|ರಾಘವ ಶರ್ಮ ನಿಡ್ಲೆಗೋರಖ್​ಪುರ (ಉತ್ತರ ಪ್ರದೇಶ)
ಗೋರಖ್​ಪುರ ನಗರದಲ್ಲಿ ರಾಮಗಢ ತಲಾಬ್ ಎಂಬ ಬೃಹತ್ ಸರೋವರವಿದ್ದು, ಸುಮಾರು 10 ವರ್ಷಗಳ ಹಿಂದೆ ಸಂಜೆಯಾಗುತ್ತಿದ್ದಂತೆ ಇತ್ತ ಯಾರೂ ಮುಖ ಮಾಡುತ್ತಿರಲಿಲ್ಲ. ಆದರೆ, ತಲಾಬ್ ಪರಿಸರವೀಗ ಸಂಪೂರ್ಣ ಬದಲಾಗಿದೆ. ಪ್ರವಾಸೀ ತಾಣವಾಗಿ ಮಾರ್ಪಾಡಾಗಿರುವ ತಲಾಬ್ ಮಧ್ಯರಾತ್ರಿ 12 ಗಂಟೆ ವೇಳೆಯೂ ಜನರಿಂದ ಗಿಜಿಗುಡುತ್ತಿರುತ್ತದೆ. ರೌಡಿ, ಗೂಂಡಾಗಳ ಆತಂಕವಿಲ್ಲ. ನೌಕಾ ವಿಹಾರ ಸೇರಿದಂತೆ ವಿವಿಧ ಜನಸ್ನೇಹಿ ಚಟುವಟಿಕೆಗಳಿಂದಾಗಿ ಸ್ಥಳೀಯರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾದ ಬಳಿಕ ಸರೋವರ ಶುದ್ಧೀಕರಣ ಕಾರ್ಯ ವೇಗಪಡೆದುಕೊಂಡಿತು. ಗೋರಖ್​ಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ವಿಪರೀತ ಸೊಳ್ಳೆ ಕಾಟವಿದೆ. ಇದರಿಂದಾಗಿಯೇ ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದರು. ಈಗ ಸೊಳ್ಳೆಗಳ ಪ್ರಮಾಣ ಕಡಿಮೆಯಾಗಿದ್ದು, ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಿದುಳಿನ ಉರಿಯೂತ (ಎನ್ಸೆಫಲೈಟಿಸ್) ಕಾಯಿಲೆ ಪ್ರಮಾಣವೂ ತಗ್ಗಿದೆ. ಹಿಂದೆಲ್ಲಾ ವರ್ಷಕ್ಕೆ 4-5 ಸಾವಿರ ಮಕ್ಕಳು ಗೋರಖ್​ಪುರ ಜಿಲ್ಲೆಯೊಂದರಲ್ಲೇ ಸಾವಿಗೀಡಾಗುತ್ತಿದ್ದರು. ಈಗ ಸಾವಿನ ಸಂಖ್ಯೆ ಬೆರಳೆಣಿಕೆ ಮಾತ್ರ ಎಂದು ಜಿಲ್ಲೆಯ ಪ್ರಮುಖ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ. ಏಮ್್ಸ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳ ಉನ್ನತೀಕರಣ, ರಾಸಾಯನಿಕ ರಸಗೊಬ್ಬರ ಕಾರ್ಖಾನೆ ಆರಂಭ ಸೇರಿ ಹಲವು ಸುಧಾರಣಾ ಕ್ರಮಗಳು ಯೋಗಿ ಮೇಲಿನ ಸ್ಥಳೀಯರ ಒಲವನ್ನು ಹೆಚ್ಚಿಸಿದೆ. 1998ರಲ್ಲಿ ಗೋರಖ್​ಪುರ ಲೋಕಸಭೆ ಕ್ಷೇತ್ರ ಗೆದ್ದು ಸಂಸತ್ ಪ್ರವೇಶಿಸಿದ್ದ ಗೋರಖ್​ನಾಥ ಪೀಠದ ಮಹಾಂತ ಯೋಗಿ ಆದಿತ್ಯನಾಥ, ಮೊದಲ ಬಾರಿಗೆ ಶಾಸಕ ಸ್ಥಾನದ ಚುನಾವಣೆ ಎದುರಿಸುತ್ತಿದ್ದಾರೆ. ಗೋರಖ್​ಪುರ ನಗರ ಕ್ಷೇತ್ರದಿಂದ ಅವರಿಗೆ ಸಮಾಜವಾದಿ ಪಕ್ಷದ ಶುಭವತಿ ಶುಕ್ಲಾ ಸವಾಲೊಡ್ಡಿದ್ದರೂ, ನಗರಾದಾದ್ಯಂತ ಹಬ್ಬಿರುವ ‘ಬಾಬಾ ಜೀ’ ಹವಾದಿಂದಾಗಿ ಸಿಎಂ ಗೆಲುವಿನ ಅಂತರದ ಬಗ್ಗೆಯಷ್ಟೇ ಚರ್ಚೆಯಾಗುತ್ತಿದೆ. ಯೋಗಿ ವಿರುದ್ಧ ಕಾಂಗ್ರೆಸ್, ಬಿಎಸ್​ಪಿ, ಆಜಾದ್ ಸಮಾಜ ಪಾರ್ಟಿಯಿಂದ ದಲಿತ ಮುಖಂಡ ಚಂದ್ರಶೇಖರ ಆಜಾದ್ ‘ರಾವಣ’ ಕಣದಲ್ಲಿದ್ದರೂ, ಸಮಾಜವಾದಿಯೇ ಪ್ರಮುಖ ಎದುರಾಳಿ. ನಗರದಲ್ಲಿ ರಸ್ತೆ ಅಭಿವೃದ್ಧಿ, ರೈಲ್ವೆ ನಿಲ್ದಾಣ ಸುಧಾರಣೆ, ಸಮರ್ಪಕ ಚರಂಡಿ ವ್ಯವಸ್ಥೆ, ಸ್ವಚ್ಛತೆ ಬಗ್ಗೆ ವಿಶೇಷ ಗಮನ ನೀಡಿರುವ ಯೋಗಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆಂದೇ ಕಳೆದೈದು ವರ್ಷಗಳಲ್ಲಿ ಸುಮಾರು 10 ಸಾವಿರ ಕೋಟಿ ರೂ. ತಂದಿದ್ದಾರೆ. ಗೂಂಡಾಗಿರಿ, ಅರಾಜಕತೆ, ಅಸ್ವಚ್ಛತೆಗೆ ಕುಖ್ಯಾತಿಯಾಗಿದ್ದ ಗೋರಖ್​ಪುರ ಈಗ ರಾಜ್ಯದ ಪ್ರಮುಖ ನಗರಿಯಾಗಿ ಹೊರಹೊಮ್ಮಿರುವುದಲ್ಲದೆ, ಗೋರಖ್​ನಾಥ ಮಂದಿರವೂ ದೇಶದ ವಿವಿಧೆಡೆಗಳಿಂದ ಜನರನ್ನು ಆಕರ್ಷಿಸುತ್ತಿದೆ. ಮುಸ್ಲಿಂ ಸೇರಿ ವಿವಿಧ ಧರ್ವಿುಯರೂ ಪೀಠದ ಭಕ್ತರಾಗಿರುವುದು ವಿಶೇಷ. ಮಂದಿರದ ಸುತ್ತಮುತ್ತ ಮುಸ್ಲಿಂ ಧರ್ವಿುಯರ ಅಂಗಡಿಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ.
ಬಿಜ್ಲಿ ಸಮಸ್ಯಾ ಖತಂ:‘ಹಿಂದೆಲ್ಲಾ ವಾರಗಟ್ಟಲೆ ಕರೆಂಟ್ ಇರುತ್ತಿರಲಿಲ್ಲ. ಈಗ ನಿತ್ಯ 20 ಗಂಟೆಗಿಂತಲೂ ಹೆಚ್ಚು ಕಾಲ ವಿದ್ಯುತ್ ಇರುತ್ತದೆ. ಮಹರಾಜ್ ಕೀ (ಸಿಎಂ ಯೋಗಿ) ಕೖಪಾ ಸೇ ಗೂಂಡಾಗರ್ದ್ ಭೀ ಖತಂ’ ಎನ್ನುತ್ತಾರೆ ಗೋರಖಪುರ ಜಿಲ್ಲೆಯ ಸಹಜನ್ವಾ ವಿಧಾನಸಭೆ ಕ್ಷೇತ್ರದ ಮತದಾರ ಅಯೋಧ್ಯಾ ಪ್ರಸಾದ್. ‘ಮೊದಲು ನನ್ನ ಹೋಟೆಲ್​ನಲ್ಲಿ ಕೆಲವರು 100 ರೂಪಾಯಿಯ ತಿಂಡಿ ತಿಂದು 10 ರೂ ಕೊಟ್ಟು ಹೋಗುತ್ತಿದ್ದರು. ಅವರನ್ನು ಪ್ರಶ್ನಿಸಲೂ ಭಯವಾಗುತ್ತಿತ್ತು. ಈಗ ಅಂತಹ ಲೋಕಲ್ ಗೂಂಡಾಗಳ ಭಯವಿಲ್ಲ. ಅವರೆಲ್ಲ ಜೈಲಿನಲ್ಲಿದ್ದಾರೆ’ ಎಂದು ಖುಷಿಪಡುತ್ತಾರೆ.
ಸಣ್ಣ ಸಮುದಾಯಗಳ ಬೆಂಬಲ:ಜಿಲ್ಲೆಯ ಬಹುಪಾಲು ಬಡವರಿಗೆ ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಮನೆ ಕಟ್ಟಲು ಹಣಕಾಸು ನೆರವು ಸಿಕ್ಕಿದೆ. ಈ ಕಾರಣಕ್ಕಾಗಿ ಮೋದಿ-ಯೋಗಿ ಸಣ್ಣಪುಟ್ಟ ಸಮುದಾಯಗಳ ಪ್ರೀತಿಯನ್ನೂ ಗಳಿಸಿದ್ದಾರೆ. ಗೋರಖ್​ಪುರ ಗ್ರಾಮೀಣ ಕ್ಷೇತ್ರದ ರಜಹಿ ಗ್ರಾಮ ರಾಮಗಢ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿದ್ದು, ಇಲ್ಲಿ ಹಿಂದುಳಿದ ನಿಷಾದ್ ಸಮುದಾಯದವರು ಹೆಚ್ಚಿದ್ದಾರೆ. ‘15 ವರ್ಷಗಳಿಂದ ಮನೆ ಕಟ್ಟಲು ಸರ್ಕಾರದ ನೆರವಿಗಾಗಿ ಕಾಯುತ್ತಿದ್ದೆ. ಬಾಬಾ ಜೀ ಸಿಎಂ ಆದ ಬಳಿಕ 2 ಲಕ್ಷ ರೂ. ಹಣ ಸಿಕ್ಕಿದ್ದು, ಸ್ವಂತ ಮನೆ ಕಟ್ಟಿಕೊಂಡಿದ್ದೇನೆ. ಹೀಗಿರುವಾಗ, ಬೇರೆಯವರನ್ನೇಕೆ ಆಯ್ಕೆ ಮಾಡಲಿ?’ ಎನ್ನುತ್ತಾರೆ ಗ್ರಾಮದ ಕೈಲಾಶ್ ನಿಷಾದ್.
ಜಾತಿಯೇ ಮುಖ್ಯ:ಗೋರಖ್​ಪುರದಲ್ಲಿ 9 ವಿಧಾನಸಭೆ ಕ್ಷೇತ್ರಗಳಿದ್ದು, ಕಳೆದ ಬಾರಿ 8ರಲ್ಲಿ ಬಿಜೆಪಿ ಗೆದ್ದಿತ್ತು. ಚಿಲ್ಲುಪುರ್ ಕ್ಷೇತ್ರದಿಂದ ಬಿಎಸ್​ಪಿಯ ವಿನಯ್ ಶಂಕರ್ ತಿವಾರಿ ಗೆದ್ದಿದ್ದರು. ಈ ಬಾರಿ ತಿವಾರಿ ಸಮಾಜವಾದಿ ಪಕ್ಷದಿಂದ ಕಣದಲ್ಲಿದ್ದಾರೆ. ಕ್ಷೇತ್ರದ ಬರಹಲ್​ಗಂಜ್​ನಲ್ಲಿ ಮಾತಿಗೆ ಸಿಕ್ಕ ಚಮ್ಮಾರ ಸಮುದಾಯದ ರಾಜಾರಾಮ್ ಕರಂದಾಸ್, ರಾಜ್​ಕುಮಾರ್, ‘ಬೆಲೆ ಏರಿಕೆ ಬವಣೆ ಕಾಡುತ್ತಿದೆ. ಬಿಜೆಪಿ ಶ್ರೀಮಂತರ ಏಳಿಗೆಯನ್ನಷ್ಟೇ ಮಾಡುತ್ತದೆ. ಚಮ್ಮಾರರ ಬಗ್ಗೆ ಕಾಳಜಿ ಇರುವುದು ಮಾಯಾವತಿಗೆ ಮಾತ್ರ’ ಎಂದರು. ಸರಿ, ನಿಮ್ಮ ಮತ ವಿಕಾಸಕ್ಕೋ, ಜಾತಿಗೋ ಎಂದು ಕೇಳಿದ್ದಕ್ಕೆ, ‘ನಮಗೆ ಜಾತಿಯೇ ಮುಖ್ಯ. ವಿಕಾಸದ ಹೆಸರಲ್ಲಿ ಮತ ಕೇಳುವ ಬಿಜೆಪಿಯೇನು ಮಾಡಿದೆ? ನೌಕರಿ ಇಲ್ಲದೆ ಜನ ಬೀದಿಗೆ ಬಿದ್ದಿದ್ದಾರೆ’ ಎಂದರು. ಆದರೂ, ಕರೊನಾ ಕಾಲದಲ್ಲಿ ರೇಷನ್ ಸಿಕ್ಕಿದೆ ಎಂದ ಮೂವರು, ಕಾನೂನು ಸುವ್ಯವಸ್ಥೆ ಸುಧಾರಿಸಿರುವುದು ನಿಜ ಎನ್ನುವುದನ್ನೂ ಒಪ್ಪಿಕೊಂಡರು.
ಬ್ರಾಹ್ಮಣ ವರ್ಸಸ್ ಠಾಕೂರ್:ಎಸ್​ಪಿ ಅಭ್ಯರ್ಥಿ ಶುಭವತಿ ಶುಕ್ಲಾ ಬಿಜೆಪಿ ಮಾಜಿ ನಾಯಕ, ಬ್ರಾಹ್ಮಣ ಸಮಾಜದ ಉಪೇಂದ್ರ ದತ್ ಶುಕ್ಲಾ ಪತ್ನಿ. ಯೋಗಿ ಮುಖ್ಯಮಂತ್ರಿಯಾದ ಬಳಿಕ ಉಪೇಂದ್ರ ಶುಕ್ಲಾ ಗೋರಖ್​ಪುರ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಆದರೆ, ಯೋಗಿ ಆದಿತ್ಯನಾಥ ಪ್ರಚಾರದಿಂದ ದೂರವಿದ್ದ ಕಾರಣ ಶುಕ್ಲಾ ಸೋತಿದ್ದರು. ಇಬ್ಬರ ಮಧ್ಯೆ ಮೊದಲಿನಿಂದಲೂ ವೈಮನಸ್ಯಗಳಿದ್ದವು. ‘ಜಿಲ್ಲೆಯ ಸುತ್ತಮುತ್ತ ಪಕ್ಷ ಸಂಘಟನೆ ಬಲಿಷ್ಠಗೊಳಿಸಿದ್ದು ನಾನೇ’ ಎನ್ನುತ್ತಿದ್ದ ಶುಕ್ಲಾ ಬಗ್ಗೆ ಯೋಗಿಗೆ ಅಸಮಾಧಾನಗಳಿದ್ದವು. 2020ರಲ್ಲಿ ಶುಕ್ಲಾ ನಿಧನರಾದಾಗ ಯೋಗಿ ಸಾಂತ್ವನ ಹೇಳಲೂ ಬರಲಿಲ್ಲ ಎನ್ನುವುದು ಕುಟುಂಬಸ್ಥರ ಅಸಮಾಧಾನ. ಉಪೇಂದ್ರ ಶುಕ್ಲಾ ಪುತ್ರ ಅಮಿತ್ ದತ್ ಶುಕ್ಲಾ ಜಿಲ್ಲೆಯ ಕ್ಷೇತ್ರವೊಂದರಿಂದ ಟಿಕೆಟ್ ಕೇಳಿದ್ದರು. ಆದರೆ ಯೋಗಿ ನೀಡಲಿಲ್ಲ ಎನ್ನುವುದು ಅವರ ದೂರು. ಶುಭವತಿ ಗೃಹಿಣಿಯಾಗಿದ್ದವರು. ಆದರೆ, ಕುಟುಂಬದ ಪ್ರತಿಷ್ಠೆ ಉಳಿಸಬೇಕೆಂದು ಯೋಗಿ ವಿರುದ್ಧ ಸ್ಪರ್ಧಿಸಿದ್ದಾರೆ. ಗೋರಖ್​ಪುರ ಕದನವನ್ನು ‘ಬ್ರಾಹ್ಮಣ ವರ್ಸಸ್ ಠಾಕೂರ್’ ಎಂದು ಬಿಂಬಿಸಲೆಂದೇ ಅಖಿಲೇಶ್ ಶುಭವತಿಗೆ ಟಿಕೆಟ್ ನೀಡಿದ್ದಾರೆ. ಆದರೆ, ಗೋರಖ್​ನಾಥ ಪೀಠದ ಮೇಲಿನ ಭಕ್ತಿ ಮತ್ತು ಯೋಗಿ ಜನಪ್ರಿಯತೆಯೇ ಗೆಲುವಿನ ಹಾದಿಯನ್ನು ಸಲೀಸಾಗಿಸುವ ಸಾಧ್ಯತೆಯಿದೆ.
ಪ್ರಮುಖ ಹುದ್ದೆಗಳಲ್ಲಿ ಕನ್ನಡಿಗರು:ರಾಜ್ಯದ ಜತೆಗೆ ಗೋರಖ್​ಪುರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಿಎಂ ಯೋಗಿ ಆದಿತ್ಯನಾಥ ಕನ್ನಡಿಗ ಅಧಿಕಾರಿಗಳನ್ನು ನೇಮಿಸಿಕೊಂಡಿರುವುದು ಗಮನಾರ್ಹ. ಹಿರಿಯ ಐಎಎಸ್ ಅಧಿಕಾರಿ, ಮಂಡ್ಯ ಜಿಲ್ಲೆಯ ರವಿಕುಮಾರ್ ಅವರು ಗೋರಖ್​ಪುರ ಸೇರಿ 4 ಜಿಲ್ಲೆಗಳ (ಮಹಾರಾಜ್​ಗಂಜ್, ಖುಷಿನಗರ ಮತ್ತು ದೇವರಿಯಾ) ಮಂಡಲ ಕಮಿಷನರ್ ಆಗಿದ್ದರೆ, ಗೋರಖ್​ಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಬೆಂಗಳೂರು ಮೂಲದ ವಿಜಯ್ ಕಿರಣ್ ಆನಂದ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂದೂವರೆ ವರ್ಷ ಪ್ರವಾಸೋದ್ಯಮ ಮತ್ತು ಧಾರ್ವಿುಕ ವ್ಯವಹಾರ ಇಲಾಖೆಯಲ್ಲಿದ್ದ ರವಿಕುಮಾರ್ ಅವರು ಕಾಶಿ ಕಾರಿಡಾರ್ ನಿರ್ಮಾಣ ಮತ್ತು ಅಯೋಧ್ಯೆ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿರುವುದು ಉಲ್ಲೇಖಾರ್ಹ. ಯೋಗಿ ಆದಿತ್ಯನಾಥ 2014ರ ಲೋಕಸಭೆ ಚುನಾವಣೆ ಸ್ಪರ್ಧಿಸಿದ್ದ ವೇಳೆ ಗೋರಖ್​ಪುರ ಕ್ಷೇತ್ರದ ರಿಟರ್ನಿಂಗ್ ಅಧಿಕಾರಿಯಾಗಿದ್ದವರು ಇದೇ ರವಿಕುಮಾರ್. ವಿಜಯ್ ಕಿರಣ್ ಆನಂದ್ ಪ್ರಯಾಗ್​ರಾಜ್ ಕುಂಭಮೇಳದ ಮೇಲಧಿಕಾರಿಯಾಗಿ ಯಶಸ್ವಿ ನಿರ್ವಹಣೆ ಮೂಲಕ ಗಮನಸೆಳೆದಿದ್ದರು. ಆಗ ಅವರು ಶಿಕ್ಷಣ ಇಲಾಖೆ ಮಹಾನಿರ್ದೇಶಕ ಹುದ್ದೆಯಲ್ಲೂ ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 4 =
Remember me
