ಕೋಟ್ಯಂತರ ಶ್ರೀರಾಮ ಭಕ್ತರ ಶತಮಾನಗಳ ಕನಸು ಸಾಕಾರಗೊಳ್ಳುವ ಅಮೃತಕ್ಷಣಕ್ಕೆ ದಿನಗಣನೆ ಆರಂಭವಾಗಿದೆ. ಅಯೋಧ್ಯೆಯಲ್ಲಿ ನಡೆಯುವ ರಾಮಲಲ್ಲಾ ಪ್ರತಿಷ್ಠಾಪನೆ ಕುರಿತು ಜನರಿಗೆ ಜಾಗೃತಿ ಮೂಡಿಸಲು ಪ್ರತಿ ಮನೆಗೆ ಶ್ರೀರಾಮ ಮಂತ್ರಾಕ್ಷತೆ ತಲುಪಿಸುವ ಬೃಹತ್ ಸಂಪರ್ಕ ಅಭಿಯಾನ ಹಮ್ಮಿಕೊಂಡಿರುವುದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹರಾದ ನಾ. ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್​ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಾಗೂ ವಿಶ್ವ ಹಿಂದು ಪರಿಷತ್ ಸಹಯೋಗದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಕೊನೆಯ ಹಂತದ ಸಿದ್ಧತೆಗಳು ಪೂರ್ಣಗೊಂಡಿವೆ. ದೇಶದ ಕೋಟ್ಯಂತರ ಜನರನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ದೇಶದ ಎಲ್ಲ ಹಿಂದುಗಳ ಮನೆಗೆ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ಮತ್ತು ಕ್ಷೇತ್ರದ ಮಾಹಿತಿಯುಳ್ಳ ಕರಪತ್ರ ಹಾಗೂ ನೂತನ ರಾಮಮಂದಿರದ ಭಾವಚಿತ್ರ ತಲುಪಿಸುವುದಕ್ಕೆ ಅಭಿಯಾನ ಹಮ್ಮಿಕೊಂಡಿರುವುದಾಗಿ ವಿವರಿಸಿದರು.
ಹಣ ನೀಡಬೇಡಿ:ಈಗಾಗಲೇ ಅಯೋಧ್ಯೆಯಿಂದ ಮಂತ್ರಾಕ್ಷತೆ ಕರ್ನಾಟಕಕ್ಕೆ ಬಂದಿದ್ದು, ಅದನ್ನು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ತಲುಪಿಸಲಾಗಿದೆ. ಸುಮಾರು 1 ಲಕ್ಷಕ್ಕಿಂತ ಹೆಚ್ಚಿನ ಕಾರ್ಯಕರ್ತರು ಈ ಅಭಿಯಾನ ಯಶಸ್ವಿಗೊಳಿಸುವ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿಂದೆ ರಾಮ ಮಂದಿರ ನಿರ್ವಣಕ್ಕೆ ನಿಧಿ ಸಮರ್ಪಣೆ ಅಭಿಯಾನಕ್ಕೆ ರಾಜ್ಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಾಜ್ಯದಿಂದ ನೂರಾರು ಕೋಟಿ ರೂ. ಸಂಗ್ರಹವಾಗಿತ್ತು. ಈಗ ನಡೆಯುತ್ತಿರುವ ಅಭಿಯಾನದಲ್ಲಿ ಯಾವುದೇ ಹಣ ಸಂಗ್ರಹ, ಕಾಣಿಕೆ ಸಮರ್ಪಣೆ ಇರುವುದಿಲ್ಲ. ಅಭಿಯಾನದ ವೇಳೆ ಯಾರೂ ಹಣ ನೀಡಬಾರದು ಎಂದು ತಿಪ್ಪೇಸ್ವಾಮಿ ಮನವಿ ಮಾಡಿದರು.
ಜ.1ರಿಂದ 15ರವರೆಗೆ ಅಭಿಯಾನ
ಅಯೋಧ್ಯೆಯಲ್ಲಿ ಜ.22ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಜ.1ರಿಂದಲೇ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ದೇಶಾದ್ಯಂತ ಜ.15 ರವರೆಗೆ ಪ್ರತಿ ಮನೆಗೂ ಮಂತ್ರಾಕ್ಷತೆ, ಕರಪತ್ರ, ರಾಮಮಂದಿರದ ಭಾವಚಿತ್ರ ವಿತರಿಸುವ ಅಭಿಯಾನ ನಡೆಯಲಿದೆ. ಕರ್ನಾಟಕದ ಸುಮಾರು 29 ಸಾವಿರ ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಲು ಸಂಘದ ಕಾರ್ಯಕರ್ತರ ತಂಡಗಳು ಸಿದ್ಧವಾಗಿವೆ ಎಂದು ನಾ. ತಿಪ್ಪೇಸ್ವಾಮಿ ತಿಳಿಸಿದರು.
ಚಾಮರಾಜಪೇಟೆ ರಾಷ್ಟ್ರೋತ್ಥಾನ ಪರಿಷತ್​ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರ್​ಎಸ್​ಎಸ್ ಕ್ಷೇತ್ರೀಯ ಕಾರ್ಯವಾಹರಾದ ನಾ. ತಿಪ್ಪೇಸ್ವಾಮಿ ಕರಪತ್ರ ಮತ್ತು ರಾಮಮಂದಿರದ ಭಾವಚಿತ್ರ ಬಿಡುಗಡೆ ಮಾಡಿದರು. ವಿಹಿಂಪ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ, ವೆಂಕಟೇಶ್ ಉಪಸ್ಥಿತರಿದ್ದರು.
ಸತ್ಸಂಗ, ಭಜನೆ, ದೀಪಾರಾಧನೆ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಮತ್ತು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗುವ ಜ.22ರಂದು ದೇಶದ ಎಲ್ಲ ಗ್ರಾಮಗಳಲ್ಲಿ ಯಾವುದೇ ದೇವಾಲಯವಿದ್ದರೂ ಅಲ್ಲಿ ಸತ್ಸಂಗ, ಭಜನೆ ನಡೆಸಲು ಆರ್​ಎಸ್​ಎಸ್ ಕಾರ್ಯಕ್ರಮ ರೂಪಿಸಿದೆ. ಕೋಟ್ಯಂತರ ಸಂಖ್ಯೆಯ ಶ್ರೀರಾಮಭಕ್ತರು ಅಯೋಧ್ಯೆಗೆ ಹೋಗಬೇಕೆಂಬ ಇಚ್ಛೆ ಹೊಂದಿದ್ದರೂ ಎಲ್ಲರೂ ಹೋಗುವುದು ಅಸಾಧ್ಯ. ಪ್ರತಿ ಗ್ರಾಮದ ಒಂದು ದೇವಾಲಯದಲ್ಲಿ ಎಲ್​ಇಡಿ ಪರದೆ ಅಳವಡಿಸಿ ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗುವುದು.
ಗ್ರಾಮದ ಜನರು ಅಂದಿನ ಸತ್ಸಂಗದಲ್ಲಿ ಪಾಲ್ಗೊಂಡು ಭಜನೆ, ಕೀರ್ತನೆಗಳನ್ನು ಮಾಡುತ್ತ ನೇರಪ್ರಸಾರ ವೀಕ್ಷಿಸಬಹುದು. ಅಂದು ಸೂರ್ಯಾಸ್ತಮದ ನಂತರ ಪ್ರತಿ ಮನೆಯ ಮುಂದೆ 5 ದೀಪಗಳನ್ನು ಉತ್ತರ ದಿಕ್ಕಿಗೆ ಹಚ್ಚಿಡುವ ಮೂಲಕ ಬೃಹತ್ ದೀಪಾರಾಧನೆಯಲ್ಲಿ ಪಾಲ್ಗೊಳ್ಳಬೇಕೆಂದು ಹಿಂದು ಸಮಾಜಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕರೆ ನೀಡಿದೆ.
ಅಯೋಧ್ಯೆಗೆ ದೇಶದ ಎಲ್ಲ ಭಾಗಗಳಿಂದ ಬರುವ ಭಕ್ತರಿಗೆ ಕೇಂದ್ರ ಸರ್ಕಾರ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ. ಕರ್ನಾಟಕದಿಂದ ಬರುವ ರೈಲಿಗೆ ಜ.19ಕ್ಕೆ ದಿನಾಂಕ ನಿಗದಿಯಾಗಿದೆ. ಜ.17ರಂದು ಹೊರಡುವ ವಿಶೇಷ ರೈಲಿನಲ್ಲಿ ಪ್ರತಿ ಜಿಲ್ಲೆಯಿಂದ 50 ಜನರಿಗೆ ಅವಕಾಶ ದೊರೆಯಲಿದೆ. ರೈಲು ಟಿಕೆಟ್ ದರವನ್ನು ಪಾವತಿಸಬೇಕಾಗಿದೆ. ಊಟ, ವಸತಿ ಇನ್ನಿತರೆ ಎಲ್ಲ ವ್ಯವಸ್ಥೆಯನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಾಡಲಿದೆ.
ಶೀಘ್ರವೇ ಬರಲಿದೆ ದಳಪತಿ ವಿಜಯ್​ ನಟನೆಯ ‘ಲಿಯೋ 2’? ನಿರ್ದೇಶಕ ಲೋಕೇಶ್ ಕೊಟ್ರು ಸುಳಿವು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × five =
Remember me
