ನವದೆಹಲಿ:ಸ್ವಾವಲಂಬಿ ಭಾರತ ನಿರ್ಮಾಣ ಸಂಕಲ್ಪವನ್ನು ಪುನರುಚ್ಚರಿಸಿರುವ ಪ್ರಧಾನಿ ನರೇಂದ್ರ ಮೋದಿ, ಚೀನಾ ಆಕ್ರಮಿಸಿಕೊಂಡಿರುವ ಆಟಿಕೆ ಉದ್ಯಮದಲ್ಲಿ ಭಾರತ ಮುಂಚೂಣಿಗೆ ಬರಬೇಕಾದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.
ಭಾನುವಾರ ಮನ್ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕರ್ನಾಟಕದ ಚನ್ನಪಟ್ಟಣ ತಾಲೂಕಿನ ಗೊಂಬೆ ಉದ್ಯಮ ಉದಾಹರಣೆ ನೀಡುತ್ತಲೇ ಆಟಿಕೆ ಉದ್ಯಮದಲ್ಲಿ ಆತ್ಮನಿರ್ಭರತೆ ಸಾಕಾರದ ಮಾರ್ಗ ತೆರೆದಿಟ್ಟರು.
ವಿಶ್ವಕ್ಕೆ ಆಟಿಕೆಗಳನ್ನು ಪೂರೈಸುವ ಶಕ್ತಿ, ಸಾಮರ್ಥ್ಯ ಭಾರತಕ್ಕಿದೆ, ಮುಂದೊಂದು ದಿನ ಜಾಗತಿಕವಾಗಿ ಆಟಿಕೆ ಪೂರೈಸುವ ತಾಣ ಆಗುವ ಅವಕಾಶವೂ ಇದೆ, ದೇಶೀಯವಾಗಿ ಆಟಿಕೆ ಅಭಿವೃದ್ಧಿಪಡಿಸಲು ಇದು ಸಕಾಲವಾಗಿದ್ದು, ಇದಕ್ಕಾಗಿ ನವೋದ್ಯಮಗಳನ್ನು ಆರಂಭಿಸಬೇಕು ಎಂದರು.
ಜಾಗತಿಕವಾಗಿ ಆಟಿಕೆಗಳ ಕ್ಷೇತ್ರದಲ್ಲಿ ಸುಮಾರು 7 ಲಕ್ಷ ಕೋಟಿ ರೂ. ವ್ಯವಹಾರ ನಡೆಯುತ್ತಿದೆ. ಇದರಲ್ಲಿ ಭಾರತದ ಪಾಲು ಬಹಳ ಕಡಿಮೆ ಇದೆ. ಇದನ್ನು ಹೆಚ್ಚಿಸಬೇಕು, ಆಟಿಕೆ ಉದ್ಯಮಕ್ಕೆ ಹೊಸ ರೂಪ ನೀಡಲು ಹೊಸ ಯೋಜನೆಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ ಎಂದರು. ಕಂಪ್ಯೂಟರ್​ನಲ್ಲಿ ಆಡುವ ಆಟಗಳನ್ನೂ ಅಭಿವೃದ್ಧಿಪಡಿಸುವಂತೆ ಉದ್ಯಮಿಗಳಿಗೆ ಕರೆ ನೀಡಿದರು.
ವಾರದ ಹಿಂದೆ ಸಭೆ:ಭಾರತದಲ್ಲಿ ಉತ್ಪಾದನಾ ಕ್ಷೇತ್ರಕ್ಕೆ ಉತ್ತೇಜನ ನೀಡುವುದು ಮತ್ತು ವಿದೇಶಗಳಿಂದ ಆಮದಾಗುವ ಆಟಿಕೆಗಳನ್ನು ನಿಯಂತ್ರಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಕಳೆದ ವಾರ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದರು. ‘ಆಟಿಕೆಗಳನ್ನು ತಯಾರಿಸುವ ಹಲವಾರು ಕ್ಲಸ್ಟರ್​ಗಳು ದೇಶದಲ್ಲಿವೆ. ಇಂಥ ಆಟಿಕೆಗಳು ನಮ್ಮ ಸಂಸ್ಕೃತಿ ಜತೆ ಸಂಬಂಧ ಹೊಂದಿವೆ. ಮಕ್ಕಳ ಮಾನಸಿಕ ಅಭಿವೃದ್ಧಿಗೂ ಸಹಕಾರಿಯಾಗಿವೆ. ಆತ್ಮನಿರ್ಭರ ಯೋಜನೆ ಅಡಿ ಇವುಗಳ ಉತ್ಪಾದನೆಗೆ ಆದ್ಯತೆ ನೀಡಬೇಕು ಎಂದು ಮೋದಿ ಸೂಚಿಸಿದ್ದರು. ಭಾರತಕ್ಕೆ ಚೀನಾದಿಂದ ದೊಡ್ಡ ಪ್ರಮಾಣದಲ್ಲಿ ಆಟಿಕೆ ಆಮದಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವುದು ಸರ್ಕಾರದ ಉದ್ದೇಶವಾಗಿದೆ.
ನಮೋ ಸಲಹೆ:ಸ್ಟಾರ್ಟಪ್​ಗಳು ಸ್ಥಳೀಯವಾಗಿ ಆಟಿಕೆಗಳನ್ನು ತಯಾರಿಸಲು ಮುಂದಾಗಬೇಕು. ಜಗತ್ತಿನ ಆಟಿಕೆ ತಯಾರಿಕಾ ಕೇಂದ್ರ್ರಾಗಿ ಹೊರಹೊಮ್ಮುವ ಸಾಮರ್ಥ್ಯ ಭಾರತಕ್ಕಿದೆ. ಆಟಿಕೆಗಳ ಬೇಡಿಕೆಯನ್ನು ಪೂರೈಸಲು ಸ್ಥಳೀಯವಾಗಿ ಅವುಗಳನ್ನು ತಯಾರಿಸಬೇಕು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮಕ್ಕಳಲ್ಲಿನ ಸೃಜನಶೀಲತೆ ಹೊರಹೊಮ್ಮಿಸಿ ಬೆಳೆಸಲು ಮತ್ತು ಅನ್ವೇಷಣಾ ಸಾಮರ್ಥ್ಯ ಪೋಷಿಸಲು ಆಟಿಕೆಗಳ ಪಾತ್ರಕ್ಕೆ ಒತ್ತು ನೀಡಿದೆ.
ಚನ್ನಪಟ್ಟಣ ಉಲ್ಲೇಖ:ಆಟಿಕೆ ಕುಶಲಕರ್ವಿುಗಳ ಕುರಿತು ಮಾತನಾಡುವಾಗ ಮೋದಿ ಚನ್ನಪಟ್ಟಣ ಬೊಂಬೆ ಉದ್ಯಮವನ್ನು ಉಲ್ಲೇಖಿಸಿದರು. ಪ್ರತಿಭಾವಂತ ಕುಶಲ ಕರ್ವಿುಗಳು ನಮ್ಮಲ್ಲಿದ್ದಾರೆ. ಕರ್ನಾಟಕದ ರಾಮನಗರ ಜಿಲ್ಲೆಯ ಚನ್ನಪಟ್ಟಣ, ಆಂಧ್ರಪ್ರದೇಶದ ಕೊಂಡಪಲ್ಲಿ, ತಮಿಳುನಾಡಿನ ತಂಜಾವೂರು, ಅಸ್ಸಾಂನ ಧುಬ್ರಿ, ಉತ್ತರಪ್ರದೇಶದ ವಾರಾಣಸಿ ಆಟಿಕೆ ಉತ್ಪಾದನಾ ನಗರಗಳಾಗಿ ಬೆಳೆದಿವೆ ಎಂದರು.
ದೇಸೀ ನಾಯಿ ಸಾಕಿ:ದೇಸೀ ತಳಿಗಳ ನಾಯಿಗಳನ್ನು ಸಾಕುವುದು ಅಗತ್ಯ ಎಂದು ಮೋದಿ ಪ್ರತಿಪಾದಿಸಿದರು. ದೇಶದ ಭದ್ರತಾ ಕಾರ್ಯಾಚರಣೆಗಳಲ್ಲಿ ಶ್ವಾನಗಳ ಪಾತ್ರ ಮಹತ್ವದ್ದಾಗಿದೆ. ಅಪಘಾತದ ಸ್ಥಳಗಳಲ್ಲೇ ಆಗಲಿ ಬಾಂಬ್ ನಿಷ್ಕ್ರಿಯಗೊಳಿಸುವ ಕಾರ್ಯದಲ್ಲೇ ಆಗಲಿ ನಾಯಿಗಳು ಉತ್ತಮ ಸೇವೆ ಸಲ್ಲಿಸುತ್ತಿವೆ. ಮನೆಗಳಲ್ಲಿ ನಾಯಿ ಸಾಕುವುದಾದರೆ ದೇಸೀ ತಳಿಯದನ್ನೇ ಸಾಕಿ ಎಂದು ಜನರಿಗೆ ಮನವಿ ಮಾಡಿದರು. ಭಾರತೀಯ ಸೇನೆಯ ವಿದಾ ಮತ್ತು ಸೋಫಿ ಹೆಸರಿನ ಶ್ವಾನಗಳನ್ನು ಮೋದಿ ವಿಶೇಷವಾಗಿ ಉಲ್ಲೇಖಿಸಿದರು. ವಿವಿಧ ಕಾರ್ಯಾಚರಣೆಗಳಲ್ಲಿ ವಹಿಸಿದ ಪಾತ್ರಕ್ಕಾಗಿ ಈ ಶ್ವಾನಗಳನ್ನು ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಗೌರವಿಸಲಾಗಿತ್ತು.
ಮುಧೋಳ ತಳಿ ಬೆಸ್ಟ್:ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಕರ್ನಾಟಕದ ಮುಧೋಳ ನಾಯಿ ತಳಿಯನ್ನು ಪ್ರಸ್ತಾಪಿಸಿದರು. ಭಾರತದ ತಳಿಗಳಲ್ಲಿ ಮುಧೋಳ ಹೌಂಡ್ ಮತ್ತು ಹಿಮಾಚಲಿ ಹೌಂಡ್ ಅತ್ಯುತ್ತಮ ತಳಿಗಳೆಂದು ಬಣ್ಣಿಸಿದರು. ಮುಧೋಳ ಹೌಂಡ್ ಶ್ವಾನಗಳಿಗೆ ತರಬೇತಿ ನೀಡಿ ಭೂಸೇನೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ಎಫ್) ಮತ್ತು ಎನ್​ಎಸ್​ಜಿ ಪಡೆಗಳಿಗೆ ಸೇರ್ಪಡೆ ಮಾಡಿರುವುದನ್ನು ಉಲ್ಲೇಖಿಸಿದರು.
ಚೀನಾ ಕಬಂಧಬಾಹು: ಭಾರತದಲ್ಲಿ ಮಕ್ಕಳ ಮನರಂಜನೆಯ ಆಟಿಕೆಗಳ ಪೈಕಿ ದೇಶದಲ್ಲಿ ತಯಾರಾಗುವುದು ಶೇಕಡ 20 ಮಾತ್ರ. ಆಮದಾಗುವ ಉಳಿದ ಶೇ.80 ಆಟಿಕೆಗಳಲ್ಲಿ ಚೀನಾದ ಪಾಲೇ ಹೆಚ್ಚು. ಜಗತ್ತಿನ ಆಟಿಕೆ ಮಾರುಕಟ್ಟೆಯ ಒಟ್ಟು ಮೌಲ್ಯ ಅಂದಾಜು 7 ಲಕ್ಷ ಕೋಟಿ ರೂ. ಇದರಲ್ಲಿ ಭಾರತದ ಪಾಲು ಕೇವಲ 4,000 ಕೋಟಿ ರೂ. ಜಗತ್ತಿನ ಆಟಿಕೆಗಳಲ್ಲಿ ಶೇ.80ನ್ನು ಚೀನಾವೇ ಸರಬರಾಜು ಮಾಡುತ್ತದೆ.
9 ತಾಸಿನ ನಿದ್ದೆಯೇ ಉದ್ಯೋಗ; ಲಕ್ಷ ರೂ. ಸಂಬಳ; ಷರತ್ತುಗಳು ಅನ್ವಯ….!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − four =
Remember me
