ನವದೆಹಲಿ:ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಆರಂಭದ 60 ನಿಮಿಷಗಳ ಕಾಲ ನಡೆಯುವ ಪ್ರಶ್ನೋತ್ತರ ಕಲಾಪ ರದ್ದುಗೊಳಿಸಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಕರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಪ್ರತಿದಿನ ಕ್ರಮವಾಗಿ 4 ಗಂಟೆಗಳ ಕಾಲ ಮಾತ್ರ (ಒಟ್ಟು 8 ಗಂಟೆ) ನಡೆಯಲಿರುವುದರಿಂದ ಪ್ರಶ್ನೋತ್ತರ ಅವಧಿಯನ್ನು ಕೈಬಿಡಲಾಗಿದೆ.
ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಹೊರತುಪಡಿಸಿ ಉಳಿದೆಲ್ಲಾ ಪಕ್ಷಗಳು ಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿವೆ. ಆದರೆ, ಈಗ ವಿನಾಕಾರಣ ರಾಜಕಾರಣ ಮಾಡುತ್ತಿವೆ ಎಂದು ಕೇಂದ್ರ ಸರ್ಕಾರ ವಿಪಕ್ಷಗಳ ಆರೋಪವನ್ನು ತಳ್ಳಿಹಾಕಿದೆ. ಚುಕ್ಕೆ ಗುರುತಿಲ್ಲದ ಅಥವಾ ಲಿಖಿತ ಪ್ರಶ್ನೆಗಳಿಗೆ ಮಂತ್ರಿಗಳು ಉತ್ತರ ಕೊಡಲಿದ್ದಾರೆ ಮತ್ತು ಅದಕ್ಕೆ ಅವಕಾಶ ನೀಡಲಾಗಿದೆ. ಚುಕ್ಕೆ ಗುರುತಿಲ್ಲದ ಪ್ರಶ್ನೆಗಳನ್ನು ಸಂಸದರು ಸೆಕ್ರೆಟೇರಿಯಟ್ ಕಚೇರಿಗೆ ಸಲ್ಲಿಸಬೇಕಾಗುತ್ತದೆ ಮತ್ತು ಪ್ರಶ್ನೆಗಳು ಪಟ್ಟಿಯಾದ ದಿನ ಉತ್ತರಗಳನ್ನು ನೀಡಲಾಗುತ್ತದೆ. ಸಂಸತ್ತಿನ ವೆಬ್​ಸೈಟ್​ನಲ್ಲೂ ಅವುಗಳನ್ನು ಹಾಕಲಾಗುತ್ತದೆ. ‘ಅಧಿವೇಶನದಲ್ಲಿ ಸಚಿವರು ಮತ್ತು ಅಧಿಕಾರಿಗಳು ಪಾಲ್ಗೊಂಡು ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಕ್ರಿಯೆಗೆ ಅವಕಾಶ ನೀಡಿದರೆ, ಜನರ ಸಂಖ್ಯೆ ಹೆಚ್ಚಾಗಿ ಕರೊನಾ ಹರಡುವಿಕೆ ಅಪಾಯ ಇರುತ್ತದೆ. ಇದನ್ನು ಎಲ್ಲಾ ಪಕ್ಷಗಳಿಗೆ ವಿವರಿಸಿದ್ದಾಗ, ಅಪಾಯ ತಗ್ಗಿಸುವ ಕ್ರಮಕ್ಕೆ ಅವರು ಸಮ್ಮತಿಸಿದ್ದರು’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ತಿಳಿಸಿದ್ದಾರೆ. ಸೆ.14ರಿಂದ ಅ.1ರ ತನಕ ಯಾವುದೇ ಬಿಡುವುಗಳಿಲ್ಲದೆ ಅಧಿವೇಶನ ನಡೆಯಲಿದೆ. 15 ದಿನಕ್ಕೆ ಅಧಿವೇಶನ ಸೀಮಿತಗೊಂಡಿರುವುದರಿಂದ ವಾರಾಂತ್ಯದ ರಜೆಗಳೂ ರದ್ದಾಗಿವೆ.
ಹಿಂದೆಯೂ ರದ್ದಾಗಿತ್ತು
1962ರ ಭಾರತ-ಚೀನಾ ಯುದ್ಧ ಸಂದರ್ಭದ ಚಳಿಗಾಲದ ಅಧಿವೇಶನ, 1971ರ ಡಿಸೆಂಬರ್​ನಲ್ಲಿ ಪಾಕ್ ವಿರುದ್ಧದ ಯುದ್ಧದ ವೇಳೆ ನಡೆಯುತ್ತಿದ್ದ ಅಧಿವೇಶನದಲ್ಲಿ ಕಲಾಪದ ಕಾಲಾವಧಿ ಬದಲಿಸಲಾಗಿತ್ತು ಮತ್ತು ಪ್ರಶ್ನೋತ್ತರ ಕಲಾಪಗಳನ್ನು ರದ್ದುಗೊಳಿಸಲಾಗಿತ್ತು. 1975-77ರ ತುರ್ತು ಪರಿಸ್ಥಿತಿ ನಡುವಿನ 5 ಅಧಿವೇಶನಗಳಲ್ಲಿ 1975ರ ಮುಂಗಾರು ಮತ್ತು 1976ರ ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪಗಳಿರಲಿಲ್ಲ. ಈ ವೇಳೆ ತ್ವರಿತಗತಿಯಲ್ಲಿ ಹಲವಾರು ಸಂವಿಧಾನ ತಿದ್ದುಪಡಿ ಮಸೂದೆಗಳಿಗೆ ಅನುಮೋದಿಸಲಾಗಿತ್ತು.
ಪ್ರತಿಪಕ್ಷಗಳ ಕೈ ತಪ್ಪಿದ ಅಸ್ತ್ರ
ಪ್ರಸಕ್ತ ಸನ್ನಿವೇಶದಲ್ಲಿ ಪಾತಾಳಕ್ಕಿಳಿದಿರುವ ಜಿಡಿಪಿ ಮತ್ತು ಆರ್ಥಿಕತೆ, ನಿರುದ್ಯೋಗ ಹೆಚ್ಚಳ, ಕರೊನಾ ಸಾಂಕ್ರಾಮಿಕ ವಿಪರೀತ ಏರಿಕೆ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿ ಸರ್ಕಾರವನ್ನು ಪ್ರಶ್ನಿಸಿ, ಮುಜುಗರಕ್ಕೀಡು ಮಾಡಬೇಕೆಂಬುದು ವಿಪಕ್ಷಗಳ ಆಲೋಚನೆ. ‘ಪ್ರಶ್ನೋತ್ತರ ಕಲಾಪವಿಲ್ಲದಿರುವುದರಿಂದ ಇದು ಸಾಧ್ಯವಾಗುವುದಿಲ್ಲ. ಹೀಗಾಗಿಯೇ, ಸರ್ಕಾರದ ವೈಫಲ್ಯಗಳನ್ನು ಬೊಟ್ಟು ಮಾಡುವ ನಮ್ಮ ಪ್ರಜಾತಾಂತ್ರಿಕ ಅಧಿಕಾರ ಕಸಿದುಕೊಳ್ಳಲಾಗಿದೆ’ ಎಂದು ವಿಪಕ್ಷಗಳು ಆಕ್ಷೇಪಿಸುತ್ತಿವೆ.
ಪ್ರಶ್ನೋತ್ತರ ವೇಳೆ ಮಹತ್ವ
ಸಾಮಾನ್ಯವಾಗಿ ಅಧಿವೇಶನದ ಮೊದಲ 1 ಗಂಟೆ ಸಂಸತ್ ಸದಸ್ಯರು ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಮಂತ್ರಿಗಳು ಇದಕ್ಕೆ ಉತ್ತರ ನೀಡಬೇಕಾಗುತ್ತದೆ. ಕಳೆದ 70 ವರ್ಷಗಳಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಬಹುತೇಕ ಪ್ರಾದೇಶಿಕ ಪಕ್ಷಗಳು ಈ ಅವಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ನಿರ್ದಿಷ್ಟ ಸರ್ಕಾರಗಳ ಹಗರಣ, ಭ್ರಷ್ಟಾಚಾರ, ಹೊಣೆಗೇಡಿತನವನ್ನು ಬಯಲು ಮಾಡಿರುವುದಕ್ಕೆ ದೇಶ ಸಾಕ್ಷಿಯಾಗಿದೆ.
ವ್ಯರ್ಥವಾಗಿದ್ದೇ ಹೆಚ್ಚು
2014ರಿಂದ 2019 ಮಧ್ಯೆ ರಾಜ್ಯಸಭೆಯಲ್ಲಿ ವಿಪಕ್ಷಗಳು ಗದ್ದಲ ಎಬ್ಬಿಸಿದ್ದರ ಪರಿಣಾಮ ಪ್ರಶ್ನೋತ್ತರ ವೇಳೆಯ ಶೇ.60 ಸಮಯ ವ್ಯರ್ಥವಾಗಿತ್ತು ಎಂದು ದಾಖಲೆಗಳು ಹೇಳುತ್ತವೆ. ಈ 5 ವರ್ಷದಲ್ಲಿ 332 ಬಾರಿ ರಾಜ್ಯಸಭೆ ಕಲಾಪ ನಡೆದಿದ್ದರಿಂದ 332 ಗಂಟೆಗಳ ಪ್ರಶ್ನೋತ್ತರ ಅವಧಿಯಿತ್ತು. ಆದರೆ, ಇದರಲ್ಲಿ 133 ಗಂಟೆ 17 ನಿಮಿಷಗಳು ಮಾತ್ರ ಬಳಕೆಯಾಗಿದ್ದವು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 + one =
Remember me
