ರಾಮ ಜನ್ಮಸ್ಥಾನಕ್ಕಿದ್ದ ‘ವಿವಾದಿತ ಸ್ಥಳ’ ಎಂಬ ಹಣೆಪಟ್ಟಿಯಿಂದಾಗಿಯೇ ಅದೊಂದು ಮೂಲಸೌಕರ್ಯಗಳಿಲ್ಲದ ಮತ್ತು ಪೊಲೀಸ್ ಭದ್ರಕೋಟೆಯ ಯಾತ್ರಾಸ್ಥಳವಾಗಿ ಉಳಿದುಕೊಂಡದ್ದು. 1992ರಲ್ಲಿ ‘ಬಾಬರಿ ಕಟ್ಟಡ’ ಕೆಡವಿದ ನಂತರ ಅಲ್ಲಿ ಶ್ರೀರಾಮನ ದರ್ಶನ, ಪೂಜೆ, ಕೀರ್ತನೆಗಳಿಗೆ ನಿಷೇಧ ಹೇರಲಾಗಿತ್ತು. ಇದರಿಂದ ಭಕ್ತರು ಆಕ್ರೋಶಗೊಂಡು ನ್ಯಾಯಾಲಯದ ಮೊರೆ ಹೋಗಿದ್ದರಿಂದ 1993ರ ಜನವರಿ 1ರಂದು ಉತ್ತರ ಪ್ರದೇಶ ಹೈಕೋರ್ಟ್ ದರ್ಶನಕ್ಕೆ ಅನುವು ಮಾಡಿಕೊಟ್ಟಿತ್ತು. ಆದರೆ ಅಂದಿನ ಜಿಲ್ಲಾಧಿಕಾರಿ ಈ ಆದೇಶವನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಮಂದಿರ ದರ್ಶನಕ್ಕೂ ವ್ಯವಸ್ಥೆ ಮಾಡಲಿಲ್ಲ. ಹೀಗಾಗಿ, ಪ್ರಕರಣ ಮತ್ತೆ ಕೋರ್ಟ್ ಮೆಟ್ಟಿಲೇರಿತು. 1993ರ ತೀರ್ಪನ್ನು ಜಾರಿಗೊಳಿಸಿ ಎಂದು 1996ರಲ್ಲಿ ಕೋರ್ಟ್ ಖಡಕ್ಕಾಗಿ ಆದೇಶಿಸಿತು. ಆದರೆ, ಸುಪ್ರೀಂಕೋರ್ಟ್ ಮೆಟ್ಟಲೇರಿದ ಮುಸ್ಲಿಂ ಸಂಘಟನೆಗಳು ಹೈಕೋರ್ಟ್ ತೀರ್ಪಿಗೆ ತಡೆತರುವಲ್ಲಿ ಯಶಸ್ವಿಯಾದವು.
ಸಿಕ್ಕಿತು ಮಹತ್ವದ ಡೈರಿ:ಈ ಪ್ರದೇಶವೇ ರಾಮಜನ್ಮಸ್ಥಾನ ಎಂಬುದಕ್ಕೆ ಹಿಂದು ಸಂಘಟನೆಗಳು ಐತಿಹಾಸಿಕ ಗ್ರಂಥ, ಪುರಾತತ್ವ ಇಲಾಖೆ ವರದಿಗಳನ್ನು ಉಲ್ಲೇಖಿಸಿದ್ದವು ಮತ್ತು 2019ರಲ್ಲಿ ಸುಪ್ರೀಂಕೋರ್ಟ್ ಕೂಡ ತನ್ನ ತೀರ್ಪಿನಲ್ಲಿ ಈ ಅಂಶಗಳನ್ನು ಸವಿಸ್ತಾರವಾಗಿ ದಾಖಲು ಮಾಡಿದೆ. ವಿವಾದಿತ ಸ್ಥಳ ತಮಗೆ ಸೇರಿದ್ದು ಮತ್ತು ವಕ್ಪ್ ಮಂಡಳಿ ವಶದಲ್ಲಿದೆ ಎಂದು ಮುಸ್ಲಿಂ ಸಂಘಟನೆಗಳು ಅಲಹಾಬಾದ್ ಹೈಕೋರ್ಟ್​ನಲ್ಲಿ ದಾಖಲೆಗಳನ್ನು ಸಲ್ಲಿಸಿದ್ದ ಕಾಲವದು. ಭಗವಾನ್ ಶ್ರೀರಾಮನ ಪರ ವಕೀಲರು ಫ್ರಾನ್ಸ್ ಮೂಲದ ಪಾದ್ರಿ ಜೋಸೆಫ್ ಟೈಫನ್ ಥೇಲರ್ ಅವರ, ‘ಅಯೋಧ್ಯೆ ಹಿಂದುಗಳ ಶ್ರದ್ಧಾಕೇಂದ್ರ. ಇಲ್ಲಿ ಹಿಂದುಗಳು ಶ್ರೀರಾಮನಿಗೆ ಸಾಷ್ಟಾಂಗವಾಗಿ ನಮಸ್ಕರಿಸುತ್ತಾರೆ’ ಎಂಬ ಅಂಶಗಳುಳ್ಳ ಡೈರಿಯ ಕೆಲವು ಪುಟಗಳ ಝೆರಾಕ್ಸ್ ಪ್ರತಿಯನ್ನು ಕೋರ್ಟಿಗೆ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ನ್ಯಾಯಾಧೀಶರು, ‘ಮೂಲ ಡೈರಿ ಅಥವಾ ಪುಸ್ತಕದ ಅಧಿಕೃತ ಪ್ರತಿಯನ್ನು ಸಲ್ಲಿಸಿದರೆ ಮಾತ್ರ ನಿಮ್ಮ ವಾದ ಮಾನ್ಯ ಮಾಡುತ್ತೇವೆ. ನಕಲು ಪ್ರತಿ ಇಟ್ಟುಕೊಂಡು ನಾವೇನು ಮಾಡುವುದು’ ಎಂದಿದ್ದರು.
ಸುಪ್ರೀಂ ತೀರ್ಪಿನ ಪ್ರಮುಖ ಅಂಶಗಳು
ಅಯೋಧ್ಯೆ ಜಮೀನು ವಿವಾದ ಬಗ್ಗೆ ಸುಪ್ರೀಂಕೋರ್ಟ್ 929 ಪುಟಗಳ ತೀರ್ಪು ಮತ್ತು 116 ಪುಟಗಳ ಪ್ರತ್ಯೇಕ ತೀರ್ಪೆಂದನ್ನು ಪ್ರಕಟಿಸಿತು. ಎರಡೂ ತೀರ್ಪಗಳ ತಾತ್ಪರ್ಯ ಮಾತ್ರ ‘ವಿವಾದಿತ ಭೂಮಿ’ಯು ‘ರಾಮಜನ್ಮಸ್ಥಾನ’ ಎಂಬುದೇ ಆಗಿತ್ತು.
– ವಿವಾದಿತ ಸ್ಥಳ ತನ್ನದೆಂದು ಸುನ್ನಿ ವಕ್ಪ ಮಂಡಳಿ ಹೇಳಿಕೊಂಡರೂ, ಅದನ್ನು ಸಾಕ್ಷ್ಯಗಳ ಸಮೇತ ಸಾಬೀತುಪಡಿಸಿಲ್ಲ. 16ನೇ ಶತಮಾನದಲ್ಲಿ ಮಸೀದಿ ನಿರ್ವಣಗೊಂಡ ಕಾಲದಿಂದ ಹಿಡಿದು1857ರ ತನಕ ವಿವಾದಿತ ಸ್ಥಳದ ಒಳಾಂಗಣ ಪೂರ್ಣ ಪ್ರಮಾಣದಲ್ಲಿ ಮುಸಲ್ಮಾನರಿಗೆ ಸೇರಿದ್ದು ಎಂಬುದು ದೃಢಪಟ್ಟಿಲ್ಲ
– ಈ ಭೂಮಿ ನಿಮೋಹಿ ಅಖಾಡಕ್ಕೆ ಸೇರಬೇಕು ಎಂಬುದಕ್ಕೆ ತೋರಿಸಿದ ಪುರಾವೆಗಳು ತೃಪ್ತಿದಾಯಕವಾಗಿಲ್ಲ
– ಹಿಂದುಗಳ ಧಾರ್ವಿುಕ ಗ್ರಂಥಗಳಾದ ಸ್ಕಂದ ಪುರಾಣ, ವಾಲ್ಮೀಕಿ ರಾಮಾಯಣ ಮತ್ತು ಸ್ಥಳದಲ್ಲಿ ಸಿಕ್ಕ ಶಾಸನಗಳನ್ನು ಆಧರಿಸಿ ಹಿಂದುಗಳು ಅಯೋಧ್ಯೆಯ ವಿವಾದಿತ ಭೂಮಿಯನ್ನೇ ಜನ್ಮಸ್ಥಳ ಎಂದು ನಂಬಿ ಪೂಜಿಸುತ್ತಿದ್ದರು. ಹಲವು ಧಾರ್ವಿುಕ ಕೃತಿಗಳು ಇದನ್ನು ದೃಢೀಕರಿಸಿವೆ
– ಮೊಘಲ್ ಅರಸ ಅಕ್ಬರ್​ನ ಕುರಿತ ‘ಐನೆ ಇ ಅಕ್ಬರಿ’ಕೃತಿಯಲ್ಲಿ ಅಯೋಧ್ಯೆ ರಾಮಜನ್ಮಸ್ಥಾನದ ಬಗ್ಗೆ ವಿಸõತ ಚಿತ್ರಣವಿದೆ
– ಪ್ರವಾಸಿಗ ವಿಲಿಯಂ ಫಿಂಚ್ 1607ರಿಂದ 1611ರ ತನಕ ಭಾರತ ಪ್ರವಾಸ ಕೈಗೊಂಡಿದ್ದ. ಆತ ತನ್ನ ‘ಅರ್ಲಿ ಟ್ರಾವೆಲ್ಸ್ ಇನ್ ಇಂಡಿಯಾ’ ಕೃತಿಯಲ್ಲಿ ರಾಮನ ಕೋಟೆ ಮತ್ತು ಅದು ನಾಶವಾಗಿರುವುದರ ಬಗ್ಗೆ ಬರೆದಿದ್ದಾನೆ
– 1-11-1858ರಲ್ಲಿ ಬ್ರಿಟಿಷ್ ಸರ್ಕಾರ ವಿವಾದಿತ ಸ್ಥಳವನ್ನು ವಶಕ್ಕೆ ತೆಗೆದುಕೊಂಡಿತ್ತು. ಅಂದು ದಾಖಲು ಮಾಡಿದ್ದ ಅಧಿಕೃತ ಸರ್ಕಾರಿ ಕಡತಗಳಲ್ಲಿ ಮಸೀದಿಯನ್ನು ‘ಮಸೀದಿ ಜನ್ಮಸ್ಥಾನ’ ಎಂದು ಬರೆಯಲಾಗಿತ್ತು. ಅಂದರೆ ಅಂದಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳು ಈ ಮಸೀದಿಯು ಜನ್ಮಸ್ಥಾನದಲ್ಲಿ ನೆಲೆಗೊಂಡಿದೆ ಎಂದು ಭಾವಿಸಿದ್ದರು.
– 1-12-1858ರಲ್ಲಿ ಅವಧ್​ನ ಠಾಣೇದಾರ ಶೀತಲ್ ದುಬೆ ತಮ್ಮ ವರದಿಯಲ್ಲಿ ಮಸೀದಿಯನ್ನು ‘ಮಸೀದಿ ಜನ್ಮಸ್ಥಾನ’ ಎಂದೇ ದಾಖಲಿಸಿದ್ದರು. 1870ರಲ್ಲಿ ಅಯೋಧ್ಯೆ ಮತ್ತು ಅವಧ್ ಪ್ರದೇಶದ ಕಮಿಷನರ್ ಪಿ. ಕಾರ್ನ್​ಜೀ ಸಿದ್ಧಪಡಿಸಿದ್ದ ವರದಿಯಲ್ಲಿ ಮುಸಲ್ಮಾನರಿಗೆ ಮೆಕ್ಕಾ, ಯಹೂದಿಗಳಿಗೆ ಜೆರುಸಲೆಂ ಹೇಗೆ ಪವಿತ್ರ ಸ್ಥಳವೋ ಹಾಗೆ ಹಿಂದುಗಳಿಗೆ ಅಯೋಧ್ಯೆ ಎಂದು ಬರೆದಿದ್ದರು.
ಬೇರೆ ದಾಖಲೆಗಳನ್ನೂ ಪರಿಶೀಲಿಸಿದಾಗ ಬಾಬರಿ ಮಸೀದಿಯನ್ನು ‘ರಾಮಜನ್ಮಸ್ಥಾನ’ದಲ್ಲೇ ನಿರ್ಮಾಣ ಮಾಡಲಾಯಿತು ಎಂದು ಭಾಸವಾಗುತ್ತದೆ.
ಡೈರಿಗೆ ಹುಡುಕಾಟ ಶುರುವಾಯಿತು. ಕೊನೆಗೂ ಮುದ್ರಿತ ಪ್ರತಿಯೊಂದು ಫ್ರಾನ್ಸ್​ನ ಲೈಬ್ರೆರಿಯೊಂದರಲ್ಲಿದೆ ಎಂಬುದು ಗೊತ್ತಾಯ್ತು. ಈ ಮಾಹಿತಿಯನ್ನು ವಿಶ್ವ ಹಿಂದು ಪರಿಷತ್ ಮುಖಂಡ ಅಶೋಕ್ ಸಿಂಘಾಲ್ ಅವರು ವಿಎಚ್​ಪಿಯ ಅಂದಿನ ಕಾರ್ಯದರ್ಶಿ ಚಂಪತ್ ರಾಯ್ರೊಂದಿಗೆ ಹಂಚಿಕೊಂಡರು. ‘ಪುಸ್ತಕ ತರಿಸಿಕೊಳ್ಳಲೇಬೇಕು. ಇಲ್ಲದಿದ್ದಲ್ಲಿ ನಮ್ಮ ಕೇಸು ಬಿದ್ದುಹೋಗಲಿದೆ’ ಎಂದು ಸಿಂಘಾಲ್ ಚಿಂತಾಕ್ರಾಂತರಾಗಿದ್ದರು. 850 ಪುಟಗಳ ಪುಸ್ತಕದ ಮುಖಬೆಲೆ 8 ಲಕ್ಷ ರೂ. ಆಗಿತ್ತು. ಚಂಪತ್ ರಾಯ್, ಫ್ರಾನ್ಸ್ ದೂತಾವಾಸ ಕಚೇರಿ ಜತೆ ಸಂಪರ್ಕವಿದ್ದವರಿಂದ 8 ನಕಲು ಪ್ರತಿಗಳನ್ನು ಮುದ್ರಿಸಿ 2008ರಲ್ಲಿ ದೆಹಲಿಗೆ ತರಿಸಿಕೊಂಡರು. ಫ್ರೆಂಚ್ ಭಾಷೆಯಲ್ಲಿದ್ದ ಪುಸ್ತಕವನ್ನು ಇಂಗ್ಲಿಷ್​ಗೆ ತರ್ಜುಮೆ ಮಾಡಲಾಯ್ತು. ಅಯೋಧ್ಯೆಯ ವಿವಾದಿತ ಸ್ಥಳವೇ ಶ್ರೀರಾಮನ ಜನ್ಮಸ್ಥಾನ ಎಂಬ ಬಗ್ಗೆ ಶ್ರೀರಾಮನ ಪರ ವಕೀಲರು, ವಾಲ್ಮೀಕಿ ರಾಮಾಯಣ, ಅಯೋಧ್ಯೆ ಮಹಾತ್ಮೆ ಗ್ರಂಥಗಳ ಜತೆಗೆ ಈ ಪುಸ್ತಕದ ಆಧಾರದಲ್ಲಿಯೂ ವಾದ ಮಂಡಿಸಿದರು. ಪುರಾತತ್ವ ಇಲಾಖೆ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ‘ವಿವಾದಿತ ಕಟ್ಟಡವಿದ್ದ ಸ್ಥಳದಲ್ಲಿ ಉತ್ಖನನ ನಡೆಸಿದಾಗ ಹಿಂದು ದೇವಾಲಯದ ಅವಶೇಷಗಳು ಇರುವ ಬಗ್ಗೆ ವಿವರಗಳಿವೆ’ ಎಂಬುದನ್ನು ತಿಳಿಸಲಾಯಿತು. ಅದೂ ಕೂಡ ತೀರ್ಪು ‘ರಾಮ’ನ ಪರ ಬರಲು ಸಹಕಾರಿಯಾಯಿತು.
ತ್ರಿಲೋಕಿನಾಥ್ ಪಾಂಡೆ ಹೋರಾಟರಾಮಲಲ್ಲಾನ ಸ್ನೇಹಿತ, ಶ್ರೀರಾಮನ ಪ್ರತಿನಿಧಿ ಎನಿಸಿಕೊಂಡ ತ್ರಿಲೋಕಿನಾಥ್ ಪಾಂಡೆ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ವಾಸ್ತವದಲ್ಲಿ ಪಾಂಡೆ ಭಗವಾನ್ ಶ್ರೀರಾಮನ ಪ್ರತಿನಿಧಿ. ಅಯೋಧ್ಯೆಯ ಕರಸೇವಕಪುರಂಗೆ ಹತ್ತಿರದಲ್ಲಿರುವ ವಿಹಿಂಪ ಕಚೇರಿಯ ಕೋಣೆಯೇ ಅವರ ವಾಸಸ್ಥಾನ. ಮಂದಿರ ಹೋರಾಟ ಶುರುವಾದ ಮೇಲೆ ಹೆಚ್ಚಿನ ಸಮಯವನ್ನು ಕೋರ್ಟು ಕಚೇರಿಗಳಲ್ಲೇ ಕಳೆದಿದ್ದಾರೆ.
ದೇವತೆ ಅಥವಾ ವಿಗ್ರಹವನ್ನು ಭಾರತೀಯ ಕಾನೂನಿನಲ್ಲಿ ‘ನ್ಯಾಯಶಾಸ್ತ್ರೀಯ ವ್ಯಕ್ತಿ’ (ಜ್ಯೂರಿಸ್ಟಿಕ್ ಪರ್ಸನ್) ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ, ಅನೇಕ ಭಕ್ತರು ದೇವಾಲಯಗಳಲ್ಲಿರುವ ವಿಗ್ರಹದ ಮೇಲಿನ ಭಕ್ತಿಯಿಂದಲೇ ಭೂಮಿ, ಆಸ್ತಿ ದಾನ ಮಾಡುತ್ತಾರೆ. ಸಾಮಾನ್ಯವಾಗಿ, ಭಕ್ತ ಅಥವಾ ದೇಗುಲದ ವ್ಯವಸ್ಥಾಪಕ ಅಥವಾ ಟ್ರಸ್ಟಿಯೇ ಈ ದೇಗುಲದ ಆಸ್ತಿ ನಿರ್ವಹಣೆ ಮಾಡುವುದರಿಂದ ಅವರನ್ನು ವಿಗ್ರಹದ ‘ಸ್ನೇಹಿತ’ ಎನ್ನಲಾಗುತ್ತದೆ. ಹೀಗಾಗಿ, ಅಯೋಧ್ಯೆ ಪ್ರಕರಣದಲ್ಲಿ ತ್ರಿಲೋಕಿನಾಥ್ ಪಾಂಡೆ ಶ್ರೀರಾಮನ ಪ್ರತಿನಿಧಿ ಎನಿಸಿಕೊಂಡಿದ್ದಾರೆ. ಕೋರ್ಟ್​ಗಳಲ್ಲಿ ಅವರ ಪರವಾಗಿ ವಕೀಲರು ವಾದಿಸುತ್ತಾರೆ.
ಉತ್ತರ ಪ್ರದೇಶದ ಕೃಷಿ ಕುಟುಂಬದಲ್ಲಿ ಜನಿಸಿದ ತ್ರಿಲೋಕಿನಾಥ್ ಪಾಂಡೆ, ಸಣ್ಣ ವಯಸ್ಸಿನಿಂದಲೇ ವಿಹಿಂಪ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರಿಂದ ನಿರ್ದಿಷ್ಟ ನೌಕರಿಯಲ್ಲಿ ತೊಡಗಿಸಿಕೊಂಡಿರಲಿಲ್ಲ. ತನು-ಮನದಲ್ಲಿ ಸಂಘಟನೆಯೇ ಅವರ ಜೀವನಶಕ್ತಿಯಾಗಿತ್ತು. ಅವರೇ ಹೇಳುವಂತೆ, ಉತ್ತರ ಪ್ರದೇಶದ ಉದ್ದಗಲ ಪ್ರವಾಸ ಮಾಡಿ ಹಿಂದುಗಳ ಮುಸ್ಲಿಂ ಮತಾಂತರದ ವಿರುದ್ಧ ಹೋರಾಟ ನಡೆಸಿದರು ಮತ್ತು ಹಿಂದು ಒಗ್ಗಟ್ಟಿನ ಬಗ್ಗೆ ಜಾಗೃತಿ ಮೂಡಿಸಿದರು. ಬಾಬರಿ ಕಟ್ಟಡ ಕೆಡವಿದ್ದ ವೇಳೆ ಸಂಘಟನೆಯ ಅನೇಕರು ಕೋರ್ಟ್ ಕೇಸುಗಳ ಇಕ್ಕಟ್ಟಿನಲ್ಲಿ ಸಿಲುಕಿದ್ದರು. ಸಂಘಟನೆಯ 49 ಮಂದಿಗೆ ಕಾನೂನು ನೆರವು ಒದಗಿಸಿದ್ದ ಪಾಂಡೆಯವರು ಅವರನ್ನು ಸಂಕಷ್ಟದಿಂದ ಪಾರು ಮಾಡಿದ್ದರಂತೆ. 2010ರಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಬಳಿಕವೂ ಅವರು ಹಲವು ಬಾರಿ ದೆಹಲಿಗೆ ಬಂದಿದ್ದಾರೆ ಮತ್ತು ವಿವಿಧ ನ್ಯಾಯಾಲಯಗಳಿಗೆ ನೂರಾರು ಬಾರಿ ಹೋಗಿದ್ದಾರೆ. ‘ದಾಖಲೆ ಪತ್ರಗಳಿಗೆ ಸಹಿ ಹಾಕುವುದು ನನ್ನ ಕೆಲಸ. ಕೋರ್ಟ್​ನಲ್ಲಿ ನಾನು ಮಾತನಾಡುತ್ತಿರಲಿಲ್ಲ. ಶ್ರೀರಾಮನ ಪ್ರತಿನಿಧಿಯಾಗಿ ಶಿಸ್ತು, ಸಹನೆ, ಸಂಯಮದಿಂದ ಕಾನೂನು ಹೋರಾಟ ಮಾಡಿದೆ’ ಎನ್ನುತ್ತಾರೆ ಪಾಂಡೆ.
ಕನ್ನಡಿಗ ವಕೀಲರ ನಿರ್ಣಾಯಕ ಪಾತ್ರಭಗವಾನ್ ಶ್ರೀರಾಮನಿಗೆ ಸೀತಾನ್ವೇಷಣೆಯಲ್ಲಿ ಸಫಲತೆ ದೊರಕಿದ್ದು ಕರ್ನಾಟಕದಲ್ಲಿ ಜನಿಸಿದ ಹನುಮಂತನ ಭೇಟಿ ನಂತರ. ಹಾಗೆಯೇ ಅಯೋಧ್ಯೆ ಪ್ರಕರಣದಲ್ಲಿ ಕರ್ನಾಟಕ ಮೂಲದ ಕಾನೂನು ತಜ್ಞರು ಶ್ರೀರಾಮನ ಪರ ಹೋರಾಟಕ್ಕೆ ನಿಂತ ಬಳಿಕ ಕೇಸಿನಲ್ಲಿ ಉಂಟಾಗಿದ್ದ ಗೋಜಲುಗಳಿಂದ ಹೊರಬರಲು ಸಾಧ್ಯವಾಗಿತ್ತು. ಇದನ್ನು ಪ್ರಕರಣದಲ್ಲಿ ಶ್ರೀರಾಮನ ಪ್ರತಿನಿಧಿಯಾಗಿದ್ದ ತ್ರಿಲೋಕಿನಾಥ್ ಪಾಂಡೆಯವರೇ ನೆನೆಸಿಕೊಂಡಿದ್ದಾರೆ. ನಿವೃತ್ತ ನ್ಯಾಯಮೂರ್ತಿ ರಾಮಾ ಜೋಯಿಸ್, ನ್ಯಾ. ರಂಗ ವಿಠಲಾಚಾರ್, ಹಿರಿಯ ನ್ಯಾಯವಾದಿಗಳಾದ ಕೆ.ಎನ್.ಭಟ್, ಅಶೋಕ್ ಹಾರನಹಳ್ಳಿ ಅವರ ಕಾನೂನು ಸಲಹೆಗಳು ಇಲ್ಲದಿರುತ್ತಿದ್ದರೆ ನಾವು ಈ ಹಂತಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೋರಾಟದ ಮುಂಚೂಣಿಯಲ್ಲಿದ್ದ ಅನೇಕರು ಒಪ್ಪಿಕೊಳ್ಳುತ್ತಾರೆ. ರಾಮಾ ಜೋಯಿಸ್, ಅಶೋಕ್ ಹಾರನಹಳ್ಳಿ ವಿನಂತಿ ಮೇರೆಗೆ ಅಲಹಾಬಾದ್ ಹೈಕೋರ್ಟ್​ನಲ್ಲಿ ಶ್ರೀರಾಮನ ಪರ ಕಾನೂನು ಹೋರಾಟ ಮಾಡಲು ಕೆ.ಎನ್. ಭಟ್ ಮುಂದಾಗಿದ್ದರು.
ಸುಪ್ರೀಂಕೋರ್ಟ್ ದಿಟ್ಟ ನಿಲುವುನಿಮೋಹಿ ಅಖಾಡ, ರಾಮಲಲ್ಲಾ ಮತ್ತು ಸುನ್ನಿ ವಕ್ಪ ಮಂಡಳಿಗೆ ಭೂಮಿಯನ್ನು ಸಮಾನ ಹಂಚಿಕೆ ಮಾಡಿದ ಅಲಹಾಬಾದ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಕೆಯಾಗಿತ್ತಾದರೂ ಯಾವ ನ್ಯಾಯಮೂರ್ತಿ ಕೂಡ ಶತಮಾನದ ವಿವಾದಕ್ಕೆ ಅಂತ್ಯ ಹಾಡಲು ಮುಂದಾಗಲಿಲ್ಲ. 2019ರಲ್ಲಿ ಸಿಜೆಐ ರಂಜನ್ ಗೊಗೊಯ್ ಪ್ರಕರಣವನ್ನು ಸಂಧಾನದ ಮೂಲಕ ಬಗೆಹರಿಸಲು ಯತ್ನಿಸಿದರು. ಇದಕ್ಕಾಗಿ ನಿವೃತ್ತ ನ್ಯಾಯಮೂರ್ತಿ ಇಬ್ರಾಹಿಂ ಖಲಿಫುಲ್ಲಾ, ಶ್ರೀ ಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಶ್ರೀರಾಮ ಪಾಂಚು ಒಳಗೊಂಡ ಸಮಿತಿ ರಚನೆಗೊಂಡಿತು ಮತ್ತು ಅಯೋಧ್ಯೆಗೆ ತೆರಳಿ ಪ್ರಕರಣದ ಭಾಗೀದಾರರ ವಾದಗಳನ್ನು ಸುದೀರ್ಘವಾಗಿ ಆಲಿಸಲಾಯಿತು. ಆದರೆ, ಮಾತುಕತೆ ಮೂಲಕ ಬಗೆಹರಿಸಲು ಸಾಧ್ಯವಾಗಲಿಲ್ಲ. ಅದೇ ಅಭಿಪ್ರಾಯವುಳ್ಳ ವರದಿಯನ್ನು ಸುಪ್ರೀಂಕೊರ್ಟ್​ಗೆ ಸಲ್ಲಿಸಲಾಯಿತು. ಹೀಗಾಗಿ, ಸಿಜೆಐ ಗೊಗೊಯ್ 2019ರಲ್ಲಿ ಅಕ್ಟೋಬರ್​ನಲ್ಲಿ 1 ತಿಂಗಳ ಕಾಲಮಿತಿ ಹಾಕಿಕೊಂಡು ವಿಚಾರಣೆ ಪೂರ್ಣಗೊಳಿಸುವ ದಿಟ್ಟ ನಿಲುವು ಹೊರಹಾಕಿದರು. ಅಂತಿಮವಾಗಿ ನವೆಂಬರ್ ತಿಂಗಳಲ್ಲಿ ಪಂಚ ಸದಸ್ಯರ ಸಾಂವಿಧಾನಿಕ ಪೀಠ ಶ್ರೀರಾಮ ಜನ್ಮಭೂಮಿ ಹೋರಾಟಗಾರರ ಪರ ಸರ್ವಸಮ್ಮತ ತೀರ್ಪು ಪ್ರಕಟಿಸಿ, ಸುನ್ನಿ ವಕ್ಪ ಮಂಡಳಿಗೆ ಅಯೋಧ್ಯೆಯ ಪ್ರತ್ಯೇಕ ಭೂಮಿಯಲ್ಲಿ ಮಸೀದಿ ಕಟ್ಟಿಕೊಳ್ಳುವಂತೆ ನಿರ್ದೇಶಿಸಿತು. ವಕೀಲ ವಲಯದ ಪಿತಾಮಹ ಎಂದೇ ಖ್ಯಾತಿಯಾಗಿರುವ ತಮಿಳುನಾಡು ಮೂಲ ಕೆ. ಪರಾಶರನ್, 92ರ ಇಳಿವಯಸ್ಸಿನಲ್ಲೂ ಸುಪ್ರೀಂಕೋರ್ಟ್​ಗೆ ಬಂದು ರಾಮಲಲ್ಲಾ ಪರ ವಾದಿಸಿ ಕೇಸು ಗೆಲ್ಲಿಸಿದರು.
ರಾಜಕೀಯ ಒತ್ತಡರಾಮ ಮಂದಿರ ಪ್ರಕರಣ ಬಿಜೆಪಿಗೆ ರಾಜಕೀಯ ಲಾಭ ತಂದುಕೊಡಲಿದೆ ಎಂದೇ ಕಾಂಗ್ರೆಸ್ ನಾಯಕ ಮತ್ತು ಸುನ್ನಿ ವಕ್ಪ ಮಂಡಳಿ ಪರ ಹಿರಿಯ ವಕೀಲ ಕಪಿಲ್ ಸಿಬಲ್, 2019ರ ಲೋಕಸಭೆ ಚುನಾವಣೆ ಬಳಿಕ ವಿಚಾರಣೆ ನಡೆಸಬೇಕು ಎಂದು ನ್ಯಾಯಪೀಠದಲ್ಲಿ ಕೇಳಿಕೊಂಡಿದ್ದರು. ಇದಕ್ಕೆ ಕೋರ್ಟ್ ಸೊಪು್ಪ ಹಾಕಿರಲಿಲ್ಲ. ಆದರೆ, ಸಂಧಾನ ಪ್ರಕ್ರಿಯೆ ಜಾರಿಯಲ್ಲಿದ್ದ ಪರಿಣಾಮ ಲೋಕಸಭೆ ಚುನಾವಣೆಗೆ ಮುನ್ನ ಈ ಪ್ರಕರಣಕ್ಕೆ ರ್ತಾಕ ಅಂತ್ಯ ಹಾಡಲು ಕೋರ್ಟ್​ಗೆ ಸಾಧ್ಯವಾಗಿರಲಿಲ್ಲ. ಹಾಗಂತ, ಇದು ಕಾಂಗ್ರೆಸ್​ಗೆ ಯಾವುದೇ ರಾಜಕೀಯ ಲಾಭ ತಂದುಕೊಡಲಿಲ್ಲ.
VIDEO: ಶ್ರೀ ರಾಮಮಂದಿರ ನಿರ್ಮಾಣದ ಶಿಲಾನ್ಯಾಸಕ್ಕೆ ದಿನಗಣನೆ: ಅಯೋಧ್ಯೆಯ ಸಂಭ್ರಮ ಸಡಗರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − ten =
Remember me
