ಶಿಮ್ಲಾ:ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಕಾಂಗ್ರೆಸ್​ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆಕಾಂಕ್ಷಿಗಳ ಬೆಂಬಲಿಗರು ಶಿಮ್ಲಾದಲ್ಲಿ ಶುಕ್ರವಾರ ಕಾಂಗ್ರೆಸ್ ಶಾಸಕರ ಸಭೆಗೂ ಮುನ್ನ ತಮ್ಮ ನಾಯಕರ ಪರವಾಗಿ ಘೋಷಣೆಗಳನ್ನು ಕೂಗಿ ಹೈಡ್ರಾಮಾ ಮಾಡಿದರು.
ಈ ಹುದ್ದೆಯ ಪ್ರಮುಖ ಆಕಾಂಕ್ಷಿಗಳಲ್ಲಿ ಒಬ್ಬರಾದ ಪ್ರತಿಭಾ ಸಿಂಗ್ ಬೆಂಬಲಿಗರು ಶಾಸಕರ ಸಭೆ ನಡೆಯಲಿದ್ದ ಶಿಮ್ಲಾದ ಒಬೆರಾಯ್ ಸಿಸಿಲ್ ಹೋಟೆಲ್ ಹೊರಗೆ ಜಮಾಯಿಸಿ ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಕಾರನ್ನು ಅಡ್ಡಗಟ್ಟಿದ್ದಾರೆ. ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿ ಆಯ್ಕೆ ಜವಾಬ್ದಾರಿಯನ್ನು ಬಘೇಲ್ ಅವರಿಗೆ ವಹಿಸಿದೆ. ಕಳೆದ ವರ್ಷ ನಿಧನರಾದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಅವರನ್ನು ಈ ವರ್ಷದ ಆರಂಭದಲ್ಲಿ ಪಕ್ಷದ ರಾಜ್ಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಮುಖ್ಯಮಂತ್ರಿ ಆಯ್ಕೆ ಕುರಿತಂತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹಿರಿಯ ನಾಯಕ ರಾಜೀವ್ ಶುಕ್ಲಾ ಹೇಳಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಪ್ರತಿಭಾ ಸಿಂಗ್ ಅವರಲ್ಲದೆ ಸುಖ್ವಿಂದರ್ ಸಿಂಗ್ ಸುಖು, ಮುಕೇಶ್ ಅಗ್ನಿಹೋತ್ರಿ ಮತ್ತು ಹರ್ಷವರ್ಧನ್ ಚೌಹಾಣ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ವಿದೇಶಿ ಮಾಧ್ಯಮಗಳಲ್ಲಿ ಫಲಿತಾಂಶ
ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್​ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ದಾಖಲಿಸಿರುವ ಬಗ್ಗೆ ಜಾಗತಿಕ ಸುದ್ದಿ ವಾಹಿನಿಗಳು ವ್ಯಾಪಕವಾಗಿ ವರದಿ ಮಾಡಿವೆ. ಸಿಂಗಾಪುರದ ಸ್ಟ್ರೈಟ್ಸ್ ಟೈಮ್್ಸ , ದಿ ನಿಕ್ಕಿ ಏಷ್ಯಾ, ಅಲ್ ಜಜೀರಾ, ಇಂಡಿಪೆಂಡೆಂಟ್, ಎಬಿಸಿ ನ್ಯೂಸ್ ವಾಹಿನಿಗಳು ಗುಜರಾತ್​ನಲ್ಲಿ ಬಿಜೆಪಿ ವಿಜಯದ ಸಂಭ್ರಮಾಚರಣೆಯ ಫೋಟೊ ಪ್ರಕಟಿಸಿವೆ. 2024ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಪಕ್ಷದ ನಿರಂತರ ಜನಪ್ರಿಯತೆಯ ಸಂಕೇತವಾಗಿ ಪ್ರಧಾನಿ ಮೋದಿ ಅವರು ತಮ್ಮಪಕ್ಷಕ್ಕೆ ಮಹತ್ವದ ಉತ್ತೇಜನ ನೀಡಿದ್ದಾರೆ ಎಂದು ಬ್ರಿಟನ್​ನ ದಿ ಗಾರ್ಡಿಯನ್ ವರದಿ ಮಾಡಿದೆ. 1985ರಿಂದ ಗುಜರಾತ್​ನಲ್ಲಿ ಬಿಜೆಪಿ ಸೋಲದಿರುವುದಕ್ಕೆ ಕಾರಣ ಏನೆಂಬುದನ್ನು ಉಲ್ಲೇಖಿಸಿರುವ ಜಪಾನ್​ನ ನಿಕ್ಕಿ ಏಷ್ಯಾ, ಗುಜರಾತ್ ರಾಜ್ಯದಲ್ಲಿ ಪ್ರಧಾನಿ ಮೋದಿಯವರ ಜನಪ್ರಿಯತೆಯೇ ಈ ಸತತ ಗೆಲುವಿಗೆ ಕಾರಣ ಎಂದು ಹೇಳಿದೆ. ‘ ಪಿಎಂ ಮೋದಿ ಬಿಜೆಪಿಯ ಪ್ರಚಾರಕ್ಕೆ ತಮ್ಮ ಸ್ಟಾರ್ ಪವರ್ ನೀಡಿದ್ದಾರೆ. ಗುಜರಾತ್​ನಲ್ಲಿ ಹುಟ್ಟಿದ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಬಹುತೇಕ ನಿವಾಸಿಗಳು ಹೆಮ್ಮೆ ಪಡುತ್ತಾರೆ ಎಂದು ಜಪಾನ್​ನ ದಿನಪತ್ರಿಕೆ ಹೇಳಿದೆ. ಗುಜರಾತ್​ನ ಈ ಗೆಲುವು 2024ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ಬಿಜೆಪಿಗೆ ದೊಡ್ಡ ಉತ್ತೇಜವಾಗಿದೆ ಎಂದು ಬ್ರಿಟನ್​ನ ದಿ ಇಂಡಿಪೆಂಡೆಂಟ್ ತಿಳಿಸಿದೆ. ಜವಾಹರ್​ಲಾಲ್ ನೆಹರು ವಿಶ್ವವಿದ್ಯಾಲಯದ ಪ್ರೊಫೆಸರ್ ಅಜಯ್ ಗುಡವರ್ತಿ ಅವರು ಅಲ್ ಜಜೀರಾ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ, ಗುಜರಾತ್​ನಲ್ಲಿ ಬಿಜೆಪಿಯ ಈ ಅನುಕೂಲಕರ ಗೆಲುವು ಹಿಂದು ಮತಗಳ ಆಳವಾದ ಕ್ರೋಢಿಕರಣ ತೋರಿಸುತ್ತದೆ ಎಂದರು.
15 ಕ್ಷೇತ್ರಗಳಲ್ಲಿ ಕೈಗೆ ಕಡಿಮೆ ಅಂತರದ ಗೆಲುವು
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು 15 ಸ್ಥಾನಗಳಲ್ಲಿ 2 ಸಾವಿರಕ್ಕಿಂತ ಕಡಿಮೆ ಗೆಲುವಿನ ಅಂತರ ಹೊಂದಿದ್ದಾರೆ. ಭೋರಂಜ್, ಸುಜನ್ಪುರ್, ದಾರಂಗ್, ಬಿಲಾಸ್ಪುರ, ಶ್ರೀನೈನಾದೇವಿ, ರಾಂಪುರ, ಶಿಲ್ಮೈ ಮತ್ತು ಶ್ರೀರೇಣುಕಾಜಿಯಲ್ಲಿ ಎರಡು ಪಕ್ಷಗಳ ಅಭ್ಯರ್ಥಿಗಳು ಪಡೆದ ಮತಗಳ ಸಂಖ್ಯೆಯಲ್ಲಿನ ವ್ಯತ್ಯಾಸ ಸಾವಿರಕ್ಕಿಂತ ಕಡಿಮೆ ಇದೆ. ಹಿಮಾಚಲ ಪ್ರದೇಶ ಗುಡ್ಡಗಾಡು ಪ್ರದೇಶ ಆಗಿರುವ ಕಾರಣ ಇಲ್ಲಿನ ಜನಸಂಖ್ಯೆ ಕೂಡ ಕಡಿಮೆ ಇದೆ ಎಂಬುದು ಗಮನಾರ್ಹ ಸಂಗತಿ.
ಅಳಿಯನನ್ನು ಸೋಲಿಸಿದ ಮಾವ
ಹಿಮಾಚಲ ಪ್ರದೇಶದ ಸೋಲನ್ ಕ್ಷೇತ್ರದಲ್ಲಿ ಮಾವ ಡಾ. ದನಿ ರಾಮ್ ಶಾಂಡಿಲ್ (ಕಾಂಗ್ರೆಸ್) ಮತ್ತು ಅಳಿಯ ಡಾ. ರಾಜೇಶ್ ಕಶ್ಯಪ್ (ಬಿಜೆಪಿ) ಪರಸ್ಪರ ಸ್ಪರ್ಧಿಸಿದ್ದರು. ಮಾವ ಶಾಂಡಿಲ್ ತಮ್ಮ ಅಳಿಯನ ವಿರುದ್ಧ ಗೆಲುವು ಸಾಧಿಸಿದ್ದಾರೆ. 2017ರ ಚುನಾವಣೆಯಲ್ಲೂ ಇವರಿಬ್ಬರು ಕಣದಲ್ಲಿದ್ದರು. ಆಗಲೂ ಮಾವ ಶಾಂಡಿಲ್ ಅವರೇ ಗೆಲುವು ಸಾಧಿಸಿದ್ದರು.
ಬಿಜೆಪಿಯ ಆರು ಶಾಸಕರ ಠೇವಣಿಗೆ ಕುತ್ತು
ಗುಜರಾತ್​ನಲ್ಲಿ ಬಿಜೆಪಿಯ ರಾಜ್ಯ ಸಚಿವರು ಸೇರಿದಂತೆ ಏಳು ಹಾಲಿ ಶಾಸಕರು ಚುನಾವಣೆಯಲ್ಲಿ ಸೋತಿದ್ದಾರೆ. ಬನಸ್ಕಾಂತ್ ಜಿಲ್ಲೆಯ ಕಾಂಕ್ರೇಜ್ ಕ್ಷೇತ್ರದಿಂದ ಪ್ರಾಥಮಿಕ, ಪ್ರೌಢಶಿಕ್ಷಣ ಶಿಕ್ಷಣ ಸಚಿವ ಕೀರ್ತಿಸಿನ ವಘೇಲಾ, ಮತ್ತೊಬ್ಬ ಕ್ಯಾಬಿನೆಟ್ ದರ್ಜೆಯ ಸಚಿವ ಬಾಬು ಬೋಖಿರಿಯಾ, ವಿಜಾಪುರದ ಶಾಸಕ ರಾಮನ್ ಪಟೇಲ್ , ಹಾಲಿ ಶಾಸಕ ಮಹೇಶ್ ರಾವಲ್ , ಭಾವನಗರ ಜಿಲ್ಲೆಯ ಗರಿಯಾದರ್ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿದ್ದ ಕೇಶು ನಕ್ರಾಣಿ , ಮಧು ಶ್ರೀವಾಸ್ತವ್, ಅಶ್ವಿನಿ ಪಟೇಲ್ ಸೋತಿದ್ದು, ಠೇವಣಿ ಕಳೆದುಕೊಂಡಿದ್ದಾರೆ.
ಬಿಲ್ಕಿಸ್ ಬಾನೊ ಪ್ರದೇಶದಲ್ಲಿ ಬಿಜೆಪಿ ಗೆಲುವು
2002ರ ಗೋಧ್ರಾ ದಂಗೆಯ ಸಂತ್ರಸ್ತೆ ಬಿಲ್ಕಿಸ್ ಬಾನೊ ವಾಸಿಸುತ್ತಿದ್ದ ಗುಜರಾತ್​ನ ದಾಹೋಡ್ ಜಿಲ್ಲೆಯ ಲಿಮ್ಕೇಡಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಶೈಲೇಶ್ ಭಭೋರ್ 4 ಸಾವಿರ ಮತಗಳ ಅತರದಿಂದ ಗೆಲುವು ಸಾಧಿಸಿದ್ದಾರೆ. ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳನ್ನು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವುದನ್ನು ಹಿಂಪಡೆಯುವುದಾಗಿ ಭರವಸೆ ನೀಡಿದ್ದ ಪ್ರತಿಪಕ್ಷ ಕಾಂಗ್ರೆಸ್​ನ ಅಭ್ಯರ್ಥಿ 8 ಸಾವಿರ ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ. ಬಾನೊ ಅವರು ದಾಹೋಡ್ ಜಿಲ್ಲೆಯ ರಂಧಿಕ್​ಪುರ ಗ್ರಾಮದ ನಿವಾಸಿಯಾಗಿದ್ದರು.
ಅಹ್ಮದಾಬಾದ್​ಗೆ ಬಿಎಸ್​ವೈ
ಗುಜರಾತ್ ಸಿಎಂ ಆಯ್ಕೆಗಾಗಿ ಬಿಜೆಪಿ ಹೈಕಮಾಂಡ್ ಸಮಿತಿ ರಚಿಸಿದ್ದು, ಅದರಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಥಾನ ಪಡೆದಿದ್ದಾರೆ. ಗುಜರಾತ್ ಶಾಸಕಾಂಗ ಪಕ್ಷದ ನಾಯಕ ಆಯ್ಕೆಗೆ ನೇಮಕ ಆಗಿರುವ ವೀಕ್ಷಕರಲ್ಲಿ ಒಬ್ಬರಾಗಿರುವ ಬಿಎಸ್​ವೈ ಅಹ್ಮದಾಬಾದ್​ಗೆ ಶುಕ್ರವಾರ ಪ್ರಯಾಣ ಬೆಳೆಸುವ ಮುನ್ನ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಸಮಿತಿಯಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಕೂಡ ಇದ್ದಾರೆ. ನೀವೂ ಬರಬೇಕೆಂದು ಕರೆಬಂತು. ಹೀಗಾಗಿ ಅಹ್ಮದಾಬಾದ್​ಗೆ ಹೊರಟಿರುವೆ ಎಂದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × three =
Remember me
