ನವದೆಹಲಿ:2019ರಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಐಎಎಸ್ ಅಧಿಕಾರಿ ಆಂಜನೇಯ ಕುಮಾರ್ ಸಿಂಗ್ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್​ರನ್ನು ಅಪರಾಧಿ ಎಂದು ಪರಿಗಣಿಸಿರುವ ಸ್ಥಳೀಯ ರಾಂಪುರ ನ್ಯಾಯಾಲಯ, ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 6000 ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಈ ಮೂಲಕ ಮುಖ್ಯವಾಗಿ ಚುನಾವಣೆಗಳ ಸಂದರ್ಭದಲ್ಲಿ ಪರಸ್ಪರ ದ್ವೇಷ ಕಾರುವ ರಾಜಕಾರಣಿಗಳಿಗೆ ಕಟು ಸಂದೇಶ ರವಾನೆ ಮಾಡಿದೆ. ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿರುವ 74 ವರ್ಷದ ಆಜಂ ಖಾನ್, ಕಾನೂನಿನ ಎಲ್ಲಾ ಬಾಗಿಲುಗಳು ಮುಚ್ಚಿಲ್ಲ. ನಾನು ನಂಬಿಕೆ ಕಳೆದುಕೊಂಡಿಲ್ಲ. ಹೈಕೋರ್ಟ್ ಮೆಟ್ಟಿಲೇರಲಿದ್ದೇನೆ ಎಂದಿದ್ದಾರೆ. ಏತನ್ಮಧ್ಯೆ, ಆಜಂಖಾನ್​ಗೆ ಜಾಮೀನು ಮಂಜೂರು ಮಾಡಲಾಗಿದ್ದು, 1 ವಾರದ ಒಳಗಾಗಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ. ತಕ್ಷಣವೇ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿದ್ದಲ್ಲಿ ಆಜಂ ಖಾನ್ ಶಾಸಕತ್ವದಿಂದ ಅನರ್ಹಗೊಳ್ಳುವ ಸಾಧ್ಯತೆ ಇದೆ. ಜನಪ್ರತಿನಿಧಿಗಳಿಗೆ 2 ವರ್ಷಗಳಿಗಿಂತ ಹೆಚ್ಚು ಅವಧಿಗೆ ಶಿಕ್ಷೆ ಪ್ರಕಟವಾದ ಸಂದರ್ಭದಲ್ಲಿ ಶಿಕ್ಷೆಗೆ ಗುರಿಯಾದ ಜನಪ್ರತಿನಿಧಿಯ ಅನರ್ಹತೆಗೆ ತ್ವರಿತ ಕ್ರಮ ಕೈಗೊಳ್ಳುವ ಅವಕಾಶವಿರುವುದರಿಂದ ಉತ್ತರ ಪ್ರದೇಶ ವಿಧಾನಸಭೆ ಅವರ ವಿರುದ್ಧ ಕ್ರಮಕ್ಕೆ ಮುಂದಾಗಬಹುದು. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ನಡೆ ಕುತೂಹಲ ಕೆರಳಿಸಿದೆ.
ಖಾನ್ ವಿರುದ್ಧ ಐಪಿಸಿಯ ಸೆಕ್ಷನ್ 153ಎ (ಎರಡು ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು), 505-1 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆ) ಜತೆಗೆ ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 125ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಮೂರು ಸೆಕ್ಷನ್​ಗಳಲ್ಲಿ ಖಾನ್ ರನ್ನು ದೋಷಿ ಎಂದು ನ್ಯಾಯಾಲಯ ಹೇಳಿದೆ. 2013ರ ಸುಪ್ರೀಂಕೋರ್ಟ್ ತೀರ್ಪಿನಂತೆ ಯಾವುದೇ ಶಾಸಕ/ಸಂಸದ, ಕ್ರಿಮಿನಲ್ ಪ್ರಕರಣದಲ್ಲಿ ಕನಿಷ್ಠ ಎರಡು ವರ್ಷಗಳಿಗಿಂತ ಹೆಚ್ಚು ಅವಧಿ ಶಿಕ್ಷೆಗೆ ಗುರಿಯಾದರೆ ತಕ್ಷಣಕ್ಕೆ ಜಾರಿಗೆ ಬರುವಂತೆ ಶಾಸಕತ್ವದಿಂದ ಅನರ್ಹಗೊಳ್ಳುತ್ತಾರೆ. ಕಳೆದ ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್​ನಿಂದ ಮಧ್ಯಂತರ ಜಾಮೀನು ಪಡೆದುಕೊಂಡು ಬಿಡುಗಡೆಯಾಗಿದ್ದ ಆಜಂಖಾನ್, ಭೂಕಬಳಿಕೆ ಪ್ರಕರಣವೊಂದರಲ್ಲಿ 2 ವರ್ಷಗಳ ಜೈಲುವಾಸ ಅನುಭವಿಸಿದ್ದಾರೆ.
ಆಜಂ ಖಾನ್, ರಾಂಪುರದ ಖತಾನಗಾರಿಯಾ ಹಳ್ಳಿಯ ಮಿಲಾಕ್ ಕೊತ್ವಾಲಿ ಪ್ರದೇಶದಲ್ಲಿ ಜನರನ್ನು ಉದ್ದೇಶಿಸಿ ಪ್ರಚೋದನಕಾರಿ ಭಾಷಣ ಮಾಡಿದ್ದರು. ತಕ್ಷಣವೇ ಆಜಂಖಾನ್ ಭಾಷಣದ ತುಣುಕುಗಳು ವೈರಲ್ ಆಗಿ, ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು ನಂತರ ಅವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಲಾಗಿತ್ತು.
ಸಮಾಜವಾದಿ ಪಕ್ಷದಲ್ಲಿ ಅಖಿಲೇಶ್ ಯಾದವ್ ಬಳಿಕ 2ನೇ ಪ್ರಮುಖ ನಾಯಕ ಎಂದು ಗುರುತಿಸಿಕೊಂಡಿರುವ ಆಜಂ ಖಾನ್, ಮುಸ್ಲಿಂ ಮತಗಳನ್ನು ಕಾಪಿಟ್ಟುಕೊಳ್ಳುವಲ್ಲಿ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗಿದ್ದಾರೆ. ಮುಲಾಯಂ ಸಿಂಗ್ ಯಾದವ್​ರೊಂದಿಗೂ ಆತ್ಮೀಯ ಒಡನಾಟ ಹೊಂದಿದ್ದ ಆಜಂಖಾನ್, ಗೂಂಡಾ ಸಂಸ್ಕೃತಿ ರಾಜಕಾರಣ ಪೋಷಿಸಿ ಬೆಳೆಸಿದ ಆರೋಪವನ್ನೂ ಎದುರಿಸಿದ್ದಾರೆ. ಪ್ರಕರಣದಲ್ಲಿ ಉತ್ತರ ಪ್ರದೇಶ ಬಿಜೆಪಿ ಸರ್ಕಾರ ವಿರುದ್ಧ ವಾದಿಸಿದ್ದ ಆಜಂಖಾನ್, ನಾನು ಜೈಲಿನಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ತನ್ನ ವಿರುದ್ಧ ಪಟ್ಟುಬಿಡದೆ ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಆರೋಪಿಸಿದ್ದರು. 2017ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಆಜಂಖಾನ್, ಭ್ರಷ್ಟಾಚಾರ, ಭೂಕಬಳಿಕೆಯವರೆಗಿನ 87 ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ದ್ವೇಷದ ಭಾಷಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ, ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದ ವಾರದೊಳಗೆ ಆಜಂ ಖಾನ್ ಶಿಕ್ಷೆಗೆ ಗುರಿಯಾಗಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ವಿಳಂಬ ಮಾಡಿದಲ್ಲಿ ಸರ್ಕಾರ ನ್ಯಾಯಾಂಗ ನಿಂದನೆ ಎದುರಿಸಬೇಕಾದೀತು. ಅಧಿಕೃತ ದೂರುಗಳಿಗೆ ಕಾಯದೆ, ದ್ವೇಷ ಭಾಷಣಗಳ ವಿರುದ್ಧ ತ್ವರಿತವಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಮೂರು ರಾಜ್ಯಗಳಿಗೆ ಕೋರ್ಟ್ ತಿಳಿಸಿತ್ತು. ದೇಶದ ಸಂವಿಧಾನವು ವ್ಯಕ್ತಿಯ ಘನತೆಯನ್ನು ಖಾತರಿಪಡಿಸಿ, ಜಾತ್ಯತೀತತೆ ಸಂದೇಶ ಸಾರುವ ಜತೆಗೆ ನಾಗರಿಕರ ಭ್ರಾತೃತ್ವಕ್ಕೆ ಮಹತ್ವ ನೀಡುತ್ತದೆ. ವಿವಿಧ ಧರ್ಮದ ಸದಸ್ಯರು ಸೌಹಾರ್ದತೆಯಿಂದ ಬದುಕಲು ಸಾಧ್ಯವಾಗದ ಹೊರತು ಭ್ರಾತೃತ್ವ ಇರಲು ಸಾಧ್ಯವಿಲ್ಲ. ವಿವಿಧ ನಿಯಮ, ನಿಬಂಧನೆಗಳ ಹೊರತಾಗಿಯೂ ದ್ವೇಷ ಕಾರುವವರ ವಿರುದ್ಧ ಕ್ರಮಗಳಾಗಿಲ್ಲ. ದೇಶದ ಸಾಂವಿಧಾನಿಕ ತತ್ವಗಳನ್ನು ಚಾಲ್ತಿಯಲ್ಲಿಸಿರುವ ಅವಶ್ಯಕತೆಯಿದೆ ಎಂದಿದ್ದ ನ್ಯಾಯಾಲಯ, ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಹಾಗೂ ಕಾನೂನಿನ ನಿಯಮವನ್ನು ನಿರ್ವಹಿಸುವ ಸಂವಿಧಾನ ಕಾಪಾಡುವುದು ನಮ್ಮ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟಿತ್ತು.
2019ರ ಲೋಕಸಭೆ ಚುನಾವಣೆಗೆ ರಾಂಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆಜಂ ಖಾನ್, ಸಮಾಜವಾದಿ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರು. 1980ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಲೋಕಸಭೆ, ರಾಜ್ಯಸಭೆ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ರಾಂಪುರ ಸದರ್ ಕ್ಷೇತ್ರದಿಂದ ಗೆದ್ದಿದ್ದ ಆಜಂ, ರಾಂಪುರ ಲೋಕಸಭೆ ಕ್ಷೇತ್ರ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಈ ಕ್ಷೇತ್ರ ಗೆದ್ದುಕೊಂಡಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 14 =
Remember me
