ರಾಘವ ಶರ್ಮ ನಿಡ್ಲೆ ಅಯೋಧ್ಯಾಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಬಾಲರಾಮ ವಿರಾಜಮಾನನಾಗಬೇಕೆಂಬ ಕೋಟ್ಯಂತರ ಹಿಂದೂ ಭಕ್ತರ 550 ವರ್ಷಗಳ ಕನಸು ಕೊನೆಗೂ ನನಸಾಗಿದೆ. ರಾಮಭಕ್ತರೇ ಹೇಳುವಂತೆ, 5 ಶತಮಾನಗಳ ವನವಾಸ ಕೊನೆಯಾಗಿದ್ದು, ಪ್ರಾಣಪ್ರತಿಷ್ಠೆಯ ಭಾವುಕ ಕ್ಷಣಕ್ಕೆ ದೇಶವೇ ಸಾಕ್ಷಿಯಾಯಿತು. ರಾಮಲಲ್ಲಾ ವಿರಾಜಮಾನಗೊಳ್ಳಲು ಭಾರಿ ಹೋರಾಟ, ಸಾವು-ನೋವು, ಗೇಲಿ, ಟೀಕೆ-ಟಿಪ್ಪಣಿ ಸೇರಿ ಹತ್ತಾರು ಅಡೆತಡೆಗಳನ್ನು ಎದುರಿಸಿ, ಅವೆಲ್ಲದರಲ್ಲೂ ಯಶಸ್ವಿಯಾಗಿ ಮಂದಿರ ನಿರ್ವಣಗೊಂಡಿರುವುದರಿಂದ, ಸಹಜವಾಗಿಯೇ ಪ್ರಾಣಪ್ರತಿಷ್ಠೆಯ ಕ್ಷಣ ರಾಮಭಕ್ತರೆಲ್ಲರನ್ನೂ ಧನ್ಯತೆಯ ಭಾವದಲ್ಲಿ ಮಿಂದೇಳುವಂತೆ ಮಾಡಿದೆ. ಹಿಂದೂ ಆಸ್ತಿಕ ವರ್ಗ ನಂಬಿದ ಮತ್ತು ನ್ಯಾಯಾಂಗದ ಅಂಗಳದಲ್ಲೂ ಸಾಬೀತು ಮಾಡಿದ್ದ ಉತ್ತರಪ್ರದೇಶ ರಾಜ್ಯದ ರಾಮ ಹುಟ್ಟಿದ ಸ್ಥಳದಲ್ಲೇ ಭವ್ಯ ಮಂದಿರ ನಿರ್ಮಾಣ ಮಾಡಿ, ಅದರೊಳಗೆ ಶಾಸ್ತ್ರೋಕ್ತವಾಗಿ ಕಟ್ಟಿದ ದಿವ್ಯ ಗರ್ಭಗುಡಿಯಲ್ಲಿ ಬಾಲರಾಮ ಪ್ರತಿಷ್ಠಾಪನೆಯಾದ 5ನೇ ದಿನದಂದು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಮನಿಗೆ ಪ್ರಾಣಪ್ರತಿಷ್ಠೆ ನೆರವೇರಿಸುವ ಮೂಲಕ ಅಯೋಧ್ಯೆಗೆ ಭಗವಾನ್ ಶ್ರೀರಾಮನ ಪುನರಾಗಮನವಾಗಿದೆ. ಈ ಐತಿಹಾಸಿಕ ಕ್ಷಣವನ್ನು ಕೋಟ್ಯಂತರ ಭಕ್ತರು ಕಣ್ತುಂಬಿ, ಆ ದೈವಿಕ ಕ್ಷಣದಲ್ಲಿ ಭಾಗಿಯಾದರು. ಬಾಲರಾಮನ ಮೊದಲ ನೋಟ ಕಾಣುತ್ತಿದ್ದಂತೆಯೇ ದೇಶಾದ್ಯಂತ ದೇಗುಲ, ಮನೆ-ಮನ, ಕಚೇರಿ, ಬೀದಿಬೀದಿಗಳಲ್ಲಿ ಜೈ ಶ್ರೀರಾಮ್ ಘೊಷಣೆ ಮುಗಿಲುಮುಟ್ಟಿದವು. ಅಯೋಧ್ಯಾವಾಸಿಗಳು, ಯಾತ್ರಿಕರು, ಪ್ರವಾಸಿಗರು ಭಾರೀ ಸಂಭ್ರಮಾಚರಣೆ, ಹಷೋದ್ಗಾರ ಹಾಗೂ ಭಾರೀ ಕರತಾಡನದ ಮೂಲಕ ಸರ್ಕಾರ, ಟ್ರಸ್ಟ್​ಗೆ ಅಭಿನಂದನೆ ಸಲ್ಲಿಸಿದರು. ದೇಶ-ವಿದೇಶಗಳಲ್ಲಿ ಹರಡಿರುವ ರಾಮಭಕ್ತರೂ ಸಾಕೇತ ನಗರಿಗೆ ರಾಮಾಗಮನವನ್ನು ಸಂಭ್ರಮಿಸಿದ್ದಾರೆ. ರಾಮ್ ಆಯೇಂಗೇ, ರಾಮ್ ಆಯೇಂಗೆ ಎಂದು ದಶಕಗಳಿಂದ ಹಾಡುತ್ತಾ, ಭಜನೆ ಮಾಡುತ್ತಾ ಕುಳಿತವರು ಇನ್ನು ಮುಂದೆ ಆಯೇಂಗೇ ಎಂದು ಹೇಳುವ ಅಗತ್ಯವಿಲ್ಲ. ಏಕೆಂದರೆ, ಪ್ರಧಾನಿ ಮೋದಿಯೇ ಹೇಳಿಂದತೆ ರಾಮ್ ಆಗಯೇ ಹೇ… (ಅಯೋಧ್ಯೆಗೆ ರಾಮನ ಆಗಮನವಾಗಿದೆ). ಜ.23ರಿಂದಲೇ ದೇಶದ ಆಸ್ತಿಕ ವರ್ಗಕ್ಕೆ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಬಾಲರಾಮನ ದರ್ಶನ ಭಾಗ್ಯ ಸಿಗಲಿದೆ.
ಹೀಗಿರಲಿದೆ ಮಂದಿರ:ಆಕರ್ಷಕ ವಿನ್ಯಾಸ ಹಾಗೂ ತೇಜಸ್ಸಿ ರಾಮ ಮಂದಿರವನ್ನು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದು 380 ಅಡಿ ಉದ್ದ (ಪೂರ್ವ-ಪಶ್ಚಿಮ), 250 ಅಡಿ ಅಗಲ, 161 ಅಡಿ ಎತ್ತರದ ಸುತ್ತಳತೆ ಹೊಂದಿದೆ. 392 ಕಂಬಗಳ ಸಮೂಹದಿಂದ ತಲೆ ಎತ್ತಿರುವ ಮಂದಿರದಲ್ಲಿ, 44 ಬಾಗಿಲುಗಳಿವೆ. ಹಿಂದೂ ದೇವತೆ, ದೇವರ ಸುಂದರ ಕೆತ್ತನೆ, ವಿನ್ಯಾಸದ ಚಿತ್ರಣಗಳಿಂದ ಅಲಂಕರಿಸಲ್ಪಟ್ಟಿರುವ ಈ ದೇಗುಲದ ಕಂಬ, ಗೋಡೆಗಳು ಸೊಗಸಾದ ಕರಕುಶಲತೆಯನ್ನು ಸಾಕ್ಷೀಕರಿಸುತ್ತವೆ. ಮಂದಿರವನ್ನು ಪೂರ್ವ ಭಾಗದಿಂದ ಪ್ರವೇಶಿಸಬಹುದು. ಮುಖ್ಯದ್ವಾರಕ್ಕೆ ತೆರಳಲು 32 ಮೆಟ್ಟಿಲುಗಳಿವೆ. ಮಂದಿರದಲ್ಲಿ ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮಂಟಪ ಮತ್ತು ಕೀರ್ತನಾ ಮಂಟಪ ಸೇರಿ ಐದು ಸಭಾಂಗಣಗಳನ್ನು ನಿರ್ವಿುಸಲಾಗುತ್ತದೆ. ಮಂದಿರದ ಪಕ್ಕದಲ್ಲಿ, ಪ್ರಾಚೀನ ಕಾಲದ ಸೀತಾ ಕೂಪ್ ಎಂದು ಕರೆಯಲ್ಪಡುವ ಐತಿಹಾಸಿಕ ಬಾವಿಯೊಂದಿದೆ. ನೈಋತ್ಯ ಭಾಗ ಕುಬೇರ್ ಟಿಲಾದಲ್ಲಿ, ಶಿವನ ಪುರಾತನ ಮಂದಿರವನ್ನು ಪುನರ್ ಸ್ಥಾಪಿಸಲಾಗಿದೆ. ಜಟಾಯುವಿನ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಈ ಎರಡೂ ಮಂದಿರ ಮತ್ತು ಪ್ರತಿಮೆ ಬಳಿ ತೆರಳಿದ ಪ್ರಧಾನಿ ಮೋದಿ ಪುಷ್ಪಾರ್ಚನೆ ಮಾಡಿದರು.
ಬಾಲರಾಮನ ಅಪೂರ್ವ ತೇಜಸ್ಸು, ಕಾಂತಿ:ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಬಾಲರಾಮನ ಕಣ್ಣುಗಳನ್ನು ಪವಿತ್ರ ವಸ್ತ್ರದಿಂದ ಮುಚ್ಚಲಾಗಿತ್ತು. ಪಿಎಂ ಮೋದಿ ಪ್ರಾಣಪ್ರತಿಷ್ಠೆ ನೆರವೇರಿಸಿದ ವೇಳೆ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಇತರೆ ವೈದಿಕರು ಕಣ್ಣಿನಲ್ಲಿದ್ದ ವಸ್ತ್ರದ ಪರದೆ ತೆರೆಯುತ್ತಲೇ ದಿವ್ಯ ತೇಜಸ್ಸಿನ ಬಾಲರಾಮನ ಮನಮೋಹಕ, ಸುಂದರ ಹಾಗೂ ದೈವಸ್ವರೂಪಿ ನೋಟ ಲೋಕಕ್ಕೆ ತೆರೆದುಕೊಂಡಿತು. ಬಾಲರಾಮನ ಕಣ್ಣುಗಳಲ್ಲಿ ಮುಗ್ಧತೆ, ತುಟಿಗಳಲ್ಲಿ ನಗು, ಮುಖದಲ್ಲಿ ಅಪೂರ್ವ, ಅದ್ಭುತವಾದ ಕಾಂತಿ ಗೋಚರಿಸುತ್ತದೆ. ರಾಮಲಲ್ಲಾನ ಮೊದಲ ನೋಟವೇ ಆಸ್ತಿಕರ ಹೃದಯದಲ್ಲಿ ಭದ್ರವಾಗಿ ನೆಲೆಗೊಳ್ಳುವಂತಿದೆ. ಇಂಥದ್ದೊಂದು ದಿವ್ಯ ತೇಜಸ್ಸು, ಓಜಸ್ಸು, ವರ್ಚಸ್ಸಿನ ಮೂರ್ತಿ ಕೆತ್ತಿದ ಅರುಣ್ ಯೋಗಿರಾಜ್ ಕೂಡ ಕೋಟಿ ಭಕ್ತರ ಹೃದಯದಲ್ಲೂ ಗೌರವದ ಸ್ಥಾನ ಪಡೆದಿದ್ದಾರೆ. ಪ್ರಾಣಪ್ರತಿಷ್ಠೆ ನಂತರ ಪ್ರಧಾನಿ ನರೇಂದ್ರ ಮೋದಿ ಬಾಲರಾಮನಿಗೆ ಮೊದಲ ಆರತಿ ಮಾಡಿ ಬೆಳಗಿದ ದೃಶ್ಯ ಕೂಡ ಅಷ್ಟೇ ಮನಮೋಹಕವಾಗಿತ್ತು.
ಕೈಂಕರ್ಯ ನೆರವೇರಿಸಿದ ಪ್ರಧಾನಿ:ಸೋಮವಾರ ಬೆಳಗ್ಗೆ 11 ಗಂಟೆಗೆ ಅಯೋಧ್ಯೆ ತಲುಪಿದ ಪ್ರಧಾನಿ ಮೋದಿ, ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ರಾಮನಗರಿಗೆ ಆಗಮಿಸಿದರು. ಅಲ್ಲಿಂದ ನೇರವಾಗಿ ರಾಮಜನ್ಮಭೂಮಿಯ ಮಂದಿರ ತಲುಪಿದ ಅವರು, ತಮ್ಮೊಂದಿಗೆ ತಂದಿದ್ದ ಬೆಳ್ಗೊಡೆಯನ್ನು ಪ್ರಾಣಪ್ರತಿಷ್ಠೆ ವೇಳೆ ರಾಮನ ಪಾದಕಮಲಗಳಿಗೆ ಅರ್ಪಿಸಿದರು. ಪ್ರಧಾನಿ ಬರುತ್ತಿದ್ದಂತೆಯೇ ಗರ್ಭಗುಡಿಯ ಮುಖ್ಯ ಅರ್ಚಕ, 22 ವರ್ಷದ ಮೋಹಿತ್ ಪಾಂಡೆ ಮತ್ತು ಇತರೆ ವೈದಿಕರು ಪ್ರಾಣಪ್ರತಿಷ್ಠಾ ವಿಧಿ-ವಿಧಾನಗಳನ್ನು ಆರಂಭಿಸಿದರು. ಇಡೀ 84 ಸೆಕೆಂಡುಗಳ ಪ್ರಾಣಪ್ರತಿಷ್ಠಾ ಕೈಂಕರ್ಯದ ವೇಳೆ ಪೂಜಾ ವಿಧಿವಿಧಾನ ನಡೆಸುವ ಯಜಮಾನನಲ್ಲಿ ಇರಬೇಕಿದ್ದ ಗಾಂಭೀರ್ಯತೆ, ಭಕ್ತಿ ಹಾಗೂ ಬದ್ಧತೆ ಮೋದಿಯವರಲ್ಲಿ ಎದ್ದುಕಾಣುತ್ತಿತ್ತು. ಆರ್​ಎಸ್​ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಕೂಡ ಪೂಜೆಗಳಲ್ಲಿ ಪಾಲ್ಗೊಂಡರು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಕೂಡ ಗರ್ಭಗುಡಿಯಲ್ಲಿ ಉಪಸ್ಥಿತರಿದ್ದರು.
ಉಪವಾಸ ಅಂತ್ಯ:ಪ್ರಾಣಪ್ರತಿಷ್ಠೆ ಕೈಂಕರ್ಯಗಳನ್ನು ಪೂರ್ಣಗೊಳಿಸಿದ ನಂತರ ಮಂದಿರ ಆವರಣದ ಮುಖ್ಯವೇದಿಕೆಯಲ್ಲಿ ಪ್ರಧಾನಮಂತ್ರಿ ಮೋದಿ ಅವರು ತಮ್ಮ 11 ದಿನಗಳ ಉಪವಾಸವನ್ನು ಅಂತ್ಯಗೊಳಿಸಿದರು. ಪ್ರಾಣಪ್ರತಿಷ್ಠೆ ನಡೆಸಬೇಕಾದ ಹಿನ್ನೆಲೆಯಲ್ಲಿ ಅವರು ಜ.12ರಂದು ಉಪವಾಸ ಆರಂಭಿಸಿದ್ದರು ಮತ್ತು ದಕ್ಷಿಣ ಭಾರತದ ವಿವಿಧ ದೇಗುಲಗಳಿಗೆ ಭೇಟಿ ನೀಡಿದ್ದರು. ಮುಖ್ಯವೇದಿಕೆಯಲ್ಲಿ ಗೋವಿಂದ ಗಿರಿ ಮಹರಾಜ್ ಅವರು ಮೋದಿಯವರಿಗೆ ಚರಣಾಮೃತವನ್ನು (ಧಾರ್ವಿುಕ ವಿಧಿಗಳಿಗೆ ಬಳಸುವ ಹಾಲಿನಲ್ಲಿ ಮಾಡಿದ ಸಿಹಿ ಪಾನೀಯ) ಕುಡಿಸಿ ಉಪವಾಸ ಪೂರ್ಣಗೊಳಿಸಿದರು. ಯಶಸ್ವಿ ಉಪವಾಸ ನಡೆಸಿದ ಪ್ರಧಾನಿಗೆ ಗೋವಿಂದ ಗಿರಿ ಮಹರಾಜರು ಅಭಿನಂದನೆ ಸಲ್ಲಿಸಿದರು. ಉಪವಾಸ ಆರಂಭಿಸುವ ಮುನ್ನ ಸಂದೇಶ ತಿಳಿಸಿದ್ದ ಮೋದಿ, ಞಪ್ರಾಣ ಪ್ರತಿಷ್ಠೆಗೆ ಕೇವಲ 11 ದಿನ ಬಾಕಿಯಿವೆ. ಪ್ರಾಣಪ್ರತಿಷ್ಠೆಯಲ್ಲಿ ದೇಶದ ಜನರನ್ನು ಪ್ರತಿನಿಧಿಸಲು ದೇವರು ನನ್ನನ್ನು ಸೃಷ್ಟಿ ಮಾಡಿದ್ದಾನೆ. ಇದನ್ನು ಗಮನದಲ್ಲಿಟ್ಟುಕೊಂಡೇ 11 ದಿನಗಳ ಕಾಲ ವಿಶೇಷ ಉಪವಾಸ ಆಚರಣೆ ಪ್ರಾರಂಭಿಸುತ್ತಿದ್ದೇನೆ ಎಂದು ಮೋದಿ ಹೇಳಿದ್ದರು.
ಪ್ರಧಾನಿಗೆ ಚಿನ್ನದ ಉಂಗುರ:ಪ್ರಾಣಪ್ರತಿಷ್ಠೆ ವೇಳೆ ಗರ್ಭಗುಡಿಯಲ್ಲಿ ಟ್ರಸ್ಟ್ ಸದಸ್ಯ ಗೋವಿಂದ ಗಿರಿ ಮಹರಾಜ್, ಪ್ರಧಾನಿಯವರ ತೋರು ಬೆರಳಿಗೆ ಚಿನ್ನದ ಉಂಗುರ ತೊಡಿಸಿ ಅಭಿನಂದನೆ ಸಲ್ಲಿಸಿದರು. ಅದೇ ರೀತಿ, ಮೋಹನ್ ಭಾಗವತ್​ರನ್ನೂ ಗೌರವಿಸಲಾಯಿತು. ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಪ್ರಧಾನಿವರು 3 ದಿನಗಳ ಉಪವಾಸ ಮಾಡಿದರೆ ಸಾಕು ಎಂದು ಬಹುಪಾಲು ಸಂತರು ಸಲಹೆ ನೀಡಿದ್ದರು. ಆದರೆ, 74ರ ವಯಸ್ಸಲ್ಲೂ ಮೋದಿ 11 ದಿನಗಳ ಉಪವಾಸವನ್ನೇ ಮಾಡುತ್ತೇನೆಂದು, ಅಷ್ಟೂ ದಿನ ಬರೀ ನೆಲದಲ್ಲಿ ಮಲಗಿದ್ದರು. ದೇವರ ಆಶೀರ್ವಾದ ಮತ್ತು ಮಾರ್ಗದರ್ಶನವಿದ್ದರೆ ಮಾತ್ರ ಇದು ಸಾಧ್ಯ ಎಂದು ಗೋವಿಂದ ಗಿರಿ ಮಹರಾಜ್ ತಮ್ಮ ಭಾಷಣದಲ್ಲಿ ಪ್ರಧಾನಿಯವರ ಬದ್ಧತೆಯನ್ನು ಕೊಂಡಾಡಿದರು.
ಭೂಮಿ ಮೇಲಿನ ಅದೃಷ್ಟಶಾಲಿ:ಬಾಲರಾಮನ ಮೂರ್ತಿ ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್, ನಾನು ಭೂಮಿ ಮೇಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ಎಂದು ಹರ್ಷವ್ಯಕ್ತಪಡಿಸಿದ್ದಾರೆ. ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು, ನನ್ನ ಪೂರ್ವಜರು, ಕುಟುಂಬ ಸದಸ್ಯರು ಮತ್ತು ಭಗವಾನ್ ರಾಮನ ಆಶೀರ್ವಾದ ಯಾವಾಗಲೂ ನನ್ನೊಂದಿಗಿದೆ. ಕೆಲವೊಮ್ಮೆ ನಾನು ಕನಸಿನ ಲೋಕದಲ್ಲಿದ್ದೇನೆ ಎಂದು ಅನಿಸುತ್ತದೆ. ಇಂಥದ್ದೊಂದು ಗಳಿಗೆ ನನ್ನ ಜೀವನದಲ್ಲಿ ಬರುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ ಎಂದು ಸಂತಸ ಹಂಚಿಕೊಂಡಿದ್ದಾರೆ.
8 ಸಾವಿರ ಗಣ್ಯರು ಭಾಗಿ:ಮಂದಿರ ಆವರಣದಲ್ಲಿ ಸುಮಾರು 8000 ಗಣ್ಯ, ಅತಿಗಣ್ಯ, ಸಾಮಾನ್ಯ, ಅತಿಸಾಮಾನ್ಯ ಸೇರಿ ಸಮಾಜದ ಎಲ್ಲಾ ವರ್ಗಗಳನ್ನೊಳಗೊಂಡ ಸಾಧು-ಸಂತರ ಸಂಗಮ, ಹಷೋದ್ಗಾರ, ವೈದಿಕರ ವೇದಮಂತ್ರ ಘೊಷಣೆ, ಉದ್ಯಮಿ, ಕ್ರೀಡಾಳು, ಹೋರಾಟಗಾರರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಉಪಸ್ಥಿತಿಯ ನಡುವೆ, ಗರ್ಭಗುಡಿಯಲ್ಲಿ 84 ಸೆಕೆಂಡುಗಳ ಮುಹೂರ್ತದ ಪವಿತ್ರ ಗಳಿಗೆಯಲ್ಲಿ, ಮುಖ್ಯ ಯಜಮಾನನಾಗಿ ಪ್ರಧಾನಿ ಮೋದಿ ಬಾಲರಾಮನಿಗೆ ಪ್ರಾಣಪ್ರತಿಷ್ಠೆ, ಪೂಜಾರತಿಗಳನ್ನು ನೆರವೇರಿಸಿ, ರಾಮನ ರಾಷ್ಟ್ರ ಮಂದಿರವನ್ನು ದೇಶದ ಎಲ್ಲಾ ವರ್ಗದ ಶ್ರದ್ಧಾಳುಗಳಿಗೆ ಅರ್ಪಿಸಿದ್ದಾರೆ. ಈ ಮೂಲಕ, 2014 ಮತ್ತು 2019ರ ಲೋಕಸಭೆ ಚುನಾವಣಾ ಪ್ರಣಾಳಿಕೆಯಲ್ಲಿ ದೇಶದ ಜನತೆಗೆ ನೀಡಿದ್ದ ಪ್ರಮುಖ ಭರವಸೆಯನ್ನೂ ಅತ್ಯಂತ ವೈಭವಪೂರ್ಣವಾಗಿ ಈಡೇರಿಸಲಾಗಿದೆ. ಮಂದಿರ್ ವಹೀ ಬನಾಲೇಂಗೆ ಎಂದು ದಶಕಗಳಿಂದ ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿ ಸಾಧು, ಸಂತರ ಘೊಷಣೆಯೂ ನಿಜಾರ್ಥದಲ್ಲಿ ಜಾರಿಗೆ ಬಂದಿದೆ.
ಅಯೋಧ್ಯೆ ರಾಮಮಯ:ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 4 ಗಂಟೆ ಸುಮಾರಿಗೇ ಸಾವಿರಾರು ರಾಮಭಕ್ತರು ಮಂದಿರದ ಆಸುಪಾಸಿಗೆ ಬಂದು ರಾಮಮಂತ್ರ, ಶ್ಲೋಕ, ನೃತ್ಯ, ಭಜನೆ ಶುರು ಮಾಡಿದ್ದರು. ಬೆಳಗ್ಗೆ 5-6 ಗಂಟೆ ಸುಮಾರಿಗೆ ಈ ಭಕ್ತಗಣವನ್ನು ಮಂದಿರದ ಎದುರು ಭಾಗದಿಂದ ಹೊರ ಕಳುಹಿಸಲಾಯಿತು. ನಂತರ ಹನುಮಾನ್ ಗಡಿ ಬಳಿಕ ನೃತ್ಯ, ಭಜನೆ, ಶ್ಲೋಕ ಪಠಣ ಮುಂದುವರಿದವು. ಪ್ರಧಾನಿ ಸೇರಿ ಸಾವಿರಾರು ಗಣ್ಯರ ಆಗಮನದ ಹಿನ್ನೆಲೆಯಲ್ಲಿ ಮಂದಿರಕ್ಕೆ ಸಾಗುವ ಅಯೋಧ್ಯಾ ಧಾಮ್ ರಸ್ತೆಯನ್ನು ಸಾರ್ವಜನಿಕ ಓಡಾಟಕ್ಕೆ ನಿಷೇಧ ಹೇರಲಾಗಿತ್ತು. ಆದರೂ, ರಸ್ತೆ ಬದಿಯ ಪಾದಚಾರಿ ಮಾರ್ಗಗಳಲ್ಲಿ ಗಣ್ಯರನ್ನು ವೀಕ್ಷಿಸಲು ಅವಕಾಶ ಮಾಡಲಾಗಿತ್ತು. ಪಿಎಂ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್​ರನ್ನು ನೋಡಬೇಕು ಎಂದು ಸಾವಿರಾರು ಮಂದಿ ಪಾದಚಾರಿ ಮಾರ್ಗದಲ್ಲಿ ಜಮಾಯಿಸಿದ್ದರು. ಕೆಲವರು ತಮ್ಮ ಮನೆ ಮೇಲೆ ನಿಂತುಕೊಂಡು ರಾಮನ ಬಾವುಟ, ಪೋಸ್ಟರ್​ಗಳನ್ನು ಬೀಸುತ್ತಾ ಜೈ]ೕರಾಮ್ ಘೊಷಣೆ ಕೂಗುತ್ತಿದ್ದ ದೃಶ್ಯಗಳು ಕಂಡುಬಂದವು. ಕಾರ್ಯಕ್ರಮ ಪೂರ್ಣಗೊಂಡು, ಗಣ್ಯರು ವಾಪಸಾದ ಬಳಿಕ ಮತ್ತೆ ಭಕ್ತರು ಎಂದಿನಂತೆ ಮತ್ತೆ ಸಂಭ್ರಮದಲ್ಲಿ ಮುಳುಗಿದರು.
ವೀಲ್​ಚೇರ್​ನಲ್ಲಿ ನೃತ್ಯ ಗೋಪಾಲ್ ದಾಸ್:ರಾಮ ಮಂದಿರಕ್ಕಾಗಿ ಹೋರಾಡುತ್ತಲೇ ಬಂದ ಮತ್ತು ಈಗ ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷರಾಗಿರುವ ಆಚಾರ್ಯ ನೃತ್ಯ ಗೋಪಾಲ್ ದಾಸ್ ಅವರು ಗರ್ಭಗುಡಿ ಹೊರಗೆ ವೀಲ್​ಚೇರ್ ನಲ್ಲಿ ಕುಳಿತು ಪ್ರಾಣಪ್ರತಿಷ್ಠಾ ವಿಧಿಗಳನ್ನು ವೀಕ್ಷಿಸಿದರು. ನೃತ್ಯ ಗೋಪಾಲ್ ದಾಸರ ಬಗ್ಗೆ ಅಯೋಧ್ಯಾವಾಸಿಗಳಿಗೆ ಅತ್ಯಂತ ಗೌರವ, ಭಕ್ತಿಯಿದ್ದು, ಅವರನ್ನು ದೇವರಂತೆಯೇ ಕಾಣುತ್ತಾರೆ. ಪ್ರಾಣಪ್ರತಿಷ್ಠೆ ಬಳಿಕ ಗರ್ಭಗುಡಿಯಿಂದ ಹೊರಬಂದ ಪಿಎಂ ಮೋದಿ, ನೃತ್ಯ ಗೋಪಾಲದಾಸರ ಕಾಲಿಗೆರಗಿ ಆಶೀರ್ವಾದ ಪಡೆದರು. ಮುಖ್ಯವೇದಿಕೆ ಕಾರ್ಯಕ್ರಮ ಪೂರ್ಣಗೊಂಡ ಬಳಿಕವೂ ಗೋಪಾಲದಾಸರಿಗೆ ಮತ್ತೊಮ್ಮೆ ನಮಸ್ಕರಿಸಿ ಆಶೀರ್ವಾದ ಪಡೆದರು. ಕುಬೇರ್ ಟಿಲಾ ಮತ್ತು ಜಟಾಯು ಪ್ರತಿಮೆ ವೀಕ್ಷಣೆಗೆ ಮುನ್ನ ಬಂದಿದ್ದ ಅತಿಥಿಗಳತ್ತ ತೆರಳಿ ನಮಸ್ಕರಿಸಿದರು.
ದೇವೇಗೌಡರನ್ನು ಅಭಿನಂದಿಸಿದ ಪ್ರಧಾನಿ:ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪತ್ನಿ ಚನ್ನಮ್ಮ, ಪುತ್ರ ಎಚ್.ಡಿ. ಕುಮಾರಸ್ವಾಮಿ, ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಜತೆ ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾದರು. ಗಣ್ಯರಿಗೆ ಶುಭ ಕೋರಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ದೇವೇಗೌಡರನ್ನು ನೋಡಿ ಧನ್ಯವಾದ ಹೇಳಿದರು. ಕಾರ್ಯಕ್ರಮದ ನಂತರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ದೇವೇಗೌಡರು ಶುಭ ಕೋರಿದರು. ಈ ಸಂದರ್ಭದಲ್ಲಿ ಸಂಸದ ಕುಪೇಂದ್ರ ರೆಡ್ಡಿ ಉಪಸ್ಥಿತರಿದ್ದರು.
ಅಯೋಧ್ಯೆಯಲ್ಲಿ ನಿಖಿಲ್ ಜನ್ಮದಿನ:ಅಯೋಧ್ಯೆಯಲ್ಲಿ ತಾವು ತಂಗಿದ್ದ ಹೋಟೆಲ್​ನಲ್ಲಿಯೇ ನಿಖಿಲ್ ಸೋಮವಾರ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡು, ತಾತ-ಅಜ್ಜಿ-ತಂದೆಯ ಆಶೀರ್ವಾದ ಪಡೆದರು.
ಉಡುಪಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗಿ:ಶ್ರೀರಾಮ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯ ಮತ್ತು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರೂ ಪ್ರಧಾನಿ ಪಕ್ಕದಲ್ಲಿದ್ದುಕೊಂಡು ಧಾರ್ವಿುಕ ವಿಧಿವಿಧಾನಗಳಿಗೆ ಸಹಕರಿಸಿದರು. ದೈವಿಕ ಕಾರ್ಯದಲ್ಲಿ ಸಂಪೂರ್ಣ ತಲ್ಲೀನರಾದಂತೆ ಕಂಡ ಮೋದಿ, ರಾಮಮಂತ್ರ ಪಠಿಸುತ್ತಿದ್ದ ದೃಶ್ಯಗಳು ಗಮನಸೆಳೆಯುತ್ತಿತ್ತು. ಪ್ರಾಣಪ್ರತಿಷ್ಠೆ ಬಳಿಕ ಬಾಲ ರಾಮನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಪ್ರಧಾನಿ, ಮೊದಲ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ವಾಯುಪಡೆಯ ಎರಡು ಹೆಲಿಕಾಪ್ಟರ್​ಗಳ ಮೂಲಕ ರಾಮಮಂದಿರ, ಸರಯೂ ನದಿ ಮತ್ತು ಅಯೋಧ್ಯೆಯ ವಿವಿಧ ಪ್ರಮುಖ ಮಂದಿರಗಳಿಗೆ ಪುಷ್ಪವೃಷ್ಟಿಯ ನಮನ ಸಲ್ಲಿಸಲಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − ten =
Remember me
