ನವದೆಹಲಿ:ದೇಶದ ಇಂಧನ ಭದ್ರತೆಯ ಆಧಾರಸ್ಥಂಭವಾಗಬಲ್ಲ ಜಲಜನಕ ಉತ್ಪಾದನೆ ಹಾಗೂ ಭಾರತವನ್ನು ಸ್ವಚ್ಛ ಇಂಧನ ತಯಾರಿಕೆಯ ಜಾಗತಿಕ ಹಬ್ ಮಾಡುವ ಉದ್ದೇಶದ ರಾಷ್ಟ್ರೀಯ ಹಸಿರು ಜಲಜನಕ (ಹೈಡ್ರೋಜನ್) ಮಿಷನ್ ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಇದಕ್ಕಾಗಿ 19,744 ಕೋಟಿ ರೂ. ಅನುದಾನ ನಿಗದಿ ಮಾಡಿದೆ. ಯೋಜನೆಯ ಆರಂಭಿಕ ವೆಚ್ಚ 19,744 ಕೋಟಿ ರೂ. ಆಗಿದ್ದು, ಇದು ಹಸಿರು ಜಲಜನಕ ಪರಿವರ್ತನಾ ಕಾರ್ಯ ಕ್ರಮಕ್ಕಾಗಿ ಕಾರ್ಯತಂತ್ರ ಮಧ್ಯಸ್ಥಿಕೆ (ಸೈಟ್) ಯೋಜನೆಯ 17,490 ಕೋಟಿ ರೂಪಾಯಿಯನ್ನು ಒಳಗೊಂಡಿದೆ. 1,466 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಪ್ರಾಯೋ ಗಿಕವಾಗಿ ಅನುಷ್ಠಾನಗೊಳಿ ಸಲಾಗುತ್ತದೆ. ಈ ಪೈಕಿ 400 ಕೋಟಿ ರೂ.ಗಳನ್ನು ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ 388 ಕೋಟಿ ರೂಗಳನ್ನು ಯೋಜನೆಯ ಬಿಡಿಘಟಕಗಳಿಗೆ ನಿಗದಿ ಮಾಡಲಾಗಿದೆ. ನವೀನ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಸಚಿವಾಲಯ ಯೋಜನೆಯ ಮಾರ್ಗದರ್ಶಿಯನ್ನು ರಚಿಸಲಿದೆ ಎಂದು ವಾರ್ತಾ ಸಚಿವ ಅನುರಾಗ ಠಾಕೂರ್ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2030ರ ವೇಳೆಗೆ ದೇಶದಲ್ಲಿ 125 ಗಿಗಾವಾಟ್ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಗುರಿ ಹೊಂದಲಾಗಿದೆ. ಜತೆಗೆ, 50 ಲಕ್ಷ ಮೆಟ್ರಿಕ್ ಟನ್​ನಷ್ಟು (ಎಂಎಂಟಿ) ಹಸಿರು ಹೈಡ್ರೋಜನ್ ಉತ್ಪಾದನಾ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಇದಕ್ಕಾಗಿ 8 ಲಕ್ಷ ಕೋಟಿ ರೂ. ಹೂಡಿಕೆ ನಿರೀಕ್ಷಿಸಲಾಗಿದ್ದು, ಆರು ಲಕ್ಷ ಉದ್ಯೋಗವಾಕಾಶ ಸೃಷ್ಟಿಯಾಗುತ್ತದೆ ಎಂದು ನವೀಕರಿಸಬಹುದಾದ ಇಂಧನ ಸಚಿವಾಲಯ ತಿಳಿಸಿದೆ. ಹಸಿರು ಹೈಡ್ರೋಜನ್ ಉತ್ಪಾದನೆಯಿಂದ ತೈಲಾಧಾರಿತ ಇಂಧನವನ್ನು ಆಮದು ಮಾಡಿಕೊಳ್ಳುವ ಬಾಬ್ತಿನಲ್ಲಿ 1 ಲಕ್ಷ ಕೋಟಿ ರೂ. ಉಳಿತಾಯ ಆಗಲಿದೆ. ಜತೆಗೆ, ಹಸಿರುಮನೆ ಅನಿಲ ಹೊರಸೂಸು ವಿಕೆಯು ವಾರ್ಷಿಕ 50 ಎಂಎಂಟಿಯಷ್ಟು ತಗ್ಗಲಿದೆ.
ವಿದ್ಯುತ್ ಮೂಲಗಳು:ಭಾರತದ ಒಟ್ಟು ಇಂಧನ ಅವಶ್ಯಕತೆಯಲ್ಲಿ ಶೇ. 40ರಷ್ಟನ್ನು ನವೀಕರಿಸಬಹುದಾದ ಮೂಲಗಳಿಂದ ಪಡೆಯಲಾಗುತ್ತಿದೆ. ಇದರಲ್ಲಿ ಸೌರ, ಪವನ, ಜಲ, ಜೈವಿಕ ಮೂಲಗಳು ಸೇರಿವೆ. ಪರಮಾಣು ಇಂಧನದಿಂದ ಶೇ.3.11ರಷ್ಟು ವಿದ್ಯುತ್ ಪಡೆಯಲಾಗುತ್ತಿದೆ. ದೇಶದ ಒಟ್ಟು ವಿದ್ಯುತ್ ಅಗತ್ಯದಲ್ಲಿ ಶೇ.55ರಷ್ಟು ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಿಂದ ಪೂರೈಕೆಯಾಗುತ್ತದೆ.
ಯೋಜನೆ ಸ್ವರೂಪ:ಎಲೆಕ್ಟೋಲೈಸರ್ ಮತ್ತು ಹಸಿರು ಹೈಡ್ರೋಜನ್ ತಯಾರಿಕೆಯ ದೇಶೀಯ ಗುರಿ ಅನ್ವಯ ಉತ್ಪಾದನೆ, ಬಳಕೆ ಮತ್ತು ರಫ್ತಿನ ಬೇಡಿಕೆ ಹೆಚ್ಚಳವನ್ನು ಈ ಯೋಜನೆ ಸಾಧ್ಯವಾಗಿಸಲಿದೆ. ಉತ್ಪಾದನಾ ಮಾರ್ಗದಲ್ಲಿ ಪ್ರಾಯೋಗಿಕ ಯೋಜನೆಯನ್ನೂ ಈ ಮಿಷನ್ ಬೆಂಬಲಿಸುತ್ತದೆ. ದೊಡ್ಡಪ್ರಮಾಣದ ಬಳಕೆಯ ಸಾಮರ್ಥ್ಯವಿರುವ ಪ್ರದೇಶವನ್ನು ಗುರುತಿಸಿ ಹಬ್​ಗಳಂತೆ ಅಭಿವೃದ್ಧಿ ಪಡಿಸಲು ಅವಕಾಶ ಇದೆ. ಹೈಡ್ರೋಜನ್ ಇಂಧನ ವಲಯದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವಕ್ಕೂ ಆಸ್ಪದ ಇದ್ದು, ಆರ್ ಆಂಡ್ ಡಿ ಯೋಜನೆಗಳು ಗುರಿಯಾಧಾರಿತದ್ದಾಗಿರುತ್ತದೆ. ಜಾಗತಿಕಮಟ್ಟದ ಸ್ಪರ್ಧಾತ್ಮಕತೆಗೆ ತಕ್ಕಂತೆ ಸಹಕಾರ ಮನೋಭಾವದಿಂದ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಇದರಲ್ಲಿ ಕೇಂದ್ರ ಸರ್ಕಾರ ಸಂಬಂಧಿತ ಎಲ್ಲ ಸಚಿವಾಲಯ, ಇಲಾಖೆ, ಸಂಸ್ಥೆಗಳ ಸಹಕಾರದಿಂದ ಮಿಷನ್ ಮುಖ್ಯಗುರಿಯನ್ನು ತಲುಪುವ ಆಶಯ ಹೊಂದಲಾಗಿದೆ. ಈ ಎಲ್ಲ ಯೋಜನೆಗಳ ಸಮನ್ವಯದ ಹೊಣೆಗಾರಿಕೆಯನ್ನು ನವೀಕರಿಸಬಹುದಾದ ಇಂಧನ ಮೂಲಗಳ ಸಚಿವಾಲಯಕ್ಕೆ ನೀಡಲಾಗಿದೆ.
ವರ್ಷಾಂತ್ಯಕ್ಕೆ ಹೈಡ್ರೋಜನ್ ರೈಲು:ಭಾರತದ ಮೊದಲ ಹೈಡ್ರೋಜನ್​ಚಾಲಿತ ರೈಲು ಈ ವರ್ಷಾಂತ್ಯಕ್ಕೆ ಸಂಚರಿಸಲಿದೆ. ಪಾರಂಪರಿಕ ಮಾರ್ಗದ ನ್ಯಾರೋಗೇಜ್​ನಲ್ಲಿ ಈ ರೈಲು ಓಡಾಡಲಿದೆ ಎಂದು ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಇತ್ತೀಚೆಗೆ ಹೇಳಿದ್ದರು. ಭಾರತೀಯ ರೈಲ್ವೆಯು ಎಂಟು ಮಾರ್ಗವನ್ನು ಪಾರಂಪರಿಕ ಮಾರ್ಗವೆಂದು ಗುರುತಿಸಿದೆ. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ, ನೀಲಗಿರಿ ಮೌಂಟೇನ್ ರೈಲ್ವೆ, ಕಲ್ಕಾ-ಶಿಮ್ಲಾ ರೈಲ್ವೆ, ಮಾಥೆರಾನ್ ಹಿಲ್ ರೈಲ್ವೆ, ಕಂಗ್ರಾ ಕಣಿವೆ, ಬಿಲ್ಮೋರಾ, ವಾಘೈ, ಮಾರ್ವಾರ್-ದೇವಗಢ ಮಾದ್ರಿಯಾ ಮಾರ್ಗಗಳಲ್ಲಿ ಈ ರೈಲು ಸಂಚರಿಸಲಿದೆ. ಕೆಲ ದಿನಗಳ ಹಿಂದಷ್ಟೇ ಚೀನಾದ ಮೊದಲ ಹೈಡ್ರೋಜನ್ ರೈಲು ಸಂಚರಿಸಿದ್ದು, ಇದು ವಿಶ್ವದಲ್ಲಿ ಎರಡನೇ ಮತ್ತು ಏಷ್ಯಾದ ಪ್ರಥಮ ಹೈಡ್ರೋಜನ್​ಚಾಲಿತ ರೈಲಾಗಿದೆ. ಈ ವಿಚಾರದಲ್ಲಿ ಜರ್ಮನಿ ಮೊದಲ ರಾಷ್ಟ್ರ ಎನಿಸಿದೆ.
2ನೇ ಅತಿದೊಡ್ಡ ತೈಲ ಖರೀದಿದಾರ:ಜಾಗತಿಕವಾಗಿ ಹೆಚ್ಚು ಇಂಧನ ಖರೀದಿಸುವ ರಾಷ್ಟ್ರಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದೆ. ದೇಶದ ಒಟ್ಟು ಬಳಕೆಯಲ್ಲಿ ಶೇ.85ರಷ್ಟು ಇಂಧನ ಆಮದಾಗುತ್ತದೆ. ವಾರ್ಷಿಕವಾಗಿ ಸರಾಸರಿ 250 ದಶಲಕ್ಷ ಟನ್ ಇಂಧನವನ್ನು ಭಾರತ ಖರೀದಿ ಮಾಡುತ್ತದೆ. 2022ರ ಆರ್ಥಿಕ ಸಾಲಿನ ಪ್ರಥಮಾರ್ಧದಲ್ಲಿ 116.6 ದಶಲಕ್ಷ ಟನ್ ಇಂಧನ ಖರೀದಿಗೆ ತಗುಲಿದ ವೆಚ್ಚ 90.30 ಬಿಲಿಯನ್ ಡಾಲರ್ (ಅಂದಾಜು 7.47 ಲಕ್ಷ ಕೋಟಿ ರೂ). ಹಸಿರು ಹೈಡ್ರೋಜನ್ ಉತ್ಪಾದನೆಯಿಂದ ಈ ಆಮದು ಮೊತ್ತದಲ್ಲಿ 1 ಲಕ್ಷ ಕೋಟಿ ರೂ. ಉಳಿತಾಯ ಆಗಲಿದೆ ಎಂಬ ಅಂದಾಜಿದೆ. ನವೀಕರಿಸಬಹುದಾದ ಇಂಧನ ಮತ್ತು ಹೈಡ್ರೋಜನ್ ಉತ್ಪಾದನೆಯಲ್ಲಿ ಏರಿಕೆಯಾದ ಕಾರಣ 2022ರಲ್ಲಿ ಕಚ್ಚಾ ತೈಲ ಖರೀದಿ ಶೇ.67 ಇತ್ತು. ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಸುವ ರಾಷ್ಟ್ರ ಇರಾಕ್. ಇಲ್ಲಿಂದ ಶೇ.52.5ರಷ್ಟು ಇಂಧನ ಖರೀದಿಸಲಾಗುತ್ತದೆ. ಉಳಿದ ಪಾಲನ್ನು 14 ರಾಷ್ಟ್ರಗಳಿಂದ ಪಡೆಯಲಾಗುತ್ತದೆ. ಯೂಕ್ರೇನ್ ಸಂಘರ್ಷ ಆರಂಭವಾದ ಮೇಲೆ ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಭಾರತ ಖರೀದಿಸುತ್ತಿದೆ.
ಸಂಸಾರ ನಿಭಾಯಿಸಲಿಕ್ಕೂ ಇಲ್ಲಿದೆ ಒಂದು ಕೋರ್ಸ್​; ಮದುವೆ ಆಗುವವರಿಗೂ-ಆದವರಿಗೂ ನೀಡ್ತಾರೆ ತರಬೇತಿ!

ಆಸ್ಪತ್ರೆಯಲ್ಲಿದ್ದ ವಿವಾಹಿತ ಪ್ರೇಯಸಿಯನ್ನು ತಡರಾತ್ರಿಯಲ್ಲಿ ಅಪ್ಪಿಕೊಂಡವ ಕೆಲವೇ ಕ್ಷಣಗಳಲ್ಲಿ ಪ್ರಾಣ ಕಳ್ಕೊಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + nine =
Remember me
