| ಸುನೀಲ್ ಬಾರ್ಕರ್
ಹೈಪರ್​ಫಾಗಿಯಾ (Hyperphagia) ಎಂಬುದು ವಲಸೆ ಹೋಗುವ ಪಕ್ಷಿಗಳಲ್ಲಿ ಕಂಡುಬರುವ ದೈಹಿಕ ಬದಲಾವಣೆಯ ಪ್ರಕ್ರಿಯೆ. ದೂರಪಯಣಕ್ಕೆ ದೈಹಿಕವಾಗಿ ಪಕ್ಷಿಯನ್ನು ಸಜ್ಜುಗೊಳಿಸಲು ನಿಸರ್ಗ ಕಂಡುಕೊಂಡ ಉಪಾಯವದು. ಈ ಸಮಯದಲ್ಲಿ ಹಕ್ಕಿಗಳ ದೇಹದಲ್ಲಿನ ಹಾಮೋನುಗಳಲ್ಲಿ ಏರುಪೇರಾಗಿ ದೇಹದಲ್ಲೆಡೆ ಕೊಬ್ಬಿನ ಶೇಖರಣೆ ಹೆಚ್ಚಿ ದೇಹದ ತೂಕ ಗಣನೀಯವಾಗಿ ಏರುತ್ತದೆ. ನಿರ್ದಿಷ್ಟ ವಾರ್ಷಿಕ ವೇಳಾಪಟ್ಟಿ ಅನುಸರಿಸಿ ಪ್ರತಿಬಾರಿಯೂ ಹೆಚ್ಚುಕಡಿಮೆ ಅದೇ ಸಮಯ ಮತ್ತು ಮಾರ್ಗದಲ್ಲಿ ಪ್ರವಾಸಗೈಯುವ ಖಗಗಳ ವಲಸೆಗೆ ಪ್ರಮುಖ ಕಾರಣಗಳು ಆಹಾರ, ಸಂತಾನಾಭಿವೃದ್ಧಿ ಮತ್ತು ಹವಾಮಾನ. ಈ ಮೂರು ವಿಷಯಗಳ ಜೊತೆಗೆ ಆಯಾ ಪಕ್ಷಿಗಳ ಜೀವನಶೈಲಿ ಮತ್ತು ಸ್ವಭಾವನ್ನಾಧರಿಸಿ ಪಕ್ಷಿಗಳು ಸ್ಥಳೀಯ, ಪ್ರಾದೇಶಿಕ, ದೂರ ಮತ್ತು ಅತಿ ದೂರ ವಲಸೆ ಕೈಗೊಳ್ಳುತ್ತವೆ.
ವಲಸೆಯ ಈ ಪ್ರಕ್ರಿಯೆ ಎಲ್ಲ ಜಾತಿಯ ಹಕ್ಕಿಗಳಲ್ಲೂ ಕಂಡುಬರದೇ ಈ ಭೂಮಿಯಲ್ಲಿರುವ 10 ಸಾವಿರ ಜಾತಿಯ ಹಕ್ಕಿಗಳ ಪೈಕಿ ಶೇ.20 ಅಂದರೆ 2 ಸಾವಿರ ಜಾತಿಯ ಹಕ್ಕಿಗಳಿಗಷ್ಟೇ ಸೀಮಿತವಾಗಿದೆ. ತಮ್ಮ ಜೀವನದ ಜೋಕಾಲಿಯನ್ನು ಜೀಕಲು ಬಾನಾಡಿಗಳು ಕೈಗೊಳ್ಳುವ ಪರಿಶ್ರಮದ ವಲಸೆಯ ಸಮಯವೇ ಅವುಗಳ ಪಾಲಿಗೆ ಕಂಟಕಪ್ರಾಯವಾಗಿ ಪರಿಣಮಿಸಿದ್ದು. ವಲಸೆ ಹೋಗುವ ಪಕ್ಷಿಗಳು ಹಿಂತಿರುಗಿ ಬರುವ ಸಂಭಾವ್ಯತೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತ ಹೋಗುತ್ತಿದೆ. ಕೆಲವು ವಲಸೆ ಪಕ್ಷಿಗಳಂತೂ ಕಾಯಮ್ಮಾಗಿ ಈ ಜಗತ್ತಿನಿಂದಲೇ ನಿರ್ಗಮಿಸಿದ್ದು, ಇದಕ್ಕೆಲ್ಲ ಕಾರಣ ಹುಡುಕಹೊರಟರೆ ಬೇಟೆ, ಅರಣ್ಯನಾಶ, ವ್ಯವಸಾಯದಲ್ಲಿ ವಿಪರೀತ ರಾಸಾಯನಿಕಗಳ ಬಳಕೆ ಇವೆಲ್ಲ ಮುಂಚೂಣಿಯಲ್ಲಿ ನಿಲ್ಲುತ್ತವೆ.
ಜನಸಂಖ್ಯೆ ಹೆಚ್ಚಿದಂತೆಲ್ಲ ವಸಾಹತುಗಳು ವಲಸೆ ಪಕ್ಷಿಗಳ ಪಯಣದ ದಾರಿಯ ತಂಗುದಾಣಗಳನ್ನೆಲ್ಲ ಅತಿಕ್ರಮಿಸಿ ಅವುಗಳಿಗೆ ನೆಲೆಯಿಲ್ಲದಂತೆ ಮಾಡಿದೆ. ಪಕ್ಷಿಗಳು ತಮ್ಮ ಪಯಣದ ಮಾರ್ಗವನ್ನು ಗುರುತಿಸುವುದು ಭೂಮಿಯ ಅಯಸ್ಕಾಂತ ಕ್ಷೇತ್ರದ ಆಧಾರದ ಮೇಲೆ. ಆದರೆ ವಿದ್ಯುತ್ ಪ್ರಸರಣದಲ್ಲಿ ನಾವು ಬಳಸುವ ಭಾರಿ ವಿದ್ಯುತ್ ಪರಿವರ್ತಕಗಳು ಬಾನಾಡಿಗಳ ದಾರಿ ತಪ್ಪಿಸುತ್ತವೆ. ದೂರದ ದಾರಿ ಕ್ರಮಿಸುವ ಧಾವಂತದಲ್ಲಿ ಮುನ್ನುಗ್ಗುವ ಹಕ್ಕಿಗಳು ಈಗಿನ ಕಾಪೋರೇಟ್ ಶೈಲಿಯ ಕಟ್ಟಡಗಳಲ್ಲಿ ಟ್ರೆಂಡ್ ಆಗಿರುವ ಬೆಳಕನ್ನು ಪ್ರತಿಫಲಿಸುವ ಗಾಜುಗಳಿಗೆ ಡಿಕ್ಕಿ ಹೊಡೆದು ಪ್ರಾಣಬಿಡುತ್ತಿವೆ. ಪವನ ವಿದ್ಯುತ್ ತಯಾರಿಕೆಯಲ್ಲಿ ಉಪಯೋಗಿಸುವ ದೊಡ್ಡ ರೆಕ್ಕೆಗಳ ಯಂತ್ರಗಳಿಗೆ ಸಿಕ್ಕು ಮರಣಹೊಂದುವ ಪಕ್ಷಿಗಳ ಸಂಖ್ಯೆ ಕೂಡ ಗಣನೀಯ ಆಗಿರುವುದರಿಂದ ಪವನ ವಿದ್ಯುತ್ ಸ್ಥಾವರಗಳ ನಿರ್ವಣವನ್ನು ಹಲವು ಪಕ್ಷಿಪ್ರೇಮಿ ಸಂಘಟನೆಗಳು ವಿರೋಧಿಸುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಇಡಿ ಖಗಸಂಕುಲವೇ ಭೂಮಿಯಿಂದ ನಿರ್ನಾಮವಾಗುವ ಆತಂಕದ ಹಿನ್ನೆಲೆಯಲ್ಲಿ ಅವುಗಳನ್ನು ಉಳಿಸುವ ತುರ್ತನ್ನು ಮನಗಂಡು ಜನಜಾಗೃತಿಯ ಜೊತೆಗೆ ಸಂರಕ್ಷಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ 1993ರಲ್ಲಿ ಅಮೆರಿಕದ ಸ್ಮಿತ್​ಸೋನಿಯನ್ ವಲಸೆ ಪಕ್ಷಿಗಳ ಕೇಂದ್ರ ‘ಜಾಗತಿಕ ವಲಸೆ ಹಕ್ಕಿಗಳ ದಿನ’ ಎಂಬ ಕಾರ್ಯಕ್ರಮವನ್ನು ಆರಂಭಿಸಿತು. ನಂತರದ ವರ್ಷಗಳಲ್ಲಿ ಮತ್ತಷ್ಟು ದೇಶಗಳ ಸಂಘಸಂಸ್ಥೆಗಳು ಕೈ ಜೋಡಿಸಿ ಗಮನಸೆಳೆದ ಹಿನ್ನೆಲೆಯಲ್ಲಿ ಸಂಯುಕ್ತ ರಾಷ್ಟ್ರಗಳ ವಲಸೆಹಕ್ಕಿಗಳ ಸಂರಕ್ಷಣಾ ಒಪ್ಪಂದದ ಅಡಿಯಲ್ಲಿ 2006 ರಿಂದ ಮೇ ತಿಂಗಳ ಎರಡನೇ ಶನಿವಾರವನ್ನು ‘ಜಾಗತಿಕ ವಲಸೆ ಹಕ್ಕಿಗಳ ದಿನ’ ಎಂದು ನಿರ್ಧರಿಸಲಾಯಿತು. ಜಾಗತಿಕವಾಗಿ ವಿವಿಧ ಪಕ್ಷಿಪ್ರೇಮಿಗಳು, ಸಂಘಗಳು ವಲಸೆಹಕ್ಕಿಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಶಿಬಿರಗಳನ್ನು, ಪಕ್ಷಿವೀಕ್ಷಣಾ ಕಾರ್ಯಕ್ರಗಳನ್ನು ಹಮ್ಮಿಕೊಳ್ಳುವ ಈ ಆಚರಣೆಯಲ್ಲಿ ಇದೀಗ 118 ರಾಷ್ಟ್ರಗಳು ಭಾಗವಹಿಸುತ್ತಿವೆ. ಪ್ರತಿವರ್ಷವೂ ಒಂದೊಂದು ಘೊಷವಾಕ್ಯಗಳನ್ನು ನೀಡಿ ಅದಕ್ಕನುಸಾರವಾಗಿ ಕಾರ್ಯಕ್ರಮಗಳನ್ನು ಸಂಯುಕ್ತರಾಷ್ಟ್ರಗಳು ರೂಪಿಸುತ್ತವೆ. ಪ್ರಸಕ್ತ ವರ್ಷದ ಘೊಷವಾಕ್ಯ ‘ಪಕ್ಷಿಗಳು ನಮ್ಮ ಜಗತ್ತನ್ನು ಸಂರ್ಪಸುತ್ತವೆ’. ಆದರೆ ಮೇ ತಿಂಗಳಲ್ಲಿ ಅಮೆರಿಕವನ್ನು ಹೊಂದಿಕೊಂಡಿರುವ ಕೆಲವು ರಾಷ್ಟ್ರಗಳಿಗಷ್ಟೇ ವಲಸೆ ಹಕ್ಕಿಗಳು ಭೇಟಿ ನೀಡುವ ಸಮಯವಾಗಿದ್ದುದರಿಂದ ಹಲವು ಅಪಸ್ವರಗಳು ಕೇಳಿಬಂದ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ಈ ಆಚರಣೆಯನ್ನು ವರ್ಷಕ್ಕೆರಡು ಬಾರಿ ಅಂದರೆ ಮೇ ಮತ್ತು ಅಕ್ಟೋಬರ್​ನ ಎರಡನೇ ಶನಿವಾರದಂದು ಆಚರಿಸಲಾಗುತ್ತಿದೆ.
ವಲಸೆಯೆಂದ ಮಾತ್ರಕ್ಕೆ ಅದು ಆಗಸಕ್ಕಷ್ಟೇ ಮಿತಿಯಾಗಬೇಕಿಲ್ಲ. ಆಸ್ಟ್ರೇಲಿಯಾದಲ್ಲಿ ಕಂಡುಬರುವ ಹಾರಲಾರದ ಎಮು ಹಕ್ಕಿ ಆಹಾರವನ್ನು ಹುಡುಕುತ್ತ ನಡೆದುಕೊಂಡೇ ಸ್ಥಳೀಯವಾಗಿ ವಲಸೆ ಹೋಗುತ್ತವೆ. ಅದೇ ರೀತಿ ಪೆಂಗ್ವಿನ್​ಗಳ ಪೈಕಿ ಕೆಲವು ನೀರಿನಲ್ಲಿ ಈಜಿಕೊಂಡು ಪ್ರಾದೇಶಿಕ ವಲಸೆಯನ್ನು ಕೈಗೊಳ್ಳುತ್ತವೆ.
ಭಾರತಕ್ಕೆ ವಲಸೆ ಬರುವ ಮಾರ್ಗದಲ್ಲಿ ಹಿಮಾಲಯದ ಪರ್ವತಶ್ರೇಣಿಗಳನ್ನು ದಾಟಿ ಬರುವ ಪಟ್ಟಿತಲೆ ಬಾತುಗಳು ಅದಕ್ಕಾಗಿ ಸಮುದ್ರಮಟ್ಟದಿಂದ ಐದೂವರೆ ಮೈಲಿ ಮೇಲೆತ್ತರಕ್ಕೆ ಹಾರಿ ಹೆಚ್ಚು ಎತ್ತರದಲ್ಲಿ ಹಾರುವ ಪಕ್ಷಿಗಳೆನ್ನಿಸಿಕೊಂಡಿವೆ. ಆದರೆ ದಾಖಲೆಗಳ ಮಟ್ಟಿಗೆ ಹೇಳುವುದಾದರೆ 1975ರಲ್ಲಿ ಜೆಟ್ ವಿಮಾನವೊಂದಕ್ಕೆ ಸಮುದ್ರಮಟ್ಟದಿಂದ ಏಳು ಕಿಮಿ ಎತ್ತರದಲ್ಲಿ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ ರಪೆಲ್ಸ್ ಗ್ರಿಫಾನ್ ಹದ್ದು ಇದುವರೆಗೆ ಅತಿ ಹೆಚ್ಚಿನ ಎತ್ತರದಲ್ಲಿ ವಲಸೆ ಪಕ್ಷಿಯೊಂದು ಕಂಡುಬಂದಿರುವ ಖ್ಯಾತಿಗೊಳಗಾಗಿದೆ.
ನಾಲ್ಕು ಗ್ರಾಂನಷ್ಟು ತೂಗುವ ದಾಸರಿ ಹಕ್ಕಿ ಅಥವಾ ಹಮ್ಮಿಂಗ್ ಬರ್ಡ್ ವಲಸೆ ಹೋಗುವ ಪ್ರಪಂಚದ ಪುಟ್ಟ ಹಕ್ಕಿ. ಪ್ರತಿಗಂಟೆ 50 ಕಿ.ಮೀ. ವೇಗದಲ್ಲಿ ಚಲಿಸುವ ಇವುಗಳು ಸತತವಾಗಿ 600 ಮೈಲಿಗಳಷ್ಟು ದೂರ ವಿರಮಿಸದೆ ಹಾರಬಲ್ಲವು. ಒಂದು ಔನ್ಸ್​ನಷ್ಟು ತೂಗುವ ನಾರ್ದರ್ನ್ ವಿಟಿಯರ್ ಎಂಬ ಪುಟ್ಟಪಕ್ಷಿ ಆರ್ಕ್ಟಿಕ್​ನಿಂದ ಆಫ್ರಿಕಾಗೆ 9 ಸಾವಿರ ಮೈಲಿ ದೂರ ಕ್ರಮಿಸಿ ಪುಟ್ಟ ಹಾಡುಹಕ್ಕಿಗಳ ಪೈಕಿ ಅತಿ ದೂರ ಕ್ರಮಿಸುವ ಪಕ್ಷಿ ಎಂಬ ಖ್ಯಾತಿಗೊಳಗಾಗಿವೆ. ವರ್ಷವೂ ಉತ್ತರಧ್ರುವದಿಂದ ದಕ್ಷಿಣಧ್ರುವಕ್ಕೆ ಪಯಣಿಸುವ ಆರ್ಕ್ಟಿಕ್ ರೀವ ಪಕ್ಷಿ ಮಾರ್ಗಮಧ್ಯದಲ್ಲಿ ಹಲವು ಭೂಪ್ರದೇಶಗಳನ್ನು ಸುತ್ತುತ್ತ ಸಾಗುತ್ತದೆ. ಈ ಹಕ್ಕಿ ವರ್ಷವೊಂದಕ್ಕೆ ಹಾರಾಡುವ ದೂರ 81 ಸಾವಿರ ಕಿಲೋಮೀಟರ್​ಗಳು. 30 ವರ್ಷಗಳ ಕಾಲ ಬದುಕುವ ಈ ಪಕ್ಷಿಯ ಜೀವಮಾನದ ಹಾರಾಟವನ್ನು ಲೆಕ್ಕಹಾಕಿದರೆ ಅದರಲ್ಲಿ ಭೂಮಿಯಿಂದ ಚಂದ್ರನಲ್ಲಿಗೆ ಮೂರುಬಾರಿ ಹೋಗಿ ಬರಬಹುದು.
ಪಟ್ಟೆಬಾಲದ ಗಾಡ್ವಿಟ್​ಎಂಬ ಪಕ್ಷಿ ತನ್ನ ವಲಸೆಯ ಸಮಯದಲ್ಲಿ 7 ಸಾವಿರ ಮೈಲಿಯಷ್ಟು ದೂರವನ್ನು ಹಗಲು-ರಾತ್ರಿಯೆನ್ನದೆ 8 ದಿನಗಳ ಕಾಲ ವಿರಾಮವಿಲ್ಲದೆ ಕ್ರಮಿಸಿ ದೂರದ ಅವಿರತ ಪ್ರಯಾಣದ ದಾಖಲೆಗೆ ಪಾತ್ರವಾಗಿದೆ. ಪಕ್ಷಿಗಳಲ್ಲಿ ವೇಗದ ಖ್ಯಾತಿ ಕಂದು ಚಾಣಗಳಿಗಿದ್ದರೂ ಅದು ಬೇಟೆಗಾಗಿ ಮುನ್ನುಗುವಾಗ ಮಾತ್ರ. ಆದರೆ ವಲಸೆ ವಿಷಯದಲ್ಲಿ ಈ ಖ್ಯಾತಿ ದೊಡ್ಟಉಲ್ಲಂಕಿಯ ಪಾಲಾಗಿದ್ದು ತನ್ನ 4200 ಮೈಲಿಗಳ ಪಯಣವನ್ನು 60 ಮೈಲಿವೇಗದಲ್ಲಿ ಕ್ರಮಿಸುತ್ತದೆ. ಅಂದಹಾಗೆ ಈ ಉಲ್ಲಂಕಿಯ (snipe) ವೇಗದ ಖ್ಯಾತಿ ಎಷ್ಟೆಂದರೆ ಸ್ವಾತಂತ್ರ್ಯಪೂರ್ವ ಭಾರತದ ಬ್ರಿಟಿಷ್ ಸೈನಿಕರಲ್ಲಿ ಹಾರುತ್ತಿರುವ ಅತಿಹೆಚ್ಚು ಉಲ್ಲಂಕಿಗಳನ್ನು ಬಂದೂಕಿನಿಂದ ಹೊಡೆದುರುಳಿಸುವ ಗುರಿಕಾರರನ್ನು ಠ್ಞಜಿಟಛ್ಟಿ ಎಂಬ ಬಿರುದು ನೀಡಿ ಗೌರವಿಸಲಾಗುತ್ತಿತ್ತು.
(ಲೇಖಕರು ಪಕ್ಷಿತಜ್ಞರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 8 =
Remember me
