ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷೆಯ ಗಗನಯಾನ ಮಿಷನ್​ನ ಹೆಜ್ಜೆಯಾಗಿ ಮಾನವರಹಿತ ಉಡಾವಣಾ ಹಾರಾಟ ವಾಹನ ಟೆಸ್ಟ್ ವೆಹಿಕಲ್ ಡಿ1 (ಟಿವಿ-ಡಿ1) ಶನಿವಾರ ಯಶಸ್ವಿಯಾಗಿ ನಡೆಯಿತು. ಆರಂಭದಲ್ಲಿ ಉಂಟಾದ ಅಡಚಣೆಯನ್ನು ನಿವಾರಿಸಿಕೊಂಡು ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ನಿಲ್ದಾಣದಿಂದ ನಭೋಮಂಡಲಕ್ಕೆ ನೆಗೆದ ರಾಕೆಟ್, ಗಗನಯಾನದ ಸಿಬ್ಬಂದಿ ಮಾಡ್ಯೂಲ್​ನ (ಕ್ರ್ಯೂ ಮಾಡ್ಯುಲ್) ತುರ್ತು ನಿರ್ಗಮನ ವ್ಯವಸ್ಥೆಯನ್ನು (ಕ್ರ್ಯೂ ಎಸ್ಕೇಪ್ ಸಿಸ್ಟಂ-ಸಿಇಎಸ್) ಪರೀಕ್ಷಿಸಿತು.
ಥ್ರಸ್ಟರ್​ನಿಂದ ಬೇರ್ಪಟ್ಟ ಮಾಡ್ಯೂಲ್, ಉಡಾವಣೆಗೊಂಡ ಹತ್ತು ನಿಮಿಷದ ನಂತರ ಸಮುದ್ರದ ಮೇಲೆ ಯಶಸ್ವಿಯಾಗಿ ಇಳಿಯಿತು. ಕಾರ್ಯಾಚರಣೆ ಯಶಸ್ವಿಗೊಳ್ಳುತ್ತಲೇ ಶ್ರೀಹರಿ ಕೋಟಾದ ಮಿಷನ್ ಟೆಸ್ಟ್ ಸೆಂಟರ್​ನಲ್ಲಿ ಇಸ್ರೋ ವಿಜ್ಞಾನಿಗಳು ಮತ್ತು ತಂತ್ರಜ್ಞರ ಹಷೋದ್ಗಾರ ಮುಗಿಲು ಮುಟ್ಟಿತು.
‘ಗಗನಯಾನ’ ವಾಹನದ ಸಿಬ್ಬಂದಿಯ (ಗಗನ ಯಾನಿಗಳು) ತುರ್ತು ನಿರ್ಗಮನ ವ್ಯವಸ್ಥೆಯ ದಕ್ಷತೆಯನ್ನು ಪರೀಕ್ಷಿಸುವುದು ಶನಿವಾರದ ಮಿಷನ್​ನ ಮುಖ್ಯ ಉದ್ದೇಶವಾಗಿತ್ತು. ‘ಮಿಷನ್ ಯಶಸ್ವಿಯಾಗಿ ನಡೆಯಿತು’ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಪ್ರಕಟಿಸಿದರು. ಕ್ರ್ಯೂ ಎಸ್ಕೇಪ್ ಸಿಸ್ಟಂ ಪ್ರದರ್ಶಿಸುವುದು ಮಿಷನ್​ನ ಉದ್ದೇಶವಾಗಿತ್ತು. ವಾಹನವು ಶಬ್ದದ ವೇಗಕ್ಕಿಂತ ಸ್ವಲ್ಪ ಜಾಸ್ತಿ ವೇಗದಲ್ಲಿ ಚಲಿಸಿ, ನಂತರ ಕ್ರ್ಯೂ ಎಸ್ಕೇಪ್ ಸಿಸ್ಟಂ ಪರೀಕ್ಷಿಸಿತು. ಎಸ್ಕೇಪ್ ಸಿಸ್ಟಂ, ಕ್ರ್ಯೂ ಮಾಡ್ಯೂಲ್ ಅನ್ನು ವಾಹನದಿಂದ ದೂರ ಒಯ್ದು ಬಂಗಾಳ ಕೊಲ್ಲಿಯಲ್ಲಿ ನಿಖರವಾಗಿ ಇಳಿಯುವುದರ ಸಹಿತ ಎಲ್ಲ ಕಾರ್ಯಾಚರಣೆಗಳು ಯೋಜನೆಯಂತೆ ಯಶಸ್ವಿಯಾಗಿ ನಡೆದವು ಎಂದು ಅವರು ವಿವರಿಸಿದರು.
2 ತಾಸು ವಿಳಂಬ: ಟಿವಿ-ಡಿ1 ಅನ್ನು ಪ್ರಥಮ ಲಾಂಚ್ ಪ್ಯಾಡ್​ನಿಂದ ಬೆಳಗ್ಗೆ 8 ಗಂಟೆಗೆ ಹಾರಿಸಬೇಕಿತ್ತು. ಪ್ರತಿಕೂಲ ಹವಾಮಾನದ ಕಾರಣ 8.45ಕ್ಕೆಂದು ಪರಿಷ್ಕರಿಸಲಾಯಿತು. ಆದರೆ, 8.45ಕ್ಕೆ ಹಾರಾಟ ನಡೆಸುವ ಕೇವಲ ಐದು ಸೆಕೆಂಡ್ ಮುಂಚೆ ಕೌಂಟ್​ಡೌನ್ ಸ್ಥಗಿತಗೊಂಡಿತು. ಇಸ್ರೋ ವಿಜ್ಞಾನಿಗಳು ಹಾಗೂ ತಂತ್ರಜ್ಞರು ದೋಷವನ್ನು ಕಂಡು ಹಿಡಿದು ಅಂತಿಮವಾಗಿ ಬೆಳಗ್ಗೆ 10 ಗಂಟೆಗೆ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿದರು. ವ್ಯವಸ್ಥೆಯಲ್ಲಿ ನಿಗಾ (ಮಾನಿಟರಿಂಗ್) ದೋಷ ಕಂಡು ಬಂದಿದ್ದು ಅದನ್ನು ತಕ್ಷಣವೇ ಗುರುತಿಸಿ ವೇಗವಾಗಿ ಸರಿಪಡಿಸಲು ಸಾಧ್ಯವಾಯಿತು ಎಂದು ಸೋಮನಾಥ್ ಹೇಳಿದರು.
ಇಂಜಿನ್ ಸಮಸ್ಯೆ:ಪರಿಷ್ಕೃತ ಸಮಯ ಬೆಳಗ್ಗೆ 8.45ಕ್ಕೆ ಟೆಸ್ಟ್ ವಾಹನ ಟಿವಿ-ಡಿ1 ಹೊತ್ತ ಏಕ-ಹಂತದ ದ್ರವ ಚಾಲಿತ ರಾಕೆಟ್ ಇನ್ನೇನು ನಭಕ್ಕೆ ನೆಗೆಯಲಿರುವ ಕೇವಲ ಐದು ಸೆಕೆಂಡ್ ಮುಂಚೆ ‘ಹೋಲ್ಡ್’ (ತಡೆ ಹಿಡಿಯಿರಿ) ಎಂಬ ಸಂಕೇತ ಪರದೆ ಮೇಲೆ ಪ್ರದರ್ಶನಗೊಂಡಿತು. ದೋಷವೊಂದರ ಕಾರಣದಿಂದ ನಿಗದಿತ ವೇಳೆಯಲ್ಲಿ ಇಂಜಿನ್ ಪ್ರಜ್ವಲಿಸಲಿಲ್ಲ. ಏನು ತಪ್ಪಾಗಿದೆ ಎಂದು ಕಂಡು ಹಿಡಿಯಬೇಕಾಯಿತು. ವಾಹನ ಸುರಕ್ಷಿತವಾಗಿತ್ತು ಎಂದು ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ವಿಳಂಬದ ಕಾರಣವನ್ನು ವಿವರಿಸಿದ್ದಾರೆ. ದೋಷವನ್ನು ಕಂಡು ಹಿಡಿದು ಕ್ಷಿಪ್ರವಾಗಿ ಸರಿಪಡಿಸಿ ನಿಗದಿತ ಪರಿಷ್ಕೃತ ಸಮಯ 10 ಗಂಟೆಗೆ ರಾಕೆಟ್ ಚಿಮ್ಮಿದಾಗ, ಆರಂಭಿಕ ಸಮಸ್ಯೆಯಾದಾಗ ಚಿಂತಿತರಾಗಿದ್ದ ಇಸ್ರೋ ವಿಜ್ಞಾನಿಗಳ ಮೊಗದಲ್ಲಿ ಮತ್ತೆ ನಗು ಮೂಡಿತು.
ಉದ್ದೇಶ ಏನು?: ಶನಿವಾರ ನಡೆದ ಪರೀಕ್ಷಾರ್ಥ ವಾಹನ ಉಡಾವಣೆಯು ಮಹತ್ವಾಕಾಂಕ್ಷೆಯ ‘ಗಗನಯಾನ’ ಕಾರ್ಯಕ್ರಮದ ಮಹತ್ವದ ಪೂರ್ವಭಾವಿ ಪ್ರಕ್ರಿಯೆ ಯಾಗಿದೆ. 400 ಕಿಲೋ ಮೀಟರ್ ಎತ್ತರದಲ್ಲಿ ಭೂಮಿಯ ಕೆಳ ಕಕ್ಷೆಯ (ಲೋ ಅರ್ತ್ ಆರ್ಬಿಟ್) ಬಾಹ್ಯಾಕಾಶಕ್ಕೆ ಮೂರು ದಿನ ಕಾಲ ಮಾನವರನ್ನು ಕಳಿಸಿ ಅವರನ್ನು ಸುರಕ್ಷಿತವಾಗಿ ಭೂಮಿಗೆ ವಾಪಸ್ ಕರೆದುಕೊಂಡು ಬರುವುದು ಗಗನಯಾನ ಕಾರ್ಯಕ್ರಮದ ಗುರಿಯಾಗಿದೆ. ಗಗನಯಾನ ಮಿಷನ್ ಮೂಲಕ ಭಾರತ ತನ್ನ ಮಾನವಸಹಿತ ವ್ಯೋಮಯಾನ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ. 2024ರಲ್ಲಿ ಗಗನಯಾನ ಮಿಷನ್ ಕಾರ್ಯರೂಪಕ್ಕೆ ಬರಲಿದೆ. ಚಂದ್ರಯಾನ-3ರ ಯಶಸ್ಸು ಹಾಗೂ ಸೂರ್ಯನ ಅಧ್ಯಯನಕ್ಕೆ ಆದಿತ್ಯ-ಎಲ್1 ನೌಕೆಯನ್ನು ಹಾರಿಬಿಟ್ಟ ಯಶಸ್ಸಿನ ಬೆನ್ನಲ್ಲೇ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವತ್ತ ದಾಪುಗಾಲು ಇಡುತ್ತಿದೆ. ಅದರ ಭಾಗವಾಗಿ, 2035ರ ವೇಳೆಗೆ ಅಂತರಿಕ್ಷ ನಿಲ್ದಾಣ ಸ್ಥಾಪನೆ ಮತ್ತು ಶುಕ್ರ ಆರ್ಬಿಟರ್ ಹಾಗೂ ಮಂಗಳ ಲ್ಯಾಂಡರ್ ಯೋಜನೆಗಳನ್ನೂ ರೂಪಿಸಲಾಗುತ್ತಿದೆ.
ಪ್ರಧಾನಿ ಮೋದಿ ಅಭಿನಂದನೆ: ಗಗನಯಾನದ ಎಸ್ಕೇಪ್ ಮಾಡ್ಯೂಲ್​ನ ಯಶಸ್ವಿ ಹಾರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ಸೂಚಿಸಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಇದು ಪ್ರಥಮ ಮಾನವಸಹಿತ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮದತ್ತ ಭಾರತವನ್ನು ಇನ್ನೂ ‘ಒಂದು ಹೆಜ್ಜೆ ಸಮೀಪ’ ಕರೆದೊಯ್ದಿದೆ ಎಂದು ಮೋದಿ ಎಕ್ಸ್​ನಲ್ಲಿ ಟ್ವೀಟ್ ಮಾಡಿದ್ದಾರೆ.
ವಾಸಯೋಗ್ಯ ಕ್ಯಾಪ್ಸೂಲ್: ಗಗನಯಾನ ಮಿಷನ್​ಗೆ ಅಗತ್ಯವಾದ ಮಾನವ ವಾಸಯೋಗ್ಯವಾದ ವ್ಯೋಮ ಕ್ಯಾಪ್ಸೂಲ್ ಅಭಿವೃದ್ಧಿಪಡಿಸುವುದು ಮಿಷನ್​ನ ಗುರಿಯಾಗಿದೆ. ಗಗನಯಾನ ಮಿಷನ್ ಭಾರತವನ್ನು ಮಾನವಸಹಿತ ಬಾಹ್ಯಾಕಾಶ ನೌಕೆ ಹಾರಾಟ ನಡೆಸಿದ 4ನೇ ದೇಶವಾಗಿ ಹೊರಹೊಮ್ಮಿಸಲಿದೆ. ಅಮೆರಿಕ, ರಷ್ಯಾ ಮತ್ತು ಚೀನಾ ಈಗಾಗಲೇ ಈ ಸಾಧನೆ ಮಾಡಿರುವ ಮೂರು ರಾಷ್ಟ್ರಗಳಾಗಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + nineteen =
Remember me
