನು ಇನ್ನಷ್ಟು ಬಲಹೀನಗೊಳಿಸುವ ತಂತ್ರವಾಗಿತ್ತು, ಮಹಾಶಕ್ತಿಯ ಅಹಂಕಾರವಾಗಿತ್ತು. ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಸಮರ್ಥವಾಗಿ ಪ್ರತಿಕ್ರಿಯಿಸುವ ಚೈತನ್ಯ ರಶಿಯಾಗಿರಲಿಲ್ಲ. ಹೀಗಾಗಿ ಮಾಜಿ ಕಮ್ಯೂನಿಸ್ಟ್ ದೇಶಗಳಾದ ಪೊಲೆಂಡ್, ಝೆಕ್ ರಿಪಬ್ಲಿಕ್, ಸ್ಲೊವಾಕಿಯಾ, ಹಂಗೆರಿ, ರುಮೇನಿಯಾ ಮತ್ತು ಬಲ್ಗೇರಿಯಾಗಳಲ್ಲದೇ ತನ್ನದೇ ಭಾಗಗಳಾದ ಲಿಥುವೇನಿಯಾ, ಲಾತ್ವಿಯಾ ಮತ್ತು ಎಸ್ತೋನಿಯಾಗಳೂ ನ್ಯಾಟೋಗೆ ಸೇರಿಹೋಗುವುದನ್ನು, ಆ ಮೂಲಕ ಅಮೆರಿಕಾ ನೇತೃತ್ವದ ಸೇನಾ ಕೂಟ ಭೌಗೋಳಿಕವಾಗಿ ತನ್ನ ಮಗ್ಗುಲಿಗೇ ಬಂದು ನಿಂತದ್ದನ್ನು ಮಾಸ್ಕೋ ಸಹಿಸಿಕೊಳ್ಳಬೇಕಾಯಿತು. ಆದರೆ ಯೂಕ್ರೇನ್ (ಉಕ್ರೖೆನ್, ಉಕ್ರಯೀನ್) ಅನ್ನೂ ನುಂಗಲು ನ್ಯಾಟೋ ಹಂಚಿಕೆ ಹೂಡಿದಾಗ ಅದನ್ನು ಶತಾಯಗತಾಯ ತಡೆಯಲು ಅಧ್ಯಕ್ಷ ಪುತಿನ್ ಸಂಕಲ್ಪ ಮಾಡಿದರು. ಯೂರೋಪಿಯನ್ ಯೂನಿಯನ್​ಗೆ ಮುಖ್ಯವಾಗಿ ಜರ್ಮನಿಗೆ ಇಂಧನ ಪೂರೈಕೆ ದೊಡ್ಡದಾಗಿ ಆರಂಭವಾಗಿದ್ದ ಕಾರಣ ರಷ್ಯಾದ ಆದಾಯ ಹೆಚ್ಚಾಗಿತ್ತು, ಜತೆಗೆ ವರ್ಚಸ್ಸೂ. ಹೀಗಾಗಿ ಅಮೆರಿಕಾದ ಹುನ್ನಾರಗಳ ಹೊರತಾಗಿಯೂ ಕಿಯೆವ್​ನಲ್ಲಿ ತಮ್ಮ ಪರವಾದ ವಿಕ್ತರ್ ಯಾನುಕೋವಿಚ್ ಸರ್ಕಾರವನ್ನು ಸ್ಥಾಪಿಸುವುದರಲ್ಲಿ ಪುತಿನ್ ಯಶಸ್ವಿಯಾದರು. ಆದರೆ ಮುಂದಿನ ಆರು ವರ್ಷಗಳಲ್ಲಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಅವರ ಉಪವಿದೇಶಾಂಗ ಕಾರ್ಯದರ್ಶಿ ವಿಕ್ಟೋರಿಯಾ ನ್ಯೂಲ್ಯಾಂಡ್ ಅವರ ವ್ಯವಸ್ಥಿತ ಹುನ್ನಾರಗಳಿಂದಾಗಿ ಕಿಯೆವ್ ಮಾಸ್ಕೋ-ವಿರೋಧಿ ಆಡಳಿತಕ್ಕೆ ಒಳಪಟ್ಟಿತ್ತು. ಫೆಬ್ರವರಿ 2014ರ ಈ ಬೆಳವಣಿಗೆ ಯೂಕ್ರೇನ್ ನಾಳಿನ ಜಾಗತಿಕ ಕಾಳಗದ ಕಣವಾಗುವ ಮುನ್ಸೂಚನೆಯಾಗಿತ್ತು. ಅನಾಹುತವನ್ನು ಒಂದಷ್ಟು ಕಾಲ ಮುಂದೂಡಿದ್ದು ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ವಿವೇಕ. ರಷ್ಯಾವನ್ನು ಒಂದು ಮಿತಿಯಾಚೆಗೆ ಪ್ರಚೋದಿಸುವುದು ಉಚಿತವಲ್ಲ ಎಂದರಿತಿದ್ದ ಆ ವ್ಯವಹಾರತಜ್ಞ ಯೂಕ್ರೇನ್​ನ, ಮುಖ್ಯವಾಗಿ ಅಧ್ಯಕ್ಷ ಝೆಲೆನ್​ಸ್ಕಿಯವರ ನ್ಯಾಟೋ ಬಯಕೆಗೆ ಸೊಪ್ಪುಹಾಕಲಿಲ್ಲ. ಆದರೆ ಎಲ್ಲವು ಬದಲಾದದ್ದು ಡೆಮೋಕ್ರಾಟಿಕ್ ಪಕ್ಷದ ಜೋ ಬೈಡೆನ್ ಶ್ವೇತಭವನ ಪ್ರವೇಶಿಸಿದಾಗ.
ಇದನ್ನೂ ಓದಿ:ಯುವತಿಯನ್ನು 16 ಸಲ ಚುಚ್ಚಿ ಚುಚ್ಚಿ ಕೊಂದ ಹುಚ್ಚುಪ್ರೇಮಿ!; ಎದೆ, ಹೊಟ್ಟೆ, ಕುತ್ತಿಗೆಗೆ ಇರಿದು ಕೊಲೆ
ಯೂಕ್ರೇನ್ ನ್ಯಾಟೋಗೆ ಸೇರುವುದು ರಷ್ಯಾಗೆ ಸಾಮರಿಕವಾಗಿಯೂ ಆರ್ಥಿಕವಾಗಿಯೂ ಹಾನಿಕಾರಕ, ಹೀಗಾಗಿ ಅದನ್ನು ಮಾಸ್ಕೋದಲ್ಲಿನ ಯಾವುದೇ ದೇಶಾಭಿಮಾನಿ ಸರ್ಕಾರ ಸಹಿಸದು ಎಂಬ ವಾಸ್ತವದ ಅರಿವಿದ್ದೂ ಅಧ್ಯಕ್ಷ ಝೆಲೆನ್​ಸ್ಕಿ ಅವರ ನ್ಯಾಟೋ ಚಪಲಕ್ಕೆ ಬೈಡೆನ್ ನೀರೆರೆಯುವುದರಲ್ಲಿ ಅತ್ಯುತ್ಸಾಹ ತೋರಿದರು. ಇತ್ತ ಪುತಿನ್ ರಷ್ಯನ್ ಮತ್ತು ಯುಕ್ರೇನಿಯನ್ ಜನತೆಗಳ ನಡುವಿನ ಐತಿಹಾಸಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಆರ್ಥಿಕ ಬಾಂಧವ್ಯವನ್ನು ಮತ್ತೆಮತ್ತೆ ನೆನಪಿಸಿ, ಕಿಯೆವ್ ಸಾಮರಿಕವಾಗಿ ರಷ್ಯಾದಿಂದ ದೂರಹೋಗುವುದು ಎರಡೂ ದೇಶಗಳಿಗೆ ಹಾನಿಕಾರಕ ಎನ್ನುವುದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಾ ಹೋದರೆ ಅತ್ತ ಬೈಡೆನ್ ಯೂಕ್ರೇನ್​ಗೆ ಶಸ್ತ್ರಾಸ್ತ್ರಗಳನ್ನು ರವಾನಿಸುತ್ತಲೇ ಹೋದರು. ಅಂದರೆ ಯೂಕ್ರೇನನ್ನು ನ್ಯಾಟೋದಿಂದ ಹೊರಗಿಡಬೇಕಾದರೆ ಸೇನಾ ಕಾರ್ಯಾಚರಣೆಯೇ ಅಂತಿಮ ಮಾರ್ಗ ಎಂದು ಅಧ್ಯಕ್ಷ ಪುತಿನ್ ತೀರ್ವನಿಸಲೇಬೇಕಾದ ಸನ್ನಿವೇಶವನ್ನು ಬೈಡೆನ್ ಮತ್ತು ಝೆಲೆನ್​ಸ್ಕಿ ಸೃಷ್ಟಿಸಿದರು.
ಯುದ್ಧ ಸಾಗಿಬಂದ ಗತಿಯನ್ನು ಅವಲೋಕಿಸಿದರೆ ಕಂಡುಬರುವುದು ರಷ್ಯಾದ ದೃಢ ನಿಶ್ಚಯ, ಪಶ್ಚಿಮ ಯುರೋಪ್​ನ ಆಷಾಢಭೂತಿತನ, ಅಮೆರಿಕಾದ ಇಬ್ಬಂದಿತನ, ಮತ್ತು ಭಾರತದ ಧನಾತ್ಮಕ ನಡವಳಿಕೆ.
ರಷ್ಯಾದಿಂದ ನೈಸರ್ಗಿಕ ಅನಿಲ ಮತ್ತು ತೈಲದ ಆಮದನ್ನು ತಾವು ವೃದ್ಧಿಗೊಳಿಸುತ್ತಲೇ ಆ ದೇಶದಿಂದ ಅದೇ ವಸ್ತುಗಳನ್ನು ಖರೀದಿಸಕೂಡದೆಂದು ಭಾರತಕ್ಕೆ ತಾಕೀತು ಮಾಡಲು ಹೊರಟ ಯುರೋಪಿಯನ್ ಯೂನಿಯನ್​ನ ಆಷಾಢಭೂತಿತನವನ್ನು ಭಾರತದ ವಿದೇಶಾಂಗ ಮಂತ್ರಿ ಎಸ್. ಜೈಶಂಕರ್ ಆ ನೆಲದಲ್ಲೇ ಅವರಿಗೇ ಮನವರಿಕೆ ಮಾಡಿಕೊಟ್ಟರು. ಅಂತಿಮವಾಗಿ ಕಡಿಮೆ ಬೆಲೆಯಲ್ಲಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಭಾರತದ ಕ್ರಮವನ್ನು ಯುರೋಪ್ ಜತೆಗೆ ಅಮೆರಿಕಾ ಸಹ ಮನ್ನಿಸಲೇ ಬೇಕಾಯಿತು.
ನಂತರದ ತಿಂಗಳುಗಳಲ್ಲಿ ಯುರೋಪಿಗೆ ರಷ್ಯನ್ ನೈಸರ್ಗಿಕ ಅನಿಲದ ಹರಿಯುವಿಕೆ ಹಂತಹಂತವಾಗಿ ಕಡಿಮೆಯಾಗತೊಡಗಿತು. ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳುತ್ತಾ, ದಿನವೊಂದಕ್ಕೆ ಆ ದೇಶಕ್ಕೆ 800 ಮಿಲಿಯನ್ ಡಾಲರ್​ಗಳನ್ನು ತೆರುತ್ತಿದ್ದ ಯುರೋಪಿಯನ್ ದೇಶಗಳು ರಷ್ಯಾದ ಯುದ್ಧತಂತ್ರಕ್ಕೆ ಆ ಬಗೆಯ ಸಹಕಾರ ನೀಡುತ್ತಲೇ ಹೋಗುವುದು ಉಚಿತವಲ್ಲ ಎಂದು ನಿರ್ಧರಿಸಲೇಬೇಕಾಯಿತು. ತೈಲ ಮತ್ತು ಅನಿಲವನ್ನು ಒಂದು ಆಯುಧವನ್ನಾಗಿ ಬಳಸಲು ತೀರ್ವನಿಸಿದ ಅಧ್ಯಕ್ಷ ಪುತಿನ್ ನಾರ್ಡ್ ಸ್ಟ್ರೀಮ್ – 1ರ ಮೂಲಕ ಸಾಗುತ್ತಿದ್ದ ಅನಿಲದ ಹರಿವನ್ನು ಹಂತಹಂತವಾಗಿ ತಗ್ಗಿಸಿದರು. ಅದು ಕೊನೆಗೂ ನಿಂತದ್ದಕ್ಕೆ ಕಾರಣ ಸ್ಪಷ್ಟವಾಗಿ ಹೊರಬಂದಿಲ್ಲ. ಬಾಲ್ಟಿಕ್ ಸಮುದ್ರ ತಳದಲ್ಲಿನ ಕೊಳವೆಗಳನ್ನು ಅಮೆರಿಕಾ ಸೆಪ್ಟೆಂಬರ್ ತಿಂಗಳಲ್ಲಿ ರಹಸ್ಯವಾಗಿ ಹಾಳುಗೆಡವಿತು ಎಂಬ ಮಾತು ಇತ್ತೀಚೆಗೆ ಕೇಳಿಬಂತು.
ಇದನ್ನೂ ಓದಿ:ರಾಜ್ಯದ ಜನತೆಗೆ ರೈಲ್ವೇಯಿಂದ ಸಿಹಿಸುದ್ದಿ: ಇಲ್ಲೆಲ್ಲ ನಿಲ್ಲಲಿವೆ ಈ ರೈಲುಗಳು!
ಒಟ್ಟಿನಲ್ಲಿ ಈ ಯುದ್ಧ ಯೂರೋಪನ್ನು ಆರ್ಥಿಕವಾಗಿ ರಷ್ಯಾದಿಂದ ವಿಮುಖಗೊಳಿಸಿತು. ಇದರ ಲಾಭ ಪಡೆದದ್ದು ಅಮೆರಿಕಾ. ಯೂರೋಪ್​ನ ಇಂಧನ ಅಗತ್ಯದ ಒಂದು ದೊಡ್ಡ ಭಾಗವನ್ನು ಈಗ ಅಮೆರಿಕಾ ಪೂರೈಸಲಾರಂಭಿಸಿದೆ. ಅಂದರೆ ಹಿಂದೆ ಮಾಸ್ಕೋಗೆ ಹೋಗುತ್ತಿದ್ದ ಬಿಲಿಯನ್​ಗಟ್ಟಲೆ ಯೂರೋಗಳ ಒಂದು ದೊಡ್ಡ ಭಾಗ ವಾಷಿಂಗ್ಟನ್​ಗೆ ಹರಿಯುತ್ತಿದೆ. ಇದರೊಂದಿಗೆ ಇದುವರೆಗೆ ಬೈಡೆನ್ ಆಡಳಿತ ಯೂಕ್ರೇನ್​ಗೆ ನೀಡಿರುವ ಸುಮಾರು 50 ಬಿಲಿಯನ್ ಡಾಲರ್ ಮೊತ್ತದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವುದು ಅಮೆರಿಕಾದ ಮಿಲಿಟರಿ-ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್. ಒಟ್ಟಿನಲ್ಲಿ ಅಮೆರಿಕಾದ ಕೈಗಾರಿಕೋದ್ಯಮಿಗಳು ಮತ್ತು ವ್ಯವಹಾರಗಾರರು ಹಣವನ್ನು ಬಾಚಿಕೊಳ್ಳುತ್ತಿದ್ದಾರೆ.
ಮತ್ತೂ ಒಂದು ಆಸಕ್ತಿಕರ ವಿಷಯವೆಂದರೆ ಯೂರೋಪ್ ಇಂದಿಗೂ ತನ್ನ ಅಣುಶಕ್ತಿ ಉತ್ಪಾದನಾ ಸಾಮಗ್ರಿಗಳ 26% ಭಾಗವನ್ನು ಮತ್ತು ಅಮೆರಿಕ ತನ್ನ ಅಗತ್ಯದ 15%ನ್ನು ರಷ್ಯಾದಿಂದ ಪೂರೈಸಿಕೊಳ್ಳುತ್ತಿವೆ.
ಈಗ ಭಾರತದ ರಾಜತಂತ್ರದತ್ತ ನೋಟ ಹರಿಸೋಣ. ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮತ್ತು ಸಿಐಎ ನಿರ್ದೇಶಕರೇ ಅಧಿಕೃತವಾಗಿ ಒಪ್ಪಿಕೊಂಡಂತೆ ಯೂಕ್ರೇನ್ ಮೇಲೆ ಸಣ್ಣ ಪ್ರಮಾಣದ ಅಣ್ವಸ್ತ್ರಗಳನ್ನು ಪ್ರಯೋಗಿಸುವ ರಷ್ಯಾದ ಯತ್ನವನ್ನು ಭಾರತ ತಡೆದಿದೆ! ಹೀಗೆ ಮಾಡುವ ಮೂಲಕ ಮಾನವತೆಗಾಗಿ ಭಾರತ ದೊಡ್ಡ ಕಾಣಿಕೆ ನೀಡಿದೆ. ಇಷ್ಟೇ ಅಲ್ಲ, ಇದು ಯುದ್ಧಕ್ಕೆ ಸಮಯವಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷ ಪುತಿನ್​ರಿಗೆ ನೇರವಾಗಿಯೇ ಹೇಳಿದ್ದಾರೆ.
ರಷ್ಯಾಗೆ ಬುದ್ಧಿವಾದ ಹೇಳುತ್ತಲೇ ಅದರ ಯುದ್ಧೋತ್ಸಾಹ ತಗ್ಗಿಸುವ, ಆ ಮೂಲಕ ಯೂಕ್ರೇನಿಯನ್ನರ ಹಿತಾಸಕ್ತಿಗಳನ್ನು ಕಾಪಾಡುವ ಕ್ರಮಗಳನ್ನು ಭಾರತ ಮತ್ತೆಮತ್ತೆ ಕೈಗೊಳ್ಳುತ್ತಲೇ ಇದ್ದರೆ ಅಮೆರಿಕಾ ಮತ್ತು ಅದರ ಯುರೋಪಿಯನ್ ಮಿತ್ರರು ಯೂಕ್ರೇನ್​ಗೆ ಶಸ್ತ್ರಾಸ್ತ್ರಗಳನ್ನು ತಂದು ಸುರಿಯುತ್ತಾ ಅಧ್ಯಕ್ಷ ಝೆಲೆನ್​ಸ್ಕಿಯ ಹುಂಬತನವನ್ನು ವೃದ್ಧಿಸುತ್ತಿದ್ದಾರೆ. ಪರಿಣಾಮವಾಗಿ ರಷ್ಯಾ ಕ್ರುದ್ಧಗೊಂಡು ಯುದ್ಧವನ್ನು ವಿಸ್ತರಿಸುವ ಕ್ರಮಗಳನ್ನು ಹುಡುಕುವಂತಾಗಿದೆ. ಅಂದರೆ ಯುದ್ಧ ನಿಲುಗಡೆ ಪಶ್ಚಿಮಕ್ಕೆ ಬೇಕಾಗಿಲ್ಲ. ಮುಂದೇನು?
ಇದನ್ನೂ ಓದಿ:ಮಗನ ಕಾಟ ತಾಳಲಾಗದೇ ಆತನನ್ನು ಬರ್ಬರವಾಗಿ ಕೊಲೆ ಮಾಡಿದ ತಂದೆ!
ಯುದ್ಧ ನಿಲುಗಡೆಗಾಗಿ ಹಲವು ಪ್ರಸ್ತಾಪಗಳು ಈಗಾಗಲೇ ಬಂದಿವೆ. ಅವುಗಳಲ್ಲಿ ಪ್ರಮುಖವಾದದು ಉದ್ಯಮಿ ಎಲಾನ್ ಮಸ್ಕ್ ಸೂಚಿಸಿದ ಯೋಜನೆ. ಆ ಪ್ರಕಾರ ಕದನಸ್ತಂಭನ ಜಾರಿಯಾಗಬೇಕು, ರಷ್ಯನ್ನರು ಬಹುಸಂಖ್ಯಾತರಾಗಿರುವ ಮತ್ತು ರಷ್ಯಾದ ಸಾಮರಿಕ ಹಾಗೂ ಆರ್ಥಿಕ ಅಗತ್ಯಗಳಿಗೆ ಮುಖ್ಯವೆನಿಸುವ ಕ್ರಿಮಿಯಾ ಪರ್ಯಾಯ ದ್ವೀಪದ ಮೇಲೆ ಮಾಸ್ಕೋದ ಅಧಿಕಾರವನ್ನು ಯೂಕ್ರೇನ್ ಒಪ್ಪಿಕೊಳ್ಳಬೇಕು, ರಷ್ಯಾ ಆಕ್ರಮಿಸಿಕೊಂಡಿರುವ ದೊನಿಯೆತ್ಜ್, ಲಹಾನ್​ಸ್, ಝುಫರೋಝಿಯ ಮತ್ತು ಖೆಸೋನ್​ಗಳಲ್ಲಿ ಜನಮತಗಣನೆ ಮೂಲಕ ಅವುಗಳ ಭವಿಷ್ಯ ನಿರ್ಧಾರವಾಗಬೇಕು ಎಂದಾಗಿತ್ತು. ವ್ಯಾವಹಾರಿಕವಾಗಿಯೇ ಕಂಡ ಈ ಪ್ರಸ್ತಾಪಗಳನ್ನು ಯೂಕ್ರೇನ್ ಅಲ್ಲದೇ ಪಶ್ಚಿಮ ಜಗತ್ತು ಸಹ ತಿರಸ್ಕರಿಸಿತು. ಈಗ ಚೀನಾದಿಂದ ಬಂದಿರುವ ಪ್ರಸ್ತಾಪದಲ್ಲಿ ರಷ್ಯಾದ ರಕ್ಷಣಾ ಕಾಳಜಿಗಳನ್ನು ಪಶ್ಚಿಮದ ಜಗತ್ತು ಗುರುತಿಸಬೇಕು ಎನ್ನುವುದು ಎದ್ದುಕಾಣುತ್ತದೆ. ಈ ಪ್ರಸ್ತಾಪದ ಬಗ್ಗೆ
ಝೆಲೆನ್​ಸ್ಕಿ ಆಸಕ್ತಿ ತಳೆದಿರುವಂತಿದೆ. ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಜತೆ ಮಾತುಕತೆ ನಡೆಸುವ ತಯಾರಿಯನ್ನು ಅವರು ಮಾಡಿಕೊಳ್ಳುತ್ತಿದ್ದಾರೆ. ಈ ಭೇಟಿ ಏಪ್ರಿಲ್​ನಲ್ಲಿ ಜರುಗಬಹುದು. ಅಮೆರಿಕಾ ಮತ್ತು ಯೂರೋಪ್ ಏನು ಮಾಡಬಹುದು? ಯುದ್ಧವನ್ನು ಮುಂದುವರಿಸಲು ಯೂಕ್ರೇನಿಯನ್ನರ ಹೆಗಲ ಮೇಲೆ ಬಂದೂಕು ಇಟ್ಟು ರಷ್ಯಾದತ್ತ ಗುಂಡು ಹಾರಿಸುವ ಅವರ ನೀತಿಗಳು ಅವರನ್ನು ಇನ್ನು ಯಾವ ಹೊಸ ತಂತ್ರಗಳಿಗೆ ಪ್ರೇರೇಪಿಸಬಹುದು? ಏಪ್ರಿಲ್ ಇನ್ನೂ ದೂರವಿದೆ!
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 19 =
Remember me
