| ರಾಘವ ಶರ್ಮ ನಿಡ್ಲೆ ನವದೆಹಲಿ
ಮುಂಬರುವ ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಎಂದೇ ಪರಿಗಣಿಸಲಾಗಿದ್ದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಹಿಂದಿ ಹೃದಯಭೂಮಿಗಳಾದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಗಢ ರಾಜ್ಯಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಸರಿಪಡೆಗೆ ಏಪ್ರಿಲ್-ಮೇ ತಿಂಗಳ ಲೋಕಸಭೆ ಮಹಾಸಮರಕ್ಕೆ ಬಹುದೊಡ್ಡ ಬೂಸ್ಟರ್ ಸಿಕ್ಕಂತಾಗಿದೆ. ತೆಲಂಗಾಣದಲ್ಲಿ ಸಿಎಂ ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್​ಎಸ್​ನ್ನು ಸೋಲಿಸಿ ಮೊದಲ ಬಾರಿಗೆ ಗೆಲುವು ಸಾಧಿಸಿರುವ ಕಾಂಗ್ರೆಸ್, ಕರ್ನಾಟಕದ ಗೆಲುವನ್ನು ದಕ್ಷಿಣದ ಮತ್ತೊಂದು ರಾಜ್ಯಕ್ಕೆ ವಿಸ್ತರಿಸಿದೆ. ಆದರೆ, ಮೂರು ರಾಜ್ಯಗಳ ಸೋಲು ತೆಲಂಗಾಣ ಗೆಲುವಿನ ಸಂಭ್ರಮವನ್ನು ಮರೆಮಾಚಿಸಿಬಿಟ್ಟಿದೆ.
ಲೋಕಸಭೆ ಸಮರಕ್ಕೆಂದು ಹೊಸದಾಗಿ ಇಂಡಿಯಾ ಮೈತ್ರಿಕೂಟ ರಚನೆ ಮಾಡಿದ ಕಾಂಗ್ರೆಸ್ ಮತ್ತಿತರ ಮಿತ್ರ ಪಕ್ಷಗಳಿಗೆ ಹಿಂದಿ ರಾಜ್ಯಗಳ ಫಲಿತಾಂಶ ಮರ್ವಘಾತ ತಂದಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢದಲ್ಲಿ ಒಟ್ಟು 65 ಲೋಕಸಭೆ ಕ್ಷೇತ್ರಗಳಿದ್ದು, 2019ರಲ್ಲಿ ಬಿಜೆಪಿ 63 ಸೀಟುಗಳನ್ನು ಬಾಚಿಕೊಂಡಿತ್ತು. ಇಂಡಿಯಾ ಮೈತ್ರಿಕೂಟಕ್ಕೆ ಕಡಿವಾಣ ಹಾಕಬೇಕೆಂದರೆ ಈ ಮೂರೂ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಕಂಡುಕೊಳ್ಳುವುದು ಬಿಜೆಪಿಗೆ ಅನಿವಾರ್ಯವಾಗಿತ್ತು. ಇಂಥದ್ದೊಂದು ಪ್ರಬಲ ಸವಾಲನ್ನು ಎದುರಿಸಿ, ಗೆದ್ದು ಬೀಗಿರುವುದು ಸಹಜವಾಗಿಯೇ ಬಿಜೆಪಿ ಕಾರ್ಯಕರ್ತ ಪಡೆಯ ಹುಮ್ಮಸ್ಸನ್ನು ದುಪ್ಪಟ್ಟುಗೊಳಿಸಲಿದೆ. ಈ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಗೆ ತಯಾರಾಗಲು ಪಕ್ಷಕ್ಕೆ ಹೊಸ ಶಕ್ತಿ ಸಿಕ್ಕಂತಾಗಿದೆ.
ಮೇಲಾಗಿ, ದೇಶ ಈಗಲೂ ಪ್ರಧಾನಿ ಮೋದಿ ನಾಯಕತ್ವವನ್ನು ಬಲವಾಗಿ ನಂಬಿದೆ ಎಂಬ ಸಂದೇಶವೂ ರವಾನೆಯಾಗಿದೆ. ಮೂರು ರಾಜ್ಯಗಳಲ್ಲಿ ಬಿಜೆಪಿ ಸಿಎಂ ಅಭ್ಯರ್ಥಿ ಘೊಷಿಸಲಿಲ್ಲ. ಸ್ಥಳೀಯ ನಾಯಕತ್ವದ ಸ್ಪಷ್ಟತೆ ಇಲ್ಲದಿದ್ದರೂ, ಮೋದಿ ಜನಪ್ರಿಯತೆ ಮತ್ತು ಅಭಿವೃದ್ಧಿಕೇಂದ್ರಿತ ಆಡಳಿತಕ್ಕೆ ಆದ್ಯತೆ ನೀಡಿರುವುದನ್ನು ಜನ ಸ್ವೀಕರಿಸಿದ್ದಾರೆ ಎಂಬುದನ್ನು ಫಲಿತಾಂಶ ತಿಳಿಸಿದೆ. ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿರುವ ಹಿನ್ನೆಲೆ ಲೋಕಸಭೆ ಚುನಾವಣೆಯನ್ನೂ ಅತ್ಯಂತ ವಿಶ್ವಾಸದಿಂದ ಎದುರಿಸಲು ಪಕ್ಷಕ್ಕೆ ಸಹಕಾರಿಯಾಗಲಿದ್ದು, ವಿಪಕ್ಷಗಳ ಮುಂದೆ ದೈತ್ಯ ಸವಾಲು ಸೃಷ್ಟಿಯಾಗಲಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ಹೀನಾಯವಾಗಿ ಮುಗ್ಗರಿಸಿರುವುದು ಇಂಡಿಯಾ ಮೈತ್ರಿಪಡೆ ಬಲವನ್ನೂ ತಗ್ಗಿಸಲಿದೆ. ಇಂಡಿಯಾ ಮೈತ್ರಿಕೂಟಕ್ಕೆ ತನ್ನದೇ ನಾಯಕತ್ವವಿರಬೇಕು ಎಂದು ಕಾಂಗ್ರೆಸ್ ನಾಯಕರು ಒಳಗೊಳಗೇ ಪ್ರತಿಪಾದಿಸುತ್ತಿದ್ದರು. ಆದರೆ, ಈ ಸೋಲು ಪಕ್ಷದ ನೈತಿಕಸ್ಥೈರ್ಯವನ್ನು ಕಸಿದುಕೊಂಡಿದ್ದು, ಪ್ರಾದೇಶಿಕ ಪಕ್ಷಗಳೆದುರು ಮಂಡಿಯೂರುವಂತೆ ಮಾಡಲಿದೆ.
ಈಗಾಗಲೇ ಇಂಡಿಯಾದಲ್ಲಿ ಒಂದೊಂದೇ ಬಿರುಕು ಕಾಣಿಸಿಕೊಂಡಿದ್ದು, ಬಂಗಾಳದ ಟಿಎಂಸಿ ಮುಖಂಡರಂತೂ ಇದು ಬಿಜೆಪಿಯ ಯಶಸ್ಸಲ್ಲ, ಕಾಂಗ್ರೆಸ್​ನ ಸಂಪೂರ್ಣ ವೈಫಲ್ಯ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ ತನ್ನ ‘ಜಮೀನ್ದಾರಿ ಮನಸ್ಥಿತಿ’ಯಿಂದ ಹೊರಬರಬೇಕು ಮತ್ತು ಸಿಎಂ ಮಮತಾ ಬ್ಯಾನರ್ಜಿಯವರಂತಹ ಹಿರಿಯ ನಾಯಕರ ಅನುಭವ ಪಡೆದುಕೊಂಡು, ಕಾರ್ಯಗತಗೊಳಿಸಬೇಕು ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಕುನಾಲ್ ಘೊಷ್ ಹೇಳಿದ್ದಾರೆ. ಲೋಕಸಭೆ ಚುನಾವಣೆ ಮೇಲೆ ಈ ಫಲಿತಾಂಶ ಯಾವುದೇ ಪರಿಣಾಮ ಬೀರದು ಎಂದು ಎನ್​ಸಿಪಿ ನಾಯಕ ಶರದ್ ಪವಾರ್ ಅಭಿಪ್ರಾಯಪಟ್ಟಿದ್ದರೂ, ವಾಸ್ತವ ಹಾಗಿಲ್ಲ ಎನ್ನುವುದು ಪವಾರ್ ಸಾಹೇಬರಿಗೂ ತಿಳಿದಿದೆ.

ರಾಹುಲ್, ಖರ್ಗೆಗೂ ಸವಾಲು:ಲೋಕಸಭೆ ಚುನಾವಣೆಗೆ ರಾಹುಲ್ ವಿಪಕ್ಷಗಳ ನಾಯಕನಾಗುವ ಹಾದಿ ಮತ್ತಷ್ಟು ಕಠಿಣಗೊಳ್ಳಲಿದೆ. ಈ ಫಲಿತಾಂಶದ ನಂತರ ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ ಆದಿಯಾಗಿ ಬಹುಪಾಲು ನಾಯಕರು ರಾಹುಲ್ ಗಾಂಧಿಯವರನ್ನು ನಾಯಕ ಎಂದು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ. ರಾಷ್ಟ್ರೀಯ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಈ ಫಲಿತಾಂಶ ಚಿಂತೆಗೀಡು ಮಾಡಲಿದೆ. ಪ್ರಿಯಾಂಕಾ ಗಾಂಧಿ ಕೂಡ ಈ ಮೂರು ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರವಾಸ ಮಾಡಿ, ಪ್ರಚಾರ ಮಾಡಿದ್ದರು. ಅವರಿಂದಲೂ ಮ್ಯಾಜಿಕ್ ಸಾಧ್ಯವಾಗಿಲ್ಲ. ಹೀಗಾಗಿ, ಇಂಡಿಯಾ ಮೈತ್ರಿಕೂಟದ ನಾಯಕರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪ್ರತಿಪಾದನೆಗಳಿಗೆ ಎಷ್ಟರಮಟ್ಟಿಗೆ ಮಹತ್ವ ನೀಡಬಲ್ಲರು ಎಂಬುದೂ ಸದ್ಯದ ಪ್ರಶ್ನೆ. ಈ ಹಿನ್ನೆಲೆಯಲ್ಲಿ ಡಿ.6ರ ಮುಂದಿನ ಇಂಡಿಯಾ ಮೈತ್ರಿಕೂಟ ಸಭೆ ಮಹತ್ವಪಡೆದುಕೊಂಡಿದೆ. ಹಾಗೆ ನೋಡಿದರೆ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಗಢದಲ್ಲಿ ಬಿಜೆಪಿ ಪ್ರಚಂಡ ಬಹುಮತ ಗಳಿಸಲಿದೆ ಎಂದು ಭಾವಿಸಿದವರು ಕಡಿಮೆ. ಆದರೆ, ಪಿಎಂ ಮೋದಿ ಜನಪ್ರಿಯತೆ, ಸಾಮೂಹಿಕ ನಾಯಕತ್ವ, ಆರ್​ಎಸ್​ಎಸ್- ಬಿಜೆಪಿ ಕಾರ್ಯಕರ್ತರ ವ್ಯವಸ್ಥಿತ ಪ್ರಚಾರ, ಮೋದಿ-ಅಮಿತ್ ಷಾ ಸಂದೇಶಗಳನ್ನು ಚಾಚೂತಪ್ಪದೆ ಪಾಲಿಸಿದ್ದು ಮತ್ತು ಸ್ಥಳೀಯ ನಾಯಕರ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಗೆಲ್ಲುವುದೊಂದೇ ಗುರಿ ಎಂಬ ಮಂತ್ರದೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ ಕಾರಣ ಬಿಜೆಪಿ ಐತಿಹಾಸಿಕ ವಿಜಯಕ್ಕೆ ಸಾಕ್ಷಿಯಾಗಿದೆ. ಛತ್ತೀಸ್​ಗಢ ಸಿಎಂ, ಒಬಿಸಿ ನಾಯಕ ಭೂಪೇಶ್ ಬಗೇಲ್ ನಾಯಕತ್ವದ ಕಾಂಗ್ರೆಸ್ ಮತ್ತೆ ಅಧಿಕಾರ ಸ್ಥಾಪಿಸಲಿದೆ ಎಂದು ಬಹುತೇಕ ಸಮೀಕ್ಷೆಗಳೂ ಹೇಳಿದ್ದವು. ಆದರೆ, ಫಲಿತಾಂಶ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದೆ. ಕರ್ನಾಟಕಕ್ಕೆ ಮುನ್ನ ಛತ್ತೀಸ್​ಗಢದಲ್ಲಿ ಉಚಿತ ಯೋಜನೆಗಳ ಮೂಲಕ ಗಮನಸೆಳೆದಿದ್ದ ಸಿಎಂ ಬಗೇಲ್, ತಮ್ಮ ಜನಪ್ರಿಯತೆ ಕಾರಣದಿಂದಲೇ ಪಕ್ಷ ಗೆಲ್ಲಿಸುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ರಾಜ್ಯದ ಒಬಿಸಿ, ಬುಡಕಟ್ಟು ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಬಿಜೆಪಿಯ ಸಾಮಾಜಿಕ ಸಮೀಕರಣವೇ ಕಾಂಗ್ರೆಸ್​ನ್ನು ನೆಲಕಚ್ಚಿಸಿದೆ.
ದಲಿತ ಮತ್ತು ಬುಡಕಟ್ಟು ವಿರೋಧಿ ಪಕ್ಷ ಬಿಜೆಪಿ ಎಂಬ ರಾಜಕೀಯ ನಿರೂಪಣೆ ತೇಲಿಬಿಡುತ್ತಿತ್ತು. ಮೇಲಾಗಿ, ಬಿಜೆಪಿ ವಿರುದ್ಧ ಜಾತಿಗಣತಿಯ ಅಸ್ತ್ರವನ್ನೂ ಪ್ರಯೋಗಿಸಿತ್ತು. ಆದರೆ, ಮಧ್ಯಪ್ರದೇಶ, ಛತ್ತೀಸ್​ಗಢ ಎರಡೂ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ/ಪಂಗಡಗಳ ಪ್ರಾಬಲ್ಯವಿರುವ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ಕಾಂಗ್ರೆಸ್​ನ ಎಸ್​ಸಿ/ಎಸ್​ಟಿ ಸ್ಥಾನಗಳು ಕಡಿಮೆಯಾದಂತೆ, ಬಿಜೆಪಿಯ ಸಂಖ್ಯೆ ಹೆಚ್ಚಾಗಿದೆ. ಅಂದರೆ, ಜಾತಿಗಣತಿ ಅಸ್ತ್ರವಾಗಲೀ, ಎಸ್ಸಿ/ಎಸ್ಟಿ ವಿರೋಧಿ ಎಂಬ ರಾಜಕೀಯ ನಿರೂಪಣೆಯಾಗಲೀ ಕಾಂಗ್ರೆಸ್ ಪರ ಕೆಲಸ ಮಾಡಿಲ್ಲ ಎನ್ನುವುದು ಫಲಿತಾಂಶದಿಂದ ದೃಢವಾಗಿದೆ. ಜಾತಿಗಣತಿ ವಿಷಯ ಲೋಕಸಭೆ ಚುನಾವಣೆಯಲ್ಲೂ ಅಬ್ಬರಿಸಲಿದೆ ಎನ್ನುವುದು ಹಲವು ರಾಜಕೀಯ ಪಂಡಿತರ ಅನಿಸಿಕೆಯಾಗಿತ್ತು. ಬಿಜೆಪಿ ಜಾತಿಗಣತಿ ಪರ ಒಲವು ವ್ಯಕ್ತಪಡಿಸಿಲ್ಲ. ಹೀಗಾಗಿ, ಚುನಾವಣೆಯಲ್ಲಿ ಇದು ಪಕ್ಷದ ಹಿನ್ನಡೆಗೆ ಕಾರಣವಾಗಬಹುದು ಎಂಬ ಅಭಿಪ್ರಾಯಗಳು ಈಗ ಸುಳ್ಳಾಗಿವೆ. ಒಂದುವೇಳೆ ಜಾತಿಗಣತಿ ಬಗ್ಗೆ ಮತದಾರ ತೀವ್ರ ಆಸಕ್ತಿ ಹೊಂದಿದವನಾಗಿದ್ದಾನೆ ಎನ್ನುವುದು ನಿಜವೇ ಆಗಿದ್ದರೆ ಕಾಂಗ್ರೆಸ್ ಸಂಖ್ಯೆಗಳು ಹೆಚ್ಚಾಗಬೇಕಿತ್ತು. ಆದರೆ, ಹಾಗಾಗಿಲ್ಲ. ಬಹುಶಃ ಮುಂದಿನ ದಿನಗಳಲ್ಲಿ ಜಾತಿಗಣತಿ ಕುರಿತ ಚರ್ಚೆಗೆ ವಿರಾಮ ಹಾಡಲು ಬಿಜೆಪಿ ನಾಯಕರು ಈ ಫಲಿತಾಂಶವನ್ನೇ ಬಳಸಿಕೊಂಡರೂ ಅಚ್ಚರಿ ಇಲ್ಲ.
ಮೂರೂ ಹಿಂದಿ ರಾಜ್ಯಗಳಲ್ಲಿ ಕಾಂಗ್ರೆಸ್ ವಿವಿಧ ಉಚಿತ ಯೋಜನೆಗಳ ಬಗ್ಗೆ ಮತದಾರರಿಗೆ ಭರವಸೆ ನೀಡಿದರೂ, ಕೇಂದ್ರ ಸರ್ಕಾರ ಮತ್ತು ಸ್ಥಳೀಯ ಬಿಜೆಪಿಯ ಅಭಿವೃದ್ಧಿ ಕೇಂದ್ರಿತ ಭರವಸೆಗಳು ಹೆಚ್ಚು ಮಾನ್ಯತೆ ಪಡೆದಂತೆ ಕಾಣುತ್ತಿದೆ. ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್​ಎಸ್ ಸರ್ಕಾರದ 10 ವರ್ಷಗಳ ಪೊಳ್ಳು ಭರವಸೆಗಳಿಂದ ಕಂಗೆಟ್ಟಿದ್ದ ಮತದಾರ, ಸಹಜವಾಗಿಯೇ 10 ವರ್ಷಗಳ ನಂತರ ಹೊಸಬರಿಗೆ ಅವಕಾಶ ನೀಡೋಣ ಎಂದು ತೀರ್ಮಾನ ಮಾಡಿದ್ದಾನೆ. ಅದರ ಫಲವಾಗಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಜತೆಗೆ, ಕರ್ನಾಟಕದಲ್ಲಿ ಘೊಷಿಸಲಾದ ಗ್ಯಾರಂಟಿ ಸ್ಕೀಮ್ಳ ಭರವಸೆ ಪಕ್ಕದ ತೆಲಂಗಾಣ ಮತದಾರನ ಮೇಲೆ ಪ್ರಭಾವ ಬೀರಿರುವುದು ಸುಳ್ಳಲ್ಲ. ಆದರೆ, ದಕ್ಷಿಣ ರಾಜ್ಯಗಳ ಮತದಾರ ಯೋಚಿಸಿದಂತೆ ಹಿಂದಿ ಹೃದಯಭೂಮಿಗಳು ಯೋಚಿಸದಿರುವುದು ಹೊಸ ಚರ್ಚೆ, ಕುತೂಹಲಕ್ಕೆ ಗ್ರಾಸವಾಗಿದೆ.
ಬಿಜೆಪಿ ಗೆಲುವಿಗೆ ಕಾರಣಗಳು
* ಮೋದಿ ಫ್ಯಾಕ್ಟರ್ ಮುಂದುವರಿದ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ
* ಮಹಿಳಾ ಮತದಾರರು ಮಹಿಳೆಯರಿಗಾಗಿ ವಿಶೇಷ ಯೋಜನೆಗಳ ಘೋಷಣೆ
* ಸಂಘಟನಾತ್ಮಕ ಶಕ್ತಿ ಕಾರ್ಯಕರ್ತರಿಗೆ ಆದ್ಯತೆ, ನಾಯಕರೊಂದಿಗೆ ಸಮನ್ವಯ
* ಸೂಕ್ತ ಸಂದೇಶ ರವಾನೆ ಹಿಂದುತ್ವ, ಅಭಿವೃದ್ಧಿ, ಕಲ್ಯಾಣ ಯೋಜನೆಗಳ ಪ್ರಚಾರ
ರಾಜಕೀಯ ನಕ್ಷೆಯಲ್ಲಿ ಬಿಜೆಪಿ ವಿಸ್ತಾರ
ನವದೆಹಲಿ: 4 ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆ ಆಗುತ್ತಿದ್ದಂತೆ ದೇಶದ ರಾಜಕೀಯ ನಕ್ಷೆಯೂ ಬದಲಾಗಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಕೇವಲ ಮೂರು ರಾಜ್ಯಗಳಿಗೆ ಸೀಮಿತ ಗೊಂಡಿದ್ದರೆ, ಬಿಜೆಪಿ 12 ರಾಜ್ಯಗಳಲ್ಲಿ ಆಡಳಿತ ಹೊಂದಿದೆ.
ಬಿಜೆಪಿ:* ಮಧ್ಯಪ್ರದೇಶ * ರಾಜಸ್ಥಾನ * ಛತ್ತೀಸ್​ಗಢ * ಅಸ್ಸಾಂ * ಉತ್ತರಾಖಂಡ * ಹರಿಯಾಣ * ಗುಜರಾತ್ * ಉತ್ತರಪ್ರದೇಶ * ಗೋವಾ *ತ್ರಿಪುರಾ * ಮಣಿಪುರ * ಅರುಣಾಚಲ ಪ್ರದೇಶ
ಎನ್​ಡಿಎ ಅಧಿಕಾರದಲ್ಲಿರುವ ರಾಜ್ಯಗಳು:* ಮಹಾರಾಷ್ಟ್ರ * ಮೇಘಾಲಯ * ನಾಗಾಲ್ಯಾಂಡ್ * ಸಿಕ್ಕಿಂ
ಕಾಂಗ್ರೆಸ್:* ಹಿಮಾಚಲ ಪ್ರದೇಶ * ಕರ್ನಾಟಕ * ತೆಲಂಗಾಣ
ಪ್ರಾದೇಶಿಕ ಪಕ್ಷಗಳ ಅಧಿಕಾರ:* ಆಂಧ್ರಪ್ರದೇಶ * ಒಡಿಶಾ * ಬಿಹಾರ * ಪಶ್ಚಿಮ ಬಂಗಾಳ * ಕೇರಳ * ತಮಿಳುನಾಡು
ಗೆಲುವಿನ ಟರ್ನಿಂಗ್ ಪಾಯಿಂಟ್ಸ್
* ಮಧ್ಯಪ್ರದೇಶದಲ್ಲಿ ಮಹಿಳೆಯರ ಮನಗೆದ್ದ ಲಾಡ್ಲಿ ಬಹನಾ ಯೋಜನೆ
* ರಾಜಸ್ಥಾನದಲ್ಲಿ ಕಾಂಗ್ರೆಸ್ ಆಂತರಿಕ ಕಲಹದ ಪೂರ್ಣ ಲಾಭ ಪಡೆದ ಬಿಜೆಪಿ
* ಆಡಳಿತ ವಿರೋಧಿ ಅಲೆಗೆ ಕೊಚ್ಚಿ ಹೋದ ಛತ್ತೀಸಗಢ ಕಾಂಗ್ರೆಸ್ ಸರ್ಕಾರ
* ತೆಲಂಗಾಣದಲ್ಲಿ ಕೆಸಿಆರ್ ಹ್ಯಾಟ್ರಿಕ್ ತಪ್ಪಿಸಿದ ಕಾಂಗ್ರೆಸ್ ಗ್ಯಾರಂಟಿ ಸ್ಕೀಮ್್ಸ
ಸಂಭಾವ್ಯ ಸಿಎಂಗಳು
* ಮಧ್ಯಪ್ರದೇಶ – ಶಿವರಾಜ್ ಸಿಂಗ್ ಚೌಹಾಣ್
* ಛತ್ತೀಸ್​ಗಢ – ಅರುಣ್ ಸಾಹೊ , ಡಾ.ರಮಣ್ ಸಿಂಗ್, ಒ.ಪಿ. ಚೌಧರಿ ? ತೆಲಂಗಾಣ – ರೇವಂತ ರೆಡ್ಡಿ
* ರಾಜಸ್ಥಾನ – ಬಾಬಾ ಬಾಲಕನಾಥ, ವಸುಂಧರಾ ರಾಜೇ
ಭ್ರಷ್ಟಾಚಾರದ ವಿರುದ್ಧದ ಅಭಿಯಾನಕ್ಕೆ ಭಾರಿ ಬೆಂಬಲ ದೊರೆಯುತ್ತಿದೆ. ಭ್ರಷ್ಟರ ಜತೆ ನಿಲ್ಲಲು ನಾಚಿಕೆ ಇರದ ಪಕ್ಷಗಳು ಮತ್ತು ನಾಯಕರಿಗೆ ಜನರಿಂದ ಸ್ಪಷ್ಟ ಎಚ್ಚರಿಕೆ ಸಿಗುತ್ತಿದೆ. ಅಭಿವೃದ್ಧಿ ರಾಜಕೀಯದ ವಿರುದ್ಧ ಇದ್ದವರಿಗೆಲ್ಲ ಈ ಜನಾದೇಶ ಒಂದು ಎಚ್ಚರಿಕೆ.
| ನರೇಂದ್ರ ಮೋದಿ ಪ್ರಧಾನಮಂತ್ರಿ
ಪ್ರತಿ ಫಲಿತಾಂಶದಲ್ಲೂ ಪಾಠ ಇರುತ್ತದೆ. ಸೋಲಿಗೆ ಕುಗ್ಗಲ್ಲ, ಗೆಲುವಿಗೆ ಹಿಗ್ಗುವುದಿಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್​ಗೆ ಸ್ಪಷ್ಟ ಗೆಲುವು ಸಿಕ್ಕಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢದಲ್ಲಿ ಬಿಜೆಪಿ ಧರ್ಮದ ಆಧಾರದಲ್ಲಿ ಸಮಾಜ ಒಡೆಯುವ ಆಟ ಮುಂದುವರಿಸಿದೆ.
| ಸಿದ್ದರಾಮಯ್ಯ ಮುಖ್ಯಮಂತ್ರಿ
ತೆಲಂಗಾಣದ ಜನಾದೇಶಕ್ಕೆ ನಮ್ಮ ಧನ್ಯವಾದಗಳು. ಛತ್ತೀಸ್​ಗಢ, ಮಧ್ಯಪ್ರದೇಶ, ರಾಜಸ್ಥಾನದಲ್ಲಿ ನಮಗೆ ಮತ ಚಲಾಯಿಸಿದವರಿಗೂ ಧನ್ಯವಾದಗಳು. ಈ 3 ರಾಜ್ಯಗಳಲ್ಲಿ ನಮ್ಮ ಸಾಧನೆ ನಿರಾಶಾದಾಯಕ. ಇಲ್ಲಿಯೂ ನಾವು ಸದೃಢರಾಗುವ ಸಂಕಲ್ಪ ತೊಡುತ್ತೇವೆ. ತಾತ್ಕಾಲಿಕ ಹಿನ್ನಡೆ ನಿವಾರಿಸಿಕೊಂಡು, ಇಂಡಿಯಾ ಒಕ್ಕೂಟದೊಂದಿಗೆ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತೇವೆ.
| ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ಸಿಎಂ ಕೆಸಿಆರ್​, ಸಂಭಾವ್ಯ ಸಿಎಂ ರೇವಂತ್​ ರೆಡ್ಡಿಗೆ ಸೋಲುಣಿಸಿ ಎಲ್ಲರ ಹುಬ್ಬೇರಿಸಿದ ಬಿಜೆಪಿ ಅಭ್ಯರ್ಥಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 4 =
Remember me
